varthabharthiಅನುಗಾಲ

ಇದು ಭಾರತ-ಇದು ರಾಮಾಯಣ

ವಾರ್ತಾ ಭಾರತಿ : 29 Aug, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಈಗ ತುರ್ತುಸ್ಥಿತಿ ಅಧಿಕೃತವಾಗಿ ಜಾರಿಯಲ್ಲಿಲ್ಲ. ಆದರೆ ಅದರ ಎಲ್ಲ ಲಕ್ಷಣಗಳನ್ನು ತುಂಬಿಕೊಂಡ ಸುಖೀರಾಜ್ಯವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲವೂ ಸಾಮತವಾಗಿದೆ; ಸರಕಾರದ ನಿಯಂತ್ರಣದಲ್ಲಿದೆ. ರಾಹುಲ್ ಗಾಂಧಿ ಹೇಳಿದ ಉದ್ದಗಲದ ಭೂಭಾಗ ಮಾತ್ರವಲ್ಲ, ಅಲ್ಲಿರುವ ಜನರೂ ಸೇರಿ ದೇಶವಾಗುತ್ತದೆ ಎಂಬ ಮಾತುಗಳನ್ನು ಮುಂದಿನ ತಲೆಮಾರು ಬಹುಕಾಲ ನೆನಪಿನಲ್ಲಿಟ್ಟುಕೊಳ್ಳಬೇಕಾದೀತು.

ಕರಾವಳಿಯ ತೆಂಕು ತಿಟ್ಟು ಯಕ್ಷಗಾನ ಬಯಲಾಟದಲ್ಲಿ ಬಲಗಳೆಂಬ ಪುಂಡುವೇಷಗಳಿರುತ್ತವೆ. ಇವು ದೇವೇಂದ್ರ ನೊಂದಿಗೆ ರಂಗಸ್ಥಳಕ್ಕೆ ಬರುವ ದಿಕ್ಪಾಲಕರಾಗಿರಬಹುದು, ಅಥವಾ ಅಸುರರರಸಿನ ಪಡೆಗಳಿರಬಹುದು. ಇವುಗಳಿಗೆ (ಅಥವಾ ಗೌರವಪೂರ್ವಕವಾಗಿ ಹೇಳುವುದಾದರೆ ‘ಇವರಿಗೆ’) ಮಾತನಾಡಲು ಹೆಚ್ಚು ಅವಕಾಶವಿರುವುದಿಲ್ಲ. ಒಂದೋ ಎರಡೋ ವೀರರಸದ ಪದ್ಯಗಳಿಗೆ ಕುಣಿಯುವುದೇ ಇವರ ಬಂಡವಾಳ. ನಾಟ್ಯವೇ ಇವರ ನಟನೆ. ಈ ಪಾತ್ರಗಳಿಗೆ ಹೆಚ್ಚಾಗಿ ಮೇಳ ಸೇರಿದ ಹೊಸಬರನ್ನು ಇಲ್ಲವೇ ತೀರ ಕಿರಿಯರನ್ನೋ ಮೇಳೈಸುತ್ತಾರೆ. ಈ ಮಂದಿ ಶಕ್ತಿಮೀರಿ ಹೂಂಕರಿಸಿ ಹಾರುತ್ತಾರೆ, 50-100 ಹೀಗೆ ಗುಪ್ಪುಗಳ ಸಂಖ್ಯಾಬಲದಲ್ಲಿ ತಿರುಗುತ್ತಾರೆ, ಈ ಗುಪ್ಪುಗಳಿಗೆ ಪ್ರೇಕ್ಷಕರನೇಕರ ಕೈಚಪ್ಪಾಳೆಯೇ ಇವರಿಗೆ ಬಹುಮಾನ. ಹೀಗೆ ಕುಣಿದರೆ ಅನೇಕ ಬಾರಿ ಮುಖ್ಯ ಪಾತ್ರಗಳಿಗಿಂತಲೂ ಇವರಿಗೆ ಬೇಡಿಕೆ ಹೆಚ್ಚು. ಸ್ವಲ್ಪ ಅರ್ಥ ಹೇಳಲು ಬಂದರೆ ಮುಂದೆ ಕೃಷ್ಣ-ಬಲರಾಮ, ಅಭಿಮನ್ಯು, ಏಕಲವ್ಯ ಮುಂತಾದ ಪಾತ್ರಗಳು ಸಿಗಬಹುದೆಂಬ ಮತ್ತು ಮೇಳದ ಯಜಮಾನರು ಮೆಚ್ಚಿ ಪಾತ್ರದಲ್ಲಿ ಮತ್ತು ಸಂಬಳದಲ್ಲಿ ಭಡ್ತಿ ನೀಡುತ್ತಾರೆಂಬ ವಿಶ್ವಾಸ. ಭಾರತೀಯತೆಗೆ, ನಮ್ಮ ಪುರಾಣಗಳಿಗೆ, ಚರಿತ್ರೆಗಳಿಗೆ, ಹೊಸ ವ್ಯಾಖ್ಯಾನ ಬರೆಯಲಾಗುತ್ತಿದೆ. ಸದ್ಯ ಭಾರತೀಯ ಜನತಾಪಕ್ಷದಲ್ಲಿ ಇಂತಹ ಪುಂಡುವೇಷಗಳು ಎಲ್ಲೆಡೆ ವಿಜೃಂಭಿಸುತ್ತಿವೆ. ಹೀಗೆ ನಡೆದುಕೊಂಡರೆ ಮಾತ್ರ ಸರ್ವೋಚ್ಚ ನಾಯಕರುಗಳ ಗಮನ ತಮ್ಮ ಮೇಲೆ ಬಿದ್ದೀತೆಂಬ ವಿಶ್ವಾಸ. ಇದಕ್ಕಾಗಿ ಎಲ್ಲರೂ ಒಂದು ಕೈಯ್ಯಲ್ಲಿ ಬೆಂಕಿ ಪೊಟ್ಟಣವನ್ನೂ ಇನ್ನೊಂದು ಕೈಯಲ್ಲಿ ಸೀಮೆಎಣ್ಣೆ/ಪೆಟ್ರೋಲ್ ಮುಂತಾದ ಬೆಂಕಿಹತ್ತುವ ಸಾಧನಗಳನ್ನು ಹಿಡಿದು ಆರ್ಭಟಿಸುತ್ತ ಸುತ್ತುತ್ತಿದ್ದಾರೆ. ಇವರೇ ಈಗ ಭಾರತದ ಕಥಾನಾಯಕರು. ಇವರಿಗೆ ಸಾಥ್ ನೀಡುವಂತೆ ನಮ್ಮ ಅನೇಕ ಮಾಧ್ಯಮ ಮಿತ್ರರು ಸುಡುಕಾಗದ ಹಿಡಿದು ನಡೆದಾಡುತ್ತಿದ್ದಾರೆ. ಸಂಸದ ಅನಂತಕುಮಾರ್ ಹೆಗಡೆ, ಇದೀಗ ಕರ್ನಾಟಕದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ನಿಯೋಜಿತರಾದ ಸಂಸದ ನಳಿನ್ ಕುಮಾರ್‌ಕಟೀಲು ಮುಂತಾದವರ ಉರಿಬೆಂಕಿಯ ಉಗುಳನ್ನು ಮೀರಿಸುವವರಂತೆ ಈಗ ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಯೆಂದು ಬಿಂಬಿಸಿಕೊಳ್ಳುತ್ತಿರುವ ಸಂತೋಷ್ ಎಂಬವರು ಬೆಂಕಿ ಹಚ್ಚುವ ಕಪಿಗಳಾಗಬಲ್ಲೆವು ಎಂಬ ಮಾತುಗಳನ್ನು ನೇರವಾಗಿ ಹೇಳಿದ್ದಾರೆ. ನಂಬಿಕೆಗೆ ನಿಷ್ಠರಾಗಿ ಮೆಟ್ಟಲು ಹತ್ತಿ ಹೋಗುವವರ ಮಧ್ಯೆ ನೇರ ‘ಲಿಫ್ಟ್’ ಹತ್ತಿ ಮೇಲ್ಮಾಳಿಗೆಗೆ ಹತ್ತಿರವಾಗಲು ಹೀಗೆ ಬೆಂಕಿ ಹಚ್ಚುವ ತಂತ್ರ ಬಲು ಸಹಕಾರಿಯೆಂಬಂತಿದೆ. ಒಟ್ಟಿನಲ್ಲಿ ‘‘ಮರ್ಕಟಸ್ಯ ಸುರಾಪಾನಂ...’’ (ಮೊದಲೇ ಮಂಗ, ಮೇಲೆ ಸುರಾಪಾನ, ಸಾಲದ್ದಕ್ಕೆ ಅಮಾವಾಸ್ಯೆಯ ಕತ್ತಲು, ಜೊತೆಗೆ ಭೂತ ಸಂಚಾರ! ಎಂಬ ಅರ್ಥವುಳ್ಳ) ಸಂಸ್ಕೃತ ಸುಭಾಷಿತವು ರಾಷ್ಟ್ರಗೀತೆಯಾಗಲು ಹೊರಟಿದೆ. ಅರುಣ್ ಜೇಟ್ಲಿ ಸತ್ತಾಗ ಅವರ ವೈಯಕ್ತಿಕ ಪ್ರಶಂಸೆಗಿಳಿದದ್ದು ಮಾತ್ರವಲ್ಲ, ಅವರೇ ತಮ್ಮ ಪ್ರಾತಃಸ್ಮರಣೀಯ ಬದುಕೆಂಬಂತೆ ಮಾತನಾಡಿದ ಮಾಧ್ಯಮಿಗಳು ರಾಜಕೀಯ ಮತ್ತು ಬಹಿರಂಗ ಜಗತ್ತಿನ ಅನೈತಿಕ ಸಂಬಂಧಗಳ ಜೀವಂತ ಉದಾಹರಣೆಗಳಾಗುತ್ತಿದ್ದಾರೆ.

ಇತ್ತೀಚೆಗೆ ಅನಂತ ಕುಮಾರ್, ಪಾರಿಕ್ಕರ್, ಸುಶ್ಮಾ ಸ್ವರಾಜ್, ಅರುಣ್ ಜೇಟ್ಲಿ ಮುಂತಾದ ಭಾರತೀಯ ಜನತಾ ಪಕ್ಷ ಸರಕಾರದ ಕೆಲವು ನಾಯಕರು ಗತಿಸಿದರು. ಯಾರ ಸಾವೇ ಆಗಲೀ ಸಂಭ್ರಮಿಸುವ ಸಂಗತಿಯಲ್ಲ. ವೈಯಕ್ತಿಕವಾಗಿ ಈ ಎಲ್ಲ ನಾಯಕರೂ ಜನಪ್ರಿಯರೇ. ಅದು ಪಕ್ಷಾಧಾರಿತವಲ್ಲ; ಮತಾಧಾರಿತವೂ ಅಲ್ಲ. ಆದರೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಎಂಬ ಭಯಂಕರ ನಾಯಕಿ ಮಾತ್ರ ಈ ಸಾವುಗಳು ಪ್ರತಿಪಕ್ಷಗಳ ಮಾಟ-ಮಂತ್ರಗಳಿಂದಾಗಿ ಎಂಬ ಅಪ್ಪಟ ‘ಭಾರತೀಯ’ ಕಾರಣವನ್ನು ಹುಡುಕಿದ್ದಾಳೆ. ಮೈಕಾ ಸಿಂಗ್ ಪಾಕಿಸ್ತಾನದಲ್ಲಿ ಕಾರ್ಯಕ್ರಮವನ್ನು ನೀಡಿದ್ದೇ ಒಂದು ದೇಶದ್ರೋಹವೆಂಬಂತೆ ವರದಿಯಾಗುತ್ತಿದೆ. ಇಲ್ಲಿನ ಸ್ವಘೋಷಿತ ದೇಶಭಕ್ತರೂ ದೇಶಭಕ್ತಿಯ ಉತ್ಪಾದಕ ಸಂಸ್ಥೆಗಳೂ ನಮ್ಮ ಅಕ್ಷಾಂಶ-ರೇಖಾಂಶ ಗಡಿಗಳನ್ನು ಕಲೆ, ಸಾಹಿತ್ಯ, ಸಂಗೀತ ಮತ್ತು ಮಾನವತ್ವದ ಮಿತಿಗಳೆಂದು ಬಗೆದು ಭಿನ್ನಧ್ವನಿಗಳನ್ನು ಅಡಗಿಸಲು ಸರ್ವ ಪ್ರಯತ್ನ ಮಾಡುತ್ತಿವೆ. ಇನ್ನೊಂದೆಡೆ ಚರಿತ್ರೆಯನ್ನು ತಮಗೆ ಬೇಕಾದಂತೆ ಬಗ್ಗಿಸಲು ಎಲ್ಲಿಲ್ಲದ ಪ್ರಯತ್ನಗಳು ಸಾಗುತ್ತಿವೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಚರಿತ್ರೆಯನ್ನು ಎಡಪಂಥಕ್ಕನುಸಾರವಾಗಿ ರಚಿಸಲಾಯಿತೆಂಬುದು ಇವರ ವಾದ. ಇದನ್ನು ವಿಚಿತ್ರವಾಗಿ ಮತ್ತು ಕುತರ್ಕದಿಂದ ಖಂಡಿಸುವುದು ಇಂದು ಭಾರತೀಯತೆಯೆಂಬಂತಾಗಿದೆ. ತಾಜ್‌ಮಹಲ್ ತೇಜೋಮಹಾಲಯವಾಗಿತ್ತು ಎಂದು ಪಿ.ಎನ್. ಓಕ್ ಎಂಬ ಚರಿತ್ರಕಾರರು ಹೇಳುತ್ತಿದ್ದರು ಮತ್ತು ಅವರು ಇಂತಹ ಅತಿಗಳಿಗಾಗಿಯೇ ದೇಶಭಕ್ತ ಸಂಘಟನೆಗಳಿಂದ ಮಾನಿತರಾಗಿದ್ದರು. 1969ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲಿಳಿದದ್ದನ್ನು ನಮ್ಮೂರಿನ ಹಿರಿಯರೊಬ್ಬರು ಒಪ್ಪುತ್ತಲೇ ಇರಲಿಲ್ಲ. ಒಂದು ವೇಲೆ ಚಂದ್ರನ ಮೇಲೆ ಮನುಷ್ಯ ಇಳಿದದ್ದೇ ಆದರೆ ಅದು ಕಾಣಬೇಕಿತ್ತಲ್ಲ ಎಂಬುದು ಅವರ ವಾದ. ಅವರಿಗೆ ಭೂಮಿ ಮತ್ತು ಚಂದ್ರನ ನಡುವಣ ದೂರ ಗ್ರಹಮಾನ ಇವೆಲ್ಲ ಅರ್ಥವಾಗುತ್ತಿರಲಿಲ್ಲ. ಇನ್ನೂ ಮುಂದೆ ಹೋಗಿ ಅವರು ಚಂದ್ರನಿರುವುದು ಶಿವನ ತಲೆಯ ಮೇಲೆ; ಆದ್ದರಿಂದ ಶಿವನ ತಲೆಯನ್ನು ಮುಟ್ಟದೆ ಚಂದ್ರನನ್ನೇರುವುದು ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದರು. ಲೌಕಿಕಕ್ಕೆ ಬಂದರೆ ಅವರು ಸದಾ ಕಾಂಗ್ರೆಸ್ ಪರ. ಬ್ರಿಟಿಷರು ಈ ದೇಶವನ್ನು ಬಿಟ್ಟುಹೋಗುವಾಗ ದೇಶವನ್ನು ಚೆನ್ನಾಗಿ ಆಳಿ ಸುಖವಾಗಿರಿ ಎಂದು ನೆಹರೂ ಕುಟುಂಬಕ್ಕೆ ಹೇಳಿ ಹೋಗಿದ್ದಾರೆ ಎಂದು ಅವರು ತರ್ಕಿಸುತ್ತಿದ್ದರು. ಇವೆಲ್ಲವನ್ನು ಆಲಿಸುತ್ತಿದ್ದ ನಾವು ಈ ಹಿರಿಯರ ಹುಂಬತನದ ಹಿರಿಮೆಯನ್ನು ಸಹಿಸಿಕೊಂಡು ಹಾಸ್ಯಮಯ ಸಂತೋಷದಿಂದ ಮರಳುತ್ತಿದ್ದೆವು.

