varthabharthi


ನಿಮ್ಮ ಅಂಕಣ

ಭಾರತದಲ್ಲಿ ಸಹಜ ಕನಿಷ್ಠ ವೇತನ ಎಷ್ಟೆಂದು ನಿಗದಿಯಾದೀತೇ?

ವಾರ್ತಾ ಭಾರತಿ : 22 Aug, 2019
ನಿತ್ಯಾ ಸುಬ್ರಮಣ್ಯನ್

ಕಾರ್ಮಿಕ ಸಚಿವಾಲಯ ನೇಮಕ ಮಾಡಿದ್ದ ಸಮಿತಿಯು ಜನವರಿಯಲ್ಲಿ, ಸರಕಾರ ರಾಷ್ಟ್ರೀಯ ಕನಿಷ್ಠ ವೇತನವನ್ನು ದಿನಕ್ಕೆ 375ರೂ. ನಿಗದಿಪಡಿಸಬೇಕು ಎಂಬ ಸಲಹೆ ನೀಡಿತ್ತು. ಇದು ಓರ್ವ ಕಾರ್ಮಿಕ ತನ್ನ ಕುಟುಂಬದ ವೆಚ್ಚ, ಆರೋಗ್ಯ ರಕ್ಷಣೆ ಮತ್ತು ಕೆಲಸದ ಜಾಗದಲ್ಲಿ ಸಮರ್ಥವಾಗಿರಲು ಅಗತ್ಯವಿರುವ ಕನಿಷ್ಠ ಮೊತ್ತವಾಗಿದೆ ಎಂದು ಸಮಿತಿ ತಿಳಿಸಿತ್ತು. ಏಳು ತಿಂಗಳ ನಂತರ ಸರಕಾರ ಸಂಸತ್‌ನಲ್ಲಿ ವೇತನ ಸೂಚಿ ಮಸೂದೆಯನ್ನು ಪರಿಚಯಿಸಿತು. ಈ ಮಸೂದೆಯಲ್ಲಿ ಸರಕಾರ ರಾಷ್ಟ್ರೀಯ ತಳ ಮಟ್ಟದ ವೇತನವನ್ನು ನಿಗದಿಪಡಿಸುವುದಾಗಿ ತಿಳಿಸಿತ್ತು. ತಳಮಟ್ಟದ ವೇತನವೆಂದರೆ, ಕೌಶಲ್ಯ ಮತ್ತು ಕೆಲಸದ ಸ್ವಭಾವವನ್ನು ಪರಿಗಣಿಸದೆ ಕಾನೂನು ಪ್ರಕಾರ ಓರ್ವ ಕಾರ್ಮಿಕನಿಗೆ ನೀಡಲಾಗುವ ಕನಿಷ್ಠ ಮಟ್ಟದ ವೇತನ. ಇದನ್ನು ಕಾರ್ಮಿಕರ ಜೀವನ ಸ್ಥಿತಿ ಮತ್ತು ಅವರು ನೆಲೆಸಿರುವ ಹಾಗೂ ಕೆಲಸ ಮಾಡುತ್ತಿರುವ ಭೌಗೋಳಿಕ ಪ್ರದೇಶದ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ. ಆದರೆ ಈ ಮಸೂದೆಯಲ್ಲಿ ಒಂದು ನಿರ್ದಿಷ್ಟ ಅಂಕೆಯನ್ನು ಉಲ್ಲೇಖಿಸಿಲ್ಲ. ತಾನೇ ರಚಿಸಿದ್ದ ಸಮಿತಿಯ 375 ರೂ. ಕನಿಷ್ಠವೇತನ ಸಲಹೆಯನ್ನು ಯಾಕೆ ಸ್ವೀಕರಿಸಿಲ್ಲ ಎನ್ನುವುದನ್ನು ಕಾರ್ಮಿಕ ಹೋರಾಟಗಾರರು ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ. ಈ ವಿವಾದವು ಒಂದು ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ: ಆರ್ಥಿಕತೆಯಲ್ಲಿ ಹೆಚ್ಚಿನ ಮಟ್ಟದ ಉದ್ಯೋಗವನ್ನು ಖಾತ್ರಿಪಡಿಸುವ ಸಮಯದಲ್ಲಿ ಕಾರ್ಮಿಕರು ಸಾಮಾನ್ಯ ದರ್ಜೆಯ ಜೀವನವನ್ನು ಹೊಂದುವುದನ್ನು ಖಾತರಿಪಡಿಸುವುದು ಎಷ್ಟು ಉತ್ತಮ? ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕನಿಷ್ಠ ವೇತನವನ್ನು ನಿಗದಿಪಡಿಸುವುದು ಒಂದು ಸಮತೋಲನ ಕಾಯುವ ಕಾರ್ಯವಾಗಿದೆ. ಒಂದು ವೇಳೆ ಅತೀಹೆಚ್ಚು ಕನಿಷ್ಠ ವೇತನವನ್ನು ನಿಗದಿಪಡಿಸಿದರೆ ಉದ್ಯೋಗದ ಪ್ರಮಾಣದಲ್ಲಿ ಇಳಿಕೆ ಮಾಡಲಾಗುತ್ತದೆ ಮತ್ತು ಅತ್ಯಂತ ಕಡಿಮೆ ಕನಿಷ್ಠ ವೇತನ ನಿಗದಿಪಡಿಸಿದರೆ ಕಾರ್ಮಿಕರು ತಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಲೂ ಸಾಧ್ಯವಾಗುವುದಿಲ್ಲ. ಇಷ್ಟರವರೆಗೆ ಭಾರತ ಯಾವ ರೀತಿ ಕನಿಷ್ಠ ವೇತನವನ್ನು ನಿಗದಿಪಡಿಸುತ್ತಿತ್ತು? ಭಾರತವು 1948ರಲ್ಲಿ ಕನಿಷ್ಠ ವೇತನ ಕಾಯ್ದೆ ಜಾರಿಯಾದ ಸಮಯದಿಂದ ಕನಿಷ್ಠ ವೇತನವನ್ನು ನಿಗದಿಪಡಿಸುತ್ತಾ ಬಂದಿದೆ. ಆದರೆ ಅವುಗಳು ಗೊಂದಲಕ್ಕೆ ಕಾರಣವಾಗಿವೆ. ಕನಿಷ್ಠ ವೇತನವನ್ನು ನಿಗದಿಪಡಿಸಲು ಸರಕಾರ ನಿಯಮಿತ ಸಮೀಕ್ಷಾ ವಿಧಾನವನ್ನು ಅನುಸರಿಸುತ್ತದೆ. ಇದರ ಪ್ರಕಾರ, ಕೌಶಲ್ಯರಹಿತ ಕಾರ್ಮಿಕರಿಗಾಗಿರುವ 2,000 ಉದ್ಯೋಗಗಳ ಸಮೀಕ್ಷೆ ನಡೆಸಲಾಗುತ್ತದೆ. ರಾಜ್ಯಗಳು ಪ್ರತಿ ಉದ್ಯೋಗಕ್ಕೆ ತಮ್ಮದೇ ಆದ ಕನಿಷ್ಠ ವೇತನವನ್ನು ನಿಗದಿಪಡಿಸುತ್ತದೆ ಮತ್ತು ಇದು ಕೆಲವೊಮ್ಮ ಕೇಂದ್ರದ ಕನಿಷ್ಠ ವೇತನಕ್ಕಿಂತ ಗಣನೀಯ ವ್ಯತ್ಯಾಸವನ್ನು ಹೊಂದಿರುತ್ತದೆ. ಕೌಶಲ್ಯರಹಿತ ಕಾರ್ಮಿಕರಿಗೆ ರಾಜ್ಯಗಳು ನಿಗದಿಪಡಿಸಿರುವ ಕನಿಷ್ಠ ವೇತನಗಳ ಹಲವು ವಿಭಿನ್ನ ಅಂಕೆಗಳು ಲಭಿಸುತ್ತವೆ. ಕಾರ್ಮಿಕ ಮತ್ತು ಉದ್ಯೋಗ ಸಹಾಯಕ ಸಚಿವ ಸಂತೋಶ್ ಕುಮಾರ್ ಗಂಗ್ವರ್ 2018ರ ಡಿಸೆಂಬರ್‌ನಲ್ಲಿ ಸಂಸತ್‌ಗೆ ನೀಡಿದ ಉತ್ತರದಲ್ಲಿ, ಪುದುಚೇರಿಯಲ್ಲಿ 55ರೂ. ಪ್ರತಿದಿನಕ್ಕೆ ಕನಿಷ್ಠ ವೇತನವಿದ್ದರೆ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 69ರೂ. ಮತ್ತು ಗುಜರಾತ್‌ನಲ್ಲಿ 100ರೂ. ಇದೆ ಎಂದು ತಿಳಿಸಿದ್ದಾರೆ.

