varthabharthi

ಸಂಪಾದಕೀಯ

ಕಾಡನ್ನು ಸುಟ್ಟ ಬೆಂಕಿ ನಾಡನ್ನು ಸುಡದೇ ಬಿಟ್ಟೀತೆ?

ವಾರ್ತಾ ಭಾರತಿ : 30 Aug, 2019

ವಿಶ್ವದ ಆಮ್ಲಜನಕ ಪಾತ್ರೆಗೇ ಬೆಂಕಿ ಬಿದ್ದರೆ ನಾವು ಉಸಿರಾಡುವುದು ಹೇಗೆ? ಅಮೆಝಾನ್ ಹರಿದ್ವರ್ಣ ಕಾಡನ್ನು ವಿಶ್ವಕ್ಕೆ ಆಮ್ಲಜನಕ ಪೂರೈಸುವ ಪಾತ್ರೆಯೆಂದು ಕರೆಯಲಾಗುತ್ತದೆ. ವಿಶ್ವದ ಶೇ. 30ರಷ್ಟು ಜೀವವೈವಿಧ್ಯಗಳಿರುವ, ವಿಶ್ವದ ಶೇಕಡ 20ರಷ್ಟು ಆಮ್ಲಜನಕವನ್ನು ಉತ್ಪಾದನೆ ಮಾಡುವ, ಮಹತ್ವದ ಔಷಧಿಗಳ ಖಜಾನೆಯಾಗಿರುವ ಅಮೆಝಾನ್ ಮಳೆಕಾಡಿಗೆ ಬೆಂಕಿಯೆಂದರೆ, ಅದು ಪರೋಕ್ಷವಾಗಿ ನಾಡಿಗೆ ಬಿದ್ದ ಬೆಂಕಿಯೇ ಆಗಿದೆ. ಅಮೆಝಾನ್‌ನಲ್ಲಿ ಬೂದಿಯಾಗುತ್ತಿರುವುದು ಕಾಡು ಮತ್ತು ಪ್ರಾಣಿಗಳಲ್ಲ, ಸ್ವತಃ ಮನುಷ್ಯರೇ ಹೊತ್ತಿ ಉರಿಯುತ್ತಿದ್ದಾರೆ ಎಂದೇ ನಾವು ಭಾವಿಸಬೇಕು. ಗಾಳಿಯಿಂದ ಇಂಗಾಲವನ್ನು ಹೀರುವ ತನ್ನ ಸಾಮರ್ಥ್ಯದಿಂದಾಗಿ ಅಮೆಝಾನನ್ನು ಜಾಗತಿಕ ಉಷ್ಣಾಂಶ ಏರಿಕೆಯಿಂದ ತಡೆಯುವ ತಾಯಿಯ ತಂಪು ಮಡಿಲು ಎಂದೇ ತಿಳಿಯಲಾಗುತ್ತದೆ. ತಾಯಿಯ ಮಡಿಲಿಗೆ ಬೆಂಕಿ ಬಿದ್ದರೆ ಮಕ್ಕಳು ಉಳಿಯುವರೇ? ಜಗತ್ತಿನ ಶೇ.20ರಷ್ಟು ಆಮ್ಲಜನಕ ಇಲ್ಲೇ ಉತ್ಪತ್ತಿಯಾಗುವುದರಿಂದ ಇದನ್ನು ಭೂಮಿಯ ಶ್ವಾಸಕೋಶ ಎಂದೂ ಕರೆಯುತ್ತಾರೆ. ಬ್ರೆಝಿಲ್ ಅಮೆಝಾನ್‌ನ 70 ಮಿಲಿಯನ್ ಹೆಕ್ಟೇರ್ ಅಂದರೆ ಶೇ.60 ಪ್ರದೇಶವನ್ನು ಹೊಂದಿದ್ದು ಭೂಮಿಯಲ್ಲಿ ಇತರೆಡೆಗಳಲ್ಲಿ ಇರುವ ಜೀವ ವೈವಿಧ್ಯಕ್ಕಿಂತ ಹೆಚ್ಚಿನ ಜೀವಿಗಳು ಇಲ್ಲಿವೆ.

