varthabharthi

ನಿಮ್ಮ ಅಂಕಣ

‘ದೇಶ ಭಕ್ತಿ’ಯಲ್ಲೂ ಏನೀ ತಾರತಮ್ಯ?

ವಾರ್ತಾ ಭಾರತಿ : 28 Aug, 2019
ಮುಹಮ್ಮದ್ ಮುಜಾಹಿದ್, ಕನ್ನಡಕ್ಕೆ: ಕಸ್ತೂರಿ

ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್

ಕೆಂಪು ಕೋಟೆ ಮೇಲೆ ಆಗಸ್ಟ್ 15ರಂದು ಪ್ರಧಾನಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ. ಅವರಿಗೆ ಆ ಕೆಂಪು ಕೋಟೆ ಕಟ್ಟಿದ್ದು ಒಬ್ಬ ಮುಸ್ಲಿಂ ಪಾಲಕ ಎಂದು ತಿಳಿಯದೇ? ಮುಸ್ಲಿಂ ಪ್ರಭುಗಳು ಈ ದೇಶಕ್ಕೆ ಎಷ್ಟೋ ಒಳಿತು ಮಾಡಿದ್ದಾರೆ. ಎಷ್ಟೋ ಮುಸ್ಲಿಂ ಯೋಧರು ವಿದೇಶದ ಗುಲಾಮಿ ಸಂಕೋಲೆಗಳ ಬಂಧನಗಳನ್ನು ಕಿತ್ತೆಸೆಯುವುದಕ್ಕಾಗಿ ಗಲ್ಲು ಗಂಬ ಏರಿದ್ದಾರೆ. ಸಮಸ್ತ ಯೋಧರ ತ್ಯಾಗ ಫಲವೇ ಸ್ವತಂತ್ರ ಭಾರತ. ಮುಸ್ಲಿಮರ ತ್ಯಾಗಗಳು ಚಿರಸ್ಮರಣೀಯವಾದವು ಎಂಬ ವಿಷಯ ಆಳುವವರು ತಿಳಿದುಕೊಳ್ಳಬೇಕು.

ಜಾತಿ, ಮತ, ಭೇದಗಳಿಲ್ಲದೆ ದೇಶದಲ್ಲಿನ ಬಹುತೇಕ ನಾಗರಿಕರು ಭಾರತ ಸ್ವಾತಂತ್ರ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಹಿಂದೂಗಳು, ಮುಸ್ಲಿಮರು, ಸಿಖ್ಖರು, ಬೌದ್ಧರು..ಹೀಗೆ ಎಲ್ಲಾ ಮತಗಳು, ವರ್ಗಗಳಿಗೆ ಸೇರಿದ ಅವರು ತಾವು ಭಾರತೀಯರು ಎಂಬ ಭಾವನೆಯಿಂದ ಒಗ್ಗಟ್ಟಾಗಿ, ಭಾವೈಕ್ಯದಿಂದ ಸ್ವಾತಂತ್ರ ಚಳವಳಿಯಲ್ಲಿ ವಿರೋಚಿತ ಹೋರಾಟ ಮಾಡಿದರು. ಧನ, ಮಾನ, ಪ್ರಾಣಗಳನ್ನು ತೃಣಪ್ರಾಯವಾಗಿ ತ್ಯಾಗ ಮಾಡಿದರು. ಆದರೆ ಮುಸ್ಲಿಮರನ್ನು ದ್ವೇಷಿಸುವುದೇ ಕೆಲಸವಾಗಿ ಇಟ್ಟುಕೊಂಡಿರುವ ಕಮಲನಾಥರು ಚರಿತ್ರೆಯನ್ನು ತಿಳಿದುಕೊಳ್ಳದೆ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ ದಿನಾಚರಣೆಯ ಮಾಸದಲ್ಲಿ ಇಂದು ಮುಸ್ಲಿಮರ ತ್ಯಾಗಗಳನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ.

