varthabharthi

ನಿಮ್ಮ ಅಂಕಣ

ನೂರು ವರ್ಷ ದಾಟಿದ ಮೀಸಲಾತಿಯ ಹೆಜ್ಜೆಗುರುತುಗಳು...

ವಾರ್ತಾ ಭಾರತಿ : 23 Aug, 2019
ಪ್ರದೀಪ್ ಎನ್. ವಿ. ಸಂಶೋಧಕರು, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ, ಮಾನಸ ಗಂಗೋತ್ರಿ, ಮೈಸೂರು.

ಭಾರತದ ಪ್ರಾಚೀನ ಇತಿಹಾಸವನ್ನು ಅಧ್ಯಯನ ಮಾಡಿದರೆ ವರ್ಣಾಶ್ರಮ, ಜಾತಿ ಪದ್ಧತಿ ಹಾಗೂ ಅಸ್ಪಶ್ಯತೆ ಕಾರಣವಾಗಿ ಸಮಾಜದಲ್ಲಿ ವಿವಿಧ ಬಗೆಯ ಶ್ರೇಣೀಕರಣ ಹಾಗೂ ಅಸಮಾನತೆಗಳು ಜಾರಿಗೊಂಡದ್ದು ಕಂಡುಬರುತ್ತದೆ. ಮನುಷ್ಯರ ನಡುವೆ ಸೃಷ್ಟಿಸಲಾದ ಈ ಶ್ರೇಣೀಕರಣವು ಪ್ರಾಚೀನ ಭಾರತೀಯ ಸಮಾಜದಲ್ಲಿ ಜೀವನದ ಮೌಲ್ಯಗಳಾಗುವ ಮೂಲಕ ತಾರತಮ್ಯಗಳು ಹೆಚ್ಚಾದವು. ಈ ತಾರತಮ್ಯಗಳಿಂದ ಮಹಿಳೆಯರು, ಶೂದ್ರರು, ದಲಿತರು ಭೂಮಿ, ಅಕ್ಷರ, ಅಧಿಕಾರಗಳಿಂದ ವಂಚನೆಗೆ ಒಳಗಾದ ಚರಿತ್ರೆ ಕಂಡುಬರುತ್ತದೆ. ಇಡೀ ಭಾರತದಾದ್ಯಂತ ರಾಜರ ಆಳ್ವಿಕೆ ಇದ್ದ ಕಾಲಘಟ್ಟದಲ್ಲಿ ಇಂತಹ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ನೀಡುವ ಸಲುವಾಗಿ ಪ್ರಾತಿನಿಧ್ಯ ಕಲ್ಪಿಸಿರುವುದನ್ನು ಕಾಣಬಹುದು. ಇವರಲ್ಲಿ ಕೊಲ್ಲಾಪುರ ಸಂಸ್ಥಾನ ಛತ್ರಪತಿ ಶಾಹು ಮಹಾರಾಜ್ ಹಾಗೂ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಮುಖರು.

