varthabharthi

ಸುಗ್ಗಿ

ಮನುಷ್ಯತ್ವದ ಸ್ವಚ್ಛ ಬದುಕಿನ ಪಾಠ ಹೇಳುವ 'ಪೊರಕೆ'

ವಾರ್ತಾ ಭಾರತಿ : 25 Aug, 2019
ಬನ್ನೂರು ಕೆ. ರಾಜು

ಇತ್ತೀಚಿನ ದಿನಗಳಲ್ಲಿ ನನಗೆ ಎರಡು ಸಾಹಿತ್ಯಕ ಕೃತಿಗಳು ಬಹಳ ಇಷ್ಟವಾದವು. ಬರಿ ಇಷ್ಟ ಮಾತ್ರವಲ್ಲ. ಸೂಜಿಗಲ್ಲಿನಂತೆ ನನ್ನನ್ನು ಸೆಳೆದು ಕೊಂಡಂತಹವು. ಅವುಗಳಲ್ಲೊಂದು ಲೇಖಕ ಮಲ್ಕುಂಡಿ ಮಹದೇವಸ್ವಾಮಿ ಅವರು ಬರೆದ ‘ಕಕ್ಕಸ್ಸು’ ಕೃತಿ. ಶೀರ್ಷಿಕೆ ನೋಡಿ ‘‘ಥೂ... ಇದೇನಿದು ಅಸಹ್ಯ...’’ ಎಂದು ರಾಗ ಎಳೆದವರು ಬಹಳ ಮಂದಿ. ವಾಸ್ತವವಾಗಿ ಈ ಕೃತಿಯಲ್ಲಿ ಒಂದಿನಿತೂ ಅಸಹ್ಯವಿಲ್ಲ. ಪುಟ ಪುಟವು ಸಹ್ಯವೇ! ಇದನ್ನು ಅರಿಯಲಿಕ್ಕಾದರು ಪ್ರತಿಯೊಬ್ಬರೂ ಒಮ್ಮೆ ಇದನ್ನು ಓದಲೇ ಬೇಕು. ನನಗಿಷ್ಟವಾದ ಇನ್ನೊಂದು ಪುಸ್ತಕ ಕವಿ ಸಿ. ಶಂಕರ ಅಂಕನಶೆಟ್ಟಿಪುರ ಅವರ ‘ಪೊರಕೆ’. ನಾನೀಗ ಹೇಳ ಹೊರಟಿರುವುದು ಈ ‘ಪೊರಕೆ’ಯ ಕುರಿತಾಗಿಯೇ. ಬಹುಶಃ ಈ ಶೀರ್ಷಿಕೆ ಕಂಡು ಮೂಗು ಮುರಿಯುವವರೂ ಉಂಟು. ಸ್ವಚ್ಛ ಭಾರತವನ್ನು ಗುರಿಯಾಗಿಸಿಕೊಂಡ ಇವೆರಡು ಕೃತಿಗಳಿಗೂ ಬಹಳ ಸಾಮ್ಯತೆಯುಂಟು. ಆದರೆ ಒಂದು ಗದ್ಯ ಮತ್ತೊಂದು ಪದ್ಯ. ಸಾಹಿತ್ಯ ಪ್ರಕಾರ ಯಾವುದಾದರೇನಂತೆ ಎರಡೂ ಕೃತಿಗಳ ಆಶಯ ಮಾತ್ರ ಒಂದೇ ಆಗಿದೆ. ಮತ್ತೊಂದು ವಿಶೇಷವೆಂದರೆ ಲೇಖಕರಿಬ್ಬರೂ ಶೋಷಿತ ಸಮುದಾಯದಿಂದ ಬಂದವರೇ ಆಗಿದ್ದಾರೆ. ನೋವಿನ ತೀವ್ರತೆಯನ್ನು ಬಲ್ಲವರೇ ಆಗಿದ್ದಾರೆ. ಹಾಗಾಗಿ ಇವೆರಡೂ ಕೃತಿಗಳು ಶೋಷಿತರ ಬೆವರಿನಲ್ಲಿ ಅದ್ದಿದ ಬೆಳಕಿನ ಕುಡಿಗಳಾಗಿವೆ. ಬೆಂಕಿಯ ಕಿಡಿಗಳೂ ಆಗಿವೆ. ಇವು ಸ್ವಚ್ಛ ಭಾರತಕ್ಕೆ ಅಕ್ಷರಶಃ ಕನ್ನಡಿ ಹಿಡಿಯುತ್ತವೆ.

