varthabharthi

ಅನುಗಾಲ

ಹಳೇ ಬಾಟಲಿಯಲ್ಲಿ ಹಳೇ ವೈನ್!

ವಾರ್ತಾ ಭಾರತಿ : 22 Aug, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇಲ್ಲಿ ರಾಜಕಾರಣಿಗಳಿಗೂ ಅವರ ಅನುಯಾಯಿಗಳಿಗೂ ಅಧಿಕಾರ ರಾಜಕೀಯದ ಹೊರತಾದ ಹೊಸ ಆಕರ್ಷಣೆಯೇನಿಲ್ಲ. ಜಾತಿ ರಾಜಕೀಯದ ಹಳೇ ಸೂತ್ರಗಳೇ ಕರ್ನಾಟಕವನ್ನು ಆಳುತ್ತವೆ. ಎಂದೇ ಎಲ್ಲ ರಾಜಕಾರಣಿಗಳಿಗೂ ಅಧಿಕಾರ ಬೇಕು; ಅದರ ಹೊರತಾಗಿ ಜನಸೇವೆ ಮಾಡುವ ತುರ್ತು ಯಾವ ದೇಶಭಕ್ತರಿಗೂ ಇಲ್ಲ. ಅಧಿಕಾರವಿದ್ದರೆ ಸ್ವಾರ್ಥಸಾಧನೆಯ ಉಪಪದಾರ್ಥವಾಗಿ ಜನಹಿತವನ್ನು ಮಾಡುವುದು ರಾಜಕೀಯದ ಚಿದಂಬರ ರಹಸ್ಯ.

ಕರ್ನಾಟಕದಲ್ಲಿ ಕೊನೆಗೂ ಬಿ.ಎಸ್.ಯಡಿಯೂರಪ್ಪಅವರ ಮೂರೂವರೆ ವಾರಗಳ ಏಕವ್ಯಕ್ತಿ ನಾಟಕ ಕೊನೆಗೊಂಡು ಭಾರತೀಯ ಜನತಾ ಪಕ್ಷದ ಸಚಿವ ಸಂಪುಟ ರಚನೆಯಾಗಿದೆ. ವಿಶ್ವಾಸ ಮತ ಪಡೆದ ಬಳಿಕವೂ ಇಷ್ಟೊಂದು ದಿನ ವಿಳಂಬಿಸಿ ಸಂಪುಟ ರಚನೆಯಾದ ಉದಾಹರಣೆ ಇನ್ನೊಂದಿಲ್ಲ. ಬಹುಮತ ಸಿಕ್ಕಿದರೆ ಸಾಲದು; ಪ್ರಜಾಪ್ರಭುತ್ವದ ಗುಪ್ತ ಮಾರ್ಗಸೂಚಿಗಳ ಇನ್ನಿತರ ಉಪಾಯಗಳನ್ನೂ ಅಪಾಯಗಳನ್ನೂ ಪಕ್ಷ ಎದುರಿಸಬೇಕಾಗಿದೆಯೆಂಬುದು ಈ ಬಾರಿ ಸ್ಪಷ್ಟವಾಯಿತು. ಮುಖ್ಯಮಂತ್ರಿ ಪದವಿ ಗುಲಾಬಿಯ ಹಾಸಿಗೆಯಲ್ಲವೆಂದು ಅಧಿಕಾರ ಬಿಟ್ಟುಹೋಗುವಾಗ ಉಪದೇಶ ಹೇಳಬೇಕಾಗಿಲ್ಲ. ಪ್ರತ್ಯಕ್ಷವಾಗಿ ಗೊತ್ತಾಗುತ್ತದೆ. ಒಂದರ್ಥದಲ್ಲಿ 34 ಮಂತ್ರಿಗಳ ಒಂದು ತಿಂಗಳ ಸಂಬಳ-ಸವಲತ್ತು ಇತ್ಯಾದಿ ವೈಭೋಗಗಳು ಉಳಿಕೆಯಾದವು. ಹಾಗೂ ಹೀಗೂ ಹೈಕಮಾಂಡಿನ ಅನುಗ್ರಹದಿಂದ 17 ಜನ ಸಂಪುಟ ದರ್ಜೆ ಸಚಿವರ ಮೊದಲ ಸಂಚಿಕೆ ಸೇರ್ಪಡೆಯಾಗಿದೆ. (ಈ ಹೈಕಮಾಂಡ್ ಎಂಬುದು