varthabharthi

ಸುಗ್ಗಿ

ಹಾಕಿಯ ಧ್ಯಾನ ಧ್ಯಾನ್ ಚಂದ್!

ವಾರ್ತಾ ಭಾರತಿ : 25 Aug, 2019
ಸತೀಶ್ ಶೆಟ್ಟಿ, ಚಾಂತಾರು

      ಸತೀಶ್ ಶೆಟ್ಟಿ, ಚಾಂತಾರು

ಧ್ಯಾನ್‌ಚಂದ್‌ಅವರ ಜನ್ಮದಿನವಾದ ಆಗಸ್ಟ್ 29ನೇ ತಾರೀಕನ್ನು ರಾಷ್ಟ್ರೀಯ ಕ್ರೀಡಾದಿನವಾಗಿ ಆಚರಿಸಲಾಗುತ್ತಿದೆ.

ಹಾಕಿ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಅದ್ಭುತ ಗೋಲು ಗಳಿಕೆಯ ಸಾಮರ್ಥ್ಯದಿಂದ ಹಾಕಿ ಮಾಂತ್ರಿಕ ನಾಗಿ ಹೊರಹೊಮ್ಮಿದ್ದ ಮೇಜರ್ ಧ್ಯಾನ್‌ಚಂದ್ ಭಾರತದ ಹಾಕಿ ಲೋಕದ ಧ್ರುವತಾರೆಯಾಗಿದ್ದಾರೆ. ಭಾರತ ಸತತ ಮೂರು ಬಾರಿ ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಜಯಿಸಲು ಪ್ರಮುಖ ಕಾರಣರಾಗಿದ್ದರು. ಏಕಾಂಗಿಯಾಗಿ ಹಾಕಿಗೆ ದೇಶ-ವಿದೇಶಗಳಲ್ಲಿ ಜನಮನ್ನಣೆ ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ಪ್ರಭಾವದಿಂದಾಗಿ ಭಾರತ 1928 ರಿಂದ 1964ರ ತನಕ ಆಡಿರುವ 8 ಒಲಿಂಪಿಕ್ ಗೇಮ್ಸ್‌ಗಳ ಪೈಕಿ 7ರಲ್ಲಿ ಜಯ ಸಾಧಿಸಿತ್ತು. ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಅತ್ಯಂತ ಯಶಸ್ವಿ ತಂಡವಾಗಿ ಮಿಂಚಿತ್ತು. ಧ್ಯಾನ್‌ಚಂದ್ ಅವರ ಜನ್ಮದಿನವಾದ ಆಗಸ್ಟ್ 29ರಂದು ದೇಶ ದಲ್ಲಿ ರಾಷ್ಟ್ರೀಯ ಕ್ರೀಡಾದಿನವಾಗಿ ಆಚರಿಸಲಾಗುತ್ತಿದೆ. ಈ ದಿನ ರಾಷ್ಟ್ರಪತಿಯವರು ಕ್ರೀಡಾ ಪ್ರಶಸ್ತಿಗಳಾದ ರಾಜೀವ್‌ಗಾಂಧಿ ಖೇಲ್‌ರತ್ನ, ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಯನ್ನು ಪ್ರದಾನಿಸುತ್ತಾರೆ.