ಆದರೆ ಇಂತಹ ಮೂರ್ಖ ವಾದಗಳನ್ನು ಮೈಲಿಗಟ್ಟಲೆ ಅಂತರದಿಂದ ಮೀರಿಸುವಂತೆ ನಮ್ಮ ಕೆಲವು ಸಂಸದರು, ಕೇಂದ್ರ ಮಂತ್ರಿಗಳು ಗಣಪತಿಯ ಕಾಲದಲ್ಲಿ ಪ್ಲಾಸ್ಟಿಕ್ ಸರ್ಜರಿಯಿತ್ತೆಂಬುದು, ಅಣುಬಾಂಬು, ವಿಮಾನ ಮುಂತಾದವು ನಮ್ಮಲ್ಲೇ ಮೊತ್ತಮೊದಲಿಗೆ ಕಂಡುಹಿಡಿಯಲಾಯಿತೆನ್ನುತ್ತಿದ್ದಾರೆ. (ಇನ್ನೂ ಅನೇಕ ವಾದಗಳಿವೆ ಅವೆಲ್ಲ ಒಂದು ನಗೆಲೇಖನಕ್ಕೆ ವಸ್ತುವಾಗಬಹುದಾದ್ದರಿಂದ ಅವನ್ನು ಇಲ್ಲಿ ಹೇಳುವುದು ಉಚಿತವಾಗಲಾರದು!)

ಇಂತಹವರ ನಡುವೆ ಪರಾಕು ಪಂಪನ್ನೊತ್ತಿಯೊತ್ತಿ ನಡು ಬಗ್ಗಿರುವ ಬೊಗಳು ಸನ್ನಿಯ ಹೊಗಳುಭಟ್ಟರ ನಡುವೆ ಕೆಲವು ಚಿಂತಕರಾದರೂ ತಲೆಯೆತ್ತಿ ನೆಟ್ಟಗೆ ನಡೆಯುತ್ತಿದ್ದಾರೆ ಮತ್ತೆ ತಮ್ಮದೇ ಉಸುರನ್ನು ಉಸುರುತ್ತಾರೆ ಎಂಬುದು ಸದ್ಯ ಚೇತೋಹಾರಿಯಾದ ಸಂಗತಿ. ಮುಖ್ಯಮಂತ್ರಿಯೊಬ್ಬರು ನಿಮ್ಮ ವರದಿಗಾರರು ಚೆನ್ನಾಗಿ ಕೆಲಸಮಾಡುತ್ತಿದ್ದಾರೆ ಎಂದು ಹೇಳಿದ ಕಾರಣಕ್ಕೇ ಹಿಂದೆ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಮಾಲಕರಾದ ರಾಮನಾಥ್ ಗೋಯೆಂಕಾ ತಮ್ಮ ವರದಿಗಾರರೊಬ್ಬರನ್ನು ವಜಾ ಮಾಡಿದ ಪ್ರಸಂಗ ಇಂದು ಊಹಾತೀತ. ರಾಜಕಾರಣಿಗಳು ಯಾರನ್ನು ದೂಷಿಸುತ್ತಾರೋ ಅವರು ಒಳ್ಳೆಯ ಪತ್ರಕರ್ತರೆಂದು ಗೋಯೆಂಕಾ ಹೇಳುತ್ತಿದ್ದರಂತೆ.