ಆಂಗ್ಲರಿಗಿಂತ ಮೊದಲು ದೇಶದಲ್ಲಿ ಬೆಂಗಾಲ್‌ನಿಂದ ಸಿಂಧ್‌ವರೆಗೆ, ದಿಲ್ಲಿಯಿಂದ ಮೈಸೂರಿನವರೆಗೆ ಮುಸ್ಲಿಮರ ಆಡಳಿತ ಇದ್ದಿತು. ಆಂಗ್ಲರು ತನ್ನ ಷಡ್ಯಂತ್ರಗಳಿಂದ ಭಾರತದೇಶವನ್ನು ಆಕ್ರಮಿಸಿಕೊಂಡರು. ಈ ಕ್ರಮದಲ್ಲಿ ಆಂಗ್ಲರಿಗೆ ಮುಸ್ಲಿಮರೇ ಮೊದಲ ವೈರಿಗಳಾದರು. 1857ರ ಮೊದಲ ಸ್ವಾತಂತ್ರ ಸಂಗ್ರಾಮದಲ್ಲಿ ಮುಸ್ಲಿಮರನ್ನು ಬಂಧಿಸಿ ಜೈಲುಗಳಲ್ಲಿಡಲಾಗುತ್ತದೆ. ನೂರಾರು ಮಂದಿ ಮುಸ್ಲಿಂ ಉಲೆಮಾಗಳನ್ನು ದಿಲ್ಲಿಯಲ್ಲಿನ ಔರಾಸ್ತಾದಲ್ಲಿ ಮರಗಳಿಗೆ ನೇಣು ಹಾಕಿದರು. ಆದರೆ ಕೆಲಮಂದಿ ಸಂಕುಚಿತ ಭಾವಗಳುಳ್ಳ ಚರಿತ್ರಕಾರರು ಸ್ವಾತಂತ್ರ ಹೋರಾಟದಲ್ಲಿ ಪ್ರಾಣ ಬಿಟ್ಟ ಮುಸ್ಲಿಂ ಯೋಧರ ಹೆಸರುಗಳನ್ನು ಕಣ್ಮರೆಯಾಗಿಸಿದರು. ಸ್ವಾತಂತ್ರ ಹೋರಾಟದಲ್ಲಿ ಮುಸ್ಲಿಮರು ಹಿಂದೂಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಪ್ರಾಣ ಒತ್ತೆ ಇಟ್ಟು ಹೋರಾಡಿದರು. ಆದರೆ ನಾಮಮಾತ್ರವಾಗಿ ಒಬ್ಬ್ಬಿಬ್ಬರ ಹೊರತು ಹೇಳಿಕೊಳ್ಳತಕ್ಕ ಸ್ಥಾಯಿಯಲ್ಲಿ ಹೆಸರುಗಳು ಕಂಡುಬಾರವು.

ಮೌಲಾನಾ ಅಬುಲ್ ಕಲಾಂ ಆಝಾದ್ ಹೆಸರು ಅವರ ಜಯಂತಿ ದಿನ ಕಾಟಾಚಾರಕ್ಕೆ ಪತ್ರಿಕೆಯಲ್ಲಿ ಕಂಡುಬರುತ್ತದೆ. ಸ್ವಾತಂತ್ರ ಹೋರಾಟದಲ್ಲಿ ನಾಮ ಮಾತ್ರವಾಗಿ ಸಹ ಪಾಲ್ಗೊಳ್ಳದ ಕೆಲವು ಸಂಸ್ಥೆಗಳ ಪ್ರತಿನಿಧಿಗಳು-ದೇಶಭಕ್ತಿ, ರಾಷ್ಟ್ರೀಯತೆ ಕುರಿತು ಮಾತಾಡುವುದು ವಿಚಿತ್ರ. ತಾಯಿನಾಡಿಗೋಸ್ಕರ ಪ್ರಾಣತ್ಯಾಗ ಮಾಡಿದ ಅಶ್ಫಕುಲ್ಲಾ ಖಾನ್, ಹಸನ್ ಮೊಹಾನಿ, ಟಿಪ್ಪುಸುಲ್ತಾನ್ ಮತ್ತಿತರರ ಚರಿತ್ರೆಯನ್ನು ಜನಸಾಮಾನ್ಯರಿಗೆ ಪರಿಚಯಿಸುವುದು ಇಂದಿನ ಅಗತ್ಯ. ‘‘ಜೈ ಹಿಂದ್’’, ‘‘ಇಂಕ್ವಿಲಾಬ್ ಜಿಂದಾಬಾದ್’’ನಂತಹ ಘೋಷಣೆಗಳು ಸಹ ಮುಸ್ಲಿಂ ಯೋಧರು ಸೃಷ್ಟಿಸಿದವೇ.

