varthabharthi

ಆರೋಗ್ಯ

ಏನಿದು ನರ್ವಸ್ ಬ್ರೇಕ್‌ಡೌನ್?: ಕಾರಣಗಳು ಮತ್ತು ಲಕ್ಷಣಗಳು ಇಲ್ಲಿವೆ

ವಾರ್ತಾ ಭಾರತಿ : 30 Aug, 2019

ನೀವೆಂದಾದರೂ ಜೀವನದಲ್ಲಿ ಭಾವನಾತ್ಮಕ ಮತ್ತು ದೈಹಿಕ ಒತ್ತಡಗಳಿಂದಾಗಿ ಭಾವೋದ್ವೇಗಕ್ಕೆ ಒಳಗಾಗಿದ್ದೀರಾ? ಪ್ರತಿಯೊಬ್ಬರೂ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಖಂಡಿತವಾಗಿಯೂ ಇಂತಹ ಸ್ಥಿತಿಯನ್ನು ಅನುಭವಿಸಿರುತ್ತಾರೆ. ಅಂತಹ ಸಂದರ್ಭದಲ್ಲಿ ಬದುಕಿನ ಭಾವನಾತ್ಮಕ ಮತ್ತು ದೈಹಿಕ ಬೇಡಿಕೆಗಳೊಂದಿಗೆ ಏಗಲು ಅವರಿಗೆ ಸಾಧ್ಯವಾಗುವುದಿಲ್ಲ. ತನ್ನ ದೈನಂದಿನ ಜೀವನದಲ್ಲಿ ವ್ಯಕ್ತಿಯು ಸಹಜವಾಗಿ ಕಾರ್ಯ ನಿರ್ವಹಿಸುವುದನ್ನು ಅಸಾಧ್ಯವಾಗಿಸುವ ಒತ್ತಡದ ಸ್ಥಿತಿಯನ್ನು ನರ್ವಸ್ ಬ್ರೇಕ್‌ಡೌನ್ ಅಥವಾ ‘ನರಾಘಾತ’ ಎಂದು ಬಣ್ಣಿಸಲಾಗಿದೆ.

ನರ್ವಸ್ ಬ್ರೇಕ್‌ಡೌನ್ ವೈದ್ಯಕೀಯ ಶಬ್ದವಲ್ಲ. ಅದನ್ನು ನಮ್ಮ ಶರೀರದಲ್ಲಿಯ,ಗೊತ್ತಿಲ್ಲದ ವ್ಯೆದ್ಯಕೀಯ ಸಮಸ್ಯೆಯನ್ನು ಸೂಚಿಸಲು ಬಳಸಲಾಗುತ್ತದೆ. ಖಿನ್ನತೆ,ಆಘಾತದ ನಂತರದ ಒತ್ತಡದ ಕಾಯಿಲೆ (ಪಿಟಿಎಸ್‌ಡಿ) ಇವು ಇಂತಹ ಕೆಲವು ಅನಾರೋಗ್ಯಗಳಲ್ಲಿ ಸೇರಿವೆ.

ಲಕ್ಷಣಗಳು: ನರ್ವಸ್ ಬ್ರೇಕ್‌ಡೌನ್ ನಿಖರವಾಗಿ ವೈದ್ಯಕೀಯ ಶಬ್ದವಲ್ಲವಾದ್ದರಿಂದ ಇದರ ಲಕ್ಷಣಗಳು ವ್ಯಕ್ತಿಯನ್ನು ಮತ್ತು ಆತನನ್ನು ಕಾಡುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಅವಲಂಬಿಸಿರುತ್ತವೆ. ಆದರೆ,ಕಿರಿಕಿರಿಯ ಭಾವನೆ,ಅನಾರೋಗ್ಯಕರ ಆಹಾರ ಕ್ರಮ,ಏಕಾಗ್ರತೆಯ ಕೊರತೆ,ಆತ್ಮಹತ್ಯೆ ಅಥವಾ ಸ್ವಯಂ ಹಾನಿಯ ವಿಚಾರಗಳು, ನಿದ್ರಾಹೀನತೆ,ಭ್ರಾಂತಿಗಳು,ಮನಃಸ್ಥಿತಿಯಲ್ಲಿ ತೀವ್ರ ಹೊಯ್ದಿಟ,ಉಸಿರಾಟದಲ್ಲಿ ತೊಂದರೆ,ಎದೆನೋವು ಸೇರಿದಂತೆ ತಲ್ಲಣಗಳ ಅನುಭವ,ತಲೆ ಸುತ್ತುವಿಕೆ,ಹೊಟ್ಟೆಯ ತೊಂದರೆ,ಜನರೊಂದಿಗೆ ಬೆರೆಯಲು ಇಷ್ಟಪಡದಿರುವುದು, ಸ್ವಚ್ಛತೆಯನ್ನು ಸರಿಯಾಗಿ ಕಾಯ್ದುಕೊಳ್ಳದಿರುವುದು ಮತ್ತು ಒಂಟಿತನ ಇವು ನರ್ವಸ್ ಬ್ರೇಕ್‌ಡೌನ್‌ನ ಲಕ್ಷಣಗಳಲ್ಲಿ ಸೇರಿವೆ.

