varthabharthi

ವೈವಿಧ್ಯ

ಸಂಘ ಪರಿವಾರದ ಸಂಘಟನೆಯಿಂದ ಭಗತ್ ಸಿಂಗ್, ಸುಭಾಶ್‌ಚಂದ್ರ ಬೋಸ್‌ರ ಎರಡನೇ ಬಾರಿ ಹತ್ಯೆ

ವಾರ್ತಾ ಭಾರತಿ : 29 Aug, 2019
ಶಂಸುಲ್ ಇಸ್ಲಾಂ

ಕೇಸರಿ ಸಂಘಟನೆಗಳ ದಾಖಲೆಗಳಲ್ಲೂ ದೊರೆಯುವಂತಹ ಇತಿಹಾಸದ ಅಲ್ಲಗಳೆಯಲಾಗದ ವಾಸ್ತವಗಳಿಂದ ಮಹಾನ್ ಹುತಾತ್ಮರ ಪ್ರತಿಮೆಯ ಜೊತೆ ಸಾವರ್ಕರ್ ಪ್ರತಿಮೆಯನ್ನು ಸ್ಥಾಪಿಸಿರುವುದು ಆ ಮಹನೀಯರನ್ನು ಎರಡನೇ ಬಾರಿ ಹತ್ಯೆ ಮಾಡಿರುವುದಕ್ಕೆ ಸಮ ಎಂದು ಅನಿಸುತ್ತದೆ.

ಗಸ್ಟ್ 20, 2019ರಂದು ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಆಘಾತಕಾರಿ ಬೆಳವಣಿಗೆಯಲ್ಲಿ ಸಂಘಪರಿವಾರದ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಹುತಾತ್ಮರಾದ ಭಗತ್ ಸಿಂಗ್ ಮತ್ತು ಸುಭಾಶ್‌ಚಂದ್ರ ಬೋಸ್ ಅವರ ಪ್ರತಿಮೆಗಳನ್ನು ಸಾವರ್ಕರ್ ಪ್ರತಿಮೆಯೊಂದಿಗೆ ಒಂದೇ ಪೀಠದಲ್ಲಿ ಸ್ಥಾಪಿಸಿದರು. ಸಾವರ್ಕರ್ ಜೊತೆಗೆ ಒಂದೇ ಪೀಠದಲ್ಲಿ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಹುತಾತ್ಮರಾದ ಭಗತ್ ಸಿಂಗ್ ಮತ್ತು ನೇತಾಜಿಯವರ ಪ್ರತಿಮೆಯನ್ನು ಸ್ಥಾಪಿಸಿರುವುದು ಈ ಹುತಾತ್ಮರನ್ನು ಎರಡನೇ ಬಾರಿ ಹತ್ಯೆ ಮಾಡುವುದಕೆ್ಕ ಸಮ.

ಭಗತ್ ಸಿಂಗ್ ಸಮಾಜಶಾಸ್ತ್ರೀಯ ಪ್ರಜಾಸತ್ತಾತ್ಮಕ ಜಾತ್ಯತೀತ ಗಣರಾಜ್ಯಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದರೆ ನೇತಾಜಿಯವರು ಭಾರತಕ್ಕೆ ಶಸ್ತ್ರಾಸ್ತ್ರದ ಮೂಲಕ ಸ್ವಾತಂತ್ರ ಒದಗಿಸುವ ಉದ್ದೇಶದಿಂದ ಎಲ್ಲ ಧರ್ಮಗಳ ಮತ್ತು ಪ್ರದೇಶದ ಜನರನ್ನೊಳಗೊಂಡ ಆಝಾದ್ ಹಿಂದ್ ಫೌಜ್ (ಐಎನ್‌ಎ)ಅನ್ನು ಸ್ಥಾಪಿಸಿದ್ದರು.

ಭಗತ್ ಸಿಂಗ್ ಮತ್ತು ನೇತಾಜಿ ಬ್ರಿಟಿಷರ ದಬ್ಬಾಳಿಕೆಯ ಆಳ್ವಿಕೆ ಮತ್ತು ದ್ವಿರಾಷ್ಟ್ರ ವಾದದ ವಿರುದ್ಧ ಹೋರಾಡುತ್ತಿದ್ದರೆ ಸಾವರ್ಕರ್ ಲಜ್ಜೆಗೆಟ್ಟವರಂತೆ ಬ್ರಿಟಿಷರ ಮತ್ತು ಮುಸ್ಲಿಂ ಲೀಗ್ ಜೊತೆ ಕೈಜೋಡಿಸಿ ಸ್ವಾತಂತ್ರ ಸಂಗ್ರಾಮವನ್ನು ಸೋಲಿಸಲು ಸಂಚು ರೂಪಿಸಿದ್ದರು ಎನ್ನುವುದಕ್ಕೆ ಸಮಕಾಲೀನ ದಾಖಲೆಗಳೇ ಸಾಕ್ಷಿಯಾಗಿವೆ.

ವೀರ್ ಸಾವರ್ಕರ್ ಐದು ಬಾರಿ ದಯಾ ಅರ್ಜಿ ಸಲ್ಲಿಸಿದ್ದರು ಮತ್ತು 35 ವರ್ಷಗಳಿಗೂ ಅಧಿಕ ಅವಧಿಯ ಕ್ಷಮಾಪಣೆ ಪಡೆದಿದ್ದರು.

