varthabharthi

ವಿಶೇಷ-ವರದಿಗಳು

ನೀವು ಸೆಲ್ಫಿ ಪ್ರಿಯರೇ?..ಹಾಗಿದ್ದರೆ ಈ ಮಾನಸಿಕ ಅಪಾಯದ ಬಗ್ಗೆ ತಿಳಿದುಕೊಳ್ಳಿ…

ವಾರ್ತಾ ಭಾರತಿ : 20 Aug, 2019

ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ಹುಚ್ಚು ಹೆಚ್ಚುತ್ತಿರುವುದರೊಂದಿಗೆ ಇಡೀ ವಿಶ್ವವೇ ಸೆಲ್ಫಿಯ ವ್ಯಾಮೋಹಕ್ಕೆ ಸಿಲುಕಿದೆ. ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನಗಳಿರುವ ಮೊಬೈಲ್ ಫೋನ್‌ಗಳು ಇಂದು ಹೆಚ್ಚಿನವರ ಕೈಗಳಲ್ಲಿ ರಾರಾಜಿಸುತ್ತಿದ್ದು,ಪ್ರತಿಯೊಬ್ಬರೂ ಫೋಟೊಗ್ರಾಫರ್‌ಗಳಾಗುತ್ತಿದ್ದಾರೆ. ಕುಳಿತರೂ ಫೋಟೊ ಕ್ಲಿಕ್ಕಿಸುತ್ತಾರೆ,ನಿಂತರೂ ಫೋಟೊ ಕ್ಲಿಕ್ಕಿಸುತ್ತಾರೆ.

  ಸೆಲ್ಫಿ ಸಂಸ್ಕೃತಿ ಅತಿ ಹೆಚ್ಚಾಗಿ ದಾಂಗುಡಿಯಿಟ್ಟಿರುವುದು ಯುವಪೀಳಿಗೆಯ ಮೇಲೆ. ಸೆಲ್ಫಿ ಕ್ಲಿಕ್ಕಿಸುವ ಹುಚ್ಚಾಟದಲ್ಲಿ ಈಗಾಗಲೇ ಹಲವಾರು ಜನರು ಪ್ರಾಣಗಳನ್ನೂ ಕಳೆದುಕೊಂಡಿದ್ದಾರೆ. ರಚನಾತ್ಮಕತೆ ಮತ್ತು ತಮ್ಮ ಸುತ್ತಲಿನ ಸಂತಸಗಳತ್ತ ನೋಡುವ ಬದಲು ಯುವಜನರು ಚಿತ್ರ ತೆಗೆಯುವುದು ಮತ್ತು ಅದಕ್ಕೊಂದು ಅಡಿಬರಹ ನೀಡುವುದಕ್ಕೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಮತ್ತು ಇದು ಸೆಲ್ಫಿ ಗೀಳಿಗೆ ಕಾರಣವಾಗುತ್ತಿದೆ. ಇದೊಂದು ಸಾಮಾನ್ಯ ಸಮಸ್ಯೆ ಎಂದು ನಾವು ಭಾವಿಸಿದ್ದೇವೆ. ಆದರೆ ಅದು ಕೇವಲ ಸಮಸ್ಯೆಯಲ್ಲ,ಏಕೆಂದರೆ ಅದು ಗೀಳಿನ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಯಾವುದೇ ಆದರೂ ಚಟವಾದರೆ ಅದು ಹಾನಿಕಾರಕವಾಗುತ್ತದೆ.

► ಸೆಲ್ಫಿ ಗೀಳು ಏನನ್ನು ಸೂಚಿಸುತ್ತದೆ?

 ಜನರಿಂದು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವುದರಲ್ಲಿ ಮಹದಾನಂದವನ್ನು ಕಾಣುತ್ತಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂನಿಂದ ಹಿಡಿದು ಕಿರಿಕಿರಿಯ ಸ್ನಾಪ್‌ಚಾಟ್‌ ವರೆಗೆ ಹಲವಾರು ಸಾಮಾಜಿಕ ಮಾಧ್ಯಮಗಳು ನಮಗಾಗಿಯೇ ಇವೆ. ಸೆಲ್ಫಿಯ ಸೌಂದರ್ಯವನ್ನು ಹೆಚ್ಚಿಸಲು ಹಲವಾರು ಫಿಲ್ಟರ್‌ಗಳು ಬಳಕೆಯಾಗುತ್ತಿವೆ. ಹೀಗಾಗಿ ಲೈಕ್ ಕಮೆಂಟ್‌ಗಳ ಮಹಾಪೂರ ಮತ್ತು ಫಾಲೋವರ್‌ಗಳ ಸಂಖ್ಯೆಯಲ್ಲಿ ಏರಿಕೆ ಇದಿಷ್ಟು ಬಿಟ್ಟರೆ ಯುವಜನರಿಗೆ ಇನ್ನೇನು ಬೇಕು?!

