varthabharthi

ವೈವಿಧ್ಯ

ಪೆಹ್ಲೂ ಖಾನ್ ಪ್ರಕರಣ: ತನಿಖೆ ತಿರುಚಿದ್ದು ಯಾರು

ವಾರ್ತಾ ಭಾರತಿ : 19 Aug, 2019
ಅಮಾನ್ ಶರ್ಮಾ

ಮೂವರು ತನಿಖಾಧಿಕಾರಿಗಳು, ವೈದ್ಯರ ಎರಡು ತಂಡಗಳು ಮತ್ತು ಅವುಗಳ ವಿಭಿನ್ನ ವೈದ್ಯಕೀಯ ಅಭಿಪ್ರಾಯಗಳು, ಮೂಲಗಳು ಶಂಕಾಸ್ಪದವಾಗಿಯೇ ಉಳಿದುಕೊಂಡ ಎರಡು ವೀಡಿಯೊಗಳು ಮತ್ತು ಆರೋಪಿಗಳ ಎರಡು ಪಟ್ಟಿಗಳು..... ಈ ಕಲಸು ಮೇಲೋಗರವು ಸ್ವಘೋಷಿತ ಗೋರಕ್ಷಕರ ಗುಂಪು ದಾಳಿಯಿಂದ ಪೆಹ್ಲೂ ಖಾನ್ ಸಾವಿನ ಪ್ರಕರಣವನ್ನು ರಾಜಸ್ಥಾನ ಪೊಲೀಸರು ಹೇಗೆ ಕುಲಗೆಡಿಸಿದ್ದರು ಎನ್ನುವುದರ ಸುಳಿವು ನೀಡುತ್ತದೆ. ಅಂತಿಮವಾಗಿ ಪ್ರಕರಣವು ನ್ಯಾಯಾಲಯದಲ್ಲಿ ಬಿದ್ದುಹೋಗಿದ್ದು, ಎಲ್ಲ ಆರೂ ಆರೋಪಿಗಳು ಖುಲಾಸೆಗೊಂಡಿದ್ದಾರೆ.
ಆರೋಪಿಗಳನ್ನು ಬಿಡುಗಡೆಗೊಳಿಸಿರುವ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸುವುದಾಗಿ ಅಶೋಕ ಗೆಹ್ಲೋಟ್ ನೇತೃತ್ವದ ರಾಜ್ಯ ಸರಕಾರವು ಭರವಸೆ ನೀಡಿದೆ. 2017, ಎ.1ರಂದು ರಾಜಸ್ಥಾನದ ಆಲ್ವಾರ್‌ನಲ್ಲಿ ನಡೆದಿದ್ದ ಹರ್ಯಾಣದ ನುಹ್ ಜಿಲ್ಲೆಯ ಹೈನುಗಾರ ಖಾನ್ ಅವರ ಹತ್ಯೆಯ ಸಂಪೂರ್ಣ ತನಿಖೆ ಮತ್ತು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಕೆ ಹಿಂದಿನ ಬಿಜೆಪಿ ಸರಕಾರದ ಆಡಳಿತದಲ್ಲಿ ನಡೆದಿತ್ತು ಎಂದು ಬೆಟ್ಟು ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಸರಕಾರವನ್ನು ನಿರ್ಲಕ್ಷದ ಆರೋಪದಿಂದ ರಕ್ಷಿಸಲು ಪ್ರಯತ್ನಿಸಿದ್ದಾರೆ.
ಆದರೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಮತ್ತು ರಾಷ್ಟ್ರಾದ್ಯಂತ ಟಿವಿ ಪರದೆಗಳಲ್ಲಿ ಪ್ರಸಾರಗೊಂಡಿದ್ದ ಅತ್ಯಂತ ಸ್ಪಷ್ಟವಾಗಿದ್ದ ಈ ಪ್ರಕರಣ ನ್ಯಾಯಾಲಯದಲ್ಲಿ ವಿಫಲಗೊಂಡಿದ್ದು ಹೇಗೆ?