ಈ ಪ್ರತಿಮೆಗಳ ಹೋಲಿಕೆಯಲ್ಲಿರುವ ಅತ್ಯಂತ ನಾಚಿಕೆಗೇಡಿನ ಮತ್ತು ಆಘಾತಕಾರಿ ವಿಷಯವೆಂದರೆ, ಭಗತ್ ಸಿಂಗ್ ಮತ್ತು ನೇತಾಜಿ ವಸಾಹತುಶಾಹಿ ಬ್ರಿಟಿಷರ ಸರ್ವಾಧಿಕಾರಕ್ಕೆ ಒಮ್ಮೆಯೂ ಜಗ್ಗಿರಲಿಲ್ಲ. ಅವರು ಶಿಕ್ಷೆಯಿಂದ ಹಿಂದೆಯೂ ಸರಿಯಲಿಲ್ಲ ಮತ್ತು ಕರುಣೆಯನ್ನೂ ಕೋರಲಿಲ್ಲ. ಆದರೆ ಕೇಸರಿ ವೀರ, 1911, 1913, 1914, 1918 ಮತ್ತು 1920 ಹೀಗೆ ಐದು ಬಾರಿ ಕರುಣೆಯ ಮನವಿಯನ್ನು ಸಲ್ಲಿಸಿದ್ದರು. 50 ವರ್ಷಗಳ ಶಿಕ್ಷೆಗೊಳಗಾಗಿದ್ದ (1910-1911) ಹಿಂದುತ್ವದ ಈ ವೀರ ಜೈಲಿನಲ್ಲಿ ಕಳೆದಿದ್ದು ಕೇವಲ ಹತ್ತು ವರ್ಷಗಳನ್ನು ಮತ್ತು ಅಂತಿಮವಾಗಿ 1924ರಲ್ಲಿ ಮಹಾರಾಷ್ಟ್ರದ ಯೆರವಾಡ ಜೈಲಿನಿಂದ ಬಿಡುಗಡೆಗೊಂಡಿದ್ದರು. ಅಲ್ಲಿಗೆ 35 ವರ್ಷಗಳಿಗೂ ಅಧಿಕ ಕಾಲ ಕ್ಷಮಾಪಣೆ ಪಡೆದುಕೊಂಡಿದ್ದರು. ಇತರ ನೂರಾರು ಕ್ರಾಂತಿಕಾರಿಗಳು ಆಗಲೂ ಸೆಲ್ಯುಲರ್ ಹಾಗೂ ಇತರ ಜೈಲುಗಳಲ್ಲಿ ಬಂಧಿಯಾಗಿದ್ದರು ಮತ್ತು ಶಿಕ್ಷೆಯ ೂರ್ಣಾವಧಿಯನ್ನು ಕಳೆಯುತ್ತಿದ್ದರು.

ಭಗತ್ ಸಿಂಗ್, ಚಂದ್ರಶೇಖರ್ ಆಝಾದ್, ರಾಮ ಪ್ರಸಾದ್ ಬಿಸ್ಮಿಲ್, ಅಶ್ಫಕುಲ್ಲ್ಲಾ ಖಾನ್, ಸುಖ್‌ದೇವ್, ರಾಜ್‌ಗುರು ಮತ್ತು ರೋಶನ್ ಸಿಂಗ್‌ರಂತಹ ಹುತಾತ್ಮರು ಯಾವತ್ತೂ ದಯೆ ಭಿಕ್ಷೆ ಕೇಳಿರಲಿಲ್ಲ ಮತ್ತು ಬ್ರಿಟಿಷರಿಗೆ ನಿಷ್ಠರಾಗಿರುವುದಕ್ಕೆ ಒಪ್ಪಲಿಲ್ಲ. ಇನ್ನು ಗದರ್ ಕ್ರಾಂತಿಕಾರಿಗಳು ಮತ್ತು ಬೆಂಗಾಲ್ ಕ್ರಾಂತಿಕಾರಿಗಳೂ ಬ್ರಿಟಿಷ್ ಅಧಿಕಾರಿಗಳಲ್ಲಿ ದಯೆ ಭಿಕ್ಷೆ ಕೇಳಲು ನಿರಾಕರಿಸಿದ್ದರು ಮತ್ತು ತಮ್ಮ ವೈಯಕ್ತಿಕ ಸ್ವಾತಂತ್ರಕ್ಕೆ ಬದಲಾಗಿ ದೇಶದ ಸ್ವಾತಂತ್ರದ ೋರಾಟವನ್ನು ಕೈಬಿಡಲು ಒಪ್ಪಿರಲಿಲ್ಲ.

ಸಾವರ್ಕರ್ ಯಾವ ರೀತಿ ನೇತಾಜಿಯವರ ಬೆನ್ನಿಗೆ ಚೂರಿ ಹಾಕಿದರು?

ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ನೇತಾಜಿ ದೇಶದ ಸ್ವಾತಂತ್ರಕ್ಕಾಗಿ ವಿದೇಶಿ ಬೆಂಬಲವನ್ನು ಪಡೆಯಲು ಮತ್ತು ದೇಶದ ಈಶಾನ್ಯ ಭಾಗದ ಮೇಲೆ ಸೇನಾ ದಾಳಿ ಸಂಘಟಿಸಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ (ಈ ಪ್ರಯತ್ನದ ಭಾಗವಾಗಿ ಆಝಾದ್ ಹಿಂದ್ ಫೌಜ್ ಸ್ಥಾಪಿಸಲಾಯಿತು) ಸಾವರ್ಕರ್ ಬ್ರಿಟಿಷರಿಗೆ ಸಂಪೂರ್ಣ ಸೇನಾ ಸಹಕಾರದ ಪ್ರಸ್ತಾವ ಇಟ್ಟಿದ್ದರು.