ಈ ವರ್ಷದಲ್ಲೇ ಅಮೆಝಾನ್ ಕಾಡಿನಲ್ಲಿ 74,000ಕ್ಕೂ ಅಧಿಕ ಕಾಡ್ಗಿಚ್ಚುಗಳನ್ನು ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಐಎನ್‌ಪಿಇ) ದಾಖಲಿಸಿದೆ. ಇದು 2018ರಲ್ಲಿ ಇದೇ ಅವಧಿಯಲ್ಲಿ ದಾಖಲಿಸಿದ ಬೆಂಕಿ ಘಟನೆಗಳಿಗಿಂತ ಶೇ. 84ರಷ್ಟು ಅಧಿಕವಾಗಿದೆ. ಅಷ್ಟು ಮಾತ್ರವಲ್ಲದೆ 2013ರ ಅನಂತರ ದಾಖಲಾದ ಅತೀಹೆಚ್ಚು ನಾಶ ನಷ್ಟ ಉಂಟಾದ ಬೆಂಕಿ ಅವಘಡಗಳಾಗಿವೆ. 2016ರಲ್ಲಿ ದಾಖಲಾದ ಬೆಂಕಿ ಅವಘಡಗಳು 68,484. ಕಳೆದ ವರ್ಷ ಈ ಪ್ರದೇಶದಲ್ಲಿ 40,136 ಬೆಂಕಿ ಅವಘಡಗಳು ಸಂಭವಿಸಿದ್ದವು. ಈ ಬೆಂಕಿ ಆಕಸ್ಮಿಕವಾಗಿದ್ದಿದ್ದರೆ ಪ್ರಕೃತಿಯ ತಲೆಗೆ ಕಟ್ಟಿ ಮನುಷ್ಯ ಪಾಪಪ್ರಜ್ಞೆಯಿಂದ ಪಾರಾಗಬಹುದಿತ್ತು. ಆದರೆ ಹೆಚ್ಚಿನ ಕಾಡ್ಗಿಚ್ಚುಗಳು ಆಕಸ್ಮಿಕವಲ್ಲ ಎನ್ನುತ್ತಿದ್ದಾರೆ ಪರಿಸರ ತಜ್ಞರು. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯ ನಾಶವೇ ಕಾಡ್ಗಿಚ್ಚಿಗೆ ಮುಖ್ಯ ಕಾರಣ ಎಂದು ಅವರು ವಾದಿಸುತ್ತಾರೆ. ಜೊತೆಗೆ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನರೊ ಅವರ ನೀತಿಗಳೂ ಅಮೆಝಾನ್ ಮಳೆಕಾಡುಗಳ ಮೇಲೆ ಅಪಾಯ ತಂದೊಡ್ಡಿದೆ.

ಬರಗಾಲವೂ ಕಾಡ್ಗಿಚ್ಚಿಗೆ ಒಂದು ಕಾರಣವಾಗಿವೆ. ಆದರೆ ಈ ವರ್ಷ ಅಮೆಝಾನ್‌ನಲ್ಲಿ ಬರದಂತಹ ಸನ್ನಿವೇಶ ನಿರ್ಮಾಣ ಆಗಿಲ್ಲ ಎನ್ನುವುದನ್ನು ಐಎನ್‌ಪಿಇ ಸಂಶೋಧಕರು ತಿಳಿಸುತ್ತಾರೆ. ಮಾನವನಿಂದಲೇ ಒಂದೋ ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಬೆಂಕಿ ಹುಟ್ಟುತ್ತದೆ ಎನ್ನುವುದನ್ನು ತಜ್ಞರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಗಣಿಗಾರಿಕೆಯೂ ಅರಣ್ಯ ನಾಶದ ಹಿಂದಿರುವ ಪ್ರಮುಖ ಕಾರಣವಾಗಿದೆ.ಬ್ರೆಝಿಲ್‌ನಲ್ಲಿ ಜಾನುವಾರು ಸಾಕುವವರು ತಮ್ಮ ಜಾನುವಾರುಗಳಿಗೆ ದೊಡ್ಡಿ ಅಥವಾ ಕೊಟ್ಟಿಗೆಗಳನ್ನು ನಿರ್ಮಿಸಲು ಕಾಡನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುತ್ತಾರೆ. ಇದೇ ರೀತಿಯಲ್ಲಿ ಅರಣ್ಯನಾಶ ಮುಂದುವರಿದರೆ 2030ರ ವೇಳೆಗೆ ಅಮೆಝಾನ್‌ನ ಕಾಲು ಭಾಗಕ್ಕೂ ಅಧಿಕ ಪ್ರದೇಶದಲ್ಲಿ ಮರಗಳೇ ಇರುವುದಿಲ್ಲ ಎಂದು ಜಾಗತಿಕ ವನ್ಯಜೀವಿ ನಿಧಿ ಅಂದಾಜಿಸಿದೆ.