ಪ್ರತಿಯೊಬ್ಬರೂ ನಮ್ಮನ್ನು ನಿರಾಶಗೊಳಿಸಿದ್ದಾರೆ ಎನ್ನುವುದು ಖಾನ್ ಪುತ್ರ ಇರ್ಷಾದ್ ಅಳಲು.

ನ್ಯಾಯಾಲಯದ ತೀರ್ಪುನ್ನು ಜಾಲಾಡಿದಾಗ ಕಂಡು ಬಂದ ಪ್ರಮುಖ ಅಂಶಗಳು ಇಲ್ಲಿವೆ:
 ಮೂವರು ತನಿಖಾಧಿಕಾರಿಗಳು, ಆರೋಪಿಗಳ ಎರಡು ಪಟ್ಟಿ

 ಒಬ್ಬರ ಹಿಂದೊಬ್ಬರಂತೆ ಮೂವರು ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿದ್ದರು. ಮೊದಲು ತನಿಖೆ ನಡೆಸಿದ್ದು ಬೆಹ್ರೋರ್ ಠಾಣಾಧಿಕಾರಿ ರಮೇಶ ಸಿನ್ಸಿನ್ವಾರ್. ಅವರು ಎ.4ರಂದು ಖಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುವ ಮುನ್ನ ನಿರ್ಣಾಯಕವಾಗಿದ್ದ ಅವರ ಅಂತಿಮ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಅದರಲ್ಲಿ ಓಂ ಯಾದವ್, ಹುಕುಮ್‌ಚಂದ್ ಯಾದವ್, ನವೀನ್ ಶರ್ಮಾ, ಸುಧೀರ್ ಯಾದವ್, ರಾಹುಲ್ ಸೈನಿ ಮತ್ತು ಜಗಮಲ್ ಅವರು ಎ.1ರಂದು ಗೋ ಕಳ್ಳಸಾಗಣೆ ಶಂಕೆಯಿಂದ ತನ್ನನ್ನು ಥಳಿಸಿದ್ದರು ಎಂದು ಖಾನ್ ಹೆಸರಿಸಿದ್ದರು. ಆದರೆ ಅಗತ್ಯ ಔಪಚಾರಿಕತೆಗಳನ್ನು ನಿರ್ವಹಿಸುವಲ್ಲಿ ಸಿನ್ಸಿನ್ವಾರ್ ವಿಫಲಗೊಂಡಿದ್ದರು. ಖಾನ್ ಹೇಳಿಕೆ ನೀಡುವಷ್ಟು ಆರೋಗ್ಯದಿಂದಿದ್ದಾರೆ ಎಂದು ವೈದ್ಯರಿಂದ ಪ್ರಮಾಣಪತ್ರವನ್ನು ಅವರು ಪಡೆದುಕೊಂಡಿರಲಿಲ್ಲ, ಖಾನ್ ಹೇಳಿಕೆಯನ್ನು ಪ್ರಮಾಣೀಕರಿಸಿ ಡ್ಯೂಟಿ ಡಾಕ್ಟರ್ ಅಖಿಲ್ ಸಕ್ಸೇನಾ ಅಥವಾ ಇತರ ಯಾವುದೇ ವೈದ್ಯರ ಸಹಿಯನ್ನು ಅದರ ಮೇಲೆ ಪಡೆದಿರಲಿಲ್ಲ. 16 ಗಂಟೆಗಳ ಬಳಿಕ, ಮಾರನೇ ದಿನವಷ್ಟೇ ಸಿನ್ಸಿನ್ವಾರ್ ಅವರು ಖಾನ್ ಹೆಸರಿಸಿದ್ದ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅವರು ಆರೋಪಿಗಳನ್ನು ಬಂಧಿಸಿರಲಿಲ್ಲ ಅಥವಾ ಖಾನ್ ಕೊನೆಯುಸಿರೆಳೆಯುವ ಮುನ್ನ ಗುರುತು ಪತ್ತೆ ಹಚ್ಚಲು ಆರೋಪಿಗಳನ್ನು ಅವರ ಎದುರು ಪರೇಡ್ ಕೂಡ ಮಾಡಿಸಿರಲಿಲ್ಲ. ಈ ಎಲ್ಲ ಅಂಶಗಳು ಮೂಲದಲ್ಲೇ ಪ್ರಕರಣವನ್ನು ದುರ್ಬಲಗೊಳಿಸಿದ್ದವು. ಸಿನ್ಸಿನ್ವಾರ್ ಸಂಪೂರ್ಣ ನಿರ್ಲಕ್ಷ ಪ್ರದರ್ಶಿಸಿದ್ದರು ಎಂದು ನ್ಯಾಯಾಲಯವು ತೀರ್ಪಿನಲ್ಲಿ ಬೆಟ್ಟುಮಾಡಿದೆ.
