varthabharthi

ಸಂಪಾದಕೀಯ

ಹಿಂದಿ ಹೇರಿಕೆಯ ದುಷ್ಪರಿಣಾಮ

ವಾರ್ತಾ ಭಾರತಿ : 20 Aug, 2019

 ಭಾರತ ಎಂಬುದು ಬಹು ಧರ್ಮಗಳ, ವಿಭಿನ್ನ ಭಾಷೆ, ಸಂಸ್ಕೃತಿಗಳ ವಿಧ,ವಿಧದ ಆಹಾರ ಪದ್ಧತಿಗಳ ದೇಶ. ಅಂತಲೇ ನಮ್ಮ ಸಂವಿಧಾನದಲ್ಲಿ ಇದಕ್ಕೆ ದೇಶ ಎನ್ನುವ ಬದಲಾಗಿ ರಾಜ್ಯಗಳ ಒಕ್ಕೂಟ ಎಂದು ವ್ಯಾಖ್ಯಾನಿಸಲಾಗಿದೆ. ಜಗತ್ತಿನಲ್ಲಿ ಇಂತಹ ವೈವಿಧ್ಯಮಯ ನಾಡು ಇನ್ನೊಂದಿಲ್ಲ. ಅನೇಕತೆಯಲ್ಲಿ ಏಕತೆ ಈ ಮಣ್ಣಿನ ಗುಣ.ಇಂತಹ ಬಹುಮುಖಿ ಭಾರತವನ್ನು ಏಕಮುಖಿಯಾಗಿಸುವ ಹಾಗೂ ಏಕ ಧರ್ಮ, ಏಕ ಭಾಷೆ, ಏಕ ಪಕ್ಷ, ಏಕ ನಾಯಕ, ಏಕ ಆಹಾರ ಪದ್ಧತಿಯನ್ನು ಹೇರುವ ಹುನ್ನಾರಗಳು ಇತ್ತೀಚೆಗೆ ತೀವ್ರವಾಗಿ ನಡೆಯುತ್ತಿವೆ. ಹೀಗೆ ಬಲವಂತವಾಗಿ ಹೇರುತ್ತಾ ಹೋದರೆ ಪ್ರತ್ಯೇಕತೆ ಸಿಡಿದೇಳುತ್ತದೆ ಎಂಬುದಕ್ಕೆ ದಕ್ಷಿಣ ಭಾರತದಲ್ಲಿ ಈಗ ತೀವ್ರವಾಗುತ್ತಿರುವ ಹಿಂದಿ ಹೇರಿಕೆ ವಿರೋಧಿ ಚಳವಳಿ ಉದಾಹರಣೆಯಾಗಿದೆ.

