varthabharthi

ವೈವಿಧ್ಯ

ಭೂಮಿ, ನದಿ ಮತ್ತು ಪ್ರವಾಹಗಳ ಕುರಿತು ಹಾಲಿ ಇರುವ ಸಾಂಸ್ಥಿಕ ತಿಳವಳಿಕೆಗಳಲ್ಲಿ ಧೋರಣಾತ್ಮಕವಾಗಿ ಒಂದು ಮೂಲಭೂತ ಬದಲಾವಣೆಯೇ ಬರಬೇಕಿದೆ.

ಪ್ರವಾಹದಲ್ಲಿ ಮುಳುಗಿರುವ ಪರಿಹಾರಗಳು

ವಾರ್ತಾ ಭಾರತಿ : 22 Aug, 2019
ಕೃಪೆ: Economic and Political Weekly


ನೈಸರ್ಗಿಕವಾಗಿ ಸಂಭವಿಸುವ ಪ್ರವಾಹದಲ್ಲಿ ಒಂದು ‘ರೀತಿ’ಯಿದ್ದು ಜನರಿಗೆ ಅದರ ಬಗ್ಗೆ ಅರಿವಿರುತ್ತದೆ. ಆದರೆ ಈ ‘ಅಣೆಕಟ್ಟುಗಳಿಂದ ಉಂಟಾಗುವ’ ಪ್ರವಾಹಗಳು ಮಾತ್ರ ಜನರ ಅರಿವಿಗೆ ಬರದಂತೆ ದಿಢೀರನೆ ಸಂಭವಿಸುತ್ತವೆ. ‘ಪ್ರವಾಹ ನಿಯಂತ್ರಣ’ ಉದ್ದೇಶದ ಅಣೆಕಟ್ಟುಗಳು ಮತ್ತು ತಡೆದಂಡೆಗಳಂಥ ಮೂಲಸೌಕರ್ಯ ಯೋಜನೆಗಳಿಂದ ಹೆಚ್ಚೆಚ್ಚು ಪ್ರದೇಶಗಳು ರಕ್ಷಣೆ ಪಡೆದುಕೊಳ್ಳುತ್ತಿರುವಾಗಲೇ ಇನ್ನೂ ಹೆಚ್ಚೆಚ್ಚು ಪ್ರದೇಶಗಳು ಪ್ರವಾಹದಿಂದ ಹಾನಿಗೊಳಗಾಗುತ್ತಿವೆ.

 ಈ ವರ್ಷ ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳಗಳಲ್ಲಿ ಪ್ರವಾಹವು ಮಾಡಿರುವ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟಗಳು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಈ ವರ್ಷ ಪ್ರವಾಹವು ಮಾಡಿದ ಹಾನಿಯು ಕೇವಲ ಪಶ್ಚಿಮ ಘಟ್ಟದ ಬೆಟ್ಟ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ನಗರ ಪ್ರದೇಶಗಳನ್ನು, ಕರ್ನಾಟಕದ ಬೆಳಗಾವಿ, ಮಹಾರಾಷ್ಟ್ರದ ಕೊಲ್ಲಾಪುರ, ಸತಾರ ಮತ್ತು ಸಾಂಗ್ಲಿ ಜಿಲ್ಲೆಗಳ ಫಲವತ್ತಾದ ಭೂ ಪ್ರದೇಶಗಳನ್ನು ಮುಳುಗಿಸಿದೆ. ಕೆಲವು ಕಡೆ 12-15 ಅಡಿಗಳಷ್ಟು ನೀರು ನಿಂತಿದೆ. ಅಂದಾಜು 47 ಲಕ್ಷ ಜನ ಪರಿಹಾರ ಶಿಬಿರಗಳಲ್ಲಿದ್ದಾರೆ. 1.5 ಲಕ್ಷ ಹೆಕ್ಟೇರಿನಷ್ಟು ಉಳುವ ಭೂಮಿ ಮತ್ತು ಲಕ್ಷಾಂತರ ಮನೆಗಳು ನಾಶವಾಗಿವೆ. ಬಿಹಾರ, ಅಸ್ಸಾಂ ಮತ್ತು ಗುಜರಾತ್‌ಗಳಲ್ಲೂ ಸಹ ಇದೇ ರೀತಿಯ ಹಾನಿ ಸಂಭವಿಸಿದೆ. ಅಲ್ಲದೆ ಉತ್ತರಾಖಂಡ ರಾಜ್ಯವೂ ಸಹ ಮೇಘಸ್ಫೋಟ ಮತ್ತು ಭೂಕುಸಿತದಿಂದ ತತ್ತರಿಸಿದೆ.