ಜನನ, ಕೌಟುಂಬಿಕ ಹಿನ್ನೆಲೆ

1905ರ ಆಗಸ್ಟ್ 29ರಂದು ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ರಜಪೂತ್ ಕುಟುಂಬದಲ್ಲಿ ಧ್ಯಾನ್‌ಚಂದ್ ಜನನವಾಯಿತು. ಧ್ಯಾನ್‌ಚಂದ್ ತಂದೆ ಸುಬೇದಾರ್ ಸಮೇಶ್ವರ್ ದತ್ತ ಸಿಂಗ್ ಹಾಗೂ ತಾಯಿ ಶಾರದಾ ಸಿಂಗ್. ತಂದೆ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿದ್ದರು. ಧ್ಯಾನ್‌ಚಂದ್‌ಗೆ ಮೂಲ್ ಸಿಂಗ್, ರೂಪ್ ಸಿಂಗ್ ಎಂಬ ಇಬ್ಬರು ಸಹೋದರರು. 1936ರ ಒಲಿಂಪಿಕ್ಸ್‌ಗೆ ಮೊದಲು ಧ್ಯಾನ್‌ಚಂದ್ ಅವರು ಜಾನಕಿದೇವಿಯನ್ನು ವಿವಾಹ ವಾದರು. ಈ ದಂಪತಿಗೆ ಏಳು ಜನ ಗಂಡು ಮಕ್ಕಳು. ಚಂದ್ ನಾಲ್ಕನೇ ಪುತ್ರ ಅಶೋಕ್ ಕುಮಾರ್ ಹಾಕಿ ಆಟಗಾರರಾಗಿದ್ದು, 1975ರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚು ಹಾಗೂ 1971 ಹಾಗೂ 1973ರ ವಿಶ್ವಕಪ್ ಟೂರ್ನಮೆಂಟ್‌ಗಳಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದ್ದರು.

ಧ್ಯಾನ್‌ಚಂದ್ ಅವರ ಕಿರಿಯ ಸಹೋದರ ರೂಪ್ ಸಿಂಗ್ ಕೂಡ ಖ್ಯಾತ ಹಾಕಿ ಆಟಗಾರನಾಗಿದ್ದು, 1932 ಹಾಗೂ 1936ರ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು. 1932ರ ಒಲಿಂಪಿಕ್ಸ್ ನಲ್ಲಿ ಧ್ಯಾನ್ ಸಿಂಗ್ ಹಾಗೂ ರೂಪ್ ಸಿಂಗ್ ಜೊತೆಯಾಗಿ ಆಡಿ 25 ಗೋಲುಗಳನ್ನು ಗಳಿಸಿ ತಂಡದ ಗೆಲುವಿಗೆ ನೆರವಾಗಿದ್ದರು.

ಬಾಲ್ಯ, ಶಿಕ್ಷಣ:

ಸೇನೆಯಲ್ಲಿ ಸೇವೆಯಲ್ಲಿದ್ದ ಧ್ಯಾನ್‌ಚಂದ್ ಅವರ ತಂದೆ ಸಮೇಶ್ವರ್ ದತ್ತ ಪದೇ ಪದೇ ವರ್ಗಾವಣೆಯಾಗುತ್ತಿದ್ದ ಕಾರಣ ಧ್ಯಾನ್‌ಚಂದ್ ಅವರ ಶಾಲಾ ಶಿಕ್ಷಣವನ್ನು ಮೊಟಕುಗೊಳಿಸಬೇಕಾಯಿತು. ಧ್ಯಾನ್‌ಚಂದ್ ಕುಟುಂಬ ಝಾನ್ಸಿಯಲ್ಲಿ ಖಾಯಂ ಆಗಿ ನೆಲೆ ನಿಂತ ಬಳಿಕ 1932ರಲ್ಲಿ ಗ್ವಾಲಿಯರ್‌ನ ವಿಕ್ಟೋರಿಯ ಕಾಲೇಜಿನಲ್ಲಿ ಪದವಿ ಪೂರೈಸಿದ್ದರು.

ಬಾಲ್ಯದಲ್ಲಿ ಚಂದ್‌ಗೆ ಯಾವುದೇ ಕ್ರೀಡೆಯ ಮೇಲೆ ಒಲವಿ ರಲಿಲ್ಲ. ಆದರೆ, ಅವರಿಗೆ ಕುಸ್ತಿಪಟುವಾಗಬೇಕೆಂಬ ಬಯಕೆ ಯಾವಾಗಲೂ ಇತ್ತು. ಸೇನೆಯ ಸೇರುವ ಮೊದಲು ಅವರು ಹೆಚ್ಚು ಹಾಕಿ ಆಡಿರಲಿಲ್ಲ.

