varthabharthi

ಸುಗ್ಗಿ

ಜೀವನವೇ ಮುಗಿಯಿತು ಎಂದುಕೊಂಡಿದ್ದ ಕನ್ನಡ ಕೋಗಿಲೆ ವಿನ್ನರ್ ಖಾಸಿಂ ಅಲಿ

ವಾರ್ತಾ ಭಾರತಿ : 18 Aug, 2019
ಮೌಲಾಲಿ ಕೆ ಆಲಗೂರ ಬೋರಗಿ

ಕೋಗಿಲೆಯ ಸುಮಧುರ ಕಂಠ ಹೊಂದಿರುವ ಖಾಸಿಂ ಅಲಿ ಎಲ್ಲಿಯೂ ಸಂಗೀತ ಕಲಿತವರಲ್ಲ. ಆದರೂ ಲಯಬದ್ಧ, ಸುಶ್ರಾವ್ಯವಾಗಿ ಕೇಳುಗರ ಮನಮುಟ್ಟುವಂತೆ ಇಂಪಾಗಿ ಹಾಡುತ್ತಾರೆ. ಖಾಸಿಂ ಹಾಡುತ್ತಿದ್ದರೆ ಮಾತು ಮೌನ ವಾಗಿ ಮನಸ್ಸು ಮೂಕವಾಗಿ ಶಾಂತಚಿತ್ತದಿಂದ ಕೇಳುತ್ತದೆ. ಖಾಸಿಂ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಾವಸಗಿ ಎಂಬ ಪುಟ್ಟ ಹಳ್ಳಿಯ ಬಡ ಅನಕ್ಷರಸ್ಥ ಕೂಲಿ ಕುಟುಂಬದಲ್ಲಿ ಜನಿಸಿದ ಗ್ರಾಮೀಣ ಪ್ರತಿಭೆ.

ಇತ್ತೀಚೆಗೆ ಕನ್ನಡ ಖಾಸಗಿ ವಾಹಿನಿಗಳು ‘ಸರಿಗಮಪ’ ಮತ್ತು ‘ಕನ್ನಡ ಕೋಗಿಲೆ’ಯಂತ ಸಂಗೀತ ಕಾರ್ಯಕ್ರಮಗಳನ್ನು ಪ್ರತೀ ಶನಿವಾರ ಮತ್ತು ರವಿವಾರ ನಡೆಸುತ್ತಿವೆ. ಇದರಿಂದಾಗಿ ಅದೆಷ್ಟೋ ಯುವ ಪ್ರತಿಭೆಗಳಿಗೆ ಹಾಡುವ ಅವಕಾಶ ದೊರೆಯುತ್ತಿದೆ. ಈ ಕಾರ್ಯಕ್ರಮಗಳಲ್ಲಿ ನಾಡಿನ ಶ್ರೇಷ್ಠ ಸಂಗೀತ ನಿರ್ದೇಶಕರಾದ ನಾದ ಬ್ರಹ್ಮ ಹಂಸಲೇಖ, ಅರ್ಜುನ ಜನ್ಯಾ, ಸಾಧುಕೋಕಿಲ ಮತ್ತು ವಿಜಯ ಪ್ರಕಾಶ್, ರಾಜೇಶ್ ಕೃಷ್ಣ, ಅರ್ಚನಾ ಉಡಪಾರವರಂತಹ ಸುಪ್ರಸಿದ್ಧ ಗಾಯಕರುಗಳು ತೀರ್ಪುಗಾರರಾಗಿದ್ದು, ಅತ್ಯುತ್ತಮವಾಗಿ ಹಾಡುವ ಗಾಯಕ/ಗಾಯಕಿಯರನ್ನು ಆಯ್ಕೆ ಮಾಡಿ ನಾಡಿಗೆ ಪರಿಚಯಿಸುತಿದ್ದಾರೆ. ಸೂಕ್ತ ಅವಕಾಶ, ವೇದಿಕೆಗಳು ಸಿಗದೇ ಸಂಗೀತ ಮತ್ತು ಗಾಯನದಿಂದ ವಂಚಿತರಾಗಿದ್ದ ಯುವ ಪ್ರತಿಭೆಗಳಿಗೆ ಇದು ಒಂದು ಉತ್ತಮ ವೇದಿಕೆಯಾಗಿದೆ. ಈ ವೇದಿಕೆ ಮೂಲಕ ಗ್ರಾಮೀಣ ಭಾಗದ ಚನ್ನಪ್ಪ, ಸುನೀಲ್, ಮೆಹಬೂಬ್, ಲಕ್ಷ್ಮೀ, ಹನುಮಂತಪ್ಪರಂತ ಯುವ ಪ್ರತಿಭೆಗಳು ಇಂದು ಕನ್ನಡದ ಚಲನಚಿತ್ರಗಳಲ್ಲಿ ಹಾಡಿ ಕನ್ನಡಿಗರ ಮನ ಗೆದ್ದು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಸಾಧನೆಗೈದು ಮುನ್ನಡೆಯುತ್ತಿದ್ದಾರೆ.