ಇತ್ತೀಚಿನ ದಿನಗಳಲ್ಲಿ ಕಡಿಮೆ ಕಾಲಾವಧಿಯಲ್ಲಿ ಭಾರೀ ಮಳೆಯಾಗುವುದು ಮತ್ತು ಎಡೆಬಿಡದೆ ಮಳೆ ಸುರಿಯುವುದು ಪದೇಪದೇ ಸಂಭವಿಸುತ್ತಿರುವ ವಿದ್ಯಮಾನವಾಗಿಬಿಟ್ಟಿದೆ. ಅಣೆಕಟ್ಟುಗಳ ಅಸಮರ್ಪಕ ನಿರ್ವಹಣೆ ಮತ್ತು ಭೂಮಿಯ ಗುಣಮಟ್ಟ ಕುಸಿತಗಳು ಭಾರತದಲ್ಲಿ ಪದೇಪದೇ ಪ್ರವಾಹ ಪರಿಸ್ಥಿತಿಗಳು ಮರುಕಳಿಸಲು ಕಾರಣವಾಗುತ್ತಿರುವ ಮತ್ತೆರಡು ಸಂಗತಿಗಳಾಗಿವೆ. ಈ ಕಾರಣಗಳಿಂದಾಗಿಯೇ 2013ರಲ್ಲಿ ಉತ್ತರಾಖಂಡದಲ್ಲಿ, 2015ರಲ್ಲಿ ಚೆನ್ನೈನಲ್ಲಿ, 2018-2019ರಲ್ಲಿ ಕರ್ನಾಟಕ ಮತ್ತು ಕೇರಳಗಳಲ್ಲಿ ಹಾಗೂ 2005 ಮತ್ತು 2019ರಲ್ಲಿ ಮಹಾರಾಷ್ಟ್ರದಲ್ಲಿ ತೀವ್ರರೀತಿಯ ಪ್ರವಾಹಗಳು ಸಂಭವಿಸಿವೆ.
ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಹೆಚ್ಚೂಕಡಿಮೆ ಎಲ್ಲಾ ನದಿಗಳ ಹಾಗೂ ಅವುಗಳ ಉಪನದಿಗಳುದ್ದಕ್ಕೂ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಆದರೆ ಈ ವಿವಿಧ ಅಣೆಕಟ್ಟು ಪ್ರಾಧಿಕಾರಗಳ ನಡುವೆ ಪರಸ್ಪರ ಸಂಪರ್ಕ, ಸಂಯೋಜನೆಗಳಿಲ್ಲ. ಜೊತೆಗೆ ವಿಳಂಬವಾಗಿ ಅಥವಾ ದಿಢೀರನೇ ಹೆಚ್ಚುವರಿ ನೀರನ್ನು ಅಣೆಕಟ್ಟಿನಿಂದ ನದಿಪಾತ್ರಗಳಿಗೆ ಬಿಡುಗಡೆ ಮಾಡುವುದರಿಂದ ಅಪಾಯವು ನದಿ ಕೆಳಗಿನ ಪ್ರದೇಶಗಳಿಗೆ ಸ್ಥಳಾಂತರವಾಗುತ್ತದೆ ಮತ್ತು ಅದರಿಂದಾಗಿ ಅಪಾರವಾದ ಹಾನಿಯು ಸಂಭವಿಸುತ್ತದೆ. ಕರ್ನಾಟಕದಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಆಲಮಟ್ಟಿ ಅಣೆಕಟ್ಟಿನಿಂದ ಅಪಾರ ಪ್ರಮಾಣದ ನೀರನ್ನು ಹರಿಬಿಡುವುದರಿಂದ ಕೆಳಗಿನ ಪ್ರದೇಶಗಳು ಮುಳುಗಡೆಯಾಗಬಹುದು. ಆದರೆ ಸರಿಯಾದ ಸಮಯದಲ್ಲಿ ನೀರನ್ನು ಹರಿಬಿಡದೇ ಇದ್ದರೆ ನದಿಯ ಮೇಲಿನ ಭಾಗದ ಮಹಾರಾಷ್ಟ್ರದ ಪ್ರದೇಶಗಳು