varthabharthi

ಕರಾವಳಿ

► 10ಕ್ಕೂ ಅಧಿಕ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಿದ್ದ ► ಎರಡು ಪಾಸ್‌ಪೋರ್ಟ್ ಹೊಂದಿದ್ದ ► ಆಗಾಗ ಮುಖಚಹರೆ ಬದಲಿಸಿಕೊಳ್ಳುತ್ತಿದ್ದ

ಕುಖ್ಯಾತ ವಂಚಕ ಸ್ಯಾಮ್‌ಪೀಟರ್‌ನ ಮತ್ತಷ್ಟು ಅಪರಾಧ ಪ್ರಕರಣ ಬಯಲಿಗೆ

ವಾರ್ತಾ ಭಾರತಿ : 24 Aug, 2019

ಸ್ಯಾಮ್‌ ಪೀಟರ್‌

► ವಿವಿಧ ಭಾಷೆಗಳ ಬಳಕೆಯಲ್ಲಿ ನೈಪುಣ್ಯತೆ ಸಾಧಿಸಿದ್ದ

► ನಕಲಿ ಮಾಧ್ಯಮ ತಂಡವೊಂದನ್ನೂ ಕಟ್ಟಿದ್ದ

► ಪೊಲೀಸ್ ಆಧಿಕಾರಿ-ಸಚಿವರ ಜೊತೆ ಫೋಟೋ ಕ್ಲಿಕ್ಕಿಸುತ್ತಿದ್ದ

►ಗಣ್ಯ ಅತಿಥಿ-ಉದಾರ ದಾನಿ-ಸಭ್ಯ ಎಂದು ಬಿಂಬಿಸುತ್ತಿದ್ದ

ಮಂಗಳೂರು, ಆ. 24: ಎನ್‌ಸಿಐಬಿ ನಿರ್ದೇಶಕ ಎಂದು ಹೇಳಿಕೊಂಡು ದರೋಡೆಗೆ ಸಂಚು ರೂಪಿಸಿ ಕಳೆದ ವಾರ ಬಂಧಿಸಲ್ಪಟ್ಟ ಕೇರಳ ಮೂಲದ ಸ್ಯಾಮ್‌ಪೀಟರ್‌ನ ಮತ್ತಷ್ಟು ವಂಚನೆ ಬಯಲಿಗೆ ಬಂದಿದೆ.

ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎರಡು ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ‘ಸೆಟಲ್ಮೆಂಟ್/ಡೀಲ್’ ನಡೆಸಲು ಬಂದಿದ್ದ ಸ್ಯಾಮ್ ಪೀಟರ್ ಸಹಿತ 8 ಮಂದಿಯನ್ನೂ ತೀವ್ರ ತನಿಖೆಗೊಳಪಡಿಸಲಾಗಿದೆ. ಆರೋಪಿಗಳು ನೀಡಿದ ಮಾಹಿತಿಯಂತೆ ನ್ಯಾಯವಾದಿ ಮುಝಫರ್‌ರನ್ನೂ ವಿಚಾರಣೆಗೊಳಪಡಿಸಲಾಗುವುದು. ಸ್ಯಾಮ್‌ ಪೀಟರ್‌ನನ್ನು ವಿಚಾರಣೆ ನಡೆಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ಆ ನಂತರ ಸಂಬಂಧಪಟ್ಟ ತನಿಖಾ ಏಜೆನ್ಸಿ ಮತ್ತು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಯಾಮ್‌ ಪೀಟರ್‌ ವಿರುದ್ಧ ಬಾಡಿ ವಾರಂಟ್ ಹೊರಡಿಸಿ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸಿಬಿಐ ಮತ್ತು ಇಂಟರ್‌ಪೋಲ್ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಆರೋಪಿ ಸ್ಯಾಮ್‌ಪೀಟರ್ ಹಲವು ರಾಜ್ಯಗಳಲ್ಲಿ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿ ಜನರಿಂದ, ಬ್ಯಾಂಕ್ ಹಾಗು ಮತ್ತಿತರ ಹಣಕಾಸು ಸಂಸ್ಥೆ ಮತ್ತು ಕೆಲವು ಸೂಕ್ಷ್ಮ ವಿಷಯಗಳಲ್ಲಿ ತನಗೆ ಅಧಿಕಾರವಿರದಿದ್ದರೂ ಕೂಡ ಕೆಲಸ ಮಾಡಿ ಕೊಡುವುದಾಗಿ ಹೇಳಿ ಹಣ ಪಡೆದು ಮೋಸ ಮಾಡುತ್ತಿದ್ದ. ಈತ ತನ್ನ ಬಗ್ಗೆ ಯಾರಿಗೂ ಗೊತ್ತಾಗದಂತೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದ. ಒಂದು ಕಡೆ ಅಪರಾಧ ನಡೆಸಿ ಇನ್ನೊಂದು ಕಡೆ ಹೋಗಿ ವಾಸ ಮಾಡುತ್ತಿದ್ದ. ಆವಾಗ ತನ್ನ ಹೆಸರನ್ನು ಬದಲಾಯಿಸಿ ಕೊಳ್ಳುತ್ತಿದ್ದ. ಈತನ ನಿಜನಾಮ ಆ್ಯಂಟನಿ ಎಂದಾಗಿದೆ. ಅದನ್ನು ಯಾರಿಗೂ ಗೊತ್ತಾಗಂತೆ ಬಚ್ಚಿಟ್ಟು, ಬೇರೆ ಬೇರೆ ಹೆಸರಿನಿಂದ ಮೋಸ ಮಾಡುತ್ತಿದ್ದ. ಕೊಡಗಿನಲ್ಲಿದ್ದಾಗ ರಾಹುಲ್ ಪೀಟರ್, ಮಹಾರಾಷ್ಟ್ರದಲ್ಲಿ ಸ್ಯಾಮ್ ಪೀಟರ್, ಉತ್ತರದ ಪ್ರದೇಶದಲ್ಲಿ ರಾಜೇಶ್ ರಾಬಿನ್ ಸನ್, ಮತ್ತಿತರ ಕಡೆ ರೀತು ರಿಚರ್ಡ್, ರಾಯ್ ಜೇಕಬ್, ರಾಬಿನ್ ರಿಚರ್ಡ್‌ ಸನ್, ರಿಚರ್ಡ್ ರಾಬಿನ್ ಸನ್ ಎಂಬ ಹೆಸರುಗಳನ್ನಿಟ್ಟುಕೊಂಡು ವಂಚಿಸುತ್ತಿದ್ದ.

ಸ್ಯಾಮ್‌ ಪೀಟರ್‌ ಕೇರಳ ಮತ್ತು ಒರಿಸ್ಸಾದ ಎರಡು ವಿಳಾಸ ನೀಡಿ ಬೇರೆ ಬೇರೆ ಹೆಸರಿನಲ್ಲಿ ಪಾಸ್‌ಪೋರ್ಟ್ ಹೊಂದಿದ್ದಾನೆ. ಕೇರಳದಿಂದ ರಾಜೇಶ್ ರಾಬಿನ್ ಸನ್ ರಾಯ ಜೇಕೆಬ್ ಎಂಬ ಹೆಸರಿನಲ್ಲಿ ಮತ್ತು ಒರಿಸ್ಸಾದಿಂದ ಸ್ಯಾಮ್ ಪೀಟರ್ ಎಂಬ ಹೆಸರಿನಲ್ಲಿ ಪಾಸ್‌ಪೋರ್ಟ್ ಪಡೆದಿದ್ದ. ಈ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ.

ದೇಶದ ವಿವಿಧ ರಾಜ್ಯಗಳಲ್ಲಿ ಅಪರಾಧ ಮಾಡುತ್ತಾ ಕಳೆದ 18 ವರ್ಷದಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಈಗಾಗಲೆ ಈತನ ವಿರುದ್ಧ 14 ಪ್ರಕರಣ ದಾಖಲಾಗಿದೆ. ಅದರಲ್ಲಿ ಸಿಬಿಐ, ಗಾಝಿಯಾಬಾದ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಛತ್ತೀಸ್‌ಗಡ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ತಮಿಳುನಾಡು ಸಹಿತ ಮತ್ತಿತರ ರಾಜ್ಯದಲ್ಲಿ ನಡೆದ ಪ್ರಕರಣವೂ ಸೇರಿವೆ.

