varthabharthi

ರಾಷ್ಟ್ರೀಯ

ಪ್ರವೇಶ ನಿರಾಕರಣೆ: ಜಮ್ಮುಕಾಶ್ಮೀರದಿಂದ ಹಿಂದಿರುಗಿದ ರಾಹುಲ್ ಗಾಂಧಿ, ಪ್ರತಿಪಕ್ಷ ನಾಯಕರ ನಿಯೋಗ

ವಾರ್ತಾ ಭಾರತಿ : 24 Aug, 2019

ಫೋಟೊ: indianexpress

ಹೊಸದಿಲ್ಲಿ, ಆ. 24: ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ಅವಲೋಕಿಸಲು ಹಾಗೂ ಜನರೊಂದಿಗೆ ಮಾತುಕತೆಗೆ ಶ್ರೀನಗರ ಭೇಟಿ ನೀಡಲು ಪ್ರಯತ್ನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷದ ನಾಯಕರ ನಿಯೋಗವನ್ನು ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಂದೆ ಕಳುಹಿಸಲಾಗಿದೆ.

ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಹಿಂಪಡೆದ ಬಳಿಕ ಆಗಸ್ಟ್ 5ರಿಂದ ಜಮ್ಮು ಹಾಗೂ ಕಾಶ್ಮೀರದಲ್ಲಿ ನಿರ್ಬಂಧ ವಿಧಿಸಲಾಗಿದೆ. ನಿಯೋಗದಲ್ಲಿ ಕಾಂಗ್ರೆಸ್, ಸಿಪಿಎಂ, ಸಿಪಿಐ, ಆರ್‌ಜೆಡಿ, ಎನ್‌ಸಿಪಿ, ಟಿಎಂಸಿ ಹಾಗೂ ಡಿಎಂಕೆಯ ನಾಯಕರು ಒಳಗೊಂಡಿದ್ದರು.

 ಶ್ರೀನಗರಕ್ಕೆ ತೆರಳಲು ವಿಮಾನ ಏರಿದ ನಾಯಕರಲ್ಲಿ ರಾಹುಲ್ ಗಾಂಧಿ, ಗುಲಾಂ ನಬಿ ಆಝಾದ್ ಹಾಗೂ ಆನಂದ್ ಶರ್ಮಾ ಇದ್ದರು. ಅಪರಾಹ್ನ ದಿಲ್ಲಿ ವಿಮಾನ ನಿಲ್ದಾಣದಿಂದ ಶ್ರೀನಗರಕ್ಕೆ ತೆರಳಿದ ನಿಯೋಗದಲ್ಲಿ ಸಿಪಿಎಂನ ಸೀತಾರಾಮ ಯೆಚೂರಿ, ಸಿಪಿಐಯ ಡಿ. ರಾಜಾ, ಡಿಎಂಕೆಯ ತಿರುಚಿ ಶಿವಾ, ಆರ್‌ಜೆಡಿಯ ಮನೋಜ್ ಜಾ ಹಾಗೂ ಟಿಎಂಸಿಯ ದಿನೇಶ್ ತ್ರಿವೇದಿ ಹಾಗೂ ಇತರ ನಾಯಕರು ಇದ್ದರು.

 ಜಮ್ಮು ಹಾಗೂ ಕಾಶ್ಮೀರ ಪ್ರವೇಶಕ್ಕೆ ಅವಕಾಶ ನೀಡಿದ್ದರೆ ಅಲ್ಲಿನ ಇತರ ಕೆಲವು ಭಾಗಗಳಿಗೆ ಭೇಟಿ ನೀಡುವ ಉದ್ದೇಶವನ್ನು ಈ ನಾಯಕರು ಹೊಂದಿದ್ದರು. 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಬಳಿಕ ಜಮ್ಮು ಹಾಗೂ ಕಾಶ್ಮೀರಕ್ಕೆ ಪ್ರವೇಶಿಸಲು ಇದುವರೆಗೆ ಯಾರಿಗೂ ಅವಕಾಶ ನೀಡಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)