varthabharthi


ನಿಮ್ಮ ಅಂಕಣ

ಇಂದು ರಾಷ್ಟ್ರೀಯ ಕ್ರೀಡಾದಿನ: ಧ್ಯಾನ್ ಚಂದ್ ರ ಸಾಧನೆಯ ಬಗ್ಗೆ ನಿಮಗೆಷ್ಟು ಗೊತ್ತು?

ವಾರ್ತಾ ಭಾರತಿ : 29 Aug, 2019
ಎಸ್. ಜಗದೀಶ್ಚಂದ್ರ ಅಂಚನ್, ಸೂಟರ್ ಪೇಟೆ

ವಿಶ್ವ ಕಂಡ ಅಪರೂಪದ ‘ಹಾಕಿ ಮಾಂತ್ರಿಕ’ ಮೇಜರ್ ಧ್ಯಾನ್‍ ಚಂದ್ ಭಾರತೀಯ ಕ್ರೀಡಾರಂಗದ ಅನರ್ಘ್ಯ ರತ್ನ.  ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲೂ ಭಾರತದ ಕ್ರೀಡಾರಂಗವನ್ನು ಎತ್ತರಕ್ಕೇರಿಸಿದ ಅದ್ಭುತ ಆಟಗಾರ ಧ್ಯಾನ್‍ ಚಂದ್. ಭಾರತದ ಕ್ರೀಡಾಭೂಪಟದಲ್ಲಿ ಈ ಮಹಾನ್ ಆಟಗಾರನಿಗೆ ಸರಿಸಾಟಿಯಾದವರಿಲ್ಲ. ಇಂತಹ ಮಹಾನ್ ಕ್ರೀಡಾಪಟುವನ್ನು ಸ್ಮರಿಸುವ ಉದ್ದೇಶದಿಂದ ಭಾರತ ಸರಕಾರ ಧ್ಯಾನ್‍ ಚಂದ್ ಜನ್ಮದಿನವಾದ ಆಗಸ್ಟ್ 29ನ್ನು ‘ಭಾರತದ ರಾಷ್ಟ್ರೀಯ ಕ್ರೀಡಾದಿನ’ವನ್ನಾಗಿ ಆಚರಿಸುತ್ತಿದೆ.

ಭಾರತೀಯ ಹಾಕಿಯನ್ನು ಯಶಸ್ಸಿನ ಶಿಖರಾಗ್ರಕ್ಕೊಯ್ದ ಧ್ಯಾನ್‍ ಚಂದ್ ಗೆ ಇಂದು ಭಾರತೀಯರೆಲ್ಲರೂ ನಮನವನ್ನು ಸಲ್ಲಿಸುತ್ತಿದ್ದಾರೆ.  ಸ್ವಾತಂತ್ರ್ಯಪೂರ್ವದಲ್ಲಿ 1928ರಿಂದ ಒಲಿಂಪಿಕ್ಸ್‍ನಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡದ ಮಹಾನ್ ಆಟಗಾರ ಇವರು.  ಮೂರು ದಶಕಗಳ ಕಾಲ ಭಾರತದ ಹಾಕಿ ಆಟಗಾರರ ‘ಅನಭಿಷಿಕ್ತ ದೊರೆ’ ಎಂದೇ ಗುರುತಿಸಲ್ಪಟ್ಟ ಧ್ಯಾನ್‍ ಚಂದ್ ‍ರನ್ನು ಆಗಸ್ಟ್ 29 ರಂದು ಸ್ಮರಿಸುವುದರ ಜೊತೆಗೆ ಕ್ರೀಡಾರಂಗದ ಬಗ್ಗೆ ಅವಲೋಕನ ಮಾಡುವ ದಿನ ಇದಾಗಿದೆ.

ಹೊಸ ಉತ್ಸಾಹದೊಂದಿಗೆ ಪುಟಿದೆದ್ದು ಗತಕಾಲವನ್ನು ಮರೆತು, ಹೊಸ ಮುನ್ನುಡಿಯನ್ನು ಬರೆಯಲು ಸಜ್ಜುಗೊಂಡಿರುವ ಭಾರತದ ಕ್ರೀಡಾಕ್ಷೇತ್ರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.  ಸ್ವಾತಂತ್ರದ ನಂತರ ಭಾರತದ ಕ್ರೀಡಾರಂಗದಲ್ಲಿ ಅಂತಾರಾಷ್ಟ್ರೀಯ ಸಾಧನೆಗಳು ಆಗೊಮ್ಮೆ ಈಗೊಮ್ಮೆ ದಾಖಲಿಸಿಕೊಂಡಿದ್ದರೂ ಗಮನಾರ್ಹ ಸಾಧನೆ ಕೈಗೆ ಎಟಕಲಿಲ್ಲ.  ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದ ಕ್ರೀಡಾಕ್ಷೇತ್ರ ಸಮೃದ್ದಿಯತ್ತ ಸಾಗಿದೆ. 

ಪ್ರತಿಭೆಗಳು ಸಾಕಷ್ಟಿದ್ದರೂ ಸೌಲಭ್ಯಗಳ ಕೊರತೆ ಭಾರತದ ಕ್ರೀಡಾಪಟುಗಳ ಬೆಳವಣಿಗೆಗೆ ಅಡ್ಡಗಾಲು ಎನ್ನದೆ ಬೇರೆ ವಿಧಿಯಿಲ್ಲ.  ಈ ಬಗ್ಗೆ ಕೇವಲ ಮಾತನಾಡಿದರೆ ಪ್ರಯೋಜನವಿಲ್ಲ.  ಅದಕ್ಕೆ ತಕ್ಕ ಕಾರ್ಯವೂ ನಡೆಯಬೇಕು.  ಬರೀ ಟೀಕಿಸುವುದನ್ನು ಮಾತ್ರ ಮಾಡದೆ ಎಲ್ಲರೂ ಕೈಗೂಡಿ ಕೆಲಸ ಮಾಡಿದಾಗ ಮಾತ್ರ ನಮ್ಮ ಕ್ರೀಡಾಪಟುಗಳು ಕೂಡಾ ವಿಶ್ವಮಟ್ಟದಲ್ಲಿ ಗೆಲುವಿನೊಂದಿಗೆ ಮೆರೆಯಲು ಸಾಧ್ಯ.  ಕ್ರಿಕೆಟ್ ಆಟಕ್ಕೆ ಒಂದೆಡೆ ಇಡೀ ಕ್ರೀಡಾ ಸಮೂಹವೇ ಕಡಲ ಕೊರೆತದೋಪಾದಿಯಲ್ಲಿ ನುಗ್ಗುವ ವೇಳೆ ಇತರ ಕ್ರೀಡೆಗಳನ್ನು ಕೇಳುವವರು ಯಾರು ಹೇಳಿ ?

 “ಕ್ರೀಡೆಯೇ ಉಸಿರು, ಇದರ ಏಳಿಗೆಗಾಗಿ ಪ್ರಯತ್ನ ಮಾಡುವುದೇ ಗುರಿ” ಎನ್ನುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು. ಈ ತತ್ವಪಾಲನೆಗಾಗಿ ಅನೇಕ ಮಹಾತ್ವಾಕಾಂಕ್ಷೆಯ ಯೋಜನೆಗಳು ಸಾಕಾರಗೊಳ್ಳಬೇಕಾಗಿದೆ. ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಲಭ್ಯವಿರುವ ಸೌಲಭ್ಯಗಳು ಭಾರತದಲ್ಲಿ ಬಹಳ ಕಡಿಮೆ.  ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕ್ರೀಡಾಪಟುಗಳಿಗೆ ವ್ಯವಸ್ಥಿತವಾದ ತರಬೇತಿಗಳು ಆಧುನಿಕ ಕ್ರಮದಲ್ಲಿ ನಡೆಯುತ್ತಿರುವುದ ರಿಂದ ಜಾಗತಿಕ ಕ್ರೀಡಾಸ್ಪರ್ಧೆಗಳಲ್ಲಿ ಪಾಶ್ಚಾತ್ಯ ರಾಷ್ಟ್ರಗಳದ್ದೇ ಪ್ರಾಬಲ್ಯ.

