varthabharthi

ಸುಗ್ಗಿ

ನವಿರು ಸಾಲು

ಚಪ್ಪಲಿ ಪುರಾಣ

ವಾರ್ತಾ ಭಾರತಿ : 25 Aug, 2019
ಮುನವ್ವರ್ ಜೋಗಿಬೆಟ್ಟು

ಪದವಿ ಪರೀಕ್ಷಾ ಕೊಠಡಿಯಲ್ಲಿ ಈಗಷ್ಟೇ ಮೊದಲ ಗಂಟೆ ಬಾರಿಸಿದೆ; ಬ್ಯಾಗ್ ಎಸೆಯುವುದು, ಪೆನ್ನಿಗಾಗಿ ತಡಕಾಡುವುದು, ಇತರ ಪರಿಕರಗಳಿಗಾಗಿ ಹತ್ತಿರದವನ ಜೊತೆ ಬೇಡುವುದು, ಕೊನೆಗೊಮ್ಮೆ ದಡ ಬಡ ಸದ್ದು ಮಾಡುತ್ತಾ ಪರೀಕ್ಷಾ ಕೊಠಡಿಗೆ ಓಡಿ ಬಂದು ಮೇ ಐ ಕಮ್ ಇನ್ ಸರ್ ಎನ್ನುತ್ತಾ ಒಳಗೆ ಬರುವುದು. ಎಲ್ಲಾ ತರಾತುರಿಯೂ ಮುಗಿದು ಎರಡನೇ ಗಂಟೆಯೂ ಬಾರಿಸಿದೆ. ಸುಯಿಲೆತ್ತುವುದು ಕೇಳಿಸದಷ್ಟು ಪ್ರಶಾಂತ ಮೌನ. ಕಾಲೇಜಿನ ಹೊರ ಕಿಟಕಿಗೆ ಆತು ನಿಂತಿರುವ ಮರ ಗಾಳಿಗೆ ಜೋರಾಗಿ ಬೀಸಿದಾಗ ನೆಟಿಕೆ ಮುರಿಯುವ ಕೊಂಬೆಗಳ ಸದ್ದು ಕೇಳುವುದಕ್ಕೆ ಇಂತಹ ಮುಹೂರ್ತಗಳನ್ನೇ ಕಾಯಬೇಕು. ಇಲ್ಲದಿದ್ದರೆ ಕಾಲೇಜೆಂದರೆ ಗದ್ದಲದ ಸಂತೆ. ಇನ್ನೇನು ಪ್ರಶ್ನೆಪತ್ರಿಕೆ ವಿತರಣೆಯಾಗುತ್ತದೆ ಎನ್ನುವಾಗ ಹತ್ತಿರದವನು ಕಣ್ಣುಮುಚ್ಚಿ ಪ್ರಾರ್ಥಿಸುವ ಮಂತ್ರಗಳು ಪಿಸ ಪಿಸ ಎಂದು ಕಿವಿಗೆ ಬಡಿಯುತ್ತಿತ್ತು. ನೆತ್ತಿ, ಎದೆ, ಭುಜ ಎಲ್ಲವನ್ನೂ ಮುಟ್ಟಿ ಒಂದಷ್ಟು ಆಸ್ತಿಕರು ನಮಸ್ಕರಿಸಿದರು. ಕೊನೆಗೆ ಪ್ರಶ್ನೆಪತ್ರಿಕೆಯೂ ವಿತರಣೆಯಾಯಿತು. ಅಷ್ಟರಲ್ಲೇ ಟಕ್- ಟಕ್ ಎಂಬ ಬೂಟಿನ ಶಬ್ಧ ಕೊಠಡಿಗೆ ಕೇಳಿಸಲಾರಂಭಿಸಿತು. ದೇವರೇ ಈ ಒಂದು ಪರೀಕ್ಷೆಯಲ್ಲಿ ಮೇಲೆ ಹಾಕು, ಇನ್ನು ಓದುತ್ತೇನೆ ಎಂಬ ಹಲುಬು, ಸ್.. ಓಯ್.. ಸ್... ಬರೆದಾದ ಮೇಲೆ ಪೇಪರ್ ಸೈಡಿಗಿಡು ಆಯ್ತಿ ಎಂದು ಕಲಿಕೆಯಲ್ಲಿ ಮುಂದಿರುವನೊಬ್ಬನಲ್ಲಿ ಸೋಮಾರಿ ಹುಡುಗನೊಬ್ಬನ ಭಿನ್ನಹ. ಈ ಎಲ್ಲಕ್ಕೂ ಮಿಗಿಲಾಗಿ ಎದೆಯಲ್ಲಿ ಢವಗುಟ್ಟುತ್ತಿರುವ ಆ ಟಕ್ ಟಕ್ ಎಂಬ ಬೂಟಿನ ಸದ್ದು. ಆ ಸದ್ದು ಯುದ್ಧ ಭೂಮಿಯಲ್ಲಿ ಕುದುರೆಯ ಖುರಪುಟದಂತೆಯೆ ಗಂಭೀರವಿತ್ತು. ಯಾರಾಗಿರಬಹುದು, ಪರೀಕ್ಷಾ ನಿರೀಕ್ಷಕರೋ, ತನಿಖಾಧಿಕಾರಿಗಳೋ ಪ್ರತಿಯೊಬ್ಬ ವಿದ್ಯಾರ್ಥಿಯೆದೆಯಲ್ಲೂ ಅವ್ಯಕ್ತ ಭಯ. ಚೆನ್ನಾಗಿ ಬೈಹಾರ್ಟು ಹೊಡೆದು ಅತಿ ಹೆಚ್ಚು ಮಾರ್ಕು ಪಡೆಯುವ ಹುಡುಗಿ ಅದಾಗಲೇ ಅರ್ಧಕ್ಕರ್ಧ ಫಾರ್ಮುಲಾ ಮರೆತು ಉಗುಳು ನುಂಗತೊಡಗಿದಳು. ಸದ್ದು ಇನ್ನಷ್ಟು ಹತ್ತಿರವಾಯಿತು. ಕಣ್ಮುಚ್ಚಿ ಪ್ರಾರ್ಥಿಸುತ್ತಾ ಬಾಗಿಲಿನ ಕಡೆಗೊಮ್ಮೆ ದೃಷ್ಟಿ ನೆಟ್ಟೆ. ತಥಾ ಕಥಿತ ವ್ಯಕ್ತಿ ಅಲ್ಲಿ ಪ್ರತ್ಯಕ್ಷನಾದ. ನೀಳ ಗಡ್ಡ, ಎಣ್ಣೆ ಹಾಕಿ ಹಿಂದೆ ಬಾಚಿದ ನೀಳ ಕೂದಲು. ಇನ್ ಶರ್ಟ್ ಮಾಡಿದ್ದ ಆ ಟಿಪ್ ಟಾಪ್ ವ್ಯಕ್ತಿ ಬಾಗಿಲ ಬಳಿ ನಿಂತ. ಎಲ್ಲರ ಕಣ್ಣು ಭಯದಿಂದಲೇ ಅತ್ತ ಓಡಿತು. ಮೇ ಐ ಕಮ್ ಇನ್ ಎಂದವನೇ, ಖಾಲಿ ಬಿದ್ದಿದ್ದ ಕೊನೆಯ ಸೀಟಿನತ್ತ ಗಂಭೀರವಾಗಿಯೇ ನಡೆದು ಪರೀಕ್ಷೆ ಬರೆಯಲು ಕುಳಿತ. ಇಡೀ ಪರೀಕ್ಷಾ ಕೊಠಡಿಯೇ ಗೊಳ್ಳೆಂದು ನಗುಗಡಲಲ್ಲಿ ತೇಲಿತು. ಅದರ ಬೆನ್ನಿಗೆ ಶ್... ಸೈಲೆಂಟ್ ಎಂದು ವಕ್ಕರಿಸುತ್ತಾ ಪರೀಕ್ಷಾಧಿಕಾರಿ ನಗು ನುಂಗುತ್ತಾ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಅವನು ಬಂದ ಟಾಕು- ಟೀಕಿಗೆ, ಘನ ಗಾಂಭೀರ್ಯಕ್ಕೆ ಯಾರೋ ಇನ್ವಿಜಿಲೇಟರ್ ಇರಬೇಕೆಂದು ಭಾವಿಸಿದ್ದೇ ನಾವೆಲ್ಲರೂ ಮಾಡಿದ ಯಡವಟ್ಟು. ಸ್ವಲ್ಪ ಸಮಯ ಸರಿಯಿತು. ಅರ್ಧ ಗಂಟೆಯ ತರುವಾಯ ಏನು ಬರೆದನೋ, ಬಿಟ್ಟನೋ ಉತ್ತರ ಪತ್ರಿಕೆ ಕೊಟ್ಟವನು ಮತ್ತೆ ಹಾಗೆಯೇ ಬೂಟಿನ ಸದ್ದು ಮಾಡಿಕೊಂಡು ಪರೀಕ್ಷಾ ಕೊಠಡಿಯಿಂದ ಹೊರ ಬಿದ್ದ. ವರ್ಷಾನುವರ್ಷ ಹಿಂದೆ ಬಿದ್ದ ಪರೀಕ್ಷೆಗಳನ್ನು ಬರೆಯಲು ಬರುತ್ತಿದ್ದವನಿಗೆ ಈಜಿ ದಡ ಸೇರಲಾಗಲೇ ಇಲ್ಲ. ಆದರೂ ಈ ವರ್ಷವಾದರೂ ಓದದೆ ಪಾಸಾಗಬಹುದೆಂಬ ನಿರೀಕ್ಷೆಯಲ್ಲಿ ಬರುತ್ತಿದ್ದುದನ್ನು ಆತ ನಿಲ್ಲಿಸಿರಲಿಲ್ಲ.

 ಹೀಗೆ ನಮಗೂ 3 ವರ್ಷ ಹಿರಿಯ ಸಿನೀಯರ್ ನಾವು ಪದವಿ ಮುಗಿಸುವವರೆಗೂ ಪರೀಕ್ಷಾ ಅತಿಥಿಯಾಗಿ ಬರುತ್ತಲೇ ಇದ್ದ. ಅವನ ಬೂಟಿನ ಸದ್ದು ಕೇಳಿಸಿ ನಾವು ಹೈರಾಣಾಗುವುದು ನಡೆಯುತ್ತಲೂ ಇತ್ತು. ಆಗಲೂ ನನ್ನನ್ನು ಕಾಡಿದ್ದು ಅದೇ ಬೂಟಿನ ಸದ್ದು. ಒಂದು ಕಾಲಕ್ಕೆ ಬರಿ ಗಾಲಲ್ಲಿ ನಡೆಯುತ್ತಿದ್ದವನ ಬಾಲ್ಯ. ಕಾಲವೆಷ್ಟು ಬದಲಾಗಿ ಹೋಗಿದೆ. ಅಂತಹ ಅಗ್ನಿ ಪರೀಕ್ಷೆಯಲ್ಲೂ ಆ ಚಪ್ಪಲಿಯ ಸಂಸ್ಕಾರ ಬೆಳೆದು ಬಂದಿದ್ದು ಹೇಗೆ ಎಂಬ ಜಿಜ್ಞಾಸೆ ಮೂಡತೊಡಗಿದ್ದು ಸುಳ್ಳಲ್ಲ.

ನನಗೆ ಸ್ವಂತ ಚಪ್ಪಲಿ ಬರುವ ಹೊತ್ತಿಗೆ ನಾನು ಮೂರೋ ನಾಲ್ಕೋ ಕ್ಲಾಸು. ಚಪ್ಪಲಿ ಹಾಕಿ ನಡೆಯುವುದನ್ನು ಊಹಿಸಿಕೊಳ್ಳೋಕೆ ಸಾಧ್ಯವಿರಲಿಲ್ಲ. ಬರಿಗಾಲಲ್ಲಿ ನಡೆದು ಅಭ್ಯಾಸವಾಗಿತ್ತು. ಹಾಗೆ ನಡೆಯುತ್ತಿದ್ದುದರಿಂದ ಆಗಾಗ್ಗೆ ಗಾಜಿನ ಚೂರು, ಮುಳ್ಳು ತರಚಿ ಕಾಲು ಗಾಯವಾಗುವ ವೃತ್ತಾಂತಗಳು ತಿಂಗಳಿಗೆರಡಾದರೂ ಬಂದೀತು, ಬರಲೇ ಬೇಕು. ನನ್ನದಿಲ್ಲದಿದ್ದರೂ ಅಕ್ಕನವರ ಕಾಲಿಗಾದರೂ ತರಚುವುದಿತ್ತು. ಕಾಫಿ ಪುಡಿ ಹಾಕಿ ರಕ್ತ ಹರಿಯುವುದು ನಿಲ್ಲಿಸಿದರೆ ಒಂದೆರಡು ದಿನ ಬಟ್ಟೆ ಕಟ್ಟಿ ಕುಂಟುತ್ತ ನಡೆಯುವುದು. ಮತ್ತೆ ಗಾಯ ವಾಸಿ ಆಗಿ ಕಲೆ ಮಾಯುವುದರೊಳಗಾಗಿ ಹೊಸ ಗಾಯ ಸೃಷ್ಟಿಯಾಗಿ ಬಿಡುತ್ತಿತ್ತು. ಮಳೆಗಾಲವಾದರೆ ಚಪ್ಪಲಿ ಇಲ್ಲದ ರಸ್ತೆ ಇಕ್ಕೆಲಗಳ ಕೆಸರು ನೀರಿಗೆ ಕಾಲು ಹಾಕುತ್ತಾ ಬರುತ್ತಿದ್ದೆವು. ಅದರಿಂದಾಗಿ ಬೆರಳುಗಳ ಸಂಧುಗಳಲ್ಲಿ ತುರಿಕೆ ಪ್ರಾರಂಭವಾಗಿ ಬಿಡುತ್ತಿತ್ತು. ಸಾಲದ್ದಕ್ಕೆ ಉಗುರು