varthabharthi

ಕ್ರೀಡೆ

ಆ.19ರಿಂದ ಬಾಸೆಲ್‌ನಲ್ಲಿ ವರ್ಲ್ಡ್ ಚಾಂಪಿಯನ್‌ಶಿಪ್

ಚಿನ್ನ ಗೆಲ್ಲಲು ಪಿ.ವಿ.ಸಿಂಧು ಮತ್ತೊಮ್ಮೆ ಪ್ರಯತ್ನ

ವಾರ್ತಾ ಭಾರತಿ : 18 Aug, 2019

ಬಾಸೆಲ್, ಆ.18: ಇಲ್ಲಿ ಸೋಮವಾರ ಆರಂಭಗೊಳ್ಳಲಿರುವ 2ನೇ ಆವೃತ್ತಿಯ ಬಿಡಬ್ಲುಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪಿ.ವಿ. ಸಿಂಧು ಚಿನ್ನ ಗೆಲ್ಲಲು ಮತ್ತೊಮ್ಮೆ ಹೋರಾಟ ನಡೆಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್ ಅವರಿಗೆ ಈಗ ಯಾವುದೇ ಸಮಸ್ಯೆ ಇಲ್ಲ. ಈ ಕಾರಣದಿಂದಾಗಿ ಇವರಿಂದ ಪದಕ ನಿರೀಕ್ಷಿಸಲಾಗಿದೆ. ಅವರು ಕೊರಿಯಾದ ಕೋಚ್ ಹಾಗೂ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನ ಜಯಿಸಿದ ಕಿಮ್ ಜಿ ಹ್ಯೂನ್ ಮಾರ್ಗದರ್ಶನದಲ್ಲಿ ತಯಾರಿ ನಡೆಸುತ್ತಿದ್ದಾರೆ.

ಎರಡು ಬಾರಿ ಬೆಳ್ಳಿ ಜಯಿಸಿರುವ ಸಿಂಧು ಚಿನ್ನದ ಬೇಟೆ ನಡೆಸಲಿದ್ದಾರೆ. ಸಿಂಧು ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಯಶಸ್ವಿ ಆಟಗಾರ್ತಿ. ಈ ವರೆಗೆ ನಾಲ್ಕು ಪದಕಗಳನ್ನು ಪಡೆದಿದ್ದಾರೆ.

2013 ಮತ್ತು 2014ರಲ್ಲಿ ಕಂಚು ಜಯಿಸಿದ್ದ ಸಿಂಧು 2017 ಮತ್ತು 2018ನೇ ಆವೃತ್ತಿಯಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು. ಆದರೆ ಈ ವರೆಗೆ ಚಿನ್ನ ಗೆಲ್ಲಲು ಅವರಿಗೆ ಸಾಧ್ಯವಾಗಿಲ್ಲ. ಎರಡು ಬಾರಿ ಪ್ರಶಸ್ತಿಯ ಸುತ್ತಿನಲ್ಲಿ ಚಿನ್ನ ಗೆಲ್ಲುವಲ್ಲಿ ಎಡವಿದ್ದ ಸಿಂಧು ಈ ಬಾರಿ ಮತ್ತೊಮ್ಮೆ ಚಿನ್ನ ಗೆಲ್ಲುವ ಪ್ರಯತ್ನ ನಡೆಸಲಿದ್ದಾರೆ.

2017ರಲ್ಲಿ ಜಪಾನ್‌ನ ನೊರೊಮಿ ಒಕುಹರಾ ಮತ್ತು 201ರಲ್ಲಿ ಒಲಿಂಪಿಕ್ ಚಾಂಪಿಯನ್ ಸ್ಪೇನ್‌ನ ಕರೋಲಿನಾ ಮರಿನ್ ಅವರು ಫೈನಲ್‌ನಲ್ಲಿ ಸಿಂಧುಗೆ ಸೋಲುಣಿಸಿ ಚಿನ್ನ ಚಿಕೊಂಡಿದ್ದರು. 5ನೇ ಶ್ರೇಯಾಂಕಿತೆ 24ರ ಹರೆಯದ ಸಿಂಧು ಕಳೆದ ತಿಂಗಳು ಇಂಡೋನೇಶ್ಯಾ ಓಪನ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ವರ್ಲ್ಡ್ ಚಾಂಪಿಯನ್‌ಶಿಪ್‌ನ ಪ್ರಥಮ ಸುತ್ತಿನಲ್ಲಿ ಸಿಂಧುಗೆ ಚೀನಾ ತೈಪೆಯ ಪಾಯ್ ಯು ಪೊ ಅಥವಾ ಬಲ್ಗೇರಿಯಾದ ಲಿಂಡಾ ಝೆಟ್‌ಚೆರಿ ಅವರ ಸವಾಲು ಎದುರಾಗುವ ಸಾಧ್ಯತೆ ಇದೆ. ಒಂದು ವೇಳೆ ಮೊದಲ ಪಂದ್ಯದಲ್ಲಿ ಸಿಂಧು ಜಯಿಸಿದರೆ ಎರಡನೇ ಮೂರನೇ ಸುತ್ತಿನಲ್ಲಿ ಅಮೆರಿಕದ ಬೀವೆನ್ ಝಾಂಗ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಚೀನಾ ತೈಪೆಯ ತಾಯ್ ಝು ಯಿಂಗ್ ಸವಾಲು ಎದುರಾಗುವ ಸಾಧ್ಯತೆ ಇದೆ. 8ನೇ ಶ್ರೇಯಾಂಕದ ಸೈನಾ ನೆಹ್ವಾಲ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈವರೆಗೆ ಒಂದು ಬೆಳ್ಳಿ ಮತ್ತು 1 ಕಂಚು ಪಡೆದಿದ್ದಾರೆ. ಅವರಿಗೆ ಮೊದಲ ಸುತ್ತಿನಲ್ಲಿ ಸ್ವಿಟ್ಝರ್ಲೆಂಡ್‌ನ ಸಬ್ರೀನಾ ಜಾಕ್ಯುಟ್ ಸವಾಲು ಎದುರಾಗಲಿದೆ.