ಇಷ್ಟಕ್ಕೂ ಈ ಇಬ್ಬರು ಲೇಖಕರೂ ಸುಪ್ರಸಿದ್ಧರಾದ ಬಹುದೊಡ್ಡ ಲೇಖಕರೇನಲ್ಲ. ಆದರೆ ಇವರ ಕೃತಿಗಳಲ್ಲಿ ಇಡೀ ಸಮಾಜ ಇತ್ತ ತಿರುಗಿ ನೊಡುವಂಥಾ ಬಹುದೊಡ್ಡ ಸಂದೇಶ ಉಂಟು. ಸಾಮಾನ್ಯ ಲೇಖಕರಾಗಿದ್ದುಕೊಂಡೇ ಅಸಾಮಾನ್ಯವೆನಿಸುವ ಸಮಾಜ ಸುಧಾರಣಾ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಭವಿಷ್ಯದಲ್ಲಿ ಅಸಾಮಾನ್ಯರಾಗಿ ಬೆಳೆದು ಬಹುದೊಡ್ಡ ಸುಪ್ರಸಿದ್ಧ ಲೇಖಕರಾಗುವ ಲಕ್ಷಣಗಳನ್ನು ತೋರಿದ್ದಾರೆ. ಹಾಗಾಗಿ ಇವರಿಗೊಂದು ಸೆಲ್ಯೂಟ್ ಹೊಡೆಯಲೇಬೇಕು.