ಸುತ್ತು. ಆಗ ಮನೆಗೆ ಚಪ್ಪಲಿ ಇದ್ದಿದ್ದು ಅಬ್ಬನಿಗೆ ಮಾತ್ರ. ಬಾಟ ಕಂಪೆನಿಯ ಗಟ್ಟಿ ರಬ್ಬರಿನ ಅಪ್ಪನ ಚಪ್ಪಲಿ. ಅದು ಹೊಸತಾಗಿ ತಂದ ದಿನ ಅದರ ಪರಿಮಳ ಅಘ್ರಾಣಿಸುವುದರಲ್ಲಿ ಖುಷಿಯೇ ಬೇರೆ. ನಮಗೂ ಸ್ವಂತದ್ದೇ ಚಪ್ಪಲಿ ಇಲ್ಲವೇ ಇಲ್ಲ ಎಂದಲ್ಲ. ಅದು ಬಳಸುತ್ತಿದ್ದುದು ಯಾವುದಾದರೆ ಸಭೆ ಸಮಾರಂಭಕ್ಕಾಗಿ ಮಾತ್ರ. ಚಪ್ಪಲಿ ಕಳೆದು ಹೋಗುವ ಹೆದರಿಕೆ ಇದ್ದುದರಿಂದಲೇ ಉಮ್ಮ ಹಾಕಲು ಕೊಡುತ್ತಿರಲಿಲ್ಲ. ಆಗ ನಮ್ಮೂರಲ್ಲೊಬ್ಬರು ಉಸ್ಮಾನ್ ಬ್ಯಾರಿ ಎನ್ನುವವರಿದ್ದರು. ಪಕ್ಕಾ ಹವಾಯಿ ಚಪ್ಪಲಿಯ ನಮ್ಮೂರ ಬ್ರಾಂಡ್ ಅಂಬಾಸಿಡರ್. ಅವರು ನಡೆಯುವ ಹೊತ್ತಿಗೆ ಹೊರಡಿಸುವ ಪುಟು ಪುಟು ಶಬ್ಧವೆಂದರೆ ನಮಗೆ ಉನ್ಮಾದ. ನನಗೂ ಹಾಗೆಯೇ ಸದ್ದು ಹೊರಡಿಸ ಬೇಕೆಂಬ ಉಮೇದು. ಹಾಗೂ ಹೀಗೂ ಒಂದು ದಿನ ಅಬ್ಬ ಹವಾಯಿ ಚಪ್ಪಲಿ ತಂದುಕೊಟ್ಟರು. ಅದನ್ನು ಹಾಕಿ ಹಿಂಗಾಲಿಗೆ ಟಪ್ಪನೆ ಬಡಿಯುವಂತೆ ನಡೆಯುವಾಗ ಉಂಟಾಗುವ ಪುಟು ಪುಟು ಶಬ್ಧವನ್ನು ಶಾಲೆಗೆ ಹೋಗುವ ದಾರಿಯಲ್ಲಿ ಅಸ್ವಾದಿಸಿದ್ದು ಆಯಿತು. ಬರುವ ದಾರಿಯಲ್ಲೂ ಅದೇ ಚರ್ವಿತ ಚರ್ವಣ. ಆಗಲೇ ಸಣ್ಣ ಮಳೆಯೂ ಬೀಳುತ್ತಿದ್ದರಿಂದ ಒಂಥರಾ ಚಪ್ಪಲಿಯ ನಿನಾದಕ್ಕೆ ಹೊಸ ಹುರುಪೂ ಇತ್ತು. ಮನೆಗೆ ಬಂದು ಸೇರಿದೆ. ಅಮ್ಮನ ಕೈಗೆ ಬೆತ್ತ ಎಲ್ಲಿಂದ ಬತ್ತೋ ಗೊತ್ತಿಲ್ಲ. ರಪ ರಪನೆ ಬಾರಿಸತೊಡಗಿದರು. ಸಿಕ್ಕಿದ್ದಲ್ಲೆಲ್ಲಾ ಎಮ್ಮೆಯಂತೆ ಕೆಸರಲ್ಲಿ ಈಜಾಡಿಕೊಂಡು ಬಂದರೆ ಇಲ್ಲಿ ತೊಳೆದು ಕೊಡಲು ನಿನ್ನ ಹೆಂಡತಿ ಇದ್ದಾಳ ಎಂದು ಜೋರು ಮಾಡಿದರು. ನಾನು