varthabharthi

ವೈವಿಧ್ಯ

ಭಾರತಕ್ಕೆ ಪಿಡುಗಾಗಿ ಪರಿಣಮಿಸಿದ ರಸ್ತೆ ಅವಘಡಗಳು

ವಾರ್ತಾ ಭಾರತಿ : 16 Aug, 2019
ವಿದ್ಯಾಧರ ದಾಟೆ

ರಸ್ತೆ ಅವಘಡದಲ್ಲಿ ಸಾವುಗಳು ಭಾರತದಲ್ಲಿ ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಸಂಭವಿಸುತ್ತಿವೆ. ರಸ್ತೆ ಅವಘಡಗಳಲ್ಲಿ ಮೃತರಾಗುವವರ ಸಂಖ್ಯೆಯನ್ನು ಕಡಿಮೆಗೊಳಿಸುವ ದೂರದೃಷ್ಟಿಯೊಂದಿಗೆ ಕಟ್ಟುನಿಟ್ಟಿನ ಮೋಟಾರುವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವ ಬಗ್ಗೆ ಸರಕಾರವು ಮಾತನಾಡುತ್ತಿದೆಯಾದರೂ, ಇನ್ನೊಂದೆಡೆ ವ್ಯಾಪಕವಾಗಿ ಸಂಭವಿಸುತ್ತಿರುವ ರಸ್ತೆ ದುರಂತಗಳಲ್ಲಿ ಸಾವುನೋವಿನ ಸಂಖ್ಯೆ ಏರುತ್ತಲೇ ಇದೆ.

ಕೇವಲ ಉದ್ಧಟ, ಸಿರಿವಂತ ಹಾಗೂ ಕುಡುಕ ಚಾಲಕರಷ್ಟೇ ರಸ್ತೆ ಅಪಘಾತಕ್ಕೆ ಕಾರಣರಾಗುವುದಿಲ್ಲ. ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಗಳ ಪ್ರೊಫೆಸರ್‌ಗಳು ಕೂಡಾ ಕ್ಯಾಂಪಸ್‌ನೊಳಗೆ ದುಡುಕಿನಿಂದ ವಾಹನವನ್ನು ಚಲಾಯಿಸಿ, ವಿದ್ಯಾರ್ಥಿಗಳನ್ನು ಗಾಯಗೊಳಿಸಿದ್ದಾರೆ.
 ದಿಲ್ಲಿ ಐಐಟಿಯ ಪ್ರೊಫೆಸರ್ ಹಾಗೂ ರಸ್ತೆ ಅವಘಡಗಳ ಕುರಿತಾದ ದೇಶದ ಅಗ್ರಗಣ್ಯ ಪರಿಣಿತ ದಿನೇಶ್ ಮೋಹನ್ ಅವರು ವೇಗಕ್ಕೆ ಕಡಿವಾಣ ಹಾಕಲು ಸ್ಪೀಡ್‌ಬ್ರೇಕರ್‌ಗಳನ್ನು ರಾಜಧಾನಿಯಲ್ಲಿರುವ ಐಐಟಿಯ ಕ್ಯಾಂಪಸ್‌ನಲ್ಲಿ ಅಳವಡಿಸಿದಾಗ, ಉಬ್ಬುಗಳು ತಮ್ಮ ಬೆನ್ನು ಹಾಗೂ ಕುತ್ತಿಗೆಗೆ ನೋವುಂಟು ಮಾಡುತ್ತವೆಯೆಂದು ಪ್ರೊಫೆಸರ್‌ಗಳು ದೂರಿದ್ದರು. ಆಗ ಐಐಟಿಯ ನಿರ್ದೇಶಕರು ಅವರಿಗೆ ಬೈಸಿಕಲ್‌ಗಳಲ್ಲಿ ಪ್ರಯಾಣಿಸುವಂತೆ ಸಲಹೆ ನೀಡಿದ್ದರು. ಒಂದು ಕಾಲದ ಸರಳವಾದ ಬದುಕಿನ ದಿನಗಳಲ್ಲಿ ಐಐಟಿಯ ಕ್ಯಾಂಪಸ್‌ಗಳ ಎಲ್ಲೆಡೆಯೂ ಬೈಸಿಕಲ್‌ಗಳೇ ಕಾಣಿಸುತ್ತಿದ್ದವೆಂಬ ಸಂಗತಿ ನಮಗೆ ಈಗ ಮರೆತೇ ಹೋಗಿದೆ. ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಅವರ ತಂದೆ ಐಐಟಿಯ ಉಪನ್ಯಾಸಕರಾಗಿದ್ದರು ಹಾಗೂ ಅವರು ಐಐಟಿಯ ಬೈಸಿಕಲ್ ಸವಾರರಲ್ಲಿ ಒಬ್ಬರಾಗಿದ್ದರು.
