varthabharthi

ನಿಮ್ಮ ಅಂಕಣ

ರಾಜಕೀಯವಾಗಿ ಅನನುಕೂಲವಾದ ಅಂಕಿ ಅಂಶಗಳ ಅಮೂಲ್ಯ ಭಂಡಾರ

ಆರ್ಥಿಕ ಹಿಂಜರಿತದ ವೇಗ ತೀವ್ರಗೊಂಡದ್ದು ಹೇಗೆ?

ವಾರ್ತಾ ಭಾರತಿ : 29 Aug, 2019
ಪೂಜಾ ಮೆಹ್ರಾ. ಅನುವಾದ: ಡಾ. ಕೃಷ್ಣಪ್ಪಕೊಂಚಾಡಿ

ಸುಮಾರು ಅರ್ಧ ಶತಮಾನಗಳನ್ನು ಮೀರಿ ಹಳೆಯದಾದ 1961ರ ಆದಾಯ ತೆರಿಗೆ ಕಾನೂನನ್ನು ಬದಲಾವಣೆ ಮಾಡಿ ಅದಕ್ಕೆ ಪರ್ಯಾಯವಾಗಿ ಹೊಸ ಕಾನೂನನ್ನು ರೂಪಿಸುವ ನಿಟ್ಟಿನಲ್ಲಿ ಕಾನೂನಿನ ಕರಡು ರಚಿಸುವ ಗುರಿ ಹೊಂದಿದ್ದ ಟಾಸ್ಕ್ ಪೋರ್ಸ್‌ನ ವರದಿಯು ನೋಟು ಅಮಾನ್ಯೀಕರಣವು ಅಧಿಕೃತವಾಗಿ ಕಾರ್ಪೊರೇಟ್ ವಲಯವನ್ನು ದುರ್ಬಲಗೊಳಿಸಿದ ಬೇಜವಾಬ್ದಾರಿ ತೀರ್ಮಾನದ ಬಗೆಗೆ ವಸ್ತು ನಿಷ್ಠ ಪುರಾವೆಗಳನ್ನು ಹೊಂದಿರುವ ಕಾರಣಕ್ಕೆ ಆ ವರದಿಯನ್ನು ಬಹಿರಂಗಗೊಳಿಸದೆ ಮುಚ್ಚಿಡಬಹುದೇ?