ಮುಳುಗಡೆಯಾಗುತ್ತವೆ. ಇದು ಮಾನ್ಸೂನ್ ಋತುವಾಗಿದ್ದರೂ ಮತ್ತು ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದ್ದರೂ ಈ ನದಿ ತೀರದ ಉಳಿದ ಅಣೆಕಟ್ಟುಗಳು ಅವುಗಳ ಸಂಗ್ರಹವನ್ನು ಮಾಡಿಕೊಂಡಿರದೇ ಇದ್ದದ್ದೂ ಸಹ ಈ ದುರಂತಗಳ ಸರಮಾಲೆಗೆ ಕಾರಣವಾಯಿತು. ಕರ್ನಾಟಕದಲ್ಲೂ ಇದೇ ರೀತಿಯ ಸಮಸ್ಯೆ ತಲೆದೋರಿದೆ. ಕರ್ನಾಟಕದಲ್ಲಿ ಕಾವೇರಿ ನದಿಯು ತುಂಬಿ ಹರಿಯುತ್ತಿರುವುದರಿಂದ ಕೆಳಭಾಗದ ತಮಿಳುನಾಡುವಿನ ಅಣೆಕಟ್ಟುಗಳು ತುಂಬಿಕೊಳ್ಳುವ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ.

ನೈಸರ್ಗಿಕವಾಗಿ ಸಂಭವಿಸುವ ಪ್ರವಾಹದಲ್ಲಿ ಒಂದು ‘ರೀತಿ’ಯಿದ್ದು ಜನರಿಗೆ ಅದರ ಬಗ್ಗೆ ಅರಿವಿರುತ್ತದೆ. ಆದರೆ ಈ ‘ಅಣೆಕಟ್ಟುಗಳಿಂದ ಉಂಟಾಗುವ’ ಪ್ರವಾಹಗಳು ಮಾತ್ರ ಜನರ ಅರಿವಿಗೆ ಬರದಂತೆ ದಿಢೀರನೆ ಸಂಭವಿಸುತ್ತವೆ. ‘ಪ್ರವಾಹ ನಿಯಂತ್ರಣ’ ಉದ್ದೇಶದ ಅಣೆಕಟ್ಟುಗಳು ಮತ್ತು ತಡೆದಂಡೆಗಳಂಥ ಮೂಲಸೌಕರ್ಯ ಯೋಜನೆಗಳಿಂದ ಹೆಚ್ಚೆಚ್ಚು ಪ್ರದೇಶಗಳು ರಕ್ಷಣೆ ಪಡೆದುಕೊಳ್ಳುತ್ತಿರುವಾಗಲೇ ಇನ್ನೂ ಹೆಚ್ಚೆಚ್ಚು ಪ್ರದೇಶಗಳು ಪ್ರವಾಹದಿಂದ ಹಾನಿಗೊಳಗಾಗುತ್ತಿವೆ. ‘‘ಇಂಟರ್ನಲ್ ಡಿಸ್‌ಪ್ಲೇಸ್‌ಮೆಂಟ್ ಮಾನಿಟರಿಂಗ್ ಸೆಂಟರ್’’ (ಆಂತರಿಕವಾಗಿ ಸ್ಥಳಾಂತರಗೊಂಡವರ ಉಸ್ತುವಾರಿ ಕೇಂದ್ರ)ನ ವರದಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದ ಜನರು ಆಂತರಿಕವಾಗಿ ಸ್ಥಳಾಂತರಗೊಳ್ಳುತ್ತಿರುತ್ತಾರೆ. 2008-18ರ ನಡುವೆ ಪ್ರತಿವರ್ಷ 36 ಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ. ಅವರಲ್ಲಿ ಬಹುಪಾಲು ಜನ ಸ್ಥಳಾಂತರಗೊಳ್ಳಲು ಮಾನ್ಸೂನ್ ಅವಧಿಯಲ್ಲಿ ಉಂಟಾದ ಪ್ರವಾಹಗಳೇ ಕಾರಣವಾಗಿವೆ.
