varthabharthi

ನಿಮ್ಮ ಅಂಕಣ

ಸರಕಾರಿ ಶಾಲೆಯ ಮಕ್ಕಳಿಗೂ ಬೆಲೆ ಬರಲಿ

ವಾರ್ತಾ ಭಾರತಿ : 23 Aug, 2019
-ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ, ಕಲಬುರ್ಗಿ

ಮಾನ್ಯರೇ,

ಪ್ರತಿ ವರ್ಷವೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಎಲ್ಲಾ ಮಕ್ಕಳಿಗಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸುತ್ತದೆ. ಮಕ್ಕಳ ಪ್ರತಿಭೆ ಕೌಶಲವನ್ನು ವಿವಿಧ ಆಯಾಮಗಳಲ್ಲಿ ಅಳತೆಮಾಡಿ ಪ್ರೋತ್ಸಾಹ ನೀಡುವ ಈ ಕ್ರಮ ಸ್ವಾಗತಾರ್ಹವಾಗಿದೆ. ಆದರೆ ಹಲವು ಕುಗ್ರಾಮಗಳಲ್ಲೂ ಸರಕಾರಿ ಶಾಲೆಗಳಿವೆ. ಈ ಶಾಲೆಯ ಮಕ್ಕಳು ಖಾಸಗಿ ಶಾಲೆ ಮತ್ತು ನಗರದ ಮಕ್ಕಳ ಜೊತೆ ಸ್ಪರ್ಧೆ ಮಾಡುವುದು ಕಷ್ಟ ಸಾಧ್ಯವಾಗಿದೆ.

ನಗರ ಹಾಗೂ ಖಾಸಗಿ ಶಾಲೆಯ ಮಕ್ಕಳು ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಕಷ್ಟು ಮುಂಚಿತವಾಗಿ ತಾಲೀಮು ನಡೆಸುತ್ತಾರೆ. ಪೂರಕ ತರಬೇತಿಯನ್ನು ನುರಿತ ಅನುಭವಿಗಳಿಂದ ಪಡೆಯುತ್ತಾರೆ. ಪೋಷಕರು, ಆಡಳಿತ ಮಂಡಳಿಯು ಸಾಕಷ್ಟು ಹಣ ಖರ್ಚು ಮಾಡಲು ಸಿದ್ಧರಿರುತ್ತಾರೆ. ಹೀಗಾಗಿ ಕೆಲವು ವಿಭಾಗಗಳಲ್ಲಿ ಸಾಕಷ್ಟು ತುರುಸಿನ ಸ್ಪರ್ಧೆ ಏರ್ಪಡುತ್ತದೆ. ಖಾಸಗಿ ಶಾಲೆಯವರು ಕ್ಲಸ್ಟರ್, ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಲು ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಲು ಸಿದ್ಧರಿರುವರು. ಹೀಗಾಗಿ ಪ್ರತಿಭಾ ಕಾರಂಜಿಯ ಬಹುತೇಕ ಸ್ಪರ್ಧೆಗಳಲ್ಲಿ ಪ್ರತಿವರ್ಷ ಖಾಸಗಿ ಶಾಲೆಯ ಮಕ್ಕಳೇ ವಿಜೇತರಾಗುತ್ತಾರೆ.

ಸೌಲಭ್ಯ ವಂಚಿತ ಗ್ರಾಮೀಣ ಭಾಗದ ಮಕ್ಕಳಲ್ಲಿ ಪ್ರತಿಭೆ ಇದ್ದರೂ, ಸೂಕ್ತ ತರಬೇತಿ, ಹಣ ಕಾಸಿನ ಕೊರತೆ, ಶಿಕ್ಷಕರು ಪೋಷಕರ ಪ್ರೋತ್ಸಾಹವಿಲ್ಲದೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಬಹುತೇಕ ಗ್ರಾಮೀಣ ಭಾಗದ ಸರಕಾರಿ ಶಾಲೆಯ ಮಕ್ಕಳು ತಾಲೂಕು ಮಟ್ಟದ ಸ್ಪರ್ಧೆಯಲ್ಲಿಯೇ ಸೋಲು ಕಾಣುತ್ತಾರೆ. ಸರಕಾರಿ ಶಾಲೆಯಲ್ಲಿ ಅನುದಾನದ ಕೊರತೆ ಇರುತ್ತದೆ. ಇದಕ್ಕೆ ಅಪವಾದ ವಾಗಿ ಕೆಲವು ಆಸಕ್ತಿದಾಯಕ ಶಿಕ್ಷಕರು ಸ್ವಂತ ಖರ್ಚಿನಿಂದ ಹೆಚ್ಚಿನ ಜವಾಬ್ದಾರಿ ವಹಿಸಿ ಮಕ್ಕಳನ್ನು ಸಿದ್ಧ್ದಗೊಳಿಸುತ್ತಾರೆ. ಸರಕಾರಿ ಶಾಲೆಯಲ್ಲಿ ಲಭ್ಯವಿರುವ ಪುಡಿಗಾಸಿನಿಂದ ಮಾರುಕಟ್ಟೆಯಲ್ಲಿ ಚಿಕ್ಕ ಮೇಕಪ್ ಕಿಟ್ ಕೂಡಾ ಖರೀದಿಸಲು ಸಾಧ್ಯವಿಲ್ಲ.

ಆದ್ದರಿಂದ ಪ್ರತಿಭಾ ಕಾರಂಜಿ ಸರಕಾರಿ ಶಾಲಾ ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ನಡೆಸಬೇಕು. ಅಥವಾ ಇಲ್ಲಿನ ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಪೂರ್ವ ತಯಾರಿಗಾಗಿ ಕನಿಷ್ಠ ಮಟ್ಟದ ವಿಶೇಷ ಅನುದಾನವಾದರೂ ನೀಡಬೇಕು. ಈ ಮೂಲಕ ಸರಕಾರಿ ಶಾಲೆ ಮಕ್ಕಳಿಗೆ ಆಗುವ ಅನ್ಯಾಯವನ್ನು ಹೋಗಲಾಡಿಸಲು ಪ್ರಯತ್ನಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)