ಸೆಪ್ಟ್ಟಂಬರ್ ತಿಂಗಳ 1 ಮತ್ತು 2, 2017ರಂದು ಜರುಗಿದ್ದ ರಾಜಸ್ವ ಗ್ಯಾನ್ ಸಂಘಂ ಎಂಬ ಹಿರಿಯ ತೆರಿಗೆ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಿ ಭಾಷಣ ಮಾಡುತ್ತಾ, 1961ರ ಆದಾಯ ತೆರಿಗೆ ಕಾನೂನನ್ನು ಪುನರ್ ರಚಿಸುವ ಅವಶ್ಯಕತೆಯ ಬಗ್ಗೆ ಬೊಟ್ಟು ಮಾಡಿ ವಿವರಿಸಿದರು. ಇದನ್ನು ಅನುಸರಿಸಿ, ಕೇಂದ್ರೀಯ ವಿತ್ತ ಮಂತ್ರಾಲಯವು ನೇರ ತೆರಿಗೆಗೆ ಸಂಬಂಧಿಸಿದಂತೆ (ವ್ಯಕ್ತಿಗತ ಮತ್ತು ಕಾರ್ಪೊರೇಟ್ ಆದಾಯ) ಸರಳೀಕೃತಗೊಳಿಸುವುದು ಮತ್ತು ಭಾರತದ ಆರ್ಥಿಕತೆಗೆ ಅನುಗುಣವಾಗಿ ಪುನರ್ ರೂಪಿಸುವ ಉದ್ದೇಶ ಹೊಂದಿ, ಆಟದ ದಾಳವನ್ನು ತಿರುಗಿಸಲು ಪ್ರಾರಂಭಿಸಿತು. ಇದರ ಮುಂದುವರಿದ ಭಾಗವಾಗಿ ನವೆಂಬರ್ ತಿಂಗಳ ದಿನಾಂಕ 22, 2017ರಂದು ಆರು ಜನ ಸದಸ್ಯರನ್ನು ಒಳಗೊಂಡಿರುವ ‘‘ಹೊಸ ನೇರ ತೆರಿಗೆ ಕಾನೂನು ರಚಿಸುವ ಟಾಸ್ಕ್ ಪೋರ್ಸ್’’ನ್ನು ಅಸ್ತಿತ್ವಕ್ಕೆ ತರಲಾಯಿತು. ಟಾಸ್ಕ್‌ಪೋರ್ಸ್‌ನ ಸಂಚಾಲಕರನ್ನಾಗಿ ಭಾರತೀಯ ರೆವೆನ್ಯೂ ಸರ್ವಿಸಸ್, ಇಲ್ಲಿಯ ಅಧಿಕಾರಿಯೂ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಇದರ ಮಾಜಿ (ಕಾನೂನು) ಸದಸ್ಯರೂ ಆದ ಅರವಿಂದ ಮೋದಿಯವರನ್ನು ನೇಮಿಸಿತು. ಅರವಿಂದ ಮೋದಿಯವರು ಈ ಮೊದಲಿನ ಪ್ರಧಾನ ಮಂತ್ರಿಗಳಾದ ಎ.ಬಿ. ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಇವರ ಅತ್ಯಂತ ನಿಕಟ ಸಂಪರ್ಕದಲ್ಲಿ ಇದ್ದುಕೊಂಡು, ಅವರ ತೆರಿಗೆ ಸಂಬಂಧದ ಸುಧಾರಣೆಗಳೊಂದಿಗೆ ಸಕ್ರಿಯವಾಗಿ ಭಾಗವಹಿಸಿದವರಾಗಿರುತ್ತಾರೆ. ಇವರು ಸೆಪ್ಟಂಬರ್ 30, 2018ರಂದು ಸೇವೆಯಿಂದ ನಿವೃತ್ತಿಗೊಂಡಿದ್ದರು. ಇವರ ಸೇವಾವಧಿ ನಿವೃತ್ತಿಯ ನಂತರವೂ ವಿಸ್ತರಿಸುವಂತೆ ಅವರ ಕಚೇರಿಯು ಮನವಿ ಮಾಡಿಕೊಂಡರೂ ಇಲಾಖೆ ಪರಿಗಣಿಸಿ ವಿಸ್ತರಿಸಿಲ್ಲ.

ಅದಾಗ್ಯೂ ಟಾಸ್ಕ್ ಪೋರ್ಸ್‌ನ ಸಂಚಾಲಕರಾದ ಇವರು ಮುಚ್ಚಿದ ಲಕೋಟೆಯಲ್ಲಿ ನಾಲ್ಕು ಸಂಪುಟಗಳಲ್ಲಿ ತೆರಿಗೆ ಸಂಬಂಧದ ವರದಿ ಹಾಗೂ ಕಾನೂನಿನ ಕರಡು ಪ್ರತಿಯನ್ನು ವಿತ್ತ ಮಂತ್ರಿ ಮತ್ತು ಆರ್ಥಿಕ ಕಾರ್ಯದರ್ಶಿಯವರಿಗೆ ಸೆಪ್ಟಂಬರ್ 28, 2018 ‘ಮುಂದುವರಿಕೆಗಾಗಿ’ ಮತ್ತು ‘ದಾಖಲೆಗಳ ಉದ್ದೇಶಕ್ಕಾಗಿ’ ಎಂದು ನಮೂದಿಸಿ ಸಲ್ಲಿಸಿದರು.