ಶಾಹು ಮಹಾರಾಜರು ತಮ್ಮ ಸಂಸ್ಥಾನದಲ್ಲಿ ಮೇ 06, 1902ರಂದು ಶೂದ್ರರಿಗೆ ಸರಕಾರಿ ನೌಕರಿಯಲ್ಲಿ ಶೇ. 50ರಷ್ಟು ಮೀಸಲಾತಿಯನ್ನು ಜಾರಿಗೆ ತಂದರು. ಒಂದು ದಿನ ಸಾಂಗ್ಲಿಯ ವಕೀಲ ಗಣಪತರಾವ್ ಅಭ್ಯಂಕರ್ ಎಂಬವರು ಮಹಾರಾಜರನ್ನು ಭೇಟಿಯಾಗಿ ಮೀಸಲಾತಿ ಕಾನೂನಿನ ಬಗ್ಗೆ ತಮ್ಮ ಅಸಮ್ಮತಿಯನ್ನು ಸೂಚಿಸುತ್ತಾರೆ. ಅವರ ವಾದವನ್ನು ಶಾಂತವಾಗಿ ಮತ್ತು ಗಂಭೀರವಾಗಿ ಕೇಳುತ್ತಲೇ ಇದ್ದ ಮಹಾರಾಜರು ಆಗ ಯಾವ ವಿವಾದಕ್ಕೂ ಇಳಿಯದೆ ಮೌನವಾಗಿದ್ದರು. ಅವರಿಬ್ಬರೂ ಕುಳಿತ ರಥ ಮಾತ್ರ ಅರಮನೆಯ ಹೆಬ್ಬಾಗಿಲಿಗೆ ಬರುತ್ತದೆ. ಆಗ ತನ್ನ ಮೌನ ಮುರಿದ ಮಹಾರಾಜರು ತನ್ನ ರಥಿಕನಿಗೆ ರಥವನ್ನು ಅಶ್ವಶಾಲೆಯತ್ತ ತಿರುಗಿಸುವಂತೆ ಆಜ್ಞಾಪಿಸುತ್ತಾರೆ. ಅಲ್ಲಿ ರಥದಿಂದ ಇಬ್ಬರೂ ಇಳಿಯುತ್ತಾರೆ. ತಕ್ಷಣ ಮಹಾರಾಜರು ತನ್ನ ಅಶ್ವಶಾಲೆಯ ಅಧಿಕಾರಿಯನ್ನು ಕರೆದು ಕುದುರೆಗಳಿಗೆ ಮೇವು ಹಾಕಲು ಆಜ್ಞಾಪಿಸುತ್ತಾರೆ. ಕೂಡಲೇ ಸೇವಕರು ಎಲ್ಲಾ ಕುದುರೆಗಳನ್ನು ಮೇವಿನ ತಾಣಕ್ಕೆ ಒಯ್ದು ಮೇವು ಹಾಕುತ್ತಾರೆ. ಆಗ ಎಲ್ಲ ಕುದುರೆಗಳು ಮೇವು ತಿನ್ನಲು ಮುನ್ನುಗ್ಗುತ್ತವೆ.

ಆದರೆ ಅಲ್ಲಿ ಬಲಿಷ್ಠ ಕುದುರೆಗಳು ದುರ್ಬಲ ಕುದುರೆಗಳನ್ನು ಹಿಂದಕ್ಕೆ ತಳ್ಳಿ ಮೇವು ತಿನ್ನಲು ಪ್ರಾರಂಭಿಸುತ್ತವೆ. ಇದನ್ನು ನಿರೀಕ್ಷಿಸುತ್ತಲೇ ಇದ್ದ ಮಹಾರಾಜರು ಕುದುರೆಗಳನ್ನು ಬೊಟ್ಟು ಮಾಡುತ್ತಾ ವಕೀಲರಿಗೆ ಹೇಳುತ್ತಾರೆ, ‘‘ನೋಡಿ ಬಲಿಷ್ಠ ಕುದುರೆಗಳು ತಿಂದುತೇಗುತ್ತಾ ಹೋಗುತ್ತಿವೆ. ಆದರೆ ದುರ್ಬಲ ಕುದುರೆಗಳು ಮೇವು ಸಿಗದೆ ಕಂಗಾಲಾಗಿವೆ. ಅದಕ್ಕಾಗಿಯೇ ನಾನು ದುರ್ಬಲರ ಬಗ್ಗೆ ಕಾಳಜಿ ವಹಿಸುತ್ತೇನೆ. ಒಂದು ವೇಳೆ ನಾನು ಹಾಗೆ ಮಾಡಿದಿದ್ದರೆ ಅವರೆಲ್ಲಾ ಉಪವಾಸದಿಂದ ಸಾಯುತ್ತಾರೆ. ಈಗ ಹೇಳಿ, ಶೂದ್ರರಿಗೆ ಮೀಸಲಾತಿ ನೀಡುವುದು ತಪ್ಪೇ? ನೀವೇ ಹೇಳಿ’’ ಎಂದರು. ಆಗ ವಕೀಲರು ನಿರುತ್ತರರಾಗುತ್ತಾರೆ. ಅಂದಿನಿಂದ ಅವರು ಶಾಹೂ ಮಹಾರಾಜರ ನೀತಿಯ ಸಮರ್ಥಕರಲ್ಲಿ ಒಬ್ಬರಾಗುತ್ತಾರೆ. ಛತ್ರಪತಿಯವರ ಈ ಮೀಸಲಾತಿಯು ಭಾರತದ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಬ್ರಾಹ್ಮಣೇತರ ಸಮುದಾಯಗಳಿಗೆ ಅವಕಾಶ ಕಲ್ಪಿಸಿತು.

