varthabharthi

ನಿಮ್ಮ ಅಂಕಣ

ಮಾದಕ ದ್ರವ್ಯದ ಅಪಾಯಕಾರಿ ವಾಣಿಜ್ಯೀಕರಣ

ವಾರ್ತಾ ಭಾರತಿ : 25 Aug, 2019
ದೀಪಕ್ ಸಿ. ಡಿ’ಸೋಜ ಮತ್ತು ಜತಿಂದರ್ ಸಿಂಗ್

ಕ್ಯಾನಬಿಸ್ ಬಗ್ಗೆ ಹಲವಾರು ತಪ್ಪು ಕಲ್ಪನೆಗಳು, ಮಿಥ್ಯೆಗಳು ಇವೆ. ಮೊದಲನೆಯದಾಗಿ ಇದು ನಿರಪಾಯಕಾರಿ ಎಂಬುದು ಸುಳ್ಳು. ಅದರ ತಕ್ಷಣದ ಪರಿಣಾಮಗಳು ಜ್ಞಾಪಕ ಶಕ್ತಿ ಹಾಗೂ ಬೌದ್ಧಿಕ (ಮೆಂಟಲ್) ಪ್ರಕ್ರಿಯೆಗಳ ಮೇಲಾಗುತ್ತವೆ. ದೀರ್ಘಕಾಲಿಕ ಪರಿಣಾಮವೆಂದರೆ ವ್ಯಕ್ತಿ ಮಾದಕ ದ್ರವ್ಯ ವ್ಯಸನಿಯಾಗುವುದು. ಇದರಿಂದಾಗಿ ವ್ಯಕ್ತಿ ಸಿಜೊಫ್ರೆನಿಯಾ, ಖಿನ್ನತೆ ಹಾಗೂ ಆತಂಕದಂತಹ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಾನೆ.

ಪಾಶ್ಚಾತ್ಯ ದೇಶಗಳಲ್ಲಿ ಕ್ಯಾನಬಿಸ್ ಅಥವಾ ಡ್ರಗ್ಸನ್ನು ಕಾನೂನು ಬದ್ಧಗೊಳಿಸಬೇಕು; ಅದರ ಮಾರಾಟವನ್ನು ಸಕ್ರಮಗೊಳಿಸಬೇಕು ಎಂಬ ಚಳವಳಿ ತೀವ್ರವಾಗುತ್ತಿರುವಂತೆಯೇ, ಭಾರತದಲ್ಲಿ ಕೂಡ ಮಾದಕದ್ರವ್ಯವನ್ನು ಅದರ ಸೇವನೆಯನ್ನು ಕಾನೂನು ಬದ್ಧಗೊಳಿಸಬೇಕು ಎಂಬ ಧ್ವನಿಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಹಲವು ದಶಕಗಳ ಕಾಲ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಕ್ಯಾನಬಿಸ್ ಬಗ್ಗೆ ವೈದ್ಯಕೀಯ ಸಂಶೋಧನೆ ನಡೆಸಿರುವ ನಾವು, ಭಾರತ ಈ ನಿಟ್ಟಿನಲ್ಲಿ ಅವಸರದ ಹೆಜ್ಜೆಇಡುವ ಮೊದಲು ಮಾದಕದ್ರವ್ಯದ ಅಪಾಯಗಳು ಮತ್ತು ಅದರ ಲಾಭಗಳನ್ನು ಸರಿಯಾಗಿತೂಗಿನೋಡಿ ಒಂದು ತೀರ್ಮಾನಕ್ಕೆ ಬರಬೇಕೆಂದು ಭಾರತ ಸರಕಾರವನ್ನು ಒತ್ತಾಯಿಸುತ್ತೇವೆ.

