varthabharthi

ಸಂಪಾದಕೀಯ

ಮೈತ್ರಿ ಸರಕಾರವನ್ನು ಉರುಳಿಸಿದ್ದು ಬಿಜೆಪಿ ಅಲ್ಲವಂತೆ!

ವಾರ್ತಾ ಭಾರತಿ : 24 Aug, 2019

ಮಳೆ ನಿಂತ ಬಳಿಕ ಮರದಡಿಯಲ್ಲಿ ನಿಲ್ಲಬಾರದಂತೆ. ಈ ಮಾತನ್ನು ಯಾರಾದರೂ ದೇವೇಗೌಡರು ಮತ್ತು ಸಿದ್ದರಾಮಯ್ಯ ಅವರಿಗೆ ತಿಳಿ ಹೇಳಿದ್ದಿದ್ದರೆ ಈ ಇಬ್ಬರು ನಾಯಕರು, ಇಂದು ಸಾರ್ವಜನಿಕವಾಗಿ ಪತ್ರಿಕಾಗೋಷ್ಠಿ ನಡೆಸಿ ಕೆಸರೆರಚುವ ಪ್ರಮೇಯ ಬರುತ್ತಿರಲಿಲ್ಲ. ಅತೃಪ್ತ ಶಾಸಕರ ಬಂಡಾಯದ ಪರಿಣಾಮವಾಗಿ ಬಹುಮತವಿಲ್ಲದೆ ಮೈತ್ರಿ ಸರಕಾರ ಪತನಗೊಂಡು, ಯಡಿಯೂರಪ್ಪ ಅಧಿಕಾರ ಹಿಡಿದು ಹಲವು ವಾರಗಳು ಕಳೆದಿವೆ. ವಿಪರ್ಯಾಸವೆಂದರೆ, ಪತನಗೊಂಡ ಮೈತ್ರಿ ಸರಕಾರದೊಳಗಿದ್ದ ನಾಯಕರು ಇನ್ನೂ ಆ ಆಘಾತದಿಂದ ಚೇತರಿಸಿದಂತಿಲ್ಲ. ವಾಸ್ತವವನ್ನು ಒಪ್ಪಿಕೊಂಡು ವಿರೋಧ ಪಕ್ಷದಲ್ಲಿ ಕುಳಿತು ಆಡಳಿತ ಪಕ್ಷದ ಕಾರ್ಯವೈಖರಿಯನ್ನು ವಿಶ್ಲೇಷಿಸಬೇಕಾಗಿದ್ದ ನಾಯಕರು, ಇದೀಗ ಸರಕಾರದ ಪತನದ ಮೂಲಗಳಿಗೆ ಮತ್ತೆ ಕೈ ಹಾಕಿದ್ದಾರೆ. ಪರಸ್ಪರ ದೂಷಿಸುವುದಕ್ಕೆ ತೊಡಗಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ಒಣಗತೊಡಗಿದ್ದ ಗಾಯವನ್ನು ಮೊದಲಾಗಿ ಕೆದಕಿದ್ದಾರೆ. ‘‘ಸಮ್ಮಿಶ್ರ ಸರಕಾರದ ಪತನಕ್ಕೆ ಕಾಂಗ್ರೆಸ್ ಕಾರಣ. ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಅವರೇ ಹೊಣೆ’’ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ. ಸಿದ್ದರಾಮಯ್ಯ ಅವರೇ ಪತನಕ್ಕೆ ಕಾರಣ ಎನ್ನುವುದಕ್ಕೆ ಸೂಕ್ತ ದಾಖಲೆಗಳು ದೇವೇಗೌಡರ ಬಳಿ ಇದ್ದಿದ್ದರೆ ಅವರ ಆರೋಪಗಳನ್ನು ಗಂಭೀರವಾಗಿ ಸ್ವೀಕರಿಸಬಹುದಿತ್ತೋ ಏನೋ? ‘ಕುಮಾರಸ್ವಾಮಿಯ ವಿರುದ್ಧ ಸಿದ್ದರಾಮಯ್ಯರಿಗೆ ಮೊದಲೇ ಅಸಹನೆಯಿತ್ತು. ತನ್ನ ಮಗನನ್ನು ಸಿದ್ದರಾಮಯ್ಯ ಈ ಹಿಂದೆ ಹಲವು ಬಾರಿ ಟೀಕಿಸಿದ್ದರು’ ಎಂಬಿತ್ಯಾದಿಗಳನ್ನು ಮುಂದಿಟ್ಟುಕೊಂಡು, ಸುದ್ದಿಗೋಷ್ಠಿಯೊಂದರಲ್ಲಿ ಸರಕಾರ ಪತನಕ್ಕೆ ಸಿದ್ದರಾಮಯ್ಯರನ್ನು ನೇರ ಹೊಣೆ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಚುನಾವಣೆ ಎದುರಿಸಿರುವುದರಿಂದ ಪರಸ್ಪರ ಟೀಕೆ, ಆರೋಪ, ಪ್ರತ್ಯಾರೋಪ ಸಹಜವಾಗಿತ್ತು. ಪಕ್ಷದಾಚೆಗೂ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವೆ ಅಸಮಾಧಾನಗಳಿದ್ದವು. ಚುನಾವಣೆಯ ಸಂದರ್ಭದಲ್ಲಿ ಉಭಯ ನಾಯಕರ ನಡುವೆಯೂ ಅವು ಬೇರೇ ಬೇರೆ ಸಂದರ್ಭಗಳಲ್ಲಿ ಸ್ಫೋಟಗೊಂಡಿವೆ. ಇದೀಗ ಅವುಗಳನ್ನೇ ‘ದಾಖಲೆ’ಗಳಾಗಿ ಇಟ್ಟುಕೊಂಡು ‘ಸಿದ್ದರಾಮಯ್ಯ ಅವರೇ ಕುಮಾರಸ್ವಾಮಿ ರಾಜೀನಾಮೆ ನೀಡಲು ಕಾರಣ’ ಎನ್ನುವುದು ದೇವೇಗೌಡರ ಹತಾಶೆಯನ್ನು ಹೇಳುತ್ತದೆ.. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ದೇವೇಗೌಡರಿಗೆ, ಸಿದ್ದರಾಮಯ್ಯ ಮಾಡಿರುವ ಆರೋಪಗಳು ಯಾಕೆ ನೆನಪಿರಲಿಲ್ಲ? ಆಗಲೇ ಮೈತ್ರಿಯನ್ನು ನಿರಾಕರಿಸಬಹುದಿತ್ತಲ್ಲ? ಕಾಂಗ್ರೆಸ್ ಬೆಂಬಲದಿಂದ ಸುಮಾರು ಒಂದೂವರೆ ವರ್ಷ ಮಗನನ್ನು ಮುಖ್ಯಮಂತ್ರಿಯನ್ನಾಗಿ ನೋಡಿ, ಸರಕಾರ ಪತನವಾದುದೇ ಅವರಿಗೆ ಸಿದ್ದರಾಮಯ್ಯ ಈ ಹಿಂದೆ ಆಡಿರುವ ಮಾತುಗಳು ಯಾಕೆ ನೆನಪಾದವು?