1941ರಲ್ಲಿ ಭಾಗಲ್ಪುರದಲ್ಲಿ ನಡೆದ ಹಿಂದೂ ಮಹಾಸಭಾದ 23ನೇ ಅಧಿವೇಶನಲ್ಲಿ ಸಾವರ್ಕರ್ ಹೀಗೆ ಹೇಳುತ್ತಾರೆ:

‘‘ಸದ್ಯ ನಮ್ಮ ಕಿನಾರೆಯನ್ನು ತಲುಪಿರುವ ಯುದ್ಧ ನೇರವಾಗಿ ಅಪಾಯ ಮತ್ತು ಅವಕಾಶ ಎರಡನ್ನೂ ಒಮ್ಮೆಲೇ ಒದಗಿಸುತ್ತದೆ ಮತ್ತು ಈ ಎರಡೂ ಸೈನಿಕ ಚಾಲನೆಯನ್ನು ಕಡ್ಡಾಯಗೊಳಿಸುತ್ತದೆ ಮತ್ತು ಮಹಾಸಭಾದ ಪ್ರತಿಯೊಂದು ವಿಭಾಗ, ಪ್ರತಿ ಪಟ್ಟಣ ಮತ್ತು ಗ್ರಾಮದಲ್ಲಿರುವ ಸದಸ್ಯರು ಹಿಂದೂಗಳನ್ನು ಸೇನೆ, ನೌಕಾಪಡೆ, ವಾಯುಪಡೆ ಹಾಗೂ ಯುದ್ಧ ಸಾಮಗ್ರಿ ತಯಾರಕ ವಿವಿಧ ಸಂಸ್ಥೆಗಳಲ್ಲಿ ಸೇರಲು ಪ್ರಚೋದಿಸಬೇಕು.’’

ಇದು ಬ್ರಿಟಿಷ್ ಸೇನೆಗೆ ಸೇರುವಂತೆ ಸಾವರ್ಕರ್ ಹಿಂದೂಗಳಿಗೆ ನೀಡಿದ ನೇರ ಕರೆಯಾಗಿದೆ. ಇನ್ನು ಸಾವರ್ಕರ್ ಯಾವ ಹಂತದವರೆಗೆ ಬ್ರಿಟಿಷರಿಗೆ ನೆರವು ನೀಡಲು ಸಿದ್ಧರಿದ್ದರು ಎನ್ನುವುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ:

ಇಲ್ಲಿಯವರೆಗೆ ಭಾರತದ ರಕ್ಷಣೆಗೆ ಸಂಬಂಧಿಸಿದಂತೆ ಹಿಂದೂಗಳು ಯಾವುದೇ ಹಿಂಜರಿಕೆಯಿಲ್ಲದೆ ಈವರೆಗೆ ಹಿಂದೂಗಳ ಹಿತಾಸಕ್ತಿಗೆ ಬದ್ಧವಾಗಿರುವ ಭಾರತ ಸರಕಾರದ ಯುದ್ಧ ಪ್ರಯತ್ನಗಳಿಗೆ ಸಹಕಾರ ನೀಡಲು ಸೇನೆ, ನೌಕಾಪಡೆ ಮತ್ತು ವಾಯುಪಡೆ ದೊಡ್ಡ ಸಂಖ್ಯೆಯಲ್ಲಿ ಸೇರಬೇಕು ಮತ್ತು ಶಸ್ತ್ರಾಸ್ತ್ರ ಹಾಗೂ ಯುದ್ಧ ಸಾಮಗ್ರಿಗಳನ್ನು ತಯಾರಿಸುವ ಕಾರ್ಖಾನೆಗಳಿಗೆ ಪ್ರವೇಶ ಪಡೆಯಬೇಕು. ಜಪಾನ್ ಯುದ್ಧಕ್ಕೆ ಜಿಗಿದಿರುವುದರಿಂದ ನಾವು ನೇರವಾಗಿ ಮತ್ತು ತಕ್ಷಣಕ್ಕೆ ಬ್ರಿಟನ್‌ನ ಶತ್ರುಗಳ ದಾಳಿಗೆ ಒಳಗಾಗುವ ಅಪಾಯಕ್ಕೆ ಸಿಲುಕಿದ್ದೇವೆ. ಹಾಗಾಗಿ, ನಮಗೆ ಇಷ್ಟ ಇದೆಯೋ ಇಲ್ಲವೋ, ನಾವು ನಮ್ಮ ಮಾತೃಭೂಮಿಯನ್ನು ಯುದ್ಧದ ಭೀಕರತೆಯಿಂದ ರಕ್ಷಿಸಿಕೊಳ್ಳಬೇಕಿದೆ ಮತ್ತು ಅದು ಭಾರತವನ್ನು ರಕ್ಷಿಸಲು ಸರಕಾರ ನಡೆಸುತ್ತಿರುವ ಯುದ್ಧ ಪ್ರಯತ್ನದ ಜೊತೆ ಕೈಜೋಡಿಸಿದಾಗ ಮಾತ್ರ ಸಾಧ್ಯ. ಹಾಗಾಗಿ ಹಿಂದೂ ಮಹಾಸಭಾದ ಸದಸ್ಯರು ಒಂದು ಕ್ಷಣವನ್ನೂ ಪೋಲು ಮಾಡದೆ ಹಿಂದೂಗಳನ್ನು, ಮುಖ್ಯವಾಗಿ ಬಂಗಾಳ ಮತ್ತು ಅಸ್ಸಾಂನ ಹಿಂದೂಗಳನ್ನು ಸೇನೆಯ ಎಲ್ಲ ವಿಭಾಗಗಳಿಗೆ ಸೇರಲು ಪರಿಣಾಮಕಾರಿಯಾಗಿ ಉತ್ತೇಜಿಸಬೇಕು. ಸುಭಾಶ್‌ಚಂದ್ರ ಬೋಸ್‌ರಂತಹ ನಾಯಕರು ಶಸ್ತ್ರಾಸ್ತ್ರ ಹೋರಾಟದ ಮೂಲಕ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ತೊಲಗಿಸಲು ಯೋಜನೆ ರೂಪಿಸುತ್ತಿದ್ದ ಸಂದರ್ಭದಲ್ಲಿ ಸಾವರ್ಕರ್ ಬ್ರಿಟಿಷರ ಯುದ್ಧ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದು ಉತ್ತಮ ರೀತಿಯಲ್ಲಿ ಯೋಜಿಸಲಾಗಿದ್ದ ಹಿಂದುತ್ವ ವಿನ್ಯಾಸದ ಫಲವಾಗಿತ್ತು. ತಮ್ಮ ಆಯ್ಕೆಯನ್ನು ಸಾವರ್ಕರ್ 1940ರಲ್ಲಿ ಮಧುರಾದಲ್ಲಿ ನಡೆದ ಹಿಂದೂ ಮಹಾಸಭಾದ 22ನೇ ಅಧಿವೇಶನದಲ್ಲಿ ಸ್ಪಷ್ಟಪಡಿಸಿದ್ದರು.

