varthabharthi

ನಿಮ್ಮ ಅಂಕಣ

ದೂರು-ದುಮ್ಮಾನ

ಮತ್ಸ್ಯೋದ್ಯಮದ ಸಂಕಷ್ಟಕ್ಕೆ ಹೊಣೆ ಯಾರು?

ವಾರ್ತಾ ಭಾರತಿ : 30 Aug, 2019

  ಮಾನ್ಯರೇ, ನಮ್ಮ ಕರಾವಳಿಯ ಮತ್ಸ್ಯೋದ್ಯಮ ತುಂಬಾ ಸಂಕಷ್ಟದಲ್ಲಿದೆ, ಆದರೆ ಆರಿಸಿ ಹೋದ ಇಲ್ಲಿಯ ಶಾಸಕ ಮತ್ತು ಸಂಸದರು ಇದರ ಬಗ್ಗೆ ಏನೂ ಮಾತನಾಡುತ್ತಿಲ್ಲ. ಸಾತ್ವಿಕ ಆಹಾರ ತಾಮಸಿಕ ಆಹಾರ ಎನ್ನುವ ಶಬ್ದಗಳ ಸರ್ಕಸ್ ಅಡಿಯಲ್ಲಿ ಜನರ ಆಹಾರ ಪದ್ಧತಿಯ ಅವಹೇಳನದಲ್ಲಿಯೇ ಮುಳುಗಿರುವ ವೈದಿಕ ಬುದ್ಧ್ದಿಯವರಿಗೆ ಮೊದಲಿನಿಂದಲೂ ಮತ್ಸ್ಯೋದ್ಯಮ ಅಂದರೆ ಒಂದು ಬಗೆಯ ನಿರ್ಲಕ್ಷ್ಯ. ಹಬ್ಬ, ಉಪವಾಸ ವ್ರತದ ಹೆಸರಲ್ಲಿ ಜನರು ಮೀನು ತಿನ್ನದಂತೆ ತಡೆಯಲು ನೆಪ ಹುಡುಕು ವವರಿಗೆ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಾಳಜಿಯಿರಲು ಹೇಗೆ ಸಾಧ್ಯ? ಕೇವಲ ಮೀನುಗಾರರ ಓಟಿಗಾಗಿ ಗೌರವದ ನಾಟಕ ಆಡುತ್ತಾರೆ ಅಷ್ಟೇ. ಮೀನುಗಾರಿಕೆ ಕೇವಲ ಮೀನು ತಿನ್ನುವವರ ಮೇಲೆ ಅವಲಂಬಿಸಿಲ್ಲ. ಮೀನುಗಾರರು ಹಿಡಿಯುವ ಅರ್ಧದಷ್ಟು ಮೀನು ಫಿಶ್ ಮೀಲ್ ಮತ್ತು ಮೀನಿನ ಎಣ್ಣೆ ತಯಾರಿಕಾ ಘಟಕಗಳಿಗೆ ಸರಬರಾಜು ಆಗುತ್ತದೆ. ದೊಡ್ಡ ದೊಡ್ಡ ಬಲೆಯಲ್ಲಿ ಮೀನು ಹಿಡಿದಾಗ ಅದರಲ್ಲಿ ಎಲ್ಲಾ ಜಾತಿಯ ಮೀನುಗಳೂ ಬೀಳುತ್ತವೆ. ಅವುಗಳಲ್ಲಿ ತಿನ್ನಲು ಯೋಗ್ಯವಾದ ಮೀನುಗಳನ್ನು ವಿಂಗಡಿಸಿ ನಗರದ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಆದರೆ ಖಾದ್ಯ ಪದಾರ್ಥಕ್ಕೆ ಯೋಗ್ಯವಲ್ಲದ ಮೀನುಗಳಿಗೆ ಮಾತ್ರ ಕೇವಲ ಫಿಶ್ ಮೀಲ್ ಘಟಕಗಳೇ ಮುಖ್ಯ ಗಿರಾಕಿ. ಫಿಶ್ ಮೀಲ್ ಮತ್ತು ಮೀನಿನ ಎಣ್ಣೆಯ ಕಂಪೆನಿಗಳ ಮಾಲಕರು ಹೆಚ್ಚಾಗಿ ಮುಸ್ಲಿಮರು. ಆದರೆ ಮೀನು ಹಿಡಿಯುವವರಲ್ಲಿ ಹೆಚ್ಚಿನವರು ಹಿಂದೂಗಳು. ಹಾಗಾಗಿ ದಶಕಗಳಿಂದ ಮೀನುಗಾರಿಕಾ ಕ್ಷೇತ್ರವು ಹಿಂದೂ ಮುಸ್ಲಿಂ ಭಾವೈಕ್ಯಕ್ಕೆ ಒಂದು ಉನ್ನತ ನಿದರ್ಶನವಾಗಿತ್ತು. ಆದರೆ ಹಿಂದಿನ ಕೆಲ ವರ್ಷಗಳಿಂದ ಕೆಲವು ಅವಕಾಶವಾದಿ ರಾಜಕೀಯ ನೇತಾರರು ಬಿತ್ತಿದ ಕೋಮು ವಿಷಬೀಜವು ಈಗ ಗ್ಯಾಂಗರಿನ್ ತರಹ ಸಂಪೂರ್ಣ ಮೀನುಗಾರಿಕಾ ಕ್ಷೇತ್ರಕ್ಕೆ ವ್ಯಾಪಿಸಿರುವುದು ನಿಜ. ಮೀನಿನ ಎಣ್ಣೆಯ ಬಳಕೆ ಎಲ್ಲರಿಗೂ ಗೊತ್ತಿದೆ, ಆದರೆ ಫಿಶ್ ಮೀಲ್ ಅಂದರೆ ಏನು ಮತ್ತು ಅದರ ಬಳಕೆ ಯಾವುದಕ್ಕೆ ಎಂದು ಹೆಚ್ಚಿನ ಮಡಿವಂತರಿಗೆ ಗೊತ್ತಿಲ್ಲ. ಮೀನುಗಾರರು ಹಿಡಿಯುವ ವಿವಿಧ ಜಾತಿಯ ಮೀನುಗಳಲ್ಲಿ ಅರ್ಧದಷ್ಟು ಜಾತಿಯ ಮೀನುಗಳು ಮನುಷ್ಯರಿಗೆ ತಿನ್ನಲು ಯೋಗ್ಯವಲ್ಲದ ಜಾತಿಗಳವು. ಹಾಗಾಗಿ ಇವುಗಳನ್ನು ಪೂರ್ತಿ ಒಣಗಿಸಿ ಸಣ್ಣಗೆ ಪುಡಿ ಮಾಡಿ ಕೋಳಿ ಫಾರ್ಮ್‌ಗಳಲ್ಲಿ ಕೋಳಿಯ ಆಹಾರವಾಗಿ ಕೊಡಲಾಗುತ್ತದೆ. ಇದುವೇ ಫಿಶ್ ಮೀಲ್. ಅದೇ ಪ್ರಕಾರ ಹಂದಿ ಫಾರ್ಮ್, ದನದ ಫಾರ್ಮ್, ಮೊಲ ಮತ್ತು ಬಾತುಕೋಳಿ ಫಾರ್ಮ್ ಗಳಲ್ಲೂ ಈ ಮೀನಿನ ಪುಡಿಯನ್ನು ಇತರ ಜಾನುವಾರು ಆಹಾರಗಳೊಂದಿಗೆ ಅಥವಾ ಹಿಂಡಿಯೊಂದಿಗೆ ಮಿಕ್ಸ್ ಮಾಡಿ ಅವುಗಳಿಗೆ ತಿನ್ನಲು ಕೊಡಲಾಗುತ್ತದೆ. ಇವು ಕೋಳಿಗಳಿಗೆ ಮತ್ತು ಫಾರ್ಮ್ ಜಾನುವಾರುಗಳಿಗೆ ತುಂಬಾ ಪೌಷ್ಟಿಕವಾಗಿರುವುದರಿಂದ ಈ ಫಿಶ್ ಮೀಲ್‌ಗೆ ಒಳ್ಳೆಯ ಬೇಡಿಕೆ ಇದೆ. ಸಾಕು ನಾಯಿಗಳಿಗೂ ಫಿಶ್ ಮೀಲ್ ಒಳ್ಳೆಯ ಆಹಾರ. ಆದರೆ ಮನುಷ್ಯರಿಗೆ ತಿನ್ನಲು ಯೋಗ್ಯವಲ್ಲದ ಮೀನಿನ ಅತಿ ದೊಡ್ಡ ಖರೀದಿದಾರರಾಗಿರುವ ಫಿಶ್ ಮೀಲ್ - ಫಿಶ್ ಆಯಿಲ್ ಕಂಪೆನಿಗಳು ಜಿಎಸ್‌ಟಿ ಹೊಡೆತದಿಂದ ಈಗ ನಲುಗಿ ಹೋಗಿವೆ. ಪ್ರತಿ ಯಾಂತ್ರೀಕೃತ ಬೋಟಿನಲ್ಲಿ ಇಪ್ಪತ್ತು ಟನ್ನಿನಷ್ಟು ಮೀನು ಒಮ್ಮೆಗೆ ಹಿಡಿದು ತರಲಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಮೀನು ಅಂದೇ ಮಾರಾಟವಾಗದಿದ್ದರೆ ಒಂದು ಟ್ರಿಪ್ಪಿಗೆ ರೂ. ಹತ್ತು ಲಕ್ಷದಷ್ಟು ಮೊತ್ತ ಬೋಟಿನ ಗುತ್ತಿಗೆದಾರರಿಗೆ ನಷ್ಟವಾಗುತ್ತದೆ. ಖರೀದಿದಾರರು