ಪಾಶ್ಚಾತ್ಯ ರಾಷ್ಟ್ರಗಳಂತೆ ಭಾರತ ಕ್ರೀಡೆಯಲ್ಲಿ ಇನ್ನೂ ಮುಂದುವರಿದಿಲ್ಲ. ಇದಕ್ಕೆ ಕಾರಣಗಳು ಹಲವು.  ಪಾಶ್ಚಾತ್ಯ ದೇಶಗಳಲ್ಲಿ ಮೊದಲು ಕ್ರೀಡೆ ನಂತರ ಶಿಕ್ಷಣ ಎಂಬ ಸಿದ್ಧಾಂತವಿದೆ.  ನಮ್ಮಲ್ಲಿ ಕ್ರೀಡೆಗಳಿಗೆ ಮಹತ್ವ ಕಡಿಮೆ.  ಪಾಶ್ಚಾತ್ಯ ರಾಷ್ಟ್ರಗಳಂತೆ ಭಾರತದ ವಿವಿಧ ಕಡೆಗಳಲ್ಲಿ ಕ್ರೀಡಾ ತರಬೇತಿ ಕೇಂದ್ರಗಳಲ್ಲಿ ತರಬೇತಿಗೆ ಬೇಕಿರುವ ಸಾಧನೆಗಳು ಸಿಗುವಂತಾಗಬೇಕು.  ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವವನ್ನು ನೀಡಬೇಕು.  ಕೆಲವರು ಕ್ರೀಡಾ ಕೋಟಾದಲ್ಲಿ ಸೀಟು ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಕ್ರೀಡೆಗೆ ಒಂದಿಷ್ಟು ಮಹತ್ವ ನೀಡುತ್ತಾರೆ.  ಆದರೆ ಅವರ ಉದ್ದೇಶ ಶಿಕ್ಷಣವೇ ಆಗಿರುತ್ತದೆ.

ಕ್ರೀಡೆ ಎನ್ನುವುದು ಒಂದು ತಪಸ್ಸು.  ಅದರ ಸಿದ್ಧಿಯನ್ನು ಪಡೆಯಬೇಕಾದರೆ ಏಕಾಗ್ರತೆ, ಸಂಯಮಶೀಲ ಸಾಹಸ ಪ್ರವೃತ್ತಿಗಳು ಅತ್ಯವಶ್ಯಕ.  ಆದರೆ ಇಂದಿನ ನಮ್ಮ ಯುವ ಜನಾಂಗದಲ್ಲಿ ಇವುಗಳಾವುದನ್ನು ದಟ್ಟವಾಗಿ ಕಾಣಲು ಸಾಧ್ಯವಾಗುತ್ತಿಲ್ಲ.  ಅಪಾರವಾದ ಪ್ರತಿಭೆಗಳನ್ನು ಹೊಂದಿದ್ದರೂ ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷಿತ ಯಶಸ್ಸು ಭಾರತಕ್ಕೆ ಇನ್ನೂ ದಕ್ಕಿಲ್ಲ.

ಭಾರತದ ರಾಷ್ಟ್ರೀಯ ಕ್ರೀಡೆ ಎನಿಸಿದ ಹಾಕಿ ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಕುಂಟುತ್ತಾ, ಎಡವುತ್ತಾ ಸಾಗುತ್ತಿದೆ.  1928 ರಲ್ಲಿ ಆರಂಭಗೊಂಡು 1956 ರವರೆಗೆ ಭಾರತ ನಿರಂತರವಾಗಿ ಆರು ಬಾರಿ ಒಲಿಂಪಿಕ್ಸ್ ಚಿನ್ನದ ಪದಕವನ್ನು ಬಾಚಿಕೊಂಡಿದ್ದೇ ದೊಡ್ಡ ಸಾಧನೆ.  1980ರ ಮಾಸ್ಕೋ ಒಲಿಂಪಿಕ್ಸ್‍ನಲ್ಲಿ ಭಾರತ ಮತ್ತೊಮ್ಮೆ ವಿಶ್ವದ ಗಮನ ಸೆಳೆದಾಗ ಹಾಕಿಮಾಂತ್ರಿಕ ಧ್ಯಾನ್‍ಚಂದ್‍ರಂತಹ ಅಪ್ರತಿಮ ಕ್ರೀಡಾಪಟುಗಳು ಮುಂಚೂಣಿ ಯಲ್ಲಿದ್ದರು.  ಅಂದಿನಿಂದ ಇಂದಿನವರೆಗೆ ಒಲಿಂಪಿಕ್ಸ್ ‍ನಲ್ಲಿ ಭಾರತದಿಂದ ಚಿನ್ನದ ಸಾಧನೆ ಕೇವಲ ಕಾಗದದ ಪುಟಗಳಿಗೆ ಮಾತ್ರ ಸೀಮಿತವಾಗಿರುವುದು ಮಾತ್ರ ಕಟು ಸತ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)