 
ತಳಮಟ್ಟದ ವೇತನ ಎಂದರೇನು? 
ರಾಜ್ಯಗಳು ನಿಗದಿಪಡಿಸುವ ಕನಿಷ್ಠ ವೇತನ ಗಣನೀಯವಾಗಿ ವ್ಯತ್ಯಾಸ ಹೊಂದಿರುವ ಕಾರಣ 1996ರಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ತಳಮಟ್ಟದ ವೇತನ ಪರಿಚಯಿಸಿತು. ಆದರೆ ಇದು ರಾಜ್ಯಗಳಿಗೆ ಕಾನೂನಾತ್ಮಕವಾಗಿ ಅನ್ವಯವಾಗುವುದಿಲ್ಲ. ಆರಂಭದಲ್ಲಿ ತಳಮಟ್ಟದ ವೇತನ 35ರೂ. ಎಂದು ನಿಗದಿಯಾಗಿದ್ದರೆ ಕಾಲಕಾಲಕ್ಕೆ ನಡೆದ ಪರಿಷ್ಕಣೆಗಳ ನಂತರ 2017ರಲ್ಲಿ ಈ ಮೊತ್ತ 176ರೂ.ಗೆ ತಲುಪಿತು. ಈ ಮೊತ್ತಕ್ಕೆ ಕೇವಲ 2ರೂ. ಸೇರಿಸಿ ಅದನ್ನು 178ರೂ.ಗೆ ಏರಿಸುವ ಗಂಗ್ವರ್ ಅವರ ಹೇಳಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಬಹುತೇಕ ರಾಜ್ಯಗಳಲ್ಲಿ ಕನಿಷ್ಠ ವೇತನ ತಳಮಟ್ಟದ ವೇತನ 178ರೂ.ಗಿಂತ ಹೆಚ್ಚಾಗಿದ್ದು ತಜ್ಞರ ಸಮಿತಿ ಸಲಹೆ ನೀಡಿರುವ ಕನಿಷ್ಠ ವೇತನ 375ರೂ.ಗಿಂತ ಕಡಿಮೆಯಿದೆ.
 
ನೂತನ ಕಾನೂನಿನಲ್ಲಿ ಆಗುವ ಬದಲಾವಣೆ ಏನು? 
44 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸೂಚಿಗಳ ಅಡಿಯಲ್ಲಿ ತರುವ ಮೂಲಕ 2015ರಲ್ಲಿ ಮೋದಿ ಸರಕಾರ ಈ ಕಾನೂನುಗಳನ್ನು ಸರಳಗೊಳಿಸಲು ನಿರ್ಧರಿಸಿತು. ಇವುಗಳಲ್ಲಿ ಒಂದಾಗಿರುವ ವೇತನಗಳ ಸೂಚಿ, ಕನಿಷ್ಠ ವೇತನ ಕಾಯ್ದೆ, 1948 ಸೇರಿದಂತೆ ನಾಲ್ಕು ವೇತನ ಕಾಯ್ದೆಗಳನ್ನು ಒಳಗೊಂಡಿದೆ. ಸದ್ಯ ಸಂಸತ್‌ನಲ್ಲಿ ಅಂಗೀಕಾರಗೊಂಡಿರುವ ವೇತನಗಳ ಸೂಚಿ ಕಾಯ್ದೆ ರಾಷ್ಟ್ರೀಯ ತಳಮಟ್ಟದ ವೇತನವನ್ನು ಖಾತ್ರಿಪಡಿಸುತ್ತದೆ ಮತ್ತು ಅದಕ್ಕೆ ಶಾಸನಾತ್ಮಕ ರಕ್ಷಣೆಯೂ ಇದೆ. 

