varthabharthi

ವಿಶೇಷ-ವರದಿಗಳು

► ದೇವಳದಲ್ಲಿದ್ದ ಸಂತ್ರಸ್ತರಿಗೆ ಮಸೀದಿಯಿಂದ ಸಹಾಯ ► ಮುಸ್ಲಿಮ್ ಕುಟುಂಬಕ್ಕೆ ಹಿಂದೂ ವ್ಯಕ್ತಿಯ ಮನೆಯಲ್ಲಿ ಆಶ್ರಯ

ನೆರೆಗೆ ಕೊಚ್ಚಿಹೋದ ಮತೀಯತೆ, ಮೆರೆದ ಮಾನವೀಯತೆ

ವಾರ್ತಾ ಭಾರತಿ : 24 Aug, 2019
ಇಮ್ತಿಯಾಝ್ ಶಾ ತುಂಬೆ | ಚಿತ್ರ: ಆಝಾದ್ ಕಂಡಿಗ

► ಜೀವದ ಹಂಗು ತೊರೆದು ಸಂತ್ರಸ್ತರನ್ನು ರಕ್ಷಿಸಿದ ಸ್ಥಳೀಯ ಯುವಕರು

ಮಂಗಳೂರು, ಆ.24: ಪ್ರತಿಯೊಂದಕ್ಕೂ ಜಾತಿ, ಧರ್ಮ, ಸಂಘಟನೆ, ಪಕ್ಷ ಎಂದು ಪರಸ್ಪರ ಗುರುತಿಸುವ ಈ ಕಾಲದಲ್ಲಿ ಇತ್ತೀಚೆಗೆ ಚಾರ್ಮಾಡಿ ಯಲ್ಲಿ ಉಂಟಾದ ಭೀಕರ ನೆರೆ ಸೌಹಾರ್ದದ ಸಂದೇಶ ಸಾರಿದೆ. ನೆರೆಯ ರಭಸಕ್ಕೆ ಮತೀಯತೆ ಕೊಚ್ಚಿ ಹೋಗಿ ಮಾನವೀಯತೆ ಮೇಲೈಸಿದೆ. ಪ್ರವಾಹಕ್ಕೆ ತುತ್ತಾಗಿ ಪ್ರಾಣಾಪಾಯದಲ್ಲಿದ್ದ ಜನರು, ಸಾಕುಪ್ರಾಣಿಗಳನ್ನು ರಕ್ಷಿಸಿದ ಯುವಕರ ಮಾನವೀಯ ಸೇವೆಗೆ ಇಂದು ಕೂಡಾ ಚಾರ್ಮಾಡಿಯ ಜನರು ಕೈ ಮುಗಿಯುತ್ತಾರೆ.

ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಮೂರು ದಿನಗಳ ಕಾಲ ನಿರಂತರ ಸುರಿದ ಭಾರೀ ಮಳೆಗೆ ಉಂಟಾದ ಪ್ರವಾಹ ಚಾರ್ಮಾಡಿ ಗ್ರಾಮದಲ್ಲಿ ಅಪಾರ ನಾಶನಷ್ಟ ಉಂಟು ಮಾಡಿದೆ. ನದಿ ಪಾತ್ರದ ಹಲವು ಮನೆಗಳು ನಾಶವಾಗಿವೆ. ಹಲವರು ನಿರಾಶ್ರಿತರಾಗಿದ್ದಾರೆ. ಜನತೆ ಪ್ರವಾಹದ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆ ನೈಜ ಮಾನವೀಯ ಧರ್ಮ ಹೊರಬಂದಿದೆ. ಜಾತಿ, ಧರ್ಮದ ರೇಖೆಯನ್ನು ದಾಟಿ ಎಲ್ಲರೂ ಪರಸ್ಪರ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

ಪ್ರವಾಹ ತಗ್ಗಿದ ಬಳಿಕ ಈಗ ಎಲ್ಲೆಲ್ಲೂ, ಎಲ್ಲರಲ್ಲೂ ಸಹಾಯ, ಸೇವೆ, ಪರಿಹಾರ, ಪುನರ್ ನಿರ್ಮಾಣದ ಕಳಕಳಿ. ಇದಕ್ಕೆ ಯಾವುದೇ ಜಾತಿ, ಧರ್ಮ, ಭಾಷೆ, ಪಕ್ಷ, ಸಂಘಟನೆಯ ಹಂಗು ಇಲ್ಲವಾಗಿದೆ. ದೇವಸ್ಥಾನದಲ್ಲಿ ನೆಲೆಸಿರುವ ನಿರಾಶ್ರಿತರಿಗೆ ಮಸೀದಿಯಿಂದ ಅಕ್ಕಿ, ಧವಸಧಾನ್ಯಗಳು ಬಂದಿವೆ. ಮನೆ ಹಾನಿಗೊಂಡು ಬೀದಿಗೆ ಬಂದ 17 ಮುಸ್ಲಿಮ ರಿಗೆ ಪುರುಷ ಎಂಬ ಹಿಂದೂ ವ್ಯಕ್ತಿಯೊಬ್ಬರು ತನ್ನ ಮನೆಯಲ್ಲಿ ಆಶ್ರಯ ನೀಡಿ ಊಟ ಬಡಿಸಿದ್ದಾರೆ.

