varthabharthi

ವಿಶೇಷ-ವರದಿಗಳು

“ಅಮಾಯಕರನ್ನು ಜೈಲಿನಲ್ಲೇಕೆ ಇರಿಸಬೇಕು?”

370 ವಿಧಿ ರದ್ದು: ಗೃಹಬಂಧನದಲ್ಲಿರುವ ಮುಸ್ಲಿಂ ಗೆಳೆಯನ ಭೇಟಿಗೆ ಓಡೋಡಿ ಬಂದ ವಿಹಿಂಪ ನಾಯಕ!

ವಾರ್ತಾ ಭಾರತಿ : 25 Aug, 2019

ಕಾಶ್ಮೀರ ಪಟ್ಟಣದಲ್ಲಿರುವ ಸರಕಾರಿ ಗೆಸ್ಟ್ ಹೌಸ್ ಹೊರಗಡೆ ಅಮೃತಸರ ವಿಶ್ವ ಹಿಂದೂ ಪರಿಷತ್ ನಾಯಕ ರಾಕೇಶ್ ಖನ್ನಾ ನಿಂತಿದ್ದಾರೆ. ಅತ್ತಿತ್ತ ನಡೆದಾಡುವ ಅವರು ಕಟ್ಟಡದ ಒಳ ಪ್ರವೇಶಿಸಲು ಗೇಟ್ ತೆರೆಯುವಂತೆ ಭದ್ರತಾ ಸಿಬ್ಬಂದಿಯ ಜೊತೆ ಮನವಿ ಮಾಡುತ್ತಿದ್ದಾರೆ. ಕಾರಣ ಈ ಗೆಸ್ಟ್ ಹೌಸ್ ನೊಳಗೆ ಅವರ ಆಪ್ತಮಿತ್ರ ಐಜಾಝ್ ಅಹ್ಮದ್ ಸೋಫಿಯವರನ್ನು ಗೃಹಬಂಧನದಲ್ಲಿರಿಸಲಾಗಿದೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ ಮೊದಲು ಅಂದರೆ ಆಗಸ್ಟ್ 4ರ ರಾತ್ರಿಯಿಂದ ಪ್ರತ್ಯೇಕತಾವಾದಿಗಳು, ಪ್ರಮುಖ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ವ್ಯಾಪಾರಿ ಅಸೋಸಿಯೇಶನ್ ನಾಯಕರು ಸೇರಿ ನೂರಾರು ಜನರನ್ನು ವಶಕ್ಕೆ ಪಡೆಯಲಾಗಿದೆ. ಹಂದ್ವಾರ ಮಾರ್ಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿರುವ ಐಜಾಝ್ ರನ್ನೂ ವಶಕ್ಕೆ ಪಡೆಯಲಾಗಿದೆ.

“ಐಜಾಝ್ ನನ್ನ 29 ವರ್ಷಗಳ ಗೆಳೆಯ ಮತ್ತು ಕುಟುಂಬದ ಸದಸ್ಯನಂತೆ” ಎಂದು ಗೆಸ್ಟ್ ಹೌಸ್ ಗೇಟ್ ಹೊರಗೆ ನಿಂತಿರುವ ಅಮೃತಸರ ಮಾರ್ಕೆಟ್ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷ ಮತ್ತು 370ನೆ ವಿಧಿ ರದ್ದತಿಗೆ ಒತ್ತಾಯಿಸುತ್ತಿದ್ದ ಸಂಘಟನೆಯೊಂದರ ಸದಸ್ಯರಾಗಿರುವ ಖನ್ನಾ ಹೇಳುತ್ತಾರೆ.

ತನ್ನ ತಂದೆಯ ಕಾಲದಿಂದಲೂ ಖನ್ನಾ ಅವರಿಗೆ ಕಾಶ್ಮೀರದೊಂದಿಗೆ ವ್ಯಾಪಾರ ಸಂಬಂಧವಿದೆ. ಆರೆಸ್ಸೆಸ್ ಶಾಖೆ ಸದಸ್ಯರಾಗಿರುವ ಅವರು ಲೋಕಸಭಾ ಚುನಾವಣೆಯ ಸಂದರ್ಭ ಬಿಜೆಪಿ ಪರ ಪ್ರಚಾರದಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. “ಎಲ್ಲವೂ ಸರಿಯಾಗಿ ನಡೆಯುತ್ತಿತ್ತು. ನನ್ನ ಉದ್ಯಮದ ಕಾರಣ ನಾನು ಶ್ರೀನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಹಲವು ತಿಂಗಳುಗಳ ಕಾಲ ವಾಸಿಸಿದ್ದೆ. ಎಲ್ಲವೂ ಶಾಂತರೀತಿಯಲ್ಲಿತ್ತು. ಪ್ರವಾಸಿಗರು ಬರುತ್ತಿದ್ದರು. ಈಗ ಎಲ್ಲವೂ ಹಾಳಾಗಿದೆ” ಎಂದವರು ಹೇಳುತ್ತಾರೆ.