ನಾಲ್ಕು ಹೊಡೆತ ಬಿದ್ದ ನೋವಿನಲ್ಲೂ, ನನಗೆ ಹೆಂಡತಿ ಮಾಡಿದ ಅಪಮಾನದಿಂದಲೂ ಜೋರಾಗಿ ಅಳಹತ್ತಿದೆ. ಅಷ್ಟಕ್ಕೂ ಅಂಗಿ ಯಾಕೆ ತೊಳೆಯಬೇಕು. ಯಾವ ಕೆಸರಿಗೆ ನಾನಿಳಿದೆ ಎಂಬ ಅಚ್ಚರಿಯ ಪ್ರಶ್ನೆಗೆ ಉತ್ತರವೇ ಸಿಗಲಿಲ್ಲ. ಕೊನೆಗೂ ಅಳುತ್ತಾ ಬಚ್ಚಲು ಮನೆಗೆ ಹೋಗಿ ಅಂಗಿ ಬಿಚ್ಚುತ್ತೇನೆ. ಚಪ್ಪಲಿಯ ಪುಟು ಸದ್ದು ಮಾಡಲು ನಡೆದದ್ದು ಅಂಗಿಯ ಬೆನ್ನಿಗೆ ತುಂಬಾ ಕೆಸರ ರಂಗೋಲಿಯಾಗಿ ಬಿಟ್ಟಿತ್ತು.

ಒಮ್ಮೆ ಮಾವನ ಮಗನೊಬ್ಬನಿಗೆ ತಂದಿದ್ದ ಶೂ ಅನ್ನು ಅವನಿಗೆ ದೊಡ್ಡದಾಗುತ್ತದೆಯೆಂಬ ಕಾರಣಕ್ಕೆ ನನಗೆ ಕೊಟ್ಟಿದ್ದರು. ಅದು ನನಗೂ ಸಣ್ಣದಾಗಿ ಬಲತ್ಕಾರದಿಂದ ಕಾಲು ತುರುಕುವಂತಿತ್ತು. ಹೇಗೂ ಶೂ ಬಿಡಬಾರದೆಂಬ ಆಸೆಯಿಂದ ಕಾಲು ನೋಯಿಸಿಕೊಂಡೇ ಆ ಒಂದು ದಿನ ಹಾಕಿದರಿಂದಾಗಿಯೇ ನನ್ನ ಬೆರಳಿಗೆ ಉಗುರು ಸುತ್ತು ರೋಗ ಅಂಟಿಕೊಂಡು ಬಿಡ್ತು. ಈಗಲೂ ಮಳೆಗಾಲ ಬಂದಾಗ ಅದರ ನೆನಪೆಂಬಂತೆ ನೋವುಗಳು ಸಣ್ಣದಾಗಿ ಕಾಡುತ್ತಿರುತ್ತವೆ.

ಈ ಚಪ್ಪಲಿಗಳು ಮಾನವನ ಕಾಲಿಗೆ ಬರುವ ಹೊತ್ತಿಗೆ ಮನುಷ್ಯ ಸಾಮಾಜಿಕವಾಗಿ ವಿಕಾಸ ಹೊಂದುತ್ತಿದ್ದ. ಅಂತಹ ಪರಿಸರ ಪ್ರಜ್ಞೆ ಅವನಲ್ಲಿ ಮೂಡತೊಡಗಿದ್ದೇ ಮಹಾ ಅದ್ಭುತ. ಒಂದೊಮ್ಮೆ ಚಪ್ಪಲಿಯಿಲ್ಲದೆ ನಡೆಯುತ್ತಿದ್ದವನಿಗೆ ಯಾವುದಾದರೊಂದು ದಿನ ಕಾಲಿಗೆ ಮುಳ್ಳೊ, ಮತ್ತೊಂದೋ ತರಚಿರಬೇಕು. ಅಥವಾ ಗುಂಪಿನ ನಾಯಕನಾದವನು ಸಾಮಾನ್ಯರಂತೆ ಬರಿಗಾಲಲ್ಲಿ ನಡೆಯಬಾರದೆಂಬ ಹಮ್ಮು ಬಂದಿರಬೇಕು.ಅಲ್ಲಿಗೆ ಚಪ್ಪಲಿಯೆಂಬ ಕಾಲು ರಕ್ಷಕವೊಂದಕ್ಕೆ ನಂದಿಯಾಯಿತು.