ತಜ್ಞರ ಸಮಿತಿಯ ಸಲಹೆ ಏನು?
ಕಾರ್ಮಿಕ ಸಚಿವಾಲಯ ನೇಮಕ ಮಾಡಿದ್ದ ಸಮಿತಿಯು ಜನವರಿಯಲ್ಲಿ, ಸರಕಾರ ರಾಷ್ಟ್ರೀಯ ಕನಿಷ್ಠ ವೇತನವನ್ನು ದಿನಕ್ಕೆ 375ರೂ. ನಿಗದಿಪಡಿಸಬೇಕು ಎಂಬ ಸಲಹೆ ನೀಡಿತ್ತು. ಈ ಅಂಕೆಯನ್ನು, 2018ದ ದರಗಳಿಗೆ ಸರಿಹೊಂದಿಸಿದ ಗ್ರಾಹಕರ ದರ ಸೂಚಿಯಲ್ಲಿ ಆಹಾರ ಮತ್ತು ಆಹಾರೇತರ ವೆಚ್ಚದ ಆಧಾರದಲ್ಲಿ ನಿಗದಿಪಡಿಸಲಾಗಿತ್ತು. ರಾಷ್ಟ್ರೀಯ ಕನಿಷ್ಠ ವೇತನಕ್ಕೂ ಪರ್ಯಾಯವನ್ನು ತರಲು ಸಮಿತಿ ಸಲಹೆ ನೀಡಿತ್ತು. ಅದರಂತೆ, ಒಂದು ಪ್ರದೇಶದಲ್ಲಿ ಲಭ್ಯವಿರುವ ಉದ್ಯೋಗ ಮತ್ತು ಜನರ ಜೀವನ ವೆಚ್ಚವನ್ನು ಆಧರಿಸಿ ಪ್ರತಿಯೊಂದಕ್ಕೂ ಭಿನ್ನ ಪ್ರಾದೇಶಿಕ ಕನಿಷ್ಠ ವೇತನ ಇರುವ ಐದು ಪ್ರದೇಶಗಳನ್ನಾಗಿ ವಿಂಗಡಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.

ನೂತನ ತಳಮಟ್ಟದ ವೇತನವನ್ನು ಹೇಗೆ ನಿಗದಿಪಡಿಸಲಾಗುವುದು? 
ವೇತನಗಳ ಕಾನೂನು ಸೂಚಿಯಲ್ಲಿ ಸರಕಾರ ಸಮಿತಿ ನೀಡಿದ ಸಲಹೆಗಳನ್ನು ಅಳವಡಿಸಿಕೊಂಡಿಲ್ಲ. ತಳಮಟ್ಟದ ವೇತನವನ್ನು ವ್ಯಾಪಾರ ಸಂಘಟನೆ, ಕಾರ್ಮಿಕ ಸಂಘಟನೆ ಮತ್ತು ರಾಜ್ಯ ಸರಕಾರಗಳ ಪ್ರತಿನಿಧಿಗಳ ಸಮಿತಿ ನಿರ್ಧರಿಸಲಿದೆ ಎಂದು ಗಂಗ್ವರ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಸದ್ಯದ ವೇತನ ಮಟ್ಟಕ್ಕಿಂತ ಅಧಿಕ ತಳಮಟ್ಟದ ವೇತನ ನಿಗದಿಪಡಿಸಿದರೆ ಉದ್ಯೋಗ ಕಡಿತ ಉಂಟಾಗುವ ಸಂಭವವಿದ್ದು ಇದರಿಂದ ಕಾರ್ಮಿಕರಿಗೆ ತೊಂದರೆಯಾಗುತ್ತದೆ ಎಂದು ಕೆಲವರು ಅಭಿಪ್ರಾಯಿಸಿದ್ದರೆ, ಸಮಿತಿ ಸಲಹೆ ನೀಡಿರುವ 375ರೂ.ಗಿಂತಲೂ ಅಧಿಕ ತಳಮಟ್ಟದ ವೇತನ ನಿಗದಿಪಡಿಸಬೇಕು ಎಂದು ವ್ಯಾಪಾರ ಸಂಘಟನೆಗಳು ಆಗ್ರಹಿಸಿವೆ. 600ರೂ./ದಿನ ಅಥವಾ ಮಾಸಿಕ 18,000ರೂ. ನಿಗದಿಪಡಿಸಬೇಕೆನ್ನುವುದು ಈ ಸಂಘಟನೆಗಳ ಆಗ್ರಹವಾಗಿದೆ. 