ಕೊಲ್ಲಾಪುರ ಸಂಸ್ಥಾನದ ನಂತರ ಬ್ರಾಹ್ಮಣೇತರ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ಕ್ರಾಂತಿಕಾರಿ ಕಾನೂನನ್ನು ಜಾರಿಗೆ ತಂದವರು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲಘಟ್ಟದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಜಾಗೃತಗೊಂಡು ಸಂಘಟಿತರಾಗಿ ತಮ್ಮ ಪ್ರಾತಿನಿಧ್ಯಕ್ಕಾಗಿ ಹೋರಾಟ ನಡೆಸುತ್ತಿದ್ದರು. ಆ ಕಾರಣಕ್ಕಾಗಿ ನಾಲ್ವಡಿಯವರು ಅಂದಿನ ಮೈಸೂರು ಮುಖ್ಯ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸರ್. ಲೆಸ್ಲಿ ಮಿಲ್ಲರ್‌ರವರ ಅಧ್ಯಕ್ಷತೆಯಲ್ಲಿ ದಿನಾಂಕ 23-08-1918ರಲ್ಲಿ 7 ಜನರ ಒಂದು ಆಯೋಗವನ್ನು ರಚನೆ ಮಾಡಿ ಆದೇಶ ಹೊರಡಿಸಿದರು. ಈ ಆದೇಶದಲ್ಲಿ ‘‘ಪ್ರಸ್ತುತ ಮೈಸೂರು ಪ್ರಾಂತದ ಸಾರ್ವಜನಿಕ ಸೇವೆಯಲ್ಲಿ ಬ್ರಾಹ್ಮಣ ಸಮುದಾಯದ ಪ್ರಾತಿನಿಧ್ಯ ಯಥೇಚ್ಛವಾಗಿದೆ. ಆದ್ದರಿಂದ ರಾಜ್ಯದ ಇತರ ಹಿಂದುಳಿದ ಸಮುದಾಯಗಳಿಗೆ ಸಾಕಷ್ಟು ಪಾತಿನಿಧ್ಯ ನೀಡಬೇಕೆಂಬುದು ಸರಕಾರದ ಉದ್ದೇಶವಾಗಿದೆ. ಬ್ರಾಹ್ಮಣ ಸಮುದಾಯದ ಹೊರತಾಗಿ ಇತರ ಹಿಂದುಳಿದ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಉದ್ಯೋಗವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹಿಸಲು ಸರಕಾರ ಏನು ಕ್ರಮ ಕೈಗೊಳ್ಳಬೇಕು?’’ ಎಂಬುದರ ಬಗ್ಗೆ ಆಯೋಗವು ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು.

