varthabharthi

ವಿಶೇಷ-ವರದಿಗಳು

5ಜಿ ತಂತ್ರಜ್ಞಾನ ಆರೋಗ್ಯಕ್ಕೆ ಅಪಾಯಕಾರಿಯೇ ?

ವಾರ್ತಾ ಭಾರತಿ : 25 Aug, 2019

2ಜಿ,3ಜಿ ಅಂತರ್ಜಾಲ ತಂತ್ರಜ್ಞಾನಗಳೆಲ್ಲ ಹಳೆಯದಾಗಿ ನಾವೀಗ 4ಜಿ ಯುಗದಲ್ಲಿದ್ದೇವೆ. ಮುಂದಿನ ವರ್ಷ ಭಾರತದಲ್ಲಿ 5ಜಿ ತಂತ್ರಜ್ಞಾನ ಬರುವ ನಿರೀಕ್ಷೆಯಿದ್ದು,4ಜಿ ಕೂಡ ಹಳೆಯದಾಗಲಿದೆ. 5ಜಿ ತಂತ್ರಜ್ಞಾನವೀಗ ಕ್ರಮೇಣ ವಿಶ್ವಾದ್ಯಂತ ಹರಡತೊಡಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ವೀಡಿಯೊ ಸ್ಟ್ರೀಮಿಂಗ್ ಮತ್ತು ಆನ್‌ಲೈನ್ ಗೇಮಿಂಗ್ ಬಳಕೆಯು ಹೆಚ್ಚುತ್ತಿರುವುದರಿಂದ 4ಜಿ ಅಂತರ್ಜಾಲ ವೇಗವೀಗ ಸಾಲುತ್ತಿಲ್ಲ. ತನ್ಮಧ್ಯೆ ಅಂತರ್ಜಾಲ ವೇಗವನ್ನು ಇನ್ನಷ್ಟು ಹೆಚ್ಚಿಸುವ 5ಜಿ ತಂತ್ರಜ್ಞಾನದ ಬಗ್ಗೆ ಮೊಬೈಲ್ ಕಂಪನಿಗಳು ಮತ್ತು ಬಳಕೆದಾರರಲ್ಲಿ ಹೆಚ್ಚಿನ ಉತ್ಸಾಹವಿದೆ,ಆದರೆ ಆರೋಗ್ಯ ತಜ್ಞರು ಮಾತ್ರ ಈ ಬಗ್ಗೆ ಕೊಂಚ ಚಿಂತಿತರಾಗಿರುವಂತಿದೆ.

5ಜಿ ಅಂದರೆ ಐದನೇ ಪೀಳಿಗೆಯ ತಂತ್ರಜ್ಞಾನವು ಮೊಬೈಲ್ ತಂತ್ರಜ್ಞಾನವನ್ನು ಹೆಚ್ಚಿಸುವ ಜೊತೆಗೆ ವೇಗದ ಇಂಟರ್ನೆಟ್ ಬ್ರೌಸಿಂಗ್‌ನ್ನು ಸಾಧ್ಯವಾಗಿಸುತ್ತದೆ. ಹೆಚ್ಚಿನ ವೇಗದಲ್ಲಿ ಡೌನ್‌ಲೋಡ್ ಮಾಡಬಹುದು ಮತ್ತು ಸಂಪರ್ಕವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ ಎನ್ನಲಾಗಿದೆ.

ಆದರೆ ಈ ತಂತ್ರಜ್ಞಾನವು ಹರಡುವ ವಿದ್ಯುತ್ಕಾಂತೀಯ ವಿಕಿರಣ ಮತ್ತು ನಮ್ಮ ಆರೋಗ್ಯದ ಮೇಲೆ ಅದರ ಪರಿಣಾಮದ ಕುರಿತು ಕೆಲವು ವಿಜ್ಞಾನಿಗಳು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಫೋನ್ ಸಿಗ್ನಲ್‌ಗಳನ್ನೇಕೆ ಅಪಾಯಕಾರಿಯೆಂದು ಪರಿಗಣಿಸಲಾಗಿದೆ ?