ಲೇಖಕನಾದವನು, ಪತ್ರಕರ್ತನಾದವನು, ಸಾಹಿತಿಯಾದವನು, ವಿಶೇಷವಾಗಿ ಖಡ್ಗವಾಗಲಿ ಕಾವ್ಯವೆಂಬ ನುಡಿಗೊಳಪಡುವ ಕವಿಯಾದವನು ತನ್ನ ಲೇಖನಿಯ ಮೂಲಕ ರೋಗಗ್ರಸ್ಥ ಸಮಾಜಕ್ಕೆ ಚಿಕಿತ್ಸೆ ನೀಡಿ, ಬುದ್ಧಿಗೇಡಿತನವನ್ನು ತಿದ್ದಿತೀಡಿ ಆರೋಗ್ಯಕರ ಸಮಾಜವನ್ನು ಕಟ್ಟಬೇಕೆನ್ನುವ ಮಾತುಗಳನ್ನು ಸಾಕ್ಷೀಕರಿಸುವಂತೆ ಕವಿ ಸಿ. ಶಂಕರ ಅಂಕನಶೆಟ್ಟಿಪುರ ಅವರು ಎಂಬತ್ತು ಕವನ ಕಡ್ಡಿಗಳನ್ನು ಜೋಡಿಸಿ ‘ಕಾವ್ಯ ಪೊರಕೆ’ಯನ್ನು ಕಟ್ಟಿಕೊಟ್ಟಿದ್ದಾರೆ. ‘ಪೊರಕೆ’ ಎಂದ ತಕ್ಷಣ ನಮಗೆ ಸ್ವಚ್ಛತೆ ಕಣ್ತೆರೆದು ಕೊಳ್ಳುತ್ತದೆ. ಕಸ ಗುಡಿಸುವುದು, ಕೊಳೆ ತೊಳೆಯುವುದು ಕಣ್ಮುಂದೆ ಬಂದು ನಿಲ್ಲುತ್ತದೆ. ತಪ್ಪು ಮಾಡಿದವರು ಕಸ ಪೊರಕೆಯಿಂದ ಬಾರಿಸಿಕೊಂಡು ದಂಡನೆ ಗೀಡಾಗುವುದೂ ಸಹ! ‘ನೀನ್ ಮಾಡಿರೋ ಮನೆಹಾಳ್ಕೆಲಸಕ್ಕೆ ಪೊರಕೆ ಕಿತ್ತೋಗಂಗೆ ಹೊಡೀಬೇಕು... ಥೂ, ನಿನ್ನ ಜನ್ಮಕ್ಕಿಷ್ಟು ಬೆಂಕಿಯಾಕ...’ ಎಂಬ ಮಾತುಗಳನ್ನು ನಾವು ಈಗಲೂ ಅಲ್ಲಲ್ಲಿ ಕಂಡು ಕೇಳುತ್ತಿರುತ್ತೇವೆ. ‘ಪೊರಕೆ’ ಎಂಬುದು ಸ್ವಚ್ಛತೆಯ ಸಂಕೇತ. ಅಶುದ್ಧತೆಯನ್ನು ಶಿಕ್ಷಿಸಿ ಶುದ್ಧತೆಯನ್ನು ರಕ್ಷಿಸುವ ದುಷ್ಟ ಶಿಕ್ಷಣ ಶಿಷ್ಟ ರಕ್ಷಣ ಎಂಬಂಥಾ ಕಾಯಕ ಅದರದು. ಇಂಥಾ ‘ಪೊರಕೆ’ಯ ಬಗ್ಗೆ ತಿಳಿಯದವರೇ ವಿರಳ. ಇಲ್ಲವೆಂದರೂ ಆದೀತು. ಒಂದು ಪುಟ್ಟ ಮಗುವಿಗೂ ಗೊತ್ತು ಪೊರಕೆಯ ಕೆಲಸವೇನೆಂಬುದು. ಇಂತಹ ಪವರ್‌ಫುಲ್ ‘ಪೊರಕೆ’ಯನ್ನು ಸಾಂಕೇತಿಕವಾಗಿ ಕೃತಿಯ ಶೀರ್ಷಿಕೆಯಾಗಿಟ್ಟುಕೊಂಡು ಕವಿತೆಗಳನ್ನು ಬರೆದು ತನ್ಮೂಲಕ ಸುಂದರವಾದ, ಶುದ್ಧವಾದ, ಸ್ವಚ್ಛವಾದ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಒಂದೊಂದು ‘ಪೊರಕೆ’ಗಳಾಗಬೇಕೆಂಬ ಸಾತ್ವಿಕ ಸಂದೇಶವನ್ನು ಕವಿ ಶಂಕರ ಕೊಟ್ಟಿದ್ದಾರೆ. ಹಾಗೆಯೇ ಪೊರಕೆ ಹಿಡಿದು ಕಸಗುಡಿಸುವ, ಎಲ್ಲಾ ರೀತಿಯ ಹೊಲಸನ್ನು ಕೊಳಕನ್ನು ಹೊರಹಾಕುವ, ತಾವು ಮೈಲಿಗೆಯಾಗಿ ಎಲ್ಲರನ್ನೂ ಎಲ್ಲವನ್ನೂ ಮಡಿಮಾಡಿ ತಾವು ಮಾತ್ರ ಶೋಷಣೆಯ ಅಗ್ನಿ ಪಂಜರದಲ್ಲಿ ಬಂಧಿಯಾಗಿರುವ ಪೌರಕಾರ್ಮಿಕರೆಂಬ ಸ್ವಚ್ಛತಾಗಾರ ಬಂಧುಗಳ ಬಗ್ಗೆ ಕೀಳು ಭಾವನೆ ಬಿಟ್ಟು ಮೇಲ್ಭಾವನೆ ತಾಳಿ ಅವರ ಬದುಕು ಕೂಡ ಸುಂದರವಾಗುವಂತೆ ಶೋಷಣೆಯ ಅಗ್ನಿಪಂಜರದಿಂದ ಅವರನ್ನು ಬಂಧ ಮುಕ್ತಗೊಳಿಸುವತ್ತ ಇಡೀ ಸಮಾಜ ಅವರತ್ತ ಸ್ಪಂದಿಸುವಂತೆ ಆಶಯ ವ್ಯಕ್ತಪಡಿಸಿದ್ದಾರೆ.

