varthabharthi

ನಿಮ್ಮ ಅಂಕಣ

ಸರಕಾರ ಮೊದಲು ಈ ಮಸೂದೆಗಳನ್ನು ರೂಪಿಸಲಿ

ವಾರ್ತಾ ಭಾರತಿ : 19 Aug, 2019
-ಕೆ. ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ಕೇಂದ್ರದ ಎನ್‌ಡಿಎ ಸರಕಾರ ಬಹಳಷ್ಟು ಮಸೂದೆಗಳನ್ನು ಮಂಡಿಸುತ್ತಾ ಬಂದಿರುತ್ತದೆ. ಈಗಾಗಲೇ ಮಂಡನೆಯಾಗಿ ಅನುಮೋದನೆಯಾಗಿರುವ ಮಸೂದೆಗಳ ಜೊತೆಯಲ್ಲಿ ಮುಂದಿನ ದಿನಗಳಲ್ಲಿ ಜನರ ಜೀವನ ನಿರ್ವಹಣೆಗೆ ಜನರ ಬದುಕಿಗಾಗಿ ಮತ್ತಷ್ಟು ಮಸೂದೆಗಳ ಅವಶ್ಯಕತೆ ಇದೆ. ಮತಾಂತರ ನಿಗ್ರಹಿಸುವ ಕಾಯ್ದೆಯನ್ನು ತರುವ ಮಾತನಾಡುತ್ತಿರುವ ಬಿಜೆಪಿಯ ನಾಯಕರು, ಮೊದಲು ಈ ದೇಶದಲ್ಲಿ ಅಸ್ಪಶ್ಯತೆಯನ್ನು ಬೆಂಬಲಿಸುತ್ತಾ, ಈ ನಿಟ್ಟಿನಲ್ಲಿ ಮರ್ಯಾದೆ ಹತ್ಯೆ ಸೇರಿದಂತೆ ಅನೇಕ ರೀತಿಯ ದಬ್ಬಾಳಿಕೆಗಳನ್ನು ದಲಿತರ ಮೇಲೆ ಮೇಲ್ವರ್ಗದ ಸಮಾಜ ನಡೆಸುತ್ತಿರುವ ಅಸ್ಪಶ್ಯತೆಯನ್ನು ಬೆಂಬಲಿಸುವ ಅಥವಾ ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುತ್ತಿರುವ ಜನರಿಗೆ ಕಠಿಣ ಶಿಕ್ಷೆ ನೀಡುವಂತಹ ಮಸೂದೆಯೊಂದನ್ನು ಮೊದಲು ಮಂಡನೆ ಮಾಡಬೇಕಾಗಿದೆ. ಇದೇ ರೀತಿಯಲ್ಲಿ ಸ್ಥಳೀಯರಿಗೆ ಉದ್ಯೋಗ ಎನ್ನುವ ಮಾತು ದೇಶದ ಎಲ್ಲ ರಾಜ್ಯಗಳಲ್ಲಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಸಿ ಮತ್ತು ಡಿ ದರ್ಜೆಯ ಎಲ್ಲ ಹುದ್ದೆಗಳನ್ನು ಆಯಾ ರಾಜ್ಯದವರಿಗೆ ನೀಡುವ ಮಸೂದೆಯೊಂದನ್ನು ಮಂಡಿಸಬೇಕಾಗಿದೆ. ಸುಪ್ರೀಂ ಕೋರ್ಟ್ ಪ್ರಾದೇಶಿಕ ಭಾಷೆಯ ವಿಚಾರದಲ್ಲಿ ನೀಡಿರುವ ತೀರ್ಪಿನಿಂದ ಅನೇಕ ಪ್ರಾದೇಶಿಕ ಭಾಷೆಗಳು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಈ ಹಿನ್ನೆಲೆಯಲ್ಲಿ ಆಯಾ ರಾಜ್ಯದ ಪ್ರಾದೇಶಿಕ ಭಾಷೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದವರಿಗೆ ಮಾತ್ರ ಸರಕಾರೀ ಉದ್ಯೋಗ ಮತ್ತು ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಬೇಕು ಎನ್ನುವ ಮತ್ತೊಂದು ಮಸೂದೆಯನ್ನು ತುರ್ತಾಗಿ ಮಂಡಿಸಬೇಕಾಗಿದೆ. ಕೇಂದ್ರ ಸರಕಾರ ಧರ್ಮ ಮತ್ತು ಇತರ ಭಾವನಾತ್ಮಕ ವಿಚಾರದ ಹಿನ್ನೆಲೆಯಲ್ಲಿ ಮಸೂದೆಗಳನ್ನು ಮಂಡಿಸಲು ಆಸಕ್ತಿ ಹೊಂದಿರುವ ರೀತಿಯಲ್ಲಿಯೇ ಜನರ ಬದುಕಿಗೆ ಪೂರಕವಾಗುವ ಮಸೂದೆಗಳನ್ನೂ ಸಹ ಮಂಡಿಸಿ ಹಸಿವಿನ ಪ್ರಶ್ನೆಗೆ ಪರಿಹಾರ ನೀಡಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)