varthabharthi

ಕ್ರೀಡೆ

ಆ್ಯಂಟಿಗುವಾ ಟೆಸ್ಟ್: ಭಾರತ ಮೇಲುಗೈ

ವಾರ್ತಾ ಭಾರತಿ : 24 Aug, 2019

ಆ್ಯಂಟಿಗುವಾ: ಇಶಾಂತ್ ಶರ್ಮಾ ಅವರ ಭರ್ಜರಿ ಬೌಲಿಂಗ್ ಹಾಗೂ ವೆಸ್ಟ್‌ಇಂಡೀಸ್ ಆಟಗಾರರ ಬೇಜವಾಬ್ದಾರಿಯುತ ಬ್ಯಾಟಿಂಗ್‌ನಿಂದಾಗಿ ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ತಂಡ ಅತಿಥೇಯರ ವಿರುದ್ಧ ಎರಡನೇ ದಿನ ಸ್ಪಷ್ಟ ಮೇಲುಗೈ ಸಾಧಿಸಿದೆ.

ಕೊನೆಯ ಸೆಷನ್‌ನಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡ ವೆಸ್ಟ್‌ಇಂಡೀಸ್ ತಂಡ 8 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ದಿನದಾಟ ಮುಗಿಸಿತು. ಅತಿಥೇಯರು ಭಾರತಕ್ಕಿಂತ 108 ರನ್‌ಗಳ ಹಿನ್ನಡೆಯಲ್ಲಿದ್ದಾರೆ.

ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಇಶಾಂತ್, ಟೆಸ್ಟ್‌ನಲ್ಲಿ ಒಂಬತ್ತನೇ ಬಾರಿಗೆ ಈ ಸಾಧನೆ ಮಾಡಿದರು. ವೆಸ್ಟ್‌ಇಂಡೀಸ್‌ನ ರೋಸ್ಟನ್ ಚೇಸ್ (48), ಜಾನ್ ಕ್ಯಾಂಪೆಲ್ (23), ಡರೆನ್ ಬ್ರಾವೊ (18), ಶಾಯ್ ಹೋಪ್ (24) ಹಾಗೂ ಶಿಮೋರ್ ಹತ್ಮಿಯೆರ್ (35) ಭರ್ಜರಿ ಆರಂಭದ ಹೊರತಾಗಿಯೂ ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಇದಕ್ಕೂ ಮುನ್ನ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದ್ದ ಭಾರತ ರವೀಂದ್ರ ಜಡೇಜಾ (58) ಅವರ ಏಕಾಂಗಿ ಸಾಹಸದಿಂದ 297 ರನ್ ಗಳಿಸಲು ಸಾಧ್ಯವಾಯಿತು. ಇಶಾಂತ್ ಶರ್ಮಾ (19) ಅವರ ಜತೆ ಸೇರಿ ಜಡೇಜಾ ಎಂಟನೇ ವಿಕೆಟ್‌ಗೆ 60 ರನ್ ಸೇರಿಸಿದರು.

ಎರಡನೇ ದಿನ ಬ್ಯಾಟಿಂಗ್‌ಗೆ ಅನುಕೂಲಕರ ವಾತಾವರಣ ಇದ್ದರೂ ವಿಂಡೀಸ್ ಬ್ಯಾಟ್ಸ್‌ಮನ್‌ಗಳು ಅದರ ಲಾಭ ಪಡೆಯಲು ವಿಫಲರಾದರು. ಚಹಾ ವಿರಾಮದ ವೇಳೆಗೆ ಅತಿಥೇಯರು 3 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿದ್ದರು. ಭರ್ಜರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಪತ್ಭಾಂಧವರಾದ ಜಡೇಜಾ, ಮೊದಲ ಟೆಸ್ಟ್ ಆಡುತ್ತಿರುವ ಶಮರ್ ಬ್ರೂಕ್ಸ್ (11) ಅವರ ವಿಕೆಟ್ ಪಡೆದು ವಿಂಡೀಸ್ ಪತನಕ್ಕೆ ನಾಂದಿ ಹಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)