varthabharthi

ವೈವಿಧ್ಯ

ಬೆಟ್ಟ, ಅರಣ್ಯಗಳಲ್ಲಿ ಹಸ್ತಕ್ಷೇಪ ನಿಲ್ಲಲಿ

ವಾರ್ತಾ ಭಾರತಿ : 19 Aug, 2019
ಎಂ.ಎ ಸಿರಾಜ್

ಹದಿನೈದು ದಿನಗಳ ಹಿಂದಷ್ಟೇ ತೀವ್ರ ಬರ ಪರಿಸ್ಥಿತಿ ರಾಜ್ಯವನ್ನು ಕಾಡುವ ಮುನ್ಸೂಚನೆ ನೀಡಿತ್ತು. ಆದರೆ ಈಗ ರಾಜ್ಯದ ಬಹುತೇಕ ಭಾಗ ನೆರೆ ಹಾವಳಿಯಿಂದ ಬಸವಳಿದಿವೆ. ಪಶ್ಚಿಮ ಘಟ್ಟದಲ್ಲಿ ಸುರಿದ ಒಂದು ವಾರದ ಮಳೆಯಿಂದ ನಮ್ಮ ಅಣೆಕಟ್ಟುಗಳು ತುಂಬಿ ಹೋಗಿವೆ. ಕೆಲವಂತೂ ಅಪಾಯದ ಮಟ್ಟವನ್ನು ಮೀರುವ ಆತಂಕ ಎದುರಾಗಿದ್ದು ದಿನದ 24 ಗಂಟೆಯೂ ನಿಗಾಯಿರಿಸಬೇಕಾದ ಅಗತ್ಯ ಬಂದೊದಗಿದೆ.
ತಡವಾದರೂ ದೇವರು ಕರುಣೆ ತೋರಿದ್ದಾನೆ. ಆದರೆ ಸ್ವಲ್ಪ ಹೆಚ್ಚೇ ಕರುಣೆ ತೋರಿದ್ದಾನೆ. ಸದ್ಯ ವಿದ್ಯುತ್ ಪೂರೈಕೆ, ಕುಡಿಯುವ ನೀರು ಮತ್ತು ನೀರಾವರಿ ಜಲಾಶಯಗಳಲ್ಲಿ ನೀರಿನ ಕೊರತೆಯ ಬಗ್ಗೆ ರಾಜಕಾರಣಿಗಳು ಮತ್ತು ಜನರಲ್ಲಿ ಉಂಟಾಗಿದ್ದ ದುಗುಡವನ್ನು ಈ ಮಳೆ ದೂರ ಮಾಡಿದೆ. ಸದ್ಯದಲ್ಲೇ ಗದ್ದೆಗಳು ಭತ್ತ ಮತ್ತು ಇತರ ಬೆಳೆಗಳಿಂದ ನಳನಳಿಸಲಿದೆ. ಆದರೆ ಇದು ಸಂತಸಪಡುವ ಸಮಯವಲ್ಲ, ಬದಲಿಗೆ ದೀರ್ಘ ಕಾಲದ ಯೋಜನೆಗಳನ್ನು ರೂಪಿಸುವ ಸಮಯವಾಗಿದೆ.