ಮಿಲ್ಲರ್ ಆಯೋಗದಲ್ಲಿ ಬ್ರಾಹ್ಮಣ ಸಮುದಾಯದ ಸಿ. ಶ್ರೀಕಂಠೇಶ್ವರ ಅಯ್ಯರ್ ಹಾಗೂ ಎಂ. ಸಿ. ರಂಗ ಅಯ್ಯಂಗಾರ್, ಒಕ್ಕಲಿಗ ಸಮುದಾಯದ ಹೆಚ್. ಚನ್ನಯ್ಯ, ಲಿಂಗಾಯತರ ಪರವಾಗಿ ಎಂ. ಬಸವಯ್ಯ, ಕೊಡಗಿನ ಮುತ್ತಣ್ಣ ಮತ್ತು ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ನವಾಬ್ ಗುಲಾಮ್ ಅಹಮದ್ ಕಲಾಮಿ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು. ಅಂದು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರು ಜಾತಿ ಆಧಾರದ ಮೇಲೆ ಮೀಸಲಾತಿಯನ್ನು ಕಲ್ಪಿಸಿದರೆ ಪ್ರತಿಭೆಗೆ ಧಕ್ಕೆ ಉಂಟಾಗುತ್ತದೆ. ಆಡಳಿತದಲ್ಲಿ ದಕ್ಷತೆ ಹಾಳಾಗುತ್ತದೆ ಎಂದು ವಿರೋಧ ವ್ಯಕ್ತಪಡಿಸಿ ತಮ್ಮ ಹುದ್ದೆಗೆ ಡಿಸೆಂಬರ್ 9, 1918ರಲ್ಲಿ ರಾಜೀನಾಮೆ ನೀಡಿದರು. ಇದರಿಂದ ಧೃತಿಗೆಡದ ನಾಲ್ವಡಿಯವರು 1919ರಲ್ಲಿ ಎಂ. ಕಾಂತರಾಜೇ ಅರಸುರವರನ್ನು ದಿವಾನರನ್ನಾಗಿ ನೇಮಕ ಮಾಡಿದರು. ಮಿಲ್ಲರ್ ಸಮಿತಿಯು ಕೂಲಂಕಷವಾಗಿ ಅಧ್ಯಯನ ನಡೆಸಿ ಜುಲೈ 18, 1919ರಲ್ಲಿ ತನ್ನ ವರದಿಯನ್ನು ಮಹಾರಾಜರಿಗೆ ಸಲ್ಲಿಸಿತು. ವರದಿಯ ಪ್ರಕಾರ; ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆಯಲ್ಲಿ ಹಿಂದುಳಿದ ಜಾತಿಗಳಿಗೆ ವಿನಾಯಿತಿ ನೀಡುವುದು. ಹಿಂದುಳಿದ ವರ್ಗಗಳಲ್ಲಿ ಕನಿಷ್ಠ ಅರ್ಹತೆಯುಳ್ಳ ಅಭ್ಯರ್ಥಿಗಳನ್ನು ಆದ್ಯತೆಯ ಮೇಲೆ ಸರಕಾರಿ ಉದ್ಯೋಗಕ್ಕೆ ಆಯ್ಕೆ ಮಾಡುವುದು. ಸಾರ್ವಜನಿಕ ಸೇವೆಗೆ ಸೇರಲು ಇರುವ ಗರಿಷ್ಠ ವಯೋಮಿತಿಯನ್ನು 25ರಿಂದ 28ಕ್ಕೆ ಹೆಚ್ಚಿಸುವುದು.

