varthabharthi


ಓ ಮೆಣಸೇ

ಓ ಮೆಣಸೇ..!

ವಾರ್ತಾ ಭಾರತಿ : 26 Aug, 2019
ಪಿ.ಎ.ರೈ,

ಫೋನ್ ಕದ್ದಾಲಿಸುವವರೂ ಒಂದು ರೀತಿಯ ಭಯೋತ್ಪಾದಕರು - ಎಚ್.ವಿಶ್ವನಾಥ್, ಅನರ್ಹ ಶಾಸಕ

► ಭಯ ಪಡುವಂತಹದೇನನ್ನು ಫೋನಲ್ಲಿ ಮಾತನಾಡಿದ್ದೀರಿ?

---------------------

ಮೋದಿ ಪ್ರಧಾನಿಯಾಗುತ್ತಿದ್ದಂತೆ ಓಲೈಕೆ ರಾಜಕಾರಣ ಕೊನೆಗೊಂಡಿದೆ - ಅಮಿತ್ ಶಾ, ಕೇಂದ್ರ ಸಚಿವ

► ತಮ್ಮದು ಮೋದಿಯ ಓಲೈಕೆಯೇ ಅಲ್ಲವೇ?

---------------------

ಜವಾಹರಲಾಲ್ ನೆಹರೂ ವಿವಿ (ಜೆಎನ್‌ಯು) ಹೆಸರನ್ನು ಬದಲಿಸಿ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರಿಡಿ - ಹನ್ಸ್‌ರಾಜ್‌ಹನ್ಸ್, ಸಂಸದ

► ಸಂವಿಧಾನವನ್ನೇ ಬದಲಿಸ ಹೊರಟವರಿಗೆ ಇದೇನು ಮಹಾ?

---------------------

ಸ್ವಾತಂತ್ರ ದಿನಾಚರಣೆಯಂದು ಪ್ರಧಾನಿ ಮೋದಿ ಮಾಡಿದ ಭಾಷಣ ಅತ್ಯಂತ ಎದೆಗಾರಿಕೆಯಿಂದ ಕೂಡಿದೆ - ಶತ್ರುಘ್ನ ಸಿನ್ಹಾ, ಕಾಂಗ್ರೆಸ್ ನಾಯಕ

► ತಮ್ಮ ಎದೆಗಾರಿಕೆ ಕುಸಿದಿರುವ ಕಾರಣದಿಂದ ಹಾಗೆ ಕಂಡಿರಬೇಕು.

---------------------

ಅಧಿಕಾರ ಹೋದ ಮೇಲೆ ನಾಲಗೆಗೂ ಮೆದುಳಿಗೂ ಸಂಪರ್ಕ ಕಳೆದುಕೊಂ ಕಾಂಗ್ರೆಸ್‌ಗೆ ಮತಿಭ್ರಮಣೆಯಾಗಿದೆ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

► ತಮ್ಮ ಪಕ್ಷ ಅಧಿಕಾರ ಗಳಿಸಿದ ಮೇಲೆ ದೇಶದ ಅರ್ಥವ್ಯವಸ್ಥೆ ಯಾಕೆ ಮತಿ ಭ್ರಮಣೆಯಾದಂತೆ ವರ್ತಿಸುತ್ತಿದೆ?

---------------------

ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಶಾಪವಾಗಿ, ಪುಣ್ಯವರವಾಗಿ ಈ ಜನ್ಮದಲ್ಲಿ ಮರುಕಳಿಸುತ್ತದೆ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

► ಜಾತೀಯತೆಯ ಪಾಪ ಮುಂದಿನ ಜನ್ಮದಲ್ಲಿ ಏನಾಗಿ ಮರುಕಳಿಸುತ್ತದೆ?

---------------------

ಹಿಂದಿನ ಸರಕಾರದಲ್ಲಿ ಕಳ್ಳರು, ಸುಳ್ಳರು ಸೇರಿಕೊಂಡು ಫೋನ್ ಕದ್ದಾಲಿಸಿದ್ದಾರೆ - ಶ್ರೀರಾಮುಲು, ಶಾಸಕ

► ಕಳ್ಳರು, ಸುಳ್ಳರ ಫೋನನ್ನಷ್ಟೇ ಆಲಿಸಿದ್ದೇವೆ ಎನ್ನುವುದು ಅವರ ಸಮರ್ಥನೆ.