ಭೂಬಳಕೆಯಲ್ಲಿ ಆಗಿರುವ ಮೂಲಭೂತ ಬದಲಾವಣೆಗಳು, ಇತರ ಉದ್ದೇಶಗಳಿಗಾಗಿ ಅರಣ್ಯ ಪ್ರದೇಶಗಳನ್ನು ಪರಭಾರೆ ಮಾಡುತ್ತಿರುವುದು, ಬೆಟ್ಟದ ಇಳಿಜಾರು ಪ್ರದೇಶಗಳ ನಿರ್ನಾಮ ಹಾಗೂ ನದಿ ಪಾತ್ರಗಳು ಮುಚ್ಚಿಕೊಳ್ಳುತ್ತಿರುವುದರಿಂದಾಗಿ ನದಿ ನೀರು ಹರಿದು ಹೋಗಲು ಇದ್ದ ಪ್ರಾಕೃತಿಕ ಸ್ಥಳಾವಕಾಶಗಳೆಲ್ಲಾ ಬಂದಾಗಿವೆ. ಇದರಿಂದಾಗಿ ಪಶ್ಚಿಮ ಘಟ್ಟಗಳಲ್ಲಿ ಮತ್ತು ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಭೂಕುಸಿತಗಳು ಮತ್ತು ದಿಢೀರ್ ಪ್ರವಾಹಗಳು ಸಂಭವಿಸುತ್ತಿವೆ. ಭೂಮಿ ಮತ್ತು ನಿಸರ್ಗದ ನಡುವೆ ಇರುವ ಸಹಜ ಭೂ-ನೈಸರ್ಗಿಕ ಸಮಗ್ರತೆ (ಜಿಯೋಮಾರ್ಫಿಕ ಇಂಟೆಗ್ರಿಟಿ)ಯ ನಡುವೆ ಮಾನವ ಮಧ್ಯಪ್ರವೇಶದಿಂದಾಗಿ ನಗರಗಳಲ್ಲಿ ಪ್ರವಾಹ ಸದೃಶ ಸನ್ನಿವೇಶ ಉಂಟಾಗುತ್ತಿದೆ. ಮುಂಬೈನ ಮಹಾನಗರ ಪ್ರಾಂತದಲ್ಲಿ ಕೊಳ್ಳಕೊರಕಲುಗಳು ಬಂದಾಗಿರುವುದರಿಂದ 2018ರಲ್ಲಿ ವಾಸೈ-ವಿರಾರ್ ಪ್ರಾಂತದಲ್ಲಿ ಪ್ರವಾಹ ಉಂಟಾದದ್ದು ಇದಕ್ಕೊಂದು ಉದಾಹರಣೆ. ತೀರಾ ಇತ್ತೀಚೆಗೆ, ಮಹಾರಾಷ್ಟದ ಥಾಣೆ ಜಿಲ್ಲೆಯ ಉಲ್ಲಾಸ್ ನದಿಯಲ್ಲಿ ಪ್ರವಾಹ ಉಕ್ಕೇರಿದ್ದರಿಂದ ಕೊಲ್ಲಾಪುರಕ್ಕೆ ಹೊರಟಿದ್ದ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲಿನಿಂದ ಸಾವಿರ ಜನರನ್ನು ಪಾರು ಮಾಡಬೇಕಾಯಿತು. ಏಕೆಂದರೆ ಹೆಚ್ಚುವರಿ ನೀರು ಹರಿದುಹೋಗಬಹುದಿದ್ದ ನಡುವಿನ ಪ್ರದೇಶಗಳು ಒತ್ತುವರಿಯಾಗಿದ್ದವು ಮತ್ತು ಅಯೋಜಿತವಾಗಿ ಕಟ್ಟಡಗಳು ನಿರ್ಮಾಣಗೊಂಡಿದ್ದವು. ಈ ವರ್ಷ ಕೇರಳದ ಪಾಲಕ್ಕಾಡಿನಲ್ಲಿ ಸಂಭವಿಸಿದಂತೆ ಪ್ರವಾಹಕ್ಕೀಡಾದ ನದಿಗಳು ತಮಗೆ ಉಸಿರುಗಟ್ಟಿಸುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮತ್ತೆ ನಗರಕ್ಕೆ ತಂದೆಸೆಯುತ್ತಿವೆ.
ನದಿ ಪಾತ್ರದಲ್ಲಿ ಇತರ ಯೋಜನೆಗಳ ಮಧ್ಯಪ್ರವೇಶ, ರಿಯಲ್ ಎಸ್ಟೇಟ್ ಇತ್ಯಾದಿಗಳು ನದಿಗಳಿಗೆ ಇದ್ದ ಅಲ್ಪಸ್ವಲ್ಪ ಹರಿವು ಜಾಗವನ್ನೂ ಒತ್ತುವರಿ ಮಾಡಿಕೊಳ್ಳುತ್ತಿವೆ ಮತ್ತು ಈ ಎಲ್ಲಾ ಕಾರಣಗಳಿಂದ ನದಿಗಳು ತಮ್ಮ ಹರಿವಿಗೆ ತಕ್ಕಂತೆ ಭೂಮಿಯಲ್ಲಿ ಹಾದಿಮಾಡಿಕೊಳ್ಳಲು ಅವಕಾಶವಾಗುತ್ತಿಲ್ಲ. ಕೊಚ್ಚಿ, ಚೆನ್ನೈ, ಮುಂಬೈ ಮತ್ತು ಇದೀಗ ಹೊಸದಾಗಿ ನವಿ ಮುಂಬೈನಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಗಳನ್ನೂ ಒಳಗೊಂಡಂತೆ ವಿಮಾನ ನಿಲ್ದಾಣಗಳಂತಹ ಪ್ರಮುಖ ಸಾರ್ವಜನಿಕ ಸೌಕರ್ಯ ಸ್ಥಾವರಗಳನ್ನು ನಿರ್ಮಿಸುವಾಗಲೂ ಸಹ ನದಿಗಳ ಪಾತ್ರವನ್ನು ಪರಿಗಣನೆಗೇ ತೆಗೆದುಕೊಳ್ಳುತ್ತಿಲ್ಲ. ಪ್ರವಾಹ ಭೂಭಾಗಗಳ ಮುಚ್ಚುವಿಕೆ, ಹಳ್ಳಕೊಳ್ಳಗಳು ಬರಿದಾಗುವಿಕೆ, ಜವಗುಭೂಮಿ, ನದಿಮುಖಜ ಭೂಮಿ ಮತ್ತು ಮ್ಯಾನ್ಗ್ರೋವ್‌ಗಳ ನಾಶಗಳಿಂದಾಗಿ ಭಾರೀ ಮಳೆಯಿಂದ ಬಿದ್ದ ಜಲರಾಶಿಯನ್ನು ನುಂಗಿ-ಇಂಗಿಸಿಕೊಂಡು ಅನಾಹುತಗಳನ್ನು ತಡೆಯಬಹುದಾದ ಭೂಮಿಯ ಸಹಜ ಪ್ರಕ್ರಿಯೆಗಳಿಗೆ ದೊಡ್ಡ ಅಡ್ಡಿಯುಂಟಾಗಿದೆ. ಇದು ಮತ್ತಷ್ಟು ಪ್ರವಾಹಗಳಿಗೆ, ಮತ್ತಷ್ಟು ಭೂಮಟ್ಟ ಕುಸಿತಗಳಿಗೆ ಮತ್ತು ಆ ಕಾರಣಗಳಿಂದಾಗಿ ಬರಪರಿಸ್ಥಿತಿಗಳಿಗೆ ಕಾರಣವಾಗುತ್ತದೆ.