ಹಿಂದುಳಿದ ವರ್ಗಗಳಿಗೆ ಶಿಕ್ಷಣ ಸೌಲಭ್ಯಗಳನ್ನು ಹೆಚ್ಚಿಸಲು ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿಗೆ ತಂದು ಹೆಚ್ಚು ಶಾಲಾ ಕಾಲೇಜುಗಳನ್ನು ಪ್ರಾರಂಭಿಸುವುದು. ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಸಮಾನ ಅವಕಾಶ ಕಲ್ಪಿಸಲು ಆಂಗ್ಲ ಮಾಧ್ಯಮ ಶಾಲೆಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಾರಂಭಿಸಬೇಕು. ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ತಾಲೂಕು ಮಟ್ಟದಲ್ಲಿ ಹಿಂದುಳಿದ ವರ್ಗಗಳಿಗೆ ವಿದ್ಯಾರ್ಥಿನಿಲಯ ಸೌಲಭ್ಯ ಕಲ್ಪಿಸಬೇಕು. ಈ ವರದಿ ಬಂದ 7 ವರ್ಷಗಳ ಒಳಗಾಗಿ ಸರಕಾರದ ಉನ್ನತ ಹುದ್ದೆಗಳಲ್ಲಿ ಶೇ. 50ರಷ್ಟು ಹುದ್ದೆಗಳನ್ನು ಮತ್ತು ಕೆಳದರ್ಜೆ ಹುದ್ದೆಗಳಲ್ಲಿ ಮೂರನೇ ಎರಡರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗಗಳಿಗೆ ನೀಡಬೇಕು. ಮೇಲ್ಕಂಡ ಶಿಫಾರಸುಗಳಿಗೆ ಸಮಿತಿಯ ಇಬ್ಬರು ಬ್ರಾಹ್ಮಣ ಸದ್ಯಸರು ವಿರೋಧಿಸಿ ಸಹಿ ಮಾಡಿದರು. ಉಳಿದ 5 ಬ್ರಾಹ್ಮಣೇತರ ಸದಸ್ಯರು ವರದಿಯ ಪರವಾಗಿ ಸಹಿ ಮಾಡಿದರು. ಬ್ರಾಹ್ಮಣರ ತೀವ್ರ ವಿರೋಧದ ನಡುವೆಯೂ ನಾಲ್ವಡಿಯವರು 1921 ಮೇ ತಿಂಗಳಿನಲ್ಲಿ ಬ್ರಾಹ್ಮಣರು ಮತ್ತು ಆಂಗ್ಲೋ ಇಂಡಿಯನ್ನರನ್ನು ಹೊರತು ಪಡಿಸಿ ಉಳಿದ ಎಲ್ಲಾ ಸಮುದಾಯಗಳನ್ನು ಹಿಂದುಳಿದ ವರ್ಗಗಳೆಂದು ಗುರುತಿಸಿ ಅವರಿಗೆ ಶೇ. 75ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದರು. ಇದರಿಂದ ಮೈಸೂರು ಸಂಸ್ಥಾನದಲ್ಲಿನ ಶೂದ್ರ ಸಮುದಾಯಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಅವಕಾಶಗಳು ದೊರೆಯತೊಡಗಿದವು.

ಭಾರತದ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಗಾಂಧೀಜಿ, ಪೆರಿಯಾರ್, ಅಂಬೇಡ್ಕರ್, ಲೋಹಿಯಾ ಅವರು ಮೀಸಲಾತಿ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿದ್ದರು. ಭಾರತ ಸ್ವತಂತ್ರವಾದ ಮೇಲೆ 1950 ಜನವರಿ 26ರಂದು ತನ್ನದೇಯಾದ ಸಂವಿಧಾನವನ್ನು ಜಾರಿಗೊಳಿಸಿತ್ತು. ಭಾರತ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸುವುದಕ್ಕೆ 1919ರಲ್ಲಿ ಮೈಸೂರು ಸಂಸ್ಥಾನದಲ್ಲಿ ಜಾರಿಗೆ ತಂದಿದ್ದ ಮಿಲ್ಲರ್ ಆಯೋಗದ ವರದಿಯನ್ನು ಪ್ರಮುಖವಾಗಿ ಪರಿಗಣಿಸಿದಂತೆ ಕಂಡುಬರುತ್ತದೆ. ಸಮಾನತೆಯ ಆಶಯವನ್ನೇ ಜೀವನಾಡಿಯಾಗಿಸಿಕೊಂಡಿರುವುದು ಭಾರತದ ಸಂವಿಧಾನ. ಇಂತಹ ಸಮಾನತೆಯನ್ನು ಸಾಧಿಸುವುಕ್ಕಾಗಿ ಇರುವುದೇ ಮೀಸಲಾತಿ. ಜಾತಿ-ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಮೀಸಲಾತಿಯನ್ನು ವಿಂಗಡಿಸಲಾಗಿದೆ.