---------------------

ದಲಿತರು ಮುಖ್ಯಮಂತ್ರಿಯಾಗದಿರಲು ಒಗ್ಗಟ್ಟಿಲ್ಲದಿರುವುದೇ ಕಾರಣ - ಡಾ.ಎಲ್.ಹನುಮಂತಯ್ಯ, ಸಾಹಿತಿ

► ಸದ್ಯದ ಸ್ಥಿತಿಯಲ್ಲಿ ದಲಿತರು ಶಾಸಕರಾಗುವುದೇ ಕಷ್ಟ.

---------------------

ಫೋನ್ ಕದ್ದಾಲಿಕೆ ಪ್ರಕರಣವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ನೇತೃತ್ವದ ತನಿಖೆಗೂ ಸಿದ್ಧ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

► ಟ್ರಂಪ್ ಫೋನ್‌ನ್ನೂ ಕದ್ದಾಲಿಸಿದ್ದೀರಾ?

---------------------

ನನಗೆ ಮೂರು ಬಾರಿ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಆದರೆ ರಾಜಕೀಯ ಪ್ರಹಸನದಿಂದ ಕೈತಪ್ಪಿ ಹೋಯಿತು -ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ

► ಬಿಜೆಪಿ ಸೇರಿ ಮತ್ತೊಮ್ಮೆ ಯಾಕೆ ಅದೃಷ್ಟ ಪರೀಕ್ಷೆ ಮಾಡಬಾರದು?

---------------------

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಬಂದಿದೆ - ದೇವೇಗೌಡ, ಮಾಜಿ ಪ್ರಧಾನಿ

► ಅದಕ್ಕೆಲ್ಲಾ ಸಿದ್ದರಾಮಯ್ಯ ಅವರೇ ಕಾರಣ ಎಂಬುದು ನಿಮ್ಮ ಆರೋಪವೇ?

---------------------

ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು 56 ಇಂಚು ಎದೆಯ ನಮ್ಮ ಪ್ರಧಾನಿ ತೋರಿಸಿಕೊಟ್ಟಿದ್ದಾರೆ - ರಾಜನಾಥ್‌ಸಿಂಗ್, ಕೇಂದ್ರ ಸಚಿವ

► ಆ ನಿರ್ಧಾರಗಳ ಪರಿಣಾಮಗಳನ್ನು ಈಗ ದೇಶ ಅನುಭವಿಸುತ್ತಿದೆ.

---------------------

ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

► ದೇಶದಲ್ಲಿ ಇದೆ ಎನ್ನುವುದು ನಿಮ್ಮ ನಂಬಿಕೆಯೇ?

---------------------

ನಾನು ಯಾವುದೇ ಸಮಾಜದ್ರೋಹ, ದೇಶ ದ್ರೋಹದ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ - ಶೋಭಾ ಕರಂದ್ಲಾಜೆ, ಸಂಸದೆ

► ಯಾವುದಾದರೂ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸೋಣವೇ?

---------------------

ಈ ವರ್ಷದ ದೀಪಾವಳಿಗೆ ಮೊದಲು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಿಸಲಾಗುವುದು - ನಳಿನ್‌ಕುಮಾರ್ ಕಟೀಲು, ಸಂಸದ

► ಅಂದ ಹಾಗೆ ಡಾಲರ್ ಮುಂದೆ ರೂಪಾಯಿ ಎಲ್ಲಿಗೆ ಬಂತು?

---------------------

ದೇವೇಗೌಡರ ಮಕ್ಕಳು ಯಾವುದೇ ತನಿಖೆಗೂ ಹೆದರುವವರಲ್ಲ - ಎಚ್.ಡಿ.ರೇವಣ್ಣ, ಮಾಜಿ ಸಚಿವ

► ಮೂರೂ ಬಿಟ್ಟವರು ಎಂಬರ್ಥದಲ್ಲಿಯೇ?

