varthabharthi

ರಾಷ್ಟ್ರೀಯ

ಮಾಧ್ಯಮ-ಪ್ರತಿಪಕ್ಷ ನಾಯಕರನ್ನು ಪ್ರತ್ಯೇಕಿಸಿದ ಪೊಲೀಸರು: ಆರೋಪ

ಶ್ರೀನಗರ ತಲುಪಿದ ರಾಹುಲ್, ಯೆಚೂರಿ ನೇತೃತ್ವದ ವಿಪಕ್ಷ ನಿಯೋಗಕ್ಕೆ ವಿಮಾನ ನಿಲ್ದಾಣದಲ್ಲಿ ತಡೆ

ವಾರ್ತಾ ಭಾರತಿ : 24 Aug, 2019

Photo: ANI

ಹೊಸದಿಲ್ಲಿ, ಆ.24: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರದ ಬಿಜೆಪಿ ಸರಕಾರ ರದ್ದುಗೊಳಿಸಿದ ಸುಮಾರು 15 ದಿನಗಳ ನಂತರ ಅಲ್ಲಿನ ಸ್ಥಿತಿಗತಿ ಅರಿಯಲು ಇಂದು ರಾಜಧಾನಿಯಿಂದ ವಿಮಾನ ಮೂಲಕ ಜಮ್ಮು ವಿಮಾನ ನಿಲ್ದಾಣ ತಲುಪಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಒಂಬತ್ತು ವಿಪಕ್ಷಗಳ ನಾಯಕರ ನಿಯೋಗಕ್ಕೆ ವಿಮಾನ ನಿಲ್ದಾಣದಿಂದ ಹೊರ ಹೋಗಲು ಅಲ್ಲಿನ ಅಧಿಕಾರಿಗಳು ಅನುಮತಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ವಿಪಕ್ಷಗಳ ನಿಯೋಗ ಇಂದು ಅಪರಾಹ್ನ 2 ಗಂಟೆ ಸುಮಾರಿಗೆ ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ಮಾಧ್ಯಮ ಮಂದಿ ಹಾಗೂ ವಿಪಕ್ಷ ನಾಯಕರನ್ನು ಪ್ರತ್ಯೇಕಿಸಲಾಯಿತಲ್ಲದೆ ಹಲವು ಪತ್ರಕರ್ತರನ್ನು ಬಲವಂತದಿಂದ ವಿಪಕ್ಷ ನಿಯೋಗದಿಂದ ದೂರ ಉಳಿಯುವಂತೆ ಪೊಲೀಸರು ಮಾಡಿದ್ದಾರೆ.
ರಾಹುಲ್ ಹೊರತಾಗಿ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಝಾದ್, ಆನಂದ್ ಶರ್ಮ, ಕಮ್ಯುನಿಸ್ಟ್ ಪಕ್ಷ ನಾಯಕ ಸೀತಾರಾಂ ಯೆಚೂರಿ,  ಶರದ್ ಯಾದವ್, ಮನೋಜ್ ಝಾ (RJD), ಮಜೀದ್ ಮೆಮೊನ್ (ಎನ್‍ಸಿಪಿ), ತಿರುಚಿ ಶಿವ ( ಡಿಎಂಕೆ), ಡಿ ರಾಜಾ ಮುಂತಾದವರು ನಿಯೋಗದಲ್ಲಿದ್ದಾರೆ.

ಪರಿಸ್ಥಿತಿ ಸಹಜ ಸ್ಥಿತಿಗೆ  ಬರುತ್ತಿರುವ ವೇಳೆ ರಾಜ್ಯಕ್ಕೆ ಭೇಟಿ ನೀಡದಂತೆ ವಿಪಕ್ಷ ನಾಯಕರು ದಿಲ್ಲಿಯಿಂದ ಹೊರಡುವ ಮುನ್ನವೇ ಜಮ್ಮು ಕಾಶ್ಮೀರ ಆಡಳಿತ ಅವರನ್ನು ಕೇಳಿಕೊಂಡಿತ್ತು. ಆದರೆ  ನಾಯಕರು ತಾವೇನೂ ಶಾಂತಿ ಕದಡಲು  ಹೋಗುತ್ತಿಲ್ಲ, ಪರಿಸ್ಥಿತಿ ಹೇಗಿದೆಯೆಂದು ತಿಳಿದುಕೊಂಡು ಬರಲು ಹೋಗುತ್ತಿರುವುದಾಗಿ ತಿಳಿಸಿದ್ದರಲ್ಲದೆ, ಪರಿಸ್ಥಿತಿ ಸಹಜವಾಗಿದೆಯಾದರೆ ನಮ್ಮನ್ನೇಕೆ ತಡೆಯುತ್ತಿದ್ದಾರೆ ಎಂದೂ ಪ್ರಶ್ನಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)