varthabharthi


ಸಿನಿಮಾ

ಕನ್ನಡ ಸಿನೆಮಾ

ಸಸ್ಪೆನ್ಸ್ ‘ವಿಸ್ಮಯ’ಗಳ ನಡುವೆ ಸಾಗುವ ಆಕರ್ಷಕ ಕಥಾ ಹಂದರ

ವಾರ್ತಾ ಭಾರತಿ : 25 Aug, 2019
ಚಿತ್ರ ವಿಮರ್ಶೆ: ಶಶಿಕರ ಪಾತೂರು

ಚಿತ್ರ: ನನ್ನ ಪ್ರಕಾರ

ತಾರಾಗಣ: ಕಿಶೋರ್, ಪ್ರಿಯಾಮಣಿ ಮಯೂರಿ ಕ್ಯಾತರಿ

ನಿರ್ದೇಶನ: ವಿನಯ್ ಬಾಲಾಜಿ

ನಿರ್ಮಾಣ: ಗುರುರಾಜ್, ಕಿರಣ್, ಗೋವಿಂದ, ವೆಂಕಟೇಶ, ಕೃಷ್ಣಮೂರ್ತಿ

ಖಾಸಗಿ ವಾಹಿನಿಯ ಕ್ರೈಮ್ ಕಾರ್ಯಕ್ರಮವೊಂದರ ನಿರೂಪಣೆಯೊಂದಿಗೆ ಶುರುವಾಗುತ್ತದೆ ಸಿನೆಮಾ. ಅಪಘಾತದಲ್ಲಿ ಸಂಭವಿಸಿದ ಸಾವು ಸಹಜ ಸಾವಾಗಿರದೆ, ಕೊಲೆಯಾಗಿತ್ತು ಎನ್ನುವುದನ್ನು ಸಾಬೀತು ಪಡಿಸುವುದೇ ಚಿತ್ರ ಕಥೆ. ಅಂಥದೊಂದು ಕತೆಯನ್ನು ಕುತೂಹಲಭರಿತ ಚಿತ್ರವಾಗಿಸುವಲ್ಲಿ ನವ ನಿರ್ದೇಶಕ ವಿನಯ್ ಬಾಲಾಜಿ ಯಶಸ್ವಿಯಾಗಿದ್ದಾರೆ.

ಆ ರಾತ್ರಿ ಅಪಘಾತವಾಗಿ ಬಿದ್ದ ಕಾರು ಮತ್ತು ಅದರಲ್ಲಿದ್ದ ವಿಸ್ಮಯ ಎನ್ನುವ ಹೆಣ್ಣುಮಗಳ ಮೃತದೇಹದ ಕುರಿತಾದ ಪ್ರಕರಣದೊಂದಿಗೆ ಚಿತ್ರದ ಕತೆ ಆರಂಭವಾಗುತ್ತದೆ. ಸ್ಥಳಕ್ಕೆ ಭೇಟಿ ನೀಡಿ

ತನಿಖೆ ಆರಂಭಿಸಿದ ಪೊಲೀಸ್ ಅಧಿಕಾರಿ ಅಶೋಕ್ ಅದನ್ನು ಒಂದು ಅಪಘಾತವೆಂದು ನಿರ್ಧರಿಸುವ ಹಂತದಲ್ಲಿ ಮೃತ ವಿಸ್ಮಯಾ ಹೆಸರಿನ ಆ ಹೆಣ್ಣು ಮಗಳಿಗೂ ಆಕೆಯಿದ್ದ ಆ ಕಾರಿನ ಮಾಲಕನಿಗೂ ಇರುವ ಸಂಬಂಧದ ಬಗ್ಗೆ ಸಂದೇಹ ಮೂಡುತ್ತದೆ. ಕಾರಿನ ಮಾಲಕ ವಿಶಾಲ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಬಯಲಾಗುವ ವಿಚಾರಗಳು ಅಶೋಕ್‌ನನ್ನು