ಬಲವಂತದ ಹಿಂದಿ ಹೇರಿಕೆಗೆ ಜನರ ಪ್ರತಿರೋಧ ಹೇಗೆ ವ್ಯಕ್ತವಾಗುತ್ತದೆ ಅಂದರೆ ರಾಜಧಾನಿ ಬೆಂಗಳೂರಿನಲ್ಲಿ ಹಿಂದಿ ಭಾಷೆಯ ಬ್ಯಾನರ್‌ವೊಂದನ್ನು ತೆರವುಗೊಳಿಸಲು ಕನ್ನಡ ರಣಧೀರ ಪಡೆಯ ಕಾರ್ಯಕರ್ತರು ಮುಂದಾಗಿ ಅದನ್ನು ಕಿತ್ತು ಹಾಕಿದರು. ಪೊಲೀಸರು ಅವರನ್ನು ಬಂಧಿಸಿದರು. ಈ ಹಿಂದಿ ಬ್ಯಾನರನ್ನು ಮಾರವಾಡಿ ವ್ಯಾಪಾರಿಗೆ ಸೇರಿದ ಕಟ್ಟಡದ ಪ್ರವೇಶ ದ್ವಾರದಲ್ಲಿ ಹಾಕಲಾಗಿತ್ತು. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಬೆಂಗಳೂರಿನ(ದಕ್ಷಿಣ) ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸುಮ್ಮನಿರದೆ ಟ್ವೀಟ್ ಮಾಡಿ ಕನ್ನಡ ಪರ ಚಳವಳಿಗಾರರನ್ನು ರೌಡಿಗಳೆಂದು ಕರೆದರು. ಅಷ್ಟೇ ಅಲ್ಲದೆ ‘‘ಬೆಂಗಳೂರಿನಲ್ಲಿ ಅರಬಿ ಭಾಷೆ ಬಳಸಿದರೆ ಕೇಳುವವರಿಲ್ಲ ಹಿಂದಿಗೆ ವಿರೋಧ ಮಾಡುತ್ತಾರೆ. ಜೈನ ಬಂಧುಗಳ ಮೇಲೆ ದಾಳಿ ಮಾಡುತ್ತಾರೆ’’ ಎಂದು ಹೇಳಿದರು. ಒಂದು ಸಣ್ಣ ಮರೆತು ಹೋಗಬಹುದಾಗಿದ್ದ ಘಟನೆಗೆ ಕೋಮು ಬಣ್ಣ ಬಳಿಯಲು ಯತ್ನಿಸಿದ ಬಿಜೆಪಿ ಸಂಸದನ ಯತ್ನದ ಬಗ್ಗೆ ಹಾಗೂ ಕನ್ನಡ ಕಾರ್ಯಕರ್ತರ ಬಂಧನದ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕದ ಜೈನ ಸಮುದಾಯದ ಪ್ರಮುಖರು ಅನಗತ್ಯವಾಗಿ ತಮ್ಮ ಸಮಾಜದ ಹೆಸರು ಬಳಸಿಕೊಂಡ ಬಗ್ಗೆ ತೇಜಸ್ವಿ ಸೂರ್ಯ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾರವಾಡಿ ಜೈನರಿಗೂ ತಮಗೂ ಸಂಬಂಧವಿಲ್ಲ. ನಾವು ಇದೇ ನೆಲದಲ್ಲಿ ಹುಟ್ಟಿ ಬೆಳೆದವರು. ಕನ್ನಡ ಸಾಹಿತ್ಯ ಸಂಸ್ಕೃತಿಗೆ ಜೈನರ ಕೊಡುಗೆ ಅಪಾರವಾಗಿದೆ ಎಂದು ಹೇಳಿದ್ದಾರೆ.