 
ಸಿನ್ಸಿನ್ವಾರ್ ಮಾಡಿದ್ದ ಅಧ್ವಾನ ಇಲ್ಲಿಗೇ ಮುಗಿಯಲಿಲ್ಲ. ಅವರು ಮುಂದುವರಿದು ಖಾನ್ ತನ್ನ ಹೇಳಿಕೆಯಲ್ಲಿ ಹೆಸರಿಸಿರದಿದ್ದ ಕಾಳುರಾಮ್, ವಿಪಿನ್ ಯಾದವ್ ಮತ್ತು ರವೀಂದ್ರ ಕುಮಾರ್ ಎಂಬವರನ್ನು ಬಂಧಿಸುವ ಮೂಲಕ ಆರೋಪಿಗಳ ಎರಡನೇ ಸೆಟ್‌ಗೆಕಾರಣವಾಗಿದ್ದರು. ಖಾನ್ ಮೇಲಿನ ದಾಳಿಯಲ್ಲಿ ಈ ಮೂವರು ಭಾಗಿಯಾಗಿದ್ದನ್ನು ತೋರಿಸುವ ವೀಡಿಯೊವನ್ನು ಉಲ್ಲೇಖಿಸಿ ಅವರು ಈ ಬಂಧನಗಳನ್ನು ಮಾಡಿದ್ದರು.
ಎ.8ರಂದು ತನಿಖೆಯನ್ನು ಹಸ್ತಾಂತರಿಸಿಕೊಂಡಿದ್ದ ಎರಡನೇ ತನಿಖಾಧಿಕಾರಿಯಾದ ಬೆಹ್ರೋರ್‌ನ ಹೆಚ್ಚುವರಿ ಎಸ್ಪಿ ಪರ್ಮಾಲ್ ಸಿಂಗ್ ಅವರು ಸಿನ್ಸಿನ್ವಾರ್ ಬಂಧಿಸಿದ್ದ ಮೂವರು ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಲು ಬೇರೊಂದು ವೀಡಿಯೊವನ್ನು ಉಲ್ಲೇಖಿಸಿದ್ದರು.