ಮತ್ತಷ್ಟು ಗೊಂದಲಕ್ಕೆ ಒಳಪಡಿಸುತ್ತದೆ. ಆದರೆ ಇದೇ ಸಂದರ್ಭದಲ್ಲಿ ವಿದೇಶಕ್ಕೆ ಹೋಗಿದ್ದಂಥ ಅಶೋಕ್‌ನ ಪತ್ನಿ ವಾಪಸಾಗುತ್ತಾಳೆ. ವೈದ್ಯಾಧಿಕಾರಿಯಾದ ಆಕೆ ಈ ಪ್ರಕರಣದಲ್ಲಿ ನೀಡುವ ಪ್ರಮುಖ ಸುಳಿವು ಚಿತ್ರದ ಕಥಾಗತಿಯನ್ನೇ ಬದಲಾಯಿಸುತ್ತದೆ. ಅದೇನು ಎನ್ನುವುದನ್ನು ಪ್ರತಿಯೊಬ್ಬರೂ ಚಿತ್ರಮಂದಿರದಲ್ಲಿ ನೋಡಿ ಎಂಜಾಯ್ ಮಾಡುವುದು ಉತ್ತಮ.

ಚಿತ್ರದ ಕೇಂದ್ರ ಪಾತ್ರವಾದ ಪೊಲೀಸ್ ತನಿಖಾಧಿಕಾರಿ ಅಶೋಕ್ ಪಾತ್ರದಲ್ಲಿ ಕಿಶೋರ್ ಗಾಂಭೀರ್ಯಪೂರ್ಣ, ಸಹಜ ಅಭಿನಯದಿಂದ ಕಲಶದಂತೆ ಕಂಗೊಳಿಸುತ್ತಾರೆ. ಆದರೆ ಆತನ ಪತ್ನಿಯಾಗಿ ನಟಿಸಿರುವ ಪ್ರಿಯಾಮಣಿ ಪಾತ್ರ ಚಿತ್ರದಲ್ಲಿ ಅಂಥ ಪ್ರಾಧಾನ್ಯತೆ ಪಡೆಯುವುದಿಲ್ಲ ಎನ್ನುವುದು ಸತ್ಯ. ಬಹುಶಃ ಆಕೆಗೂ ಚಿತ್ರದ ಕಥೆಯಲ್ಲಿ ಒಂದು ಪ್ರಧಾನ ಪಾತ್ರವಿದೆ ಎಂಬ ನಿಟ್ಟಿನಲ್ಲಿ ಯೋಚಿಸುವ ಪ್ರೇಕ್ಷಕರನ್ನು ಗೊಂದಲಕ್ಕೊಳಪಡಿಸುವ ಉದ್ದೇಶ ನಿರ್ದೇಶಕರಿಗೆ ಇದ್ದಲ್ಲಿ ಅಚ್ಚರಿ ಇಲ್ಲ! ಉಳಿದ ಹಾಗೆ ಚಿತ್ರದ ಲೀಡಿಂಗ್ ಲೇಡಿ ವಿಸ್ಮಯಾ ಪಾತ್ರವನ್ನು ಮಯೂರಿ ಕ್ಯಾತರಿ ಅಭಿನಯಿಸಿದ್ದಾರೆ. ಎರಡು ಛಾಯೆಗಳುಳ್ಳ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿರುವ ಮಯೂರಿ ವಿಸ್ಮಯಳಾಗಿ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದ್ದಾರೆ. ವಿಶಾಲ್ ಪಾತ್ರ ನಿರ್ವಹಿಸಿರುವ ನಿರಂಜನ್ ದೇಶಪಾಂಡೆ ಕಲಾವಿದನಾಗಿ, ಈ ಹಿಂದಿನ ಎಲ್ಲಾ ಪಾತ್ರಗಳನ್ನು ಮೀರಿಸುವ ರೀತಿಯಲ್ಲಿ ಸಹಜತೆಯ ನಟನೆಯಿಂದ ಗಮನ ಸೆಳೆಯುತ್ತಾರೆ. ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಸುಮನ್ ಆಗಿ ಅರ್ಜುನ್ ಯೋಗೇಶ್ ರಾಜ್ ನಟಿಸಿದ್ದಾರೆ. ಅರ್ಜುನ್, ಗಿರಿಜಾ ಲೋಕೇಶ್ ಸೇರಿದಂತೆ ಪ್ರತಿ ಕಲಾವಿದರು ಕೂಡ ಪಾತ್ರದೊಳಗೆ ತನ್ಮಯವಾಗಿರುವುದರಿಂದ ಪ್ರೇಕ್ಷಕರು ಚಿತ್ರದೊಳಗೆ ತಲ್ಲೀನರಾಗುತ್ತಾರೆ.