ಈ ಯುದ್ಧದಲ್ಲಿ ಇಂಗ್ಲೆಂಡ್ ಭೀಕರವಾಗಿ ಸೋಲನುಭವಿಸಿ ಭಾರತೀಯ ಸಾಮ್ರಾಜ್ಯವನ್ನು, ಅದರ ಸಂಪೂರ್ಣ ಸಂಪತ್ತನ್ನು ಜರ್ಮನಿಗೆ ಬಿಟ್ಟುಕೊಡಬೇಕಾದ ಅನಿವಾರ್ಯತೆಗೆ ಸಿಲುಕುತ್ತದೆ ಎನ್ನುವುದು ಒಟ್ಟಾರೆಯಾಗಿ ಅಸಂಭವನೀಯ ಎಂಬ ಸಿದ್ಧಾಂತದ ಮೇಲೆ ಸಾವರ್ಕರ್ ಬ್ರಿಟಿಷರಿಗೆ ನೀಡಿದ್ದ ನೆರವು ನಿಂತಿತ್ತು. ಅಂದರೆ ಅವರು ಬ್ರಿಟಿಷ್ ಸಾಮ್ರಾಜ್ಯ ಅಜೇಯ ಎಂದು ಭಾವಿಸಿದ್ದರು.

ಇಂತಹ ದೃಷ್ಟಿಕೋನದ ವಿರುದ್ಧ ಸಾಮಾನ್ಯ ಭಾರತೀಯರಲ್ಲಿ ಭುಗಿಲೇಳುತ್ತಿದ್ದ ತೀವ್ರ ವಿರೋಧದ ಬಗ್ಗೆ ಸಾವರ್ಕರ್‌ಗೆ ತಿಳಿದಿರಲಿಲ್ಲವೆಂದೇನೂ ಅಲ್ಲ. ಆದರೆ ಅವರು ಕೆಳಗಿನ ಹೇಳಿಕೆಯ ಮೂಲಕ ಯುದ್ಧದಲ್ಲಿ ಬ್ರಿಟಿಷರಿಗೆ ಸಹಕರಿಸುವ ಹಿಂದೂ ಮಹಾಸಭಾದ ನಿರ್ಧಾರದ ವಿರುದ್ಧ ಕೇಳಿಸುವ ಯಾವುದೇ ಟೀಕೆಯನ್ನು ಬದಿಗೆ ಸರಿಸುತ್ತಿದ್ದರು;

ಭಾರತೀಯ ನಾಗರಿಕರು ಯಾವ ರೀತಿಯ ರಾಜಕೀಯ ದಡ್ಡತನಕ್ಕೆ ಸಿಲುಕಿದ್ದಾರೆ ಎಂದರೆ ಭಾರತೀಯ ಹಿತಾಸಕ್ತಿಗಳು ಬ್ರಿಟಿಷರ ಹಿತಾಸಕ್ತಿಗೆ ವಿರುದ್ಧವಾಗಿದೆ. ಹಾಗಾಗಿ ಬ್ರಿಟಿಷರ ಜೊತೆ ಕೈಜೋಡಿಸುವ ಯಾವುದೇ ಕ್ರಮವು ಶರಣಾಗತಿ, ದೇಶದ್ರೋಹವೆನಿಸುತ್ತದೆ ಮತ್ತು ಬ್ರಿಟಿಷರ ಕೈಗೊಂಬೆಯಾದಂತಾಗುತ್ತದೆ ಹಾಗೂ ಬ್ರಿಟಿಷ್ ಸರಕಾರಕ್ಕೆ ಯಾವುದೇ ಕಾರಣಕ್ಕೂ ಮತ್ತು ಯಾವ ಸಂದರ್ಭದಲ್ಲೂ ಸಹಕಾರ ನೀಡುವುದು ದೇಶವಿರೋಧಿ ಮತ್ತು ಖಂಡನೀಯ ಎಂದು ಭಾವಿಸುತ್ತಾರೆ.

ಮುಂದಿನ ಕೆಲವು ವರ್ಷಗಳನ್ನು ಸಾವರ್ಕರ್, ಈಶಾನ್ಯ ಭಾರತದ ವಿವಿಧ ಭಾಗಗಳಲ್ಲಿ ಐಎನ್‌ಎ ಸೈನಿಕರನ್ನು ಸದೆಬಡಿಯಲಿದ್ದ ಬ್ರಿಟಿಷ್ ಸೇನೆಗಾಗಿ ನೇಮಕಾತಿ ಶಿಬಿರಗಳನ್ನು ಸಂಘಟಿಸಿದರು. ಹಿಂದೂ ಮಹಾಸಭಾದ ಮಧುರಾ ಸಮ್ಮೇಳನ, ಬ್ರಿಟಿಷ್ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸಾಧ್ಯವಾದಷ್ಟು ಹೆಚ್ಚು ಹಿಂದೂಗಳ ಪ್ರವೇಶವನ್ನು ಖಾತ್ರಿಪಡಿಸುವ ತುರ್ತು ಕಾರ್ಯಕ್ರುದೊಂದಿಗೆ ಸಮಾರೋಪಗೊಂಡಿತ್ತು.