  ‘ರಸ್ತೆ ಸುರಕ್ಷತೆ ಜಾಲ ಹಾಗೂ ಪರಿಸರ’ ಎಂಬ ಸಂಸ್ಥೆ ಪುಣೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ ದಿನೇಶ್ ಮೋಹನ್ ಪಾಲ್ಗೊಂಡಿದ್ದರು. ಭಾರತದಲ್ಲಿ ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ರಸ್ತೆ ಅವಘಡದಲ್ಲಿ ಸಾವುಗಳು ಸಂಭವಿಸುತ್ತಿವೆ. ದೂರದೃಷ್ಟಿಯೊಂದಿಗೆ ಕಟ್ಟುನಿಟ್ಟಿನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವ ಬಗ್ಗೆ ಸರಕಾರವು ಮಾತನಾಡುತ್ತಿದ್ದರೂ, ವಾಹನ ಅಪಘಾತಗಳಲ್ಲಿ ಸಂಭವಿಸುವ ಸಾವುನೋವಿನ ಸಂಖ್ಯೆ ಏರುತ್ತಲೇ ಇದೆ. ಕಾರ್ಯಾಗಾರವೊಂದರಲ್ಲಿ ಪಾಲ್ಗೊಳ್ಳಲು ನಾನು ಮುಂಬೈಯಿಂದ ಪುಣೆಗೆ ಪ್ರಯಾಣಿಸುತ್ತಿದ್ದಾಗ ಕೇರಳದಲ್ಲಿ ಐಎಎಸ್ ಅಧಿಕಾರಿಯೊಬ್ಬರು ತಡರಾತ್ರಿ ಯುವತಿಯೊಬ್ಬರ ಜೊತೆ ಪಾನಮತ್ತ ಸ್ಥಿತಿಯಲ್ಲಿ ವೇಗವಾಗಿ ಕಾರು ಚಲಾಯಿಸುತ್ತಿದ್ದಾಗ ಸಂಭವಿಸಿದ ಅವಘಡದಲ್ಲಿ ಪತ್ರಕರ್ತರೊಬ್ಬರು ಸಾವನ್ನಪ್ಪಿದ ಘಟನೆ ವರದಿಯಾಗಿತ್ತು. ಪತ್ರಕರ್ತ ಸಮುದಾಯದಿಂದ ಬಲವಾದ ಧ್ವನಿ ಕೇಳಿಬರದೇ ಇದ್ದಲ್ಲಿ ಬಹುಶಃ ಈ ಘಟನೆಯನ್ನು ಮುಚ್ಚಿಹಾಕಲಾಗುತ್ತಿತ್ತೇನೋ.