ಇಂತಹ ಯುವ ಪ್ರತಿಭೆಗಳ ಸಾಲಿಗೆ ಸೇರುತ್ತಿಯುವ ಗ್ರಾಮೀಣ ಭಾಗದ ಮತ್ತೊಬ್ಬ ಗಾಯಕ ಖಾಸಿಂ ಅಲಿ ಬಿದರಗಟ್ಟಿ. 24 ವರ್ಷದ ಖಾಸಿಂ ಅಲಿ ಹಾಡಲು ನಿಂತರೆ ಸಾಕು ಜನರು ತಮಗೆ ಅರಿವಿಲ್ಲದಂತೆ ತಲೆ ದೂಗುತ್ತಾರೆ. ಕೋಗಿಲೆಯ ಸುಮಧುರ ಕಂಠ ಹೊಂದಿರುವ ಖಾಸಿಂ ಅಲಿ ಎಲ್ಲಿಯೂ ಸಂಗೀತ ಕಲಿತವರಲ್ಲ. ಆದರೂ ಲಯಬದ್ಧ, ಸುಶ್ರಾವ್ಯವಾಗಿ ಕೇಳುಗರ ಮನಮುಟ್ಟುವಂತೆ ಇಂಪಾಗಿ ಹಾಡುತ್ತಾರೆ. ಖಾಸಿಂ ಹಾಡುತ್ತಿದ್ದರೆ ಮಾತು ಮೌನವಾಗಿ ಮನಸ್ಸು ಮೂಕವಾಗಿ ಶಾಂತಚಿತ್ತದಿಂದ ಕೇಳುತ್ತದೆ. ಖಾಸಿಂ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಾವಸಗಿ ಎಂಬ ಪುಟ್ಟ ಹಳ್ಳಿಯ ಬಡ ಅನಕ್ಷರಸ್ಥ ಕೂಲಿ ಕುಟುಂಬದಲ್ಲಿ ಜನಿಸಿದ ಗ್ರಾಮೀಣ ಪ್ರತಿಭೆ. ಚಿಕ್ಕ ವಯಸ್ಸಿನಲ್ಲೇ ಪೊಲೀಸ್ ಅಧಿಕಾರಿ ಆಗಬೇಕು ಎಂದು ಮಹಾದಾಸೆ ಹೊಂದಿದ್ದ ಖಾಸಿಂ ಪಾಠ, ಆಟ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಮುಂದೆ. ಇದಕ್ಕೆ ತಂದೆ ದಾವಲಸಾಬ್ ತಾಯಿ ಅಮೀರಬಿಯ ಪ್ರೋತ್ಸಾಹ ನಿರಂತರವಾಗಿತ್ತು. ನಾವು ಓದದಿದ್ದರೂ ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬಾಳಬೇಕು ಎಂಬುದೇ ಹೆತ್ತವರ ಆಸೆಯಾಗಿತ್ತು. ಆದರೆ ಆ ವಿಧಿಯ ಆಟ ಮಾತ್ರ ಬೇರೆಯೇ ಆಗಿತ್ತು. ಖಾಸಿಂ 16ನೇ ವಯಸ್ಸಿನಲ್ಲಿ ಇರುವಾಗಲೇ ದುರ್ವಿಧಿಯೂ ಇವರ ಬಾಳಿನಲ್ಲಿ ಹಲವು ಆಟವಾಡಿತು. ಹಕ್ಕಿಯಂತೆ ರೆಕ್ಕೆ ಬಿಚ್ಚಿ ಹಾರಾಡುತಿದ್ದ ಇವರಿಗೆ ರೆಕ್ಕೆ ಮುರಿದು ಹಾಸಿಗೆ ಹಿಡಿಯುವಂತೆ ಮಾಡಿತು. ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿಸಿತು. ಕುಟುಂಬದ ಸದಸ್ಯರ ಸುಖ ಸಂತೋಷ ನೆಮ್ಮದಿ ಹಾಳು ಮಾಡಿತು. ಹೌದು ಖಾಸಿಂ ತುಂಬಾ ಕ್ರಿಯಾಶೀಲ ಮತ್ತು ದೈಹಿಕ ಸದೃಢತೆ ಹೊಂದಿರುವ ಯುವ ಪ್ರತಿಭಾನ್ವಿತ ತರುಣ. ಫುಟ್ಬಾಲ್ ಆಟದ ಮೇಲೆ ತುಂಬಾ ಪ್ರೀತಿ, ವ್ಯಾಮೋಹ. ಅದೊಂದು ದಿನ ಗೆಳೆಯರ ಜೊತೆಗೆ ಧಾರವಾಡದ ಪ್ರತಿಷ್ಠಿತ ಕಾಲೇಜ್‌ನಲ್ಲಿ ಫುಟ್ಬಾಲ್ ಆಡುವ ಸಮಯದಲ್ಲಿ ಆಯಾಸಗೊಂಡ ಖಾಸಿಂ ಮೈದಾನದ ಹಸಿರು ಹುಲ್ಲಿನ ಮೇಲೆ ವಿಶ್ರಾಂತಿ ಪಡೆಯಲು ಮಲಗಿದ ವೇಳೆ ಚೂಪಾದ ಚಿಕ್ಕ ಕಲ್ಲು ಬೆನ್ನಿಗೆ ಚುಚ್ಚಿತು.ಆ ಕ್ಷಣ ಅಷ್ಟೊಂದು ನೋವು ಕೊಡದಿದ್ದರು, ಮಾರನೆ ದಿನ ನೋವು ಕಾಣಿಸಿಕೊಂಡಿತು. ವೈದ್ಯರ ಬಳಿ ಚಿಕಿತ್ಸೆ ಪಡೆದು ಮಾತ್ರೆ ನುಂಗಿದರೂ ನೋವು ಕಡಿಮೆ ಆಗಲಿಲ್ಲ. ದಿನ ಕಳೆದಂತೆ ನೋವು ಹೆಚ್ಚಾಗುತ್ತಾ ಹೊರಟಿತು. ನಡೆಯಲು ಬಾರದಂತಾಯಿತು. ಆಗ ಧಾರವಾಡದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಎಕ್ಸ್‌ರೇ ಮಾಡಿ ನೋಡಿದಾಗ ಖಾಸಿಂ ನಂಬಲು ಸಾಧ್ಯವಾಗದಂತ ದೊಡ್ಡ ಆಘಾತ ಕಾದಿತ್ತು. ಅದೇನೆಂದರೆ ಎಕ್ಸ್‌ರೇ ನಲ್ಲಿ ಟ್ಯೂಮರ್ ಆಗಿದೆ ಎಂಬ ರಿಪೋರ್ಟ್ ಬಂತು. ಬೆನ್ನು ಹುರಿಗೆ ಕಲ್ಲು ಚುಚ್ಚಿದ ಪರಿಣಾಮ ರಕ್ತ ಹೆಪ್ಪುಗಟ್ಟಿದೆ ಅದನ್ನು ತೆಗೆಯಬೇಕು. ಇಲ್ಲವಾದರೆ ಜೀವಕ್ಕೆ ಅಪಾಯ ಎಂದು ವೈದ್ಯರು ಸಲಹೆ ನೀಡಿದರು. ಇದನ್ನು ಕೇಳಿದ ಖಾಸಿಂ ಕಣ್ಣಿಗೆ ಕತ್ತಲು ಆವರಿಸಿ ಮನಸ್ಸು ಭಾರವಾಯಿತು. ಕನಸು ನುಚ್ಚು ನೂರಾಯಿತು. ಜೀವನವೇ ಅಂತ್ಯವಾಯಿತು. ಆಸೆಗಳು ಮುದುಡಿ ಕಣ್ಣೀರು ಕಡಲಂತೆ ಹರಿಯಿತು. ಆಸ್ಪತ್ರೆಯಿಂದ ಮರಳಿ ಊರಿಗೆ ಬಂದ ಮೂರನೇ ದಿನಕ್ಕೆ ಖಾಸಿಂ ಇನ್‌ಬ್ಯಾಲೆನ್ಸ್ ಆಗಿ ನಡೆಯಲು ಪ್ರಾರಂಭಿಸಿದರು. ಮನದಲ್ಲಿ ಮತ್ತಷ್ಟು ಭಯ, ಆತಂಕ, ದುಗುಡ ಹೆಚ್ಚಿತು. ಮಗನು ಪಡುವ ಕಷ್ಟ ನೋಡಿ ಹೆತ್ತವರ ಮನದಲ್ಲಿ ದುಃಖ ಮುಗಿಲು ಮುಟ್ಟಿತ್ತು. ಶಸ್ತ್ರಚಿಕಿತ್ಸೆಗಾಗಿ ಪುನಃ ಆಸ್ಪತ್ರೆಗೆ ದಾಖಲಿಸಿದರು. 