ಇಲ್ಲದಿದ್ದರೆ ಈ ಮೀನುಗಳನ್ನು ಮರಳಿ ಸಮುದ್ರಕ್ಕೆ ಎಸೆಯಬೇಕಾಗುತ್ತದೆ. ಜಿಎಸ್‌ಟಿ ಆರಂಭಕ್ಕೆ ಮೊದಲು ಮೀನಿನ ಎಣ್ಣೆ ತಯಾರಿಕೆಗೆ ಕೇವಲ ಶೇ.5 ತೆರಿಗೆ ಇತ್ತು. ಆದರೆ ಈಗ ಅದಕ್ಕೆ ಶೇ.12 ಜಿಎಸ್‌ಟಿ ಕೊಡಬೇಕಾಗುತ್ತಿದೆ. ಅದೇ ಪ್ರಕಾರ ಫಿಶ್ ಮೀಲ್‌ಗೆ ಮೊದಲು ಯಾವುದೇ ತೆರಿಗೆ ಇರಲಿಲ್ಲ. ಆದರೆ ಈಗ ಶೇ.5 ಜಿಎಸ್‌ಟಿ ವಿಧಿಸಲಾಗಿದೆ. ಮೀನು ಕೆಡದಂತೆ ಸಂರಕ್ಷಿಸಲು ಮಂಜುಗಡ್ಡೆ ಬೇಕು. ಮೀನುಗಾರಿಕೆಗೆ ಪೂರೈಸುವ ಮಂಜುಗಡ್ಡೆಗೆ 2017ರ ವರೆಗೂ ರಾಜ್ಯ ಸರಕಾರ ಸಂಪೂರ್ಣ ತೆರಿಗೆ ವಿನಾಯತಿ ನೀಡಿತ್ತು. ಆದರೆ ಈಗ ಮಂಜುಗಡ್ಡೆಗೂ ಶೇ.5 ಜಿಎಸ್‌ಟಿ ಹಾಕಲಾಗಿದೆ. ಮಂಜುಗಡ್ಡೆ ತಯಾರಿಸಲು ವಿಪರೀತ ವಿದ್ಯುತ್ ಬೇಕು. ಮೊದಲು ಐಸ್ ಪ್ಲಾಂಟುಗಳಿಗೆ ಪೂರೈಸುವ ವಿದ್ಯುತ್ತಿಗೆ ಕೇವಲ ಶೇ.6 ತೆರಿಗೆ ಇತ್ತು. ಆದರೆ ಈಗ ಈ ವಿದ್ಯುತ್ ಮೇಲೆ ಶೇ.9 ಜಿಎಸ್‌ಟಿ ಹೇರಲಾಗಿದೆ. ಮೀನು ಸಂರಕ್ಷಿಸಿಡುವ ಶೈತ್ಯಾಗಾರಗಳಿಗೂ ಜಿಎಸ್‌ಟಿ ಹೊಡೆತ ಬಿದ್ದಿದೆ. ಹೀಗಾಗಿ ಕೇವಲ ಮತ್ಸ್ಯೋದ್ಯಮ ಮಾತ್ರವಲ್ಲ ಅದರ ಮೇಲೆ ಆಧಾರಿತ ಇತರ ಉದ್ಯಮಗಳೂ ಜಿಎಸ್‌ಟಿ ಹೊಡೆತದಿಂದ ನಲುಗಿವೆ. ಆದರೆ ಕೇಂದ್ರ ಸರಕಾರ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಇಲ್ಲ. ಸುವರ್ಣ ತ್ರಿಭುಜ ಬೋಟ್ ಕಳೆದ ವರ್ಷ ಡಿಸೆಂಬರ್ 13ಕ್ಕೆ ಏಳು ಸಿಬ್ಬಂದಿಯೊಂದಿಗೆ ಕಾಣೆಯಾಗಿತ್ತು. ಅದಾಗಿ ಕೇವಲ 15 ದಿನಕ್ಕೇ ಭಾರತೀಯ ನೌಕಾಪಡೆಯು ಮಹಾರಾಷ್ಟ್ರ ಕರಾವಳಿಯಲ್ಲಿ ಇಂತಹ ಒಂದು ಮೀನುಗಾರರ ಬೋಟು ತಮ್ಮ ನೌಕಾಪಡೆಯ ಹಡಗಿನಡಿ ಬಿದ್ದು ನಾಶವಾಗಿದೆ ಎಂಬ ವರದಿಯನ್ನು ಕೇಂದ್ರ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಇವರಿಗೆ ಕೊಟ್ಟಿತ್ತು. ಆದರೆ ಈ ವಿಷಯವನ್ನು ಚುನಾವಣೆಯ ದೃಷ್ಟಿಯಿಂದ ಆರು ತಿಂಗಳು ಗುಟ್ಟಾಗಿ ಇಟ್ಟು ಮೇ ತಿಂಗಳ 22ನೇ ತಾರೀಕಿಗೆ ಅಂದರೆ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕೇವಲ ಒಂದು ದಿನ ಮುಂಚೆ ರಕ್ಷಣಾಮಂತ್ರಿಗಳು ಅಧಿಕೃತವಾಗಿ ಬಹಿರಂಗ ಪಡಿಸಿದರು. ಇದು ಕೇಂದ್ರ ಸರಕಾರ ಮೊಗವೀರರ ನಂಬಿಕೆಗೆ ಮಾಡಿದ್ದ ದೊಡ್ಡ ದ್ರೋಹವಾಗಿತ್ತು. ಈ ನೌಕಾಪಡೆಯ ಹಡಗು ಅಪಘಾತದಲ್ಲಿ ದುರ್ಮರಣ ಅಪ್ಪಿರುವ ಏಳು ಜನ ಮೀನುಗಾರರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲವಂತೆ. ಮೊಗವೀರರೆಲ್ಲಾ ತಮ್ಮ ಮನೆಯ ಮುಂದೆ ಕಟ್ಟಿರುವ ಬಿಜೆಪಿಯ ಪತಾಕೆ ಇನ್ನೂ ಬಿಚ್ಚಿಲ್ಲ. ಅದಾಗಲೇ ಕೇಂದ್ರ ಸರಕಾರದ ನೀತಿಗಳಿಂದಾಗಿ ಮತ್ಸ್ಯೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ಒಂದು ಕಾಲದಲ್ಲಿ ಉತ್ತಮ ಆದಾಯ ಹೊಂದಿದ್ದ ಮೀನು ಮಾರುವ ಹುಡುಗಿಯರೂ ಹೊಸ ಸ್ಕೂಟರ್ ಮೇಲೆ ತಿರುಗಾಡುತ್ತಿದ್ದರು, ಆದರೆ ಈಗ ಅವರು ಸ್ಕೂಟರ್ ಮಾರುವ ಹಂತಕ್ಕೆ ಮುಟ್ಟಿದ್ದಾರೆ. ಮೋದಿ ಮೋದಿ ಎಂದು ಕೂಗಿ ಸಾರಾಸಗಟಾಗಿ ಬಿಜೆಪಿಗೆ ಮತ ಹಾಕಿದವರಿಗೆ ಈಗ ಯಾರೂ ಗತಿ ಇಲ್ಲ! ಈಗಲಾದರೂ ಕರಾವಳಿಯ ಮೀನುಗಾರರು ತಮಗೆ ಯಾರು ಹಿತವರು ಎಂದು ವಿವೇಚಿಸಲಿ. ಹೆಜ್ಜೆ ಹೆಜ್ಜೆಗೆ ದೇವರು ದಿಂಡರು ಪೂಜೆ ವ್ರತ ಉಪವಾಸ ಎನ್ನುತ್ತಾ ಮಹಿಳೆಯರ ಬ್ರೈನ್ ವಾಶ್ ಮಾಡಿ ಮೌಢ್ಯ ತುಂಬಿ, ವರ್ಷದಲ್ಲಿ 150 ದಿನ ಅವರು ಮೀನು ತಿನ್ನದಂತೆ ಮಾಡಿ ಬಡ ಮೀನಿನ ವ್ಯಾಪಾರಿಗಳ ಹೊಟ್ಟೆಗೆ ಹೊಡೆಯುವ ಧರ್ಮದ ವ್ಯಾಪಾರಿ ಪಕ್ಷದವರು ಬೇಕೋ ಅಥವಾ ಮೀನು ಮನುಷ್ಯನ ದೇಹದ ಆರೋಗ್ಯಕ್ಕೆ ಮಾತ್ರವಲ್ಲ ಮೆದುಳಿಗೂ ಬಹಳ ಪ್ರಯೋಜನಕಾರಿ ಎಂದು ಹೇಳುವ ವೈಜ್ಞಾನಿಕ ಮನೋಭಾವವುಳ್ಳ ಮತ್ತು ಎಲ್ಲರ ಆಹಾರ ಸಂಸ್ಕೃತಿಯನ್ನು ಗೌರವಿಸುವ ಪಕ್ಷದವರು ಬೇಕೋ ಎಂದು.

 -ವಿಜಯ ಬಿ. ಕಾಂಚನ್, ಕೂಳೂರು, ಮಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)