ಸಾಕಷ್ಟು ನೀರು ಸಂಗ್ರಹಣೆ
ಒಂದು ರಾಜ್ಯದ ಪ್ರಗತಿ ಅದರ ಆಹಾರ ಮತ್ತು ಇಂಧನ ಭದ್ರತೆಯ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಈ ಭದ್ರತೆಯು ಆ ರಾಜ್ಯದ ನೀರಿನ ಪೂರೈಕೆ ಮತ್ತು ಸಂಗ್ರಹಣೆಯನ್ನು ಅವಲಂಬಿಸಿರುತ್ತದೆ. ಭಾರತದ ತಲಾವಾರು ನೀರು ಸಂಗ್ರಹಣ ಸಾಮರ್ಥ್ಯ ವರ್ಷಕ್ಕೆ 209 ಕ್ಯುಬಿಕ್ ಮೀಟರ್ ಆಗಿದ್ದು ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಮುಂಗಾರು ಮಳೆ ಆಧಾರಿತ ನದಿಗಳನ್ನೇ ಹೆಚ್ಚಾಗಿ ಅವಲಂಬಿಸಿರುವ ದಕ್ಷಿಣದ ರಾಜ್ಯಗಳಲ್ಲಿ ಈ ಸಾಮರ್ಥ್ಯ 100 ಕ್ಯುಬಿಕ್ ಮೀಟರ್‌ಗೂ ಕಡಿಮೆ ಆಗಿದೆ. ಈ ಅನಿಶ್ಚಿತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೋಡಗಳನ್ನು ಸೆಳೆಯುವ ಆಯಸ್ಕಾಂತಗಳಂತೆ ಕಾರ್ಯನಿರ್ವಹಿಸುವ ಮತ್ತು ಆಮೂಲಕ ಮಳೆಗೆ ಕಾರಣವಾಗುವ ಪಶ್ಚಿಮ ಘಟ್ಟದ ಬೆಟ್ಟಗಳ ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜನೆಯನ್ನು ರೂಪಿಸುವ ಅಗತ್ಯವಿದೆ.
1,60,000 ಚ.ಕಿ.ಮೀನಲ್ಲಿ ವ್ಯಾಪಿಸಿರುವ ಈ ಬೆಟ್ಟಗಳು ದಕ್ಷಿಣ ಭಾರತದ ಸಂಕೀರ್ಣ ನದಿ ವ್ಯವಸ್ಥೆಯನ್ನು ರೂಪಿಸುತ್ತದೆ. ಈ ಬೆಟ್ಟಗಳು ಮತ್ತು ಅರಣ್ಯಗಳಿಗೆ ಹಾನಿ ಮಾಡಿದಾಗ ದಕ್ಷಿಣ ಭಾರತದ ಐದು ರಾಜ್ಯಗಳು ಮತ್ತು ಮಹಾರಾಷ್ಟ್ರದ ಸುಮಾರು 45 ಕೋಟಿ ಜನರ ಬದುಕು ಜೀವನದ ಮೇಲೆ ಅಪಾಯ ಎದುರಾಗುತ್ತದೆ.
ನೀರಿನ ಗೋಪುರಗಳು
ಪಶ್ಚಿಮ ಘಟ್ಟದ ಅರಣ್ಯಗಳನ್ನು ಭಾರತ ಉಪಖಂಡದ ನೀರಿನ ಗೋಪುರಗಳು ಎಂದೇ ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ವರ್ಷದಲ್ಲಿ ಸರಾಸರಿ 800ರಿಂದ 2,000 ಎಂ.ಎಂ. ಮಳೆಯಾಗುತ್ತದೆ. ಕೆಆರ್‌ಎಸ್ ಮತ್ತು ಇತರ ಕೆಲವು ಅಣೆಕಟ್ಟುಗಳಿಗೆ ಹರಿಯುವ ಶೇ.70 ನೀರು ಕೊಡಗು ಜಿಲ್ಲೆಯೊಂದರಲ್ಲಿ ಸುರಿಯುವ ಮಳೆಯಿಂದಲೇ ಸಿಗುತ್ತದೆ. ಈ ನೀರಿನಿಂದ ಬೆಂಗಳೂರು, ಮೈಸೂರು, ಹಾಸನ ಮತ್ತು ಮಂಡ್ಯ ಮುಂತಾದ ಪಟ್ಟಣಗಳಲ್ಲಿ ಜೀವನ ಮತ್ತು ಆರ್ಥಿಕತೆ ಮುಂದುವರಿಯುತ್ತದೆ.
