varthabharthi

ಸಂಪಾದಕೀಯ

ಹಾಗಾದರೆ ಪೆಹ್ಲೂಖಾನ್ ಸತ್ತಿಲ್ಲವೇ?

ವಾರ್ತಾ ಭಾರತಿ : 16 Aug, 2019

ರಾಜಸ್ಥಾನದ ಆಲ್ವಾರ್‌ನಲ್ಲಿ ನಡೆದ ಪೆಹ್ಲೂಖಾನ್ ಎಂಬ ವೃದ್ಧ ಕೃಷಿಕನ ಹತ್ಯೆಗೆ ಸಂಬಂಧಿಸಿ ಹೊರಬಿದ್ದಿರುವ ನ್ಯಾಯಾಲಯದ ತೀರ್ಪು ಈ ದೇಶದ ಸ್ವಾತಂತ್ರದ ಕುರೂಪಕ್ಕೆ ಹಿಡಿದ ಕನ್ನಡಿಯಾಗಿದೆ. ಪೆಹ್ಲೂಖಾನ್ ಹತ್ಯೆಗೆ ಅಕ್ಷರಶಃ ಇಡೀ ದೇಶವೇ ಸಾಕ್ಷಿಯಾಗಿತ್ತು. ಸಂತ್ರಸ್ತ ಸಾಯುವ ಮುನ್ನ ಆರೋಪಿಗಳನ್ನು ಗುರುತಿಸಿದ್ದ. ಎಲ್ಲ ಸಾಕ್ಷಿಗಳು ಪೂರಕವಾಗಿದ್ದರೂ, ಪೆಹ್ಲೂಖಾನ್ ಹತ್ಯೆಯಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳು ಬಿಡುಗಡೆಯಾಗಿದ್ದಾರೆ. ‘ತನಿಖೆಯಲ್ಲಿ ನಡೆದಿರುವ ಗಂಭೀರ ಲೋಪಗಳೇ ಆರೋಪಿಗಳ ಬಿಡುಗಡೆಗೆ ಕಾರಣ’ ಎಂದು ನ್ಯಾಯಾಲಯವೂ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ. ದುರಂತವೆಂದರೆ, ಇಂತಹದೊಂದು ತೀರ್ಪು ಹೊರಬೀಳುತ್ತಿರುವಾಗ, ರಾಜಸ್ಥಾನವನ್ನು ಆಳುತ್ತಿರುವುದು ‘ಗುಂಪು ಹತ್ಯೆ’ಯ ವಿರುದ್ಧ ಸಂಘಪರಿವಾರವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಾ ಬಂದಿದ್ದ ಕಾಂಗ್ರೆಸ್ ಪಕ್ಷ. ನ್ಯಾಯಾಲಯದಂತೆಯೇ ಈ ಸರಕಾರವೂ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಪೊಲೀಸರು ತನಿಖೆ ನಡೆಸಿರುವುದರಿಂದ, ಇಂತಹದೊಂದು ತೀರ್ಪು ಹೊರಬೀಳುವುದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಅದು ನುಣುಚಿಕೊಂಡಿದೆ. ಎಲ್ಲಕ್ಕಿಂತ ದುರಂತವೆಂದರೆ, ಆರೋಪಿಗಳು ಬಿಡುಗಡೆಯಾಗಿರುವುದು ಮಾತ್ರವಲ್ಲ, ಸಂತ್ರಸ್ತರೇ ಗೋಕಳ್ಳರೆಂದು ಪೊಲೀಸರು ಪ್ರಕರಣ ದಾಖಲಿಸಿರುವುದು. ಹಾಗಾದರೆ ಪೆಹ್ಲೂಖಾನ್ ಸತ್ತೇ ಇಲ್ಲವೇ? ಸತ್ತಿದ್ದರೆ ಆತನ ಸಾವಿಗೆ ಕಾರಣರಾದವರು ಯಾರು? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದು ಸರಕಾರದ ಕರ್ತವ್ಯ ಅಲ್ಲವೇ?

