varthabharthi

ವಿಶೇಷ-ವರದಿಗಳು

‘ಇಂದಿನ ಆಳ್ವಿಕೆ ಗಮನಿಸಿದರೆ ಬ್ರಿಟಿಷರೇ ಎಷ್ಟೋ ಮೇಲು’

ವಾರ್ತಾ ಭಾರತಿ : 15 Aug, 2019
ಪ್ರಕಾಶ್

ಭಾರತ ದೇಶಕ್ಕೆ ಸ್ವಾತಂತ್ರ ಬಂದು ಅಗಸ್ಟ್ 15ಕ್ಕೆ ಬರೋಬ್ಬರಿ 73 ವರ್ಷಗಳು ತುಂಬುತ್ತದೆ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ಪೂರ್ವದ ದಿನಗಳು ಹಾಗೂ ಇತ್ತೀಚಿನ ಭಾರತದ ಕುರಿತು ದಾವಣಗೆರೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ 90 ವರ್ಷದ ಕೆ. ಮಲ್ಲಪ್ಪಅವರು ವಾರ್ತಾಭಾರತಿ ಪತ್ರಿಕೆಯೊಂದಿಗೆ ತಮ್ಮ ಸ್ವಾತಂತ್ರ ಹೋರಾಟಗಳ ನನೆಪುಗಳನ್ನು ಮೆಲುಕು ಹಾಕಿದ್ದಾರೆ.