ಬಲವಂತದ ಹಿಂದಿ ಹೇರಿಕೆಯ ವಿರುದ್ಧ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಇತ್ತೀಚೆಗೆ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಸ್ಥಳೀಯರ ಉದ್ಯೋಗಾವಕಾಶಗಳನ್ನು ವಲಸೆ ಬಂದವರು ಕಬಳಿಸುತ್ತಿದ್ದಾರೆ ಎಂಬ ಭಾವನೆ ತೀವ್ರವಾಗಿ ಬೆಳೆಯುತ್ತಿದೆ. ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಸರೋಜಿನಿ ಮಹಿಷಿ ಸಮಿತಿ ವರದಿಯನ್ನು ಜಾರಿಗೆ ತರಲು ನಮ್ಮ ಸರಕಾರಗಳು ರಾಜಕೀಯ ಇಚ್ಛಾಶಕ್ತಿ ತೋರಿಸುತ್ತಿಲ್ಲ. ಹೀಗಾಗಿ ಅಸಮಾಧಾನ ಹೆಚ್ಚುತ್ತಿದೆ. ಅಷ್ಟೇ ಅಲ್ಲ ಮಹಿಷಿ ವರದಿಯನ್ನು ತಿರುಚುವ ಯತ್ನ ನಡೆದಿದೆ. ಹದಿನೈದು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದವರು ಕನ್ನಡಿಗರು ಎಂಬ ನಿಯಮ ಬದಲಿಸಿ ಏಳು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದವರು ಕನ್ನಡಿಗರು ಎಂದು ಮಾರ್ಪಾಡು ಮಾಡುವ ಕುತಂತ್ರ ನಡೆದಿದೆ. ಇದು ಅಸಮಾಧಾನ ಹೆಚ್ಚಲು ಕಾರಣವಾಗಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಭಾರತದ ರಾಜ್ಯಗಳಿಗೆ ಅವುಗಳದೇ ಆದ ಸ್ವಾಯತ್ತೆ, ಭಾಷೆ, ಸಂಸ್ಕೃತಿ, ಆಹಾರ ಪದ್ಧತಿಗಳಿವೆ. ಸಂವಿಧಾನದ ಪ್ರಕಾರ ದೇಶದ ಪ್ರಜೆಗಳು ಯಾವ ರಾಜ್ಯದಲ್ಲಿ ಬೇಕಾದರೂ ವಲಸೆ ಹೋಗಿ ಉದ್ಯೋಗ ಮಾಡಬಹುದು.ಆದರೆ ಈ ಪ್ರಕ್ರಿಯೆಯಲ್ಲಿ ಅಲಿಖಿತ ಸಮತೋಲನ ಇರಬೇಕಾಗುತ್ತದೆ. ಯಾವುದೇ ರಾಜ್ಯದಿಂದ ಎಷ್ಟು ಜನರು ಹೊರ ರಾಜ್ಯಗಳಿಗೆ ವಲಸೆ ಹೋಗುತ್ತಾರೊ ಅಷ್ಟೇ ಪ್ರಮಾಣದಲ್ಲಿ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೊರ ರಾಜ್ಯದಿಂದ ಆ ರಾಜ್ಯಕ್ಕೆ ವಲಸೆ ಬಂದರೆ ಸಮತೋಲನ ಸಮರ್ಪಕವಾಗಿರುತ್ತದೆ. ಆದರೆ ಕರ್ನಾಟಕದ ವಿಷಯದಲ್ಲಿ ಇದು ಸಮರ್ಪಕವಾಗಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಶೇ. 50ಕ್ಕಿಂತ ಹೆಚ್ಚು ವಲಸಿಗರೇ ಇದ್ದಾರೆಂದು ಇತ್ತೀಚಿನ ಜನಗಣತಿಯ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಹೀಗಾಗಿ ಕನ್ನಡಿಗರು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂಬ ಭಾವನೆ ಬೆಳೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಹಿಂದಿ ಹೇರಿಕೆ ಯತ್ನ ಪ್ರತ್ಯೇಕತೆಯ ಭಾವನೆ ಬೆಳೆಯಲು ಅವಕಾಶ ಮಾಡಿಕೊಡುತ್ತದೆ.

ರಾಜ್ಯದಲ್ಲಿನ ಕೇಂದ್ರ ಸರಕಾರದ ಕಚೇರಿಗಳಿಗೆ, ಅದರಲ್ಲೂ ವಿಶೇಷವಾಗಿ ಬ್ಯಾಂಕುಗಳಿಗೆ ಇತ್ತೀಚೆಗೆ ಉತ್ತರ ಭಾರತದ ರಾಜ್ಯಗಳ ನೌಕರರನ್ನು ವರ್ಗಾವಣೆ ಮಾಡುತ್ತಿರುವುದರಿಂದ ಸ್ಥಳೀಯ ಗ್ರಾಹಕರಿಗೆ ತುಂಬಾ ತೊಂದರೆಯಾಗಿದೆ. ಕನ್ನಡ ಭಾಷೆ ಮಾತಾಡಲು ಮಾತ್ರ ಬರುವ ಗ್ರಾಹಕರು ಬ್ಯಾಂಕ್ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ. ಇದು ಸರಿಯಲ್ಲ. ರೈಲ್ವೆ ಇಲಾಖೆಯಲ್ಲಿ ಅನಗತ್ಯವಾಗಿ ಹಿಂದಿ ಹೇರಿಕೆ ನಾನಾ ಅವಾಂತರಗಳಿಗೆ ಕಾರಣವಾಗುತ್ತಿದೆ. ಹೀಗಾಗದಂತೆ ಸರಕಾರ ನೋಡಿಕೊಳ್ಳಬೇಕು. ಆಸಕ್ತಿ ಇದ್ದವರು ಒಂದು ಭಾಷೆಯಾಗಿ ಹಿಂದಿ ಕಲಿಯಲು ಅಭ್ಯಂತರವಿಲ್ಲ. ಆದರೆ ಅದನ್ನು ರಾಷ್ಟ್ರ ಭಾಷೆ ಎಂದು ಕರೆದು ಬಲವಂತವಾಗಿ ಹೇರುವುದು ಸರಿಯಲ್ಲ.