ಈಸ್ಟ್ ಇಂಡಿಯಾ ಕಂಪೆನಿ ಹೆಸರಿನೊಂದಿಗೆ ದೇಶದೊಳಗೆ ಹೆಜ್ಜೆ ಇಟ್ಟ ಆಂಗ್ಲರು ಮುಸ್ಲಿಂ ದೊರೆಗಳಿಂದ ಅಧಿಕಾರವನ್ನು ಹಸ್ತಗತ ಮಾಡಿಕೊಂಡರು. ಇದರೊಂದಿಗೆ ಸ್ವಾತಂತ್ರ ಹೋರಾಟಕ್ಕೆ ಮೊದಲು ಮುಸ್ಲಿಮರೇ ಶಂಖ ಊದಿದರು. ಅಬ್ದುಲ್ ಅಝೀಝ್ ರಹೀಮಾಬಾದಿ ಎಂಬ ಯೋಧ ಆಂಗ್ಲರಿಗೆ ವಿರುದ್ಧವಾಗಿ ಜಿಹಾದ್ ಮಾಡಬೇಕೆಂದು ಫತ್ವಾ ಜಾರಿ ಮಾಡಿದ ಮೊದಲ ವ್ಯಕ್ತಿ. 1753ರಲ್ಲಿ ಮುರ್ಷಿದಾಬಾದ್, ಬೆಂಗಾಲ್ ಗಳಲ್ಲಿ ಸಿರಾಜುದ್ದೌಲನ ತಾತ ಅಲಿವರ್ದಿಖಾನ್ ಆಂಗ್ಲರ ವಿರುದ್ಧವಾಗಿ ಹೋರಾಡಿದರು. 1761ರಿಂದ 1799ರ ವರೆಗೆ ದಕ್ಷಿಣ ಭಾರತದಲ್ಲಿ ಹೈದರ್ ಅಲಿ ಮತ್ತು ಆತನ ಪುತ್ರ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಆಂಗ್ಲರೊಂದಿಗೆ ಎಡೆ ಬಿಡದೆ ಸೆಣಸಿದರು. 1825ರಲ್ಲಿ ತಹ್ರೀಕೆ ಶಹೀದೇನ್ ಸಯ್ಯದ್ ಇಸ್ಮಾಯೀಲ್ ಶಹೀದ್, ಸಯ್ಯದ್ ಅಹ್ಮದ್ ಶಹೀದ್‌ರವರು ದೇಶಾದ್ಯಂತ ತಿರುಗಿ ಸ್ವಾತಂತ್ರ ಹೋರಾಟದ ಸ್ಫೂರ್ತಿಯನ್ನು ನಾಲ್ಕು ದಿಕ್ಕುಗಳಲ್ಲೂ ಹರಡಿದರು. ಆಂಗ್ಲರ ಬಂದೂಕುಗಳಿಗೆ ಎದೆ ಒಡ್ಡಿ ನೆತ್ತರು ಚೆಲ್ಲಿದರು.