ರಾಜಸ್ಥಾನದಲ್ಲಿ ಬಲಾಢ್ಯ ಜಾತಿಗಳ ಪ್ರಾಬಲ್ಯ ಬಿಜೆಪಿಯೊಳಗೆ ಮಾತ್ರವಲ್ಲ ಕಾಂಗ್ರೆಸ್‌ನೊಳಗೂ ಇದೆ. ಪೆಹ್ಲೂಖಾನ್ ಎಂಬ ಬಡಪಾಯಿಯ ಹತ್ಯೆಯ ಹಿಂದೆ ಸಂಘಪರಿವಾರದ ಬಲಾಢ್ಯ ಜಾತಿಗಳ ಜನರೂ ಸೇರಿಕೊಂಡಿರುವುದರಿಂದ ಕಾಂಗ್ರೆಸ್ ಸರಕಾರ ಪೆಹ್ಲೂಖಾನ್ ಪ್ರಕರಣದಲ್ಲಿ ನಿಷ್ಠುರ ಆದೇಶಗಳನ್ನು ನೀಡುವುದಕ್ಕೆ ಹಿಂದೇಟು ಆಗಿದೆ. ಇಲ್ಲವಾದರೆ, ಸರಕಾರ ರಚನೆಯಾದ ಬೆನ್ನಿಗೇ, ಪೆಹ್ಲೂಖಾನ್ ಪ್ರಕರಣದ ತನಿಖೆಯಲ್ಲಿ ಲೋಪಗೈದ ಪೊಲೀಸ್ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳುವ ಅವಕಾಶವಿತ್ತು. ಅಷ್ಟೇ ಅಲ್ಲ, ಅದನ್ನು ಉನ್ನತ ಸಂಸ್ಥೆಯಿಂದ ಮರುತನಿಖೆಗೆ ಒಳಪಡಿಸಿ, ದುರ್ಬಲಗೊಂಡಿರುವ ವಿಚಾರಣೆಯನ್ನು ಬಲಪಡಿಸಬಹುದಿತ್ತು. ಆದರೆ ಚುನಾವಣೆಗೆ ಮುನ್ನ ಈ ಪ್ರಕರಣದ ಕುರಿತಂತೆ ಕಾಂಗ್ರೆಸ್ ಎಷ್ಟರಮಟ್ಟಿ ಆಸಕ್ತಿಯನ್ನು ವಹಿಸಿತ್ತೋ, ಅಧಿಕಾರಕ್ಕೇರಿದ ಬಳಿಕ ಆಸಕ್ತಿವಹಿಸಲಿಲ್ಲ. ಈಗಾಗಲೇ ಪೆಹ್ಲೂಖಾನ್ ಕುಟುಂಬದವರು ನ್ಯಾಯದಾನದ ಕುರಿತಂತೆ ಸಂಪೂರ್ಣ ನಿರಾಶರಾಗಿದ್ದಾರೆ. ಪೊಲೀಸ್ ಇಲಾಖೆ ಎಲ್ಲ ಸಾಕ್ಷಗಳನ್ನು ಮುಂದಿಟ್ಟುಕೊಂಡು ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಬದಲು, ಅವರ ಬಿಡುಗಡೆಗೆ ಸಹಕರಿಸಿದರು ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ, ದೈನಂದಿನ ಬದುಕಿನಲ್ಲೂ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಅನಗತ್ಯವಾಗಿ ಈ ಪ್ರಕರಣವನ್ನು ಮುಂದಕ್ಕೆ ಒಯ್ದು, ಜೀವಕ್ಕೆ ಅಪಾಯ ತಂದುಕೊಳ್ಳುವ ಸ್ಥಿತಿಯಲ್ಲಿ ಅವರಿದ್ದಂತಿಲ್ಲ. ಈ ತೀರ್ಪಿನಿಂದ ಈ ದೇಶಕ್ಕೆ ಸ್ವಾತಂತ್ರ ಸಿಕ್ಕಿರುವುದ ಕೃಷಿಕರಿಗಲ್ಲ, ಅವರನ್ನು ದೋಚುವ ನಕಲಿ ಗೋರಕ್ಷಕರಿಗೆ ಎನ್ನುವುದು ಸಾಬೀತಾಗಿದೆ. ಕಾನೂನು