ದೇವೇಗೌಡರ ಕುಟುಂಬದ ಅತಿ ಆತ್ಮವಿಶ್ವಾಸವೂ ಸರಕಾರ ಪತನಕ್ಕೆ ಮುಖ್ಯ ಕಾರಣವಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಒಂದೇ ಒಂದು ಕಾರಣಕ್ಕಾಗಿ ಕೇವಲ 37 ಸ್ಥಾನಗಳನ್ನು ಪಡೆದ ಜೆಡಿಎಸ್‌ಗೆ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸ್ಥಾನವನ್ನು ನೀಡಿತು. ಬಿಜೆಪಿಯು ಜೆಡಿಎಸ್ ಜೊತೆ ಸೇರಿ ಸರಕಾರ ಮಾಡುವ ಆತಂಕದಿಂದ ಆತುರದಲ್ಲಿ ನಿಶ್ಶರ್ಥವಾಗಿ ಕಾಂಗ್ರೆಸ್ ಈ ಬೆಂಬಲವನ್ನು ನೀಡಿತು. ಆದರೆ ದೇವೇಗೌಡರ ಕುಟುಂಬ ಇದನ್ನು ಬ್ಲಾಕ್‌ಮೇಲ್ ರೀತಿಯಲ್ಲಿ ಬಳಸುತ್ತಾ ಹೋಯಿತು. ಸರಕಾರ ಬೀಳುವಲ್ಲಿ ಎಚ್. ಡಿ. ರೇವಣ್ಣರ ಕೊಡುಗೆಯೂ ಸಣ್ಣದೇನಿಲ್ಲ. ಇಷ್ಟಕ್ಕೂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್. ವಿಶ್ವನಾಥ್ ರಾಜೀನಾಮೆ ನೀಡುವುದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಹೇಳುತ್ತಾರೆಯೇ? ಎಚ್. ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರ ಕಟು ರಾಜಕೀಯ ವೈರಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯರ ಸೋಲಿಗೆ ವಿಶ್ವನಾಥ್ ನಿದ್ದೆ ಬಿಟ್ಟು ಕೆಲಸ ಮಾಡಿದವರು. ಜೆಡಿಎಸ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ಯಾಕೆ ರಾಜೀನಾಮೆಯನ್ನು ನೀಡಿದರು? ಅಷ್ಟೇ ಅಲ್ಲ ಬಂಡಾಯ ಗುಂಪನ್ನು ಕಟ್ಟಿಕೊಂಡು ಅವರು ಬಿಜೆಪಿ ಪಾಳಯ ಸೇರಲು ಜೆಡಿಎಸ್‌ನ ಪಾಲೆಷ್ಟು? ದೇವೇಗೌಡರು ಮೊದಲು ಈ ಕುರಿತಂತೆ ಆತ್ಮವಿಮರ್ಶೆಯನ್ನು ಮಾಡಿಕೊಳ್ಳಬೇಕಾಗಿದೆ.