ಕನ್ಹಯ್ಯ ಕುಮಾರ್ ಮಾತ್ರವಲ್ಲ, ಕಳೆದ ವರ್ಷ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ, ಜಮ್ಮು ಮತ್ತು ಕಾಶ್ಮೀರದ ಕುರಿತ ಕೇಂದ್ರ ಸರಕಾರದ ನಡೆಯನ್ನು ಪ್ರತಿಭಟಿಸಿ ರಾಜೀನಾಮೆ ಕೊಟ್ಟ ಐಎಎಸ್ ಅಧಿಕಾರಿ ಷಾ ಫೈಸಲ್, ಮೊನ್ನೆಯಷ್ಟೇ ರಾಜೀನಾಮೆ ನೀಡಿದ ಇನ್ನೊಬ್ಬ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಇವರೆಲ್ಲ ಭಾರತದ ಭವಿಷ್ಯದ ಜೀವನಾಡಿಗಳು. ನಮ್ಮ ಸ್ವಘೋಷಿತ ಸಂವೇದನಾಶೀಲ ಚಿಂತಕರು, ಸಾಹಿತಿಗಳು ಅಧಿಕಾರಸ್ಥರ, ಆಯ್ಕೆದಾರರ ಹಿಂದೆ ಪ್ರಶಸ್ತ್ತಿ, ಬಹುಮಾನಗಳಿಗೆ ಎಡತಾಕುವ ಈ ಸಂದರ್ಭದಲ್ಲಿ ಬದುಕಿನ ತಂತನ್ನು ಕಡಿದುಕೊಂಡೂ ತಾವು ನಂಬಿದ ಮೌಲ್ಯಗಳ ಸಮರ್ಥನೆಗೆ ಚಾಚಿಕೊಳ್ಳುವ ಕೆಲವೇ ಮಂದಿ ಪ್ರಾಯಃ ಮುಂದಿನ ಸ್ವಾತಂತ್ರ್ಯ ಹೋರಾಟದ ನಾಯಕರಾಗಬಲ್ಲವರು.

ಈಗ ತುರ್ತುಸ್ಥಿತಿ ಅಧಿಕೃತವಾಗಿ ಜಾರಿಯಲ್ಲಿಲ್ಲ. ಆದರೆ ಅದರ ಎಲ್ಲ ಲಕ್ಷಣಗಳನ್ನು ತುಂಬಿಕೊಂಡ ಸುಖೀರಾಜ್ಯವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲವೂ ಸಾಮತವಾಗಿದೆ; ಸರಕಾರದ ನಿಯಂತ್ರಣದಲ್ಲಿದೆ. ರಾಹುಲ್ ಗಾಂಧಿ ಹೇಳಿದ ಉದ್ದಗಲದ ಭೂಭಾಗ ಮಾತ್ರವಲ್ಲ, ಅಲ್ಲಿರುವ ಜನರೂ ಸೇರಿ ದೇಶವಾಗುತ್ತದೆ ಎಂಬ ಮಾತುಗಳನ್ನು ಮುಂದಿನ ತಲೆಮಾರು ಬಹುಕಾಲ ನೆನಪಿನಲ್ಲಿಟ್ಟುಕೊಳ್ಳಬೇಕಾದೀತು.