‘ಇದು ಸ್ವಚ್ಛತೆಗಾರರ ಸಂಗಾತಿ’ ಎನ್ನುವ ಅರ್ಥಪೂರ್ಣ ಉಪಶೀರ್ಷಿಕೆಯನ್ನೂ ಹೊಂದಿರುವ ‘ಪೊರಕೆ’ ಕವಿ ಸಿ. ಶಂಕರ ಅಂಕನಶೆಟ್ಟಿಪುರ ಅವರ ನಾಲ್ಕನೇ ಕವನ ಸಂಕಲನ. ಈಗಾಗಲೇ ಭಾವನೆಗಳು, ಹೃದಯ, ಕಿಚ್ಚು ಎಂಬ ಮೂರು ಕೃತಿಗಳನ್ನು ಪ್ರಕಟಿಸಿ ಕನ್ನಡ ಕಾವ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಇವರು ಮೂಲತಃ ಪತ್ರಕರ್ತರಾಗಿದ್ದು ಕಾವ್ಯವನ್ನು ಸಮಾಜ ಸುಧಾರಣೆಯ ಮಾರ್ಗವಾಗಿ ಆಯ್ಕೆ ಮಾಡಿಕೊಂಡಿದ್ದು ಕೃತಿಯಿಂದ ಕೃತಿಗೆ ಮಾಗುತ್ತಾ ಹೋಗಿ ‘ಪೊರಕೆ’ ಕೃತಿಯ ಮೂಲಕ ಒಳ್ಳೆಯ ಕಾವ್ಯ ಫಲವನ್ನು ನೀಡಿದ್ದಾರೆ. ಕಿರುಗವಿತೆೆಗಳೂ ಸೇರಿದಂತೆ ಒಟ್ಟು ಎಂಬತ್ತು ಕವಿತೆಗಳುಳ್ಳ ಈ ಸಂಕಲನದಲ್ಲಿ ಒಳಿತನ್ನು ಉಳಿಸಿಕೊಂಡು ಕೆಟ್ಟದನ್ನು ದೂರ ಸರಿಸಬೇಕೆಂಬ ಆಶಯದಲ್ಲಿ ‘ಪೊರಕೆ’ ಅಕ್ಷರಗಳ ಮುದ್ದು ಗುಂಡುಗಳೊಡನೆ ಕೃತಿಯುದ್ದಕ್ಕೂ ಯದ್ಧೋಪಾದಿಯಲ್ಲಿ ಕೆಲಸ ಮಾಡಿದೆ. ಈ ದಿಸೆಯಲ್ಲಿ ಈ ಕಾವ್ಯ ಸಂಕಲನಕ್ಕೆ ಇಟ್ಟಿರುವ ‘ಪೊರಕೆ’ ಶೀರ್ಷಿಕೆ ಔಚಿತ್ಯ ಪೂರ್ಣವೆನಿಸಿದ್ದು ಒಟ್ಟಾರೆ ಕವಿಯ ಸ್ವಚ್ಛ ಮನಸ್ಸಿನ ಉದ್ದೇಶವನ್ನು, ಕೆಟ್ಟ ಸಮಾಜದ ಮೇಲಿನ ಸಿಟ್ಟನ್ನು ಸಾಂಕೇತಿಸುತ್ತದೆ. ಇದಕ್ಕೆ ಪೂರಕವಾಗಿ ಪೊರಕೆಯೊಳಗಿನ ಪ್ರತಿಯೊಂದು ಕವಿತೆಗಳೂ ಮೌಲಿಕ ಕಾವ್ಯ ಗುಣಗಳಿಂದ ಸಾಣೆ ಹಿಡಿದ ಕತ್ತಿಯಂಚಿನಂತೆ ಹರಿತವಾಗಿ ಸಾಗುತ್ತವೆ. ಹಾಗಂತ ಇಲ್ಲಿನ ಕವಿತೆಗಳೆಲ್ಲವೂ ಶ್ರೇಷ್ಠಮಟ್ಟದೆಂದು ಹೇಳಿದರೆ ಉತ್ಪ್ರೇಕ್ಷೆಯಾದೀತು. ಆದರೆ ಇದೊಂದು ಉತ್ತಮ ಕೃತಿ ಎಂದು ಹೇಳಿದರೆ ಖಂಡಿತ ಉತ್ಪ್ರೇಕ್ಷೆಯಾಗಲಾರದು. ಏಕೆಂದರೆ ಬಾಲಿಶವಾದ ಪ್ರೀತಿ, ಪ್ರೇಮ, ಕಾಮ, ಕೋಮ, ವಿರಹ, ಸರಸ, ಹಾಸ್ಯ, ಅಪಹಾಸ್ಯಗಳಂತಹ ಕವಿತೆಗಳಿಗೆ ಇಲ್ಲಿ ಒಂದು ಚೂರೂ ಜಾಗವಿಲ್ಲ. ಬದಲಿಗೆ ಅಮೂಲ್ಯವಾದ ಜೀವ-ಜೀವನದ ಮೇಲೆ ಕ್ಷ-ಕಿರಣ ಬೀರುವ ಉತ್ತಮ ಕವಿತೆಗಳು ಎಲ್ಲಾ ಜಾಗವನ್ನೂ ಆಕ್ರಮಿಸಿಕೊಂಡಿವೆ. ವಿಶೇಷವಾಗಿ ಪೌರಕಾರ್ಮಿಕರನ್ನು ಕೇಂದ್ರೀಕರಿಸಿಕೊಂಡಿರುವ ಈ ಕೃತಿಯಲ್ಲಿ ಅವರ ಬದುಕು-ಬವಣೆಗಳದ್ದೇ ಸಿಂಹಪಾಲು!