ಈ ಪ್ರದೇಶದಲ್ಲಿರುವ ಅರಣ್ಯಗಳ ಅತಿಕ್ರಮಣ, ನಾಶ ಅಥವಾ ನಿರ್ಲಕ್ಷದಿಂದ ಕರ್ನಾಟಕದಲ್ಲಿ ಜನಜೀವನ ಮತ್ತು ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈಗಾಗಲೇ ಎಚ್ಚರಿಕೆ ಗಂಟೆ ಬಾರಿಸಿಯಾಗಿದೆ. ಡೌನ್ ಟು ಅರ್ತ್ ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ, ಕಾವೇರಿ ನದಿಯ ಮೂಲವಿರುವ ಮಡಿಕೇರಿ ತಾಲೂಕಿನಲ್ಲಿ ಈ ಶತಮಾನದ ಆರಂಭದಿಂದ ಪ್ರತೀ ವರ್ಷ 10ಎಂ.ಎಂ. ಮಳೆ ಕಡಿಮೆಯಾಗುತ್ತಾ ಬಂದಿದೆ. ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಹರಡಿರುವ ಪಶ್ಚಿಮ ಘಟ್ಟದ ಬಹುದೊಡ್ಡ ಭಾಗದಲ್ಲಿ ಕಳೆದ 18 ವರ್ಷಗಳಲ್ಲಿ 20,000 ಹೆಕ್ಟೇರ್ ಪ್ರದೇಶ ನಾಶವಾಗಿದೆ. ಇನ್ನೂ ಕೆಟ್ಟ ಸುದ್ದಿಯೆಂದರೆ ಸಾಂಪ್ರದಾಯಿಕ ವಿಧಗಳ ಮರಗಳ ಸ್ಥಾನವನ್ನು ವೇಗವಾಗಿ ಬೆಳೆಯುವ ಸಿಲ್ವರ್ ಓಕ್‌ನಂತಹ ಇತರ ಮರಗಳು ಪಡೆದುಕೊಳ್ಳುತ್ತಿವೆ. ಪಶ್ಚಿಮ ಘಟ್ಟದ ಮೇಲೆ ತೂಗುಗತ್ತಿಯಂತೆ ನೇತಾಡುತ್ತಿರುವ ಹುಬ್ಬಳ್ಳಿ-ಅಂಕೋಲಾ ರೈಲು ಸಂಪರ್ಕ ಪ್ರಸ್ತಾವನೆಯನ್ನು ಶೀಘ್ರವಾಗಿ ಮರುಪರಿಶೀಲಿಸುವ ಅಗತ್ಯವಿದೆ.


ವಿನಾಶಕ್ಕೆ ತಡೆ
ಈ ಅರಣ್ಯಗಳ ಸಂರಕ್ಷಣೆ ಪಶ್ಚಿಮ ಘಟ್ಟದ ಸರ್ವನಾಶವನ್ನು ತಡೆಯುವಲ್ಲಿ ರೂಪಿಸಲಾಗುವ ಯಾವುದೇ ದೀರ್ಘಕಾಲೀನ ಯೋಜನೆಯ ಆರಂಭಿಕ ಹಂತವಾಗಿರಬೇಕು. ಮರಗಳನ್ನು ನೆಡುವುದನ್ನು ಅರಣ್ಯೀಕರಣ ಎಂದು ತಿಳಿಯಬಾರದು ಮತ್ತು ಮರಗಳು ಅರಣ್ಯಗಳಿಗೆ ಪರ್ಯಾಯವಾಗಲಾರವು. ಅರಣ್ಯಗಳು ಮಳೆ ಹನಿ ಮಣ್ಣಿನ ಮೇಲೆ ಬೀಳುವಾಗ ಉಂಟಾಗುವ ಆಘಾತವನ್ನು ಕಡಿಮೆ ಮಾಡುತ್ತದೆ ಮತ್ತು ಆಮೂಲಕ ಮಣ್ಣಿನ ಸವಕಳಿಯನ್ನು ಕಡಿಮೆಗೊಳಿಸುತ್ತದೆ. ಮರದ ಕೆಳಗೆ ಬಿದ್ದಿರುವ ಎಲೆಗಳು ಮಳೆಯ ನೀರು