ಕಾಂಗ್ರೆಸಿನ ಬಳುವಳಿ! ಅದೇ ಗರಡಿಯಲ್ಲೀಗ ಭಾರತೀಯ ಜನತಾ ಪಕ್ಷವೂ ಸಾಗಿರುವುದು ಭವಿಷ್ಯಕ್ಕೆ ದಿಕ್ಸೂಚಿ!) ನಿರೀಕ್ಷೆಗೆ ವಿರುದ್ಧವಾಗಿ ಘಟಾನುಘಟಿಗಳು ಮತ್ತೆ ಮಂತ್ರಿಗಳಾಗಿದ್ದಾರೆ. ಹಳೇ ಬಾಟಲ್ಲಿನಲ್ಲಿ ಹಳೆಯ ವೈನ್! ಹಿಂದೆ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಈಗ ಸಾದಾ ಮಂತ್ರಿಯಾಗಿದ್ದಾರೆ. ಕುಮಾರವ್ಯಾಸ ಇದನ್ನೇ ಹೇಳಿದ್ದು. ಕೌರವರ ಅರಮನೆಗಳನ್ನು ಪಾಂಡವರು ಮತ್ತವರ ಮಂದಿ ಹೊಕ್ಕರು. ಇನ್ನುಳಿದಂತೆ ಪ್ರಜೆಗಳು ಅದೇ ಆಡಳಿತಕ್ಕೆ ಬಸವಳಿದರು!
ಪಕ್ಷದ ಆದರ್ಶ ಮತ್ತು ನಿಷ್ಠೆಯನ್ನೇ ರೂಢಿಸಿಕೊಂಡಿದ್ದವರು ಅವಕಾಶ/ಅಧಿಕಾರ ವಂಚಿತರಾಗಿದ್ದಾರೆ. ದಕ್ಷಿಣ ಕನ್ನಡ, ಕೊಡಗಿನಂತಹ ಕೇಸರಿ ಜಿಲ್ಲೆಗಳು ಒಂದೂ ಸಚಿವ ಸ್ಥಾನ ಸಿಗದೆ ಬಡವಾಗಿವೆ. (ಪಕ್ಷಾಧ್ಯಕ್ಷ ಸ್ಥಾನ ದ.ಕ.ಜಿಲ್ಲೆಗೆ ಸಿಕ್ಕಿತೆಂಬ ಸಂತೋಷ ಕರಾವಳಿಯಲ್ಲಿದೆ. ಹಣ್ಣು ಸಿಗದಿದ್ದರೂ ಅದರ ಗೊರಟು, ಸಿಪ್ಪೆ, ಹೀಗೆ ದಕ್ಕಿದೆ!) ಅನೇಕರ ಅತೃಪ್ತಿ ಬಹಿರಂಗಗೊಂಡಿದೆ. ಅನೇಕ ಹಿರಿಯ ನಾಯಕರು ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರುಹಾಜರಾದರು. ದೇಶ, ಮೋದಿ, ಪಕ್ಷ, ಹಿಂದುತ್ವ ಮುಂತಾದ ಮಾಮೂಲು ಉತ್ಸಾಹದ ಚಿಲುಮೆಗಳು ಈ ಬಾರಿ ಯಾಕೋ ಥಂಡಾ ಆಗಿದ್ದವು. ಮುಂಬೈಯ ಹೋಟೆಲುಗಳಲ್ಲಿ ಅಥವಾ ರಿಸಾರ್ಟುಗಳಲ್ಲಿ ವಾಸ್ತವ್ಯ, ನಿರೀಕ್ಷಣಾ ಜಾಮೀನಿಗೆ ಅರ್ಜಿಹಾಕಿಕೊಂಡವರಂತೆ ಅಡಗುವುದು ಇವೆಲ್ಲ ಈಗ ರಾಜಕಾರಣದ ಸವಕಲು ತಂತ್ರಗಳು ಮತ್ತು ಎಲ್ಲ ಪಕ್ಷಗಳಿಗೂ ಒಪ್ಪುವಂಥವಾದ್ದರಿಂದ ಭಾರತೀಯ ಜನತಾ ಪಕ್ಷವೂ ಇದಕ್ಕೆ ಎರವಾದರೆ ಅಚ್ಚರಿಯಿಲ್ಲ.