ನೂತನ ಕಾನೂನು ಜಾರಿಗೆ ತರುವುದು ಸುಲಭವೇ? 
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನ ಸಹಾಯಕ ಉಪನ್ಯಾಸಕಿ ವಿದ್ಯಾ ಸೌಂದರ್‌ರಾಜನ್ ಪ್ರಕಾರ, ಕನಿಷ್ಠ ವೇತನದ ಪರಿಣಾಮ ಬೀರುವಿಕೆ ಕೇವಲ ವೇತನದ ಮೇಲೆ ಅವಲಂಬಿತವಾಗಿಲ್ಲ ಬದಲಾಗಿ ಅದರ ಜಾರಿಯ ಮೇಲೂ ಅವಲಂಬಿಸಿದೆ. ಆಕೆ ಹೇಳುವಂತೆ, ಕನಿಷ್ಠ ವೇತನದ ಕಳಪೆ ಅನುಷ್ಠಾನದಿಂದ ಉದ್ಯಮಿಗಳು ಕಾರ್ಮಿಕರಿಗೆ ಕಾನೂನುಬಾಹಿರವಾಗಿ ಅತ್ಯಂತ ಕಡಿಮೆ ವೇತನವನ್ನು ನೀಡುವ ಸಾಧ್ಯತೆಯಿರುವ ಕಾರಣ ಅದು ನಿಷ್ಪ್ರಯೋಜಕವಾಗುತ್ತದೆ. ಭಾರತದಲ್ಲಿ ಬೃಹತ್ ಅನೌಪಚಾರಿಕ ಕ್ಷೇತ್ರದ ಕಾರಣ ಕನಿಷ್ಠ ವೇತನ ಜಾರಿ ಭಾಗಶಃ ದುರ್ಬಲವಾಗಿದೆ. 2009-10ರ ಅಂದಾಜಿನ ಪ್ರಕಾರ, ಕೇವಲ ಶೇ.66 ಕಾರ್ಮಿಕರು ಕನಿಷ್ಠ ವೇತನ ಕಾನೂನಿನಡಿ ಬರುತ್ತಾರೆ. ಕಾರ್ಮಿಕ ಕಾನೂನುಗಳನ್ನು ಸರಳೀಕರಣಗೊಳಿಸುವುದರಿಂದ ಅದರ ಅನುಸರಣೆಯನ್ನು ಉತ್ತಮಗೊಳಿಸಬಹುದಾಗಿದೆ ಎಂದು ಸರಕಾರ ತಿಳಿಸಿದೆ. ಆದರೆ ಹೆಚ್ಚಿನ ಕಾರ್ಮಿಕರನ್ನು ಕನಿಷ್ಠ ವೇತನದಡಿ ತರಲು ನೂತನ ಕಾನೂನು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಅನುಷ್ಠಾನ ಹೇಗೆ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಇಲ್ಲ.

ಕೃಪೆ: scroll.in 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)