ಉತ್ತರ ಪ್ರದೇಶದ ಸದರ್ ಬಝಾರ್ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್‌ಗೆ ವಂಚಿಸಿದ ಪ್ರಕರಣ ಪ್ರಮುಖವಾದುದು. ಈ ಬಗ್ಗೆ ಸಿಬಿಐ ತನಿಖಾ ಸಂಸ್ಥೆಯು ಈತನ ವಿರುದ್ಧ ರೆಡ್‌ಕಾರ್ನರ್ ನೊಟೀಸ್ ಹೊರಡಿಸಿದೆ. ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಸಾವಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿ ಉದ್ಘೋಷಣೆ ನೀಡಲಾಗಿದೆ. ಕೊಡಗಿನ ಕುಶಾಲನಗರದಲ್ಲಿ ಕರ್ಣಾಟಕ ಬ್ಯಾಂಕ್‌ಗೆ ಮೋಸ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಅಲ್ಲದೆ ‘ಚಿಕ್ಕಮಗಳೂರು ಗ್ರಾಮೀಣ ಬ್ಯಾಂಕ್’ಗೆ ಮೋಸ ಮಾಡಿದ ಬಗ್ಗೆಯೂ ಕುಶಾಲ ನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣ ವಂಚಿಸಿದ ಬಗ್ಗೆ ಛತ್ತಿಸ್‌ಗಡ, ಬಿಹಾರ ಜಾರ್ಖಂಡ್, ಮಧ್ಯಪ್ರದೇಶ, ತಮಿಳುನಾಡು ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ವಿದೇಶದಲ್ಲೂ ತಲೆಮರೆಸಿಕೊಂಡಿದ್ದ ಸ್ಯಾಮ್‌ಪೀಟರ್‌ ಇತ್ತೀಚಿನ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಿ ಓಡಾಡಿಕೊಂಡಿದ್ದ. ಹಾಗೇ ಎನ್‌ಸಿಐಬಿ ಬೋರ್ಡ್ ಹಾಕಿಕೊಂಡ ಅದರ ನಿರ್ದೇಶಕ ಎಂದು ಬಿಂಬಿಸಿ ಜನರನ್ನು ಹೆದರಿಸಿ, ತನ್ನ ಬಾಡಿಗಾರ್ಡ್‌ಗಳೊಂದಿಗೆ ಅಪಹರಿಸಿ ಹಣ ವಸೂಲಿ ಮಾಡುತ್ತಿದ್ದ. ಡೀಲ್ ಅಥವಾ ಸೆಟ್ಲ್‌ಮೆಂಟ್ ಹೆಸರಿನಲ್ಲಿ ಹಲವರಿಂದ ಹಣ ತೆಗೆದುಕೊಂಡು ಮೋಸ ಮಾಡಿದ್ದ. ಈ ಬಗ್ಗೆ ಯಾರು ಎಲ್ಲಿಯೂ ದೂರು ನೀಡಿದ ಬಗ್ಗೆ ಮಾಹಿತಿ ಈವರೆಗೆ ಸಿಕ್ಕಿಲ್ಲ.