ಇವೆಲ್ಲ ವಿಶೇಷವೇ ಅಲ್ಲ. ಯಾವುದೇ ರಾಜಕೀಯ ಪಕ್ಷವು ಹಳತಾಗುವಾಗ ಅದರ ಪಟ್ಟಭದ್ರ ಹಿತಾಸಕ್ತಿಗಳು ಅದರ ಬೆಳವಣಿಗೆಯನ್ನು ಮೊಟಕಾಗಿಸುತ್ತವೆ. ಹಿಂದಿನ ಚುನಾವಣೆಗಳ ಮೊನಚು ಆನಂತರದ ಚುನಾವಣೆಗಳಲ್ಲಿರುವುದಿಲ್ಲ. 1977ರಲ್ಲಿ ಜನತಾ ಪಕ್ಷವು ಇಂದಿರಾ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಿ ಅಧಿಕಾರಕ್ಕೆ ಬಂದರೂ 1980ರಲ್ಲಿ ಮರಳಿ ಅಧಿಕಾರವನ್ನು ಚಿನ್ನದ ತಟ್ಟೆಯಲ್ಲಿಟ್ಟು ಇಂದಿರಾಗಾಂಧಿಗೆ ಮರಳಿಸಿತು. ಪ್ರಾಯಃ ದೇಶ ಒಂದು ಪಕ್ಷದ/ಸಂಘಟನೆಯ ಕುರಿತು ಅಷ್ಟು ವೇಗವಾಗಿ ಭ್ರಮನಿರಸನಗೊಂಡ ಉದಾಹರಣೆ ಬೇರೆ ಇರದು. ಕಾಂಗ್ರೆಸ್ ಆದರೂ ಹಲವು ದಶಕಗಳ ಆನಂತರ ಕೊಳೆಯುವುದಕ್ಕೆ ಆರಂಭಿಸಿದರೆ ಜನತಾ ಪಕ್ಷ ಬಾಲಗ್ರಹ ದೋಷಕ್ಕೆ ಗುರಿಯಾಗಿ ಅದರಿಂದ ಹೊರಬರಲಾರದೇ ನರಳಿ ಸತ್ತಿತು. ಕಾಂಗ್ರೆಸ್ ನಿತ್ರಾಣಗೊಂಡಂತೆ ಕಂಡರೂ ಅದಿನ್ನೂ ಭಾರತೀಯ ಜನತಾ ಪಕ್ಷವನ್ನು ಹೊರತು ಪಡಿಸಿದರೆ ದೇಶದ ಏಕೈಕ ರಾಷ್ಟ್ರೀಯ ಪಕ್ಷವಾಗಿ ಉಳಿದಿದೆ. ಹಾಗೆ ನೋಡಿದರೆ ಈಗ ಭಾರತೀಯ ಜನತಾ ಪಕ್ಷವೂ ದೇಶದ ಕೆಲವು ರಾಜ್ಯಗಳಲ್ಲಿ ಒಂದೂ ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಯಿತು. ಪ್ರಾಯಃ ಇತರ ಪ್ರತಿಪಕ್ಷಗಳು ತಮ್ಮ ಪ್ರಾದೇಶಿಕ ಲಕ್ಷಣಗಳಿಗೆ ಹೊಂದಿಕೊಂಡು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಶಾಸನಸಭೆಯ ಸಿಂಹಪಾಲನ್ನು ತಾವಿಟ್ಟುಕೊಂಡು ಸಂಸತ್ತಿನ ಪ್ರಾತಿನಿಧ್ಯದಲ್ಲಿ ಕಾಂಗ್ರೆಸಿನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ ದೇಶದಲ್ಲಿ ಪ್ರಬಲ ಪ್ರತಿಪಕ್ಷದ ಸ್ಥಾನ ಕಾಂಗ್ರೆಸಿಗೆ ಲಭಿಸುತ್ತಿತ್ತು. ಈಗ ಈ ಪ್ರಾದೇಶಿಕ ಪಕ್ಷಗಳು ನಾಯಿ ಒಣ ಹುಲ್ಲಿನ ಮೇಲೆ ಕುಳಿತು ದನ ಹುಲ್ಲು ತಿನ್ನಲು ಅಡ್ಡಿ ಮಾಡಿದಂತೆ ಅಥವಾ ತಾನೂ ತಿನ್ನ, ಇತರರಿಗೂ ಬಿಡ ಎಂಬ ಉಕ್ತಿಯಂತೆ ಭಾರತೀಯ ಜನತಾ ಪಕ್ಷಕ್ಕೆ ಯಾವ ಪೈಪೋಟಿಯನ್ನೂ ನೀಡದ ಅಸಹಾಯಕತೆಗೆ ಕಾರಣವಾಗಿವೆ. ಈಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಮಸೂದೆಯ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷವೊಂದೇ ಪ್ರತಿಪಕ್ಷದ ರೀತಿ ವರ್ತಿಸಿತು. ಉಳಿದೆಲ್ಲ ಚಿಕ್ಕ-ಪುಟ್ಟ ಪಕ್ಷಗಳು ಪಕ್ಷ ಪಾಂಡವರಲ್ಲಿ ಊಟ ಕೌರವರಲ್ಲಿ ಎಂಬಂತೆ ಅಥವಾ ಹಾವೂ ಸಾಯಲಿಲ್ಲ ಕೋಲೂ ಮುರಿಯಲಿಲ್ಲ ಎಂಬಂತೆ ವರ್ತಿಸಿ ತಮ್ಮ ಅಸ್ತಿತ್ವಕ್ಕೆ ಬರೆಹಾಕಿಕೊಂಡವು. ಯಾವುದೇ ರಾಜಕೀಯ ಪಕ್ಷವು ಒಂದು ನೀತಿ ಸಂಹಿತೆಯನ್ನು ಹಾಕಿಕೊಂಡಂತೆ ಕಾಣುವುದಿಲ್ಲ; ಬದಲಾಗಿ ಅವಕಾಶವಾದಿ ರಾಜಕಾರಣದ ಪರಮೋಚ್ಚ ಸ್ಥಿತಿಯಲ್ಲಿ ಬಳಲಿದಂತೆ ಕಾಣುತ್ತವೆ. 2019ರ ಚುನಾವಣೆಯಂತೆ ಭಾರತೀಯ ಜನತಾ ಪಕ್ಷವು ಇತರ ಪಕ್ಷಗಳ ದಡ್ಡತನದ ಲಾಭವನ್ನು ಪಡೆದುಕೊಂಡು ಸಾಕಷ್ಟು ಬಹುಮತವನ್ನು ಗಳಿಸಿದ್ದು ಮಾತ್ರವಲ್ಲ, ಅವುಗಳನ್ನು ಇಕ್ಕಟ್ಟಿನ ಸ್ಥಿತಿಗೆ ತಳ್ಳುವಲ್ಲಿ ಶಕ್ತವಾಗಿದೆ. ಆದರೆ ಇವಿಷ್ಟೇ ಒಂದು ಪಕ್ಷವನ್ನು ಅಧಿಕಾರದಲ್ಲಿ ಉಳಿಯಲು, ಮುಂದುವರಿಯಲು ಸಾಕಾಗುವುದಿಲ್ಲ. ಸದಾ ಚೈತನ್ಯಶೀಲವಾಗಿ ಏನಾದರೂ ಹೊಸತನ್ನು ಸೃಷ್ಟಿಸಲು ಸಾಧ್ಯವಿದ್ದರೆ ಮಾತ್ರ ಯಾವುದೇ ಪಕ್ಷವು ಜನರಿಂದ ಸದಾ ಸ್ವೀಕಾರಗೊಳ್ಳಬಹುದು. ಇಲ್ಲವಾದರೆ ಏಳು-ಬೀಳುಗಳ ಸಹಜ ಬದುಕನ್ನು ಎದುರಿಸಬೇಕಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಕಾನೂನು ಒಂದು ಬದಲಾವಣೆಯನ್ನು ಜನರಿಗೆ ನೀಡಿತು. ಆದರೆ ಸದಾ ಬ್ರಹ್ಮರಾಕ್ಷಸನಂತೆ ಬಯಕೆಯನ್ನೊಡ್ಡುವ ಜನತೆಯ ಎದುರು ಹೊಸದನ್ನು ನೀಡುವುದು ಸಾಮಾನ್ಯ ಸಾಹಸವಲ್ಲ. ಅದನ್ನು ಭಾರತೀಯ ಜನತಾ ಪಕ್ಷವು ನೀಡಲು ಸಮರ್ಥವಾಗುವುದೇ ಅಥವಾ ನಿಂತ ನೀರಾಗುವುದೇ ಎಂಬುದನ್ನು ಬರಲಿರುವ ದಿನಗಳು ಹೇಳಬಹುದು.

ಕರ್ನಾಟಕದಲ್ಲಿ ಈಗ ಆಗಿರುವುದು ಅದೇ. ಜಮ್ಮು ಮತ್ತು ಕಾಶ್ಮೀರದ ಕಾಯ್ದೆ ಮೋದಿ-ಶಾ ಅವರ ಜನಪ್ರಿಯತೆಯನ್ನು ಹೆಚ್ಚಿಸಿರಬಹುದಾದರೂ ಕರ್ನಾಟಕದಲ್ಲಿ ಜನಾಕರ್ಷಣೆಯನ್ನು ಪಡೆಯುವುದು ಸಾಧ್ಯವಿಲ್ಲ. ಇಲ್ಲಿ ರಾಜಕಾರಣಿಗಳಿಗೂ ಅವರ ಅನುಯಾಯಿಗಳಿಗೂ ಅಧಿಕಾರ ರಾಜಕೀಯದ ಹೊರತಾದ ಹೊಸ ಆಕರ್ಷಣೆಯೇನಿಲ್ಲ. ಜಾತಿ ರಾಜಕೀಯದ ಹಳೇ ಸೂತ್ರಗಳೇ ಕರ್ನಾಟಕವನ್ನು ಆಳುತ್ತವೆ. ಎಂದೇ ಎಲ್ಲ ರಾಜಕಾರಣಿಗಳಿಗೂ ಅಧಿಕಾರ ಬೇಕು; ಅದರ ಹೊರತಾಗಿ ಜನಸೇವೆ ಮಾಡುವ ತುರ್ತು ಯಾವ ದೇಶಭಕ್ತರಿಗೂ ಇಲ್ಲ. ಅಧಿಕಾರವಿದ್ದರೆ ಸ್ವಾರ್ಥಸಾಧನೆಯ ಉಪಪದಾರ್ಥವಾಗಿ ಜನಹಿತವನ್ನು ಮಾಡುವುದು ರಾಜಕೀಯದ ಚಿದಂಬರ ರಹಸ್ಯ.

ಈ ಬಾರಿಯ ಸಂಪುಟ ರಚನೆಯಲ್ಲಿ ಪೂರ್ಣ ಪ್ರಮಾಣದ ಅಧಿಕಾರ ಗ್ರಹಣವಾಗಿಲ್ಲ. ಅತ್ಯಧಿಕವೆಂದರೆ 34 ಸಚಿವರಿಗೆ ಅವಕಾಶವಿದ್ದರೂ ಈಗ ಈ ಪ್ರಮಾಣ 18ಕ್ಕೆ ನಿಂತಿದೆ. ಇನ್ನುಳಿದ ಸ್ಥಾನಗಳು ಮುಂಗಡ ಕಾಯ್ದಿರಿಸಿದ ಆದರೆ ಮುಂದೆಲ್ಲೋ ಬಸ್ ಹತ್ತುವ ಪ್ರಯಾಣಿಕರಿಗೆ ಮೀಸಲಿರಿಸಿದ ಬಸ್ಸಿನ ಸೀಟುಗಳಂತೆ ಖಾಲಿಯಾಗಿ ಕುಳಿತಿವೆ. ಅವೀಗ ಯಾರಿಗಾಗಿ? ಅತೃಪ್ತರಾಗಿರುವ ಪಕ್ಷದ ಮುಖಂಡರಿಗೋ ಅಥವಾ ಈಗಾಗಲೇ ಅತೃಪ್ತರೂ ಅನರ್ಹರೂ (ಅಯೋಗ್ಯರೂ?) ಆಗಿರುವ ಕಾಂಗ್ರೆಸ್-ಜೆಡಿಎಸ್ ತಳಿಗಳಿಗೋ? ಇನ್ನೂ ಸ್ಪಷ್ಟವಾಗಿಲ್ಲ. ಕರ್ನಾಟಕವು ಹಿಂದೆಂದೂ ಕಾಣದ ಪ್ರಾಕೃತಿಕ ವಿಕೋಪಕ್ಕೆ ಈ ಬಾರಿ ತುತ್ತಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಇವೆರಡೂ ಭಿನ್ನ ರೀತಿಯಲ್ಲಿ ರಾಜ್ಯವನ್ನು ಕಾಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ರಾಜಕಾರಣವು ಅಧಿಕಾರಕ್ಕಾಗಿ ದಿಲ್ಲಿಯತ್ತ ಮುಖಮಾಡಿದ್ದನ್ನು ಕಂಡರೆ ಯಾರಿಗೂ ಅಸಹ್ಯವಾಗಬೇಕು. ಆದರೆ ಇದನ್ನು ಹೇಳಹೊರಟರೆ ಕಾಂಗ್ರೆಸ್ ಹೀಗೆ ಹಿಂದೆ ಮಾಡಿತ್ತಲ್ಲವೇ ಎಂಬ ಇತಿಹಾಸ ಪಾಠ ಎದುರಾಗುತ್ತದೆ. ಅಷ್ಟಕ್ಕೆ ಎಂತಹ ವಿವೇಕಿಯೂ ಸುಮ್ಮನಾಗಬೇಕು. ಚರಿತ್ರೆಯನ್ನು ವರ್ತಮಾನಕ್ಕೆ ಇಷ್ಟೊಂದು ಸಾರಾಸಗಟು ಮುಖಾಮುಖಿ ಮಾಡಿದ ಸಂದರ್ಭ ಭಾರತಕ್ಕಾಗಲೀ ಕರ್ನಾಟಕಕ್ಕಾಗಲೀ ಬಂದಿರಲಿಲ್ಲ.

ಈ ಬಾರಿಯ ಸಚಿವ ಸಂಪುಟದ ರಚನೆಯಲ್ಲಿ ವಿಶೇಷವಾದ ಇನ್ನೊಂದು ಸಂಗತಿಯೆಂದರೆ ಕಾಂಗ್ರೆಸಿಗೆ ಮೀಸಲಾಗಿದ್ದ ಜಾತಿವಾರು ಹಂಚಿಕೆ ಈಗ ಭಾರತೀಯ ಜನತಾ ಪಕ್ಷದ ಪಾಲಾಗಿದೆ. ಅಲ್ಲೀಗ ಭಾರತೀಯರೂ ಇಲ್ಲ; ಹಿಂದೂಗಳೂ ಇಲ್ಲ. (ಮನುಷ್ಯರು ಹೇಗೂ ಅಪರೂಪ!) ದೇಶಭಕ್ತಿಯ ಆಧಾರದಲ್ಲಾಗಲೀ, ಹಿಂದುತ್ವದ ಆಧಾರದಲ್ಲಾಗಲೀ ಆಯ್ಕೆ ಸಲ್ಲುವುದಿಲ್ಲ. ಅಲ್ಲಿರುವುದು ಲಿಂಗಾಯತರು, ಒಕ್ಕಲಿಗರು, ದಲಿತರು ಮತ್ತು ಇನ್ನಿತರ ಜನಾಂಗದವರು. ನಮ್ಮ ಮಾಧ್ಯಮಗಳು ಸಹಜವಾಗಿಯೇ ಈ ಅಧಿಕಾರ ತಂತ್ರದ ಬೆನ್ನು ಹತ್ತಿ ಈ ರಹಸ್ಯಗಳನ್ನೆಲ್ಲ ಬಯಲಿಗೆಳೆಯುತ್ತಾರೆ. ಇದರಿಂದಾಗಿ ಜಾತಿವಾರು ಮಾಹಿತಿಯೂ ಸಿಗುತ್ತದೆ. ಕರ್ನಾಟಕದ ಸಚಿವರಾಗಿ ಈಗ 7 ಮಂದಿ ಲಿಂಗಾಯತರು, 3 ಒಕ್ಕಲಿಗರು, 3 ದಲಿತರು, ತಲಾ ಒಬ್ಬ ಬ್ರಾಹ್ಮಣ, ವಾಲ್ಮೀಕಿ, ಬಿಲ್ಲವ, ಕುರುಬರಿದ್ದಾರೆಂದು ಅಂದಾಜು; ಒಬ್ಬಾಕೆ ಮಹಿಳೆಯಿದ್ದಾರೆ. ಆಕೆ ಒಬ್ಬರೇ ಆಗಿರುವುದರಿಂದ ಆಕೆಯ ಜಾತಿ ಮುಖ್ಯವಾಗಿಲ್ಲ. ಇನ್ನು ಹಿಂದೂ ಮುಸ್ಲಿಮ್, ಕ್ರೈಸ್ತ ಎಂದು ವಿಭಜಿಸಲು ಸಾಧ್ಯವೇ ಇಲ್ಲ. ಏಕೆಂದರೆ ಮುಸ್ಲಿಮ್ ಅಥವಾ ಕ್ರೈಸ್ತರಿಗೆ ಪ್ರಾತಿನಿಧ್ಯವಿಲ್ಲ. ಇಂತಹ ವಾತಾವರಣದಲ್ಲಿ ಮನುಷ್ಯರೆಷ್ಟಿದ್ದಾರೆಂದು ಹುಡುಕುವುದು ಮೂರ್ಖತನ. ಅದು ಮಾನದಂಡವೇ ಆಗಿರಲಿಲ್ಲ!

ಯೋಗ್ಯತೆಯನ್ನಾಧರಿಸಿ ಎಂದೂ ದೇಶ-ರಾಜ್ಯಗಳ ರಾಜಕಾರಣ ಕೆಲಸಮಾಡುವುದಿಲ್ಲ. ಅಧಿಕಾರದ ಹಾದಿಯನ್ನು ಸುಗಮಗೊಳಿಸಿದವರು, ಕುಟಿಲತೆಯಲ್ಲಿ ಕೌಟಿಲ್ಯನನ್ನೂ ಮೀರಿಸಿದವರು, ರಾಜಕಾರಣದಲ್ಲಿ ಯೋಗ್ಯರಾಗುತ್ತಾರೆ. (ಯೋಗ್ಯರು ಅನಿರೀಕ್ಷಿತವಾಗಿ, ಆಕಸ್ಮಿಕವಾಗಿ ಆಯ್ಕೆಯಾಗುವುದೂ ಉಂಟು!) ಮಾಮೂಲು ರಾಜಕೀಯ ತಂತ್ರದಂತೆ ಇಲ್ಲಿ ಸಲ್ಲದವರಿಗಾಗಿ ರಾಜ್ಯದ ಯೋಜನಾ ಆಯೋಗ, ನಿಗಮ, ಮಂಡಳಿ ಇವುಗಳ ಸ್ಥಾನಗಳು ಕಾದಿರುತ್ತವೆ. ಖಾತೆ ಹಂಚಿಕೆಯಲ್ಲಿ ಲಾಟರಿ ವ್ಯವಸ್ಥೆಯೂ ಸರಿಯೆನ್ನಿಸಬಹುದು. ಅಪರೂಪಕ್ಕೆಂಬಂತೆ ಕೆಲವು ಸಚಿವರಿಗೆ ಯೋಗ್ಯತೆಗನುಸಾರವಾಗಿ ಅಥವಾ ಅವರ ಸ್ವಭಾವಕ್ಕೆ ಹೊಂದುವ ಖಾತೆಗಳು ಸಿಗುವುದುಂಟು.