ಹರಿಯದಂತೆ ತಡೆದು ಅದು ಭೂಮಿಗೆ ಇಂಗುವಂತೆ ಮಾಡುತ್ತದೆ. ಬೇರುಗಳು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ. ನೀರನ್ನು ಹಿಡಿದಿಡುವ ತರಗೆಲೆಗಳು ಕೊಳೆತು ಗೊಬ್ಬರವಾಗಿ ಮಣ್ಣಿಗೆ ಸತ್ವವನ್ನು ಪೂರೈಸುವ ಬ್ಯಾಂಕ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ಮರಗಳು, ಅದರ ಪೊಟರಗಳು ಮತ್ತು ಫಲಗಳು ಪ್ರಾಣಿ, ಪಕ್ಷಿ ಮತ್ತು ಕೀಟಗಳಿಗೆ ಉತ್ತಮ ನೆಲೆಯನ್ನು ಒದಗಿಸುತ್ತವೆ. ಈ ಅರಣ್ಯಗಳು ಇಂಗಾಳದ ಡೈ ಆಕ್ಸೈಡನ್ನು ಒಳಗೆಳೆದು ಆಮ್ಲಜನಕವನ್ನು ಬಿಡುಗಡೆಮಾಡುವ ಕಾರ್ಖಾನೆಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಒಟ್ಟಾರೆ ಹೇಳುವುದಾದರೆ ಅರಣ್ಯಗಳು ಮಳೆನೀರು ಹರಿವನ್ನು ಮತ್ತು ಮಣ್ಣಿನ ಸವಕಳಿಯನ್ನು ತಡೆಯುತ್ತವೆ.
 ನೂರು ಅಡಿ ಎತ್ತರದ ಮರವೊಂದು ತನ್ನ ಬೆಳವಣಿಗೆಯ ಅವಧಿಯಲ್ಲಿ ಸುಮಾರು ಎರಡು ಲಕ್ಷ ಎಲೆಗಳನ್ನು ಹೊಂದಿರುತ್ತದೆ ಮತ್ತು ಮಣ್ಣಿನಿಂದ 11,000 ಗ್ಯಾಲನ್ ನೀರನ್ನು ಎತ್ತಿ ಗಾಳಿಗೆ ಬಿಡುಗಡೆ ಮಾಡಿರುತ್ತದೆ ಹಾಗೂ ನಾಲ್ಕು ಜನರಿಗೆ ಸಂಪೂರ್ಣ ಒಂದು ದಿನಕ್ಕಾಗುವಷ್ಟು ಆಮ್ಲಜನಕವನ್ನು ಒದಗಿಸುತ್ತದೆ. ಈ ಮರಗಳು ಮಳೆ ನೀರನ್ನು ತಡೆಯುತ್ತವೆ ಮತ್ತು ಅವುಗಳನ್ನು ಭೂಮಿಯೊಳಗೆ ಹರಿಯುವಂತೆ ಮಾಡುವ ಮೂಲಕ ನದಿ ಮತ್ತು ತೊರೆಗಳಿಗೆ ವರ್ಷಪೂರ್ತಿ ನೀರನ್ನು ಪೂರೈಸುತ್ತವೆ.
40 ವರ್ಷ ಜೀವಿತಾವಧಿಯ ಒಂದು ಮರ ವರ್ಷಕ್ಕೆ 48 ಪೌಂಡ್‌ಗಳಷ್ಟು ಇಂಗಾಲವನ್ನು ಒಳಗೆಳೆದುಕೊಳ್ಳಬಹುದು ಮತ್ತು ಒಂದು ಟನ್‌ನಷ್ಟು ಇಂಗಾಲವನ್ನು ಹಿಡಿದಿಡಬಹುದು. ಜೌಗುಭೂಮಿ ಮತ್ತು ಅರಣ್ಯ ಪ್ರದೇಶಗಳ ಸಂರಕ್ಷಣೆಯಿಂದ ನೆರೆ ಸಮಸ್ಯೆಯೂ ಗಮನಾರ್ಹವಾಗಿ ಕಡಿಮೆಯಾಗಲಿದೆ.