ಸ್ಯಾಮ್‌ ಪೀಟರ್‌ನನ್ನು ಬಂಧಿಸಿದ ಬಳಿಕ ಕದ್ರಿ ಠಾಣೆಯಲ್ಲಿ ಶಸ್ತ್ರಾಸ್ತ ನಿಷೇಧ ಕಾಯ್ದೆ ಮತ್ತು ರಾಜ್ಯ ಲಾಂಛನವನ್ನು ಅಕ್ರಮವಾಗಿ ಬಳಸಿದ ಬಗ್ಗೆ ಹಾಗೂ ರೈಸ್‌ಪುಲ್ಲಿಂಗ್ ವಿಷಯಕ್ಕೆ ಸಂಬಂಧಿಸಿ ರಿಯಾಝ್‌ ಎಂಬಾತನನ್ನು ಅಪಹರಿಸಿದ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮತ್ತು ಬೆಂಗಳೂರು ನಗರದ ಯಲಹಂಕದ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಮುಝಫರ್ ಅಹ್ಮದ್ ಎಂಬ ವಕೀಲನನ್ನು ಪರಿಚಯ ಮಾಡಿಕೊಂಡು ಆತನೊಂದಿಗೆ ಸೇರಿಕೊಂಡು ಸಂಚು ರೂಪಿಸಿ ಹಣ ತೆಗೆಸಿ ಕೊಡುವ ಪ್ಲಾನ್ ಮಾಡಿಕೊಂಡು ಪೊಲೀಸರ ತರಹ ಕೆಲಸ ಮಾಡಿಕೊಂಡು ಜನರಿಂದ ದೂರು ಪಡೆದು ತನಿಖೆ ಮಾಡುವುದಾಗಿ ಹೇಳಿ ಅವರಿಂದ ಹಣ ಪಡೆದು ನಂಬಿಸಿ ಮೋಸ ಮಾಡುತ್ತಿದ್ದ. ಸ್ಯಾಮ್‌ಪೀಟರ್ ಮಂಗಳೂರಿಗೆ ಆಗಮಿಸಿದ್ದೇ ಎರಡು ಪ್ರಮುಖ ಡೀಲ್ ಮಾಡುವುದಕ್ಕಾಗಿ. ಕಳೆದ 18 ವರ್ಷದಿಂದ ತಲೆಮರೆಸಿಕೊಂಡಿದ್ದ ಈತ ಮಂಗಳೂರು ಪೊಲೀಸರಿಗೆ ಸುಲಭವಾಗಿ ಸಿಕ್ಕಿ ಬಿದ್ದಿರುವುದು ಗಮನಾರ್ಹ.

ಪ್ರಕರಣ 1

‘ದುಬೈ ಶರೀಫ್’ ಎಂಬಾತನ ಚಿನ್ನವನ್ನು ಬೆಂಗಳೂರಿನ ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ದುಬೈ ಶರೀಫ್ ಬೆಂಗಳೂರಿನ ವಕೀಲ ಮುಝಾಫರ್ ಅಹ್ಮದ್ ಬಳಿ ತಿಳಿಸಿದಾಗ ಆತ ಗಿರೀಶ್ ರೈ ಮತ್ತು ಇಮ್ತಿಯಾಝ್ ಎಂಬವರನ್ನು ಶರೀಫ್‌ಗೆ ಪರಿಚಯಿಸಿ ಕಸ್ಟಮ್ ಇಲಾಖೆಯಲ್ಲಿ ಕೇಸು ಆಗದಂತೆ ನೋಡಿಕೊಳ್ಳುತ್ತಾರೆ ಎಂದು ಭರವಸೆ ನೀಡಿದ್ದಲ್ಲದೆ ಗಿರೀಶ್ ರೈ ಮತ್ತು ಇಮ್ತಿಯಾಝ್‌ಗೆ 1.7 ಕೋ.ರೂ.ವನ್ನು ಶರೀಫ್‌ರಿಂದ ಕೊಡಿಸಿದ್ದ. ಆದರೆ ದುಬೈ ಶರೀಫ್‌ನ ವಿರುದ್ಧ ಕಸ್ಟಮ್ ಇಲಾಖೆಯಲ್ಲಿ ಪ್ರಕರಣ ದಾಖಲಾದುದರಿಂದ ಶರೀಫ್ ತನಗೆ ಬರಬೇಕಾಗಿದ್ದ 1.7 ಕೋ.ರೂ.ಗಾಗಿ ವಕೀಲ ಮುಝಾಫರ್‌ನ ಬೆನ್ನ ಹಿಂದೆ ಬೀಳತೊಡಗಿದ. ಅದರಂತೆ ಮುಝಫರ್ ಅಹ್ಮದ್ ಮಂಗಳೂರಿಗೆ ತೆರಳಿ ಗಿರೀಶ್ ರೈ ಮತ್ತು ಇಮ್ತಿಯಾಝ್‌ರನ್ನು ಅಪಹರಿಸಿ, ಹಣ ವಸೂಲಿ ಮಾಡಿಕೊಡುವಂತೆ ತನಗೆ ಸೂಚಿಸಿದ್ದಲ್ಲದೆ ಅದಕ್ಕಾಗಿ ಮಂಗಳೂರಿನಲ್ಲಿ ಅಬ್ದುಲ್ ಲತೀಫ್ ಮತ್ತು ಜಿ. ಮೊಹಿದ್ದಿನ್ ಚೆರಿಯ ಎಂಬವರು ಸಹಾಯ ಮಾಡುತ್ತಾರೆಂದು ತಿಳಿಸಿದ್ದ. ಹಾಗೇ ತಾನು ಮಂಗಳೂರಿಗೆ ಬಂದಾಗ ಲತೀಫ್ ಮತ್ತು ಚೆರಿಯ ಸಹಕರಿಸಿದ್ದಾರೆ’ ಎಂದು ಸ್ಯಾಮ್‌ ಪೀಟರ್ ಪೊಲೀಸರಲ್ಲಿ ಬಾಯ್ಬಿಟ್ಟಿದ್ದಾನೆ.