ದಿನಕ್ಕೆ ನಾಲ್ಕಕ್ಕಿಂತ ಹೆಚ್ಚು ಸೆಲ್ಫಿಗಳನ್ನು ಕ್ಲಿಕ್ಕಿಸುವುದನ್ನು ಸೆಲ್ಫಿ ಗೀಳು ಎಂದು ಬಣ್ಣಿಸಲಾಗಿದೆ. ಯುವಜನರು ತಮ್ಮ ಸೆಲ್ಫಿ ಇಂಟರ್‌ನೆಟ್‌ನಲ್ಲಿ ಭಾರೀ ಸಂಚಲನವನ್ನು ಮೂಡಿಸುತ್ತದೆ ಎಂಬ ಭ್ರಮೆಯಲ್ಲಿರುತ್ತಾರೆ ಮತ್ತು ಪ್ರತಿದಿನ ಸೆಲ್ಫಿಗಳನ್ನು ಕ್ಲಿಕ್ಕಿಸುತ್ತಲೇ ಇರುತ್ತಾರೆ ಮತ್ತು ಅದನ್ನು ಆಕರ್ಷಕವನ್ನಾಗಿಸಲು ಹಲವಾರು ಫಿಲ್ಟರ್‌ಗಳನ್ನು ಬಳಸುತ್ತಿರುತ್ತಾರೆ. ಹೆಚ್ಚಿನ ಪ್ರಶಂಸೆಗಾಗಿ ಈ ಪ್ರಯತ್ನಗಳು ಮಾನಸಿಕ ರೋಗವನ್ನು ಆಹ್ವಾನಿಸುತ್ತವೆ.

 ಅಪರೂಪಕ್ಕೆ ಅಥವಾ ದಿನಕ್ಕೊಮ್ಮೆ ಸೆಲ್ಫಿ ಕ್ಲಿಕ್ಕಿಸುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ,ಆದರೆ ಸೆಲ್ಫಿ ಕ್ಯಾಮೆರಾವನ್ನು ಪದೇ ಪದೇ ಬಳಸುವುದು ಸಮಸ್ಯೆಯನ್ನು ಸೃಷ್ಟಿಸುತ್ತದೆ. ಅತಿಯಾದರೆ ಯಾವುದೂ ಕೆಟ್ಟದ್ದೇ.

ಮದ್ಯಪಾನ,ಕೂಳುಬಾಕತನದಂತಹ ಇತರ ಯಾವುದೇ ಚಟಗಳಂತೆ ಸೆಲ್ಫಿ ಗೀಳು ಕೂಡ ಮಾನಸಿಕ ಕಾಯಿಲೆಯಾಗಿದೆ ಎಂದು ಇತ್ತೀಚಿನ ಅಧ್ಯಯನವೊಂದು ಬೆಟ್ಟು ಮಾಡಿದೆ.

► ಅಧ್ಯಯನದ ಕುರಿತು ಒಂದಿಷ್ಟು.....

ಸೆಲ್ಫಿಗಳನ್ನು ತೆಗೆದುಕೊಳ್ಳುವುದು ಮಾನಸಿಕ ರೋಗವಾಗಿದೆ ಎಂದು ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ (ಎಪಿಎ) ನಡೆಸಿದ ಅಧ್ಯಯನವು ಬೆಳಕಿಗೆ ತಂದಿದೆ. ತನ್ನದೇ ಚಿತ್ರಗಳನ್ನು ಕ್ಲಿಕ್ಕಿಸುವ ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಗೀಳು ಆತ್ಮಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಅಧ್ಯಯನ ವರದಿಯು ಹೇಳಿದೆ.