ಕೊನೆಯ ಮೊಗಲ್ ಚಕ್ರವರ್ತಿ ಬಹದ್ದೂರ್ ಷಾ ಝಫರ್‌ರನ್ನು ಬ್ರಿಟಿಷರು ರಂಗೂನ್‌ನಲ್ಲಿನ ಜೈಲಿನಲ್ಲಿ ಬಂಧಿಸಿ ಅವರ ಕಣ್ಣೆದುರೇ ಅವರ ಪುತ್ರರನ್ನು ಕೊರಳು ಕೊಯ್ದು ಕೊಂದರು. ಪೊಲೀಸರ ಲಾಠಿ ಏಟಿಗೆ ಸ್ವಾತಂತ್ರ ಯೋಧನಾದ ಹಝ್ರತ್ ಮೊಹಾನಿಯ ಎರಡು ಕೈಗಳು ರಕ್ತದಿಂದ ನೆನೆದು ಮುದ್ದೆಯಾದವು. ಕೈ ಬೆರಳುಗಳೆಲ್ಲಾ ಹಿಸುಕಲ್ಟಟ್ಟವು. ಆದರೂ ಇದ್ದಿಲಿನಿಂದ ಆಗ್ಲರಿಗೆ ವಿರುದ್ಧವಾಗಿ ಗೋಡೆಗಳ ಮೇಲೆ ಕವಿತೆಗಳನ್ನು ಬರೆದರು. ಮುಸ್ಲಿಮರು ಮಾಡಿದ ತ್ಯಾಗಗಳಿಗೆ ಇಂತಹ ಉದಾಹರಣೆಗಳು ಎಷ್ಟೆಷ್ಟೋ ಇವೆ. ಹೆಸರುಗಳು ಹೇಳಿಕೊಳ್ಳ ಬೇಕೆಂದರೆ ದೊಡ್ಡ ಪಟ್ಟಿಯೇ ಇರುತ್ತದೆ.

ಸಾದಿಕ್ ಪುರ್ ಉಲೆಮಾಗಳ ಪ್ರಸ್ತಾಪ ಇಲ್ಲದೆ ಸ್ವಾತಂತ್ರ ಹೋರಾಟ ಚರಿತ್ರೆ ಪೂರ್ಣವಾಗದು. ಇಂದಿನ ಪಾಟ್ನಾ ಪ್ರಾಂತದಲ್ಲಿ ಸಾದಿಕ್ ಪುರ್ ಎಂಬ ಬೀದಿ ಇತ್ತು. ಇಲ್ಲಿನ ಉಲೆಮಾಗಳೆಲ್ಲರೂ ವಿರೋಚಿತ ಹೋರಾಟ ಮುಂದುವರಿಸಿದರು. ಇದಕ್ಕೆ ಪ್ರತಿಯಾಗಿ ಒಂದು ವರ್ಷ ರಮಝಾನ್‌ನಂದು ವಸಾಹತು ಪಾಲಕರು ಬುಲ್ಡೋಜರ್‌ನಿಂದ ಸಾದಿಕ್ ಪುರ್ ಮುಸ್ಲಿಮರ ಮನೆಗಳನ್ನೆಲ್ಲಾ ನೆಲಸಮ ಗೊಳಿಸಿದ್ದರು. ಈ ಉಲೆಮಾಗಳ ತ್ಯಾಗವನ್ನು ಜವಾಹರಲಾಲ್ ನೆಹರೂ ಎಷ್ಟೋ ಸಂದರ್ಭದಲ್ಲಿ ಪ್ರಶಂಸಿಸಿದ್ದಾರೆ. ‘‘ದೇಶಕ್ಕೋಸ್ಕರ ಹಿಂದೂ, ಮುಸ್ಲಿಂ, ಸಿಖ್ಖರು ಎಷ್ಟೋ ತ್ಯಾಗಗಳನ್ನು ಮಾಡಿದರು. ಎಲ್ಲರ ತ್ಯಾಗಗಳನ್ನು ಒಂದು ತಟ್ಟೆಯಲ್ಲಿ ಸಾದಿಖ್ ಪುರ್ ಉಲೆಮಾಗಳ ತ್ಯಾಗಗಳು ಇನ್ನೊಂದು ತಟ್ಟೆಯಲ್ಲಿ ಇಟ್ಟರೂ ಸಮವಾಗಿ ತೂಗಲಾರವು’’ ಎಂದು ಹೇಳಿದ್ದಾರೆ.

