varthabharthi

ನಿಮ್ಮ ಅಂಕಣ

ಖಾಸಗಿ ಕ್ಷೇತ್ರದ ಮೀಸಲಾತಿಯ ಬಗ್ಗೆ ಚರ್ಚೆಯಾಗಲಿ

ವಾರ್ತಾ ಭಾರತಿ : 27 Aug, 2019

ಹಾರೋಹಳ್ಳಿ ರವೀಂದ್ರ ಮೀಸಲಾತಿಯು ದೇಶದಲ್ಲಿ ಆಗಾಗ ಚರ್ಚೆಗೆ ಗುರಿಯಾಗುತ್ತಲೇ ಇದೆ. ಒಂದು ವರ್ಗ ಮೀಸಲಾತಿ ಬೇಡ ಎಂದರೆ ಮತ್ತೊಂದು ವರ್ಗ ಮೀಸಲಾತಿ ಬೇಕು ಎನ್ನುತ್ತದೆ. ಮೀಸಲಾತಿಯನ್ನು ಇಷ್ಟು ವರ್ಷಗಳು ಕೊಟ್ಟದ್ದಾಗಿದೆ ನಂತರದ ದಿನಗಳಲ್ಲಿ ಮೀಸಲಾತಿಯನ್ನು ಮುಂದುವರಿಸುವುದು ಬೇಡ ಎನ್ನುವವರಿಗೆ ಪ್ರಶ್ನೆ ಏನೆಂದರೆ, ಮೀಸಲಾತಿಯನ್ನು ಯಾವ ಮಾನದಂಡದಲ್ಲಿ ಮುಂದುವರಿಯುವುದು ಬೇಡ ಎನ್ನುತ್ತೀರಿ? ಭಾರತದಲ್ಲಿ ಮೀಸಲಾತಿಯು ನಿರ್ಲಕ್ಷ್ಯಕ್ಕೊಳಗಾದ ಶೋಷಿತ ಸಮುದಾಯವನ್ನು ತನ್ನ ತೋಳಿನಲ್ಲಿ ಇಟ್ಟುಕೊಂಡು ಮೇಲೆತ್ತಿದೆ. ಇಂದಿಗೂ ಎತ್ತುತ್ತಲೇ ಇದೆ. ಇಷ್ಟಕ್ಕೂ ಮೀಸಲಾತಿ ಎಂದರೇನು? ಅದರ ಹುಟ್ಟು, ಬೆಳವಣಿಗೆ ಹೇಗಾಗಿದೆ ಎಂಬುದನ್ನು ಮೊದಲು ಅರಿಯಬೇಕು. ಆದರೆ ಇಂದಿನ ಯುವ ಪೀಳಿಗೆ ಮೀಸಲಾತಿ ಹಾಗೂ ಅದರ ಹುಟ್ಟು ಬೆಳವಣಿಗೆಯ ಚರಿತ್ರೆಯನ್ನೇ ಅರಿಯದೆ ಅದನ್ನು ವಿರೋಧಿಸುವ ಮೂಲಕ ಸಾಮಾಜಿಕ ಹೊಣೆಯಿಂದ ದೂರನಿಂತಿವೆ. ಮೀಸಲಾತಿ ಎಂದರೆ ಡಾ.ಬಿ.ಆರ್.ಅಂಬೇಡ್ಕರ್ ವಾದದಲ್ಲಿ ಹೇಳುವುದಾದರೆ ಸಮಾನತೆಯ ಸಾಧನ. ಆದರೆ ಸಮಕಾಲೀನ ಸಮಾಜ ಅದನ್ನು ಬೇಜವಾಬ್ದಾರಿಯುತವಾಗಿ ಅರ್ಥೈಸಿಕೊಂಡಿದೆ. ಮೀಸಲಾತಿಯು ಮೊತ್ತ ಮೊದಲಿಗೆ ಪ್ರಾರಂಭವಾಗಿದ್ದು ಕ್ರಿ.ಪೂ. 