ಮೊಬೈಲ್ ಗೋಪುರಗಳು ವಿಕಿರಣವನ್ನು ಹರಡುತ್ತವೆ ಎಂದು ನೀವು ಆಗಾಗ್ಗೆ ಕೇಳುತ್ತಿರುತ್ತೀರಿ. ಆದರೆ ವಿಕಿರಣ ಎಂದರೇನು ಎನ್ನುವುದು ನಿಮಗೆ ಗೊತ್ತೇ ? ವಿಕಿರಣವು ಯಾವುದೇ ಮೂಲದಿಂದ ಹೊರಹೊಮ್ಮುವ ಶಕ್ತಿಯಾಗಿದೆ. ನಮ್ಮ ಶರೀರದಿಂದ ನಿರಂತರವಾಗಿ ಬಿಡುಗಡೆಗೊಳ್ಳುವ ಉಷ್ಣತೆಯು ಕೂಡ ವಿಕಿರಣವೇ ಆಗಿದೆ. ಆದರೆ ಕೆಲವು ವಿಕರಣಗಳು ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುವಂತಹ ಆರೋಗ್ಯಕ್ಕೆ ಹಾನಿಕಾರಕ ಗುಣಗಳನ್ನು ಹೊಂದಿವೆ.

ವಿಕಿರಣಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವಿಕೆ

 3ಜಿ ಮತ್ತು 4ಜಿ ಮೊಬೈಲ್ ಫೋನ್‌ಗಳಿಂದ ಹೊರಹೊಮ್ಮುವ ವಿಕಿರಣವು ಕಡಿಮೆ ಆವರ್ತನ ಮತ್ತು ತರಂಗಾಂತರ ವನ್ನು ಹೊಂದಿವೆ. ಈ ವಿಕಿರಣವು ಮಾನವರ ಡಿಎನ್‌ಎಗಳಿಗೆ ಹಾನಿಯನ್ನುಂಟು ಮಾಡುವಷ್ಟು ಶಕ್ತಿಯುತವಾಗಿಲ್ಲ. ಇದೇ ವೇಳೆ,5ಜಿ ತಂತ್ರಜ್ಞಾನವು ನಮ್ಮ ಡಿಎನ್‌ಎಗೆ ನೇರವಾಗಿ ಹಾನಿಯನ್ನುಂಟು ಮಾಡುವುದಿಲ್ಲ,ಆದರೆ ಇತರ ಕೆಲವು ಜೈವಿಕ ಕ್ರಿಯೆಗಳ ಮೂಲಕ ಹಾನಿಯನ್ನುಂಟು ಮಾಡುತ್ತದೆ ಎಂದು ಕೆಲವು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ 5ಜಿ ವಿಕಿರಣಕ್ಕೆ ನಿರಂತರವಾಗಿ ಒಡ್ಡಿಕೊಂಡಿರುವುದು ಶರೀರದಲ್ಲಿ ಆಕ್ಸಿಡೇಟಿವ್ ಸ್ಟ್ರೆಸ್ ಅಥವಾ ಉತ್ಕರ್ಷಕ ಒತ್ತಡ ಹೆಚ್ಚಾಗಲು ಕಾರಣವಾಗಬಲ್ಲದು ಮತ್ತು ಇದು ಉರಿಯೂತ ಮತ್ತು ಕ್ಯಾನ್ಸರ್,ಮಧುಮೇಹ,ಹೃದಯನಾಳೀಯ ರೋಗಗಳು ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನುಂಟು ಮಾಡುತ್ತದೆ.