ಈಗ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಹಬ್ಬಿದ ಈ ದೇಶದೆಲ್ಲೆಡೆ ಅಶಾಂತಿ ತಾಂಡವವಾಡುತ್ತಿದೆಯೆಂದರೆ ನಂಬುವ ಮಂದಿ ಕಡಿಮೆ. ತುರ್ತುಸ್ಥಿತಿಯಿಲ್ಲದೆಯೇ ಸಾವಿರಾರು ಮಂದಿ ರಾಜಕಾರಣದ ಬೇಗೆಗೆ ಸಿಕ್ಕಿ ಬಂಧನದಲ್ಲಿದ್ದಾರೆ. ಅದು ನಮ್ಮ ಜನರಿಗೆ ಒಂದು ವಿಚಾರವೇ ಅಲ್ಲ. ವ್ಯಂಗ್ಯಚಿತ್ರಕಾರರೂ ರಕ್ಷಣೆಗಾಗಿ ಬೇಡುವ ಸ್ಥಿತಿ ಬಂದಿದೆಯೆಂದಾದರೆ ನೇರ ಪ್ರಶ್ನೆಮಾಡುವವರ ಗತಿ ಏನಾಗಬೇಕು? ಪ್ರಶಸ್ತಿ ಗಿಟ್ಟಿಸಿದ ಮರುದಿನವೇ ಲಂಚ ಪಡೆಯುವಾಗ ಸಿಕ್ಕಿಹಾಕಿಕೊಂಡ ಪೊಲೀಸು, ಗರ್ಭಿಣಿಗೆ ಒದೆಯುವ ಮಹಿಳಾ ಪೊಲೀಸು, ಸಂತ್ರಸ್ತರಿಗಾಗಿ ಸಂಗ್ರಹಿಸಿದ ಹಣವನ್ನು ಕದ್ದೊಯ್ಯುವ ಅಧಿಕಾರಿಗಳು, ಸರಕಾರೀ ಸವಲತ್ತನ್ನು ಹೇಗೆ ಬೇಕಾದರೂ ಬಾಗಿಸಿ ಪಡೆಯುವ ಪ್ರತಿಷ್ಠಿತರು, ಆರ್ಥಿಕ ಹಿನ್ನಡೆಯನ್ನು ಒಪ್ಪಿಕೊಳ್ಳದೆ ಜುಟ್ಟಿಗೆ ಮಲ್ಲಿಗೆ ಮುಡಿಯುವ ನಾಯಕರು- ಹೀಗೆ ಸ್ವತಂತ್ರ ಭಾರತದ ಸಮಾಜವು ಧರ್ಮದ ಹೆಸರಿನಲ್ಲಿ ಬೆತ್ತಲೆ ನಿಂತಿರುವಾಗ ಸರಕಾರವನ್ನು ಯಾರು ಹೇಗೆ ನಡೆಸಿದರೂ ಸರಿಯೆ. ಕದಿಯುವುದು ತಪ್ಪಲ್ಲ, ಸಿಕ್ಕಿಬೀಳುವುದು ಮಾತ್ರ ತಪ್ಪಾಗಿರುವ ವರ್ತಮಾನದ ಸಮಾಜದಲ್ಲಿ ಸುಮ್ಮನಿರುವುದನ್ನು ಭಗವಂತ ಕಲಿಸಬೇಕು.
ಇಂತಹ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ತನ್ನ ಪ್ರಾಕೃತಿಕ ಮತ್ತು ಮನುಷ್ಯ ವೈಪರೀತ್ಯಗಳನ್ನು ಹೇಗೆ ನಿಭಾಯಿಸುತ್ತದೆಯೆಂದು ಕಾದು ನೋಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)