ಲತೀಫ್ ಮತ್ತು ಚೆರಿಯ ಪ್ರಮುಖ ಆರೋಪಿ ಸ್ಯಾಮ್‌ ಪೀಟರ್‌ ಗೆ ಮಂಗಳೂರಿನಲ್ಲಿ ಉಳಕೊಳ್ಳಲು ಸಹಕರಿಸಿ ಆತನೊಂದಿಗೆ ಕೃತ್ಯಕ್ಕೆ ಸಂಚು ರೂಪಿಸಿ ಗಿರೀಶ್ ರೈ ಮತ್ತು ಇಮ್ತಿಯಾಝ್‌ರಿಂದ ಹಣ ವಸೂಲಿ ಮಾಡಿ ಬಂದ ಹಣದಲ್ಲಿ ಇಂತಿಷ್ಟು ಪರ್ಸೆಂಟೇಜ್ ನೀಡುವ ಬಗ್ಗೆ ಮಾತುಕತೆ ಮಾಡಿರುತ್ತಾರೆ ಎಂದು ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್.ಸ್ಪಷ್ಟಪಡಿಸಿದ್ದಾರೆ.

ನ್ಯಾಯವಾದಿ ಮುಝಫರ್ ಅಹ್ಮದ್ ಆರೋಪಿ ಸ್ಯಾಮ್‌ಪೀಟರ್‌ ಗೆ ಆತನ ಹೆಸರಿಲ್ಲಿ ಸಿಮ್ಕಾರ್ಡ್ ತೆಗೆದುಕೊಳ್ಳದಂತೆ, ವಾಹನಕ್ಕೆ ಯಾವುದೇ ನೋಂದಣಿ ಸಂಖ್ಯೆ ಹಾಕದಂತೆ, ತನ್ನ ಮೊಬೈಲ್ ನಲ್ಲಿ ಡಿಸಿಪಿ, ಎಸಿಪಿಗಳ ಹೆಸರನ್ನು ಸೇವ್‌ ಮಾಡುವಂತೆ ಸಲಹೆ ನೀಡಿದ್ದಾನೆ. ಸ್ಯಾಮ್‌ ಪೀಟರ್‌ ಒಬ್ಬ ನಕಲಿ ಅಧಿಕಾರಿ ಎಂದು ಮುಝಫರ್‌ಗೆ ಗೊತ್ತಿದ್ದರೂ ಕೂಡ ಅಪರಾಧ ಕೃತ್ಯಗಳಿಗೆ ಸಹಕರಿಸಿಸುತ್ತಿದ್ದ ಎಂದು ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ತಿಳಿಸಿದ್ದಾರೆ.