ಇವಿಷ್ಟೇ ಅಲ್ಲದೆ ನೆರೆಯಲ್ಲಿ ಸಿಲುಕಿದವರನ್ನು ಜಾತಿ, ಧರ್ಮ, ಪಕ್ಷ, ಸಂಘಟನೆ ನೋಡದೆ ರಕ್ಷಿಸು ವಲ್ಲಿ ಹಲವು ಯುವಕರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದಾರೆ. ಆ ಯುವಕರ ಸಾಹಸ, ಮಾನವೀಯ ಸೇವೆಗಳ ಬಗ್ಗೆ ಸಂತ್ರಸ್ತರು, ಗ್ರಾಮಸ್ಥರು, ಅಧಿಕಾರಿಗಳು ಹೀಗೆ ವಿವರಿಸುತ್ತಾರೆ.

ಇತ್ತೀಚೆಗೆ ಉಂಟಾದ ನೆರೆಯಿಂದ ನದಿ ಪಾತ್ರದ ಜನರ ಸಾಕಷ್ಟು ಮನೆ, ತೋಟಗಳಿಗೆ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇದಕ್ಕೆ ಆ ಸಂದರ್ಭದಲ್ಲಿ ಇಲ್ಲಿನ ಜನರು ಜಾತಿ, ಧರ್ಮ ಬಿಟ್ಟು ಮಾಡಿದ ರಕ್ಷಣಾ ಕಾರ್ಯವೇ ಕಾರಣ.

ಶೈಲಜಾ, ಚಾರ್ಮಾಡಿ ಗ್ರಾಪಂ ಅಧ್ಯಕ್ಷೆ 

‘‘ಈ ಭಾಗದಲ್ಲಿ ಎರಡು, ಮೂರು ಮುಸ್ಲಿಮ್ ಮನೆಗಳು ಹಾನಿಗೊಂಡಿದೆ. ಬಾಕಿ ಎಲ್ಲವೂ ಹಿಂದೂಗಳ ಮನೆಗಳು ಹಾನಿಗೊಂಡಿರುವುದು. ಆದರೆ ಹಾನಿಗೊಂಡವರ ಮನೆಗಳು ಇನ್ನೊಂದು ಧರ್ಮಕ್ಕೆ ಸೇರಿದ್ದು ಎಂದು ಕೈ ಕಟ್ಟಿ ಕುಳಿತುಕೊಳ್ಳದ ಇಲ್ಲಿನ ಶಕೀಲ್, ನಿಝಾರ್, ಶರೀಫ್ ಅವರ ತಂಡ ಸಂತ್ರಸ್ತರ ಜೊತೆ ಜಾನುವಾರುಗಳನ್ನೂ ರಕ್ಷಣೆ ಮಾಡುವ ಮೂಲಕ ನೈಜ ಮಾನವೀಯತೆ ಮೆರೆದಿದ್ದಾರೆ.

ಗೋಪಾಲಕೃಷ್ಣ, ಚಾರ್ಮಾಡಿ ಗ್ರಾಪಂ ಸದಸ್ಯ 

‘‘ಆಗಸ್ಟ್ 9ರಂದು ಮಧ್ಯಾಹ್ನ ನಾನು ನದಿ ದಡಕ್ಕೆ ಭೇಟಿ ನೀಡಿದಾಗ ನದಿಯಲ್ಲಿ ಅಷ್ಟೊಂದು ನೀರಿನ ಹರಿವು ಇರಲಿಲ್ಲ. ಅಲ್ಲಿಂದ ನಾನು ಕಚೇರಿಗೆ ತಲುಪುವಷ್ಟರಲ್ಲಿ ನದಿಯಲ್ಲಿ ನೀರು ಹೆಚ್ಚಾಗಿರುವ ಸುದ್ದಿ ಬಂತು. ಮತ್ತೆ ನಾನು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಹಲವು ಮನೆಗಳು ಜಲಾವೃತಗೊಂಡಿದ್ದವು. ಜನ, ಜಾನುವಾರುಗಳ ಆಕ್ರಂದನ ಮುಗಿಲು ಮುಟ್ಟಿದ್ದವು. ಈ ಸಮಯದಲ್ಲಿ ಗ್ರಾಮದ ಎಸ್ಕೆಎಸ್ಸೆಸ್ಸೆಫ್ ಹಾಗೂ ಇಲ್ಲಿನ ಕೆಲವು ಮುಸ್ಲಿಮ್ ಯುವಕರು ಮಾಡಿದ ರಕ್ಷಣಾ ಕಾರ್ಯ ತುಂಬಾ ದೊಡ್ಡದು. ತಕ್ಷಣದ ರಕ್ಷಣಾ ಕಾರ್ಯ ಅಲ್ಲದಿದ್ದರೆ ಗ್ರಾಮದಲ್ಲಿ ಆಸ್ತಿಪಾಸ್ತಿಯ ಜೊತೆ ಪ್ರಾಣ ಹಾನಿಯೂ ಸಂಭವಿಸುತ್ತಿತ್ತು’’ ಎಂದು ಚಾರ್ಮಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್.ಪ್ರಕಾಶ್ ತಿಳಿಸಿದ್ದಾರೆ.