185ರಲ್ಲಿ. ಅಂದು ಸುಮತಿಭಾರ್ಗವ ಮನುಸ್ಮತಿ ರಚಿಸುವ ಮೂಲಕ ಮೀಸಲಾತಿಯನ್ನು ಜಾರಿಗೆ ತರುತ್ತಾನೆ. ಬ್ರಾಹ್ಮಣ ವಿದ್ಯೆ, ಕ್ಷತ್ರಿಯ ಆಡಳಿತ, ವೈಶ್ಯ ಸಂಪತ್ತು, ಶೂದ್ರ ಇವರೆಲ್ಲರ ಸೇವಕ ಎಂದು ಇದೇ ಮನುಸ್ಮತಿಯನ್ನು ಇಟ್ಟುಕೊಂಡು ಪುಷ್ಯಮಿತ್ರ ಶುಂಗ ಎಂಬ ರಾಜ ಶಾಸನ ಮಾಡುತ್ತಾನೆ. ಅಂದಿನಿಂದಲೇ ಮೀಸಲಾತಿ ಪರಿಕಲ್ಪನೆ ಪ್ರಾರಂಭವಾಗಿದ್ದು. ಈ ಮೀಸಲಾತಿಯು ನಿರಂತರವಾಗಿ 20 ಶತಮಾನಗಳು ಚಾಲ್ತಿಯಲ್ಲಿರುತ್ತದೆ. 20 ಶತಮಾನಗಳು ಜಾರಿಯಲ್ಲಿದ್ದ ಮೀಸಲಾತಿಯಲ್ಲಿ ಹಿಂದುಳಿದ ವರ್ಗ, ಎಸ್ಸಿ/ಎಸ್ಟಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ಯಾರೂ ಕೂಡ ಫಲಾನುಭವಿಗಳಾಗಿರಲಿಲ್ಲ. ಎಲ್ಲವನ್ನೂ ಬ್ರಾಹ್ಮಣ ಸಮುದಾಯವೊಂದೇ ಆವರಿಸಿಕೊಂಡು 20 ಶತಮಾನಗಳ ಪರ್ಯಂತ ಮೀಸಲಾತಿಯನ್ನು ಅನುಭವಿಸಿದರು. ಡಾ. ಬಿ. ಆರ್. ಅಂಬೇಡ್ಕರ್ ರಚಿತ ಸಂವಿಧಾನ 1950ರಲ್ಲಿ ಜಾರಿಗೆ ಬಂದ ನಂತರ ಭಾರತ ಸರಕಾರ ಎಸ್ಸಿ-ಶೇ. 15, ಎಸ್ಟಿ- ಶೇ. 7.5, ಒಬಿಸಿ- ಶೇ. 27, ಇನ್ನುಳಿದ ಶೇ. 50.5 ಸಾಮಾನ್ಯರಿಗೆ ಎಂದು ನಿಗದಿಯಾಯಿತು. ಈ ಕಾನೂನು ಜಾರಿಯಾಗಿ 69 ವರ್ಷಗಳಿಗೇ ಮೀಸಲಾತಿ ಬೇಡ ಎಂದರೆ ಹೇಗೆ? 20 ಶತಮಾನ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಮೀಸಲಾತಿಯ ಫಲಾನುಭವಿಗಳಾಗಿದ್ದರು ಎಂಬ ಚರ್ಚೆ ಈವರೆಗೂ ಮುನ್ನೆಲೆಗೆ ಬಂದೇ ಇಲ್ಲ. ಆದರೆ 65 ವರ್ಷಕ್ಕೇ ದಲಿತರ ಮೀಸಲಾತಿ ತೆಗೆಯಬೇಕು, ಪರಿಷ್ಕರಣೆಯಾಗಬೇಕು ಎಂಬ ಅಂಶಗಳು ಚರ್ಚಾ ಮುನ್ನೆಲೆಯಾಗುತ್ತಿದೆ. 1992ರಲ್ಲಿ ಮಂಡಲ್ ಆಯೋಗ ಹಿಂದುಳಿದ ವರ್ಗಗಳಿಗೆ ಪಂಚಾಯತ್‌ನಲ್ಲಿ ರಾಜಕೀಯ ಮೀಸಲಾತಿ ಜಾರಿಗೊಳಿಸುವಾಗ ಕೂಡ ಇಂತದ್ದೇ ಬಿಕ್ಕಟ್ಟು ಎದುರಾಗಿತ್ತು. ದೇಶದಲ್ಲಿ ಶೋಷಿತ ಸಮುದಾಯಗಳನ್ನು ಕಾಪಾಡುತ್ತಿರುವುದು ಮೀಸಲಾತಿ ಒಂದೇ. ಅದನ್ನು ಕೀಳಲು ಹೊರಟು ಕೈ ಸುಟ್ಟಿಕೊಳ್ಳಬಾರದು ಎಂಬ ಕಾರಣಕ್ಕಾಗಿಯೇ ಸರಕಾರಗಳು ಎಲ್ಲವನ್ನೂ ಖಾಸಗೀಕರಣಗೊಳಿಸಲು ಮುಂದಾಗಿದ್ದು. ಆ ಮೂಲಕ ಮೀಸಲಾತಿಯನ್ನು ಕುಂದಿಸುವ ಕೆಲಸ ನಿರಂತರ ನಡೆಯುತ್ತಿದೆ. 