ಕಾರಣಗಳು: ವ್ಯಕ್ತಿಯೋರ್ವ ನರ್ವಸ್ ಬ್ರೇಕ್‌ಡೌನ್‌ಗೊಳಗಾಗಲು ಹಲವಾರು ಕಾರಣಗಳಿವೆ. ಬಹಳಷ್ಟು ಒತ್ತಡ ಮತ್ತು ಉದ್ವಿಗ್ನತೆ ಅದಕ್ಕೆ ಕಾರಣವಾಗಬಹುದು. ನಿಧಾನವಾಗಿ ರೂಪುಗೊಳ್ಳುವ ಒತ್ತಡವು ನರಾಘಾತ ಅಥವಾ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ. ಇತ್ತೀಚಿಗೆ ಆಪ್ತರೊಬ್ಬರ ಸಾವಿನಂತಹ ಆಘಾತಕಾರಿ ಘಟನೆ,ನಿರಂತರ ಕೆಲಸದ ಒತ್ತಡ,ಹಣಕಾಸಿನ ಮುಗ್ಗಟ್ಟು,ಒಂದೇ ಸಮಯದಲ್ಲಿ ಅತಿಯಾದ ಹೊಣೆಗಾರಿಕೆಗಳು,ಶೈಕ್ಷಣಿಕ ಒತ್ತಡ, ಯಾವುದಾದರೂ ರೀತಿಯ ದೈಹಿಕ ಮತ್ತು ಮಾನಸಿಕ ಕಿರುಕುಳ ಇವು ನರ್ವಸ್ ಬ್ರೇಕ್‌ಡೌನ್‌ಗೆ ಕಾರಣವಾಗಬಲ್ಲ ಕೆಲವು ಸ್ಥಿತಿಗಳಾಗಿವೆ.

ಚಿಕಿತ್ಸೆ: ನರ್ವಸ್ ಬ್ರೇಕ್‌ಡೌನ್ ರೋಗನಿರ್ಧಾರವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು ಮತ್ತು ಚಿಕಿತ್ಸೆಯು ನಿರ್ದಿಷ್ಟ ವ್ಯಕ್ತಿಯ ರೋಗನಿರ್ಧಾರವನ್ನು ಅವಲಂಬಿಸಿರುತ್ತದೆ. ರೋಗಿಯ ಸ್ಥಿತಿಯನ್ನು ಅವಲಂಬಿಸಿ ವೈದ್ಯರು ಸಮಾಲೋಚನೆ ಅಥವಾ ಮನೋಚಿಕಿತ್ಸೆಗೆ ಮುಂದಾಗಬಹುದು. ಅವರು ಕೆಲವು ಖಿನ್ನತೆ ಪ್ರತಿರೋಧಕ ಅಥವಾ ಉದ್ವಿಗ್ನತೆ ಪ್ರತಿರೋಧಕ ಔಷಧಿಗಳನ್ನು ಶಿಫಾರಸು ಮಾಡಬಹುದು. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳ ಮೂಲಕವೂ ಸ್ಥಿತಿಯ ತೀವ್ರತೆಯನ್ನು ಕಡಿಮೆಗೊಳಿಸಬಹುದು. ಇದಕ್ಕೆ ಕೆಲವು ಟಿಪ್ಸ್ ಇಲ್ಲಿವೆ.....

ಒತ್ತಡಕ್ಕೆ ಕಾರಣವಾಗಿರುವ ಸಮಸ್ಯೆ ಅಥವಾ ಸಂಘರ್ಷವನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುವುದು, ಆಳವಾದ ಉಸಿರಾಟ ಮತ್ತು ಧ್ಯಾನದಂತಹ ಮನಸ್ಸು ಮತ್ತು ಶರೀರದ ನಿರಾಳತೆಗೆ ನೆರವಾಗುವ ವ್ಯಾಯಾಮಗಳಲ್ಲಿ ತೊಡಗಿಕೊಳ್ಳುವುದು. ಯೋಗವು ಉಸಿರಾಟದ ನಿಯಂತ್ರಣಕ್ಕೆ ನೆರವಾಗಬಲ್ಲದು ಮತ್ತು ಇದು ನರಗಳನ್ನು ಶಾಂತವಾಗಿರಿಸುತ್ತದೆ. ದಿನಕ್ಕೆ ಕನಿಷ್ಠ ಅರ್ಧ ಗಂಟೆ ಕಾಲ ವಿವಿಧ ವ್ಯಾಯಾಮಗಳಲ್ಲಿ ತೊಡಗಿಕೊಳ್ಳುವುದು ಅಗತ್ಯ. ಕೇವಲ 10 ನಿಮಿಷಗಳಿಗಾಗಿಯಾದರೂ ಸರಿ,ಏನಾದರೊಂದು ಕೆಲಸವಿಟ್ಟುಕೊಂಡು ಮನೆಯಿಂದ ಹೊರಗೆ ಬೀಳುವುದು ಮನಸ್ಸು ಮತ್ತು ಶರೀರದ ಪ್ರಶಾಂತತೆಗೆ ನೆರವಾಗುತ್ತದೆ.