ಇವುಗಳ ಇತಿಹಾಸ ಇಂತಿಷ್ಟಕ್ಕೇ ಪ್ರಾರಂಭವಾಯಿತೆಂಬುವುದು ಯಾರಿಗೂ ಕರಾರುವಕ್ಕಾಗಿ ಹೇಳಲು ಬರುವುದಿಲ್ಲ. ಈಜಿಪ್ಟಿನ ಪಿರಮಿಡ್‌ಗಳಲ್ಲಿ ಸಿಕ್ಕ ಫೆರೋಗಳ ಮಮ್ಮಿಗಳಲ್ಲಿ ವಿವಿಧ ವಿನ್ಯಾಸದ ಚರ್ಮದ ತೊಗಲಿನಿಂದ ಮಾಡಿದ ಅತ್ಯುನ್ನತ ಚಪ್ಪಲಿಗಳು ದೊರಕಿದ್ದವಂತೆ. ಕಾಲ ಪರಿಭ್ರಮಣೆಯ ತರುವಾಯ ವಿವಿಧ ವಸ್ತುಗಳು ಕಾಲು ರಕ್ಷಕವಾಗಿ ಬದಲಾದವು. ಮೊದ ಮೊದಲು ಮರಗಳ ಎಲೆಯಿಂದಲೋ, ಹಾಳೆ, ತೊಗಟೆಗಳಿಂದಲೋ ಚಪ್ಪಲಿ ಮಾಡಿರಬೇಕು. ಮುಂದೆ ಅವು ಚರ್ಮಗಳಿಂದ ನೇಯಲ್ಪಟ್ಟಿತು.ಯುದ್ಧ ಭೂಮಿಯಲ್ಲಿ ಧರಿಸಲು ಯೋಗ್ಯವಾದ ಚಪ್ಪಲಿಗಳು ಶೂಗಳಾಗಿ ಬದಲಾದವು.

ಇತಿಹಾಸದ ಕ್ರಿಸ್ತಪೂರ್ವ ಆರುನೂರು, ಏಳು ನೂರರ ಇಸವಿ ಗಳಲ್ಲಿ ಚಪ್ಪಲಿ ಹುಟ್ಟಿತೆಂದು ಹೇಳುತ್ತಿದೆಯಾದರೂ ಯಾವುದನ್ನೂ ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಮುಂದೆ ಹೊಸ ವಿನ್ಯಾಸದ ಚಪ್ಪಲಿಗಳು ಉದಯವಾದವು. ಮನುಷ್ಯನ ಮೂಲಭೂತ ವಸ್ತುವಾಗಿಯೂ ಪರಿಗಣಿಸಲ್ಪಿಟ್ಟಿತು. ಭಾರತದಲ್ಲಿ ಋಷಿಗಳು, ಸಾತ್ವಿಕರು ಮರಗಳಿಂದ ಮಾಡಲ್ಪಟ್ಟ ಚಪ್ಪಲಿಗಳನ್ನು ಬಳಸುತ್ತಿದ್ದರಂತೆ. ಹಲವಾರು ರಾಜರು, ಅವರ ಮನೆತನದ ಕುರುಹೆಂಬಂತೆ ಈಗಲೂ ಅಂತಹ ಚಪ್ಪಲಿಗಳನ್ನು ಸಂರಕ್ಷಿಸಿಡಲಾಗಿದೆ. ಸ್ವಾರಸ್ಯಕರವೆಂದರೆ 1950 ರ ಫುಟ್ಬಾಲ್ ವಿಶ್ವ ಕಪ್‌ನಲ್ಲಿ ಭಾರತ ತಂಡ ಅತ್ಯುತ್ತಮ ಫಾರ್ಮಿನಲ್ಲಿದ್ದರೂ ಭಾಗವಹಿಸಲಿಲ್ಲ. ಕಾರಣ, ಆಟಗಾರರಿಗೆ ಶೂ ಹಾಕಿ ಆಡಲಿಳಿಯಲಿಲ್ಲವಂತೆ. (ಬಹುಶಃ ತುಟ್ಟಿಯಾದ ಕಾರಣಕ್ಕೋ, ವಿದೇಶಿ ವಸ್ತುವಿನ ವಿರೋಧದ ಹೋರಾಟವಿರಲೂಬಹುದು).