ಭಾರತ ಎಂಬುದು ವಿಭಿನ್ನ ಅಸ್ಮಿತೆಗಳ ಸಂಗಮ. ಇಲ್ಲಿನ ಭಾಷೆಗಳು ಕೂಡ ವಿಭಿನ್ನವಾಗಿವೆ. ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ಈ ಒಕ್ಕೂಟದಲ್ಲಿರುವ ಎಲ್ಲ 22 ಭಾಷೆಗಳೂ ರಾಷ್ಟ್ರೀಯ ಭಾಷೆಗಳು. ಹಿಂದಿ ಎಂಬುದು ನಾಲ್ಕಾರು ರಾಜ್ಯಗಳ ಜನ ಮಾತಾಡುವ ಭಾಷೆ. ಅಲ್ಲೂ ಸ್ಥಳೀಯ ಭಾಷೆಗಳಿವೆ. ಅದನ್ನು ರಾಷ್ಟ್ರ ಭಾಷೆ ಎಂದು ದಕ್ಷಿಣದ ರಾಜ್ಯಗಳ ಮೇಲೆ ಬಲವಂತವಾಗಿ ಹೇರುವುದು ಸರಿಯಲ್ಲ. ಇದು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ.

ಹಿಂದೆ ನೆಹರೂ ಕಾಲದಲ್ಲಿ ಹಿಂದಿಯನ್ನು ಬಲವಂತವಾಗಿ ಹೇರಲು ಹೊರಟಾಗ ತಮಿಳುನಾಡಿನಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಅದು ಪ್ರತ್ಯೇಕತೆ ರೂಪ ತಾಳಿತ್ತು. ಆಗ ನೆಹರೂ ಇದನ್ನು ಕೈ ಬಿಟ್ಟರು. ಈಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಮತ್ತೆ ಹಿಂದಿ ಹೇರುವ ಮಸಲತ್ತು ನಡೆದಿದೆ. ಇದು ಸರಿಯಲ್ಲ. ಇದು ಬಹುಮುಖಿ ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ ಎಂಬುದರ ಎಚ್ಚರ ಅಧಿಕಾರದಲ್ಲಿ ಇರುವವರಿಗೆ ಇರಬೇಕಾಗುತ್ತದೆ.
ಹೀಗೆ ಮನಬಂದಂತೆ ಹಿಂದಿ ಹೇರುತ್ತಾ ಹೊರಟರೆ ಸಮಾಜದಲ್ಲಿ ಕ್ಷೋಭೆ, ಅಶಾಂತಿ ಉಂಟಾಗುತ್ತದೆ. ಹಾಗಾಗದಂತೆ ಸರಕಾರ ನೋಡಿಕೊಳ್ಳಬೇಕು.

ಬೆಂಗಳೂರಿನಲ್ಲಿ ರವಿವಾರ ನಡೆದ ಘಟನೆ ಪುನರಾವರ್ತನೆ ಆಗಬಾರದು. ಯಾವುದೇ ಅಂಗಡಿ ಮಳಿಗೆಗಳ ಮೇಲೆ ಕನ್ನಡ ಬೋರ್ಡು, ಬ್ಯಾನರ್‌ಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)