ನೀವು ಕಂಡಂತೆ ಸ್ವಾತಂತ್ರಪೂರ್ವಕ್ಕೂ ಇಂದಿಗೂ ಇರುವ ವ್ಯತ್ಯಾಸ ಏನು?
ಸ್ವಾತಂತ್ರಪೂರ್ವ ಭಾರತಕ್ಕೂ ಇಂದಿನ ಭಾರತೀಯ ವ್ಯವಸ್ಥೆಗೆ ಅಜಗಜಾಂತರ ವ್ಯತ್ಯಾಸವಿದೆ. ಈ ಹಿಂದೆ ಭಾರತಕ್ಕೆ ಸ್ವಾತಂತ್ರ ದೊರಕಿಸುವ ಸಮಯದಲ್ಲಿದ್ದ ದೇಶಪ್ರೇಮ ಇಂದಿನ ಯುವಕರಲ್ಲಿಲ್ಲ. ಪ್ರಸ್ತುತ ದೇಶದಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ. ಯಾರಿಗೂ ದೇಶದ ಬಗ್ಗೆ ಕಾಳಜಿ ಇಲ್ಲ. ನಾವು ಕಂಡ ಸ್ವಾತಂತ್ರ ಭಾರತದ ಕನಸು ಬುಡಮೇಲಾದಂತಾಗಿದೆ. ಈ ಅವ್ಯವಸ್ಥೆ ಕಂಡ ನಮಗೆ ತುಂಬ ದುಃಖವಾಗುತ್ತಿದೆ. ಇಂದಿನ ಆಳ್ವಿಕೆ ಗಮನಿಸಿದರೆ ಬ್ರಿಟಿಷರ ಆಳಿ್ವಕೆಯೇ ಎಷ್ಟೋ ಮೇಲು ಅನಿಸುತ್ತಿದೆ.
   ಪ್ರಸ್ತುತ ಭಾರತೀಯ ವ್ಯವಸ್ಥೆ ಬಗ್ಗೆ ತಿಳಿಸಿ.
ನಮ್ಮ ಕಾಲದಲ್ಲಿ ಎಲ್ಲರ ಧ್ಯೇಯೋದ್ದೇಶ ಒಂದೇ. ಅದು ಸ್ವಾತಂತ್ರ ಪಡೆಯುವುದು. ಅದರೆ, ಈಗ ಸಮಾಜದಲ್ಲಿ ್ಜಅತಿ ಕಲಹ, ಕಪ್ಪುಹಣ, ಭ್ರಷ್ಟಚಾರ ಹೆಚ್ಚಾಗಿದೆ. ಹೆಸರಿಗೆ ಮಾತ್ರ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಹುದ್ದೆಗಳು, ಅಧಿಕಾರವೆಲ್ಲವೂ ಪಟ್ಟಭದ್ರಾ ಹಿತಾಸಕ್ತಿಗಳ ಕೈಯಲ್ಲಿ. ಇಂತಹ ಕೆಟ್ಟ ವ್ಯವಸ್ಥೆ ಕಂಡರೆ ಭಯವಾಗುತ್ತಿದೆ. ಇದಕ್ಕಾಗಿ ಲಕ್ಷಾಂತರ ಸ್ವಾತಂತ್ರ ಹೋರಾಟಗಾರರು ಪ್ರಾಣ ತ್ಯಾಗ ಮಾಡಬೇಕಿತ್ತಾ?. ಬ್ರಿಟಿಷರ ಕೈಯಿಂದ ವಶಪಡಿಸಿಕೊಂಂಡ ದೇಶವನ್ನು ಪಟ್ಟ ಭದ್ರಾಹಿತಾಸಕ್ತಿಗಳ ಕೈಯಲ್ಲಿ ಕೊಟ್ಟಿರುವುದು ನಮಗೆ ಬೆಂಕಿಯಿಂದ ಬಾಣಲಿಗೆ ಬಿದ್ದಂತಾಗಿದೆ.
 ಅಂದಿನ ಹೋರಾಟದ ಬಗ್ಗೆ ಹೇಳಿ
  1942ರಲ್ಲಿ ದೇಶದಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆಯಿತು. ದೇಶಾದ್ಯಂತ ಜನರು ಬ್ರಿಟಿಷರ ವಿರುದ್ಧ ತಿರುಗಿಬಿದ್ದರು. ದಾವಣಗೆರೆಯಲ್ಲೂ ಇದರ ಕಿಚ್ಚು ಹೆಚ್ಚಾಯಿತು. ಇಲ್ಲಿನ ರೈಲು ಹಳಿಗಳನ್ನು ಕಿತ್ತೆಸೆದರು. ಹೋರಾಟ ತೀವ್ರವಾಯಿತು. ಬ್ರಿಟಿಷರು ನಮ್ಮ ಹೋರಾಟ ಹತ್ತಿಕ್ಕಲು ಗುಂಡು ಹಾರಿಸಿದರು. ಈ ವೇಳೆ ಹಳ್ಳೂರು ನಾಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗನಹಳ್ಳಿ ಹನುಮಂತಪ್ಪ ಬ್ರಿಟಿಷರ ಗುಂಡಿಗೆ ಬಲಿಯಾದರು. ಇವರ ಸ್ಮಾರಕವನ್ನು ನಗರಸಭೆ ಅವರಣದಲ್ಲಿ ನಿರ್ಮಾಣ ಮಾಡಲಾಗಿದೆ. ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ದಾವಣಗೆರೆಯಲ್ಲಿ ಮಿಲಿಟರಿ ಪಡೆ ನಿಯೋಜನೆ ಮಾಡಲಾಗಿತ್ತು. ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಉಪಬಂದಿಖಾನೆಯಲ್ಲಿಯೇ ಆಗಿನ ಮಿಲಿಟರಿ ಪಡೆ ತಂಗುತ್ತಿತ್ತು. ಮಹಾತ್ಮ ಗಾಂಧಿಜೀ ಅವರ ಹೋರಾಟದಿಂದ ಪ್ರೇರಿತರಾದ ಜನರು ಪ್ರತಿನಿತ್ಯ ಚಳವಳಿಯಲ್ಲಿ ಭಾಗವಹಿಸುತ್ತಿದ್ದರು. ಸ್ವಾತಂತ್ರ ಹೋರಾಟದಲ್ಲಿ ದಾವಣಗೆರೆ ಭಾಗದ ಹೋರಾಟಗಾರರದ್ದು ಪ್ರಮುಖ ಪಾತ್ರವಿದೆ.
ಗೋವಾ ವಿಮೋಚನಾ ಚಳವಳಿ ಕುರಿತು ಹೇಳಿ
 1955ರಲ್ಲಿ ಗೋವಾ ವಿಮೋಚನೆಗಾಗಿ ಎಲ್ಲೆಡೆ ದೊಡ್ಡ ಮಟ್ಟದ ಹೋರಾಟ ನಡೆಯಿತು. ದೇಶದೆಲ್ಲೆಡೆಯಿಂದ ಸಾವಿರಾರು ಸ್ವಾತಂತ್ರ ಹೋರಾಟಗಾರರು ಆಗಮಿಸಿದ್ದರು. ಈ ವೇಳೆ ದಾವಣಗೆರೆಯಿಂದ 8 ಜನ ಭಾಗವಹಿಸಿದ್ದೆವು. ಬೆಳಗಾವಿಯನ್ನು ಕೇಂದ್ರವಾಗಿರಿಸಿಕೊಂಡು ಹೋರಾಟ ಮಾಡಿದ್ದೆವು.
ಇಂದಿನ ಯುವಕರ ಬಗ್ಗೆ ಹೇಳಿ ?
 ಆಗಿನ ಜನರು ಸ್ವಾಭಿಮಾನಿಗಳು ಸುಳ್ಳು ಹೇಳುತ್ತಿರಲಿಲ್ಲ. ಸುಳ್ಳು ಹೇಳಲು ಅಂಜಿಕೊಳ್ಳುತ್ತಿದ್ದರು. ಆದರ್ಶ ಜೀವನ ನಡೆಸಿದರು. ಆದರೆ, ಈಗ ಎಲ್ಲರೂ ಹೊಗಳುಭಟ್ಟರೇ.ಯಾರೊಬ್ಬರೂ ನಿಷ್ಠುರವಾದಿಗಳಿಲ್ಲ. ಅಂತಹವರನ್ನು ಯಾರು ಹತ್ತಿರಕ್ಕೆ ಸೇರಿಸಲ್ಲ. ಈ ದೇಶ ಅಭಿವೃದ್ಧಿ ಹೊಂದಿ ಎಲ್ಲರೂ ಸೌಹಾರ್ಧಯುತವಾಗಿ ಜೀವನ ನಡೆಸಬೇಕಾದರೆ ಯುವ ಸಮುದಾಯದಲ್ಲಿ ದೇಶ ಪ್ರೇಮ ಹೆಚ್ಚಬೇಕು. ಸ್ವಯಂ ಪ್ರೇರಣೆಯಿಂದ ದೇಶ ಕಟ್ಟುವ ಕಾಯಕದಲ್ಲಿ ತೊಡಗಿಕೊಳ್ಳಬೇಕು. ಮಕ್ಕಳಲ್ಲಿ ನೈತಿಕ ಮೌಲ್ಯ ತುಂಬಬೇಕು. ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಆದರ್ಶಗಳನ್ನು ಎಲ್ಲರೂ ಆಳವಡಿಸಿಕೊಳ್ಳಬೇಕು. ನಾನು 5 ಬಾರಿ ನಗರಸಭೆ ಸದಸ್ಯನಾಗಿ, ಒಂದು ಬಾರಿ ಶಾಸಕನಾಗಿ, ವಿಧಾನ ಪರಿಷತ್ ಸದಸ್ಯನಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ನಾವು ಸದಸನದಲ್ಲಿ ಮಾತನಾಡಿದ ಒಂದು ಕೆಲಸಗಳು ಜಾರಿಗೆ ಬಂದಿಲ್ಲ. ಆದರೆ, ಅಂದು ನಾನು ಭಾರತಕ್ಕೆ ಸ್ವಾತಂತ್ರ ದೊರಕಿಸುವ ನಿಟ್ಟಿನಲ್ಲಿ ಮಾಡಿದ ಹೋರಾಟ ನನಗೆ ನೆಮ್ಮದಿ ನೀಡಿದೆ. ನನಗಷ್ಟೇ ಸಾಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)