 ಇಷ್ಟಾದ ಬಳಿಕ ಜುಲೈನಲ್ಲಿ ಪ್ರಕರಣವು ಕ್ರೈಂ ಬ್ರಾಂಚ್-ಕ್ರೈಂ ಇನ್ವೆಸ್ಟಿಗೇಷನ್ ವಿಭಾಗಕ್ಕೆ ವರ್ಗಾವಣೆಗೊಂಡಿತ್ತು ಮತ್ತು ಮೂರನೇ ತನಿಖಾಧಿಕಾರಿ ಹೆಚ್ಚುವರಿ ಎಸ್ಪಿ ಗೋವಿಂದ ದೇಥಾ ಅವರು ಎಫ್‌ಐಆರ್‌ನಲ್ಲಿ ಖಾನ್ ಹೆಸರಿಸಿದ್ದ ಆರೋಪಿಗಳ ತನಿಖೆ ನಡೆಸಿದ್ದರು ಮತ್ತು ಮೊಬೈಲ್ ಲೊಕೇಷನ್ ವಿವರಗಳ ಆಧಾರದಲ್ಲಿ ಈ ಆರೂ ಜನರು ಖಾನ್ ಮೇಲೆ ಹಲ್ಲೆ ನಡೆದಾಗ ಸ್ಥಳದಲ್ಲಿರಲಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ಅಸಲಿಗೆ ಖಾನ್ ಅವರ ಮರಣ ಹೇಳಿಕೆಯನ್ನೇ ಶಂಕಿಸಿದ್ದ ಅವರು ತನ್ನ ಮೇಲೆ ಹಲ್ಲೆ ನಡೆಸಿದವರು ಖಾನ್‌ಗೆ ಅಪರಿಚಿತರಾಗಿದ್ದರು, ಹೀಗಿರುವಾಗ ಅವರಿಗೆ ಆರೋಪಿಗಳ ಹೆಸರು ಗೊತ್ತಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದರು. ಹೀಗಾಗಿ ಖಾನ್ ಹೆಸರಿಸಿದ್ದ ಆರು ಜನರು ಪ್ರಕರಣದಿಂದ ಪಾರಾಗಿದ್ದರು ಮತ್ತು ಏಳು ಆರೋಪಿಗಳ ಇನ್ನೊಂದು ಸೆಟ್‌ನ ವಿರುದ್ಧ ಪ್ರಕರಣ ಉಳಿದುಕೊಂಡಿದ್ದು, ಎರಡು ವೀಡಿಯೊಗಳನ್ನು ಆಧರಿಸಿತ್ತು.
 ಎರಡೂ ವೀಡಿಯೊಗಳ ಬಗ್ಗೆ ಶಂಕೆ
ಮೂಲವೊಂದು ವೀಡಿಯೊವನ್ನು ನನಗೆ ನೀಡಿತ್ತು; ಅದನ್ನು ಬಳಸಿ ಠಾಣೆಗೆ ಸಮೀಪದಲ್ಲಿಯ ಫೋಟೊಗ್ರಾಫರ್‌ನಿಂದ ಫೋಟೊಗಳನ್ನು ಮಾಡಿಸಿದ್ದೆ; ಅದಕ್ಕೆ ನಾನು ಹಣ ಪಾವತಿಸಿದ್ದೆ, ಆದರೆ ಬಿಲ್ ಪಡೆದಿರಲಿಲ್ಲ; ಸದ್ರಿ ಫೋಟೊಗಳು ಅಥವಾ ವೀಡಿಯೊವನ್ನು ನಾನು ಸೀಲ್ ಮಾಡಿರಲಿಲ್ಲ; ಫೋಟೊಗಳು ಅಥವಾ ವೀಡಿಯೊವನ್ನು ವಿಧಿವಿಜ್ಞಾನ ಪ್ರಯೋಗಶಾಲೆಗೆ ಕಳುಹಿಸಿರಲಿಲ್ಲ; ಮತ್ತು ಈಗ ನನ್ನ ಬಳಿ ವೀಡಿಯೊ ಇಲ್ಲ-ಇವು ಪ್ರಕರಣದಲ್ಲಿಯ ಏಳು ಆರೋಪಿಗಳ ವಿರುದ್ಧ ಮುಖ್ಯ ಸಾಕ್ಷವಾಗಿದ್ದ ವೀಡಿಯೊದ ಕುರಿತು ಪ್ರತಿವಾದಿ ಪರ ವಕೀಲರ ಪಾಟೀಸವಾಲಿಗೆ ಸಿನ್ಸಿನ್ವಾರ್ ನೀಡಿದ್ದ ಉತ್ತರಗಳು. ವೀಡಿಯೊವನ್ನು ಚಿತ್ರೀಕರಿಸಲಾಗಿದ್ದ ಮೊಬೈಲ್‌ನ್ನು ತಾನು ವಶಪಡಿಸಿಕೊಂಡಿರಲಿಲ್ಲ ಎಂದು ತಿಳಿಸಿದ್ದ ಅವರು, ತನ್ನ ಮೂಲದಿಂದ ಈ ವೀಡಿಯೊವನ್ನು ಪಡೆದಿದ್ದ ದಿನಾಂಕವನ್ನೂ ನಿರ್ದಿಷ್ಟವಾಗಿ ತಿಳಿಸಿರಲಿಲ್ಲ. ಯಾವ ವಿದ್ಯುನ್ಮಾನ ಮಾಧ್ಯಮದಿಂದ ತನಗೆ ಈ ವೀಡಿಯೊ ಲಭಿಸಿತ್ತು ಎನ್ನುವುದನ್ನು ಮತ್ತು ಫೋಟೊಗಳನ್ನು ಸಿದ್ಧಪಡಿಸಿ ತನಗೆ ನೀಡಿದ್ದ ಫೊಟೋಗ್ರಾಫರ್ ಹೆಸರನ್ನೂ ಅವರು ಹೇಳಿರಲಿಲ್ಲ.