ಕೇಂದ್ರ ಸರಕಾರ ನೀಡಿರುವ ಮೀಸಲಾತಿ ವರ್ಗೀಕರಣ ಹೀಗಿದೆ; ಪರಿಶಿಷ್ಟ ಪಂಗಡ ಗ್ರಾಮೀಣ ಶೇ. 45.8, ನಗರ ಶೇ. 35.6, ಪರಿಶಿಷ್ಟ ಜಾತಿ ಗ್ರಾಮೀಣ ಶೇ. 35.9, ನಗರ ಶೇ. 38.3, ಹಿಂದುಳಿದ ಜಾತಿಗಳಿಗೆ ಗ್ರಾಮೀಣ ಶೇ. 27.0, ನಗರ ಶೇ. 29.5, ಮುಸ್ಲಿಂ ಮೇಲ್ಜಾತಿಗಳಿಗೆ ಗ್ರಾಮೀಣ ಶೇ. 26.8, ನಗರ ಶೇ 34.2, ಹಿಂದೂ ಮೇಲ್ಜಾತಿಗಳಿಗಾಗಿ ಗ್ರಾಮೀಣ ಶೇ. 11.7, ನಗರ ಶೇ 09.9, ಕ್ರಿಶ್ಚಿಯನ್ ಮೇಲ್ಜಾತಿಗಳಿಗಾಗಿ ಗ್ರಾಮೀಣ ಶೇ 09.6, ನಗರ ಶೇ. 05.4, ಸಿಖ್ಖ್ ಮೇಲ್ಜಾತಿಗಳಿಗಾಗಿ ನಗರ ಶೇ 04.9, ಇತರ ಮೇಲ್ಜಾತಿಗಳಿಗಾಗಿ ಗ್ರಾಮೀಣ ಶೇ 16.0, ನಗರ ಶೇ 02.7. ಭಾರತದ ಬಡತನರೇಖೆಯ ಕೆಳಗಿರುವ ಜನವರ್ಗದ ಜಾತಿ ಮತ್ತು ಸಮುದಾಯಗಳ ಪಟ್ಟಿಯನ್ನು ಸಾಚಾರ ಆಯೋಗದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟದ ರಾಜ್ಯ ಸರಕಾರದಲ್ಲಿ ಪ್ರವರ್ಗ 1 ಶೇ. 4, ಪ್ರವರ್ಗ 2ಎ ಶೇ. 15, ಪ್ರವರ್ಗ 2ಬಿ ಶೇ. 4, ಪ್ರವರ್ಗ 3ಎ ಶೇ. 4, ಪ್ರವರ್ಗ 3ಬಿ ಶೇ. 5, ಎಸ್ಸಿ ಶೇ. 15. ಎಸ್ಟಿ ಶೇ. 3. ಹೀಗೆ ಭಾರತದ ಸಂವಿಧಾನದಲ್ಲಿ ಜಾತಿ-ಜನಸಂಖ್ಯಾವಾರು ಮೀಸಲಾತಿಯನ್ನು ಹಂಚಿಕೆಯಾಗಿರುವುದನ್ನು ಕಾಣಬಹುದು. ಮೀಸಲಾತಿಯ ಪ್ರಮುಖ ಉದ್ದೇಶ ಶತಮಾನಗಳಿಂದ ಅವಕಾಶದಿಂದ ವಂಚಿತವಾದ ಸಮುದಾಯಗಳಿಗೆ ಪ್ರಾತಿನಿಧ್ಯವನ್ನು ಕಲ್ಪಿಸುವುದಾಗಿದೆ. ಹೀಗಿದ್ದೂ ಮೀಸಲಾತಿಯ ಪರ ಹಾಗೂ ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ.

ಮೈಸೂರು ಸಂಸ್ಥಾನದಲ್ಲಿ ಮಿಲ್ಲರ್ ಆಯೋಗದ ಆಧಾರದ ಮೇಲೆ ಮೀಸಲಾತಿ ಜಾರಿಗೊಂಡು ಆಗಸ್ಟ್ 23ರಂದು 100 ವರ್ಷಗಳು ತುಂಬಿದೆ. ಈ ನೂರು ವರ್ಷಗಳ ನಡಿಗೆಯಲ್ಲಿ ಮೀಸಲಾತಿಯ ಆಗು ಹೋಗುಗಳನ್ನು ವಸ್ತುನಿಷ್ಠವಾಗಿ ಚರ್ಚಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರವು ‘‘ನೂರು ವರ್ಷಗಳ ಮೀಸಲಾತಿಯ ನಡಿಗೆ..... ಒಂದು ಪರಿವೀಕ್ಷಣೆ’’ ಎಂಬ ವಿಷಯದ ಕುರಿತಾಗಿ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಿಕೊಂಡಿರುವುದು ಅರ್ಥಪೂರ್ಣವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)