ಪ್ರಕರಣ 2

ಕೇರಳದ ರಾಘವೇಂದ್ರ ಸ್ವಾಮೀಜಿಯ ಮಠದ ವಿವಾದವನ್ನು ಇತ್ಯರ್ಥ ಪಡಿಸುವಂತೆ ತಿಳಿಸಿ ಉಡುಪಿಯ ಕಲ್ಪನಾ ಲಾಡ್ಜ್‌ನ ಮಾಲಕ ರಾಮಚಂದ್ರ ನಾಯಕ್ ಎಂಬಾತ ಸ್ಯಾಮ್‌ಪೀಟರ್‌ ನಿಗೆ ಹಣ ಕೊಟ್ಟಿದ್ದ. ಅಲ್ಲದೆ ಕೇರಳದ ರಾಘವೇಂದ್ರ ಸ್ವಾಮೀಜಿಯು ದೂರು ಅರ್ಜಿಯನ್ನು ಸ್ಯಾಮ್ ಪೀಟರ್‌ನಿಗೆ ನೀಡಿದ್ದರು. ಈ ವಿಷಯಕ್ಕೆ ಸಂಬಂಧಿಸಿ ರಾಘವೇಂದ್ರ ಸ್ವಾಮೀಜಿಯ ಎದ್ರಿದಾರರನ್ನು ವಿಚಾರಿಸಲು/ಹೆದರಿಸಲು/ಅಪಹರಿಸಲು ಕೂಡಾ ತಾನು ಮಂಗಳೂರಿಗೆ ಬಂದಿದ್ದೇನೆ ಎಂದು ಎಂದು ತನಿಖೆಯ ವೇಳೆ ಸ್ಯಾಮ್‌ಪೀಟರ್ ಬಾಯ್ಬಿಟ್ಟಿದ್ದಾನೆ. ಇದಕ್ಕೂ ಅಬ್ದುಲ್ ಲತೀಫ್ ಮತ್ತು ಚೆರಿಯ ಸಹಾಯವನ್ನು ಪಡೆದಿದ್ದ.

ಆರೋಪಿಗಳಾದ ಸ್ಯಾಮ್ ಪೀಟರ್, ಅಬ್ದುಲ್ ಲತೀಫ್ ಮತ್ತು ಜಿ. ಮೊಹಿದ್ದಿನ್ ಚೆರಿಯ ಅವರ ಮನೆಯನ್ನು ನ್ಯಾಯಾಲಯದ ಸರ್ಚ್ ವಾರಂಟ್ ಪಡೆದು ತಪಾಸಣೆ ನಡೆಸಿದಾಗ ಆರೋಪಿ ಮೊಹಿದ್ದಿನ್ ಚೆರಿಯ ಮನೆಯಲ್ಲಿ ತಲವಾರು ಪತ್ತೆಯಾಗಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಸ್ ಪುಲ್ಲಿಂಗ್ ಕೇಸ್‌ನಲ್ಲಿ ಚಿಕ್ಕಬಳ್ಳಾಪುರದ ರಿಯಾಝ್‌ನನ್ನು ಅಪಹರಿಸಿ ಆತನಿಂದ ಹಣಕ್ಕಾಗಿ ಸಿಲೆರಿಯಾ ಕಾರನ್ನು ಪಡೆದು ಅದನ್ನು ತನ್ನ ಹೆಸರಿಗೆ ಹೆದರಿಸಿ ಬರೆಸಿಕೊಂಡಿದ್ದ ಸ್ಯಾಮ್‌ಪೀಟರ್ ಕಾರನ್ನು ಕೊಂಡುಹೋಗಿದ್ದ. ಇದೀಗ ಆ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಯಾಮ್‌ ಪೀಟರ್‌ ಇತರರಿಗೆ ಪೋನ್ ಮಾಡಿ ಹೆದರಿಸಿದಾಗ ತನ್ನ ಬಗ್ಗೆ ಯಾರಿಗೂ ಗೊತ್ತಾಗಬಾರದೆಂದು ಮತ್ತು ಯಾವುದೇ ಸಿಮ್ ಕಾರ್ಡ್‌ನ್ನು ತನ್ನ ಹೆಸರಿನಲ್ಲಿ ಪಡೆದುಕೊಂಡಿಲ್ಲ ಎಂಬ ವಿಚಾರ ತನಿಖೆಯಿಂದ ತಿಳಿದು ಬಂದಿದೆ. ಅಂದರೆ ಸ್ಯಾಮ್‌ಪೀಟರ್‌ ಬಳಸುವ ಎಲ್ಲಾ ಸಿಮ್ ಗಳು ಬೇರೆಯವರ ಹೆಸರಿನಲ್ಲಿ ಪಡೆದುಕೊಂಡದ್ದಾಗಿದೆ.