ಚಪ್ಪಲಿಗಳು ಎಷ್ಟೊಂದು ಬದಲಾಗಿ ಹೋದವು. ಇತ್ತೀಚೆಗೆ ಪಾದ ರಕ್ಷೆಗಳು ವಿವಿಧ ಬ್ರಾಂಡ್‌ಗಳಾಗಿ ಗುರ್ತಿಸಲ್ಪಡುತ್ತಿದೆ. ಕಾಲಿಗೆ ಹಾಕುವ ಸಮಾನ್ಯ ಚಪ್ಪಲಿಗಳ ವಿನ್ಯಾಸದಲ್ಲಿದ್ದರೂ ನೈಕ್, ಕ್ರಾಕ್ಸ್, ಸ್ಕೆಚ್ಚರ್ಸ್ ಎನ್ನುವ ಒಂದು ಸಹಿಗಾಗಿ ತಡಕಾಡುವಲ್ಲಿಗೆ ನಾವು ತಲುಪಿದ್ದೇವೆ. ಬದಲಾಗಿ ಅದಕ್ಕೆ ಸಾವಿರಗಟ್ಟಲೆ ಬೆಲೆ ಕೊಡಲು ತಯಾರಿದ್ದೇವೆ.ಅಷ್ಟೂ ಸಾಕಾಗದೆ ಚಪ್ಪಲಿಗಳ ಬೆಲೆ 5 ಸಾವಿರಕ್ಕೂ ಮಿಕ್ಕುವಂಥವುಗಳೇ ನಮ್ಮನ್ನು ಆಕರ್ಷಿಸಿ ಬಿಡುತ್ತದೆ. ಲಕ್ಷ ಕೊಟ್ಟರೂ ಚಪ್ಪಲಿಯನ್ನು ಹೊತ್ತು ನಡೆಯಬಹುದೇ. ಹಣ ಎಷ್ಟೇ ಹಾಕಿದರೂ ಕಾಲಿಗೆ ತೊಡುವುದು ಮುಡಿಗೇರಿಸಲಾದೀತೇ. ನಮ್ಮಲ್ಲಿ ಚೆರ್ಪುರೆ ಮೋನು (ಚಪ್ಪಲಿಯ ಮಗ) ಎಂಬ ಬೈಗುಳವಿದೆ. ಚಪ್ಪಲಿಯೆಂದರೆ ಅಷ್ಟೂ ನಿಕೃಷ್ಟವಾಗಿ ಅದಕ್ಕಿಂತಲೂ ಕಡೆಯೆಂಬ ಮರ್ಜಿಯಲ್ಲಿ ಈ ಬೈಗುಳ

ಪ್ರತೀತಿಯಲ್ಲಿದೆ. ಈಗ ಬೆಲೆ ಬಾಳುವ ಚಪ್ಪಲಿ ಬಂದ ಬಳಿಕ ಆ ಬೈಗುಳವೂ ನಾಮಾವಶೇಷವಾಗಬಹುದು, ಯಾರು ಬಲ್ಲವರು.