ಇದೊಂದು ಘೋರ ದುರಂತವಾಗಿದೆ. ರಸ್ತೆ ಅವಘಡಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಹೊಣೆ ಹೊತ್ತಿರುವ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೂಡಾ ಕನಿಷ್ಠ ಪಕ್ಷ ಇದಕ್ಕೆ ಭಾಗಶಃವಾದರೂ ಹೊಣೆಗಾರರಾಗಿದ್ದಾರೆ. ‘‘ಈ ನೂತನ ಹೆದ್ದಾರಿಯಲ್ಲಿ ನೀವು ನಿರ್ದಿಷ್ಟ ಸ್ಥಳವನ್ನು ಕೇವಲ ಎರಡು ತಾಸುಗಳಲ್ಲಿ ತಲುಪಬಲ್ಲಿರಿ’’ ಎಂಬಂತಹ ಮಾತುಗಳು ರಾಜಕಾರಣಿಗಳಿಂದ ಕೇಳಸಿಗುತ್ತವೆ. ಇಂತಹ ಹೇಳಿಕೆಗಳ ಮೂಲಕ ತಾವು ಹೆದ್ದಾರಿ ಸಂಸ್ಕೃತಿಯಲ್ಲಿ ವೇಗದ ವಾಹನಚಾಲನೆಗೆ ಪ್ರಚೋದನೆ ನೀಡುತ್ತಿದ್ದಾರೆಂಬುದನ್ನು ಅವರು ಮರೆಯುತ್ತಿದ್ದಾರೆ. ಅತಿ ವೇಗದ ಚಾಲನೆಯ ವ್ಯಾಮೋಹವು, ರಸ್ತೆ ಅಪಘಡದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಪ್ರಮುಖ ಕೊಡುಗೆಯನ್ನು ನೀಡುತ್ತಿದೆ. ಅವರು ವಾಹನ ಚಾಲನೆಯನ್ನು ಕಡಿಮೆಗೊಳಿಸುವ ಬದಲು, ಹೆದ್ದಾರಿಯಲ್ಲಿ ವಾಹನದ ವೇಗವನ್ನು ಹೆಚ್ಚಿಸುತ್ತಿದ್ದಾರೆ.
 ತಪ್ಪಾದ ರೀತಿಯಲ್ಲಿ ಹೆದ್ದಾರಿಗಳ ನಿರ್ಮಾಣವು ಅಪಘಾತಗಳಿಗೆ ಪ್ರಮುಖ ಕೊಡುಗೆದಾರನಾಗಿದೆ ಎಂದು ದಿನೇಶ್ ಮೋಹನ್ ಹಾಗೂ ಅವರ ಸಹವರ್ತಿ ಗೀತಮ್ ತಿವಾರಿ ಹೇಳುತ್ತಾರೆ. ಮುಂಬೈ-ಪುಣೆ ಎಕ್ಸ್ ಪ್ರೆಸ್‌ವೇ ಸೇರಿದಂತೆ ಪ್ರತಿಯೊಂದು ನೂತನ ಹೆದ್ದಾರಿಯ ವಿನ್ಯಾಸವು ಲೋಪಯುಕ್ತವಾಗಿದೆಯೆಂದು ಅವರು ಬೆಟ್ಟು ಮಾಡಿ ತೋರಿಸುತ್ತಾರೆ. ಇಷ್ಟೆಲ್ಲಾ ವರ್ಷಗಳಲ್ಲಿ ಅವಘಡಗಳಿಗೆ ಚಾಲಕರನ್ನೇ ದೂರಲಾಗುತ್ತಿತ್ತು. ಆದರೆ ರಸ್ತೆಗಳನ್ನು ತಪ್ಪಾದ ರೀತಿಯಲ್ಲಿ ವಿನ್ಯಾಸಗೊಳಿಸಿದ ಎಂಜಿನಿಯರ್‌ಗಳೂ ಕೂಡಾ ಅಪಘಾತಗಳಿಗೆ ಕಾರಣರಾಗುತ್ತಾರೆಂದು ಈಗೀಗ ಮನದಟ್ಟಾಗತೊಡಗಿದೆ. ಮುಂಬೈನ ರೈಲು ನಿಲ್ದಾಣಗಳಲ್ಲಿನ ಉಕ್ಕಿನ ಬೆಂಚುಗಳು ಹಾಗೂ ಉಪನಗರ ರೈಲುಗಳಲ್ಲಿ ಆಸನಗಳಂತಹ ಸಣ್ಣಪುಟ್ಟ ವಿಷಯಗಳಲ್ಲಿಯೂ ಕೂಡಾ ಅವರ ವಿನ್ಯಾಸವು ಲೋಪಯುತವಾಗಿದೆ ಹಾಗೂ ಯಾತನಾಕರವಾಗಿದೆ. ಈ ರೀತಿಯ ನಿರ್ಲಕ್ಷದ ಕೃತ್ಯಗಳಿಗೆ ಅಥವಾ ಭ್ರಷ್ಟಾಚಾರದ ಕೃತ್ಯಗಳಿಗೆ ಹೊಣೆಗಾರಿಕೆಯನ್ನು ಹೊರಿಸುವ ತುರ್ತು ಅಗತ್ಯವಿದೆ.