---------------------

ನಾನು ರಾಮನ ಬಂಟನಂತೆ ಯಡಿಯೂರಪ್ಪರ ಜೊತೆಗೇ ಇರುತ್ತೇನೆ - ರೇಣುಕಾಚಾರ್ಯ, ಶಾಸಕ

► ಲಿಂಬಾವಳಿ ನಿಮ್ಮನ್ನು ಸವತಿಯಂತೆ ನೋಡುತ್ತಿದ್ದಾರೆ.

---------------------

ನನ್ನ ನಡೆ ಮನೆಯ ಕಡೆ - ಉಮೇಶ್ ಕತ್ತಿ, ಶಾಸಕ

► ಬಗಲಲ್ಲಿರುವ ಕತ್ತಿಯನ್ನು ಇನ್ನಾದರೂ ಬದಿಗಿಡಬಾರದೇ?

---------------------

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಮಂಗಳೂರು ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಓಡಾಡಿರುವುದನ್ನು ನಾನು ನೋಡಿಯೇ ಇಲ್ಲ -ಬಸನಗೌಡ ಪಾಟೀಲ್, ಶಾಸಕ

► ಅವರು ಮಂಗಳೂರು ರಾಜ್ಯದ ಬಿಜೆಪಿ ಅಧ್ಯಕ್ಷರು.

---------------------

ಮೈಸೂರಿನ ಅತೃಪ್ತ ಪ್ರೇತಾತ್ಮ ( ಎಚ್.ವಿಶ್ವನಾಥ್)ಕ್ಕೆ ಸಚಿವ ಸ್ಥಾನ ನೀಡಲು ಅರ್ಹರನ್ನು ಕಡೆಗಣಿಸಲಾಗಿದೆ - ಸಾ.ರಾ.ಮಹೇಶ್, ಮಾಜಿ ಸಚಿವ

► ಬಿಜೆಪಿಯೊಳಗೂ ಅರ್ಹರಿದ್ದಾರೆ ಎಂದು ನೀವು ಒಪ್ಪಿಕೊಂಡಂತಾಯಿತು ಬಿಡಿ.

---------------------

ಇತರ ಪಕ್ಷಗಳಿಂದ ಬಂದವರನ್ನೆಲ್ಲ ಅವರ ಪೂರ್ವಾಪರ ಪರಿಶೀಲಿಸದೆ ಬಿಜೆಪಿಗೆ ಸೇರಿಸಿಕೊಳ್ಳಬೇಡಿ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ

► ಅಂದರೆ ಬ್ಯಾಂಕ್ ಬ್ಯಾಲೆನ್ಸ್ ನೋಡಿಯೇ ಸೇರಿಸಿ ಎಂಬ ಸಂದೇಶ.

---------------------

ಆರ್ಥಿಕ ಹಿಂಜರಿತ ಎಲ್ಲಾ ದೇಶಗಳಲ್ಲೂ ಇದೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

► ಆದರೆ ಆ ದೇಶದಲ್ಲಿ ಪುಣ್ಯಕ್ಕೆ ಮೋದಿಯಂತಹ ಪ್ರಧಾನಿ ಇಲ್ಲ.

---------------------

ಮುಖ್ಯಮಂತ್ರಿಯಾಗಿ ನಂತರ ಸಚಿವನಾಗಿದ್ದಕ್ಕೆ ಬೇಸರವಿಲ್ಲ - ಜಗದೀಶ್‌ಶೆಟ್ಟರ್, ಸಚಿವ

► ಬೇಸರವಿರುವುದು ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಿರುವುದಕ್ಕಾಗಿ ಇರಬಹುದು.

---------------------

ಸ್ವಾಭಿಮಾನ ಇಲ್ಲದ ವ್ಯಕ್ತಿ ಜೀವಂತ ಶವ ಇದ್ದಂತೆ - ಶ್ರೀನಿವಾಸಪ್ರಸಾದ್, ಸಂಸದ

► ಸ್ವಾಭಿಮಾನ ಬಿಟ್ಟು ಬಿಜೆಪಿ ಸೇರಿದವರ ಅನುಭವದ ಮಾತು.

---------------------

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು