varthabharthi

ಸಂಪಾದಕೀಯ

ಒಂದೇ ತಿಂಗಳಲ್ಲಿ ಕರಗಿದ ರೇಷ್ಮೆ ಬಟ್ಟೆಯ ಬಣ್ಣ

ವಾರ್ತಾ ಭಾರತಿ : 27 Aug, 2019

ಕಳೆದ ಜುಲೈಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಮೊತ್ತ ಮೊದಲ ಬಾರಿಗೆ ಭಾರತೀಯ ಸಂಸ್ಕೃತಿಯ ಮಾದರಿಯನ್ನು ಅನುಸರಿಸಿದರು. ಅಂದರೆ ಬಜೆಟ್ ಮಂಡನೆಯ ಸಂದರ್ಭದಲ್ಲಿ ಈ ಹಿಂದಿನ ವಿತ್ತ ಸಚಿವರು ಸೂಟ್‌ಕೇಸ್ ಜೊತೆಗೆ ಸಂಸತ್ತಿಗೆ ಆಗಮಿಸುತ್ತಿದ್ದರೆ, ನಿರ್ಮಲಾ ಸೀತಾರಾಮನ್ ರೇಷ್ಮೆ ಬಟ್ಟೆಯಲ್ಲಿ ಬಜೆಟ್ ಪ್ರತಿಗಳನ್ನು ತುಂಬಿಕೊಂಡು ಬಂದರು. ಅರ್ಥಶಾಸ್ತ್ರಕ್ಕೆ ಸೀತಾರಾಮನ್ ಅವರ ರೇಷ್ಮೆ ಬಟ್ಟೆ ಅರ್ಥವಾದಂತೆ ಕಾಣುತ್ತಿಲ್ಲ. ದೇಶಾದ್ಯಂತ ಉದ್ಯಮಿಗಳು ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಬಂಡೇಳುತ್ತಿದ್ದಂತೆಯೇ, ಇದೀಗ ತಾನೇ ಮಂಡಿಸಿದ ಬಜೆಟನ್ನು ಪರಿಷ್ಕರಿಸುವ ಸ್ಥಿತಿಗೆ ಬಂದು ನಿಂತಿದ್ದಾರೆ. ಬಹುಶಃ ಇಂದು ಮೋದಿ ನೇತೃತ್ವದ ಸರಕಾರ 'ಸಂಸ್ಕೃತಿ' ಎಂಬ ರೇಷ್ಮೆ ಬಟ್ಟೆಯೊಳಗೆ ಮುಚ್ಚಿಟ್ಟು ಜನವಿರೋಧಿ ನೀತಿಗಳನ್ನು ಒಂದೊಂದಾಗಿ ಜಾರಿಗೆ ತರುತ್ತಿದೆ. ಆದರೆ ವಿತ್ತಸಚಿವರ ರೇಷ್ಮೆ ಬಟ್ಟೆಯ ಅಸಲಿಯತ್ತು ಇದೀಗ ಬಹಿರಂಗವಾಗಿದೆ. ಒಂದು ದೃಷ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಹಾಗೂ ಅವರ ಉನ್ನತ ಸಲಹೆಗಾರರು, ನೀತಿಯನ್ನು ರೂಪಿಸುವಲ್ಲಿ, ತೆರಿಗೆ ದರಗಳನ್ನು ವಿಧಿಸುವಲ್ಲಿ, ಸರಕಾರದ ವೆಚ್ಚ ಯೋಜನೆಗಳು, ರಾಜ್ಯಗಳಿಗೆ ಅನುದಾನ ನೀಡಿಕೆ ಹಾಗೂ ಏಳು ವಾರಗಳ ಹಿಂದೆ ಸಾಗರೋತ್ತರ ಮತ್ತು ದೇಶೀಯ ವಿತ್ತೀಯ ಕೊರತೆಯನ್ನು ಲೆಕ್ಕ ಹಾಕುವಲ್ಲಿ ಗಂಭೀರವಾದ ತಪ್ಪುಗಳನ್ನು ಎಸಗಿದ್ದರು. ಆದರೆ ಈ ಪ್ರಮಾದಗಳು ತ್ವರಿತವಾಗಿ ಬೆಳಕಿಗೆ ಬಂದವು. ಇದರಿಂದಾಗಿ ನಿರ್ವಾಹವಿಲ್ಲದೆ ನಿರ್ಮಲಾ ಸೀತಾರಾಮನ್ ಜುಲೈ ತಿಂಗಳಲ್ಲಿ ತಾನು ಮಂಡಿಸಿದ್ದ ಬಜೆಟ್‌ನಲ್ಲಿ ಘೋಷಿಸಿದ್ದ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಬಿಡಬೇಕಾಗಿ ಬಂದಿದೆ. ಈ ಕಾರಣದಿಂದಲೇ ಅವರು ಆಗಸ್ಟ್ 23ರಂದು ಅನಧಿಕೃತವಾಗಿ ಮತ್ತೊಮ್ಮೆ ಬಜೆಟ್ ಮಂಡಿಸಬೇಕಾಗಿ ಬಂತು. ಬಜೆಟ್‌ನಲ್ಲಿ ಬಯಲಾದ ತನ್ನ ವೈಫಲ್ಯವನ್ನು ಮರೆಮಾಚುವುದಕ್ಕಾಗಿ, ನಿರ್ಮಲಾ ಸೀತಾರಾಮನ್ ಆರ್ಥಿಕ ಹಿಂಜರಿತದ ಹೊಡೆತ ತಿಂದಿರುವ ಭಾರತೀಯರ ಗಾಯಕ್ಕೆ ಮುಲಾಮು ಸವರಲು ಯತ್ನಿಸಿದ್ದಾರೆ.ವಿದೇಶಿ ಹೂಡಿಕೆದಾರರ ಮೇಲೆ ಹೆಚ್ಚುವರಿ ಶುಲ್ಕ ಹೇರಿಕೆ, ಸ್ಟಾರ್ಟ್‌ಆಪ್ ಉದ್ಯಮಿ ಗಳಿಗೆ ಏಂಜೆಲ್‌ಟ್ಯಾಕ್ಸ್ ಸೇರಿದಂತೆ ಬಜೆಟ್‌ನಲ್ಲಿ ಘೋಷಿಸಿದ್ದ ಹಲವಾರು ನಿರ್ಧಾರಗಳನ್ನು ಅವರು ಹಿಂಪಡೆದುಕೊಂಡಿದ್ದಾರೆ. ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಒದಗಿಸುವ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಘೋಷಿಸಿದ್ದಾರೆ. ಪ್ರಸಕ್ತ ದೇಶದ ಆರ್ಥಿಕತೆ ಕಳವಳಕಾರಿ ಸ್ಥಿತಿಯಲ್ಲಿದೆ. ಕಳೆದ 10 ತಿಂಗಳುಗಳಿಂದ ಪ್ರಯಾಣಿಕ ಕಾರುಗಳ ಮಾರಾಟವು ಕುಸಿತವನ್ನು ಕಂಡಿದೆ ಹಾಗೂ ಕಳೆದ ವರ್ಷದ ಜುಲೈನಲ್ಲಿ ಇದ್ದುದಕ್ಕಿಂತ ಶೇ.31ರಷ್ಟು ಇಳಿಕೆಯಾಗಿದೆ. ಸುಮಾರು 2 ಲಕ್ಷ ವಾಹನಗಳಷ್ಟೇ ಮಾರುಕಟ್ಟೆಗೆ ಪ್ರವೇಶಿಸಿದ್ದು, ಇದು ಕಳೆದ 19 ವರ್ಷಗಳಲ್ಲಿ ಯೇ ಅತಿ ಕನಿಷ್ಠವಾದದು.ಕಾರುಗಳ ಮಾರಾಟ ಕುಂಠಿತಗೊಂಡಿರುವ ಬಗ್ಗೆ ಯಾರೂ ತಲೆಕೆಡಿಸಿ ಕೊಳ್ಳಬೇಕಾದ ಅಗತ್ಯವಿರಲಿಲ್ಲ್ಲ. ಆದರೆ ಕಾರು ತಯಾರಿಕೆ ಹಾಗೂ ಮಾರಾಟ ವಲಯದಲ್ಲಿನ 3.50 ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿರುವುದು ಎಲ್ಲೆಡೆ ಕಳವಳ ವ್ಯಕ್ತವಾಗಿದೆ. ಈ ಮಧ್ಯೆ ಜಾಗತಿಕ ಮಟ್ಟದ ಕಾರು ಉತ್ಪಾದಕರಾದ ಟೊಯೊಟಾ ಹಾಗೂ ಹುಂಡೈ ಕೂಡಾ ತಮ್ಮಲ್ಲಿ ಮಾರಾಟವಾಗದೆ ಉಳಿದಿರುವ ಉತ್ಪನ್ನಗಳನ್ನು ಖಾಲಿ ಮಾಡುವ ಉದ್ದೇಶದಿಂದ ಕಾರುಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

ನೂತನ ಕಾರುಗಳ ನೋಂದಣಿ ಶುಲ್ಕದಲ್ಲಿ ಏರಿಕೆ ಮಾಡುವ ತನ್ನ ನಿರ್ಧಾರವನ್ನು ಒಂದು ವರ್ಷದ ಮಟ್ಟಿಗೆ ಮುಂದೂಡುವ ಹಾಗೂ ಸರಕಾರಿ ಇಲಾಖೆಗಳು ಹಳೆಯ ವಾಹನಗಳ ಜಾಗದಲ್ಲಿ ಹೊಸ ವಾಹನಗಳನ್ನು ಖರೀದಿಸುವ, ರಸ್ತೆಯಲ್ಲಿ ಸಾಂಪ್ರದಾಯಿಕ ಹಾಗೂ ಇಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಸಮಾನವಾದ ಉತ್ತೇಜನ, ವಾಹನಹೊಗೆ ಮಾಲಿನ್ಯ ತಡೆಗೆ ಇರುವ ಕಠಿಣ ನಿಯಮಗಳ ಸಡಿಲಿಕೆ ಇತ್ಯಾದಿ ಗಳನ್ನು ಕನಿಷ್ಠ ಒಂದು ವರ್ಷದ ಮಟ್ಟಿಗೆ ಮಂದೂಡುವ ನಿರ್ಧಾರಗಳನ್ನು ಪ್ರಕಟಿಸುವ ಮೂಲಕ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ತನ್ನಿಂದಾದ ಪ್ರಮಾದಗಳನ್ನು ಖುದ್ದಾಗಿ ಒಪ್ಪಿಕೊಂಡಂತಾಗಿದೆ.

ನಿರ್ಮಲಾ ಅವರ ಕ್ರಮಗಳು, ಆರ್ಥಿಕತೆಗೆ ತನ್ನಿಂದಾಗಿ ಆರ್ಥಿಕ ವಲಯದಲ್ಲಿ ಉಂಟಾಗಿರುವ ಹಾನಿಯನ್ನು ಸರಿಪಡಿಸುವ ಹತಾಶ ಪ್ರಯತ್ನವಾಗಿದೆ. ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರಕ್ಕೆ, ಸರಕಾರಿ ಬಾಂಡ್‌ಗಳಿಗೆ ವ್ಯಾಪಕವಾದ ಮಾರುಕಟ್ಟೆಯನ್ನು ಸೃಷ್ಟಿಸಬಹುದಾಗಿತ್ತು. ಆದರೆ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಅರ್ಥವತ್ತಾದ ಸುಧಾರಣೆಗಳನ್ನು ಕೈಗೊಳ್ಳುವ ಬದಲು, ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ, ಪ್ರತಿಪಕ್ಷ ನಾಯಕರು ಹಾಗೂ ಬೆಂಬಲಿಗರ ಮೇಲೆ ಆದಾಯ ತೆರಿಗೆ ದಾಳಿಗಳನ್ನು ನಡೆಸುವ ಹಾಗೂ ಹಿಂದುತ್ವವಾದಿ ಅಜೆಂಡಾಗಳನ್ನು ಜಾರಿಗೊಳಿಸುವುದರಲ್ಲೇ ಹೆಚ್ಚು ಮಗ್ನವಾಗಿತ್ತು.

ಈಗ ಐಎಲ್‌ಆ್ಯಂಡ್‌ಎಫ್‌ಎಸ್ ಹಾಗೂ ಡಿಎಚ್‌ಎಫ್‌ಎಲ್ ಸೇರಿದಂತೆ ಸರಕಾರಿ ಸ್ವಾಮ್ಯದ ಹಾಗೂ ಖಾಸಗಿ ಒಡೆತನದ ಬಹುತೇಕ ಬ್ಯಾಂಕುಗಳು ಪತನಗೊಂಡಿವೆ. ಆದರೆ ಸೀತಾರಾಮನ್ ಆ ಬಗ್ಗೆ ಚಿಂತಿಸುತ್ತಿಲ್ಲ. ಅವರು ಜರ್ಜರಿತವಾಗಿರುವ ಬ್ಯಾಂಕಿಂಗ್ ವ್ಯವಸ್ಥೆಗೆ ಜೀವ ತುಂಬಲು 70 ಸಾವಿರ ಕೋಟಿ ರೂ. ನೆರವು ಪ್ಯಾಕೇಜ್ ಘೋಷಿಸಿ, ಕೈತೊಳೆದುಕೊಂಡಿದ್ದಾರೆ.
      