ಭಾರತದಲ್ಲಿ ಭಾಂಗ್, ಗಾಂಜಾ, ಚರಸ್ ಅಥವಾ ಹಶಿಶ್ ಎಂದು ಕರೆಯಲಾಗುವ ಕ್ಯಾನಬಿಸ್‌ಅನ್ನು ಒಂದೋ ತಿನ್ನಲಾಗುತ್ತದೆ (ಭಾಂಗ್ ಗೋಲಿಗಳು, ಥಂಡಾ, ಪಕೋರಸ್, ಲಸ್ಸಿ ಇತ್ಯಾದಿ), ಅಥವಾ ಸಿಗರೇಟ್‌ನ (ಚಿಲ್ಲಂ) ರೂಪದಲ್ಲಿ ಧೂಮಪಾನ ಮಾಡಲಾಗುತ್ತದೆ. ಅದರ ಶಕ್ತಿ, ತೀವ್ರತೆ

ಅದರಲ್ಲಿರುವ ಮುಖ್ಯ ಘಟಕವಾದ ಟೆರಾಹೈಡ್ರೊಕ್ಯಾನ್‌ಬಿನಾಲ್ ಅನ್ನು ಅವಲಂಬಿಸಿರುತ್ತದಲ್ಲದೇ, ಅದರಲ್ಲಿ ಐದುನೂರಕ್ಕೂ ಹೆಚ್ಚು ಇತರ ರಾಸಾಯನಿಕಗಳಿವೆ. ಭಾರತದಲ್ಲಿ ನಾವು ಹಲವಾರು ಧಾರ್ಮಿಕ ಸಂದರ್ಭ, ಸಮಾರಂಭಗಳಲ್ಲಿ ಮಾದಕ ದ್ರವ್ಯವನ್ನು ಬಳಸುವ ಪರಂಪರೆ ಇದೆ. ಆದರೆ ಆಯುರ್ವೇದದಲ್ಲಿ ಅದನ್ನು ‘ಉಪವಿಷ ವರ್ಗ’ ಎಂದೇ ಕರೆಯಲಾಗಿದೆ.

 ಕ್ಯಾನಬಿಸ್ ಬಗ್ಗೆ ಹಲವಾರು ತಪ್ಪು ಕಲ್ಪನೆಗಳು, ಮಿಥ್ಯೆಗಳು ಇವೆ. ಮೊದಲನೆಯದಾಗಿ ಇದು ನಿರಪಾಯಕಾರಿ ಎಂಬುದು ಸುಳ್ಳು. ಅದರ ತಕ್ಷಣದ ಪರಿಣಾಮಗಳು ಜ್ಞಾಪಕ ಶಕ್ತಿ ಹಾಗೂ ಬೌದ್ಧಿಕ (ಮೆಂಟಲ್) ಪ್ರಕ್ರಿಯೆಗಳ ಮೇಲಾಗುತ್ತವೆ. ದೀರ್ಘಕಾಲಿಕ ಪರಿಣಾಮವೆಂದರೆ ವ್ಯಕ್ತಿ ಮಾದಕ ದ್ರವ್ಯ ವ್ಯಸನಿಯಾಗುವುದು. ಇದರಿಂದಾಗಿ ವ್ಯಕ್ತಿ ಸಿಜೊಫ್ರೆನಿಯಾ, ಖಿನ್ನತೆ ಹಾಗೂ ಆತಂಕದಂತಹ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಾನೆ.