ನಮ್ಮ ಸೃಜನಶೀಲ ಮಂದಿ ಈ ದೇಶದಲ್ಲಿ ನಡೆಯುವುದಕ್ಕೂ ತಮ್ಮ ಬದುಕಿಗೂ ಸಂಬಂಧವೇ ಇಲ್ಲವೆಂಬಂತೆ ನಡೆದುಕೊಳ್ಳುವುದು ಬಹು ವಿಚಿತ್ರ ದುರಂತ. ಇಂದು ಯಾರಾದರು ನಮ್ಮ ಪುರಾಣಗಳನ್ನೋ ದೇವರುಗಳನ್ನೋ ಟೀಕಿಸಿದರೆ ಅವರಿಗೆ ಪಾಕಿಸ್ತಾನಕ್ಕೆ ಟಿಕೇಟು ಖರೀದಿಸಿಕೊಡಲು ನಮ್ಮ ಅವಿದ್ಯಾವಂತ ಮಾತ್ರವಲ್ಲ ವಿದ್ಯಾವಂತ ಬುದ್ಧಿವಂತರೂ ಕ್ಯೂ ನಿಲ್ಲುತ್ತಾರೆ. ಸುಮ್ಮನೆ ಹಳೆಯದನ್ನು ನೆನಪಿಸಿಕೊಳ್ಳುತ್ತ ಹೋದರೆ ಕಳೆದ ತಲೆಮಾರಿನ ಒಬ್ಬ ಶ್ರೇಷ್ಠ ಬರಹಗಾರರಾಗಿದ್ದ ವಿ.ಜಿ.ಭಟ್ಟರು ಈಗ ಇದ್ದಿದ್ದರೆ ಇಷ್ಟರಲ್ಲೇ ಪಾಕಿಸ್ತಾನಕ್ಕೆ ರವಾನೆಯಾಗುತ್ತಿದ್ದರು ಅಥವಾ ಗುಂಪು ಥಳಿತಕ್ಕೆ ತುತ್ತಾಗುತ್ತಿದ್ದರು. ಲೇಖನವು ತೀರಾ ಗಂಭೀರ ಮತ್ತು ವಿಷಾದವಾಗದಂತೆ ಅವರ ಒಂದು ಪುಟ್ಟ ಕಥೆಗಳ ಸ್ವಾರಸ್ಯವನ್ನು ಹೇಳಿ ಈ ಲೇಖನ ಮುಗಿಸುತ್ತೇನೆೆ:

ಕಥೆ: ‘ರಾಮರಾಜ್ಯ’

ಇದು ರಾಮನು ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ಆನಂತರದ ಕಥೆ. ತನಗೆ ನೆರವಾದ ಕಪಿಕುಲವನ್ನು ಕೈಬಿಡದೆ ಅವರಿಗೆಲ್ಲ ಒಂದೊಂದು ಹುದ್ದೆಯನ್ನು ರಾಮನು ನೀಡಲಾರಂಭಿಸುತ್ತಾನೆ. ‘‘ಭಕ್ತಶಿಖಾಮಣಿಯಾದ ಹನುಮಂತನಂತೂ ಗಿಡದ ತುತ್ತ ತುದಿಗೆ ಕುಳಿತು ಟುರ್ ಎಂದು ಹುಕುಂ ಬಜಾಯಿಸಹತ್ತುತ್ತಾನೆ.’’ ಅವನಿಗೆ ‘ಸರ್ವ ಭಾಷಾ ಕೋವಿದ’ ಎಂಬ ಬಿರುದು ಸಿಕ್ಕುತ್ತದೆ! ಪ್ರತಿಯೊಬ್ಬ ಕಪಿಗೂ ನೀವು ನಮ್ಮಾಡನೆ ಎಷ್ಟು ಕಾಲವಿದ್ದಿರಿ, ಲಂಕೆಯ ಎಷ್ಟು ಮನೆಗಳನ್ನು ಸುಟ್ಟಿರಿ ಎಂಬ ಅರ್ಹತೆಯ ಮೇಲೆ ಹುದ್ದೆಗಳು ನಿರ್ಮಾಣವಾಗುತ್ತವೆ. (ಇಂದಿನ ಕರಸೇವೆ, ಅಯೋಧ್ಯೆ, ಬೆಂಕಿ ಹಚ್ಚುವುದು ಮುಂತಾದವು ನೆನಪಾಗಬೇಕು!) ತನ್ಮಧ್ಯೆ ಲಕ್ಷ್ಮಣನಿಗೆ ಇದನ್ನು ನೋಡಿ ಆತಂಕವಾಗುತ್ತದೆ. ವನವಾಸ, ಲಂಕಾದಹನ ಇವಕ್ಕೂ ಆಡಳಿತಕ್ಕೂ ಸಂಬಂಧವಿಲ್ಲವೆಂದು ಅವನು ಬೋಧಿಸಿದರೂ ಅದಕ್ಕೆ ರಾಮನು ಒಪ್ಪುವುದಿಲ್ಲ. ಅವನಿಗೆ ಪಕ್ಷದುಡಿಮೆಯೇ ದೇಶದುಡಿಮೆ. ಕೊನೆಗೆ ಲಕ್ಷ್ಮಣನು ಒಂದು ಉಪಾಯ ಹೂಡಿ ಈ ಕಪಿಗಳಿಗೆ ಅಧಿಕಾರ ನೀಡಿ ದುಡಿಸುವುದು ನ್ಯಾಯವಲ್ಲ; ಅವರು ಮಾಡಿದ ಸಾಹಸ-ತ್ಯಾಗಗಳಿಗಾಗಿ ಅವರನ್ನು ಒಂದು ಉಪವನದಲ್ಲಿ ಇರಿಸಿ ವಿಶ್ರಾಂತಿಗೆ ಅವಕಾಶ ಮಾಡಿಕೊಡುವುದು ಒಳ್ಳೆಯದೆಂದು ಸಲಹೆ ನೀಡುತ್ತಾನೆ. ಇದು ರಾಮನಿಗೆ ಒಪ್ಪಿಗೆಯಾಗಿ ಅವರಿಗೆ ಒಂದು ‘ಸ್ಪೆಸಲ್’ ಉಪವನವನ್ನು ತಯಾರಿಸಿ ‘ಪೆನ್ಶನ್’ ಅನುಗ್ರಹಿಸುತ್ತಾನೆ. ರಾಜ್ಯದ ಅಧಿಕಾರಕ್ಕೆ ಪ್ರಜೆಗಳನ್ನು ನೇಮಿಸುತ್ತಾನೆ. ಒಂದು ಸಂಕೇತಾರ್ಥದಲ್ಲಿ ಭವಿಷ್ಯವನ್ನು ವಿ.ಜಿ.ಭಟ್ಟರು ಗ್ರಹಿಸಿದ್ದಾರೆ. ಈಗ ನಡೆಯುತ್ತಿರುವುದು ಇದೇ. ಲಂಕಾದಹನವನ್ನು ನಡೆಸಿದ ಕಪಿಗಳಿದ್ದಾರೆ; ಕುರುಡರಾಮರಿದ್ದಾರೆ; ಹೊರತು ವಿವೇಚನೆಯ ಲಕ್ಷ್ಮಣರಿಲ್ಲ.

ಚರಿತ್ರೆಯನ್ನು ‘ಸರಿಯಾಗಿ’ ನೆನಪಿಸದಿದ್ದರೆ ಮತ್ತು ಅದಕ್ಕೆ ವಕ್ರೀಭವನ ಸೂತ್ರವನ್ನು ಅಳವಡಿಸಿದರೆ ಭವಿಷ್ಯವು ಓರೆಕೋರೆಯಾಗುವುದರಲ್ಲಿ ಸಂಶಯವಿಲ್ಲ. ಅದಕ್ಕೆ ತಪ್ಪಿತಸ್ಥರಷ್ಟೇ ಹೊಣೆಯಲ್ಲ; ಅವರನ್ನು ಸಹಿಸಿಕೊಂಡವರೂ ಹೊಣೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)