 ನದಿಗಳು ಇರುವುದೇ ಮನುಷ್ಯರು ಅವುಗಳನ್ನು ಪಳಗಿಸಿ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ಬಳಸಿಕೊಳ್ಳಲು ಎಂಬ ‘ಜ್ಞಾನೋದಯ’ಗೊಂಡ ಧೋರಣೆಯೇ ವ್ಯಾಪಕವಾಗಿದೆ. ಅದೇ ಧೋರಣೆಯೇ ಪ್ರವಾಹದ ಕಾರಣಗಳನ್ನರಿಯದೆ ಪ್ರವಾಹ ಪರಿಹಾರ ಯೋಜನೆಗಳನ್ನು ರೂಪಿಸುವ ಒಕ್ಕಣ್ಣಿನ ಧೋರಣೆಗೆ ದಾರಿ ಮಾಡಿಕೊಡುತ್ತದೆ. ಪ್ರವಾಹ ಪರಿಹಾರ ಕಾರ್ಯಕ್ರಮಗಳಲ್ಲೂ ಅತ್ಯಂತ ಅಮಾನವೀಯ ಧೋರಣೆಗಳೇ ಕಂಡುಬರುತ್ತದೆ. ಪ್ರವಾಹ ಪೀಡಿತರಿಗೆ ತಲುಪಿಸಬೇಕಾದ ಅಹಾರ ಸಾಮಗ್ರಿಗಳ ಮೇಲೆ ತಮ್ಮತಮ್ಮ ಪಕ್ಷ ಸಂಘಟನೆಗಳ ‘ಸ್ಟಿಕ್ಕರ್ ಯುದ್ಧ’ಗಳು, ರಾಜಕಾರಣಿಗಳಿಂದ ಎಗ್ಗಿಲ್ಲದೆ ನಡೆಯುವ ಪ್ರವಾಹ ಪ್ರವಾಸೋದ್ಯಮಗಳು ಮತ್ತು ಕೊಲ್ಲಾಪುರದಂತಹ ಕಡೆಗಳಲ್ಲಿ ತಮಗಾದ ನಷ್ಟಗಳ ಬಗ್ಗೆ ಗೋಳಾಡುತ್ತಾ ಹೋರಾಡುತ್ತಿರುವ ಜನರ ಮೇಲೆ ಸೆಕ್ಷನ್ 144 ವಿಧಿಸುವಂತಹ ಅಮಾನವೀಯ ಬೆಳವಣಿಗೆಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಪ್ರವಾಹ ಪರಿಹಾರದ ಯೋಜನೆಗಳೂ ಸಹ ಮತ್ತಷ್ಟು ಮಾನವೀಯವಾಗುವ ಮತ್ತು ಸಾಮುದಾಯಿಕ ಧೋರಣೆ ತಳೆಯುವ ಅಗತ್ಯವಿದೆ. ಆ ಧೋರಣೆ ತಳೆದಿದ್ದಲ್ಲಿ ಸಾಕಷ್ಟು ಜೀವಗಳನ್ನು ರಕ್ಷಿಸಬಹುದಿತ್ತು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬ್ರಹ್ಮನಾಳ್ ಗ್ರಾಮದ ಜನರು ಕ್ಷಣಕ್ಷಣಕ್ಕೂ ಏರುತ್ತಿದ್ದ ಪ್ರವಾಹದ ನಡುವೆ ಸಹಾಯಕ್ಕೆ ನಿರೀಕ್ಷೆ ಮಾಡುತ್ತಿದ್ದರು. ಆದರೆ ಯಾವ ಸಹಾಯವೂ ಬಾರದಾದಾಗ ಹತಾಶೆ ಮತ್ತು ಆತಂಕದಿಂದ ಲಭ್ಯವಿದ್ದ ಹಳೆಯ ಮೋಟಾರುದೋಣಿಯೊಂದರ ಮೂಲಕ ಪಾರಾಗಲು ಯತ್ನಿಸಿದರು. ಆದರೆ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಲಾರದ ಆ ಬೋಟು ಮಗುಚಿಕೊಂಡು 17 ಜನರು ನೀರುಪಾಲಾದರು.