ನೋಟು ಅಮಾನ್ಯೀಕರಣದ ಹೊಡೆತ

ಆದಾಯಕರ ಇಲಾಖೆಗೆ ಕಾರ್ಪೊರೇಟ್ ಸಂಸ್ಥೆಗಳು ಮತ್ತು ವ್ಯಕ್ತಿಗಳು ವಾರ್ಷಿಕ ರಿಟರ್ನ್ ಸಲ್ಲಿಕೆಯ ದತ್ತಾಂಶಗಳನ್ನು ಇಲಾಖೆಯಿಂದಲೇ ಪಡೆದುಕೊಂಡು ಅದರ ಬಗ್ಗೆ ಆಳವಾದ ಅಧ್ಯಯನ ಮತ್ತು ಒಳನೋಟಗಳನ್ನು ಬೀರಿದ ಮಾನ್ಯ ಅರವಿಂದ ಮೋದಿಯವರು ಎರಡು ಪರ್ಯಾಯ ವಿಧಾನಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದಂತೆ ಹೊಸ ತೆರಿಗೆ ಕಾನೂನಿನ ಕರಡು ನಿಯಮಗಳನ್ನು ಸಲ್ಲಿಸಿದ್ದರು.

ಕಾರ್ಪೊರೇಟ್ ತೆರಿಗೆ ಸುಧಾರಣೆಗಳ ಬಗೆಗಿನ ಪ್ರಸ್ತಾಪವಿರುವ ಅಧ್ಯಾಯದಲ್ಲಿ ಒಂದು ಕೋಷ್ಟಕ (ಪುಟ 109, ಸಂಪುಟ 1) ಇದೆ. ಈ ಕೋಷ್ಟಕ ನೋಟು ಅಮಾನ್ಯೀಕರಣವು ಕಂಪೆನಿಗಳ ಸುಸ್ಥಿರತೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬ ಬಗ್ಗೆ ಅತ್ಯಂತ ಮಹತ್ವದ ಪುರಾವೆಗಳನ್ನು ತೋರಿಸಿಕೊಟ್ಟಿದೆ. ಈ ಕೋಷ್ಟಕದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ವಾರ್ಷಿಕ ಆದಾಯ ಕರ ಸಲ್ಲಿಕೆಯ ಸಮಯದಲ್ಲಿ ತೋರಿಸಿರುವ ಸರಾಸರಿ ಹೂಡಿಕೆಯ ಬಗ್ಗೆಯೂ ವಿವರಗಳನ್ನು ಬಹಿರಂಗ ಪಡಿಸುತ್ತದೆ.

ಲೆಕ್ಕಾಚಾರದ ವರ್ಷ (ಅಸೆಸ್ಸ್‌ಮೆಂಟ್ ವರ್ಷ) 2017-18, ಅಥವಾ ವಿತ್ತೀಯ ವರ್ಷ 2016-17ರಲ್ಲಿ ಅಂದರೆ ನೋಟು ಅಮಾನ್ಯೀಕರಣದ ವರ್ಷದಲ್ಲಿ ಒಟ್ಟು ಹೂಡಿಕೆಯ ಮೊತ್ತ ರೂ. 4,25,051 ಕೋಟಿಯಾಗಿದೆ ಅಥವಾ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 60 ಶೇಕಡಾದಷ್ಟು ಕಡಿಮೆಯಾಗಿದೆ.