ಸಾಂದರ್ಭಿಕವಾಗಿ ತನ್ನ ಸ್ನೇಹಿತರೊಂದಿಗೆ ಝಾನ್ಸಿನಲ್ಲಿ ಆಗಾಗ ಹಾಕಿ ಆಡುತ್ತಿದ್ದರು. 1926ರಿಂದ 1948ರ ತನಕ 22 ವರ್ಷಗಳ ವೃತ್ತಿ ಬದುಕಿನಲ್ಲಿ 185 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದ ಧ್ಯಾನ್‌ಚಂದ್ 570 ಗೋಲುಗಳನ್ನು ಗಳಿಸಿದ್ದರು. 34 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಧ್ಯಾನ್‌ಚಂದ್ 1956ರಲ್ಲಿ ನಿವೃತ್ತಿಯಾದರು. ಅದೇ ವರ್ಷ ಅವರಿಗೆ ಪದ್ಮಭೂಷಣ ಪ್ರಶಸ್ತಿ ಒಲಿದು ಬಂದಿತ್ತು. ನಿವೃತ್ತಿಯ ಬಳಿಕ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಮುಖ್ಯ ಕೋಚ್ ಆಗಿ ಹಲವು ಸಮಯ ಸೇವೆ ಸಲ್ಲಿಸಿದ್ದರು. ತವರು ಪಟ್ಟಣ ಝಾನ್ಸಿಯಲ್ಲಿ ತನ್ನ ಕೊನೆಯ ದಿನವನ್ನು ಕಳೆದಿದ್ದರು. ಧ್ಯಾನ್‌ಚಂದ್ 1979ರ ಡಿಸೆಂಬರ್ 3 ರಂದು ದಿಲ್ಲಿಯ ಏಮ್ಸ್ ನಲ್ಲಿ ನಿಧನರಾದರು. ಅವರ ಪ್ರತಿಮೆಯನ್ನು ಝಾನ್ಸಿ ಹೀರೋಸ್ ಮೈದಾನದಲ್ಲಿ ಸ್ಥಾಪಿಸಲಾಗಿದೆ. ಪ್ರತಿಮೆಯ ಕೆಳಗೆ ರಾಷ್ಟ್ರೀಯ ಹೆಮ್ಮೆ, ಮೇಜರ್ ಧ್ಯಾನ್‌ಚಂದ್ ಎಂದು ಬರೆಯಲಾಗಿದೆ. ಆಸ್ಟ್ರೀಯ ದೇಶ ಧ್ಯಾನ್‌ಚಂದ್ ಪ್ರತಿಮೆ ನಿರ್ಮಿಸುವ ಮೂಲಕ ಗೌರವ ಸಲ್ಲಿಸಿದೆ. ಹೊಸದಿಲ್ಲಿ ಹಾಗೂ ಆಂಧ್ರಪ್ರದೇಶದಲ್ಲೂ ಧ್ಯಾನ್‌ಚಂದ್ ಪ್ರತಿಮೆ ಸ್ಥಾಪಿಸಲಾಗಿದೆ.

► ಧ್ಯಾನ್‌ಚಂದ್ ಹೆಸರಲ್ಲಿ ಪ್ರಶಸ್ತಿ: ಕ್ರೀಡೆಯಲ್ಲಿ ಜೀವಮಾನ ಸಾಧನೆ ಮಾಡಿದ ಕ್ರೀಡಾಳುಗಳಿಗೆ 2002ರಿಂದ ಪ್ರತಿವರ್ಷ ಧ್ಯಾನ್‌ಚಂದ್ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ಸ್ಮರಣಿಕೆ, ನಗದು ಬಹುಮಾನ 5 ಲಕ್ಷ ರೂ.ಒಳಗೊಂಡಿದೆ.