ಅವಘಡಕ್ಕೆ ಹವಾಮಾನ ಬದಲಾವಣೆ ಕಾರಣವಲ್ಲವೆಂದು ಭಾರತ ಸರಕಾರದ ‘ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ’ ಮಂತ್ರಿಗಳು ವಾದಿಸುತ್ತಿದ್ದರೆ ಉಳಿದ ರಾಜಕಾರಣಿಗಳು ಏನೂ ಸಂಭವಿಸಿಯೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿದ್ದಾರೆ ಮತ್ತು ಯಥಾರೀತಿ ಧೋರಣೆ ತಳೆಯಲು ಸರಕಾರದ ನೀತಿಯನ್ನು ಒಂದು ನೆಪವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಒಂದೆಡೆ ಹವಾಮಾನ ಬದಲಾವಣೆಯ ಅಪಾಯಗಳು ಮತ್ತು ಬಿಕ್ಕಟ್ಟುಗಳು ತಡೆಯಲಾಗದಷ್ಟು ವೇಗ, ಅಗಾಧತೆ ಮತ್ತು ಭೀಕರ ತೀವ್ರತೆಯಲ್ಲಿ ವ್ಯಕ್ತವಾಗುತ್ತಿದ್ದರೆ ಸಂಬಂಧಪಟ್ಟ ಸಾರ್ವಜನಿಕ ಸಂಸ್ಥೆಗಳು ತಮ್ಮದೇ ಆದ ಕಾಲಭ್ರಮೆಯಲ್ಲಿ ಸಿಲುಕಿಕೊಂಡಿವೆೆ. ನದಿ ಪಾತ್ರಕ್ಕೆ ನಿರ್ದಿಷ್ಟವಾದ ಯೋಜನೆಗಳು, ನದಿ ಬಯಲು ಪ್ರದೇಶದಲ್ಲಿ ಪರಿಸರಸಮತೋಲನ ಪುನರ್ ಸ್ಥಾಪನೆ, ಮತ್ತು ನದಿಹರಿವಿನ ಹರಹನ್ನು ನಿರ್ವಹಣೆ ಮಾಡುವ ಅಗತ್ಯವನ್ನು ಒಪ್ಪಿಕೊಳ್ಳಲಾಗುತ್ತದಾದರೂ, ಇನ್ನಷ್ಟು ‘ವ್ಯಾವಹಾರಿಕ’ ಹೊಂದಾಣಿಕೆಗಳು ಮಾಡಿಕೊಳ್ಳಬಹುದಾದ ಅವಕಾಶವು ಎದುರಾದಾಗ ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತದೆ. ನದಿ ಬಯಲು ಪ್ರದೇಶಗಳನ್ನು ಮತ್ತೆ ನೈಸರ್ಗಿಕಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳದ ಹೊರತು ಈ ಮಾನವ ನಿರ್ಮಿತ ಪ್ರವಾಹದ ಬಿಕ್ಕಟ್ಟಿನ ಸಮಸ್ಯೆಗಳು ಬಗೆಹರಿಯುವುದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)