ನನ್ನ ಪ್ರಕಾರ ಚಿತ್ರದೊಳಗಿನ ಘಟನೆಗಳನ್ನು ಯಾರೇ ಹೇಳಿದರು ಅದನ್ನು ಅಶೋಕ್ ತನ್ನ ಪಕಾರ ಕಲ್ಪಿಸಿಕೊಳ್ಳುತ್ತಾನೆ. ಅಂತ್ಯದಲ್ಲಿ ಆತನ ಪ್ರಕಾರವೇ ಅಸಲಿ ವಿಚಾರವೂ ಬಯಲಾಗುತ್ತದೆ. ಹಾಗಾಗಿ ಇಡೀ ಚಿತ್ರ ಅಶೋಕ್ ಪ್ರಕಾರ ಸಾಗುತ್ತದೆ. ಬಹಳ ಸಮಯದ ಬಳಿಕ ಕನ್ನಡಲ್ಲಿ ದೊಡ್ಡ ಮಟ್ಟದ ಪಾತ್ರವೊಂದನ್ನು ಅಶೋಕ್ ಆಗಿ ಕಿಶೋರ್ ನಿಭಾಯಿಸಿರುವುದು ಖುಷಿ ನೀಡುತ್ತದೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ ಮೊದಲಾದ ಎಲ್ಲ ಅಂಶಗಳು ಚಿತ್ರದೊಂದಿಗೆ ಸರಾಗವಾಗಿ ಬೆರೆತು ನಮ್ಮನ್ನು ಕತೆಯೊಳಗೆ ಸೆಳೆಯುತ್ತದೆ. ಪಾತ್ರಗಳಿಗೆ ಹೊಂದುವಂತೆ ಕಾಸ್ಟೂಮ್ ಡಿಸೈನ್ ಮಾಡಿರುವುದು, ಚರ್ವಿತ ಚರ್ವಣ ಅಲ್ಲದ ಹೊಸ ಮಾದರಿಯ ಆದರೆ ದೃಶ್ಯಕ್ಕೆ ಪೂರಕವಾದ ಸಂಭಾಷಣೆ ಆಯ್ಕೆ ಮಾಡಿರುವುದು ಮೊದಲಾದ ಎಲ್ಲ ವಿಚಾರಗಳಿಗಾಗಿ ನಿರ್ದೇಶಕರನ್ನು ಪ್ರಶಂಸಿಸಲೇಬೇಕು. ಆದರೆ ಇಂಥದೊಂದು ನಿರೂಪಣೆಯನ್ನು ವಾಹಿನಿಯೊಂದರ ಕ್ರೈಮ್ ಕಾರ್ಯಕ್ರಮ ಎನ್ನುವ ಮಟ್ಟಕ್ಕೆ ಸೀಮಿತಗೊಳಿಸಿರುವುದು ವಿಪರ್ಯಾಸ. ಆದರೆ ಆ ಕಾರ್ಯಕ್ರಮ ನಿರೂಪಕಿಯಾಗಿ ನಟಿಸಿರುವ ನವಿತಾ ಜೈನ್ ಕೂಡ ನೆನಪಿನಲ್ಲಿ ಉಳಿಯುವ ಮಟ್ಟಕ್ಕೆ ಚಿತ್ರ ಪ್ರಭಾವ ದಟ್ಟವಾಗಿರುವುದು ಸತ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)