1994ರ ಅವಧಿಯಲ್ಲಿ ಶೇ.1.53ರಷ್ಟಿದ್ದ ಸರಕಾರಿ ಕ್ಷೇತ್ರದ ಉದ್ಯೋಗ ದರವು 2010ಕ್ಕೆ 0.65ಕ್ಕೆ ಕುಸಿದಿದೆ. ಆದರೆ 1994ರಲ್ಲಿ ಶೇ.0.44ರಷ್ಟಿದ್ದ ಖಾಸಗಿ ಕ್ಷೇತ್ರದ ಉದ್ಯೋಗದ ದರವು 2010ರ ಹೊತ್ತಿಗೆ ಶೇ.1.75ರಷ್ಟು ಏರಿಕೆಯಾಗಿದೆ. ಅಂದರೆ ಖಾಸಗೀಕರಣದಿಂದ ದೇಶದಲ್ಲಿ ಶೋಷಿತ ಸಮುದಾಯದ ವಿದ್ಯಾವಂತರು ಉದ್ಯೋಗವಂಚಿತರಾಗುತ್ತಿದ್ದಾರೆ. ಹಾಗಾಗಿ ಈಗಿರುವ ಮೀಸಲಾತಿಯನ್ನು ಉಳಿಸಿಕೊಳ್ಳುವ ಮೂಲಕ ಖಾಸಗಿ ಕ್ಷೇತ್ರದಲ್ಲಿಮೀಸಲಾತಿ ಒತ್ತಾಯ ಚಳವಳಿ ಅನಿವಾರ್ಯವಾಗಿದೆ.

 ಆರೆಸ್ಸೆಸ್ ಬಿಜೆಪಿಯನ್ನು ಕಾಂಗ್ರೆಸ್‌ಗೆ ಪರ್ಯಾಯವಾಗಿ ಬೆಳೆಸಿದ್ದೇ ಮೀಸಲಾತಿಯನ್ನು ಅಳಿಸಬೇಕೆಂಬ ಏಕೈಕ ದೃಷ್ಟಿಯಿಂದ. ಬಿಜೆಪಿ ತನ್ನ ಆಂತರಿಕ ಪ್ರಣಾಳಿಕೆಯಲ್ಲಿ ಮೀಸಲಾತಿಯನ್ನು ಗುರಿಯಾಗಿಸಿಯೇ ಮಾತನಾಡುತ್ತಿತ್ತು. ಆದರೆ ಇಂದು ಅದನ್ನು ತೆಗೆಯುವುದೋ ಬೇಡವೊ? ಎಂಬ ಚರ್ಚೆಯನ್ನು ಹುಟ್ಟು ಹಾಕುವ ಮೂಲಕ ಜನಾಭಿಪ್ರಾಯಕ್ಕೆ ಕೈ ಹಾಕಿ ಜನರ ಮೂಲಕವೇ ಅದನ್ನು ವಿರೋಧಿಸುವ ತಂತ್ರಗಾರಿಕೆಯನ್ನು ಬಿಜೆಪಿ ಮಾಡುತ್ತಿದೆ.

ಭಾರತದಲ್ಲಿ ಬಹುಪಾಲು ಮೀಸಲಾತಿ ವಿರುದ್ಧ ಮಾತನಾಡುವವರು ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಇವರೆಲ್ಲ ಮೀಸಲಾತಿ ಎಂದರೇನು? ಎಂಬುದನ್ನು ಅರಿಯದ ಮುಗ್ಧರು. ಹಾಗಾಗಿಯೇ ಇಂತಹ ಮುಗ್ಧರನ್ನು ಉಪಯೋಗಿಸಿಕೊಂಡೇ ಆರೆಸ್ಸೆಸ್ ಎಂಬ ಸಂಘಟನೆ ಬೆಳೆದು ನಿಂತಿರುವುದು.

