ದ. ಆಫ್ರಿಕ ತಂಡಕ್ಕೆ ಕ್ಲೂಸ್ನರ್ ಸಹಾಯಕ ಬ್ಯಾಟಿಂಗ್ ಕೋಚ್
ಜೊಹಾನ್ಸ್ಬರ್ಗ್, ಆ.23: ಸೆಪ್ಟಂಬರ್ನಲ್ಲಿ ಭಾರತದ ವಿರುದ್ಧ ಟ್ವೆಂಟಿ-20 ಕ್ರಿಕೆಟ್ ಸರಣಿ ಆಡಲಿರುವ ದಕ್ಷಿಣ ಆಫ್ರಿಕ ತಂಡದ ಸಹಾಯಕ ಬ್ಯಾಟಿಂಗ್ ಕೋಚ್ ಆಗಿ ಮಾಜಿ ಆಲ್ರೌಂಡರ್ ಲ್ಯಾನ್ಸ್ ಕ್ಲೂಸ್ನರ್ರನ್ನು ನೇಮಕ ಮಾಡಲಾಗಿದೆ ಎಂದು ದಕ್ಷಿಣ ಆಫ್ರಿಕ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ. ಮಾಜಿ ವೇಗದ ಬೌಲರ್ ವಿನ್ಸೆಂಟ್ ಬಾರ್ನೆಸ್ ಸಹಾಯಕ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಜಸ್ಟಿನ್ ಆನ್ಟಾಂಗ್ ಸಹಾಯಕ ಫೀಲ್ಡಿಂಗ್ ಕೋಚ್ ಆಗಿರುತ್ತಾರೆ ಎಂದು ಸಿಎಸ್ಎ ಪ್ರಭಾರಿ ನಿರ್ದೇಶಕ ಕೋರಿ ವ್ಯಾನ್ ಝಿಲ್ ಹೇಳಿದ್ದಾರೆ. ವಿಶ್ವದ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದ ಕ್ಲೂಸ್ನರ್ ಟೆಸ್ಟ್ ಕ್ರಿಕೆಟ್ನಲ್ಲಿ 1,906 ರನ್ ಗಳಿಸಿದ್ದು 80 ವಿಕೆಟ್ ಉರುಳಿಸಿದ್ದರು. ಏಕದಿನ ಕ್ರಿಕೆಟ್ನಲ್ಲಿ 3576 ರನ್ ಗಳಿಸಿದ್ದು 192 ವಿಕೆಟ್ ಉರುಳಿಸಿದ್ದಾರೆ. ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಬಳಿಕ 2012ರಿಂದ 2016ರವರೆಗೆ ದಕ್ಷಿಣ ಆಫ್ರಿಕಾದ ಸ್ಥಳೀಯ ತಂಡ ಹಾಲಿವುಡ್ಬೆಟ್ಸ್ ಡಾಲ್ಫಿನ್ಸ್ನ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಝಿಂಬಾಂಬ್ವೆ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದರು. ಈ ವರ್ಷ ನಿಗದಿಯಾಗಿದ್ದ ಯುರೋ ಟ್ವೆಂಟಿ-20 ಟೂರ್ನಿಯ ಆರಂಭಿಕ ಆವೃತ್ತಿಯಲ್ಲಿ ಗ್ಲಾಸ್ಗೋ ಜಯಂಟ್ಸ್ನ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದರು. ಈ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು. ಕ್ಲೂಸ್ನರ್ ಓರ್ವ ಅಪ್ರತಿಮ ಆಲ್ರೌಂಡರ್ ಹಾಗೂ ಅದ್ಭುತ ಕ್ರಿಕೆಟರ್ ಆಗಿದ್ದಾರೆ. ಅಲ್ಲದೆ ಕ್ರಿಕೆಟ್ ಲೀಗ್ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ ಅಪಾರ ಅನುಭವವಿದೆ. ವಿನ್ಸೆಂಟ್ ಬಾರ್ನೆಸ್ ಕೂಡಾ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವಿ. ಭಾರತದಲ್ಲಿ ಆಡುವ ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿದಿದೆ. ಇದರಿಂದ ತಂಡದ ಆಟಗಾರರಿಗೆ ಅನುಕೂಲವಾಗಲಿದೆ. ಸಹಾಯಕ ಫೀಲ್ಡಿಂಗ್ ಕೋಚ್ ಆಗಿರುವ ಜಸ್ಟಿನ್ ಅಂಟಾಂಗ್ ಆಟಗಾರನಾಗಿ ಮೂರೂ ವಿಧದ ಕ್ರಿಕೆಟ್ನಲ್ಲಿ (ಟೆಸ್ಟ್, ಏಕದಿನ, ಟ್ವೆಂಟಿ-20) ದೇಶದ ತಂಡದಲ್ಲಿ ಆಡಿದವರು. ಕಳೆದ ಎರಡು ವರ್ಷಗಳಲ್ಲಿ ಆಟಗಾರರೊಂದಿಗೆ ಸಂಪರ್ಕದಲ್ಲಿರುವ ಅಂಟಾಂಗ್ ಓರ್ವ ಅನುಭವಿ ಕೋಚ್ ಆಗಿದ್ದಾರೆ ಎಂದು ಕೋರಿ ವ್ಯಾನ್ ಝಿಲ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಸೆಪ್ಟಂಬರ್ 15ರಿಂದ ಭಾರತದ ವಿರುದ್ಧ ಕ್ರಿಕೆಟ್ ಸರಣಿಗಾಗಿ ಭಾರತಕ್ಕೆ ಆಗಮಿಸಲಿದೆ.