ಈ ವರದಿಯಲ್ಲಿ 2010-11ರಿಂದ 2016-17ರ ವರೆಗಿನ ಏಳು ವಿತ್ತೀಯ ವರ್ಷಗಳ ಒಟ್ಟು ಹೂಡಿಕೆಯ ಮೊತ್ತವನ್ನು ಬಹಿರಂಗಗೊಳಿಸಲಾಗಿದೆ. ಅದು ಕ್ರಮಾಗತವಾಗಿ ರೂ. 11,72,550 ಕೋಟಿ, ರೂ. 9,25,010 ಕೋಟಿ, ರೂ. 10,22,376 ಕೋಟಿ, ರೂ. 11,03,969 ಕೋಟಿ, ರೂ. 9,98,056 ಕೋಟಿ, ರೂ. 10,33,847 ಕೋಟಿ ಮತ್ತು ರೂ. 4,25,051 ಕೋಟಿ. ಒಟ್ಟು ಹೂಡಿಕೆಯ ಪ್ರಮಾಣವನ್ನು ರಾಷ್ಟ್ರೀಯ ಒಟ್ಟು ಉತ್ಪಾದಕತೆ (ಜಿಡಿಪಿ)ಯೊಂದಿಗೆ ಶೇಕಡಾವಾರು ಪ್ರಮಾಣದಲ್ಲಿ ಹೋಲಿಸಿದಾಗ ನಿಜವಾದ ಮಹಾಕುಸಿತದ ಅಗಾಧತೆಯು ಎದ್ದು ತೋರಿ ಬರುತ್ತದೆ. ಕಾರ್ಪೊರೇಟ್ ಸಂಸ್ಥೆಗಳು ಸಲ್ಲಿಸಿರುವ ವಾರ್ಷಿಕ ರಿಟರ್ನ್‌ನ 2011-12ರಿಂದ 2016-17ರ ಅವಧಿಯಲ್ಲಿ ಈ ಹೂಡಿಕೆಯ ಪ್ರಮಾಣವು ಕ್ರಮವಾಗಿ ಶೇ. 15, ಶೇ. 10.5, ಶೇ. 10.2, ಶೇ. 9.8, ಶೇ. 9, ಶೇ. 7.5 ಮತ್ತು 2.7ರಷ್ಟು ಆಗಿರುತ್ತದೆ. ಮೇಲೆ ವಿವರಿಸಿರುವ ಒಟ್ಟು ಮೊತ್ತದ ಅಂಕಿಅಂಶಗಳನ್ನು ಕಂಪೆನಿಗಳು ಕಾನೂನು ಬದ್ಧವಾಗಿ ಬಹಿರಂಗ ಪಡಿಸಿರುವ ದಾಖಲೆಗಳಿಂದ ಪಡೆದಿರುವುದರಿಂದ ನಿಜವಾದ ಅಂಕಿಅಂಶಗಳಾಗಿವೆ. ಆದುದರಿಂದ ಇದಕ್ಕೆ ಪ್ರಾತಿನಿಧಿತ್ವ ಇದೆ. ಇದರ ಬದಲಾಗಿ ಅವುಗಳು ಅಂದಾಜು ಲೆಕ್ಕಾಚಾರಗಳಾಗಲೀ ಅಥವಾ ಯಾವುದೇ ಸರ್ವೇಗಳಲ್ಲಿ ಕಂಡುಕೊಂಡಿರುವ ಲೆಕ್ಕಾಚಾರವಲ್ಲ. ಈ ಅಂಕಿ ಅಂಶಗಳು ಆರ್ಥಿಕ ಹಿಂಜರಿತವನ್ನು ತೀವ್ರಗೊಳಿಸುವ ಪ್ರಕ್ರಿಯೆಗೆ ನೋಟು ಅಮಾನ್ಯೀಕರಣದ ಕೊಡುಗೆಯಾಗಿ ನಿಜವಾಗಿಯೂ ನಿರಾಕರಿಸಲಾಗದ ಪುರಾವೆಗಳಾಗಿ, ಮೋದಿ ಸರಕಾರದ ಎರಡನೇ ಅವಧಿಯಲ್ಲಿ ತಲೆನೋವು ತಂದಿಟ್ಟಿರುವ ಸಂಗತಿಯಾಗಿದೆ.

ಈ ವರದಿಯು ಇನ್ನೂ ಹಲವು ವಿಷಣ್ಣಕಾರಿ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಉದಾಹರಣೆಗೆ ಸಂಪುಟ 1ರ ಪುಟ ಸಂಖ್ಯೆ 115ರಲ್ಲಿ, ವರದಿಯು ಈ ರೀತಿ ನಮೂದಿಸಲ್ಪಟ್ಟಿದೆ. ‘‘ಕಂಪೆನಿಗಳ ರಿಜಿಸ್ಟ್ರಾರ್‌ರವರ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಕಂಪೆನಿಗಳಲ್ಲಿ ಸುಮಾರು ಪ್ರತಿಶತ 50ರಷ್ಟು ಕಂಪೆನಿಗಳು ವಿತ್ತೀಯ ವರ್ಷ 2016-17 (ಅಸೆಸ್ಸ್‌ಮೆಂಟ್ ವರ್ಷ 2017-18)ರಲ್ಲಿ ತೆರಿಗೆ ರಿಟರ್ನ್ ಸಲ್ಲಿಸಿದೆ.’’