ಜನರೊಂದಿಗೆ ಬೆರೆಯುವುದು,ಆಪ್ತರೊಂದಿಗೆ ತಮ್ಮನ್ನು ಕಾಡುವ ವಿಷಯಗಳ ಬಗ್ಗೆ ಹೇಳಿಕೊಳ್ಳುವುದರಿಂದ ಒತ್ತಡವು ಕೊಂಚ ಕಡಿಮೆಯಾಗುತ್ತದೆ. ಆಹಾರ ಸೇವನೆಗೆ ಹಾಗೂ ನಿದ್ರೆಗೆ ಕ್ರಮವನ್ನು ರೂಪಿಸಿಕೊಳ್ಳಬೇಕು ಮತ್ತು ಅದನ್ನು ತಪ್ಪದೇ ಪಾಲಿಸಬೇಕು. ನರ್ವಸ್ ಬ್ರೇಕ್‌ಡೌನ್‌ನಿಂದ ಬಳಲುತ್ತಿರುವವರಿಗಾಗಿಯೇ ರೂಪಿಸಿರುವ ಸಾಮಾಜಿಕ ಮಾಧ್ಯಮ ಗುಂಪಿಗೆ ಸೇರ್ಪಡೆಗೊಳ್ಳುವುದು. ಮದ್ಯಪಾನ,ಧೂಮ್ರಪಾನ ಮತ್ತು ಕೆಫೀನ್ ಸೇವನೆಯನ್ನು ಸಂಪೂರ್ಣವಾಗಿ ವರ್ಜಿಸುವುದು. ನಿದ್ರೆ ಸರಿಯಾಗಿರುವಂತೆ ನೋಡಿಕೊಳ್ಳುವುದು ಇವೇ ಮುಂತಾದ ಜೀವನಶೈಲಿ ಬದಲಾವಣೆಗಳು ನರ್ವಸ್ ಬ್ರೇಕ್‌ಡೌನ್‌ನ್ನು ನಿಭಾಯಿಸಲು ನೆರವಾಗುತ್ತವೆ.

ಹೆಚ್ಚಿನವರು ಆಗಾಗ್ಗೆ ದುಃಖ,ಖಿನ್ನತೆ ಮತ್ತು ಆತಂಕವನ್ನು ಅನುಭವಿಸುತ್ತಿರುತ್ತಾರೆ,ಆದರೆ ಇದು ನರ್ವಸ್ ಬ್ರೇಕ್‌ಡೌನ್ ಆಗಿರಲೇಬೇಕು ಎಂದೇನಿಲ್ಲ ಎನ್ನುವುದು ನೆನಪಿನಲ್ಲಿರಲಿ. ಜೀವನದಲ್ಲಿಯ ಕೆಲವು ಒತ್ತಡದ ಘಟನೆಗಳಿಂದ ನಿಮ್ಮ ದೈನಂದಿನ ಜೀವನದಲ್ಲಿ ನೀವು ಮಾಡುತ್ತಿದ್ದ ಕೆಲಸವನ್ನು ಮಾಡಲು ಸಾಧ್ಯವಾಗದಿರುವ ಸ್ಥಿತಿಯು ನರ್ವಸ್ ಬ್ರೇಕ್‌ಡೌನ್‌ನ್ನು ಸೂಚಿಸುತ್ತದೆ. ಈ ಸಮಸ್ಯೆಯಿಂದ ಪಾರಾಗಲು ವೈದ್ಯಕೀಯ ಚಿಕಿತ್ಸೆಗಳಿವೆ. ಆದರೆ ನೀವು ಈ ಅಸ್ವಸ್ಥತೆಯ ಲಕ್ಷಣಗಳನ್ನು ಗುರುತಿಸಬೇಕು ಮತ್ತು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಲು ಗಟ್ಟಿ ಮನಸ್ಸು ಹೊಂದಿರಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)