ಮೀಸಲಾತಿಯನ್ನು ಇಂದಿಗೂ ಕೂಡ ತೆಗೆಯಲು ಹೆಣಗಾಡುತ್ತಿರುವುದು ದಲಿತರ ವೋಟ್ ಬ್ಯಾಂಕ್ ರಾಜಕಾರಣದಿಂದ. ಮೀಸಲಾತಿಯ ಬುಡಕ್ಕೆ ಕೈ ಹಾಕಿದರೆ ಎಲ್ಲಿ ದಲಿತರ ಮತಗಳು ತಮ್ಮ ವಿರುದ್ಧ ಚಲಾವಣೆಯಾಗುತ್ತವೆಯೋ ಎಂಬ ಕಾರಣಕ್ಕೆ ಇಂದಿಗೂ ಅದರ ಸಂಪೂರ್ಣ ನಾಶಕ್ಕೆ ಕೈ ಹಾಕದೆ ಚರ್ಚೆ ಹುಟ್ಟು ಹಾಕುವ ಮೂಲಕ ಮೀಸಲಾತಿ ವಿರೋಧಿ ಆಂದೋಲನ ಸೃಷ್ಟಿಸುತ್ತಿದ್ದಾರೆ. ಮೋಹನ್ ಭಾಗವತ್ ಅವರು 2015ರಲ್ಲಿ ಮೀಸಲಾತಿ ಪರಿಷ್ಕರಣೆಯಾಗಬೇಕೆಂದು ಹೇಳಿದ್ದರು. ಆದರೆ ಇಂದು ಮೀಸಲಾತಿ ಚರ್ಚೆಯಾಗಬೇಕು ಎನ್ನುತ್ತಿದ್ದಾರೆ. ಆದರೆ ಯಾವ ರೀತಿ ಪರಿಷ್ಕರಣೆಯಾಗಬೇಕು? ಯಾವ ಮಾನದಂಡದಲ್ಲಿ ಪರಿಷ್ಕರಣೆಯಾಗಬೇಕು. ಯಾವ ರೀತಿಯ ಚರ್ಚೆ ಆಗಬೇಕು ಎಂಬುದಕ್ಕೆ ಅವರಲ್ಲಿ ಉತ್ತರವಿಲ್ಲ. ಡಾ. ಬಿ. ಆರ್. ಅಂಬೇಡ್ಕರ್ ಅವರು ಮೀಸಲಾತಿಯನ್ನು ಹತ್ತು ವರ್ಷಕ್ಕೆ ಸೀಮಿತಗೊಳಿಸಿದ್ದರು ಎಂಬ ಹುಸಿಯನ್ನು ಎಲ್ಲೆಡೆ ನಯವಾಗಿ ಹರಡುವುದನ್ನು ಇವರು ಕಲಿತುಕೊಂಡಿದ್ದಾರೆ. ಅಂಬೇಡ್ಕರ್ ಅವರು ಹತ್ತು ವರ್ಷಕ್ಕೆ ಸೀಮಿತಗೊಳಿಸಿದ್ದು ರಾಜಕೀಯ ಮೀಸಲಾತಿಯನ್ನೇ ಹೊರತು, ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯನ್ನಲ್ಲ. ಮೋಹನ್ ಭಾಗವತ್ ಅವರಿಗೆ ಹೇಳಬಯಸುವುದೇನೆಂದರೆ ದೇಶದ ಸಂಪತ್ತನ್ನು ಸಮಾನವಾಗಿ ಹಂಚಿ, ಮಠ ಮಂದಿರಗಳನ್ನು ರಾಷ್ಟ್ರೀಕರಣಗೊಳಿಸಿ, ಖಾಸಗಿ ಕಂಪೆನಿಗಳನ್ನು ರಾಷ್ಟ್ರೀಕರಣಗೊಳಿಸಿ, ಭೂಮಿಯನ್ನು ಪ್ರತಿಕುಟುಂಬಕ್ಕೂ ವಿಭಾಗಿಸಿ. ಆನಂತರ ಮೀಸಲಾತಿಯನ್ನು ಬೇಕೋ ಅಥವಾ ಬೇಡವೋ ಎಂಬುದನ್ನು ಚರ್ಚಿಸೋಣಸಂವಿಧಾನೋತ್ತರ ಭಾರತದಲ್ಲಿ ದಮನಿತ ಜನಾಂಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಆ ಜನಾಂಗದ ಸಬಲೀಕರಣಕ್ಕೆ ಕಾರಣವಾಯಿತು. ಕಾಲಾನುಕಾಲ ಮೀಸಲಾತಿ ಕೇವಲ ದಲಿತರಿಗೆ ಅವರನ್ನು