“ನಾನು 370 ವಿಧಿ ರದ್ದತಿ ಪರ ಇದ್ದೇನೆ. ಆದರೆ ಇದು ಸರಿಯಾದ ದಾರಿಯಲ್ಲ. ಅವರು ಇತರ ಪ್ರಮುಖ ವ್ಯಕ್ತಿಗಳನ್ನು ತಲುಪಲು ಪ್ರಯತ್ನಿಸಬೇಕಿತ್ತು. ಪ್ರಮುಖ ರಾಜಕೀಯ ನಾಯಕರ ಹೊರತಾಗಿಯೂ ಇಲ್ಲಿ ಹಲವು ನಾಯಕರಿದ್ದಾರೆ. ಈಗ ಅವರು ಎಲ್ಲರನ್ನೂ ಬಂಧಿಸಿದ್ದಾರೆ. ದೇಶವನ್ನು ಉತ್ತಮಗೊಳಿಸಬೇಕು. ಅದಕ್ಕೆ ನನ್ನ ಬೆಂಬಲವಿದೆ. ಆದರೆ ಅಮಾಯಕರನ್ನು ಜೈಲಿನಲ್ಲೇಕೆ ಇರಿಸಬೇಕು?, ಫೋನ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇಲ್ಲಿನ ಎಲ್ಲ  ಮಾರುಕಟ್ಟೆಗಳೂ ಬಂದ್ ಆಗಿವೆ. ಜನರು ಸಂಕಷ್ಟದಲ್ಲಿದ್ದಾರೆ. ಅಮರನಾಥ ಯಾತ್ರಾರ್ಥಿಗಳನ್ನೂ ವಾಪಸ್ ಕಳುಹಿಸಲಾಗಿದೆ” ಎಂದು ಅವರು ವಿವರಿಸುತ್ತಾರೆ.

ಐಜಾಝ್ ರ ಪತ್ನಿ ರುಖಿಯಾ ಸಹಾಯ ಯಾಚಿಸಿದ ಕಾರಣ ಖನ್ನಾ ಶ್ರೀನಗರಕ್ಕೆ ಆಗಮಿಸಿದ್ದರು. ಐಜಾಝ್ ರ ಪುತ್ರ ಐಎಎಸ್ ಪರೀಕ್ಷೆ ಬರೆಯುವುದಕ್ಕಾಗಿ ದಿಲ್ಲಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಬ್ಬರು ಪುತ್ರಿಯರು ಶ್ರೀನಗರದಲ್ಲಿ ಶಿಕ್ಷಣ ಪಡೆಯುತ್ತಿದ್ದು, ಖನ್ನಾರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದಾರೆ.

“ಆತ ನನ್ನ ಗೆಳೆಯ. ಆತ ನನ್ನ ಸಹೋದರನಂತೆ. ಆತ ಸಾಮಾಜಿಕ ಕಾರ್ಯಕರ್ತ. ಅವರ ಪತ್ನಿ ಅನಾರೋಗ್ಯದಿಂದಿದ್ದಾರೆ. ಮಕ್ಕಳು ಅಳುತ್ತಿದ್ದಾರೆ. ಅಮಾಯಕ ವ್ಯಕ್ತಿಯೊಬ್ಬರಿಗೆ ಹೀಗೇಕೆ ಮಾಡುತ್ತಿದ್ದೀರಿ. ಅವರ ತಪ್ಪೇನು? ಆತ ಇದುವರೆಗೂ ಯಾರನ್ನೂ ನೋಯಿಸಿಲ್ಲ” ಎಂದು ಖನ್ನಾ ಭದ್ರತಾ ಸಿಬ್ಬಂದಿಗೆ ವಿವರಿಸುತ್ತಾರೆ.

ಕೃಪೆ: indianexpress.com, ನಿರುಪಮಾ ಸುಬ್ರಮಣಿಯನ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)