‘‘ಶುಕ್ರವಾರ ಮಧ್ಯಾಹ್ನದ ಬಳಿಕ ನದಿಯಲ್ಲಿ ಏಕಾಏಕಿ ನೀರು ಏರತೊಡಗಿತ್ತು. ಈ ರೀತಿಯ ಪ್ರವಾಹ ನಮ್ಮ ಜೀವನದಲ್ಲಿ ಎಂದೂ ನೋಡಿಲ್ಲ. ನೋಡುನೋಡುತ್ತಿದ್ದಂತೆ ನಮ್ಮ ತೋಟ, ಮನೆ ಎಲ್ಲವೂ ಮುಳುಗಡೆಯಾದವು. ಮನೆ, ಜಾನುವಾರುಗಳನ್ನು ರಕ್ಷಣೆ ಮಾಡುವುದು ಬಿಡಿ, ನಮ್ಮನ್ನೇ ನಾವು ರಕ್ಷಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಈ ಸಂದರ್ಭ ಆಗಮಿಸಿದ ಶಕೀಲ್, ನಿಝಾರ್, ಶರೀಫ್ ಹಾಗೂ ಅವರ ತಂಡ ನಮ್ಮನ್ನು ಪ್ರವಾಹದ ನೀರನ್ನು ದಾಟಿಸಿ ಸುರಕ್ಷಿತ ಪ್ರದೇಶಕ್ಕೆ ತಲುಪಿಸಿದರು. ಅಲ್ಲದೆ ನಮ್ಮ ಮನೆ ಸಾಮಗ್ರಿಗಳನ್ನು ಹೊತ್ತುಕೊಂಡು ಬಂದರು. ನೀರಲ್ಲಿ ಮುಳುಗುತ್ತಿದ್ದ ದನಕರುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ರಕ್ಷಿಸಿದರು’’ ಎಂದು ಕೊಳಂಬೆ ನಿವಾಸಿ ಅಮರೇಂದ್ರ ಎಂಬವರು ಅಂದಿನ ಘಟನೆಯನ್ನು ವಿವರಿಸುತ್ತಾರೆ.

‘‘ಪ್ರವಾಹದಿಂದ ಗ್ರಾಮದ 14 ಮನೆಗಳು ಸಣ್ಣ ಕುರುಹು ಇಲ್ಲದಂತೆ ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಅಪರಾಹ್ನ 2ರಿಂದ 3 ಗಂಟೆಯ ಒಳಗೆ ಏಕಾಏಕಿ ಪ್ರವಾಹದ ನೀರು ನುಗ್ಗಿದ್ದು, ಜನರಿಗೆ ಓಡಿ ಪಾರಾಗಲೂ ಸಮಯಾವಕಾಶ ಸಿಗಲಿಲ್ಲ. ಈ ಸಂದರ್ಭ ಜಾತಿ, ಧರ್ಮ ನೋಡದೆ ಎಸ್ಕೆಎಸ್ಸೆಸ್ಸೆಫ್‌ನ ಸ್ಥಳೀಯ ಮುಸ್ಲಿಮ್ ಯುವಕರು ಮಾಡಿದ ಸೇವೆ ಎಂದಿಗೂ ಮರೆಯಲಾಗದು. ಜೀವದ ಹಂಗು ತೊರೆದು ಜನರ ರಕ್ಷಣೆಗೆ ಧುಮುಕಿದ ಅವರ ಸಾಹಸಮಯ ರಕ್ಷಣಾ ಕಾರ್ಯ ಈ ಸಮಾಜಕ್ಕೆ ಮಾದರಿ. ಪ್ರವಾಹದ ಸಂದರ್ಭದಲ್ಲಿ ಇದ್ದ ಆ ಐಕ್ಯ, ಒಗ್ಗಟ್ಟು, ಸಾಮರಸ್ಯ ಎಲ್ಲಾ ಜಾತಿ, ಧರ್ಮದ ಯುವಕರಲ್ಲಿ ಎಂದೆಂದಿಗೂ ಇರುವಂತಾಗಬೇಕು ಎಂದು ನಾನು ಮನವಿ ಮಾಡುತ್ತೇನೆ’’ ಎಂದು ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲಕೃಷ್ಣ ಹೇಳುತ್ತಾರೆ.