ಕೇವಲ ಹಿಂದೂ ಮಹಾಸಭಾದ ಪ್ರಯತ್ನದಿಂದಲೇ ಒಂದು ವರ್ಷದಲ್ಲಿ ಬ್ರಿಟಿಷ್ ಸಶಸ್ತ್ರಪಡೆಗಳಿಗೆ ಒಂದು ಲಕ್ಷ ಹಿಂದೂಗಳನ್ನು ನೇಮಕ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದರು. ಈ ಅವಧಿಯಲ್ಲಿ ಆರೆಸ್ಸೆಸ್ ತನ್ನ ಯುವ ಸದಸ್ಯರನ್ನು ಬ್ರಿಟಿಷ್ ಸಶಸ್ತ್ರ ಪಡೆಗಳಿಗೆ ಸೇರಲು ಪ್ರೇರೇಪಿಸಲು ಅವರನ್ನುದ್ದೇಶಿಸಿ ಮಾತನಾಡುವಂತೆ ಹಲವು ಬಾರಿ ಸಾವರ್ಕರ್‌ಗೆ ಆಹ್ವಾನ ನೀಡಿದ್ದರು.

ಅವರು ಹಿಂದೂಗಳಿಗೆ ನೀಡಿದ್ದ ಕರೆಯಲ್ಲಿ ಅಸ್ಪಷ್ಟತೆಯಿರಲಿಲ್ಲ; ‘‘ಹಿಂದೂಗಳು ಮುಂದೆ ಬಂದು ಬ್ರಿಟಿಷರ ಸೇನೆ, ವಾಯುಪಡೆ ಮತ್ತು ನೌಕಾಪಡೆ ಹಾಗೂ ಯುದ್ಧ ಸಾಮಗ್ರಿ ನಿರ್ಮಾಣ ಕಾರ್ಖಾನೆಗಳಿಗೆ ಸಾವಿ ಸಾವಿರ ಸಂಖ್ಯೆಯಲ್ಲಿ ಸೇರಿಕೊಳ್ಳಿ.’’

ಬ್ರಿಟಿಷ್ ಸಶಸ್ತ್ರಪಡೆಗಳಲ್ಲಿ ನೇಮಕಾತಿ ಬಯಸುವ ಹಿಂದೂಗಳಿಗೆ ನೆರವಾಗಲು ಸಾವರ್ಕರ್ ನಾಯಕತ್ವದಲ್ಲಿ ಹಿಂದೂ ಮಹಾಸಭಾ ದೇಶದ ವಿಭಿನ್ನ ಭಾಗಗಳಲ್ಲಿ ಉನ್ನತ ಮಟ್ಟದ ಮಂಡಳಿಗಳನ್ನು ಸಂಘಟಿಸಿತು. ಈ ಮಂಡಳಿಗಳು ಬ್ರಿಟಿಷ್ ಸರಕಾರದ ಜೊತೆ ನೇರ ಸಂಪರ್ಕದಲ್ಲಿತ್ತು ಎನ್ನುವುದು ಸಾವರ್ಕರ್ ಅವರ ಈ ಮಾತುಗಳಿಂದ ತಿಳಿಯುತ್ತದೆ. ಸಾವರ್ಕರ್ ಯುವಕರಿಗೆ ಮಾಹಿತಿ ನೀಡುತ್ತಾರೆ: ‘‘ಸೇನೆಗೆ ಸೇರಿದ ಹಿಂದೂಗಳು ಅನುಭವಿಸುವ ಕಷ್ಟಗಳು ಮತ್ತು ಸಮಸ್ಯೆಗಳನ್ನು ನಿಭಾಯಿಸಲು ಹಿಂದೂ ಮಹಾಸಭಾ ಕೇಂದ್ರೀಯ ಉತ್ತರ ಹಿಂದೂ ಸೈನ್ಯೀಕರಣ ಮಂಡಳಿಯನ್ನು ರಚಿಸಿದೆ. ಗಣಪತ್ ರೈ, ಬಿಎ, ಎಲ್‌ಎಲ್‌ಬಿ ನ್ಯಾಯವಾದಿ, 51, ಪಂಚ್‌ಕುಯ್ನಾ ರಸ್ತೆ, ಹೊಸದಿಲ್ಲಿ ಇವರ ಸಂಚಾಲಕರಾಗಿದ್ದಾರೆ. ಕೇಂದ್ರೀಯ ದಕ್ಷಿಣ ಹಿಂದೂ ಸೈನ್ಯೀಕರಣ ಮಂಡಳಿಗೆ ಎಲ್.ಬಿ ಭೋಪಟ್ಕರ್, ಎಂಎ, ಎಲ್‌ಎಲ್‌ಬಿ. ಅಧ್ಯಕ್ಷರಾಗಿದ್ದಾರೆ. ಬ್ರಿಟಿಷ್ ಸೇನೆಗೆ ಸೇರಬಯಸುವ ಅಥವಾ ಈಗಾಗಲೇ ತಮ್ಮ ಹೆಸರನ್ನು ನೀಡಿರುವ ಹಿಂದೂಗಳು ಮೇಲೆ ತಿಳಿಸಿದ ವಿಳಾಸಗಳಿಗೆ ತಮ್ಮ ದೂರುಗಳು ಮತ್ತು ಮಾಹಿತಿ ಕೋರಿ ಅರ್ಜಿಯನ್ನು ಸಲ್ಲಿಸಬಹುದು. ಸರ್ ಜ್ವಾಲಾ ಪ್ರಸಾದ್ ಶ್ರೀವಾಸ್ತವ, ಬ್ಯಾರಿಸ್ಟರ್ ಜಮ್ನಾದಾಸ್ಜಿ ಮೆಹ್ತಾ, ಬಾಂಬೆ, ವಿ.ವಿ ಕಲಿಕರ್ ಎಂಎಲ್‌ಸಿ ನಾಗ್ಪುರ ಮತ್ತು ರಾಷ್ಟ್ರೀತ ರಕ್ಷಣಾ ಮಂಡಳಿ ಅಥವಾ ಯುದ್ಧ ಸಲಹಾ ಸಮಿತಿಯ ಇತರ ಸದಸ್ಯರು ನಿಮ್ಮ ದೂರುಗಳಿಗೆ ಪರಿಹಾರ ಒದಗಿಸಲು ಾಧ್ಯವಾದಷ್ಟು ಪ್ರಯತ್ನಿಸುತ್ತಾರೆ.’’