► ಹಾಕಿ ಸ್ಟಿಕ್ ತುಂಡು ಮಾಡಿದ್ದ ನೆದರ್ಲೆಂಡ್ ಅಧಿಕಾರಿಗಳು!: ಹಾಕಿ ಮೈದಾನದಲ್ಲಿ ಓರ್ವ ಜಾದೂ ಗಾರ ನಂತೆ ಕಾಣುತ್ತಿದ್ದ ಧ್ಯಾನ್‌ಚಂದ್ ಹಾಕಿ ಸ್ಟಿಕ್ ಮೇಲೆ ಕೆಂಗಣ್ಣು ಬೀರಿದ್ದ ನೆದರ್ಲೆಂಡ್ ಹಾಕಿ ಅಧಿಕಾರಿಗಳು ಒಂದೊಮ್ಮೆ ಚಂದ್ ಅವರ ಹಾಕಿ ಸ್ಟಿಕ್‌ನೊಳಗೆ ಆಯಸ್ಕಾಂತವಿದೆಯೇ ಎಂದು ಪರೀಕ್ಷಿಸಿದ್ದರಂತೆ.

► ಗೋಲುಪೆಟ್ಟಿಗೆಯ ಅಳತೆಯ ಬಗ್ಗೆ ರೆಫರಿಯೊಂದಿಗೆ ವಾಗ್ವಾದ: ಒಮ್ಮೆ ಧ್ಯಾನ್‌ಚಂದ್‌ಗೆ ಪಂದ್ಯವೊಂದರಲ್ಲಿ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆಗ ಅವರು ಗೋಲುಪೆಟ್ಟಿಗೆಯ ಅಳತೆ ಸರಿಯಿಲ್ಲ ಎಂದು ಮ್ಯಾಚ್ ರೆಫರಿಯೊಂದಿಗೆ ವಾಗ್ವಾದ ನಡೆಸಿದ್ದರು. ಪರಿಶೀಲಿಸಿದಾಗ ಅಂತರ್‌ರಾಷ್ಟ್ರೀಯ ನಿಯಮವನ್ನು ಉಲ್ಲಂಘಿಸಿ ಗೋಲ್‌ಪೋಸ್ಟ್ ರಚಿಸಿರುವುದು ಕಂಡು ಬಂದಿತ್ತು. ರೆಫರಿಯೊಂದಿಗೆ ವಾದಿಸಿ ಗೆದ್ದ ಧ್ಯಾನ್‌ಚಂದ್ ಹಾಕಿ ಮೇಲಿನ ತನ್ನ ಜ್ಞಾನದ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.

ಪ್ರಶಸ್ತಿ-ಪುರಸ್ಕಾರ

►1956ರಲ್ಲಿ ಪದ್ಮಭೂಷಣ ಪ್ರಶಸ್ತಿ

►ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ನೀಡಬೇಕೆಂಬ ಆಗ್ರಹ ಕೇಳಿಬಂದರೂ ಈವರೆಗೆ ಅದು ಈಡೇರಿಲ್ಲ.

ಹಿಟ್ಲರ್ ಆಫರ್ ತಿರಸ್ಕರಿಸಿದ ಧ್ಯಾನ್‌ಚಂದ್ 

1936ರಲ್ಲಿ ಬರ್ಲಿನ್‌ನಲ್ಲಿ ನಡೆದ ಒಲಿಂಪಿಕ್ಸ್ ಫೈನಲ್‌ನಲ್ಲಿ ಭಾರತ ತಂಡ ಜರ್ಮನಿ ವಿರುದ್ಧ 8-1 ಅಂತರದಿಂದ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಧ್ಯಾನ್‌ಚಂದ್ ನೀಡಿದ ಪ್ರದರ್ಶನದಿಂದ ಪ್ರಭಾವಿತರಾದ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್, ಧ್ಯಾನ್‌ಚಂದ್‌ಗೆ ಜರ್ಮನಿಯ ಪೌರತ್ವ ಹಾಗೂ ಜರ್ಮನಿ ಸೇನೆಯಲ್ಲಿ ಕರ್ನಲ್ ರ್ಯಾಂಕ್‌ನ ಆಫರ್ ನೀಡಿದ್ದರು. ಆದರೆ, ಈ ಆಫರನ್ನು ಚಂದ್ ತಿರಸ್ಕರಿಸಿದ್ದರು.