ಈ ಮಧ್ಯೆ ನಿರ್ಮಲಾ ಸೀತಾರಾಮನ್, ಕಂಗಾಲಾಗಿರುವ ಕಟ್ಟಡ ನಿರ್ಮಾಣ ವಲಯಕ್ಕೆ ಪುನಶ್ಚೇತನ ನೀಡುವ ಪ್ರಯತ್ನವಾಗಿ, ಅಡಮಾನದರಗಳನ್ನು ಕಡಿಮೆಗೊಳಿಸುವಂತೆ ಬ್ಯಾಂಕ್‌ಗಳಿಗೆ ಕಠಿಣವಾದ ಎಚ್ಚರಿಕೆಯನ್ನು ನೀಡಿದ್ದಾರೆ. ಅವರ ಸಲಹೆಯನ್ನು ಬ್ಯಾಂಕ್‌ಗಳು ಒಪ್ಪಿಕೊಂಡಲ್ಲಿ ಗೃಹಸಾಲದ ಬಡ್ಡಿದರಗಳು 0.5 ಶೇಕಡಕ್ಕೆ ಇಳಿಯಲಿದೆ. ಉದಾಹರಣೆಗೆ 40 ಲಕ್ಷ ರೂ. ಮೊತ್ತದ ಸಾಲಕ್ಕೆ, ನೀವು ಮಾಸಿಕವಾಗಿ 34,400ಗಳ ಬದಲಾಗಿ 33,200 ರೂ. ಇಎಂಐ ಪಾವತಿಸಬೇಕಾಗುತ್ತದೆ. ಇಷ್ಟು ಸಿಕ್ಕಿದ್ದೇ ಪುಣ್ಯವೆಂದು ಭಾವಿಸಿ ಯಾರಾದರೂ ವಸತಿಗಳನ್ನು ಖರೀದಿಸಲು ಧಾವಿಸಿದಲ್ಲಿ ಅವರು ಒಂದು ಅಂಶವನ್ನು ಮನಗಾಣಬೇಕಾಗಿದೆ. ವಸತಿಗಳನ್ನು ಪೂರೈಕೆ ಮಾಡುವುದಾಗಿ ಕಳೆದ ಹತ್ತು ವರ್ಷಗಳ ಹಿಂದೆಯೇ ಭರವಸೆ ನೀಡಿದ್ದ ಬಹುತೇಕ ಬಿಲ್ಡರ್‌ಗಳು ಹಾಗೂ ಡೆವಲಪರ್‌ಗಳು ತಮ್ಮ ಗ್ರಾಹಕರಿಗೆ ಇನ್ನೂ ಮನೆಗಳನ್ನು ಒದಗಿಸಿಲ್ಲ. ನಿರ್ಮಲಾ ಸೀತಾರಾಮನ್ ಅವರ ಘೋಷಣೆ ಖಂಡಿತವಾಗಿಯೂ ಭಾರತದ ಆರ್ಥಿಕತೆಯನ್ನು ಮೇಲೆತ್ತಲು ಶಕ್ತವಾಗಿಲ್ಲ. ತನ್ನ ಬಜೆಟ್ ಪ್ರಮಾದಗಳನ್ನು ಸರಿಪಡಿಸಲು ನಿರ್ಮಲಾ ಇನ್ನಷ್ಟು ಪ್ರಯತ್ನಿಸುವ ಅಗತ್ಯವಿದೆ. ಬಹುಶಃ ಡಿಸೆಂಬರ್‌ನಲ್ಲಿ ಅವರು ರೋಗಗ್ರಸ್ತ ಆರ್ಥಿಕತೆಗೆ ಚೇತರಿಕೆ ನೀಡಲು ಬೇರೊಂದು ಯೋಜನೆಗಳನ್ನು ಪ್ರಕಟಿಸಲೂ ಬಹುದು. ಒಂದು ವೇಳೆ ದೇಶದ ಆರ್ಥಿಕತೆಗೆ ಆದ ಹಾನಿಗೆ ಹೊಣೆಗಾರಿಕೆ ಹೊರಬೇಕಾದ ನಿಯಮ ಇದ್ದಲ್ಲಿ, ವಿತ್ತ ಸಚಿವೆಯಾದ ನಿರ್ಮಲಾ ಸೀತಾರಾಮನ್ ತನ್ನ ಹುದ್ದೆಗೆ ರಾಜೀನಾಮೆ ನೀಡಲೇಬೇಕಾಗಿದೆ. ಒಟ್ಟಿನಲ್ಲಿ ರೇಷ್ಮೆ ಬಟ್ಟೆಯಲ್ಲಿ ಏನನ್ನು ಕೊಟ್ಟರೂ ಸ್ವೀಕರಿಸಲು ಅರ್ಥಶಾಸ್ತ್ರವೆನ್ನುವುದು ಧರ್ಮಶಾಸ್ತ್ರವಲ್ಲ ಎನ್ನುವುದನ್ನು ಸೀತಾರಾಮನ್ ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)