ಸ್ಯಾಮ್‌ಪೀಟರ್‌ ಜನರನ್ನು ನಂಬಿಸಲು ತಾನೆ ತನ್ನ ಮೊಬೈಲ್ ನಲ್ಲಿ ‘ಎಸಿಪಿ ಬೆಂಗಳೂರು’ ಎಂಬ ಹೆಸರು ಸೇವ್ ಮಾಡಿದ್ದು, ಅದಕ್ಕೆ ಮೇಸೆಜ್‌ಗಳನ್ನು ಕಳುಹಿಸಿ ಜನರಿಗೆ ತೋರಿಸಿ ತಾನು ಪೊಲೀಸ್ ಅಧಿಕಾರಿಯ ಸಂಪರ್ಕದಲ್ಲಿರುವುದಾಗಿ ನಂಬಿಸುತ್ತಿದ್ದ.

ತನ್ನ ಎನ್‌ಸಿಐಬಿ ಸಂಸ್ಥೆ ಮೋಸ ಮಾಡಿದವರನ್ನು ಪತ್ತೆ ಮಾಡಿರುವುದಾಗಿ ‘ನ್ಯೂಸ್ ಕವರೇಜ್’ ವಿಡೀಯೊ ಮಾಡಿ ಆ ವಿಡೀಯೊವನ್ನು ತನ್ನ ಮೊಬೈಲ್ನಲ್ಲಿಟ್ಟುಕೊಂಡು ಅದನ್ನು ಬೇರೆ ಬೇರೆ ವ್ಯಕ್ತಿಗಳಿಗೆ ತಾನು ಅಪರಾಧವನ್ನು ಪತ್ತೆ ಮಾಡಿರುವುದಾಗಿ ತೋರಿಸಿ ಜನರನ್ನು ನಂಬಿಸುತ್ತಿದ್ದ.

ತಾನು ಎನ್‌ಸಿಐಬಿ ನಿರ್ದೇಶಕ ಎಂದು ಹೇಳಿಕೊಂಡು ಗಣ್ಯರೊಂದಿಗೆ, ರಾಜಕೀಯ ವ್ಯಕ್ತಿಗಳೊಂದಿಗೆ ಪೊಟೋ ತೆಗೆಸಿಕೊಂಡು ಅದನ್ನು ಜನರಿಗೆ ತೋರಿಸಿ ತನ್ನ ದುಷ್ಕೃತ್ಯವನ್ನು ಮಾಡಿಕೊಳ್ಳುತ್ತಿದ್ದ. ಅಲ್ಲದೆ ಎನ್‌ಸಿಐಬಿ ನಿರ್ದೇಶಕ ಎಂದು ಹೇಳಿಕೊಂಡು ಎಲ್ಲಾ ಕಡೆ ವಿವಿಧ ಸವಲತ್ತುಗಳನ್ನು ಪಡೆಯುತ್ತಿದ್ದ.

ಉಡುಪಿಯ ನಿಖಿಲ್, ಅಬೂಬಕ್ಕರ್ ಮತ್ತು ತಲಪಾಡಿಯ ಸಿದ್ದೀಕ್‌ ಎಂಬವರಿಗೆ ತಾನು ಎನ್‌ಸಿಐಬಿ ನಿರ್ದೇಶಕ ಎಂದು ಹೇಳಿ ನಂಬಿಸಿ ಅವರಿಂದ ಹಣ ಪಡೆದು ವಂಚಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಿಸುವಂತೆ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಸೂಚಿಸಲಾಗಿದೆ.