ವಿದ್ಯುತ್ಕಾಂತೀಯ ವಿಕಿರಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ

  ವಿದ್ಯುತ್ಕಾಂತೀಯ ರೇಡಿಯೊ ತರಂಗಗಳ ಕಂಪನಾಂಕವನ್ನು ರೇಡಿಯೊ ಫ್ರೀಕ್ವೆನ್ಸಿಯ ಮೂಲಕ ಅಳೆಯಲಾಗುತ್ತದೆ ಮತ್ತು ಇದನ್ನು ಸಂಕ್ಷಿಪ್ತವಾಗಿ ಆರ್‌ಎಫ್-ಇಎಂಎಫ್ ಎಂದು ಕರೆಯಲಾಗುತ್ತದೆ. 2011ರಲ್ಲಿ ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡವೊಂದು ಇಂತಹ ಎಷ್ಟು ರೇಡಿಯೊ ಫ್ರೀಕ್ವೆನ್ಸಿಗಳ ಪ್ರಮಾಣವು ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಕಂಡುಕೊಳ್ಳಲು ಪ್ರಯತ್ನಿಸಿತ್ತು. ಅದರ ಅಧ್ಯಯನ ವರದಿಯು ದಿ ಲ್ಯಾನ್ಸೆಟ್ ಅಂಕಾಲಜಿ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ. ಆರ್‌ಎಫ್-ಇಎಂಎಫ್‌ಗಳಿಗೆ ನಿರಂತರ ಒಡ್ಡುವಿಕೆಯು ‘ಗಿಲೋಮಾ’ ಎಂದು ಕರೆಯಲಾಗುವ,ಕೇಂದ್ರ ನರಮಂಡಳ ವ್ಯವಸ್ಥೆಯ ನಿರ್ದಿಷ್ಟ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಂಡವು ತನ್ನ ಅಧ್ಯಯನದಲ್ಲಿ ಕಂಡುಕೊಂಡಿತ್ತು. ಜೊತೆಗೆ ಅದು ವಾಕ್-ಶ್ರವಣಕ್ಕೆ ಸಂಬಂಧಿಸಿದ ಅಕೌಸ್ಟಿಕ್ ನ್ಯುರೋಮಾದ ಅಪಾಯವನ್ನು ಹೆಚ್ಚಿಸಬಹುದೆಂದು ಇತರ ಅಧ್ಯಯನಗಳು ಸೂಚಿಸಿವೆ.

ಡಬ್ಲ್ಯುಎಚ್ಒ ಏನೆನ್ನುತ್ತದೆ ?

ಯಾವುದೇ ವ್ಯಕ್ತಿಯು ರೇಡಿಯೊಫ್ರೀಕ್ವೆನ್ಸಿಗೆ ಒಡ್ಡಿಕೊಳ್ಳುವುದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಈವರೆಗೆ ಬೆಳಕಿಗೆ ಬಂದಿಲ್ಲ. ಆದರೆ ವಿಜ್ಞಾನಿಗಳು ಈ ಬಗ್ಗೆ ನಿರಂತವಾಗಿ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯು ಹೇಳಿದೆ.

ಒಟ್ಟಾರೆಯಾಗಿ,ಸಾಕಷ್ಟು ಸಂಶೋಧನೆಯ ಅನುಪಸ್ಥಿತಿಯಲ್ಲಿ 5ಜಿ ತಂತ್ರಜ್ಞಾನವು ಮಾನವರ ಆರೋಗ್ಯದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಹೇಳುವುದು ಕಷ್ಟ. ಆದರೆ ವಿಕಿರಣಕ್ಕೆ ಎಷ್ಟು ಕಡಿಮೆ ಒಡ್ಡಿಕೊಳ್ಳುತ್ತೇವೆಯೋ ಅಷ್ಟು ಆರೋಗ್ಯಕ್ಕೆ ಒಳ್ಳೆಯದುಎನ್ನುವುದು ವಿಜ್ಞಾನಿಗಳ ಒಕ್ಕೊರಳಿನ ಅಭಿಪ್ರಾಯವಾಗಿದೆ. ಹೀಗಾಗಿ ಮಲಗುವ ವೇಳೆ ಮೊಬೈಲ್‌ನ್ನು ಸ್ವಿಚ್ ಆಫ್ ಮಾಡುವುದು ಮತ್ತು ಅಗತ್ಯವಿಲ್ಲದಿದ್ದಾಗ ಮೊಬೈಲ್ ಡಾಟಾವನ್ನು ನಿಷ್ಕ್ರಿಯಗೊಳಿಸುವುದು ಆರೋಗ್ಯದ ದೃಷ್ಟಿಯಿಂದ ಅಪೇಕ್ಷಣೀಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)