varthabharthi

ಸಂಪಾದಕೀಯ

ಜನಸಂಖ್ಯಾ ನಿಯಂತ್ರಣ: ಮೋದಿ ಸರಕಾರದ ಹೊಸ ಗುಮ್ಮ!

ವಾರ್ತಾ ಭಾರತಿ : 23 Aug, 2019

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಸ್ವಾತಂತ್ರೋತ್ಸವ ದಿನಾಚರಣೆಯಂದು ದಿಲ್ಲಿಯ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಜನರು ಬಹಳಷ್ಟನ್ನು ನಿರೀಕ್ಷಿಸಿದ್ದರು. ಮುಖ್ಯವಾಗಿ ದೇಶ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ದಿನಗಳಲ್ಲಿ ಅವರಿಂದ ಸಾಂತ್ವನದ ಮಾತುಗಳು ಹೊರಬೀಳಬಹುದು ಎಂದು ಭಾವಿಸಿದ್ದರು. ಆದರೆ ಅವರು ಸೇನೆಯ ಸುಧಾರಣೆ, ಏಕ ಕಾಲದಲ್ಲಿ ಚುನಾವಣೆ, ಜನಸಂಖ್ಯಾ ನಿಯಂತ್ರಣ ಮೊದಲಾದ ಭಾವನಾತ್ಮಕ ವಿಷಯಗಳಿಗೆ ಆದ್ಯತೆಯನ್ನು ನೀಡಿ, ದೇಶದ ವಾಸ್ತವಗಳಿಗೆ ಮತ್ತೆ ಬೆನ್ನು ಹಾಕಿದರು. ಅವರ ಭಾಷಣದಿಂದ ಒಂದಂತೂ ಸ್ಪಷ್ಟ. ಈಗಾಗಲೇ ತ್ರಿವಳಿ ತಲಾಖ್, ಕಾಶ್ಮೀರ ಮೊದಲಾದ ವಿಷಯಗಳ ಮೂಲಕ ದೇಶದ ಆರ್ಥಿಕ ಅರಾಜಕತೆಯನ್ನು ಮರೆ ಮಾಚಿದಂತೆಯೇ, ಮುಂದೆ ಜನಸಂಖ್ಯಾ ನಿಯಂತ್ರಣದ ವಿಷಯವನ್ನು ಮುಂದಿಟ್ಟು ಜನರನ್ನು ಯಾಮಾರಿಸಲಿದ್ದಾರೆ. ಈಗಾಗಲೇ ಅವರ ‘ಜನಸಂಖ್ಯಾ ನಿಯಂತ್ರಣ’ ಕುರಿತ ಮಾತುಗಳನ್ನು, ಮತ್ತೆ ದೇಶದ ಮುಸ್ಲಿಮರ ವಿರುದ್ಧ ಬಳಸುವುದಕ್ಕೆ ರಾಜಕಾರಣಿಗಳು ಸಿದ್ಧತೆ ನಡೆಸಿದ್ದಾರೆ.