‘‘ಕಂದಾಯ ವರ್ಷ 2013-14ರಿಂದ 2017-18ಕ್ಕೆ ನಷ್ಟ ಅನುಭವಿಸುತ್ತಿರುವ ಕಂಪೆನಿಗಳ ಪಾಲು 42 ಶೇಕಡಾದಿಂದ 45 ಶೇಕಡಾಕ್ಕೆ ಹೆಚ್ಚಳವಾಗಿದೆ.’’

‘‘ಈಕ್ವಿಟಿಯಿಂದ ಬರುವ ಆದಾಯ ಅಸೆಸ್ಸ್‌ಮೆಂಟ್ ವರ್ಷ 2013-14ರಲ್ಲಿ 16.4 ಶೇಕಡಾದಿಂದ 2015-16 (ಅಸೆಸ್ಸ್ ಮೆಂಟ್ ವರ್ಷ) 15.5 ಶೇಕಡಾಕ್ಕೆ ಕುಸಿತಗೊಂಡಿದೆ ಮತ್ತು ಆನಂತರ ಈ ಗತಿಯು ವಿಮುಖಗೊಂಡು ಅಸೆಸ್ಸ್‌ಮೆಂಟ್ ವರ್ಷ 2017-18ಕ್ಕೆ 16.5 ಶೇಕಡಾಕ್ಕೆ ಹೆಚ್ಚಳವಾಗಿದೆ.’’

‘‘ಕಾರ್ಪೊರೇಟ್ ತೆರಿಗೆಯ ಕಾರ್ಯ ಸಾಮರ್ಥ್ಯವು (ಉತ್ಪಾದಕತೆ) ಅದು ತೆರಿಗೆ ರಿಯಾಯಿತಿ ಆಯ್ಕೆಗೆ ಅವಕಾಶಗಳು ಮತ್ತು ನೀತಿ ನಿಯಮಗಳಿಗೆ ಉತ್ತರಿಸದೇ ಇರುವ ಸೌಲಭ್ಯಗಳು ಇದ್ದರೂ ಸಹ, ಕಂದಾಯ ವರ್ಷ 2013-14ರಿಂದ 2017-18ಕ್ಕೆ ತೀರಾ ಕೆಳಮಟ್ಟ ಅಂದರೆ 7.5 ಶೇಕಡಾ ಪ್ರಮಾಣಕ್ಕೆ ಕುಸಿದಿದೆ. ಇತರ ಆಯ್ದ ಆರ್ಥಿಕತೆಗಳಿಗೆ ಹೋಲಿಸಿದಾಗ ಭಾರತದ ಕಾರ್ಪೊರೇಟ್ ಆದಾಯ ತೆರಿಗೆಯ ಉತ್ಪಾದಕತೆಯೂ ತೀರಾ ಕೆಳಹಂತದಲ್ಲಿ ಇದೆ.’’

‘‘ಸರಕಾರಕ್ಕೆ ಇರುವ ಸೀಮಿತ ಆರ್ಥಿಕ ಪ್ರಭಾ ವಲಯವನ್ನು ಪರಿಗಣಿಸಿ ಹೇಳುವುದಾದರೆ, ಆರ್ಥಿಕ ಪ್ರಗತಿಯು ಖಂಡಿತವಾಗಿಯೂ ಖಾಸಾಗಿ ಹೂಡಿಕೆಯಿಂದ ಮುನ್ನಡೆಯುತ್ತಿದೆ.... (ಆದರೆ) ಕಾರ್ಪೊರೇಟ್ ಹೂಡಿಕೆಗಳು ಭರವಸೆಯುಕ್ತ ಪ್ರತಿಫಲದ ಸಾಕಷ್ಟು ಅವಕಾಶಗಳು ಇದ್ದರೂ ವಸ್ತುಶಃ ಸ್ಥಗಿತತೆ ಹೊಂದಿದೆ.’’

ಜಿಡಿಪಿ ಬೆಳವಣಿಗೆಯ ಅಂದಾಜು ಲೆಕ್ಕಾಚಾರಗಳು

ಆ ವರದಿಯಲ್ಲಿ ಕಾರ್ಪೊರೇಟ್ ವಲಯದ ಸರಾಸರಿ ಹೂಡಿಕೆಯ ಅಂಕಿ ಅಂಶಗಳು ಮತ್ತು ಅದಕ್ಕನುಗುಣವಾಗಿ ಹೂಡಿಕೆಯ ಹಿಂಜರಿಕೆಯ ಸ್ವರೂಪಗಳು ಅಧಿಕೃತ ಜಿಡಿಪಿ ದರ 2011-12ರ ನಂತರದ ಲೆಕ್ಕಾಚಾರದಲ್ಲಿ ವ್ಯತ್ಯಾಸವನ್ನು ಮಾಡಲಾಗಿದೆ. ಆದರೆ 2016-17ನೇ ವರ್ಷದ ಸರಾಸರಿ ಹೂಡಿಕೆಯ ಅಂಕಿ ಅಂಶಗಳು ನೋಟು ಅಮಾನ್ಯೀಕರಣದ ವರ್ಷದ ಜಿಡಿಪಿ ಬೆಳವಣಿಗೆಯ ಲೆಕ್ಕಾಚಾರವನ್ನು ಪ್ರಶ್ನಾರ್ಹವಾಗಿಸುತ್ತದೆ. ಸರಕಾರದ ತೀರಾ ಇತ್ತೀಚಿನ ಸುತ್ತಿನ ಪರಿಷ್ಕರಣೆಯ ಪ್ರಕಾರ 2016-17ರ ಅವಧಿಯ ಜಿಡಿಪಿ ಬೆಳವಣಿಗೆಯ ಲೆಕ್ಕಾಚಾರವನ್ನು ಶೇ.7.1ರಿಂದ 8.2ಕ್ಕೆ ಮೇಲ್ಮುಖವಾಗಿ ಪರಿಷ್ಕರಿಸಿದೆ.

ಪರಿಷ್ಕೃತಗೊಂಡ ಲೆಕ್ಕಾಚಾರದ ಪ್ರಕಾರ, ಮೋದಿ ಆಡಳಿತಾವಧಿಯ ಪ್ರಥಮ ಕಾಲಘಟ್ಟದಲ್ಲಿ ನೋಟು ಅಮಾನ್ಯೀಕರಣದ ವರ್ಷದ ಜಿಡಿಪಿ ಬೆಳವಣಿಗೆಯ ದರವು ಅತ್ಯುತ್ತಮ ಬೆಳವಣಿಗೆ ದರ ದಾಖಲಿಸಿರುವ ವರ್ಷವಾಗಿದೆ ಎಂದು ಹೇಳಿಕೊಳ್ಳುತ್ತದೆ. ಆದರೆ ಹೆಚ್ಚು ಕಡಿಮೆ ಎಲ್ಲಾ ಕೈಗಾರಿಕಾ ಒಕ್ಕೂಟದಾರರ ಸಂಘಟನೆಗಳು ನೋಟು ನಿಷೇಧದ ಪರಿಣಾಮವಾಗಿ ಉತ್ಪನ್ನಗಳ ಮಾರಾಟದಲ್ಲಿ ತೀವ್ರ ಕುಸಿತವಾಗಿದೆ ಎಂದು ಘೋಷಿಸಿದ ಅವಧಿಯೂ ಇದು ಆಗಿದೆ.

ಪರಿಷ್ಕೃತ ಲೆಕ್ಕಾಚಾರದ ವಿಧಾನವು ಸಾಮಾನ್ಯ ತಿಳುವಳಿಕೆಯ ವಿಧಾನವನ್ನು ಧಿಕ್ಕರಿಸಿದೆ; ಮತ್ತು ಸರಕಾರಿಯೇತರ ಸಂಸ್ಥೆಗಳು ನೀಡಿರುವ ಹೋಲಿಸಬಹುದಾದ ದತ್ತಾಂಶಗಳಿಗೆ ವ್ಯತಿರಿಕ್ತವಾಗಿದೆ. ಪ್ರಸ್ತುತ ಈಗ ಅದು ಕಾರ್ಪೊರೇಟ್ ಸಂಸ್ಥೆಗಳ ವಾರ್ಷಿಕ ಆದಾಯ ತೆರಿಗೆ ಸಲ್ಲಿಕೆಯಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ.