ಉದ್ಯಮಪರ ನಿಲುವಿನ ಅಡಿಯಲ್ಲಿ ಚುನಾವಣಾ ಅಭಿಯಾನ ನಡೆಸಿದ್ದ ಬೊಲ್ಸೊನರೊ ಜಾಗತಿಕ ಹವಾಮಾನ ವೈಪರಿತ್ಯದ ವಿರುದ್ಧದ ಹೋರಾಟ ನಿರ್ಲಕ್ಷಿಸಿದ್ದಾರೆ ಮತ್ತು ಮಳೆಕಾಡನ್ನು ಅಪಾಯಕ್ಕೆ ದೂಡಿದ್ದಾರೆ. ಜನವರಿ ಒಂದರಂದು ಅಧಿಕಾರ ಸ್ವೀಕರಿಸಿದ ಬೊಲ್ಸೊನರೊ ಅಧಿಕಾರ ಪಡೆದ ಕೆಲವೇ ಗಂಟೆಗಳಲ್ಲಿ ಬ್ರೆಝಿಲ್‌ನ ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಪೂರಕವಾದ ಹಲವು ಕಾನೂನು ಬದಲಾವಣೆಗಳನ್ನು ಜಾರಿಗೆ ತಂದಿದ್ದರು. ಅಧ್ಯಕ್ಷರ ಈ ನಿಲುವೇ ಹೆಚ್ಚಿನ ಅಮೆಝಾನ್ ಕಾಡನ್ನು ಕಡಿದು ಜಾನುವಾರುಗಳಿಗೆ ದೊಡ್ಡಿ ನಿರ್ಮಿಸಲು ರೈತರಿಗೆ ಧೈರ್ಯ ನೀಡಿದೆ ಎನ್ನುವುದು ಆರೋಪ. ರೈತರ ಹಿತಾಸಕ್ತಿಯನ್ನು ರಕ್ಷಿಸುವ ಸಂದರ್ಭದಲ್ಲೇ ಅಮೆಝಾನ್ ಕಾಡನ್ನು ಉಳಿಸುವ ಕಡೆಗೂ ಅಲ್ಲಿನ ಸರಕಾರ ಗಮನ ಹರಿಸುವುದು ಇಂದಿನ ಅಗತ್ಯವಾಗಿದೆ. ತನ್ನನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಬೆಂಕಿಗೆ ಸರಕಾರೇತರ ಸಂಸ್ಥೆಗಳನ್ನು ಬೊಲ್ಸೊನರೊ ದೂರುತ್ತಿದ್ದಾರೆ. ಸರಕಾರೇತರ ಸಂಸ್ಥೆಗಳು ನನ್ನ ಸರಕಾರದ ಮಾನಹಾನಿ ಮಾಡಲು ಮಳೆಕಾಡಿಗೆ ಬೆಂಕಿ ಹಚ್ಚುತ್ತಿವೆ ಎಂದು ಇತ್ತೀಚೆಗೆ ಯಾವುದೇ ಸಾಕ್ಷಿ ನೀಡದೆ ಬೊಲ್ಸೊನರೊ ಆರೋಪಿಸಿದ್ದರು. ಅವರು ಕಾಡ್ಗಿಚ್ಚನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಒಂದು ದೇಶ ಅಭಿವೃದ್ಧಿಯಾಗಬೇಕು ನಿಜ. ಆದರೆ ಅದಕ್ಕೆ ತೆರುವ ಶುಲ್ಕವೇನು ಎನ್ನುವುದರ ಅರಿವೂ ಆ ದೇಶದ ಸರಕಾರಕ್ಕೆ ಇರಬೇಕು.