‘‘ದೇಶದ ಗಡಿಕಾಯೋ ಸೈನಿಕರು

ದೇಶಕ್ಕೆ ಎಷ್ಟು ಮುಖ್ಯವೋ

ದೇಶದೊಳಗಿನ ಸ್ವಚ್ಛತೆಯನ್ನು ಕಾಪಾಡುವ ಪೌರಕಾರ್ಮಿಕರು

ಕೂಡ ಅಷ್ಟೇ ಮುಖ್ಯ...’’ ಎನ್ನುತ್ತಲೇ ಕವಿ ಶಂಕರ ಈ ಮೌಲಿಕ ಕೃತಿಯನ್ನು ಸಮಸ್ತ ಪೌರಕಾರ್ಮಿಕರಿಗೆ ಅರ್ಪಣೆ ಮಾಡಿ ಹೃದಯವಂತಿಕೆ ತೋರುವುದರೊಂದಿಗೆ ‘ಪೊರಕೆ’ಯ ಕಾವ್ಯಾಭಿಯಾನವನ್ನು ಶುರು ಮಾಡಿರುವುದು ಪೌರಕಾರ್ಮಿಕರ ಮೇಲಿನ ಅವರ ಉತ್ಕಟ ಅಭಿಮಾನವನ್ನು ಎತ್ತಿ ತೋರಿಸುತ್ತದೆ. ಹಾಗೆಯೇ ‘ಸ್ವಚ್ಛ ಭಾರತ’ ಶಿರೋನಾಮೆಯ ಆರಂಭದ ಕವಿತೆಯಲ್ಲೇ ಸ್ವಚ್ಛಭಾರತ್ ಹೆಸರಿನಲ್ಲಿ ನಾಟಕವಾಡುವ ಮಂದಿಯ ಮುಖಕ್ಕೆ ಮಂಗಳಾರತಿ ಮಾಡಿ ಅವರ ಮುಖವಾಡ ಕಳಚಿದ್ದಾರೆ.