   ಎಪಿಎ ಸೆಲ್ಫಿ ಗೀಳನ್ನು ಗಡಿರೇಖೆಯ,ತೀವ್ರ ಮತ್ತು ದೀರ್ಘಕಾಲಿಕ ಹೀಗೆ ಮೂರು ಹಂತಗಳಲ್ಲಿ ವರ್ಗೀಕರಿಸಿದ್ದು,ಇದು ಗೀಳಿನ ಮಟ್ಟ ಮತ್ತು ವ್ಯಕ್ತಿಯು ಪ್ರತಿದಿನ ಕ್ಲಿಕ್ಕಿಸುವ ಸೆಲ್ಫಿಗಳ ಸಂಖ್ಯೆಯನ್ನು ಆಧರಿಸಿದೆ. ಸೆಲ್ಫಿ ಗೀಳಿನ ದೀರ್ಘಕಾಲಿಕ ಮಟ್ಟವನ್ನು ‘ ಸೆಲ್ಫಿಟಿಸ್ ’ಎಂದು ಬಣ್ಣಿಸಲಾಗಿದೆ.

ಸೆಲ್ಫಿ ಗೀಳು ಹೆಚ್ಚು ಗಮನ ಹರಿಸಿರದ ಕಾಯಿಲೆಗಳಲ್ಲಿ ಒಂದಾಗಿದೆ. ಈ ಗೀಳು ಹದಿಹರೆಯದವರನ್ನು ಹೆಚ್ಚು ಆಕ್ರಮಿಸಿಕೊಂಡಿದೆಯಾದರೂ ಪ್ರತಿಯೊಂದೂ ವಯೋಮಾನದ ಗುಂಪಿನವರಲ್ಲಿ ಕಂಡುಬರುತ್ತಿದೆ. ಸೆಲ್ಫಿ ಗೀಳು ವ್ಯಕ್ತಿಯನ್ನು ಮುಖ್ಯವಾಹಿನಿ ಸಾಮಾಜಿಕ ವಲಯದಿಂದ ಪ್ರತ್ಯೇಕಿಸುವ ಮೂಲಕ ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ತನ್ನೆದುರಿಗಿರುವ ಸಂತಸದ ಅನುಭವದಿಂದ ಆತನನ್ನು ವಂಚಿತನಾಗಿಸುತ್ತದೆ.

► ಸೆಲ್ಫಿ ಗೀಳಿನ ಹಾನಿಕಾರಕ ಪರಿಣಾಮಗಳು

ಸಂಬಂಧಗಳಿಗೆ ಇತಿಶ್ರೀ ಹಾಡುತ್ತದೆ: ನೀವು ದಿನಕ್ಕೆ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡುತ್ತಿರುವವರ ಪೈಕಿ ಒಬ್ಬರಾಗಿದ್ದರೆ ನೀವು ನಿಮ್ಮ ಸ್ನೇಹಿತರು ಮತ್ತು ಆಪ್ತರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದೀರಿ ಎಂದೇ ಅರ್ಥ. ಹೌದು,ನೀವು ಅಪರೂಪಕ್ಕೆ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರೆ ಪರವಾಗಿಲ್ಲ,ಆದರೆ ದಿನಕ್ಕೆ ಹಲವಾರು ಸೆಲ್ಫಿಗಳನ್ನು ಪೋಸ್ಟ್ ಮಾಡುವುದು ನಿಮ್ಮ ಫಾಲೋವರ್‌ಗಳು ನಿಮ್ಮನ್ನು ಇಷ್ಟಪಡದಂತೆ ಮಾಡುತ್ತದೆ. ಅದು ಆಪ್ತತೆಯ ಮಟ್ಟವನ್ನು ತಗ್ಗಿಸುತ್ತದೆ ಮತ್ತು ನಿಮ್ಮ ಸಂಬಂಧಗಳಿಗೆ ಅಂತ್ಯ ಹಾಡಬಹುದು.