ಎರಡನೆಯ ತಪ್ಪು ಕಲ್ಪನೆ: ಮಾದಕ ದ್ರವ್ಯ ಮಾರಾಟವನ್ನು ಕಾನೂನುಬದ್ಧಗೊಳಿಸಿ, ನಿಯಂತ್ರಿಸಿದರೆ ಅದರಿಂದಾಗುವ ತೊಂದರೆಗಳನ್ನು ಕನಿಷ್ಠ ಗೊಳಿಸಬಹುದು. ಆದರೆ ಕಾನೂನು ಬದ್ಧಗೊಳಿಸುವಿಕೆಯೊಂದಿಗೆ ಅದರ ವಾಣಿಜ್ಯೀಕರಣದ ಬೃಹತ್ ಸಮಸ್ಯೆಯಾಗಿ ಕಾಡಲಾರಂಭಿಸುತ್ತದೆ. ಇದು ಎಂತಹ ಸಮಸ್ಯೆಯಾಗುತ್ತದೆಂದು ಕಳೆದ ಶತಮಾನದಲ್ಲಿ ಹೊಗೆಸೊಪ್ಪು ಮತ್ತು ಆಲ್ಕೊಹಾಲ್‌ನಿಂದಾದ ಅನಾಹುತಗಳಿಂದ ಗೊತ್ತಾಗಿದೆ. ಜಾಗತಿಕ ಕಾಯಿಲೆಯ ಹೊರೆಯಲ್ಲಿ ಬೃಹತ್ ಪಾಲು ಈ ಅನಾಹುತಗಳಿಗೆ ಸಲ್ಲುತ್ತದೆ. ಹೊಗೆ ಸೊಪ್ಪು ಉದ್ಯಮವು ಹೊಗೆ ಸೊಪ್ಪಿನ ಸುಲಭವಾದ ಬಳಕೆಗಾಗಿ ಸಿಗರೆಟ್‌ಗಳನ್ನು ಕಂಡು ಹಿಡಿಯಿತು. ಬಳಿಕ ಅದರ ರಾಶ್ಯುತ್ಪನ್ನದಲ್ಲಿ ತೊಡಗಿ ಮಿಥ್ಯೆಗಳ ಭಾರೀ ಜಾಹೀರಾತುಗಳ ಮೂಲಕ, ನಾನಾ ಆಕರ್ಷಣೆಗಳನ್ನೊಡ್ಡಿ ಸಿಗರೆಟ್ ಮಾರಾಟದ ಮೂಲಕ ಬಿಲಿಯ ಗಟ್ಟಲೆ ಲಾಭ ಮಾಡಿಕೊಂಡಿತು. ಸರಕಾರಗಳು ತೆರಿಗೆ ರೂಪದಲ್ಲಿ ಎಷ್ಟೇ ಆದಾಯ ಪಡೆದುಕೊಂಡಿರಬಹುದಾದರೂ, ಕಳೆದ ಶತಮಾನದಲ್ಲಿ ಬಿಲಿಯಗಟ್ಟಲೆ ಜನರ ಆರೋಗ್ಯದ ಮೇಲೆ ಹೊಗೆ ಸೊಪ್ಪಿನ ಬಳಕೆಯಿಂದಾದ ಪರಿಣಾಮಗಳಿಗೆ ಯಾವ ಮೊತ್ತದ ಪರಿಹಾರ ನೀಡಿದರೂ ಅದು ಅತ್ಯಲ್ಪವಾಗುತ್ತದೆ. ಸಿಗರೆಟ್ ಸೇವನೆಯ ಅಪಾಯಗಳ ಹೊರತಾಗಿಯೂ ಈಗ ಸಿಗರೆಟ್ ಮಾರಾಟ ಕಾನೂನು ಬದ್ದವಾಗಿಯೇ ಉಳಿದಿದೆ. ನಾಳೆ ಮಾದಕ ದ್ರವ್ಯ ಮಾರಾಟವೂ ಹೀಗೆಯೇ ಉಳಿಯುತ್ತದೆ.