ಕಾಂಗ್ರೆಸ್ ನೀಡಿದ ನಿಶ್ಶರ್ಥ ಬೆಂಬಲವನ್ನು ದುರುಪಯೋಗಪಡಿಸಿಕೊಂಡ ದೇವೇಗೌಡ ಕುಟುಂಬವೇ ಸರಕಾರ ಪತನಗೊಳ್ಳುವುದಕ್ಕೆ ಕಾರಣಕರ್ತರು. ಭವಿಷ್ಯದ ದೃಷ್ಟಿಯಿಂದ ಒಂದಿಷ್ಟು ಕೊಡು ಕೊಳ್ಳುವ ಧಾರಾಳತನವನ್ನು ತೋರಿಸಿದ್ದಿದ್ದರೆ ಇಂದು ಕನಿಷ್ಠ ಎಚ್.ಡಿ. ರೇವಣ್ಣ ಉಪಮುಖ್ಯಮಂತ್ರಿಯಾಗಿಯಾದರೂ ಉಳಿಯುತ್ತಿದ್ದರು. ಮೈತ್ರಿ ಸರಕಾರಕ್ಕೆ ಯಾವ ಧಕ್ಕೆಯೂ ಬರುತ್ತಿರಲಿಲ್ಲ. ಇದರ ಅರ್ಥ ಪತನದಲ್ಲಿ ಸಿದ್ದರಾಮಯ್ಯ ಪಾಲು ಇಲ್ಲವೇ ಇಲ್ಲ ಎಂದಲ್ಲ. ಸಿದ್ದರಾಮಯ್ಯರನ್ನು ವೈಯಕ್ತಿಕವಾಗಿ ಮಟ್ಟ ಹಾಕಲು ಜೆಡಿಎಸ್ ಮಾತ್ರವಲ್ಲ, ಕಾಂಗ್ರೆಸ್‌ನೊಳಗಿರುವ ನಾಯಕರೂ ಕೆಲಸ ಮಾಡಿದ್ದರು. ಜಂಟಿಕಾರ್ಯಾಚರಣೆಯ ಫಲವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲುಂಡರು. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗದಂತೆ ನೋಡಿಕೊಳ್ಳುವುದು ಕಾಂಗ್ರೆಸ್‌ನೊಳಗಿರುವ ಕೆಲವು ನಾಯಕರ ತುರ್ತು ಅಗತ್ಯವಾಗಿತ್ತು. ಜೆಡಿಎಸ್‌ನೊಂದಿಗೆ ನಿಶ್ಶರ್ಥವಾಗಿ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ‘ತುರ್ತು’ ಕೂಡ ಕೆಲಸ ಮಾಡಿದೆ. ಇವೆಲ್ಲ ಗೊತ್ತಿದ್ದೂ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಸಿದ್ದರಾಮಯ್ಯ ಗರಿಷ್ಠ ತಾಳ್ಮೆಯನ್ನು ಪ್ರದರ್ಶಿಸಿದ್ದರು. ಬಹಿರಂಗವಾಗಿ ಸರಕಾರಕ್ಕೆ ಮುಜುಗರ ಉಂಟು ಮಾಡುವ ಯಾವ ಹೇಳಿಕೆಗಳನ್ನೂ ಅವರು ನೀಡಿರಲಿಲ್ಲ. ಆದರೆ ಜೆಡಿಎಸ್‌ನ ಮೊಂಡುತನ ಪಕ್ಷದೊಳಗೆ ಬಂಡಾಯ ಸೃಷ್ಟಿಸಿದಾಗ ಅದನ್ನು ತಣಿಸಲು ಅವರು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎನ್ನುವ ಆರೋಪವಿದೆ. ಮೈತ್ರಿ ಮುಂದುವರಿಯುವುದರಿಂದ ತನಗಾಗಲಿ, ಕಾಂಗ್ರೆಸ್‌ಗಾಗಲಿ ಯಾವುದೇ ಲಾಭವಿಲ್ಲ ಎನ್ನುವಾಗ ಅವರಾದರೂ ಯಾಕೆ ಪತನವನ್ನು ತಡೆಯುತ್ತಾರೆ?