ಬ್ರಿಟಿಷ್ ಸರಕಾರ ತನ್ನ ಯುದ್ಧ ಸಮಿತಿಗಳಲ್ಲಿ ಹಿಂದೂ ಮಹಾಸಭಾದ ನಾಯಕರಿಗೆ ಸ್ಥಾನ ನೀಡಿತ್ತು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಬ್ರಿಟಿಷ್ ಪಡೆಗಳಿಗೆ ಸೇರಲು ಮುಂದಾಗಿದ್ದ ಹಿಂದೂಗಳಿಗೆ ಸಾವರ್ಕರ್ ನೀಡುವ ಸೂಚನೆಗಳನ್ನು ಓದಿದರೆ ಅವರನ್ನು ಓರ್ವ ದೇಶಪ್ರೇಮಿ ಮತ್ತು ಸ್ವಾತಂತ್ರ ಹೋರಾಟಗಾರ ಎಂದು ಘೋಷಿಸುವವರು ನಾಚಿೆಯಿಂದ ತಲೆತಗ್ಗಿಸಬೇಕಾಗುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಒಂದು ವಿಷಯ ತಿಳಿದುಕೊಳ್ಳಬೇಕಾಗಿರುವುದೇನೆಂದರೆ, ಬ್ರಿಟಿಷ್ ಸೇನೆಯನ್ನು ಸೇರುವ ಹಿಂದೂಗಳು ಸೇನಾ ಶಿಸ್ತು ಮತ್ತು ಆದೇಶಗಳಿಗೆ ಬದ್ಧವಾಗಿರಬೇಕಾಗಿದ್ದು ಅದು ಹಿಂದೂಗಳ ಗೌರವಕ್ಕೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಮಾಡುವಂಥದ್ದಲ್ಲ ಎನ್ನುವುದ್ನು ಗಮನದಲ್ಲಿಟ್ಟುಕೊಳ್ಳಬೇಕು.

ಬ್ರಿಟಿಷ್ ಸೇನೆಯ ಅತ್ಯುನ್ನತ ವಿಭಾಗಗಳಿಗೆ ಸಂಬಂಧಪಟ್ಟಂತೆ ಬ್ರಿಟಿಷ್ ಸರಕಾರ ಸಾವರ್ಕರ್ ಜೊತೆ ನಿರಂತರ ಸಂಪರ್ಕದಲ್ಲಿತ್ತು. ಸಾವರ್ಕರ್ ಪ್ರಸ್ತಾವಿಸಿದ ಹೆಸರುಗಳ ವ್ಯಕ್ತಿಗಳು ಇದರಲ್ಲಿ ಸೇರಿದ್ದರು. ಇದು ಸಾವರ್ಕರ್ ಬ್ರಿಟಿಷ್ ಸರಕಾರಕ್ಕೆ ಕಳುಹಿಸಿರುವ ಕೃತಜ್ಞತಾ ಪತ್ರದಿಂದ ಸ್ಪಷ್ಟವಾಗುತ್ತದೆ. ಭಿಡೆಯ ಆವೃತ್ತಿ ನಮಗೆ ತಿಳಿಸುವುದೇನೆಂದರೆ,

‘‘ಈ ಟೆಲಿಗ್ರಾಫನ್ನು ಹಿಂದೂ ಮಹಾಸಭಾದ ಅಧ್ಯಕ್ಷ ಬ್ಯಾರಿಸ್ಟರ್ ವಿ.ಡಿ. ಸಾವರ್ಕರ್ ಜನರಲ್ ವವೆಲ್, ಕಮಾಂಡರ್ ಇನ್ ಚೀಫ್ ಮತ್ತು ಭಾರತದ ವೈಸ್‌ರಾಯ್‌ಗೆ ಜುಲೈ 18, 1941ರಂದು ಕಳುಹಿಸಿದ್ದಾರೆ. ಮಾನ್ಯರೇ, ರಕ್ಷಣಾ ಸಮಿತಿ ಮತ್ತು ಅದರ ಅಧಿಕಾರಿಗಳ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಕಲಿಕರ್ ಮತ್ತು ಜಮ್ನಾದಾಸ್ ಮೆಹ್ತಾರನ್ನು ನೇಮಕ ಮಾಡಿರುವುದಕ್ಕೆ ಹಿಂದೂಮಹಾಸಭಾ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತದೆ.’’

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬ್ರಿಟಿಷ್ ಆಡಳಿತದ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದ ಮುಸ್ಲಿಂ ಲೀಗ್ ಕೂಡಾ ಸರಕಾರ ರಚಿಸಿದ ರಕ್ಷಣಾ ಸಮಿತಿಗಳನ್ನು ಸೇರಲು ನಿರಾಕರಿಸಿತ್ತು. ಸಾವರ್ಕರ್ ದ್ವಿರಾಷ್ಟ್ರ ವಾದದಲ್ಲಿ ನಂಬಿಕೆಯಿಟ್ಟಿದ್ದರು ಮತ್ತು ಮುಸ್ಲಿಂ ಲೀಗ್ ಜೊತೆ ವೆುತ್ರಿ ಸರಕಾರವನ್ನು ಸ್ಥಾಪಿಸಿದರು.

