varthabharthi

ಕರ್ನಾಟಕ

ಸ್ವಾಭಿಮಾನಕ್ಕೆ ಧಕ್ಕೆಯಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಶಾಸಕ ರೇಣುಕಾಚಾರ್ಯ ಎಚ್ಚರಿಕೆ

ವಾರ್ತಾ ಭಾರತಿ : 21 Aug, 2019

ಬೆಂಗಳೂರು, ಆ. 21: ‘ಚುನಾವಣೆಯಲ್ಲಿ ಸೋತ ವ್ಯಕ್ತಿ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು ಬೇಸರವಿದೆ. ಯಾರು ಏನು ಬೇಕಾದರೂ ತಿಳಿದುಕೊಳ್ಳಲಿ, ಇದನ್ನು ನಾನು ಬಹಿರಂಗವಾಗಿ ಹೇಳುತ್ತೇನೆ. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ’ ಎಂದು ಬಿಎಸ್‌ವೈ ಆಪ್ತ, ಶಾಸಕ ರೇಣುಕಾಚಾರ್ಯ ಎಚ್ಚರಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಗೆದ್ದವರಿಗೆ ಸಚಿವ ಸ್ಥಾನ ಕೊಡುವುದನ್ನು ಬಿಟ್ಟು ಸೋತವರಿಗೇಕೆ ನೀಡಿದ್ದಾರೆ. ಈಗ ಬಂದು ನಾಟಕ ಮಾಡುವುದು ನನಗೆ ಇಷ್ಟವಿಲ್ಲ. ಹಲವು ಮಂದಿ ಆಯ್ಕೆಯಾಗಿದ್ದಾರೆ. ಬೆಳಗಾವಿಯ ಹಿರಿಯ ನಾಯಕ ಉಮೇಶ್ ಕತ್ತಿಗೆ ಸ್ಥಾನ ಕೊಡಬಹುದಿತ್ತು. ಆದರೆ, ಸೋತಿರುವ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು ಬೇಸರ ತಂದಿದೆ ಎಂದರು.

ಶಾಸಕರಾಗಿ ಆಯ್ಕೆಯಾದವರಿಗೆ ಸ್ಥಾನ ನೀಡಿದರೆ ಗೌರವ ಇರುತಿತ್ತು. ನಾನು ಯಾವುದೇ ಕಾರಣಕ್ಕೂ ಬಂಡಾಯ ಏಳುವುದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ರಾಜಕೀಯ ನಿವೃತ್ತಿ ಹೊಂದುತ್ತೇನೆ. ನಾನು ಯಾರನ್ನೂ ಭೇಟಿಯಾಗಿಲ್ಲ, ನನ್ನ ಕೊನೆಯ ಉಸಿರು ಇರುವವರೆಗೂ ಮಾಜಿ ಸಿಎಂ ಕುಮಾರಸ್ವಾಮಿಯನ್ನು ಭೇಟಿ ಮಾಡುವುದಿಲ್ಲ ಎಂದರು.

ಸಿಎಂ ಬಿಎಸ್‌ವೈ ರಾಜಕೀಯದಲ್ಲಿ ಇರುವವರೆಗೆ ನಾನೂ ಇರುತ್ತೇನೆ. ನಾನು ಅವರ ಮನೆಯ ಮಗ. ಕೊನೆಯ ಉಸಿರು ಇರುವವರೆಗೂ ನಾನು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ. ಸಚಿವ ಸ್ಥಾನ ಕೊಡಲಿ, ಕೊಡದಿರಲಿ ನಾನು ಬಿಸ್‌ವೈ ಜೊತೆಗೆ ಇರುತ್ತೇನೆ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಕೆಲವರಿಗೆ ಅಸಮಾಧಾನ ಇರುವುದು ನಿಜ. ಯಾವುದೇ ಗೌಪ್ಯ ಸಭೆ ಮಾಡಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)