► ದೈಹಿಕ ನೋಟಕ್ಕೆ ಒತ್ತು ನೀಡುವುದು ಹೆಚ್ಚುತ್ತದೆ

ಸೆಲ್ಫಿ ಗೀಳು ಆರಂಭವಾಯಿತೆಂದರೆ ಅದರ ಹಿಂದೆಯೇ ಇನ್ನೊಂದಿಷ್ಟು ವಿಲಕ್ಷಣತೆಗಳು ಬರುತ್ತವೆ. ವ್ಯಕ್ತಿಯು ತನ್ನ ದೈಹಿಕ ನೋಟಕ್ಕೆ ಹೆಚ್ಚು ಒತ್ತು ನೀಡುವುದು ಇವುಗಳಲ್ಲೊಂದಾಗಿದೆ. ಇದು ನಗುಮುಖದ ಬದಲು ವ್ಯಕ್ತಿಯು ತನ್ನ ಶರೀರವನ್ನು ವಿವಿಧ ರೀತಿಗಳಲ್ಲಿ ಪ್ರದರ್ಶಿಸುವುದರ ಕುರಿತಾಗಿದೆ. ಮಾನವೀಯ ವೌಲ್ಯಗಳ ಬದಲು ದೈಹಿಕ ವೌಲ್ಯಗಳು ಹೆಚ್ಚುತ್ತಿರುವಂತೆ ಕಾಣುತ್ತಿದೆ. ಇದು ವ್ಯಂಗ್ಯೋಕ್ತಿಯಂತೆ ಅನಿಸಬಹುದು,ಆದರೆ ಕಹಿಸತ್ಯವಾಗಿದೆ.

► ಖಾಸಗಿತನಕ್ಕೆ ಅಪಾಯ

    ಇಂದಿನ ದಿನಗಳಲ್ಲಿ ತಂತ್ರಜ್ಞಾನವು ಪೋನ್,ಡೆಸ್ಕ್‌ಟಾಪ್ ಮತ್ತು ಇತರ ರಹಸ್ಯ ದಾಖಲೆಗಳನ್ನು ಅನ್‌ಲಾಕ್ ಮಾಡಲು ಮುಖದ ಗುರುತನ್ನು ಬಳಸುತ್ತಿದೆ. ಮುಖದ ಗುರುತನ್ನು ಬಳಸುವ ಈ ತಂತ್ರಜ್ಞಾನ ಬ್ಯಾಂಕ್ ವಹಿವಾಟುಗಳು ಮತ್ತು ಅಮೂಲ್ಯ ಮಾಹಿತಿಗಳ ಸುರಕ್ಷತೆಗಾಗಿ ಬಳಕೆಯಾಗುವ ದಿನಗಳು ಬರಲಿವೆ. ಪ್ರತಿಯೊಂದೂ ಸೆಲ್ಫಿ ನಾವು ಭಾವಿಸಿರುವುದಕ್ಕಿಂತ ಹೆಚ್ಚು ದುಬಾರಿಯಾಗಲಿದೆ. ಏಕೆಂದರೆ ನಾವು ಮೊಬೈಲ್‌ನಲ್ಲಿ ಸೆರೆಹಿಡಿದಿರುವ ಪ್ರತಿಯೊಂದೂ ಎಲ್ಲೋ ದಾಸ್ತಾನಾಗಿರುತ್ತದೆ ಹಾಗೂ ಹ್ಯಾಕರ್‌ಗಳು ಮತ್ತು ಇತರ ಐಟಿ ಸಂಸ್ಥೆಗಳಿಂದ ದುರ್ಬಳಕೆಯ ಸಾಧ್ಯತೆಯಿರುವುದರಿಂದ ಅದು ಖಾಸಗಿತನಕ್ಕೆ ಅಪಾಯವನ್ನುಂಟು ಮಾಡಬಲ್ಲುದು.

► ಸೆಲ್ಫಿ ಗೀಳು ನಮ್ಮನ್ನು ಹೇಗೆ ದುರ್ಬಲರನ್ನಾಗಿಸುತ್ತದೆ?

ಸೆಲ್ಫಿ ಗೀಳು ಈಗ ಒಂದು ಮಾನಸಿಕ ಕಾಯಿಲೆಯಾಗಿದ್ದು,ಅದು ಹಲವಾರು ನರ ವೈಜ್ಞಾನಿಕ ಸಮಸ್ಯೆಗಳನ್ನು ಉಂಟು ಮಾಡಬಲ್ಲದು. ಅದರ ಪರಿಣಾಮಗಳು ಕಾಲಕ್ರಮೇಣ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಆಗಾಗ್ಗೆ ಮನಃಸ್ಥಿತಿಯಲ್ಲಿ ಬದಲಾವಣೆ,ಕಿರಿಕಿರಿಯ ಭಾವನೆ,ಖಿನ್ನತೆ,ಹೃದ್ರೋಗಗಳು,ಸಾಮಾಜಿಕ ವಿರೋಧಿ ವರ್ತನೆ,ಕೂಳುಬಾಕುತನ ಇವು ಇಂತಹ ಸಂಭಾವ್ಯ ಪರಿಣಾಮಗಳಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)