varthabharthi

ವಿಶೇಷ-ವರದಿಗಳು

ವಿಶ್ವಸಂಸ್ಥೆಯಲ್ಲಿ ಭಾರತದ ಕೈ ಮೇಲೆ ಮಾಡಿದ ‘ಅಕ್ಬರುದ್ದೀನ್ ದಿ ಗ್ರೇಟ್’

ವಾರ್ತಾ ಭಾರತಿ : 24 Aug, 2019
ಸೈಯದ್ ಮುಹಮ್ಮದ್, Thehindu.com

ಪಾಕಿಸ್ತಾನಿ ಪತ್ರಕರ್ತರಿಗೆ ಸ್ನೇಹಹಸ್ತವನ್ನು ಚಾಚಿದ್ದಕ್ಕಾಗಿ ಮತ್ತು ಕಾಶ್ಮೀರ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮುಚ್ಚಿದ ಕೊಠಡಿಯಲ್ಲಿನ ಸಭೆಯಲ್ಲಿ ವಿಧಿ 370 ದೇಶದ ಆಂತರಿಕ ವಿಷಯವಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದಕ್ಕಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ಅವರ ಬಗ್ಗೆ ಟ್ವಿಟರಿಗರು ಪ್ರಶಂಸೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಮೃದು ಸ್ವಭಾವದ ಈ ರಾಜತಾಂತ್ರಿಕ ನಿಝಾಮ್ ಕಾಲೇಜು ವಿದ್ಯಾರ್ಥಿ ಯೂನಿಯನ್ನಿನ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಸೇರಿದಂತೆ ಹೈದರಾಬಾದಿನೊಂದಿಗೆ ಗಾಢವಾದ ಸಂಬಂಧಗಳನ್ನು ಹೊಂದಿದ್ದಾರೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

ಅವರೋರ್ವ ಏಕಾಗ್ರ ಚಿತ್ತದ,ನೇರ ಸ್ವಭಾ ವದ, ಮೃದು ಭಾಷಿ ವ್ಯಕ್ತಿಯಾಗಿದ್ದು,ಅಜಾತಶತ್ರುವಾಗಿದ್ದಾರೆ ಎಂದು ಅಕ್ಬರುದ್ದೀನ್ ಒಡನಾಡಿಗಳು ಅವರನ್ನು ಬಣ್ಣಿಸಿದ್ದಾರೆ.

1977ರಿಂದ 1980ರವರೆಗೆ ಅವರು ನಿಝಾಮ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದರು. ಅವರ ತಂದೆ ಬಶೀರುದ್ದೀನ್ ಅವರು 1970ರ ದಶಕದಿಂದ ಆರಂಭಿಸಿ 1980ರ ದಶಕದ ಮಧ್ಯಭಾಗದವರೆಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದು,ಬಳಿಕ ಹೈದರಾಬಾದ್‌ನ ಡಾ.ಬಿ.ಆರ್.ಅಂಬೇಡ್ಕರ್ ಮುಕ್ತ ವಿವಿಯ ಕುಲಪತಿಗಳಾಗಿದ್ದರು. ಅವರು ಕತರ್‌ನಲ್ಲಿ ಭಾರತೀಯ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು.

 ಅಕ್ಬರುದ್ದೀನ್ ಕಾಲೇಜಿನಲ್ಲಿ ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು ಮತ್ತು ಅತ್ಯಂತ ಜನಪ್ರಿಯರಾಗಿದ್ದರು. ಅವರ ನೇರವಾದ ಸ್ವಭಾವ ಮತ್ತು ಮೃದುಭಾಷಿ ವ್ಯಕ್ತಿತ್ವ ಇಂದಿಗೂ ಹಾಗೆಯೇ ಉಳಿದುಕೊಂಡಿದೆ ಎಂದು ಆರು ತಿಂಗಳ ಹಿಂದಷ್ಟೇ ಅಕ್ಬರುದ್ದೀನ್‌ರನ್ನು ಭೇಟಿಯಾಗಿದ್ದ ಅವರ ಸ್ನೇಹಿತ ಹಾಗೂ ಪತ್ರಕರ್ತ ಎಂ.ಸೋಮಶೇಖರ ಹೇಳಿದರು.

‘ ಅಕ್ಬರುದ್ದೀನ್ ನಮ್ಮ ವಿದ್ಯಾರ್ಥಿಯಾಗಿದ್ದರು ಎಂದು ಹೇಳಿಕೊಳ್ಳಲು ತುಂಬ ಹೆವ್ಮೆುಯಾಗುತ್ತಿದೆ ’ ಎಂದು ಅವರು ಅಧ್ಯಯನ ಮಾಡಿದ್ದ ಬೇಗಮ್‌ಪೇಟ್‌ನ ಹೈದರಾಬಾದ್ ಪಬ್ಲಿಕ್ ಸ್ಕೂಲ್ ಟ್ವೀಟಿಸಿದೆ.

  ಅಕ್ಬರುದ್ದೀನ್ ನಿಜವಾದ ಜಾತ್ಯತೀತರಾಗಿದ್ದಾರೆ ಮತ್ತು ಅತ್ಯಂತ ಸಮರ್ಥ ವ್ಯಕ್ತಿಯಾಗಿದ್ದಾರೆ. ರಾಜತಾಂತ್ರಿಕ ವಿಷಯಗಳಲ್ಲಿ ಮಾತ್ರವಲ್ಲ,ದೇಶದ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಲ್ಲಿಯೂ ಅವರು ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ ಎಂದು ನಿಝಾಮ್ ಕಾಲೇಜಿನಲ್ಲಿ ಅವರಿಗಿಂತ ಒಂದು ವರ್ಷ ಕಿರಿಯರಾಗಿದ್ದ ‘ಸಿಯಾಸತ್ ’ ದೈನಿಕದ ವ್ಯವಸ್ಥಾಪಕ ಸಂಪಾದಕ ಝಹೀರುದ್ದೀನ್ ಅಲಿ ಖಾನ್ ಹೇಳಿದರು.

‘ನಾವು 2013ರಲ್ಲಿ ದಿಲ್ಲಿಯಲ್ಲಿ ಭಾರತೀಯ ಲಿಪಿಶಾಸ್ತ್ರಕ್ಕೆ ಸಂಬಂಧಿಸಿದ ಪ್ರದರ್ಶನವೊಂದನ್ನು ಏರ್ಪಡಿಸಿದ್ದೆವು. ಅಲ್ಲಿ ಅದರ ಸಾಮರ್ಥ್ಯವನ್ನು ತಿಳಿದುಕೊಂಡಿದ್ದ ಅಕ್ಬರುದ್ದೀನ್ ಅದನ್ನು ಜಾಗತಿಕ ಇಸ್ಲಾಂ ಸಂಸ್ಕೃತಿಗೆ ಭಾರತದ ಕೊಡುಗೆಯನ್ನಾಗಿ ಬಿಂಬಿಸಲು ಬಯಸಿದ್ದರು. ಅವರು ಸಂಪೂರ್ಣ ವೃತ್ತಿಪರರಾಗಿದ್ದು ಎಂದಿಗೂ ವಿವಾದಗಳಲ್ಲಿ ಸಿಲುಕಿಲ್ಲ ಮತ್ತು ಸದಾ ಸ್ವಚ್ಛ ವ್ಯಕ್ತಿತ್ವದ ದಾಖಲೆಯನ್ನು ಕಾಯ್ದುಕೊಂಡಿದ್ದಾರೆ ’ಎಂದೂ ಖಾನ್ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)