ಸ್ವಾತಂತ್ರ ಸಮರ ವೀರರು ಅನುಭವಿಸಿದ ಶಿಕ್ಷೆಗಳಲ್ಲಿ ‘ಕಾಲಾಪಾನಿ’ ಶಿಕ್ಷೆ ಅತ್ಯಂತ ಕ್ರೂರವಾದವು. ಈ ಕಾಲಾಪಾನಿ ಶಿಕ್ಷೆಗೆ ಗುರಿಯಾದವರಲ್ಲಿ ಶೇ. 95 ಮುಸ್ಲಿಮರೇ. ಅವರಲ್ಲಿ ಉಲೆಮಾಗಳೇ ಅಧಿಕ. ಮೌಲಾನಾ ಜಾಫರ್, ಮೌಲಾನಾ ವಿಲಾಯತ್ ಅಲಿ, ಮೌಲಾನಾ ಯಹ್ಯಾರಂತಹ ಉಲೆಮಾಗಳ ಹೆಸರುಗಳು ಮುಂದಿನ ಸಾಲಿನಲ್ಲಿರುತ್ತದೆ. ಕೇರಳದಲ್ಲಿನ ತೀರ ಪ್ರಾಂತಕ್ಕೆ ಸೇರಿದ 125 ಮಂದಿ ಮಾಪ್ಲಾ ಮುಸ್ಲಿಮರನ್ನು ಬಂಧಿಸಿ ಕೋರ್ಟಲ್ಲಿ ಹಾಜರು ಪಡಿಸುವುದಕ್ಕೆ ಮಾಲ್ ಗಾಡಿಯಲ್ಲಿ ಹತ್ತಿಸಿದ್ದರು. 50 ಮಂದಿ ಹಿಡಿಯುವ ವಾಹನದಲ್ಲಿ 125 ಜನರನ್ನು ತಳ್ಳಿ ಬಾಗಿಲು ಮುಚ್ಚಿ ಮೂರು ದಿನಗಳ ಪ್ರಯಾಣ ಮಾಡಿಸಿದರು. ಮಾಲ್ ಗಾಡಿಯನ್ನು ನಿಲ್ಲಿಸಿ ಬಾಗಿಲು ತೆರೆದು ನೋಡಿದಾಗ ಅದರಲ್ಲಿ 65 ಮಂದಿ ಉಸಿರುಕಟ್ಟಿ ಸತ್ತು ಹೋಗಿದ್ದರು. ಉಳಿದವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬದುಕಿದ್ದವರನ್ನು ಮದ್ರಾಸ್ ಕೋರ್ಟ್‌ನಲ್ಲಿ ಹಾಜರುಪಡಿಸಿ ಗಲ್ಲು ಶಿಕ್ಷೆ ವಿಧಿಸಿದರು. ಇದು ಮುಸ್ಲಿಮರ ಹೋರಾಟ ಪಟುತ್ವಕ್ಕೆ ನಿದರ್ಶನ.

 ಉಲೆಮಾಗಳು ತಮ್ಮ ಭಾಷಣಗಳಿಂದ ಮುಸ್ಲಿಮರಲ್ಲಿ ರಾಷ್ಟ್ರೀಯತಾ ಭಾವವನ್ನು ಉದ್ದೀಪಿಸಿದರು. ಮೀಯಾ ನಝೀರ್ ಹುಸೈನ್ ಮುಹದ್ದೀನ್‌ರನ್ನು ರಾವಲ್ಪಿಂಡಿ ಜೈಲಿನಲ್ಲಿ ಬಂಧಿಸಿದರು. ಒಂದು ವರ್ಷಅವರು ಜೈಲಲ್ಲಿದ್ದರು. ಮೌಲಾನ ಅಬುಲ್ ಕಲಾಂ ಆಝಾದ್ ‘ಅಲ್ ಹಿಲಾಲ್’ ಎಂಬ ಪತ್ರಿಕೆ ನಡೆಸುತ್ತಿದ್ದರು. ಇದನ್ನು ಸಹಿಸದ ಆಂಗ್ಲರು ಪತ್ರಿಕೆಯನ್ನು ನಿಷೇಧಿಸಿ ಅವರನ್ನೂ ಬಂಧಿಸಿದರು. ಅನೇಕ ವರ್ಷಗಳ ಕಾಲ ಅವರು ಜೈಲಲ್ಲಿ ಕೊಳೆಯಬೇಕಾಯಿತು. ಎಷ್ಟೋ ಮಂದಿ ಮುಸ್ಲಿಮರು ಲಾಠಿ ಏಟು ತಿಂದರು, ಜೈಲು ಪಾಲಾದರು. ಮತ್ತೊಬ್ಬ ಮುಸ್ಲಿಂ ಉಸ್ಮಾನ್ ಸೇಠ್ ಆಂಗ್ಲರಿಗೆ ವಿರುದ್ಧವಾಗಿ ಪಾಠಶಾಲೆ ನಡೆಸಿದ್ದರು. ಈ ಪಾಠಶಾಲೆಯ ಪ್ರಾರಂಭೋತ್ಸವಕ್ಕೆ ಗಾಂಧೀಜಿ, ನೆಹರೂ, ಮೌಲಾನಾ ಶೌಕತ್‌ಅಲಿ ಆಗಮಿಸಿದ್ದರು. ಉಸ್ಮಾನ್ ತುಂಬಾ ಶ್ರೀಮಂತ ಎಂಬ ವಿಷಯ ಗಾಂಧೀಜಿ ತಿಳಿದುಕೊಂಡು ನಿಮ್ಮ ಸಂಪತ್ತನ್ನು ರಾಷ್ಟೀಯ ಚಳವಳಿಗೋಸ್ಕರ ಖರ್ಚುಮಾಡಿ ಎಂದು ಸೂಚಿಸಿದರು. ಆಗ ಸೇಠ್ ತನ್ನ ಆಸ್ತಿಗಳನ್ನೆಲ್ಲಾ ಧಾರೆ ಎರೆದರು. ಕರ್ನಾಟಕ ಗೆಜೆಟ್ ಪೇಜ್ ನಂ. 97ರಲ್ಲಿ ಈ ವಿವರಗಳಿವೆ. ಉಲೆಮಾಗಳು ಸ್ವಾತಂತ್ರ ಸಮರಾಂಗಣದಲ್ಲಿ ರಾಜಿ ಇಲ್ಲದ ಹೋರಾಟ ಮಾಡಿದರು. 8 ಲಕ್ಷ ಮಂದಿ ಬಲಿದಾನ ಮಾಡಿದ್ದರೆಂದು ಡಾ. ತಾರಾಚಂದ್ ತನ್ನ ಗ್ರಂಥದಲ್ಲಿ ಬರೆದಿದ್ದಾರೆ.

