varthabharthi

ನಿಮ್ಮ ಅಂಕಣ

ಸಂಸದರ ನಡೆ ಘನತೆಗೆ ತಕ್ಕುದಲ್ಲ

ವಾರ್ತಾ ಭಾರತಿ : 22 Aug, 2019
ವಿಜಯ್ ಕಲ್ಯಾಣ ರಾಮನ್, ಬನಶಂಕರಿ ಮೂರನೇ ಹಂತ, ಬೆಂಗಳೂರು

ಮಾನ್ಯರೇ,

ಬೆಂಗಳೂರಿನಲ್ಲಿ ಜೈನ ಸಮುದಾಯದವರ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ ಹಿಂದಿ ಕಟೌಟ್ ಕಿತ್ತು ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ಇಬ್ಬರು ಸಂಸದರು ಘಟನೆ ಹಿಂದಿನ ಕನ್ನಡ ಕಾರ್ಯಕರ್ತರನ್ನು ಕಿಡಿಗೇಡಿಗಳು, ಪುಂಡರು ಹಾಗೂ ರೌಡಿಗಳೆಂದು ಹೀಯಾಳಿಸಿದ್ದಾರೆ. ಜಾತಿ-ಧರ್ಮ-ದೇವರೆನ್ನದೆ ಜನಾಂಗವೊಂದು ಒಂದೇ ವೇದಿಕೆಯಲ್ಲಿ ಎಲ್ಲರನ್ನೂ ಒಗ್ಗೂಡಿಸಲು, ಆ ಪ್ರದೇಶದಲ್ಲಿ ಆಚರಣೆಯಲ್ಲಿರುವ ಭಾಷೆಗೆ ಮಾತ್ರ ಸಾಧ್ಯವಾದದ್ದು. ಕನ್ನಡ ಭಾಷೆಯ ಏಳಿಗೆ-ಒಗ್ಗಟ್ಟಿಗೆ ರಾಜಕೀಯ, ಸಿನೆಮಾ, ಸಾಹಿತ್ಯ, ನಾಟಕಗಳಷ್ಟೇ ಮುಖ್ಯವಾದದ್ದು ಬೀದಿ ಚಳವಳಿ ಮತ್ತು ಹೋರಾಟಗಳು ಸಹ. ಇತಿಹಾಸವನ್ನು ಮೆಲುಕು ಹಾಕಿ ನೋಡಿದಾಗ ಕನ್ನಡಿಗನ ಉಳಿವಿಗೆ ಕ್ಷಾತ್ರ ಬಲವೂ
ಬಹು ಮುಖ್ಯವಾಗಿ ಇದ್ದುದು ಕಂಡು ಬರುತ್ತದೆ. ಕನ್ನಡಿಗರು ಎಲ್ಲಾ ರೀತಿಯಲ್ಲೂ ಒಗ್ಗೂಡುವುದೆಂದರೆ ಅದರಲ್ಲಿ ಕ್ಷಾತ್ರ ಬಲವನ್ನೂ ಒಂದು ಮಾಡುವುದು ಬಹು ಮುಖ್ಯ. ಭಾವೋದ್ವೇಗಿಗಳು ಈ ರೀತಿಯ ಜನಾಂದೋಲನಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವುದು ಎಲ್ಲೆಡೆ ಕಂಡು ಬರುತ್ತದೆ.
ಭಾವ ಜೀವಿಯ ಕೆಲವೊಂದು ವರ್ತನೆ ಸದಾಚಾರ ಸಂಪ್ರದಾಯದವರಿಗೆ ರುಚಿಸದಿದ್ದರೂ-ವಿರೋಧವಾಗಿದ್ದರೂ, ಅದರಲ್ಲಿಯೂ ಸಹ 'ಸಮಸ್ಯೆ ಪರಿಹಾರದ' ಸತ್ಸಂಪ್ರದಾಯದ ವಿಶಿಷ್ಟತೆ ಅಡಗಿದೆ ಎಂದು ಯಾರೂ ಅಲ್ಲಗೆಳೆಯುವಂತಿಲ್ಲ. ಕನ್ನಡದ ಹಿತಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತ, ನಾಡು-ನುಡಿಯ ಉಳಿವಿಗಾಗಿ ಬಹುಜನರ ದೊಡ್ಡ ಪಡೆಯನ್ನು ಕಟ್ಟಲು ಶ್ರಮಿಸುತ್ತಿರುವ ಇಂತಹ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಜವಾಬ್ದಾರಿಯುತ! ಸಂಸದರು ರೌಡಿಗಳೆಂದು ಹೀಯಾಳಿಸಿರುವುದು ಅವರ ಘನತೆಗೆ ತಕ್ಕುದಲ್ಲವಾಗಿದೆ. ಸಂಸದರು ಮುಂದುವರಿಯುತ್ತ ಹಿಂದಿ ಬ್ಯಾನರ್ ಕಿತ್ತು ಹಾಕುವ ಇವರು ಉರ್ದುವಿನಲ್ಲಿ ಬ್ಯಾನರ್ ಹಾಕಿದವರನ್ನು ಏಕೆ ಗುರಿಯಾಗಿಸಿಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಅವರ ಈ ಪ್ರಶ್ನೆ, ಕನ್ನಡ ಭಾಷೆ, ನಾಡು, ನುಡಿಯ ಏಳಿಗೆಗಾಗಿ ಧರ್ಮಾತೀತವಾಗಿ ಒಗ್ಗೂಡಿರುವವರ ಮಧ್ಯೆ ಒಡಕು ತಂದಿಟ್ಟು ತಮ್ಮ ಪಕ್ಷದ ಹಿತಾಸಕ್ತಿಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರವೆಂದರೆ ತಪ್ಪಲ್ಲ. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಎಲ್ಲಾ ರಾಜಕೀಯ ನಾಯಕರು ನಿಸ್ವಾರ್ಥದಿಂದ ಕಟ್ಟು ನಿಟ್ಟಾಗಿ ಕನ್ನಡಿಗನಿಗೆ ಪ್ರಜಾಪ್ರಭುತ್ವದಲ್ಲಿನ ಎಲ್ಲಾ ವ್ಯವಸ್ಥೆಯಲ್ಲಿ ಅಗ್ರಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಿದ್ದರೆ, ಇಲ್ಲಿ ಯಾವುದೇ ರೀತಿಯ ಹೋರಾಟಗಳಿಗೂ ಅವಕಾಶವಿರುತ್ತಿರಲಿಲ್ಲ. ಜನ ಸಾಮಾನ್ಯರು ಎಂದೆಂದಿಗೂ ಪ್ರಜಾತಂತ್ರದ ಮತ್ತು ಆಡಳಿತ ನಿಯಂತ್ರಣಗಳಿಂದ ನಂಬಿಕೆ ಕಳೆದುಕೊಳ್ಳದೆ ಈ ನಾಡು ಎಲ್ಲಾ ವ್ಯವಹಾರಗಳಿಂದಲೂ ಸುಭಿಕ್ಷವಾಗಿರುತ್ತಿತ್ತು. ಪರಿಸ್ಥಿತಿ ಹೀಗಿಲ್ಲದಿರುವುದೇ ಸಮಸ್ಯೆ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)