ಹಾಕಿಯಲ್ಲಿ ಸಾಧನೆ

►1932ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಅಮೆರಿಕವನ್ನು 24-1 ಹಾಗೂ ಜಪಾನ್ ತಂಡವನ್ನು 11-1 ಅಂತರದಿಂದ ಸೋಲಿಸಿತ್ತು. ಆ ಎರಡು ಪಂದ್ಯಗಳಲ್ಲಿ ಭಾರತ ಗಳಿಸಿರುವ 35 ಗೋಲುಗಳ ಪೈಕಿ ಧ್ಯಾನ್ ಚಂದ್ 12 ಗೋಲುಗಳನ್ನು, ಅವರ ಸಹೋದರ ರೂಪ್ ಸಿಂಗ್ 13 ಗೋಲುಗಳನ್ನು ಗಳಿಸಿದ್ದರು.

►ಚಂದ್ 1922 ಹಾಗೂ 1926ರ ನಡುವೆ ಹಲವಾರು ಆರ್ಮಿ ಹಾಕಿ ಟೂರ್ನಮೆಂಟ್‌ಗಳು ಹಾಗೂ ರಿಜಿಮೆಂಟಲ್ ಗೇಮ್‌ಗಳಲ್ಲಿ ಆಡಿದ್ದರು.

►1934ರಲ್ಲಿ ಭಾರತದ ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಂಡಾಗ ತಂಡದ ನಾಯಕತ್ವ ಹೊಣೆ ಹೊತ್ತಿದ್ದರು.

►ಹಲವು ಸ್ಮರಣೀಯ ಪಂದ್ಯಗಳನ್ನು ಆಡಿರುವ ಧ್ಯಾನ್‌ಚಂದ್‌ಗೆ 1933ರಲ್ಲಿ ಕೋಲ್ಕತಾ ಕಸ್ಟಮ್ಸ್ ಹಾಗೂ ಜಾನ್ಸಿ ಹೀರೋಸ್ ನಡುವೆ ನಡೆದಿದ್ದ ಬೀಟನ್ ಕಪ್ ಫೈನಲ್ ಅತ್ಯಂತ ಶ್ರೇಷ್ಠವಾಗಿದ್ದಾಗಿ ಹೇಳಿದ್ದರು.

► 42ನೇ ವಯಸ್ಸಿನ ತನಕ ಹಾಕಿಯಲ್ಲಿ ಮುಂದುವರಿದಿದ್ದ ಧ್ಯಾನ್‌ಚಂದ್ 1948ರಲ್ಲಿ ನಿವೃತ್ತಿಯಾದರು.