1947ರಲ್ಲಿ ಸ್ವಾತಂತ್ರ ಬಂದಿತು. ದೇಶ ವಿಭಜನೆಯಾಯಿತು. ವಿಭಜನೆಯನ್ನು ಮುಸ್ಲಿಮರು ತೀವ್ರವಾಗಿ ವಿರೋಧಿಸಿದರು. ದೇಶ ತುಂಡಾಗುವುದು ಅವರಿಗೆ ಇಷ್ಟವಿರಲಿಲ್ಲ. ಅಖಂಡ ಭಾರತವೇ ಅವರ ಗುರಿಯಾಗಿತ್ತು. ಮೌಲಾನಾ ಅಬುಲ್ ಕಲಾಂ ಆಝಾದ್ ದಿಲ್ಲಿಯ ಜಾಮಾ ಮಸೀದಿ ಎದುರು ಮಾಡಿದ ಉಪನ್ಯಾಸದಲ್ಲಿ ದೇಶ ವಿಭಜಿಸ ಬಯಸುವವರನ್ನು ತೀವ್ರವಾಗಿ ಟೀಕಿಸಿದರು. ‘‘ನೀವೆಲ್ಲಾ ಎಲ್ಲಿಗೆ ಹೋಗುತ್ತಿದ್ದೀರಿ? ಏಕೆ ಹೋಗುತ್ತಿದ್ದೀರಿ? ಈ ಮಸೀದಿ, ಮಿನಾರಗಳು ನಿಮ್ಮನ್ನು ಕರೆಯುತ್ತವೆ. ನಿಮ್ಮ ಚರಿತ್ರೆಯ ಪುಟಗಳನ್ನು ಅಳಿಸಿ ಹಾಕುತ್ತಿದ್ದಾರೆ. ಜಮುನಾ ತೀರದಲ್ಲಿ ನಿಮ್ಮ ಸಾಮೂಹಿಕ ನಮಾಝ್‌ಗೋಸ್ಕರ ಸಿದ್ಧಪಡಿಸಲಾಗಿದೆ. ನೀವು ಇಲ್ಲಿರುವುದಕ್ಕೆ ಏಕೆ ಭಯ ಪಡುತ್ತಿದ್ದೀರಿ? ದಿಲ್ಲಿ ನಿಮ್ಮ ರಕ್ತದಿಂದ ನಿರ್ಮಾಣಗೊಂಡಿದೆ. ಈ ವಿಭಜನೆಯಿಂದ ಭಾರತ ದೇಶದಲ್ಲಿರುವ ಮುಸ್ಲಿಮರು ಬಲಹೀನರಾಗುತ್ತಾರೆ. ಮುಸ್ಲಿಮರ ಅಸ್ತಿತ್ವ ಪ್ರಶ್ನಾರ್ಥಕವಾಗಲಿದೆ. ಮುಸ್ಲಿಮರು ಅಭದ್ರತಾ ಭಾವದಿಂದ ಬದುಕಬೇಕಾಗಿ ಬರುತ್ತದೆ’’ ಎಂದು ಆ ದಿನ ಅವರು ಹೇಳಿದ್ದು ಇಂದು ಅಕ್ಷರಶಃ ನಿಜವಾಗುತ್ತಿದೆ. ಈ ದೇಶವನ್ನು 900 ವರ್ಷಗಳು ಆಳಿದ ಮುಸ್ಲಿಮರು ಏಳು ದಶಕಗಳ ಸ್ವತಂತ್ರ ಭಾರತದಲ್ಲಿ ದಲಿತರಿಗಿಂತ ಕೀಳಾಗಿ ಬದುಕುತ್ತಿದ್ದಾರೆ.