ಹೊರತುಪಡಿಸಿ ಇನ್ಯಾರಿಗೂ ಮೀಸಲಾತಿ ಇಲ್ಲ ಎನ್ನುವಂತೆ ಜನರನ್ನು ವಿಭಜಿಸುವ ಮತ್ತು ಒಂದು ಜಾತಿಯ ಮೇಲೆ ಮತ್ತೊಂದು ಜಾತಿಯನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಲೇ ಇದೆ. ರಾಜ್ಯದಲ್ಲಿ ಪಡೆದುಕೊಳ್ಳುತ್ತಿರುವ ಮೀಸಲಾತಿಯ ಹಂಚಿಕೆ ನೋಡೋಣ. cat-1ರಲ್ಲಿ ಬರುವ ಗೊಲ್ಲ, ಉಪ್ಪಾರ, ಪಿಂಜಾರ ಇತ್ಯಾದಿ 95 ಜಾತಿಗಳಿಗೆ ಇರುವುದು ಶೇ. 4, cat-2(acat)ನಲ್ಲಿ ಕುರುಬ, ಈಡಿಗ, ಮಡಿವಾಳ, ಕುಂಬಾರ, ವಿಶ್ವಕರ್ಮ, ಕ್ಷೌರಿಕ, ದೇವಾಂಗ, ತಿಗಳ, ಕ್ರೈಸ್ತರು(ಮತಾಂತರಿ) ಇತ್ಯಾದಿ 102 ಜಾತಿಗಳು ಸೇರಿ ಶೇ. 15, -2(bcat) ನಲ್ಲಿ ಮುಸ್ಲಿಂ ಮತ್ತು ಇತರ ಸಮಾನಂತರ ಜಾತಿಗಳು ಸೇರಿ ಶೇ. 4, -3(a cat)ನಲ್ಲಿ ಒಕ್ಕಲಿಗ, ರೆಡ್ಡಿ, ಬಂಟ, ಕೊಡವ ಇತ್ಯಾದಿ 12 ಜಾತಿಗಳು ಸೇರಿ ಶೇ.4, -3(b

)ನಲ್ಲಿ ಲಿಂಗಾಯತ ಮತ್ತು ಅದರ 42 ಜಾತಿಗಳು ಸೇರಿ ಶೇ. 5, ಎಸ್ಟಿಯಲ್ಲಿ ನಾಯಕ, ವಾಲ್ಮೀಕಿ, ಜೇನು ಕುರುಬ, ಕಾಡುಕುರುಬ, ಸೋಲಿಗ ಇತ್ಯಾದಿ 65 ಜಾತಿಗಳು ಸೇರಿ ಶೇ. 3, ಎಸ್ಸಿಯಲ್ಲಿ ಹೊಲೆಯ, ಮಾದಿಗ, ಸಮಗಾರ, ಡೋಹಾರ, ಭೋವಿ, ಲಂಬಾಣಿ, ಕೊರಚ, ಕೊರಮ ಇತ್ಯಾದಿ 101 ಜಾತಿಗಳು ಸೇರಿ ಶೇ. 15. ಇಷ್ಟು ಜಾತಿಗಳಿಗೂ ಮೀಸಲಾತಿ ಒಟ್ಟು ಶೇ.49 ವರ್ಗೀಕರಣಗೊಂಡಿದೆ. ಇನ್ನುಳಿದ ಶೇ. 51 ಸಾಮಾನ್ಯರಿಗೆ. ಅಂದರೆ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರಿದ ಜನಾಂಗಕ್ಕೆ ಇಡಲಾಗಿದೆ. ಆದರೆ ಇಲ್ಲಿ ಜನರನ್ನು ಮೀಸಲಾತಿ ಎಂದರೆ ಕೇವಲ ದಲಿತರಿಗಾಗಿ ಎಂಬಂತೆ ತಿರುಚುತ್ತಾ ಇಡೀ ದೇಶವೇ ಜಾತಿ ವೈಷಮ್ಯದಲ್ಲಿ ಮುಳುಗುವಂತೆ ಮಾಡಲಾಗುತ್ತಿದೆ. ಮೀಸಲಾತಿಯು ಹುಟ್ಟಿಕೊಂಡ ಮೇಲೆ ಈ ದೇಶ ಎಷ್ಟೋ ಸುಧಾರಿಸಿಕೊಂಡಿದೆ. 7ನೇ ತರಗತಿ ಓದಿದವನಿಗೂ ಕೂಡ ಸರಕಾರಿ ಕ್ಷೇತ್ರದಲ್ಲಿ ಹಿಂದೆ ಕೆಲಸ ಸಿಗುತ್ತಿತ್ತು. ಅಂತಹ ಉದ್ಯೋಗ ಮಾರ್ಗವನ್ನೇ ಕಡಿದು ಹಾಕಿದ್ದು ಇವತ್ತಿನ ಕಾರ್ಪೊರೇಟ್ ಕಂಪೆನಿಗಳು ಹಾಗೂ ಕೈಗಾರಿಕೆಗಳು. ಇಂದು ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಇನ್ನಿತರ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್ ಮುಂತಾದ ಯಾವುದೇ ವಿದ್ಯಾರ್ಹತೆ ಇದ್ದರೂ ಯುವಜನತೆಗೆ ಉದ್ಯೋಗ ದೊರಕುತ್ತಿಲ್ಲ ಎಂದರೆ ಖಾಸಗೀಕರಣದ ಭೀಕರತೆ ಎಂತಹವರಿಗೂ ಅರಿವಾಗಬೇಕು. ಇದು ಈ ದೇಶದ ಯುವ ಜನರನ್ನು ಭಿಕ್ಷೆ ಬೇಡುವ ಸ್ಥಿತಿಗೆ, ಕಿಡ್ನಿ ಮಾರಿಕೊಳ್ಳುವ ಸ್ಥಿತಿಗೆ ತಂದು ನಿಲ್ಲಿಸಿವೆ. 1992ರ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಪ್ರಕ್ರಿಯೆಯ ನಂತರ ಈ ದೇಶದ ಸರಕಾರಿ ಸೇವಾ ಕ್ಷೇತ್ರಗಳಲ್ಲಿ ಉದ್ಯೋಗ ಕಡಿಮೆಯಾಯಿತು. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಹೆಚ್ಚಾದವು. ಸರಕಾರಿ ಕ್ಷೇತ್ರದಲ್ಲಿ ಉದ್ಯೋಗ ಪ್ರಮಾಣ ಕುಸಿದ ಮೇಲೆ ವಿದ್ಯಾವಂತರು ಉದ್ಯೋಗಕ್ಕಾಗಿ ಹೋಗಬೇಕಾಗಿದ್ದು ಎಲ್ಲಿಗೆ? ಖಾಸಗಿ ಕಂಪೆನಿಗಳಿಗೆ. ಆದರೆ ಈ ಕಂಪೆನಿಗಳಿಗೆ ಈ ದೇಶದ ದಲಿತರಿಗೆ ಕೆಲಸ ಕೊಟ್ಟು ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಇಷ್ಟವಿಲ್ಲ. ಖಾಸಗಿ ಕಂಪೆನಿಗಳಿಗೆ ನೀರು, ವಿದ್ಯುತ್, ಭೂಮಿ ಮುಂತಾದವುಗಳೊಂದಿಗೆ ವಿಶೇಷ ಅನುದಾನ ನೀಡುತ್ತಿರುವ ಸರಕಾರಗಳೇ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಲಿಲ್ಲ. ಇನ್ನಾದರೂ ಖಾಸಗಿಯಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ಪ್ರಯತ್ನಿಸಬೇಕು. ಇಲ್ಲವಾದರೆ ಖಾಸಗಿ ಕಂಪೆನಿಗಳಿಗೆ ಕೊಟ್ಟಿರುವ ಅನುಮತಿಯನ್ನು ರದ್ದು ಮಾಡಬೇಕು. ಇಂತಹ ಒಂದು ಚರ್ಚೆ ಮುನ್ನೆಲೆಗೆ ಬರಬೇಕು.