ರಸ್ತೆ ಅವಘಡದ ಕುರಿತಾದ ತನಿಖೆಗಳಿಗೆ ಸಾಕಷ್ಟು ವೈಜ್ಞಾನಿಕ ದತ್ತಾಂಶ ಸಂಗ್ರಹ ಹಾಗೂ ಅಧ್ಯಯನದ ಅಗತ್ಯವಿದೆ. ಆದರೆ ಈ ವಿಷಯಲ್ಲಿ ಸಂಶೋಧನೆಗೆ ಸರಕಾರವು ಒಂದು ಕೋಟಿ ರೂ. ಕೂಡ ವ್ಯಯಿಸುತ್ತಿಲ್ಲವೆಂದು ದಿನೇಶ್ ಮೋಹನ್ ಗಮನಸೆಳೆಯುತ್ತಾರೆ.


 ಇದೀಗ ಖಾಸಗಿ ವಲಯವು ಅವಘಡಗಳ ಕುರಿತ ಸಂಶೋಧನಾ ಕ್ಷೇತ್ರಕ್ಕೆ ಕಾಲಿರಿಸಿದೆ. ಅಟೊಮೊಬೈಲ್ ಕಂಪೆನಿಗಳ ಆರ್ಥಿಕ ನೆರವಿನಿಂದ ಜೆ.ಪಿ.ರಿಸರ್ಚ್ ಸಂಸ್ಥೆಯು ಕೋಲ್ಕತಾ ಮತ್ತಿತರ ನಗರಕೇಂದ್ರಗಳಲ್ಲಿ ನಡೆದ ಅಪಘಾತ ಪ್ರಕರಣಗಳ ಬಗ್ಗೆ ಸಂಚಾರಿ ಪೊಲೀಸ್ ಇಲಾಖೆಯೊಂದಿಗೆ ತನಿಖೆ ನಡೆಸುತ್ತಿದೆ. ಜೆ.ಪಿ.ರಿಸರ್ಚ್‌ನ ತಾಂತ್ರಿಕ ನಿರ್ದೇಶಕ ರವಿಶಂಕರ್ ರಾಜನ್ ಅವರು ಕಾರ್ಯಾಗಾರವೊಂದರಲ್ಲಿ ನೀಡಿದ ಉಪನ್ಯಾಸದ ವೇಳೆ ಕೋಲ್ಕತಾದ ಟ್ರಾಫಿಕ್ ಜಂಕ್ಷನ್ ಒಂದರಲ್ಲಿ ನಡೆದ ವಿವಿಧ ವಾಹನಗಳನ್ನೊಳಗೊಂಡ ಅಪಘಾತದ ಸಿಸಿಟಿವಿ ಕ್ಯಾಮರಾ ಚಿತ್ರಾವಳಿಯ ದೃಶ್ಯಗಳನ್ನು ಪ್ರದರ್ಶಿಸಿದ್ದರು. ಈ ಅಪಘಾತದ ವೀಡಿಯೊ ಚಿತ್ರಿಕೆಯನ್ನು ವೀಕ್ಷಿಸಿದ ಬಳಿಕವೂ ಪತ್ರಕರ್ತರು ಸೇರಿದಂತೆ ಸಭೆಯಲ್ಲಿದ್ದವರಿಗೆ ಅಪಘಾತಕ್ಕೆ ನಿಜವಾದ ಕಾರಣವೇನು ಎಂಬುದು ಮನದಟ್ಟಾಗಲೇ ಇಲ್ಲ. ಹೀಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಕೂಡಾ ವಿಶ್ವಸನೀಯವಾಗಿರಲಾರದು ಎಂಬ ಅಂಶವನ್ನು ಈ ಸಂದರ್ಭದಲ್ಲಿ ರವಿಶಂಕರ್ ಪ್ರತಿಪಾದಿಸಿದರು. ಇದು ನನಗೆ ವಿಶ್ವವಿಖ್ಯಾತ ಸಿನೆಮಾ ನಿರ್ದೇಶಕ ಕುರೊಸೊವಾನ ಪ್ರಸಿದ್ಧ ಸಿನೆಮಾ ‘ರಶೋಮನ್’ನನ್ನು ನೆನಪಿಸಿತು. ಆ ಚಿತ್ರದಲ್ಲಿ ನಾಲ್ವರು ವಿಭಿನ್ನ ಸಾಕ್ಷಿಗಳು ಕೊಲೆ ಹಾಗೂ ಲೈಂಗಿಕ ದೌರ್ಜನ್ಯದ ಘಟನೆಯ ಬಗ್ಗೆ ವಿಭಿನ್ನವಾದ ಸಾಕ್ಷಗಳನ್ನು ನುಡಿಯುತ್ತಾರೆ. ವೀಕ್ಷಕನ ಅಭಿಪ್ರಾಯವನ್ನು ಅವಲಂಬಿಸಿ ಸತ್ಯವು ಕೂಡಾ ಬದಲಾವಣೆಯಾಗಬಲ್ಲದು ಎಂಬ ಅಂಶವನ್ನು ಇಲ್ಲಿ ನಿರ್ದೇಶಕ ಹೇಳಿದ್ದಾನೆ. ಜೀವನವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೋಡುತ್ತಾರೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
  ಇದು ನಿಜ. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಉದ್ಧಟತನದ ವಾಹನ ಸವಾರ ಹಾಗೂ ಕೆಟ್ಟದಾದ ರಸ್ತೆ ವಿನ್ಯಾಸವು ಅಪಘಾತಕ್ಕೆ ಕಾರಣವೆಂದು ದೂಷಿಸಲಾಗುತ್ತದೆ. ಕಾರು ಉತ್ಪಾದಕ ಲಾಬಿ ಹಾಗೂ ಅದರ ಪ್ರಚಾರಯಂತ್ರವು ಒಂದು ವಿಷಯದಲ್ಲಂತೂ ಯಶಸ್ವಿಯಾಗಿದೆ. ಹೆಚ್ಚುತ್ತಿರುವ ಮೋಟಾರು ವಾಹನೀಕರಣ ಕೂಡಾ ಅಪಘಾತಕ್ಕೆ ಇನ್ನೊಂದು ಪ್ರಮುಖ ಕಾರಣವೆಂಬ ಸತ್ಯವನ್ನು ಕಾರು ಲಾಬಿಗಳು ಮರೆಮಾಚಿವೆ.
 ರಸ್ತೆ ಸುರಕ್ಷತೆ ಕುರಿತಾದ ಆವಿಷ್ಕಾರಗಳು ಇಂಜಿನಿಯರ್‌ಗಳಿಂದ ಬಂದುದಲ್ಲ. ಆದರೆ ಇತರ ವೃತ್ತಿರಂಗಗಳಲ್ಲಿರುವ ಸಹೃದಯಿ ವ್ಯಕ್ತಿಗಳಿಂದ ಬಂದಿದೆ. ಅಟೊಮೊಬೈಲ್ ಲಾಬಿಯ ವಿರುದ್ಧ ಸಮರ ಸಾರಿರುವ ನ್ಯಾಯವಾದಿ ರಾಲ್ಫ್ ನಾಡಾರ್ ಹಾಗೂ ವೈದ್ಯ ವಿಲಿಯಂ ಹ್ಯಾಡ್ಡೊನ್ ಅವರು, ಆ ಲಾಬಿಯ ಹಲವಾರು ಅಪರಾಧಗಳನ್ನು ಬಯಲಿಗೆಳೆದಿದ್ದಾರೆ.