ಅಸ್ತಿತ್ವದಲ್ಲಿರುವುದು ಬಡವರ, ಕೃಷಿಕರ ರಕ್ಷಣೆಗಲ್ಲ, ಗೋರಕ್ಷಕರ ವೇಷದಲ್ಲಿರುವ ದುಷ್ಕರ್ಮಿಗಳಿಗೆ ಎನ್ನುವುದೂ ಸ್ಪಷ್ಟವಾಗಿದೆ. ಪೊಲೀಸರ ಭದ್ರತೆಯ ಬದಲಿಗೆ ಗೋ ವ್ಯಾಪಾರಿಗಳು ಈ ನಕಲಿ ಗೋರಕ್ಷಕರ ಜೊತೆಗೆ ಒಳ ಒಪ್ಪಂದಗಳನ್ನು ಮಾಡುವುದು ಅಥವಾ ಅವರಿಂದಲೇ ಭದ್ರತೆಯನ್ನು ಪಡೆದುಕೊಳ್ಳುವುದು ಅತ್ಯಗತ್ಯ ಎನ್ನುವುದನ್ನು ತೀರ್ಪು ಪರೋಕ್ಷವಾಗಿ ಹೇಳುತ್ತಿದೆ. ಹೈನೋದ್ಯಮದ ಮೂಲಕವೇ ಬದುಕನ್ನು ಕಟ್ಟಿಕೊಂಡಿರುವವರಿಗೆ ಇದು ಅನಿವಾರ್ಯವೇ ಆಗಿದೆ.

ಇಲ್ಲವಾದರೆ ಗೋಸಾಕಣೆಯಿಂದಲೇ ಅವರು ದೂರವಿರಬೇಕಾಗುತ್ತದೆ. ಯಾಕೆಂದರೆ ಈ ತೀರ್ಪು ಮುಂದಿನ ದಿನಗಳಲ್ಲಿ ಇತರ ನಕಲಿ ಗೋರಕ್ಷಕರಿಗೆ ಗುಂಪು ಹಲ್ಲೆಗಳನ್ನು ಮಾಡಲು ನೀಡಿರುವ ಅಧಿಕೃತ ಪರವಾನಿಗೆಯೂ ಹೌದು. ಜೊತೆಗೆ, ಗುಂಪು ಹಲ್ಲೆಗಳು ಕೇವಲ ಬಿಜೆಪಿ ಸರಕಾರದ ಬೆಂಬಲದಿಂದಲೇ ನಡೆಯುತ್ತಿವೆ ಮತ್ತು ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಕ್ಷಣ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಯೇ ಬಿಡುತ್ತದೆ ಎನ್ನುವ ನಂಬಿಕೆಗಳೂ ಹುಸಿಯಾಗಿವೆ. ಈಗಾಗಲೇ ಪೊಲೀಸರು ಸರ್ವ ಶಕ್ತಿಯನ್ನು ಪ್ರಯೋಗಿಸಿ ಸಾಕ್ಷಗಳನ್ನು ದುರ್ಬಲಗೊಳಿಸಿರುವುದರಿಂದ ಹಾಗೂ ಅಳಿಸಿ ಹಾಕಿರುವುದರಿಂದ, ಮುಂದೆ ಸರಕಾರ ಹೊಸ ತನಿಖೆಯನ್ನು ನಡೆಸಿದರೂ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ದೇಶಾದ್ಯಂತ ಸಂಘಪರಿವಾರದ ಹಿಂಸಾರಾಜಕೀಯ ವಿಸ್ತರಣೆಗೊಳ್ಳುತ್ತಿರುವ ಈ ದಿನಗಳಲ್ಲಿ ಪ್ರಧಾನಿ ಮೋದಿ ಸ್ವಾತಂತ್ರೋತ್ಸವ ಭಾಷಣದಲ್ಲಿ ಮತ್ತೆ ವಿಕಾಸದ ಕುರಿತಂತೆ ಮಾತನಾಡಿದ್ದಾರೆ. ಜೊತೆಗೆ ಕಾಶ್ಮೀರದ ಅಭಿವೃದ್ಧಿಯ ಹೊಸ ಶಕೆಗೆ ದೇಶದ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದ್ದಾರೆ. ಆದರೆ ಕಾಶ್ಮೀರದಲ್ಲಿ ನಡೆಯುತ್ತಿರುವುದು ಏನು ಎನ್ನುವುದನ್ನು ವಿಶ್ವವೇ ಗಮನಿಸುತ್ತಿದೆ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕು ಹೋರಾಟಗಾರರು ಕಾಶ್ಮೀರದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಪ್ರತಿರೋಧಿಸುತ್ತಿದ್ದಾರೆ. ಇಂದು ಕಾಶ್ಮೀರವನ್ನು ಪಕ್ಕಕ್ಕಿಡೋಣ. ಕಾಶ್ಮೀರವನ್ನು ಹೊರತು ಪಡಿಸಿದಂತೆ ಇತರ ರಾಜ್ಯಗಳಲ್ಲಿ ಶಾಂತಿ, ಅಭಿವೃದ್ಧಿಗೆ ಮೋದಿ ಸರಕಾರ ಯಾವ ಕ್ರಮ ಕೈಗೊಳ್ಳುತ್ತಿದೆ? ಇಂದು ಸರಕಾರದ ಕುರಿತಂತೆ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವುದು ಕಾಶ್ಮೀರದ ಜನರು ಮಾತ್ರವಲ್ಲ. ಅಸ್ಸಾಂ, ಮಣಿಪುರ ಸೇರಿದಂತೆ ಹಲವು ರಾಜ್ಯಗಳು ಸರಕಾರದ ನಿಲುವುಗಳಿಗೆ ಪ್ರತಿರೋಧಗಳನ್ನು ವ್ಯಕ್ತಪಡಿಸುತ್ತಿವೆ. ಇದೇ ಸಂದರ್ಭದಲ್ಲಿ ದೇಶಾದ್ಯಂತ ಕಾನೂನು ವ್ಯವಸ್ಥೆಯ ಪರೋಕ್ಷ ಸಮ್ಮತಿಯಿಂದಲೇ ನಡೆಯುತ್ತಿರುವ ಗುಂಪು ಥಳಿತ ಮತ್ತು ಹತ್ಯೆ ಪ್ರಕರಣಗಳು ದೇಶದೊಳಗಡೆ ಕಾಶ್ಮೀರದಂತಹ ಸನ್ನಿವೇಶಗಳನ್ನು ನಿರ್ಮಿಸುತ್ತಿವೆ. ಇಂದು ಕಾಶ್ಮೀರವನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಕಾಶ್ಮೀರದ ಜನರ ನಂಬಿಕೆಯನ್ನು ಗಳಿಸಿಕೊಳ್ಳಬೇಕು ಎಂಬ ವಾದವಿದೆ. ಆದರೆ ಕಾಶ್ಮೀರ ಹೊರತು ಪಡಿಸಿದ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ನಂಬಿಕೆಗಳನ್ನು ಕಳೆದುಕೊಳ್ಳುತ್ತಿರುವ ಸರಕಾರ, ಕಾಶ್ಮೀರದಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳುವುದು ಸಾಧ್ಯವೇ? ಈ ಪ್ರಶ್ನೆಗೆ ಪ್ರಧಾನಿ ಮೋದಿಯೇ ಸ್ಪಷ್ಟೀಕರಣವನ್ನು ನೀಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)