varthabharthi

ರಾಷ್ಟ್ರೀಯ

ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಆ.26ರ ತನಕ ಸಿಬಿಐ ವಶಕ್ಕೆ

ವಾರ್ತಾ ಭಾರತಿ : 22 Aug, 2019

ಹೊಸದಿಲ್ಲಿ, ಆ.22: ಐಎನ್‌ಎಕ್ಸ್ ಮಾಧ್ಯಮ ಪ್ರಕರಣದಲ್ಲಿ ಹಣ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಬುಧವಾರ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಯಿಂದ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಮ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರದವರೆಗೆ ಸಿಬಿಐ ಕಸ್ಟಡಿ ವಿಧಿಸಿದೆ. ವಿಚಾರಣೆಯ ವೇಳೆ ಚಿದಂಬರಂ ಪರ ವಕೀಲರ ವಾದ ಮತ್ತು ಮಾಜಿ ಸಚಿವರು ಸಲ್ಲಿಸಿರುವ ವಿಶೇಷ ಮನವಿಯನ್ನು ತಳ್ಳಿಹಾಕಿರುವ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್, ಎಲ್ಲ ವಿಷಯಗಳನ್ನು ಪರಿಗಣಿಸಿದಾಗ ಕಸ್ಟಡಿಗೆ ಒಪ್ಪಿಸುವುದು ಸಮರ್ಥನೀಯ ಎಂದು ತಿಳಿಸಿದ್ದಾರೆ.

ಮಾಜಿ ಕೇಂದ್ರ ವಿತ್ತ ಸಚಿವರಾಗಿರುವ ಪಿ.ಚಿದಂಬರಂ ಅವರು ತನಿಖೆಗೆ ಸಹಿಕರಿಸುತ್ತಿಲ್ಲ ಎಂದು ಆರೋಪಿಸಿದ್ದ ತನಿಖಾಧಿಕಾರಿಗಳು ಅವರನ್ನು ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯದಲ್ಲಿ ಕೋರಿದ್ದರು. ಸದ್ಯ ನ್ಯಾಯಾಲಯ ನಾಲ್ಕು ದಿನಗಳ ಮಟ್ಟಿಗೆ ಕಾಂಗ್ರೆಸ್ ನಾಯಕನಿಗೆ ಕಸ್ಟಡಿ ನೀಡಿದೆ. ಅಪರಾಧದ ಅಗಾಧತೆ ಮತ್ತು ಪರಿಣಾಮವನ್ನು ಪರಿಗಣಿಸುವಂತೆ ತಿಳಿಸಿದ್ದ ಸರಕಾರದ ಅತ್ಯುನ್ನತ ನ್ಯಾಯವಾದಿ ತುಷಾರ್ ಮೆಹ್ತಾ, ದಿಲ್ಲಿ ಉಚ್ಚ ನ್ಯಾಯಾಲಯ ಚಿದಂಬರಂ ಅವರು ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಮವಿಯನ್ನು ತಳ್ಳಿಹಾಕಿರುವುದನ್ನು ಬೆಟ್ಟು ಮಾಡಿದ್ದರು.

ಇಷ್ಟೊಂದು ಬೃಹತ್ ಮೊತ್ತದ ಹಣ ವಂಚನೆಯನ್ನು ಹೊಂದಿರುವ ಇಂತಹ ಗಂಭೀರ ಹಣ ವಂಚನೆ ಅಪರಾಧವನ್ನು ಬಗೆಹರಿಸಲು ಕಸ್ಟಡಿ ವಿಚಾರಣೆ ಅತ್ಯಗತ್ಯವಾಗಿದೆ ಎಂದು ಸಿಬಿಐ ವಾದಿಸಿತ್ತು.

ತನ್ನ ಕಕ್ಷೀದಾರರಿಗೆ ಕೇವಲ ಒಂದು ಬಾರಿ ವಿಚಾರಣೆಗೆ ಆಗಮಿಸುವಂತೆ ಸಮನ್ಸ್ ನೀಡಲಾಗಿತ್ತು ಅದಕ್ಕೆ ಅವರು ಸಹಕರಿಸಿದ್ದರು. ಹಾಗಾಗಿ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳುತ್ತಿರುವುದಾದರೂ ಯಾಕೆ ಎಂದು ಚಿದಂಬರಂ ಪರ ವಕೀಲ ಕಪಿಲ್ ಸಿಬಲ್ ವಾದಿಸಿದರು. ಚಿದಂಬರಂ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ವಿಶೇಷ ಮನವಿಯಲ್ಲಿ, ತನ್ನನ್ನು ಜೂನ್ 6, 2018ರಂದು ಸಿಬಿಐ ವಿಚಾರಣೆಗೆ ಕರೆದಾಗ ಕೇಳಲಾಗಿದ್ದ ಯಾವುದೇ ಪ್ರಶ್ನೆಗೆ ನಾನು ಉತ್ತರ ನೀಡಲು ನಿರಾಕರಿಸಿರಲಿಲ್ಲ ಎಂದು ತಿಳಿಸಿದ್ದರು ಮತ್ತು ಅದಕ್ಕೆ ಸಾಕ್ಷಿಯಾಗಿ ವಿಚಾರಣೆಯ ವರದಿಯನ್ನು ಪರಿಶೀಲಿಸುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದ್ದರು. ಚಿದಂಬರಂ ಪರ ಕಾಂಗ್ರೆಸ್‌ನ ಅವರ ಸಹವರ್ತಿಗಳಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಹಾಗೂ ವಿವೇಕ್ ಟಂಕ ವಾದಿಸಿದರು.

ಬುಧವಾರ ರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮಾಜಿ ಕೇಂದ್ರ ಸಚಿವರ ದಿಲ್ಲಿಯಲ್ಲಿರುವ ನಿವಾಸಕ್ಕೆ ಪ್ರವೇಶಿಸಲು ವಿಫಲವಾದ ಸಿಬಿಐ ಅಧಿಕಾರಿಗಳ ತಂಡ ನಂತರ ಬಂಗಲೆಯ ಆವರಣಗೋಡೆಯನ್ನು ಏರಿ ಚಿದಂಬರಂ ಅವರನ್ನು ವಶಕ್ಕೆ ಪಡೆದುಕೊಂಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)