varthabharthi

ವೈವಿಧ್ಯ

ಇಂದು ರಾಮಕೃಷ್ಣ ಹೆಗಡೆ ಹುಟ್ಟಿದ ದಿನ

ರಾಜ್ಯಗಳ ಸ್ವಾಯತ್ತೆಯ ಪ್ರತಿಪಾದಕ ರಾಮಕೃಷ್ಣ ಹೆಗಡೆ

ವಾರ್ತಾ ಭಾರತಿ : 29 Aug, 2019
ಕೆ.ಎಸ್. ನಾಗರಾಜ್, ಬೆಂಗಳೂರು

  ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ ತೀವ್ರವಾದ ಬರಗಾಲ ಬಂತು. ಆಗ ಕೇಂದ್ರ ಸರಕಾರಕ್ಕೆ ನೆರವ ನೀಡಲು ಜವಾಬ್ದಾರಿಯುತ ಸರಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತು. ಆಗಲೂ ನಿಯೋಗವನ್ನು ಕಳುಹಿಸಿ ತನಿಖೆ ಮಾಡಿ ಪರಿಹಾರ ನೀಡುವ ಮಾತನ್ನು ಕೇಂದ್ರ ಸರಕಾರ ಹೇಳಿತು. ಈಗ ಮತ್ತೆ ರಾಜ್ಯದಲ್ಲಿ ಪ್ರವಾಹ ಬಂದು ಲಕ್ಷಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ. 17 ಜಿಲ್ಲೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ನೂರಾರು ತಾಲೂಕುಗಳಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಈಗಲೂ ಸಹ ಕೇಂದ್ರ ಸರಕಾರ ನಿಯೋಗವನ್ನು ಕಳುಹಿಸಿಕೊಟ್ಟು ತಜ್ಞರ ವರದಿಯ ಆಧಾರದ ಮೇಲೆ ಪರಿಹಾರ ನೀಡುವ ಮಾತುಗಳನ್ನಾಡುತ್ತಿದೆ. ಅಂದರೆ, ರಾಜ್ಯದಲ್ಲಿರುವ ಒಂದು ಜವಾಬ್ದಾರಿಯುತ ಸರಕಾರ ತನ್ನ ರಾಜ್ಯದ ಪರಿಸ್ಥಿತಿಯ ಬಗ್ಗೆ ಸ್ಥಳೀಯ ಜಿಲ್ಲಾ ವ್ಯವಸ್ಥೆಯ ಅಡಿಯಲ್ಲಿ ವರದಿಯನ್ನು ನೀಡಿದರೆ ಅದನ್ನು ನಂಬಿ ಪರಿಹಾರವನ್ನು ನೀಡುವುದನ್ನು ಬಿಟ್ಟು ತಮ್ಮ ತಂಡವನ್ನು ಕಳುಹಿಸಿಕೊಡುವುದಾಗಿ ಹೇಳುವ ಮಾತು ತುಂಬಾ ಅರ್ಥಹೀನವಾದದ್ದು. ಇದು ರಾಜ್ಯ ಸರಕಾರಗಳ ಸ್ವಾಯತ್ತೆಗೆ ಧಕ್ಕೆಯಾಗುವ ಮಾತು. ಸರಕಾರದ ಮಾತಿನ ಮೇಲೆ ನಂಬಿಕೆ ಇಲ್ಲ ಎಂದರೆ ಇಲ್ಲಿ ಆಳುತ್ತಿರುವವರೆಲ್ಲರೂ ಸುಳ್ಳುಗಾರರೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತೆ ಬೇಕು ಎಂದು ಪ್ರಥಮ ಬಾರಿಗೆ ದೇಶದಲ್ಲಿ ಕೇಂದ್ರದ ವಿರುದ್ಧ ಧ್ವನಿ ಎತ್ತಿ ಇದಕ್ಕಾಗಿ ಸಮಾನ ಮನಸ್ಕ ಮುಖ್ಯಮಂತ್ರಿಗಳ ಸಭೆಯನ್ನು ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸ್ವಾಯತ್ತೆಯ ಬಗ್ಗೆ ಶಿಫಾರಸುಗಳನ್ನು ಮಾಡಿರುವ ಸರಕಾರಿ ಆಯೋಗದ ಅಂಶಗಳನ್ನು ಅನುಷ್ಠಾನಗೊಳಿಸಬೇಕೆಂದು ಮಾತನಾಡಿದವರು ರಾಮಕೃಷ್ಣ ಹೆಗಡೆ. ಇಂದು ಅವರ ನೆನಪು ಇಂತಹ ಾರಣಗಳಿಗಾಗಿ ಕಾಡುತ್ತದೆ.