ಭಗತ್ ಸಿಂಗ್ ಮತ್ತು ನೇತಾಜಿಯವರ ಸ್ವತಂತ್ರ ಪ್ರಜಾಸತ್ತಾತ್ಮಕ ಜಾತ್ಯತೀತ ಭಾರತದ ಕನಸನ್ನು ಸಾವರ್ಕರ್ ಬಹಿರಂಗವಾಗಿ ವಿರೋಧಿಸುತ್ತಿದ್ದರು. ಇದಕ್ಕೆ ವಿರೋಧವಾಗಿ ಅವರು ಸಂಪೂರ್ಣ ಹಿಂದೂ ರಾಷ್ಟ್ರಕ್ಕೆ ಆಗ್ರಹಿಸಿದ್ದರು ಮತ್ತು ಮುಸ್ಲಿಂ ಲೀಗ್‌ಗೂ ಮೊದಲೇ ಎರಡು ರಾಷ್ಟ್ರಗಳ ವಾದವನ್ನು ಮಂಡಿಸಿದ್ದರು. 1937ರಲ್ಲಿ ಅಹ್ಮದಾಬಾದ್‌ನಲ್ಲಿ ಹಿಂದೂ ಮಹಾಸಭಾದ 19ನೇ ಅಧಿವೇಶನದಲ್ಲಿ ಮಾತನಾಡುವ ವೇಳೆ ಸಾವರ್ಕರ್ ಹೀಗೆ ಹೇಳುತ್ತಾರೆ:

‘‘ಭಾರತದಲ್ಲಿ ಎರಡು ವಿರೋಧಿ ರಾಷ್ಟ್ರಗಳು ಜೊತೆಯಾಗಿ ನೆಲೆಸಿವೆೆ. ಭಾರತವು ಈಗಾಗಲೇ ಒಂದು ಸೌಹಾರ್ದಯುತ ರಾಷ್ಟ್ರವಾಗಿ ಬೆಸೆದುಕೊಂಡಿದೆ ಅಥವಾ ಅದನ್ನು ಆ ರೀತಿ ಬೆಸೆಯಬಹುದು ಎಂದು ತಿಳಿದುಕೊಳ್ಳುವ ಗಂಭೀರ ತಪ್ಪನ್ನು ಕೆಲವು ಮಕ್ಕಳಾಟಿಕೆಯ ರಾಜಕಾರಣಿಗಳು ಮಾಡುತ್ತಿದ್ದಾರೆ. ಈ ನಮ್ಮ ಉತ್ತಮ ಮನಸ್ಸಿನ ಆದರೆ ಯೋಚನೆಯಿಲ್ಲದ ಗೆಳೆಯರು ತಮ್ಮ ಕನಸುಗಳನ್ನು ನಿಜ ಎಂದು ಭಾವಿಸಿದ್ದಾರೆ. ಹಾಗಾಗಿ ಅವರು ಕೋಮು ಗೋಜಲುಗಳನ್ನು ಕಂಡು ಅಸಮಾಧಾನಗೊಳ್ಳುತ್ತಾರೆ ಮತ್ತು ಅವುಗಳನ್ನು ಕೋಮು ಸಂಘಟನೆಗಳ ಕೆಲಸ ಎಂದು ದೂರುತ್ತಾರೆ. ಆದರೆ ಈ ಕೋಮು ಪ್ರಶ್ನೆಗಳನ್ನು ನಮಗೆ ಹಿಂದೂ ಮತ್ತು ಮುಸಲ್ಮಾನರ ಮಧ್ಯೆ ಶತಮಾನಗಳಿಂದ ಇರುವ ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಷ್ಟ್ರೀಯ ವಿರೋಧಾಭಾಸವೇ ನೀಡಿದ್ದಾಗಿದೆ ಎನ್ನುವುದು ವಾಸ್ತವ. ವಾಸ್ತವಗಳನ್ನು ಅವು ಹೇಗೆ ಇವೆಯೋ ಹಾಗೆಯೇ ಧೈರ್ಯದಿಂದ ನಾವು ಎದುರಿಸುವ. ಭಾರತವನ್ನು ಇಂದು ಏಕೀಕರಣವಾದಿ ಮತ್ತು ಏಕಪ್ರಕಾರದ ರಾಷ್ಟ್ರ ಎಂದು ತಿಳಿದುಕೊಳ್ಳುವ ಹಾಗಿಲ್ಲ. ಆದರೆ ಇದಕ್ಕೆ ವಿರುದ್ಧವಾಗಿ ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಎಂಬ ಎರಡು ದೇಶಗಳಿವೆ.

ಮುಸ್ಲಿಂ ಲೀಗ್ ತನ್ನ ಪಾಕಿಸ್ತಾನ ನಿರ್ಣಯವನ್ನು 1940ರಲ್ಲಷ್ಟೇ ಜಾರಿಗೆ ತಂದಿತ್ತು ಎಂಬ ವಾಸ್ತವವನ್ನು ಇಲ್ಲಿ ಗಮನಿಸಬೇಕು. ಆದರೆ ಆರೆಸ್ಸೆಸ್ ಮಾರ್ಗದರ್ಶಕ ಸಾವರ್ಕರ್ ದ್ವಿರಾಷ್ಟ್ರವಾದವನ್ನು ಬಹಳಷ್ಟು ಮೊದಲೇ ಪ್ರಚುರಪಡಿಸಿದ್ದರು ಮತ್ತು ಕ್ವಿಟ್ ಇಂಡಿಯಾ ಚಳವಳಿಯನ್ನು ವಿಫಲಗೊಳಿಸಲು ಮುಸ್ಲಿಂ ಲೀ್ ಜೊತೆ ಮೈತ್ರಿ ಮಾಡಿಕೊಂಡಿದ್ದರು.