ರೈಸ್‌ಪುಲ್ಲಿಂಗ್ ವಿಷಯಕ್ಕೆ ಸಂಬಂಧಿಸಿ ರಿಯಾಝ್‌ನನ್ನು ಅಪಹರಿಸಿ ಹಣ ವಸೂಲಿ ಮಾಡಲು ಸಹಕರಿಸಿದ್ದ ನಿಖಿಲ್, ಅಬೂಬಕ್ಕರ್, ಭಾರತಿ ಎಂಬವರನ್ನು ದಿಬ್ಬೂರಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿಎಸ್‌ಬಿ ಮುಖಂಡರ ಹತ್ಯೆಗೆ ಸಂಚು ಆರೋಪ

ಕದ್ರಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಸ್ಯಾಮ್ ಪೀಟರ್ ಮಂಗಳೂರಿನ ಗೌಡ ಸಾರಸ್ವತ ಸಮಾಜ (ಜಿಎಸ್‌ಬಿ)ದ ಪ್ರತಿಷ್ಠಿತ ವ್ಯಕ್ತಿಗಳ ಹತ್ಯೆ ಅಥವಾ ಅಪಹರಣಕ್ಕೆ ಸಂಚು ರೂಪಿಸಿದ್ದಾನೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಜಿಎಸ್‌ಬಿ ಸಮಾಜದ ಇಬ್ಬರು ಸ್ವಾಮೀಜಿಗಳ ನಡುವೆ ತಲೆದೋರಿರುವ ಆಸ್ತಿಯ ವಿವಾದವನ್ನು ಬಗೆಹರಿಸಿಕೊಡಲು ಆರೋಪಿ ಸ್ಯಾಮ್‌ಪೀಟರ್‌ ಕ್ರಿಮಿನಲ್ ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಪಡೆದ ಜಿಎಸ್‌ಬಿ ಸಮಾಜದ ಮುಖಂಡರು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಉಡುಪಿಯ ಕಲ್ಪನಾ ರೆಸಿಡೆನ್ಸಿಯ ಮಾಲಕ ರಾಮಚಂದ್ರ ನಾಯಕ್ ಮೂಲಕ ಜಿಎಸ್‌ಬಿ ಪರಿತ್ಯಕ್ತ ಸ್ವಾಮೀಜಿಯೊಬ್ಬರನ್ನು ಸಂಪರ್ಕಿಸಿದ್ದ ಸ್ಯಾಮ್ ಪೀಟರ್, ಮಠದ ಆಸ್ತಿ ವಿವಾದವನ್ನು ಬಗೆಹರಿಸಿಕೊಡಲು 15 ಲಕ್ಷ ರೂ. ಮುಂಗಡ ಹಣ ಪಡೆದಿದ್ದ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಪೊಲೀಸರು ಈಗಾಗಲೇ ರಾಮಚಂದ್ರ ನಾಯಕ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಜಿಎಸ್‌ಬಿ ಸಮಾಜದ ಸಂಯಮೀಂದ್ರ ತೀರ್ಥ ಸ್ವಾಮೀಜಿಯನ್ನು ಬ್ಲಾಕ್‌ಮೇಲ್ ಮಾಡಿ ಬೆದರಿಸಲು ಅಥವಾ ಸ್ವಾಮೀಜಿಯ ಅಪ್ತರ ಪೈಕಿ ಓರ್ವರನ್ನು ಅಪಹರಣ-ಹತ್ಯೆ ನಡೆಸಲು ಸ್ಯಾಮ್‌ಪೀಟರ್‌ ಯೋಜನೆ ರೂಪಿಸಿದ್ದ ಬಗ್ಗೆ ದೊರೆತ ಮಾಹಿತಿಯಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)