ಪ್ರಥಮ ಬಾರಿಗೆ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯದಲ್ಲಿ ಸ್ಥಾಪಿಸಿ ಲೋಕಪಾಲ ಮಸೂದೆಯ ಚರ್ಚೆಗೆ ಮತ್ತು ಲೋಕಪಾಲ ನೇಮಕವಾಗಲು ಪರೋಕ್ಷವಾಗಿ ನಾಂದಿ ಹಾಡಿದವರು ಇವರು. ದೇಶದಲ್ಲಿ ಪ್ರಥಮ ಬಾರಿಗೆ ಅಧಿಕಾರವಿಕೇಂದ್ರೀಕರಣದ ನಿಜವಾದ ವ್ಯವಸ್ಥೆಯನ್ನು ಜಾರಿಗೆ ತರುವ ಸಲುವಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ತಂದು ಇಡೀ ದೇಶದಲ್ಲಿಯೇ ಸಂವಿಧಾನಕ್ಕೆ ಅಧಿಕಾರವಿಕೇಂದ್ರೀಕರಣದ ಕಾರಣಕ್ಕಾಗಿ ತಿದ್ದುಪಡಿ ಮಾಡುವಂತೆ ಪ್ರೇರೇಪಣೆ ನೀಡಿದವರು ಇವರು. ಒಣಭೂಮಿ ಬೇಸಾಯದ ವಿಚಾರದಲ್ಲಿ ಪ್ರಥಮ ಬಾರಿಗೆ ಗಮನವನ್ನು ಹರಿಸಿದವರು ಇವರು. ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮತದಾನದ ವಯಸ್ಸನ್ನು 18 ವರ್ಷಕ್ಕೆ ಇಳಿಸಿ ತನ್ಮೂಲಕ ದೇಶದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿಯೂ ಸಹ ಮತದಾನದ ಹಕ್ಕನ್ನು 18 ವರ್ಷಕ್ಕೆ ನೀಡುವ ಬಗ್ಗೆ ಕಾನೂನು ರೂಪಿಸಲು ಕಾರಣಕರ್ತರಾದವರು ಇವರು. ದೇಶದಲ್ಲಿಯೇ ಪ್ರಥಮ ಬಾರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಕೊಡುವುದರ ಮೂಲಕ ಇಂದು ದೇಶದಲ್ಲಿ ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಚರ್ಚೆಗಳು ಆರಂಭವಾಗಲು ಇವರೂ ಪರೋಕ್ಷ ಕಾರಣಕರ್ತರು. ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭವಾದಾಗ ಅದರ ವಿರುದ್ಧ ಹೋರಾಟವನ್ನು ಸಂಘಟಿಸಿ ದೇಶದಲ್ಲಿ ಪಕ್ಷಾಂತರ ನಿಷೇಧ ಕಾನೂನು ಜಾರಿ ಮಾಡುವಲ್ಲಿ ಇವರ ಪ್ರೇರಣೆಯೂ ಇದೆ.