ಕೆಂಪು ಕೋಟೆ ಮೇಲೆ ಆಗಸ್ಟ್ 15ರಂದು ಪ್ರಧಾನಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ. ಅವರಿಗೆ ಆ ಕೆಂಪು ಕೋಟೆ ಕಟ್ಟಿದ್ದು ಒಬ್ಬ ಮುಸ್ಲಿಂ ಪಾಲಕ ಎಂದು ತಿಳಿಯದೇ? ಮುಸ್ಲಿಂ ಪ್ರಭುಗಳು ಈ ದೇಶಕ್ಕೆ ಎಷ್ಟೋ ಒಳಿತು ಮಾಡಿದ್ದಾರೆ ಎಷ್ಟೋ ಮುಸ್ಲಿಂ ಯೋಧರು ವಿದೇಶದ ಗುಲಾಮಿ ಸಂಕೋಲೆಗಳ ಬಂಧನಗಳನ್ನು ಕಿತ್ತೆಸೆಯುವುದಕ್ಕಾಗಿ ಗಲ್ಲು ಗಂಬ ಏರಿದ್ದಾರೆ. ಸಮಸ್ತ ಯೋಧರ ತ್ಯಾಗ ಫಲವೇ ಸ್ವತಂತ್ರ ಭಾರತ. ಮುಸ್ಲಿಮರ ತ್ಯಾಗಗಳು ಚಿರಸ್ಮರಣೀಯವಾದವು ಎಂಬ ವಿಷಯ ಆಳುವವರು ತಿಳಿದುಕೊಳ್ಳಬೇಕು.

ಈ ದೇಶದ ಸಾಮಾನ್ಯ ಮುಸ್ಲಿಮರು ನ್ಯಾಯ ಕೋರುತ್ತಿದ್ದಾರೆ. ತಮ್ಮತ್ತ ತಾರತ್ಯಮ ನೀತಿ ತೋರದಿರಿ ಎಂದು ವಿನಂತಿಸುತ್ತಿದ್ದಾರೆ. 1,400 ವರ್ಷಗಳಿಂದ ಈ ನೆಲದ ಮೇಲೆ ಜೀವಿಸುತ್ತಾ ದೆಶಕ್ಕೋಸ್ಕರ ಇಷ್ಟೆಲ್ಲಾ ತ್ಯಾಗ ಮಾಡಿದ ಮುಸ್ಲಿಮರು ಈಗ ತಮ್ಮ ದೇಶ ಭಕ್ತಿಯನ್ನು ಪ್ರದರ್ಶಿಸಬೇಕು, ಸಾಬೀತು ಪಡಿಸಬೇಕಾಗಿ ಬಂದಿರುವುದು ದುರಂತ.

ಕೃಪೆ: ಆಂಧ್ರಜ್ಯೋತಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)