ವಿಶ್ವದ ಮಾಜಿ ನಂ.1 ಕೆ.ಶ್ರೀಕಾಂತ್ ಫಿಟ್ನೆಸ್ ಸಮಸ್ಯೆಯಿಂದ ಹೊರ ಬಂದಿಲ್ಲ. ಅವರು ಗಾಯದಿಂದ ಪೂರ್ಣವಾಗಿ ಚೇತರಿಸಿಕೊಂಡಿಲ್ಲ.ಅವರು ಕಳೆದ ಮಾರ್ಚ್‌ನಲ್ಲಿ ಇಂಡಿಯಾ ಓಪನ್ ಫೈನಲ್ ತಲುಪಿದ್ದರು. ಕಳೆದ ಸುದೀರ್‌ಮನ್ ಕಪ್ ಪಂದ್ಯದ ವೇಳೆ ಅವರು ಗಾಯಗೊಂಡಿದ್ದರು. ಕಳೆದ 22 ತಿಂಗಳಿನಿಂದ ಅವರು ಪ್ರಶಸ್ತಿಯ ಬರ ಎದುರಿ ಸುತ್ತಿದ್ದಾರೆ. ಶ್ರೀಕಾಂ ತ್‌ಗೆ ಮೊದಲ ಸುತ್ತಿನಲ್ಲಿ ಐರ್ಲೆಂಡ್‌ನ ಹ್ಯಾಟ್ ಎನ್‌ಗ್ಯುಯೆನ್ ಸವಾಲು ಕಾದಿದೆ. 2018ರಲ್ಲಿ ಶ್ರೀಕಾಂತ್ ಇವರ ಸವಾಲನ್ನು ಎದುರಿಸಿದ್ದರು. 2019ರ ಆವೃತ್ತಿಯಲ್ಲೂ ಇದೀಗ ಮತ್ತೊಮ್ಮೆ ಮುಂದಿನ ಹಂತಕ್ಕೇರಲು ಐರ್ಲೆಂಡ್‌ನ ಆಟಗಾರನ ಸವಾಲು ಎದುರಿಸಬೇಕಾಗಿದೆ.

ಥಾಯ್ಲೆಂಡ್ ಓಪನ್ ಚಾಂಪಿಯನ್ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗಾಯದ ಕಾರಣದಿಂದಾಗಿ ಹೊರಗುಳಿಯಲಿದ್ದಾರೆ.

ವರ್ಲ್ಡ್ ನಂ.14 ಆಟಗಾರ ಸಮೀರ್ ವರ್ಮಾ ಭಾರತದ ಈಗಿನ ಉತ್ತಮ ಸಿಂಗಲ್ಸ್ ಆಟಗಾರ ಆದರೆ ಅವರಿಗೂ ಗಾಯದ ಸಮಸ್ಯೆ ಎದುರಾಗಿದೆ.

ಸಾತ್ವಿಕ್‌ಸಾಯಿರಾಜ್ ಭುಜನೋವಿನ ಸಮಸ್ಯೆ ಮತ್ತು ಚಿರಾಗ್ ಕಿಬ್ಬೊಟೆ ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕರಣದಿಂದಾಗಿ ಇವರು ವರ್ಲ್ಡ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದಾರೆ.

ಭಾರತದ ಮಿಕ್ಸೆಡ್ ಡಬಲ್ಸ್ ಆಟಗಾರರಾದ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್ ಸಿಕ್ಕಿರೆಡ್ಡಿ ಗಾಯದ ಕಾರಣದಿಂದಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಮಹಿಳೆಯರ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ ಮತ್ತು 2011ರಲ್ಲಿ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಪಡೆದ ಅಶ್ವಿನಿ ಪೊನ್ನಪ್ಪ, ಜಕ್ಕಂಪುಡಿ ಮೇಘನಾ ಮತ್ತು ಪೂರ್ವಿಶಾ ಎಸ್ ರಾಮ್, ಪೂಜಾ ದಾಂಡು ಹಾಗೂ ಸಂಜನಾ ಸಂತೋಷ್ ಕಣಕ್ಕಿಳಿಯಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)