ದೇಶದ ಅಭಿವೃದ್ಧಿ ಹಿಂದಕ್ಕೆ ಚಲಿಸುತ್ತಿರುವುದರ ಕುರಿತಂತೆ ಕೇಳಿ ಬರುತ್ತಿರುವ ಟೀಕೆಗಳನ್ನು ‘ಜನಸಂಖ್ಯಾ ಸ್ಫೋಟ’ ಎಂಬ ಹಳೆಯ ಗುಮ್ಮನನ್ನು ಮುಂದಿಟ್ಟು ಎದುರಿಸಲು ಮೋದಿ ಸರಕಾರ ಮುಂದಾಗಿದೆ. ಜನಸಂಖ್ಯಾ ನಿಯಂತ್ರಣ ಕಾಯ್ದೆ ತಂದರೆ ದೇಶ ಅಭಿವೃದ್ಧಿಯ ಕಡೆ ಸಾಗುತ್ತದೆ ಎಂಬ ಅರ್ಥದ ಅವರ ಮಾತುಗಳು, ಮತ್ತೆ ಈ ದೇಶದ ಮುಸ್ಲಿಮರನ್ನು ಗುರಿಯಾಗಿಸುವುದೇ ಆಗಿದೆ. ಚೀನಾದಂತಹ ಚೀನಾವೇ ಜನಸಂಖ್ಯಾ ನಿಯಂತ್ರಣದ ಕುರಿತಂತೆ ತನ್ನ ನೀತಿಗಳನ್ನು ಬದಲಿಸಿದೆ. ತನ್ನ ಕುಟುಂಬ ಯೋಜನೆ ನೀತಿಯಿಂದಾಗಿ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗುತ್ತಾ, ಯುವಕರ ಸಂಖ್ಯೆ ಇಳಿಮುಖವಾಗುವುದನ್ನು ಅದು ಗಮನಿಸಿ ನೀತಿಯಲ್ಲಿ ಬದಲಾವಣೆಯನ್ನು ತಂದಿತು. ಜನಸಂಖ್ಯೆಯೂ ಒಂದು ದೇಶದ ಸಂಪನ್ಮೂಲ ಎನ್ನುವುದನ್ನು ಅದು ತಡವಾಗಿಯಾದರೂ ಅರ್ಥ ಮಾಡಿಕೊಂಡಿದೆ. ಸದ್ಯಕ್ಕೆ ಭಾರತದಲ್ಲಿರುವ ಬಡತನ, ಹಸಿವು ಇತ್ಯಾದಿಗಳಿಗೆ ಜನಸಂಖ್ಯೆಯ ಕಾರಣಕ್ಕಿಂತಲೂ ಸರಕಾರದ ಆಡಳಿತ ನೀತಿಯೇ ಕಾರಣ. ತನ್ನ ತಪ್ಪುಗಳನ್ನು ಮುಚ್ಚಿ ಹಾಕಿ ಜನರ ಗಮನವನ್ನು ಬೇರೆಡೆಗೆ ಸೆಳೆವುದಕ್ಕಾಗಿ ಮೋದಿ ತಮ್ಮ ಭಾಷಣದಲ್ಲಿ ಜನಸಂಖ್ಯಾನಿಯಂತ್ರಣಕ್ಕೆ ಆದ್ಯತೆ ನೀಡಿದರು. ಈ ಹಿಂದೆ ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ಹೇರಿದಾಗಲೂ, ‘ಜನಸಂಖ್ಯಾ ನಿಯಂತ್ರಣ’ ವಿಷಯ ಬೀದಿಗೆ ಬಂದಿತ್ತು ಎನ್ನುವುದನ್ನು ನೆನಪಿಸಬೇಕಾಗಿದೆ. ಮೋದಿ ನೇತೃತ್ವದ ಸರಕಾರ ‘ಅಘೋಷಿತ ತುರ್ತುಪರಿಸ್ಥಿತಿಯ’ ಸಂದರ್ಭದಲ್ಲಿ ಅದು ಮತ್ತೆ ಚರ್ಚೆಗೆ ಬಂದಿರುವುದು ಆಕಸ್ಮಿಕವಲ್ಲ.

ಈ ವರ್ಷದ ಜುಲೈ 12ರಂದು ಬಿಜೆಪಿಯ ಸಂಸದರಾದ ರಾಕೇಶ್ ಸಿನ್ಹಾ ‘2019ರ ಜನಸಂಖ್ಯಾ ನಿಯಂತ್ರಣ ವಿಧೇಯಕ’ವನ್ನು ಮಂಡಿಸಿದ್ದರು. ಎರಡಕ್ಕಿಂತ ಅಧಿಕ ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಚುನಾಯಿತ ಪ್ರತಿನಿಧಿಯಾಗುವುದನ್ನು ನಿಷೇಧಿಸಬೇಕು, ಅವರಿಗೆ ಆರ್ಥಿಕ ಸವಲತ್ತುಗಳ್ನು ನಿರಾಕರಿಸಬೇಕು ಮತ್ತು ಸಬ್ಸಿಡಿ ಹಾಗೂ ಪಡಿತರ ಧಾನ್ಯಗಳ ವಿತರಣೆಯ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎಂದು ವಿಧೇಯಕದಲ್ಲಿ ಆಗ್ರಹಿಸಲಾಗಿತ್ತು ಎಂಬುದನ್ನು ಈ ಸಂದರ್ಭದಲ್ಲಿ ಗಮನಿಸಬೇಕು. ಇಷ್ಟಕ್ಕೂ ಸರಕಾರ ಆತಂಕ ಪಡುವಂತಹ ವಾತಾವರಣ ದೇಶದಲ್ಲಿ ಇದೆಯೇ? ಕಳೆದ ಒಂದು ದಶಕದಲ್ಲಿ ಭಾರತದ ಜನಸಂಖ್ಯೆಯು 17.64 ಶೇಕಡದಷ್ಟು ಹೆಚ್ಚಿದೆ. ಇದೇ ದಶಕದಲ್ಲಿ ಚೀನಾದ ಜನಸಂಖ್ಯಾ ಬೆಳವಣಿಗೆಯ ಪ್ರಮಾಣವು 5.43 ಶೇಕಡ ಆಗಿತ್ತು. ಆದರೆ ಕಳೆದ ದಶಕದಲ್ಲಿ ಭಾರತದಲ್ಲಿ 1911-1921ರ ಅವಧಿಯ ಬಳಿಕ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಜನಸಂಖ್ಯೆ ಏರಿಕೆಯಾಗಿತ್ತು. ಭಾರತದ ಜನಸಂಖ್ಯೆ ಹೆಚ್ಚುತ್ತಾ ಬಂದಿದೆಯಾದರೂ ಜನಸಂಖ್ಯಾ ಪ್ರಮಾಣದ ಹೆಚ್ಚಳದ ವೇಗವು ಕುಂಠಿತವಾಗುತ್ತಾ ಬಂದಿದೆ. ಇತ್ತೀಚಿನ ಅಂಕಿಅಂಶಗಳು ಭಾರತದಲ್ಲಿ ಜನಸಂಖ್ಯಾ ಹೆಚ್ಚಳದ ದರವು ಇಳಿಕೆಯತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ. ಮಹಿಳೆಯೊಬ್ಬಳು ತನ್ನ ಜೀವಿತಾ ವಧಿಯಲ್ಲಿ ಪಡೆಯಬಹುದಾದ ಮಕ್ಕಳ ಸಂಖ್ಯೆಯ ಪ್ರಮಾಣವು 2001ರಲ್ಲಿ 3.1ರಷ್ಟಿದ್ದರೆ, 2011ರಲ್ಲಿ ಅದು 2.2ಕ್ಕಿಳಿದಿದೆ.