ಕಾನ್ಪುರದಲ್ಲಿ 1942ರಲ್ಲಿ ನಡೆದ ಹಿಂದೂ ಮಹಾಸಭಾದ 24ನೇ ಅಧಿವೇಶನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಸಾವರ್ಕರ್ ಮುಸ್ಲಿಂ ಲೀಗ್ ಜೊತೆ ಮಾಡಿಕೊಂಡ ಮೈತ್ರಿಯನ್ನು ಈ ರೀತಿ ಸಮರ್ಥಿಸಿಕೊಂಡಿದ್ದರು:

‘‘ಸಕ್ರಿಯ ರಾಜಕೀಯದಲ್ಲೂ ತಾರ್ಕಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ ನಾವು ಮುಂದೆ ಸಾಗಬೇಕು ಎನ್ನುವುದನ್ನು ಮಹಾಸಭಾ ತಿಳಿದುಕೊಂಡಿದೆ. ಸಿಂಧ್‌ನ ಇತ್ತೀಚೆಗಿನ ವಿಷಯವನ್ನೇ ತೆಗೆದುಕೊಳ್ಳಿ, ಇಲ್ಲಿ ಸರಕಾರ ರಚಿಸಲು ಕೈಜೋಡಿಸಲು ಮುಸ್ಲಿಂ ಲೀಗ್ ನೀಡಿದ ಆಹ್ವಾನಕ್ಕೆ ಒಪ್ಪಿ ಸಿಂಧ್ ಹಿಂದೂಸಭಾ ಆ ಜವಾಬ್ದಾರಿಯನ್ನು ನಿಭಾಯಿಸಿದೆ. ಬಂಗಾಳದ ಪ್ರಕರಣವೂ ಎಲ್ಲರಿಗೂ ತಿಳಿದಿರುವಂಥದ್ದು. ಕಾಂಗ್ರೆಸ್‌ಗೂ ಯಾವ ರೀತಿಯಲ್ಲೂ ಸಮಾಧಾನಪಡಿಸಲಾಗದ ಲೀಗ್ ಹೊಂದಾಣಿಕೆಯ ಮೂಲಕ ಬೃಹತ್ ಆಗಿ ಬೆಳೆಯಿತು ಮತ್ತು ಹಿಂದೂ ಮಹಾಸಭಾದ ಸಂಪರ್ಕಕ್ಕೆ ಬರುವ ಮೂಲಕ ಸಾಮಾಜೀಕರಣಗೊಂಡಿತು. ಇಲ್ಲಿ ಫಝ್ಲುಲ್ ಹಕ್ ಅವರು ಪ್ರಧಾನಿಯಾಗಿ ಮತ್ತು ಮಹಾಸಭಾದ ನಾಯಕ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ನೇತೃತ್ವದಲ್ಲಿ ಒಂದು ವರ್ಷದಿಂದ ಯಶಸ್ವಿಯಾಗಿ ಸರಕಾರ ನಡೆಸುತ್ತಿದೆ ಮತ್ತು ಇದರಿಂದ ಎರಡೂ ಸಮುದಾಯಗಳಿಗೆ ಲಾಭವಾಗಿದೆ. ಮುಂದೆ ಹಲವು ಘಟನೆಗಳು, ಹಿಂದೂ ಮಹಾಸಭಾದ ಸದಸ್ಯರು ಸರಕಾರಿ ಕಚೇರಿ ಅಥವಾ ವೈಯಕ್ತಿಕ ಲಾಭಕ್ಕಲ್ಲದೆ ಸಾಮಾನ್ಯ ಜನರ ಹಿತದೃಷ್ಟಿಯಿಂದ ರಾಜಕೀಯ ವಲಯದಲ್ಲಿ ಕೇಂದ್ರ ಸ್ಥಾನ ಪಡೆಯಲು ಪ್ರಯತ್ನಿಸಿ ಸಫಲರಾಗುತ್ತಿರುವುದನ್ನು ಸಾಬೀತುಪಡಿಸುತ್ತವೆ.’’

ಮೈತ್ರಿ ಸರಕಾರದಲ್ಲಿ ಹಿಂದೂ ಮಹಾಸಭಾದ ಎರಡನೇ ಕ್ರಮಾಂಕದ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಉಪಪ್ರಧಾನಿ ಯಾಗಿದ್ದರು. ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ದೇಶದ ವಾಯುವ್ಯ ವಲಯಗಳಲ್ಲೂ ಮೈತ್ರಿ ಸರಕಾರ ರಚಿಸಿತ್ತು.

ಕೇಸರಿ ಸಂಘಟನೆಗಳ ದಾಖಲೆಗಳಲ್ಲೂ ದೊರೆಯುವಂತಹ ಇತಿಹಾಸದ ಇಂತಹ ಅಲ್ಲಗಳೆಯಲಾಗದ ವಾಸ್ತವಗಳಿಂದ ಮಹಾನ್ ಹುತಾತ್ಮರ ಪ್ರತಿಮೆಯ ಜೊತೆ ಸಾವರ್ಕರ್ ಪ್ರತಿಮೆಯನ್ನು ಸ್ಥಾಪಿಸಿರುವುದು ಆ ಮಹನೀಯರನ್ನು ಎರಡನೇ ಬಾರಿ ಹತ್ಯೆ ಮಾಡಿರುವುದಕ್ಕೆ ಸಮ ಎಂದು ಅನಿಸುತ್ತದೆ.

ಕೃಪೆ: countercurrents.org

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)