ಎರಡನೇ ತನಿಖಾಧಿಕಾರಿ ಪರ್ಮಾಲ್ ಸಿಂಗ್ ಕೊಂಚ ಹೆಚ್ಚು ನೇರವಾಗಿದ್ದರು. ಇದೇ ಆರೋಪಿಗಳು ಖಾನ್‌ರನ್ನು ಥಳಿಸುತ್ತಿರುವ ಇನ್ನೊಂದು ವೀಡಿಯೊ ತನ್ನ ಬಳಿಯಿತ್ತು. ಅದನ್ನು ರವೀಂದ್ರ ಎಂಬಾತ ಚಿತ್ರೀಕರಿಸಿದ್ದ ಮತ್ತು ಹೆಡ್ ಕಾನ್‌ಸ್ಟೇಬಲ್ ದಯಾರಾಮ್ ಉಪಸ್ಥಿತಿಯಲ್ಲಿ ವೀಡಿಯೊವನ್ನು ಮೊಬೈಲ್ ಫೋನ್ ಸಹಿತ ತನಗೆ ನೀಡಿದ್ದ. ಈ ವೀಡಿಯೊವನ್ನು ಬಳಸಿ ನವಲ್ ಕಿಶೋರ್ ಎಂಬ ಫೋಟೊಗ್ರಾಫರ್‌ನ ಮೂಲಕ ಫೋಟೊಗಳನ್ನು ಮಾಡಿಸಿಕೊಂಡಿದ್ದೆ ಎಂದು ಸಿಂಗ್ ಪಾಟೀಸವಾಲಿನಲ್ಲಿ ತಿಳಿಸಿದ್ದರು. ಆದರೆ ಅವರು ಹೆಸರಿಸಿದ್ದ ಈ ಮೂವರೂ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಪ್ರತಿಕೂಲ ಸಾಕ್ಷವನ್ನು ನುಡಿದಿದ್ದರು. ಹೀಗಾಗಿ ಎರಡೂ ವೀಡಿಯೊಗಳು ಶಂಕಾಸ್ಪದವಾಗಿವೆ ಎಂದು ನ್ಯಾಯಾಲಯವು ಬಣ್ಣಿಸಿತ್ತು.