   ಅತ್ಯಧಿಕ ಜನಸಂಖ್ಯೆಯಿರುವ ರಾಜ್ಯವಾದ ಉತ್ತರಪ್ರದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಆ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.19ರಷ್ಟಿದೆ. ಆ ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಫಲವಂತಿಕೆ ದರದ ಅಂತರವು ಕಡಿಮೆಯಾಗುತ್ತಾ ಬರತೊಡಗಿದೆ. ಉತ್ತರಪ್ರದೇಶದಲ್ಲಿ ಒಟ್ಟು ಫಲವಂತಿಕೆ ದರವು (ಟಿಎಫ್‌ಆರ್) 2.74. ಈ ಪೈಕಿ ಹಿಂದೂ ಮಹಿಳೆಯರ ಟಿಎಫ್‌ಆರ್ 2.67 ಆಗಿದೆ. ಇದು ದಶಕದ ಹಿಂದೆ ಇದ್ದ ಪ್ರತಿ ಹಿಂದೂ ಮಹಿಳೆಯ ಒಟ್ಟು ಫಲವಂತಿಕೆ ದರಕ್ಕಿಂತ 1.6 ರಷ್ಟು ಕುಸಿತವನ್ನು ಕಂಡಿದೆ. ಅದೇ ರೀತಿ ಮುಸ್ಲಿಂ ಮಹಿಳೆಯ ಫಲವಂತಿಕೆ ದರವು 3.10 ಆಗಿದ್ದು, ದಶಕದ ಹಿಂದೆ ಇದ್ದುದಕ್ಕಿಂತ 1.23ರಷ್ಟು ಕಡಿಮೆಯಾಗಿದೆ.

 ಶೇ. 17ರಷ್ಟು ಮುಸ್ಲಿಮರಿರುವ ಬಿಹಾರದಲ್ಲಿ ಟಿಎಫ್‌ಆರ್ 3.41 ಆಗಿದೆ. ಇಲ್ಲಿ ಹಿಂದೂ ಮಹಿಳೆಯ ಟಿಎಫ್‌ಆರ್ ರಾಜ್ಯದ ಸರಾಸರಿಗಿಂತ ಕಡಿಮೆಯಾಗಿದ್ದರೆ, ಮುಸ್ಲಿಂ ಮಹಿಳೆಯ ಒಟ್ಟು ಫಲವಂತಿಕೆ ದರವು 4.11 ಆಗಿದೆ. ಒಂದು ದಶಕದ ಹಿಂದೆ ಹಿಂದೂ, ಮುಸ್ಲಿಂ ಮಹಿಳೆಯರ ಟಿಎಫ್‌ಆರ್ ಕ್ರಮವಾಗಿ 3.86 ಹಾಗೂ 4.81 ಆಗಿತ್ತು.2001ರಲ್ಲಿ ಸರಾಸರಿ ಓರ್ವ ಮುಸ್ಲಿಂ ಮಹಿಳೆಗೆ, ಹಿಂದೂ ಮಹಿಳೆಗಿಂತ ಒಂದು ಮಗು ಅಧಿಕವಾಗಿತ್ತು. 2011ರ ವೇಳೆಗೆ ಅದು 0.6ಕ್ಕೆ ಕುಸಿದಿದೆ. ಹೀಗಾಗಿ ಉಭಯ ಸಮುದಾಯಗಳ ನಡುವಿನ ಫಲವಂತಿಕೆ ದರಗಳ ನಡುವಿನ ಅಂತರವು ಕಿರಿದಾಗುತ್ತಾ ಬಂದಿದೆ.