ಕಾನೂನು ಬದ್ಧಗೊಳಿಸುವಿಕೆ (ಲೀಗಲೈಸೇಶನ್) ನಿರಪರಾಧೀಕರಣ (ಡೀಕ್ರಿಮಿನಲೈಸೇಶನ್) ಹಾಗೂ ವಾಣಿಜ್ಯೀಕರಣದ (ಕಮರ್ಶಿಯಲೈಸೇಶನ್) ನಡುವೆ ಬಹಳ ಅಂತರವಿದೆ. ವಾಣಿಜ್ಯೀಕರಣದ ಉದ್ದೇಶವೇ ಒಂದು ಉತ್ಪನ್ನದ ಗರಿಷ್ಠ ಮಾರಾಟ. ಅಮೆರಿಕದಲ್ಲಿ ಮಾದಕದ್ರವ್ಯ ಉದ್ಯಮ ನಿಧಾನವಾಗಿ ಬೆಳೆಯುತ್ತಲೇ ಇದೆ. ನಿಜಹೇಳಬೇಕೆಂದರೆ ಪಾಶ್ಚಾತ್ಯ ಜಗತ್ತಿನಲ್ಲಿ ಹೊಗೆಸೊಪ್ಪು ಉತ್ಪನ್ನಗಳ ಮಾರಾಟ ಇಳಿಮುಖವಾಗಿರುವುದರ ಸೂಚನೆಗಳು ಲಭಿಸುತ್ತಿರುವಂತೆಯೇ, ಹಲವು ಹೊಗೆಸೊಪ್ಪು ಕಂಪೆನಿಗಳು ಮಾದಕದ್ರವ್ಯ (ಕ್ಯಾನಬಿಸ್) ಮಾರುಕಟ್ಟೆಯನ್ನು ಪ್ರವೇಶಿಸಿವೆ. ಮಾರ್ಲ್‌ಬರೊ ಸಿಗರೆಟ್‌ಗಳ ತಯಾರಕ ಕಂಪೆನಿಯಾಗಿರುವ ಅಲ್‌ಟ್ರಿಯಾ, ಕ್ಯಾನಬಿನ್ ಬೆಳೆಸುವ ಕ್ರೊನೋಸ್ ಗ್ರೂಪ್‌ನಲ್ಲಿ 1.8 ಬಿಲಿಯ ಡಾಲರ್ (ರೂ. 12,400ಕೋಟಿ) ಬಂಡವಾಳ ಹೂಡಿದೆ. ಈ ವಾಣಿಜ್ಯ ದಿಗ್ಗಜಗಳು ಕಾನೂನುಗಳ ಬೇಲಿದಾಟಲು ತಮ್ಮ ಅನುಭವದ ಸಂಪತ್ತನ್ನು ಬಳಸಿಕೊಂಡು ತಮ್ಮ ಯಶಸ್ವಿ ಮಾರುಕಟ್ಟೆ ತಂತ್ರಗಳ ಮೂಲಕ, ಲಾಬಿಮಾಡಿ, ಸರಕಾರದ ಮೇಲೆ ಪ್ರಭಾವ ಬೀರಿ, ತಮ್ಮ ಕಿಸೆ ತುಂಬಿಸಿಕೊಳ್ಳುತ್ತವೆ. ಗರಿಷ್ಠ ಲಾಭ ಮಾಡಿಕೊಂಡು ತಮ್ಮ ಉದ್ಯಮಕ್ಕೆ ಕನಿಷ್ಠ ಅಪಾಯವಿರುವಂತೆ ನೋಡಿಕೊಳ್ಳುತ್ತವೆ. ಇವೆಲ್ಲದರ ಪರಿಣಾಮವಾಗಿ, ಈಗ ಅಮೆರಿಕದಲ್ಲಿ ಕ್ಯಾನಬಿಸ್‌ನ್ನು ‘‘ಪ್ರಾಕೃತಿಕ’’, ಸಹಜ (‘‘ನ್ಯಾಚುರಲ್’’) ಎಂದು ತಪ್ಪಾಗಿ ಜಾಹೀರಾತು ಮಾಡಲಾಗುತ್ತಿದೆ. ‘‘ಆಲ್ಕೊಹಾಲ್ ಮತ್ತು ಹೊಗೆಸೊಪ್ಪಿಗಿಂತ ಹೆಚ್ಚು ಆರೋಗ್ಯ ಪೂರ್ಣ ’’ ಎಂದು ಅದನ್ನು ವರ್ಣಿಸಲಾಗುತ್ತಿದೆ. ಯುವಜನತೆಯನ್ನು, ಮಕ್ಕಳನ್ನು ಗುರಿಯಾಗಿಸಿಕೊಂಡು ಸೂಕ್ತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ

ಮಾಡಿದರೆ ತಮಗೆ ಜೀವಮಾನ ಪರ್ಯಂತ ಗಿರಾಕಿಗಳು ಗ್ಯಾರಂಟಿ ಎಂಬ ನೆಲೆಯಲ್ಲಿ ಕಂಪೆನಿಗಳು ಕಾರ್ಯೋನ್ಮುಖವಾಗಿವೆ. ಇದರ ಫಲಿತಾಂಶವಾಗಿ ಈಗ ಐಸ್‌ಕ್ರೀಂ, ಸಿಹಿತಿಂಡಿಗಳು ಮತ್ತು ಸಾಂಫ್ಟ್‌ಡ್ರಿಂಕ್‌ಗಳ ರೂಪದಲ್ಲಿ ಮಾದಕದ್ರವ್ಯದ ವಿವಿಧ ರೀತಿಯ ಉತ್ಪನ್ನಗಳು ಅಮೆರಿಕದಲ್ಲಿ ಲಭ್ಯವಾಗುತ್ತಿವೆ. ಮಾದಕದ್ರವ್ಯವನ್ನು ಕಾನೂನುಬದ್ಧಗೊಳಿಸುವುದರಿಂದ ಹಾಗೂ ನಿಯಂತ್ರಿಸುವುದರಿಂದ ‘‘ ಕ್ರಿಮಿನಲ್ ಮಾರುಕಟ್ಟೆಗಳನ್ನು ತಡೆಯಬಹುದು’’ ಎಂದು ಕೂಡ ಪಾಶ್ಚಾತ್ಯ ಜಗತ್ತು ಹೇಳುತ್ತಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಕಳೆದ ವರ್ಷ ಇಂತಹದೇ ರೀತಿಯ ಹೇಳಿಕೆ ನೀಡಿದ್ದರು. ಆದರೆ, ಅಮೆರಿಕದ ಕೊಲರಾಡೋ ರಾಜ್ಯದಲ್ಲಿ ಕ್ಯಾನಬಿಸ್‌ನ್ನು ಕಾನೂನು ಬದ್ಧಗೊಳಿಸಿದ ಬಳಿಕ ಕೂಡ ಮಾದಕದ್ರವ್ಯ ಕಾಳಸಂತೆ ಕಡಿಮೆಯಾಗಲಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ.

1961ರಲ್ಲಿ ವಿಶ್ವ ಸಂಸ್ಥೆಯು ಕ್ಯಾನಬಿಸ್ ಸೇರಿದಂತೆ ಡ್ರಗ್ಸ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಲು ಒಂದು ಅಂತರ್‌ರಾಷ್ಟ್ರೀಯ ಒಪ್ಪಂದವನ್ನು ಪ್ರಾಯೋಜಿಸಿತ್ತು. ಆದರೆ ಈಗ ಪಾಶ್ಚಾತ್ಯ ಜಗತ್ತು ಕ್ಯಾನಬಿಸ್ ಹಾಗೂ ಇತರ ಡ್ರಗ್ಸ್ ಗಳನ್ನು ಕಾನೂನು ಬದ್ಧಗೊಳಿಸುತ್ತಿದೆ! ಭಾರತದಲ್ಲಿ ಕೂಡ ಕೆಲವರು ನಾವೂ ಹೀಗೆಯೇ ಕಾನೂನುಬದ್ಧಗೊಳಿಸಬೇಕೆಂದು ಹೇಳುತ್ತಿದ್ದಾರೆ.

ಆದರೆ ಭಾರತವು ಈ ನಿಟ್ಟಿನಲ್ಲಿ ಎದುರಾಗಬಹುದಾದ ಎಲ್ಲ ಅಪಾಯಗಳನ್ನು ಪರಿಗಣಿಸಿ, ಬದಲಿ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾಗಿದೆ. ಭಾರತವು ಡ್ರಗ್ಸ್‌ಗಳನ್ನು ನಿರಪರಾಧೀಕರಣಗೊಳಿಸ (ಡೀಕ್ರಿಮಿನಲೈಸ್) ಬಹುದು, ಆದರೆ ಅವುಗಳ ವಾಣಿಜ್ಯೀಕರಣವನ್ನು ನಿಷೇಧಿಸಬೇಕು ಎರಡನೆಯದಾಗಿ, ಅದು ತನ್ನ ಮಾದಕದ್ರವ್ಯ ನೀತಿಯನ್ನು ಉದಾರಗೊಳಿಸಿದಲ್ಲಿ ಮಕ್ಕಳಿಗೆ ಹಾಗೂ ಯುವಜನಾಂಗಕ್ಕೆ ಸಾಕಷ್ಟು ರಕ್ಷಣೆಗಳಿರುವಂತೆ ನೋಡಿಕೊಳ್ಳಬೇಕು. ಅಂತಿಮವಾಗಿ, ಕ್ಯಾನಬಿಸ್‌ವ್ಯಸನಿಗಳಾಗುವವರಿಗೆ ಸೂಕ್ತ ಚಿಕಿತೆ್ಸ ನೀಡುವ ವ್ಯವಸ್ಥೆ ಮಾಡಬೇಕು.

ಕೃಪೆ: thehindu.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)