 ಕೇಂದ್ರ ವಿತ್ತ ಮಂತ್ರಾಲಯವು ಈ ತನಕ ಟಾಸ್ಕ್‌ಪೋರ್ಸ್‌ನ ವರದಿ (ಒಂದು ವರದಿಯನ್ನು ಸೆಪ್ಟಂಬರ್ 28, 2018ರಲ್ಲಿ ಮತ್ತು ಇನ್ನೊಂದು ವರದಿಯನ್ನು ಆಗಸ್ಟ್ 19, 2019ಕ್ಕೆ ಸಲ್ಲಿಸಲಾಗಿದೆ)ಯನ್ನು ಬಹಿರಂಗಗೊಳಿಸಿರುವುದಿಲ್ಲ. ಇಲಾಖೆಯು ಮೊತ್ತಮೊದಲಗೆ ಸಲ್ಲಿಸಿರುವ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಲಿದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ. ಒಂದು ವೇಳೆ ಎರಡನೇ ವರದಿಯನ್ನು ಸೂಕ್ತ ಸನ್ನಿವೇಶದಲ್ಲಿ ಸಾರ್ವಜನಿಕ ಚರ್ಚೆಗೆ ಬಿಟ್ಟುಕೊಟ್ಟರೂ ಕಾರ್ಪೊರೇಟ್ ವಲಯದ ವಾರ್ಷಿಕ ತೆರಿಗೆ ವಿವರ ಸಲ್ಲಿಕೆಯಿಂದ ಪಡೆದ ದತ್ತಾಂಶಗಳು ಹಾಗೆಯೇ ಉಳಿಸಿಕೊಂಡು, ಅನೌಪಚಾರಿಕ ವಲಯವನ್ನು ಹೊರತು ಪಡಿಸಿ ನೋಟು ಅಮಾನ್ಯೀಕರಣವು ದೇಶದ ಆರ್ಥಿಕತೆಗೆ ಮಾಡಿದ ಘಾಸಿಯನ್ನು ಬಹಿರಂಗ ಪಡಿಸುವ ಬೆದರಿಕೆ ಇದ್ದೇ ಇದೆ.

ಸರಕಾರವು ಈ ಮೊದಲು ರಾಷ್ಟ್ರೀಯ ಸ್ಯಾಂಪಲ್ ಸರ್ವೇ ಆಫೀಸ್, ಇದು ಆಗಾಗ ಬಿಡುಗಡೆ ಮಾಡುವ ರಾಷ್ಟ್ರೀಯ ಕಾರ್ಮಿಕ ಸಂಖ್ಯಾಬಲದ ಸರ್ವೇಯ ಫಲಿತಾಂಶಕ್ಕೆ ರಾಷ್ಟ್ರೀಯ ಸ್ಟ್ಯಾಟಿಷ್ಟಿಕಲ್ ಕಮಿಷನ್ ಅನುಮೋದನೆ ನೀಡಿ ಕ್ಲಿಯರೆನ್ಸ್ ನೀಡಿದರೂ ಅದನ್ನು ತಡೆಹಿಡಿದಿದೆ ಮಾತ್ರವಲ್ಲದೆ ಅದಕ್ಕೆ ಪ್ರತಿಸವಾಲು ಎಸೆದಿದೆ. ಆ ಸರ್ವೇಯ ಫಲಿತಾಂಶವಾಗಿರುವ ನಿರುದ್ಯೋಗದ ಏರಿಕೆಯ ಪ್ರಮಾಣವು 2017-18ರ ವರ್ಷದಲ್ಲಿ 45 ವರ್ಷಗಳ ಹಿಂದಿನ ಮಟ್ಟಕ್ಕೆ ಹೆಚ್ಚಾಗಿದೆ ಎಂಬುದು ರಾಜಕೀಯವಾಗಿ ಅನನುಕೂಲವಾಗಿದೆ ಎಂಬ ಕಾರಣಕ್ಕೆ ಈ ಫಲಿತಾಂಶವನ್ನು ಮುಂದೆ 2019ರ ಚುನಾವಣೆಗಳು ಮುಗಿದ ನಂತರವಷ್ಟೇ ಬಿಡುಗಡೆ ಮಾಡಲಾಯಿತು.

ಕೃಪೆ: ದಿ ಹಿಂದೂ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)