2015-16ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಸಂದರ್ಭದಲ್ಲಿ ಸಂದರ್ಶಿಸಲ್ಪಟ್ಟ ಮಹಿಳೆಯರು ಪಡೆಯಲು ಬಯಸಿದ್ದ ಸರಾಸರಿ ಫಲವಂತಿಕೆ ದರ(ಮಕ್ಕಳ ಪ್ರಮಾಣವು) 1.8 ಆಗಿತ್ತು. ಅಂದರೆ ಅವರು ಇಬ್ಬರು ಮಕ್ಕಳಿಗಿಂತ ಅಧಿಕ ಮಕ್ಕಳನ್ನು ಹೊಂದಲು ಬಯಸುತ್ತಿಲ್ಲವೆಂದು ಅರ್ಥ. 15-49 ವರ್ಷದೊಳಗಿನ ವಯೋಮಿತಿಯ ಸುಮಾರು 3 ಕೋಟಿ ವಿವಾಹಿತ ಸ್ತ್ರೀಯರು ತಾವು ಗರ್ಭಧಾರಣೆಯನ್ನು ವಿಳಂಬಿಸಲು ಅಥವಾ ತಪ್ಪಿಸಲು ಬಯಸುವುದಾಗಿ ತಿಳಿಸಿದ್ದಾರೆ. ಆದರೆ ಅವರಿಗೆ ಗರ್ಭನಿರೋಧಕಗಳ ಲಭ್ಯತೆಯಿಲ್ಲದಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ.ಜನರು ಫಲವಂತಿಕೆಯ ಬಗ್ಗೆ ತಮ್ಮ ಪ್ರವೃತ್ತಿಯನ್ನು ಬದಲಾಯಿಸಲು ತಾವಾಗಿಯೇ ಇಚ್ಛಿಸುತ್ತಿರುವಾಗ, ಅವರ ಮೇಲೆ ಬಲವಂತವಾಗಿ ಕುಟುಂಬ ಯೋಜನೆಯನ್ನು ಹೇರುವ ಅಗತ್ಯವಿಲ್ಲವೆಂದು ಭಾರತೀಯ ಜನಸಂಖ್ಯಾ ಪ್ರತಿಷ್ಠಾನ ಈಗಾಗಲೇ ಅಭಿಪ್ರಾಯಿಸಿದೆ.

ಇಷ್ಟಕ್ಕೂ ದೇಶದಲ್ಲಿ ಬಡತನ, ಹಸಿವು ಹೆಚ್ಚಾಗುವುದಕ್ಕೆ ಜನಸಂಖ್ಯೆಯ ಹೆಚ್ಚಳ ಕಾರಣವಲ್ಲ, ಸಂಪನ್ಮೂಲಗಳ ಹಂಚುವಿಕೆಯ ಅಸಮತೋಲನ ಕಾರಣ. ಈ ಅಸಮತೋಲನ ಮೋದಿ ಆಡಳಿತದ ಕಳೆದ ಆರು ವರ್ಷಗಳಲ್ಲಿ ತೀವ್ರವಾಗಿದೆ. ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಬೆರಳೆಣಿಕೆಯ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಸರಕಾರದ ನೀತಿ ಸಂಪೂರ್ಣ ಅದಾನಿ, ಅಂಬಾನಿಯಂತಹ ಶ್ರೀಮಂತರನ್ನಷ್ಟೇ ಬೆಳೆಸುತ್ತಿದ್ದೆ. ಬಡವರು ಪಕ್ಕಕ್ಕಿರಲಿ, ಮಧ್ಯಮ ಗಾತ್ರದ ಉದ್ಯಮಿಗಳೇ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿಗೆ ಬಂದು ನಿಂತಿದ್ದಾರೆ. ದೇಶದಲ್ಲಿ ಭಾರೀ ವೇಗದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿವೆ. ಸರಕಾರ ತನ್ನ ಆರ್ಥಿಕ ನೀತಿಯನ್ನು ಬದಲಿಸದೇ, ಜನಸಂಖ್ಯಾ ಸ್ಫೋಟದ ಕಡೆಗೆ ಬೆರಳು ತೋರಿಸುವುದರಿಂದ ದೇಶದ ಜನರ ಬದುಕಿನಲ್ಲಿ ಯಾವ ಬದಲಾವಣೆಯೂ ಆಗಲಾರದು. ಇರುವ ಜನಸಂಖ್ಯೆಯನ್ನು ಸಂಪನ್ಮೂಲವಾಗಿಸಿ ದೇಶದ ಶಕ್ತಿಯಾಗಿಸುವ ಹೊಣೆಗಾರಿಕೆಯನ್ನು ಪ್ರಧಾನಿ ಮೋದಿ ಹೊರಬೇಕಾಗಿದೆ. ಅದಕ್ಕಾಗಿ ಸರಕಾರ ಕಾರ್ಯಯೋಜನೆಯನ್ನು ರೂಪಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)