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮತ್ತೆ ಕೆಲವು ಗಂಟೆಗಳ ನಂತರದಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆ ಒಂದೇ ದಿನದಲ್ಲಿ ಎರಡೂ ಶಸ್ತ್ರಚಿಕಿತ್ಸೆ ಮಾಡಿದರು. ಖಾಸಿಂ ಉಳಿಸಿಕೊಳ್ಳಲು ಖರ್ಚಾದ ಒಟ್ಟು 12 ಲಕ್ಷ. ಆದರೂ ಹೆತ್ತವರು ಮಾತ್ರ ಎದೆಗುಂದಲಿಲ್ಲ. ಹಣ ಎಷ್ಟೇ ಖರ್ಚಾಗಲಿ ಮಗ ಬದುಕುಳಿದರೇ ಸಾಕು. ಕೂಲಿ ಮಾಡಿ ಅದನ್ನು ನಾವು ತೀರಿಸುತ್ತೇವೆ ಎಂಬ ಖಾಸಿಂ ತಂದೆ ತಾಯಿಯ ಆತ್ಮ ಸ್ಥೈರ್ಯದ ಮಾತುಗಳು ನಿಜವಾಗಲು ಮೆಚ್ಚಲೇ ಬೇಕು. ಶಸ್ತ್ರಚಿಕಿತ್ಸೆ ಆದ ನಂತರವೂ ಎರಡೂವರೆ ವರ್ಷಗಳ ಕಾಲ ಖಾಸಿಂರವರ ಓದುವ ಕೋಣೆಯೇ ರೋಗಿಯ ಬೆಡ್‌ರೂಮ್ ಆಗಿ ಮಾರ್ಪಡಿತ್ತು. ಒಂದಿಷ್ಟು ಬೇಸರ ಮಾಡಿಕೊಳ್ಳದ ಖಾಸಿಂ ನ ಹೆತ್ತವರು ಮನೆಯ ದೈನಂದಿನ ಎಲ್ಲಾ ಕಾರ್ಯಗಳನ್ನು ಮಾಡಿಸಿ ಖಾಸಿಂ ಗೆ ಧೈರ್ಯ, ಆತ್ಮ ಸ್ಥೈರ್ಯ ತುಂಬುತಿದ್ದರು. ತಂದೆ ತಾಯಿ ಮಗನಿಗಾಗಿ ಅಷ್ಟೊಂದು ಶ್ರಮ ವಹಿಸಿದರೆ, ಮಗ ಖಾಸಿಂ ಮಾತ್ರ ಎಂಥಾ ಬಡವರ ಹೊಟ್ಟೆಯಲ್ಲಿ ಜನಿಸಿದೆ ಎಂದು ಕೋಪದಿಂದ ಬೈದು ಕೆಲವೊಮ್ಮೆ ಹೊಡೆದಿರುವ ಪ್ರಸಂಗವು ಇದೆಯಂತೆ. ಆಸ್ಪತ್ರೆಯಲ್ಲಿ ಇದ್ದ ವೇಳೆ ಖಾಸಿಂ ಮನದ ಭಾರ ಹಗುರ ಮಾಡಿಕೊಳ್ಳಲು ಹಾಡು ಹಾಡುತಿದ್ದರಂತೆ. ಅದನ್ನು ಗಮನಿಸಿದ ಪಕ್ಕದ ಬೆಡ್‌ನಲ್ಲಿ ಇರುವ ಮುಕ್ತ ಎಂಬ ಮಹಿಳೆ ಖಾಸಿಂನ ಹಾಡು ಕೇಳಿ, ‘‘ನಿನ್ನಲ್ಲಿ ಪದಗಳಿಗೆ ಜೀವ ತುಂಬುವ ಭಾವ ಇದೆ. ನೀನು ಉತ್ತಮವಾಗಿ ಹಾಡುವೆ. ಅದನ್ನೇ ಮುಂದುವರಿಸು ಮುಂದೆ ಒಳ್ಳೆಯ ಭವಿಷ್ಯವಿದೆ’’ ಎಂದು ಸ್ಫೂರ್ತಿ ತುಂಬಿದಳು. ಆ ಸಹೋದರಿಯ ಮಾತುಗಳು ಖಾಸಿಂಗೆ ಮತ್ತಷ್ಟು ಪ್ರೇರಣೆ ನೀಡಿತು. ಮನೆಯಲ್ಲಿ ಹಾಡುವುದನ್ನು ಮುಂದುವರಿಸಿದ. ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ, ಗೌರವ, ಅಭಿಮಾನ ಹೊಂದಿದ್ದ ಖಾಸಿಂ. ಕನ್ನಡದ ಎಂಥಾ ಕಷ್ಟಕರ ಹಾಡುಗಳೇ ಇರಲಿ ಇಷ್ಟ ಪಟ್ಟು ಸುಲಲಿತವಾಗಿ ಹಾಡುತಿದ್ದರು. ಅಲ್ಲದೇ ದಾವಣಗೆರೆ, ಹಾವೇರಿ, ಧಾರವಾಡ, ಚಿತ್ರದುರ್ಗ, ಬೆಳಗಾವಿ, ಉಡುಪಿ, ಗದಗ, ಬಾಗಲಕೋಟೆ ಸೇರಿದಂತೆ ರಾಜ್ಯದಲ್ಲಿ ನಡೆಯುವ ಎಲ್ಲಾ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ‘ಸಂಗೀತ ಕಲಾ ರತ್ನ’ ಎಂಬ ಬಿರುದು ಜೊತೆಗೆ ಸಾವಿರಾರು ಗೌರವ ಸನ್ಮಾನ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಕನ್ನಡದ ಖಾಸಗಿ ವಾಹಿನಿ ನಡೆಸುವ ‘ಕನ್ನಡ ಕೋಗಿಲೆ ಸೀಝ ನ್2’ ಸಂಗೀತ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಕನ್ನಡ ಚಲನಚಿತ್ರದ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಸಾಧುಕೋಕಿಲ ಗಾಯಕಿ ಅರ್ಚನಾ ಉಡಪಾ ಮತ್ತು ಚಂದನ್ ಶೆಟ್ಟಿ ಇವರು ತೀರ್ಪುಗಾರರಾಗಿ ಯುವ ಪ್ರತಿಭೆಗಳಿಗೆ ಸಾಕಷ್ಟು ಪ್ರೋತ್ಸಾಹ ಸಲಹೆ ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ. ಇವರಿಂದ ಅನೇಕ ಸಂಗೀತಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಿಳಿದುಕೊಂಡಿರುವ ಖಾಸಿಂ ತಮ್ಮ ಹಾಡಿನಲ್ಲಿ ಸಾಕಷ್ಟು ಪ್ರಗತಿ ಕಂಡುಕೊಂಡಿದ್ದಾರೆ. ಭಾರತ ಕಂಡ ಸುಪ್ರಸಿದ್ಧ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯರವರನ್ನು ಪ್ರೇರಣೆಯಾಗಿ ತೆಗೆದುಕೊಂಡು ಅವರ ಶೈಲಿಯಲ್ಲೇ ಹಾಡುತ್ತ ಕರುನಾಡು ಜನರ ಮನೆ ಮಾತಾಗಿದ್ದಾರೆ. ಕನ್ನಡ ಕೋಗಿಲೆ ಕಾರ್ಯಕ್ರಮಕ್ಕೆ ಬಂದ ಅನೇಕ ಕನ್ನಡ ನಟ ನಟಿಯರು ಖಾಸಿಂ ಹಾಡಿಗೆ ಮನ ಸೋತು ಶರಣಾಗಿದ್ದಾರೆ. ನಿನಗೆ ಒಳ್ಳೆಯ ಭವಿಷ್ಯವಿದೆ ಎಂದು ಶುಭ ಹಾರೈಸಿದ್ದಾರೆ. ನಾಡಿನ ಜನರ ಆಶೀರ್ವಾದ ಮತ್ತು ಕಠಿಣ ಪರಿಶ್ರಮದಿಂದ ‘ಕನ್ನಡ ಕೋಗಿಲೆ ಸೀಝನ್ 2’ ರಲ್ಲಿ ಫೈನಲ್‌ಗೆ ತಲುಪಿ ದಿ. 27.07.19 ರಂದು ಬೆಂಗಳೂರಿನ ಜಿಕೆಪಿಕೆ ಮೈದಾನದಲ್ಲಿ ನಡೆದ ಕನ್ನಡ ಕೋಗಿಲೆ ಗ್ರ್ಯಾಂಡ್ ಫೈನಲ್‌ನಲ್ಲಿ ವಿನ್ನರ್ (ಜಯ) ಆಗುವ ಮೂಲಕ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಸಾಧನೆಗೈದಿದ್ದಾರೆ. ಖಾಸಿಂ ಈ ಗೆಲುವನ್ನು ತಂದೆ ತಾಯಿಗೆ ಅರ್ಪಿಸಿದ್ದಾರೆ. ಹೆತ್ತವರು ಕಂಡ ಕನಸು ನನಸಾಗಿಸಿದ್ದಾರೆ. ಪ್ರಸ್ತುತ ಸಂಗೀತ ವಿದ್ವಾಂಸ ಜಗದೀಶ್ ಮಡಿವಾಳ ರವರ ಬಳಿ ಹಿಂದುಸ್ತಾನಿ ಸಂಗೀತ ಕಲಿಯುತ್ತಿರುವ ಖಾಸಿಂ ಮುಂದೆ ಕನ್ನಡ ಚಲನಚಿತ್ರಗಳಲ್ಲಿ ಹಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಬದುಕಿನುದ್ದಕ್ಕೂ ಬರಿ ನೋವು ಯಾತನೆ ಅನುಭವಿಸಿದ ಖಾಸಿಂ ಕಷ್ಟದ ಜೀವನ ಇಷ್ಟ ಪಟ್ಟು ನಿರಂತರ ಶ್ರಮವಹಿಸಿ ಹಾಡಿ ಇಂದು ಜಯ ಸಾಧಿಸಿದ್ದಾರೆ. ಸತತ ಪ್ರಯತ್ನ, ಕಠಿಣ ಶ್ರಮ, ದೃಢ ನಿರ್ಧಾರ, ಗೆಲ್ಲುತ್ತೇನೆಂಬ ಆತ್ಮ ವಿಶ್ವಾಸ, ನಂಬಿಕೆ ಇದ್ದರೆ ಎಲ್ಲವನ್ನೂ ಸಾಧಿಸಬಹುದು ಎಂಬುವುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಅಲ್ಲದೇ ಇಂದಿನ ಯುವ ಸಮೂಹಕ್ಕೆ ಮಾದರಿ ಮತ್ತು ಸ್ಫೂರ್ತಿ, ಪ್ರೇರಣೆಯಾಗಿದ್ದಾರೆ ಖಾಸಿಂ ಅಲಿ. ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸರಕಾರ ಇಂತಹ ಪ್ರತಿಭಾನ್ವಿತ ಯುವ ಗಾಯಕರಿಗೆ ಪ್ರೋತ್ಸಾಹ ನೀಡಿ ಗೌರವಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)