ಭಾರತವೂ ಕೂಡ ಕಾಡ್ಗಿಚ್ಚಿಗೆ ಕುಖ್ಯಾತವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಮೋದಿಯ ಅಭಿವೃದ್ಧಿ ನೀತಿ ಜಾರಿಗೆ ಬಂದ ಬಳಿಕ ಉದ್ಯಮಿಗಳ ಪಾಲಿಗೆ ಕಾಡು ಹಣದ ಖಜಾನೆಯಾಗಿ ಬದಲಾಗಿದೆ. ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದಕ್ಕೂ ಈ ಕಾಡ್ಗಿಚ್ಚನ್ನು ಬಳಸಲಾಗುತ್ತಿದೆ ಎನ್ನುವ ಆರೋಪಗಳಿವೆ. ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಕಾಡ್ಗಿಚ್ಚು ಈ ಹಿಂದಿಗಿಂತ ಮೂರು ಪಟ್ಟು ಹೆಚ್ಟಿದೆ. ಈ ವರ್ಷ ಜೂನ್ 16ರವರೆಗೆ ನಡೆದ ಕಾಡ್ಗಿಚ್ಚು ಪ್ರಕರಣಗಳ ಒಟ್ಟು ಸಂಖ್ಯೆ 28, 252. ಈ ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ 2017 ಮತ್ತು 2018ನೇ ವರ್ಷ ಕಾಡ್ಗಿಚ್ಚುಗಳಿಗೆ ಕುಖ್ಯಾತವಾಗಿವೆ. ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಮಹಾರಾಷ್ಟ್ರ ಅತಿ ಹೆಚ್ಚು ಕಾಡ್ಗಿಚ್ಚುಗಳನ್ನು ಕಂಡ ರಾಜ್ಯಗಳಾಗಿವೆ. ದುರದೃಷ್ಟಕ್ಕೆ ಕಾಡಿನ ಪರವಾಗಿ ಧ್ವನಿಯೆತ್ತುತ್ತಿರುವ ಪರಿಸರವಾದಿಗಳನ್ನು ನಮ್ಮ ಸರಕಾರ ದೇಶದ್ರೋಹಿಗಳಾಗಿ ಕಾಣುತ್ತಿದೆ. ಪರಿಸರದ ಪರವಾಗಿ ಮಾತನಾಡುತ್ತಿದ್ದ ಸರಕಾರೇತರ ಸಂಸ್ಥೆಗಳನ್ನು ವಿವಿಧ ಕಿರುಕುಳಗಳನ್ನು ನೀಡಿ ಬಾಯಿ ಮುಚ್ಚಿಸುತ್ತಿದೆೆ. ಅರಣ್ಯಗಳನ್ನು ತಲೆ ತಲಾಂತರಗಳಿಂದ ಕಾಪಾಡುತ್ತಾ ಬಂದಿರುವ ಆದಿವಾಸಿಗಳು, ಬುಡಕಟ್ಟು ಜನರ ಪರವಾಗಿ ಮಾತನಾಡುವವರನ್ನು ‘ನಗರ ನಕ್ಸಲರು’ ಎಂದು ಜೈಲಿಗೆ ತಳ್ಳುತ್ತಿದೆ. ‘ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದೊಡೆ ನಿಲಬಹುದೆ?’ ಈ ಸತ್ಯವನ್ನು ಜನಸಾಮಾನ್ಯರು ಜಾಗೃತರಾಗಿ ಸರಕಾರಕ್ಕೆ ಮನವರಿಕೆ ಮಾಡಿಸುವುದು ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)