‘‘ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯಲ್ಲಿ ಉಂಟಾದ ಭಾರೀ ಮಳೆಯಿಂದ ನದಿಗಳು ಅಪಾ ಯದ ಮಟ್ಟ ಮೀರಿ ಹರಿದಿದ್ದವು. ಹೀಗಾಗಿ ತಗ್ಗು ಪ್ರದೇಶಗಳಿಗೆ ಏಕಾಏಕಿ ಪ್ರವಾಹದ ನೀರು ನುಗ್ಗಿತ್ತು. ಇದರಿಂದ ಜನರು ಸಂಕಷ್ಟಕ್ಕೆ ಒಳಗಾದ ವಿಷಯ ತಿಳಿ ಯಿತು. ಕೂಡಲೇ ನಮ್ಮ ಕಾರ್ಯಕರ್ತರನ್ನು ಸ್ಥಳಕ್ಕೆ ಕರೆಸಿದೆವು. ಹಗ್ಗ, ಆ್ಯಂಬುಲೆನ್ಸ್ ಹೀಗೆ ರಕ್ಷಣಾ ಕಾರ್ಯಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದೆವು. ಜಲಾವೃತ್ತವಾಗಿದ್ದ ಮನೆಗಳಲ್ಲಿ ಸಿಲುಕಿದ್ದ ಜನರನ್ನು ಹೊತ್ತುಕೊಂಡು ರಕ್ಷಣೆ ಮಾಡಿದೆವು. ಅವರ ದನಕರುಗಳನ್ನು ಕೂಡಾ ರಕ್ಷಣೆ ಮಾಡಲಾಗಿದೆ. ವಿಖಾಯದ ಸದಸ್ಯರು ಮೂರು ದಿನಗಳ ಕಾಲ ನಿರಂತರವಾಗಿ ನೆರೆ ಸಂತ್ರಸ್ತರ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಎಂದು ಎಸ್ಕೆಎಸ್ಸೆಸ್ಸೆಫ್ ಮುಖಂಡ ಶರೀಫ್ ಮಾಹಿತಿ ನೀಡಿದ್ದಾರೆ.

ಚಾರ್ಮಾಡಿಯಲ್ಲಿ ಉಂಟಾದ ನೆರೆ ಒಗ್ಗಟ್ಟಿನ ಸಂದೇಶ ಸಾರಿದೆ. ಜನರಲ್ಲಿ ಸಾಮರಸ್ಯ ಮೂಡಿಸಿದೆ. ಪ್ರವಾಹದಲ್ಲಿ ಹರಿದು ಬಂದ ಬೃಹತ್ ಗಾತ್ರದ ಮರಗಳು ಸೇತುವೆಯ ಮೇಲೆ ಬಿದ್ದಿತ್ತು. ಅವುಗಳನ್ನು ತೆರವುಗೊಳಿಸಲು ಸರಕಾರ ಲಕ್ಷಾಂತರ ರೂ. ಖರ್ಚು ಮಾಡಬೇಕಾಗಿತ್ತು. ಆದರೆ ಇಲ್ಲಿನ ಯುವಕರು ಹಗಲು ರಾತ್ರಿ ದುಡಿದು ಅವುಗಳನ್ನು ತೆರವು ಮಾಡಿದ್ದಾರೆ. ಸಂತ್ರಸ್ತರಿಗೆ ತೆರೆದ ಪರಿಹಾರ ಕೇಂದ್ರಕ್ಕೆ ಜಾತಿ, ಧರ್ಮ ಪರಿಗಣಿಸದೆ ಅನ್ನ, ಆಹಾರವನ್ನು ತಲುಪಿಸುವ ಮೂಲಕ ಸರ್ವಧರ್ಮದ ಜನರು ಸಾಮರಸ್ಯ ಮೆರೆದಿದ್ದಾರೆ. ಪ್ರವಾಹದ ಸಂದರ್ಭ ಇಲ್ಲಿನ ಕೆಲವು ಮುಸ್ಲಿಮ್ ಯುವಕರು ಸಕಾಲದಲ್ಲಿ ಮಾಡಿದ ರಕ್ಷಣಾ ಕಾರ್ಯದಿಂದ 10ರಿಂದ 15 ಜನರ ಪ್ರಾಣ ಹಾನಿಯಾ ಗುವುದು ತಪ್ಪಿದಂತಾಗಿದೆ.

ಎಚ್.ಪ್ರಕಾಶ್, ಚಾರ್ಮಾಡಿ ಪಿಡಿಒ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)