ನಗರ ಪ್ರದೇಶಗಳಲ್ಲಿ ಮಳೆನೀರು ಕೊಯ್ಲು
ನಗರ ಪ್ರದೇಶಗಳು ಇನ್ನೂ ಮಳೆನೀರು ಕೊಯ್ಲಿಗೆ ಸೂಕ್ತ ಯೋಜನೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕಾಯುತ್ತಿದೆ. ಒಂದು ಚದರ ಅಡಿಯಲ್ಲಿ ಬೀಳುವ ಒಂದು ಎಂ.ಎಂ. ಮಳೆಯಿಂದ ಒಂದು ಲೀಟರ್ ನೀರು ಸಂಗ್ರಹಿಸಬಹುದಾಗಿದೆ. ಈ ಅಂಕಿಅಂಶದ ಪ್ರಕಾರ, ಬಿಬಿಎಂಪಿಯ 741 ಚ.ಅಡಿಯಲ್ಲಿ ಬೀಳುವ ವಾರ್ಷಿಕ ಸರಾಸರಿ 90ಎಂ.ಎಂ. ಮಳೆಯಿಂದ ಸಂಪೂರ್ಣ ಮುನ್ಸಿಪಲ್ ಪ್ರದೇಶದಲ್ಲಿ ಒಂದು ಮೀಟರ್ ಆಳದ ಸರೋವರವನ್ನು ತುಂಬಬಹುದಾಗಿದೆ.
ಬೆಂಗಳೂರಿನ ಜಲತಜ್ಞ, ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ನೀರಿನ ಗಾಂಧಿ ಎಂದೇ ಕರೆಯಲ್ಪಡುವ ಅಯ್ಯಪ್ಪ ಮಸಗಿಯವರ ಪ್ರಕಾರ, ಈ ಪ್ರಮಾಣದ ನೀರು ಬೆಂಗಳೂರು ನಗರ ಪ್ರದೇಶಕ್ಕೆ ಎರಡು ವರ್ಷಗಳ ಕಾಲ ಪೂರೈಸಲು ಸಾಕಾಗುತ್ತದೆ. ಆದರೆ ಬೀಳುವ ಎಲ್ಲ ಮಳೆನೀರನ್ನೂ ಹಿಡಿದಿಡುವುದು ಅಸಾಧ್ಯದ ಮಾತು. ಆದರೆ ಅದಕ್ಕೆ ಅವಕಾಶ ಬಹಳಷ್ಟಿದೆ. ಬಿಬಿಎಂಪಿ ಕೇವಲ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ, 800 ಸಾರ್ವಜನಿಕ ಉದ್ಯಾನವನಗಳು, ಪಾರ್ಕ್ ಗಳು ಮತ್ತು ಆಟದ ಸ್ಥಳಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿದರೆ ಉತ್ತಮ ಪ್ರಮಾಣದ ಮಳೆನೀರಿನ ಕೊಯ್ಲು ಮಾಡಬಹುದಾಗಿದೆ ಮತ್ತು ಇದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದಾಗಿದೆ. ಸದ್ಯ ಬೆಂಗಳೂರಿನ ಕೇವಲ ಮೂರನೇ ಒಂದು ಭಾಗದಲ್ಲಿ ಮಳೆನೀರು ಕೊಯ್ಲು ಮಾಡಲಾಗುತ್ತದೆ. ಹೊಸದಾಗಿ ರಚಿಸಲಾಗಿರುವ 110 ಗ್ರಾಮಗಳನ್ನು ಇನ್ನೂ ಈ ವ್ಯವಸ್ಥೆಯ ಅಡಿಗೆ ತರಲಾಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)