ಮೈತ್ರಿ ಸರಕಾರವನ್ನು ಬಿಜೆಪಿ ಉರುಳಿಸಿತು ಎಂದು ಈವರೆಗೆ ಹೇಳಿಕೊಂಡು ಓಡಾಡುತ್ತಿದ್ದ ಈ ಉಭಯ ನಾಯಕರು ಇದೀಗ ಪರಸ್ಪರರ ಕಡೆಗೆ ಬೆರಳು ತೋರಿಸುತ್ತಿರುವುದು ಬಿಜೆಪಿಗೆ ಲಾಭವಾಗುವ ಲಕ್ಷಣಗಳಿವೆ. ಹಾಗಾದರೆ ಈವರೆಗೆ ಮೈತ್ರಿ ಸರಕಾರದ ಪತನವನ್ನು ಬಿಜೆಪಿಯ ತಲೆಗೆ ಕಟ್ಟಿದ್ದಾದರೂ ಯಾಕೆ? ಎನ್ನುವ ಪ್ರಶ್ನೆಗೆ ಈ ಉಭಯ ನಾಯಕರು ಉತ್ತರಿಸಬೇಕಾಗಿದೆ. ಒಟ್ಟಿನಲ್ಲಿ ಕುದುರೆ ವ್ಯಾಪಾರದ ಮೂಲಕ ಬಿಜೆಪಿ ಮೈತ್ರಿ ಸರಕಾರವನ್ನು ಉರುಳಿಸಿತು ಎಂಬ ಆರೋಪಗಳನ್ನು ಈ ಇಬ್ಬರು ನಾಯಕರು ನಿರಾಕರಿಸಿ, ಆ ಪಕ್ಷಕ್ಕೆ ಕ್ಲೀನ್ ಚಿಟ್ ಕೊಟ್ಟಂತಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)