ಸ್ಮಿತ್ ಮೂರನೇ ಟೆಸ್ಟ್ ಗೆ ಇಲ್ಲ
ಲಾಡ್ಸ್, ಆ.20: ಹೆಡಿಂಗ್ಲೆಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಆ್ಯಶಸ್ ಟೆಸ್ಟ್ಗೆ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹೊರಗುಳಿಯಲಿದ್ದಾರೆ. ಎರಡನೇ ಟೆಸ್ಟ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಇಂಗ್ಲೆಂಡ್ನ ಆರ್ಚರ್ ಎಸೆತ ಅವರ ಕುತ್ತಿಗೆಗೆ ಬಡಿದಿತ್ತು. ಇದರಿಂದ ಕುಸಿದು ಬಿದ್ದ ಸ್ಮಿತ್ ಬಳಿಕ ಆಟದಿಂದ ನಿವೃತ್ತರಾಗಿ ಕ್ರೀಡಾಂಗಣದಿಂದ ಹೊರ ನಡೆದಿದ್ದರು. ಸ್ಮಿತ್ ಆಗ 80 ರನ್ ಗಳಿಸಿದ್ದರು. ಬಳಿಕ ಚೇತರಿಸಿಕೊಂಡು ಬ್ಯಾಟಿಂಗ್ ಮುಂದುವರಿಸಿದ ಸ್ಮಿತ್ 92ರಲ್ಲಿ ಔಟಾಗಿದ್ದರು. ಸರಣಿಯಲ್ಲಿ ಮೊದಲ ಬಾರಿ ಅವರು ಶತಕದಂಚಿನಲ್ಲಿ ಎಡವಿದ್ದರು. ಪಂದ್ಯದ ಕೊನೆಯ ದಿನ ಅವರು ಆಡಲಿಲ್ಲ. ಅವರ ಬದಲಿಗೆ ಮಾರ್ನಸ್ ಲ್ಯಾಬುಸ್ಚಾಗ್ನೆ ಕಣಕ್ಕಿಳಿದಿದ್ದರು. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ಮಿತ್ ಅವರು ವೈದ್ಯರ ಸಲಹೆ ಮೇರೆಗೆ ಮೂರನೇ ಟೆಸ್ಟ್ಗೆ ಅಂತಿಮ ಹನ್ನೊಂದರ ಬಳಗದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದಾರೆ. ಐಸಿಸಿ ಟೆಸ್ಟ್ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ನಲ್ಲಿ ಸ್ಟೀವ್ ಸ್ಮಿತ್ ಎರಡನೇ ಸ್ಥಾನ ಪಡೆದಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.