‘‘ಸ್ವಚ್ಛಭಾರತ ಅಭಿಯಾನ ಆರಂಭಿಸಿದರು

ಸ್ವಚ್ಛ ಜಾಗದಲ್ಲಿ ನಿಂತರು

ಹೊಸ ಪೊರಕೆಗಳ ಹಿಡಿದರು

ಸ್ವಚ್ಛ ಮಾಡುವೆನೆಂದು ಪೋಸ್ ಕೊಟ್ಟರು

ಬಿಟ್ಟಿ ಪ್ರಚಾರಗಿಟ್ಟಿಸಿಕೊಂಡರು

ಕಾರು ಹತ್ತಿ ಮನೆಗೆ ಹೊರಟ ಮಹಾಶೂರರು!...’’

ಹೀಗೆ ಬಹಳ ಸರಳವಾಗಿಯೇ ಶಾಲಿನೊಳಗೆ ಚಪ್ಪಲಿಯಿಟ್ಟು ಹೊಡೆಯುತ್ತಾ ಹೋಗುವ ಕವಿ ಶಂಕರ ಅವರು ಇದೇ ಕವಿತೆಯನ್ನು ಮುಂದುವರೆಸಿ ಯೋಗ್ಯರ ಯೋಗ್ಯತೆಯನ್ನು ಮೆರೆಸಿ ಕವಿತೆಯನ್ನು ಮುಕ್ತಾಯಗೊಳಿಸುವುದು ಹೀಗೆ.

‘‘ಯಾರು ಪೊರಕೆ ಹಿಡಿದರೇನಂತೆ

ನಮ್ಮದೇ ಈ ಕಾಯಕವೆಂದು ನಸು ಮಬ್ಬಲ್ಲಿ ಎದ್ದರು

ಚಳಿ ಗಾಳಿ ಮಳೆ ಎನ್ನದೆ ಪೊರಕೆ ಹಿಡಿದರು

ಚೆಲ್ಲಾಪಿಲ್ಲಿಯಾದ ಕಸವ ಒಂದು ಮಾಡಿದರು

ಮ್ಯಾನ್‌ಹೋಲ್‌ಗೆ ಇಳಿದೇ ಬಿಟ್ಟರು

ಸ್ವಚ್ಛತೆಗೆ ಉಸಿರುಕೊಟ್ಟರು

ಅಶುದ್ಧತೆಯ ಒಳಗೊಳಗೆ ನುಂಗಿ

ಶುದ್ಧ ವಾತಾವರಣಕ್ಕೆ ಬೆಳಕು ಕೊಟ್ಟರು

ಇವರೇ ನಿಜವಾದ ಸ್ವಚ್ಛ ಭಾರತೀಯರು

ನಮ್ಮ ಹೆಮ್ಮೆಯ ಪೌರಕಾರ್ಮಿಕರು!’’

ಬಹುಶಃ ಇದೊಂದು ಕವಿತೆಯೇ ಸಾಕೇನೋ ಕವಿಯ ಹಾಗೂ ಕೃತಿಯ ಮಹದಾಶಯವನ್ನು ಅರ್ಥ ಮಾಡಿಕೊಳ್ಳಲು. ಸ್ವಚ್ಛತೆಗೆ ಉಸಿರುಕೊಟ್ಟರು ಎಂಬ ಸಾಲೇ ‘ಪೊರಕೆ’ಯ ಶ್ವಾಸವಾಗಿ ಕೃತಿಯೊಳಗೆ ಧ್ವನಿಸುತ್ತದೆ. ಇದರ ಹಿನ್ನೆಲೆಯಲ್ಲೇ ಇಡೀ ಕೃತಿಯನ್ನು ಓದಿ ಕವಿತೆಗಳನ್ನು ಆಸ್ವಾದಿಸಬೇಕು. ಆಗಲೇ ‘ಪೊರಕೆ’ ನಮ್ಮ ಹಿಡಿಯಾಗುವುದು ಹಾಗೂ ಕವಿ ಶಂಕರ ಅವರ ಪ್ರತಿಭೆ ಅನಾವರಣಗೊಳ್ಳುವುದು.