ಚಂದ್ರನ ತಿಂಗಳ ಬೆಳಕಲ್ಲಿ ಹಾಕಿ ಅಭ್ಯಾಸ

ತನ್ನ 16ನೇ ವಯಸ್ಸಿನಲ್ಲಿ ಇಂಡಿಯನ್ ಆರ್ಮಿಗೆ ಸಿಪಾಯಿ ಆಗಿ ಸೇರ್ಪಡೆಯಾಗಿದ್ದ ಧ್ಯಾನ್‌ಚಂದ್ 1956ರಲ್ಲಿ ಮೇಜರ್ ಆಗಿ ನಿವೃತ್ತಿಯಾಗಿದ್ದರು. ಸೇನೆ ಸೇರಿದ ತಕ್ಷಣ ಹಾಕಿಯತ್ತ ಚಿತ್ತ ಹರಿಸಿದ ಧ್ಯಾನ್ ಸಿಂಗ್ ಕರ್ತವ್ಯ ಮುಗಿಸಿದ ಬಳಿಕ ರಾತ್ರಿ ವೇಳೆಯೇ ಹೆಚ್ಚಾಗಿ ಹಾಕಿ ಅಭ್ಯಾಸ ಮಾಡುತ್ತಿದ್ದರು. ಆಗ ಹೊನಲು-ಬೆಳಕು ಇಲ್ಲದ ಕಾರಣ ಹಾಕಿ ಅಭ್ಯಾಸಕ್ಕೆ ಚಂದ್ರನ ತಿಂಗಳ ಬೆಳಕನ್ನೇ ಅವಲಂಬಿಸಿದ್ದರು. ಚಂದ್ರನ ಬೆಳಕಲ್ಲಿ ಹಾಕಿ ಕಲಿಯುತ್ತಿದ್ದ ಧ್ಯಾನ್ ಸಿಂಗ್‌ಗೆ ಅವರ ಸಹ ಆಟಗಾರರು ಚಂದ್ ಎಂಬ ಅಡ್ಡನಾಮದಿಂದ ಕರೆಯುತ್ತಿದ್ದರು. ಧ್ಯಾನ್‌ಚಂದ್‌ರ ಮೊದಲ ಕೋಚ್ ಅವರಿಗೆ ಚಂದ್ ಎಂಬ ಹೆಸರನ್ನು ಇಟ್ಟು, ನೀನು ಒಂದು ದಿನ ಚಂದ್ರನಂತೆ ಹೊಳೆಯುವುದಾಗಿ ಭವಿಷ್ಯ ನುಡಿದಿದ್ದರಂತೆ.

ಹಾಕಿಯ ಜಾದೂಗಾರ

1928ರ ಆ್ಯಮ್‌ಸ್ಟರ್‌ಡಮ್ ಒಲಿಂಪಿಕ್ಸ್‌ನಲ್ಲಿ ಒಟ್ಟು 14 ಗೋಲುಗಳನ್ನು ಗಳಿಸಿದ್ದ ಧ್ಯಾನ್ ಚಂದ್ ಅಗ್ರ ಗೋಲ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಭಾರತದ ಗೆಲುವಿನ ಬಗ್ಗೆ ವರದಿ ಮಾಡಿದ್ದ ಪತ್ರಿಕೆಗಳು, ಇದೊಂದು ಹಾಕಿ ಪಂದ್ಯವಲ್ಲ. ಅದು ಮ್ಯಾಜಿಕ್ ಆಗಿತ್ತು. ಧ್ಯಾನ್‌ಚಂದ್ ಹಾಕಿಯ ಜಾದೂಗಾರನಾಗಿದ್ದರು ಎಂದು ಬಣ್ಣಿಸಿದ್ದವು. 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಪಂದ್ಯವನ್ನು ಗೆದ್ದುಕೊಂಡಿತ್ತು. ಒಲಿಂಪಿಕ್ಸ್ ಕಾಂಪ್ಲೆಕ್ಸ್‌ನಲ್ಲಿ ಈಗ ಮ್ಯಾಜಿಕ್ ಶೋ ಕೂಡ ಇದೆ, ಹಾಕಿ ಸ್ಟೇಡಿಯಂಗೆ ಭೇಟಿ ನೀಡಿ ಭಾರತದ ಜಾದೂಗಾರ ಧ್ಯಾನ್ ಚಂದ್ ಆಟವನ್ನು ನೋಡಿ ಎಂದು ಬರೆದಿದ್ದ ಬ್ಯಾನರ್‌ನ್ನು ಹಾಕಿ ಸ್ಟೇಡಿಯಂನಲ್ಲಿ ಹಾಕಲಾಗಿತ್ತು. ಇದು ಜರ್ಮನಿಯ ದಿನಪತ್ರಿಕೆಯ ಮುಖಪುಟದಲ್ಲಿ ಸುದ್ದಿಯಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)