 ವೆದ್ಯರ ಎರಡು ತಂಡಗಳು

ಪೊಲೀಸರು ವೈದ್ಯರ ಎರಡು ತಂಡಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದರು. ಎ.1ರಿಂದ 4ರವರೆಗೆ ಆಸ್ಪತ್ರೆಯಲ್ಲಿ ಖಾನ್‌ಗೆಚಿಕಿತ್ಸೆ ನೀಡಿದ್ದ ವೈದ್ಯರ ತಂಡವು ಖಾನ್ ಹೃದ್ರೋಗಿಯಾಗಿದ್ದರು ಮತ್ತು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ, ಹಲ್ಲೆಯಿಂದಾಗಿದ್ದ ಗಾಯಗಳಿಂದಲ್ಲ ಎಂದು ಹೇಳುವ ಮೂಲಕ ಪೊಲೀಸರ ಅಷ್ಟೂ ಹೇಳಿಕೆಗಳನ್ನು ಸಂಶಯದ ಸುಳಿಗೆ ಸಿಲುಕಿಸಿತ್ತು. ತಂಡದ ಮುಖ್ಯಸ್ಥ ಡಾ.ವಿ.ಡಿ. ಶರ್ಮಾ ಅವರು, ಖಾನ್ ಉತ್ಸಾಹದಿಂದಲೇ ಇದ್ದರು. ಎ.3ರಂದು ಹಾಸಿಗೆಯಲ್ಲಿ ಕುಳಿತಿದ್ದ ಅವರು ತನ್ನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಬಹುದೇ ಎಂದು ಪ್ರಶ್ನಿಸಿದ್ದರು ಎಂದು ಸಾಕ್ಷ ಹೇಳಿದ್ದರು. ಖಾನ್‌ಗೆ ಆಗಿದ್ದ ಗಾಯಗಳು ಗಂಭೀರ ಸ್ವರೂಪದ್ದಾಗಿರಲಿಲ್ಲ, ಹೀಗಾಗಿ ಅವರಿಗೆ ಕೃತಕ ಉಸಿರಾಟ ಯಂತ್ರವನ್ನು ಅಳವಡಿಸಿರಲಿಲ್ಲ ಮತ್ತು ದಿಢೀರ್ ಹೃದಯಾಘಾತ ಸಂಭವಿಸುವುದಕ್ಕೆ ಮುನ್ನ ಅವರು ದ್ರವಾಹಾರ ಸೇವಿಸುತ್ತಿದ್ದರು ಎಂದು ಈ ವೈದ್ಯರ ತಂಡವು ನ್ಯಾಯಾಲಯಕ್ಕೆ ತಿಳಿಸಿತ್ತು.
ಖಾನ್ ತನಗೆ ಆಗಿದ್ದ ಗಾಯಗಳಿಂದ ಅತಿಯಾದ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ್ದ ಇನ್ನೊಂದು ವೈದ್ಯರ ತಂಡವು ನ್ಯಾಯಾಲಯದಲ್ಲಿ ತಿಳಿಸಿತ್ತು. ಈ ತಂಡದ ಹೇಳಿಕೆಯನ್ನು ನ್ಯಾಯಾಲಯವು ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದು, ಅವರ ಹೇಳಿಕೆಯು ವಿಶ್ವಾಸಯೋಗ್ಯವಾಗಿದೆ ಎಂದು ಬಣ್ಣಿಸಿತ್ತು.
ಹೀಗಾಗಿ 2017, ಎ.1ರಂದು ನಡೆದಿದ್ದ ಹಲ್ಲೆಯಿಂದ ಉಂಟಾಗಿದ್ದ ತೀವ್ರ ಗಾಯಗಳಿಂದಾಗಿ ಖಾನ್ ಮೃತಪಟ್ಟಿದ್ದಾರೆ ಎಂದು ನ್ಯಾಯಾಲಯವು ಅಂತಿಮವಾಗಿ ನಿರ್ಧರಿಸಿತ್ತಾದರೂ ಯಾವುದೇ ದಾಳಿಕೋರನ ವಿರುದ್ಧ ತಮ್ಮ ಪ್ರಕರಣವನ್ನು ರುಜುವಾತುಗೊಳಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ತೀರ್ಪಿನಲ್ಲಿ ಹೇಳಿದೆ. ಈಗ ಉಳಿದಿರುವ ಪ್ರಶ್ನೆ: ಹಾಗಾದರೆ ಪೆಹ್ಲೂ ಖಾನ್‌ರನ್ನು ಕೊಂದವರು ಯಾರು...?
ಕೃಪೆ: economictimes.indiatimes.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)