 ಕರ್ನಾಟಕ ರಾಜ್ಯದಲ್ಲಿ 1983ರಿಂದ 1988ರವರೆಗೆ ಮುಖ್ಯಮಂತ್ರಿಯಾಗಿ ಹತ್ತು ಹಲವಾರು ವಿಚಾರಗಳಲ್ಲಿ ಮೊದಲಿಗರಾಗಿ ಹೊಸ ರಾಜಕೀಯ ಸಂಸ್ಕೃತಿಗೆ ಕಾರಣಕರ್ತರಾದವರು ಇವರು. ವಂಶಪಾರಂಪರ್ಯ ರಾಜಕಾರಣದ ವಿರುದ್ಧ ತಮ್ಮ ಬದುಕಿನ ಕೊನೆಯ ಕ್ಷಣದ ತನಕ ಕಟಿಬದ್ಧರಾಗಿ ನಡೆದುಕೊಂಡವರು. ಸಮಾಜದ ಎಲ್ಲ ವರ್ಗದ ಜನರ ಚಿಂತನೆಯನ್ನು ಮಾಡುತ್ತಾ, ವಿವಿಧ ಸಮಾಜದ ಪ್ರತಿಭಾವಂತ ಯುವ ನಾಯಕರನ್ನು ಪ್ರೋತ್ಸಾಹಿಸಿದವರು. ರಾಜ್ಯದಲ್ಲಿ ಎರಡನೇ ಹಂತದ ನಾಯಕತ್ವ ಬೆಳೆಯಲು ನೀರೆರೆದವರು. ಮಹಾತ್ಮ್ಮಾ ಗಾಂಧೀಜಿಯವರ ಆಶಯವನ್ನು ಒಪ್ಪಿಕೊಂಡು ವಿನೋಬಾ ಬಾವೆಯವರ ಅನುಯಾಯಿಯಾಗಿ ನೆಹರೂ ಆಡಳಿತಾತ್ಮಕ ಚಿಂತನೆಗಳ ಅಡಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದವರು. ರಾಮಕೃಷ್ಣ ಹೆಗಡೆ ನಿಧನರಾಗಿ 15 ವರ್ಷಗಳಾದರೂ ರಾಜಕೀಯ ಕ್ಷೇತ್ರದಲ್ಲಿ ಒಂದಲ್ಲಾ ಒಂದು ವಿಚಾರಗಳಿಗಾಗಿ ಅವರ ಹೆಸರು ಮತ್ತೆ ಮತ್ತೆ ಪ್ರಸ್ತಾಪವಾಗುತ್ತಿದೆ. ರಾಮಕೃಷ್ಣ ಹೆಗಡೆಯವರ ಸುದೀರ್ಘವಾದ ಸಾರ್ವಜನಿಕ ಜೀವನ ಸ್ವಾತಂತ್ರ್ಯ ಹೋರಾಟದ ಮೂಲಕ ಆರಂಭವಾಗಿ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರ ಸರಕಾರಗಳಲ್ಲಿ ಮಂತ್ರಿಯಾಗಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ, ರಾಜ್ಯಸಭಾ ಸದಸ್ಯರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಲೋಕಶಕ್ತಿಯ ಸ್ಥಾಪಕರಾಗಿ ಹಲವಾರು ಹಂತದಲ್ಲಿ ದುಡಿದವರು. ಇವೆಲ್ಲಕ್ಕಿಂತ ಮಿಗಿಲಾಗಿ ಭಾರತ ದೇಶದಲ್ಲಿ ಪರ್ಯಾಯ ರಾಜಕೀಯ ಸಂಘಟನೆಗೆ 1988ನೇ ಇಸವಿಯಲ್ಲಿ ಇವರ ಶ್ರಮದಿಂದ ಸ್ಥಾಪಿಸಲ್ಪಟ್ಟ ಜನತಾದಳ ದೇಶದ ರಾಜಕಾರಣದಲ್ಲಿ ಹಲವಾರು ತಿರುವುಗಳಿಗೆ ಕಾರಣವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)