‘ಸ್ವಚ್ಛಭಾರತ’ ಕವಿತೆಯಿಂದ ಪ್ರಾರಂಭಿಸಿ ‘ನನ್ನೊಳಗೆ’ ಎಂಬ ಕವಿತೆಯಿಂದ ಕೊನೆಗೊಳ್ಳುವ ‘ಪೊರಕೆ’ಯೊಳಗಿನ ಎಂಬತ್ತು ಕವಿತೆಗಳೂ ಭಿನ್ನ ವಿಭಿನ್ನವಾಗಿ, ವಿಶಿಷ್ಟ ವೈಶಿಷ್ಟವಾಗಿದ್ದು ಪ್ರತಿಯೊಂದು ಕವಿತೆಗಳೂ ಸತ್ಯವನ್ನೇ ಉಸುರುವುದು ಈ ಕೃತಿಯ ವಿಶೇಷ. ಸ್ವಚ್ಛತೆಗಾರನ ಬದುಕು ನಾಯಿಗಿಂತ ಕೀಳಾಯಿತೇ?, ಇವರೇ ಸ್ವಚ್ಛ ಮೈಸೂರಿನ ಪೌರಕಾರ್ಮಿಕರು, ಸತ್ತಿವೆ ಸ್ವಾಮಿ ಅವರ ಪಾಲಿಗೆ ಗ್ರಾಮ ಪಂಚಾಯತ್‌ಗಳು, ಪೌರಕಾರ್ಮಿಕರ ಪಾದತೊಳೆದರೆ ಅವರ ಅಭಿವೃದ್ಧಿಯಾಗುವುದೇ?. ಅಲ್ಲಾ, ನಾವು ಬಾಡುತಿಂದರೆ ನಿಮಗೇನು ಕಷ್ಟ ಅಂತ, ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಜಾರಿಯಾಗಲಿ... ಹೀಗೆ ಸುದೀರ್ಘ ಶೀರ್ಷಿಕೆಗಳಡಿಯಲ್ಲಿ ಇಲ್ಲಿನ ಬಹಳಷ್ಟು ಕವಿತೆಗಳು ಮಾತನಾಡಿದರೂ ಎಲ್ಲೂ ಕೂಡ ಹೇಳಬೇಕೆನಿಸಿದ ವಿಷಯದಿಂದಾಚೆಗೆ ಹೋಗದೆ ಗಟ್ಟಿಯಾಗಿ ನಿಲ್ಲುತ್ತವೆ.

ಮನುಸ್ಮತಿ ಸುಟ್ಟಿದ್ದು ಸರಿ. ಆ ಮನು ಸ್ಮತಿಯ ಮನಸ್ಸುಗಳನ್ನು ಸುಡುವುದಾದರೂ ಹೇಗೆಂದು (ಮನುಸ್ಮತಿ ಸುಟ್ಟದಿನ) ಪ್ರಶ್ನಿಸುವಲ್ಲಿ, ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ನಿನ್ನ ಮುಂದೆ ನಡೆಯಿತಲ್ಲ ಮಾರಣ ಹೋಮ (ಸುಳ್ವಾಡಿ ದ್ವೇಷ) ಎಂದು ನೊಂದುಕೊಳ್ಳುವಲ್ಲಿ, ಕನ್ನಡ ಕನ್ನಡ ಎನ್ನುವ ಕೆಲ ಸಾಹಿತಿಗಳೇ ಹೋರಾಟಗಾರರೇ ಮನಮುಟ್ಟಿ ಹೇಳಿ ನಿಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮ ಓದುತ್ತಿಲ್ಲವೇ? (ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ) ಎಂದು ಜೋರು ಧ್ವನಿ ಎತ್ತುವಲ್ಲಿ, ಹಿಂದೆ ತಮಟೆಯ ಸದ್ದೆಂದರೆ ಕ್ರಾಂತಿಯ ಪರಿಕರ.

ಇಂದು ತಮಟೆಯ ಸದ್ದು ನಮ್ಮಿಂದ ದೂರ ದೂರ (ತಮಟೆ) ಎಂದು ಕೊರಗುವಲ್ಲಿ ಕವಿ ಶಂಕರ ವಿಶೇಷವಾಗಿ ಗಮನ ಸೆಳೆಯುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)