  ಅತಿಯಾದ ವೇಗದಲ್ಲಿ ವಾಹನ ಚಾಲನೆಯು ಅಪಘಾತದ ಸಮಸ್ಯೆಗಳಿಗೆ ಮೂಲವಾಗಿದೆ ಎಂಬುದನ್ನು ವೇಗದ ಸವಾರಿಯ ಹುಚ್ಚು ಹತ್ತಿಸಿಕೊಂಡವರು ಮರೆತುಬಿಡುತ್ತಾರೆ. ಒಂದು ವೇಳೆ ನೀವು ವೇಗವಾಗಿ ಸಾಗುತ್ತೀರಿ ಎಂದಾದರೆ, ನಿಮ್ಮ ಕಾರನ್ನು ನಿಮ್ಮ ಮುಂದಿರುವ ವಾಹನದೊಂದಿಗೆ ದೀರ್ಘ ಅಂತರವನ್ನು ಕಾಯ್ದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸುರಕ್ಷಿತವಾಗಿ ಬ್ರೇಕ್ ಹಾಕಲು ಇರುವ ಅವಧಿಯು ಅತ್ಯಂತ ಅಲ್ಪವಾಗಿರುತ್ತದೆ. ಆದರೆ ಅಟೊಮೊಬೈಲ್ ಲಾಬಿಯು ನಿರಂತರವಾಗಿ ವೇಗದ ಕುರಿತಾದ ಮಿಥ್ಯೆಯನ್ನು ಪ್ರತಿಪಾದಿಸುತ್ತಾ ಬರುತ್ತಿದೆ. ಗ್ರಾಹಕರನ್ನು ಮರುಳು ಮಾಡುವುದಕ್ಕಾಗಿ ವೇಗದ ವಾಹನ ಚಾಲನೆಯನ್ನು ಅವು ವೈಭವೀಕರಿಸುತ್ತವೆ. ಆದರೆ ಈಗ ಅಲೆಗಳು ಹರಿಯುವ ದಿಕ್ಕು ಬದಲಾಗತೊಡಗಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾತ್ರವಲ್ಲ ಭಾರತದಲ್ಲಿ ಕೂಡಾ ಯುವಜನರು ಈಗ ಮೊದಲಿನಂತೆ ಕಾರಿನ ವ್ಯಾಮೋಹಕ್ಕೆ ಒಳಗಾಗುತ್ತಿಲ್ಲ. ಹೀಗಾಗಿ ಕಾರು ಮಾರಾಟ ಇಳಿಮುಖವಾಗುತ್ತಿದೆ. ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಶಾಮೀಲಿನೊಂದಿಗೆ ದಷ್ಟಪುಷ್ಟವಾಗಿ ಬೆಳೆದಿದ್ದ ಕಾರುಲಾಬಿ ಈಗ ಅತಂತ್ರವಾಗಿದೆ. ಭಾರತವು ತನಗೆ ಅಗತ್ಯವಿರುವ ಸಾರ್ವಜನಿಕ ಸಾರಿಗೆ ವಾಹನಗಳ ಹತ್ತನೇ ಒಂದು ಭಾಗವನ್ನು ಮಾತ್ರ ಹೊಂದಿವೆಯೆಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ನಮ್ಮ ಅರ್ಥಶಾಸ್ತ್ರಜ್ಞರು, ಶಿಕ್ಷಣ ವಿದ್ವಾಂಸರು ಕೂಡಾ ಇಂತಹ ವೈಪರೀತ್ಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಅಟೊಮೊಬೈಲ್ ಕ್ಷೇತ್ರದಲ್ಲಿ ಉತ್ತಮ ಆರ್ಥಿಕತೆಯನ್ನು ಸೃಷ್ಟಿಸುವಲ್ಲಿ ಎದುರಾಗುವ ಸಮಸ್ಯೆ ಇದಾಗಿದೆ. ಬೈಸಿಕಲ್‌ಗಳು, ಸಾರ್ವಜನಿಕ ಸಾರಿಗೆ ಹಾಗೂ ಇತರ ವಲಯಗಳಲ್ಲಿ ಹೂಡಿಕೆಗಳ ಮೂಲಕ ಆರ್ಥಿಕತೆಯನ್ನು ಚುರುಕುಗೊಳಿಸಲು ಸಾಧ್ಯವಿದೆ. ಆರ್ಥಿಕತೆಯ ಉತ್ತೇಜನಕ್ಕೆ ಮೋಟಾರು ಕಾರು ಉದ್ಯಮ ಪ್ರಮುಖ ಚಾಲಕ ಶಕ್ತಿಯಾಗುವ ಅಗತ್ಯವಿಲ್ಲ. ಇಲ್ಲದೆ ಇದ್ದಲ್ಲಿ, ಅವಘಡಗಳ ಸರಣಿಯು ಹೀಗೆಯೇ ಮುಂದುವರಿಯಲಿದೆ.
ಕೃಪೆ: countercurrents.org

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)