ಈಗ ಪ್ರಾರ್ಥನೆಗೆ ನಿಂತವನಿಗೂ ಭಕ್ತಿಗಿಂತ ಹೊರಗೆ ಬಿಟ್ಟ ಚಪ್ಪಲಿಯ ಮೇಲೆ ಆಸ್ಥೆ. ಇತ್ತೀಚೆಗೆ ನಾನೊಂದು ಚಪ್ಪಲಿಯನ್ನು ಕೊಂಡೆ. ಎತ್ತ ಹೋದರೂ ಅಂಥವೇ ಬ್ರಾಂಡಿನ ಸುಮಾರು ಚಪ್ಪಲಿಗಳು. ಸಮಾನ್ಯವಾಗಿ ಗುರುವಾರ ಚೆನ್ನಾಗಿ ಚಪ್ಪಲಿ ತೊಳೆದಿಟ್ಟು ನಾನು ಶುಕ್ರವಾರ ದ ಪ್ರಾರ್ಥನೆಗೆ ಕೊಂಡು ಹೋಗುವುದುಂಟು. ಪ್ರಾರ್ಥನೆ ಮುಗಿದು ಬರುವಾಗ ನನ್ನ ಚಪ್ಪಲಿ ಬದಲಾಯಿತು. ಒಂದೇ ತಿಂಗಳಲ್ಲಿ ನಾಲ್ಕು ಬಾರಿ ಪುನರಾವರ್ತನೆಯಾಯಿತು. ಅದೇ ಬಣ್ಣದ ಚಪ್ಪಲಿ ಬದಲಾಗಿದ್ದು ಹೇಗೆ ನನಗೆ ಕರಾರುವಕ್ಕಾಗಿ ತಿಳಿಯಿತೆಂದು ನೀವು ಹುಬ್ಬೇರಿಸಬಹುದು. ಹಿಂದಿನ ದಿನ ರಾತ್ರಿ ತಿಕ್ಕಿ ತೊಳೆದಿಟ್ಟ ಚಪ್ಪಲಿ ಒಂದು ಪ್ರಾರ್ಥನೆ ಮುಗಿಸಿ ಬರುವುದರೊಳಗಾಗಿ ಕೊಳೆ ತುಂಬಿ ಕಪ್ಪಾಗಾಗುವುದೆಂದರೆ ಯಾರಿಗೆ ತಾನೇ ಸಂಶಯ ಬಾರದಿರುತ್ತದೆ. ನಾಲ್ಕು ವಾರವೂ ಸಿಕ್ಕ ಚಪ್ಪಲಿಯನ್ನು ಶುಭ್ರವಾಗಿ ತೊಳೆದಿಟ್ಟು ಇತರರ ಕಾಲಿಗೇರಿಸಿದೆ. ಕೊನೆಗೆ ಸಾಕಾಗಿ ಈ ಚಪ್ಪಲಿಯ ಸಹವಾಸವೇ ಬೇಡವೆಂದು ಹಳೆಯ ಮಾಡೆಲ್ ಹವಾಯಿ ಖರೀದಿಸಲು ತೀರ್ಮಾನಿಸಿದೆ. ಈ ಬ್ರಾಂಡಿಂಗ್ ಔಟ್ ಲೆಟ್ನಲ್ಲಿ ಆ ಚಪ್ಪಲಿಗಳೇ ಅಂತರ್ಧಾನವಾಗಿದೆ. ಹುಡುಕಿಕೊಂಡು ಹೊರಟು ಹಳೆಯ ಚಮ್ಮಾರನ ಅಂಗಡಿಗೆ ಹೋದರೆ ಅವನ ಶಟರ್ ಎಳೆದಿತ್ತು. ವಿಚಾರಿಸಿದಾಗ ಮಳೆ ಬಂದ ನಂತರ ಅವರು ಈ ಕಡೆ ಬರ್ಲೇ ಇಲ್ಲಾ ಸರ್ ಅನ್ನುತ್ತಾ ಹತ್ತಿರದ ಅಂಗಡಿಯವನೊಬ್ಬ ಸಬೂಬು ಹೇಳಿದ. ಚರ್ಮ ಕುಠೀರ ಎಂದು ಬರೆದಿದ್ದ ಅಂಗಡಿಯ ಬೋರ್ಡು ಅದಾಗಲೇ ತಲೆ ಕೆಳಗಾಗಿ ಬಿದ್ದಿತ್ತು. ಬಾನು ಕಪ್ಪಿಟ್ಟು ಮಹಾ ಮಳೆಯೊಂದರ ಮುನ್ಸೂಚನೆ ನೀಡುತ್ತಾ ಬೆದರಿಕೆಯೊಡ್ಡುತ್ತಿತ್ತು. ಛತ್ರಿ ಇಲ್ಲದೆ ಮಳೆಯನ್ನು ಆಸ್ವಾದಿಸುವುದು ಅಭ್ಯಾಸವಾಗಿದ್ದರಿಂದ ಹಾಗೆಯೇ ಆಕಾಶ ನೋಡುತ್ತಾ ಹೊರಟು ಬಂದೆ. ಕೆಸರ ದಾರಿಯಲ್ಲಿ ಕಾಲೊಮ್ಮೆ ಜಾರಿತು. ಮಳೆ ಮತ್ತು ಹವಾಯಿ ಚಪ್ಪಲಿಯ ನೆನಪುಗಳು ಮಳೆ ಹನಿಯೊಂದಿಗೆ ಪುಂಖಾನು ಪುಂಖವಾಗಿ ಉದುರಲಾರಂಭಿಸಿದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)