ಖಾಸಗಿಯಲ್ಲಿ ಮೀಸಲಾತಿಯನ್ನು ಜನರು ಭಾರತದಲ್ಲಿ ದಲಿತರು ಮಾತ್ರ ಕೇಳುತ್ತಿದ್ದಾರೆ ಎಂದುಕೊಂಡಿದ್ದಾರೆ. ಅದು ತಪ್ಪುಕಲ್ಪನೆ. ಈಗಾಗಲೇ ಪಾಶ್ಚಿಮಾತ್ಯ ದೇಶಗಳು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಕೊಟ್ಟಿವೆ. ಅಮೆರಿಕ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಲು ಅಮೆರಿಕ ಕಾಂಗ್ರೆಸ್ 1968ರಲ್ಲಿಯೇ ಸಿವಿಲ್ ರೈಟ್ಸ್ ಕಾಯ್ದೆ ರಚಿಸಿಕೊಂಡಿದೆ. ಅದರ ಪ್ರಕಾರ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳುವಾಗ, ಗುತ್ತಿಗೆ ನೀಡುವಾಗ, ರಜೆ, ಪರಿಹಾರ ಭತ್ತೆ ಭಡ್ತಿ ಮುಂತಾದ ವಿಚಾರಗಳಲ್ಲಿ ಜನಾಂಗೀಯ ಹಿನ್ನೆಲೆಯಲ್ಲಿ ತಾರತಮ್ಯವಿರಕೂಡದು ಎಂದು ಹೇಳಿದೆ. ಈ ಕಾಯ್ದೆ ಬರುವ ಮುನ್ನ ಕರಿಯರನ್ನು ಅಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವುದೇ ಕಷ್ಟವಾಗಿತ್ತು. ಈ ಕಾಯ್ದೆಯಿಂದ ಕರಿಯರು ಉದ್ಯೋಗಿಗಳಾದರು. ಹಾಗೆಯೆ ದಕ್ಷಿಣ ಆಫ್ರಿಕಾದಲ್ಲಿ ‘ದ ಎಂಪ್ಲಾಮೆಂಟ್ ಈಕ್ವಾಲಿಟಿ ಕಾಯ್ದೆ 1998’ ಮತ್ತು ‘ದ ಪ್ರಮೋಶನ್ ಆಫ್ ಈಕ್ವಾಲಿಟಿ ಆ್ಯಂಡ್ ಪ್ರಿವನ್ಶನ್ ಆಫ್ ಅನ್ಫೇರ್ ಡಿಸ್ಕ್ರಿಮಿನೇಷನ್ ಕಾಯ್ದೆ 2000’ ಪ್ರಕಾರ ಕಪ್ಪುಜನರ ಒಳಿತಿಗಾಗಿ ಉದ್ಯೋಗ ನೀಡಿಕೆಯಲ್ಲಿ ಸಮಾನ ಅವಕಾಶ ಹಾಗೂ ಖಾಸಗಿಯಲ್ಲಿ ಕೆಲಸ ಮಾಡಲು ಈ ಜನರಿಗೆ ಪ್ರಾತಿನಿಧ್ಯ ನೀಡಬೇಕೆಂದು ಹೇಳುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಬಲವಾಗಿ ಕಾಯ್ದೆ ರೂಪಿಸಿ ತಂದಂತೆ ಇಲ್ಲಿ ತರಲಾಗುತ್ತಿಲ್ಲ. ಯಾಕೆಂದರೆ ಇಲ್ಲಿರುವವರೆಲ್ಲರೂ ಯಥಾಸ್ಥಿತಿವಾದಿಗಳಾಗಿರುವುದರಿಂದ ಇದನ್ನು ತರಲು ಸ್ವಲ್ಪ ಕಷ್ಟವೇ ಆಗಿದೆ. ಮೋಹನ್ ಭಾಗವತ್ ನಿಜವಾದ ದೇಶ ಸೇವಕ, ದೇಶಪ್ರೇಮಿಯೇ ಆಗಿದ್ದರೆ, ಖಾಸಗಿ ಮೀಸಲಾತಿಗಾಗಿ ರಾಷ್ಟ್ರಾದ್ಯಂತ ಕಾಯ್ದೆ ರೂಪಿಸಲು ಚರ್ಚೆ ಪ್ರಾರಂಭಿಸಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)