varthabharthi

ನಿಮ್ಮ ಅಂಕಣ

‘ಬ್ರೇಕಿಂಗ್ ನ್ಯೂಸ್’ ಎಂದರೇನು?

ವಾರ್ತಾ ಭಾರತಿ : 30 Aug, 2019
-ವಿ.ಎನ್. ಲಕ್ಷ್ಮೀನಾರಾಯಣ, ಮೈಸೂರು

ಮಾನ್ಯರೆ,

ಪ್ರಸ್ತುತ ಕನ್ನಡದ ಖಾಸಗಿ ಟಿವಿ ವಾಹಿನಿಗಳು, ಸಾಮಾನ್ಯ ನೆಲೆಯಲ್ಲೂ ವೀಕ್ಷಣೆಗೆ ಯೋಗ್ಯವಲ್ಲದ ಮಟ್ಟಕ್ಕೆ ಕುಸಿದಿವೆ ಎಂದು ನನಗೆ ತೋರುತ್ತದೆ. ಹಾಗೆಂದರೆ, ಸರಕಾರೀ ನಿಯಂತ್ರಣದ ವಾಹಿನಿಗಳು ಉತ್ತಮ ಎಂದೇನೂ ಅಲ್ಲ. ಟಿಆರ್‌ಪಿ ಸ್ಪರ್ಧೆಯೂ ಸೇರಿದಂತೆ ಅನೇಕ ಕಾರಣಗಳಿಗಾಗಿ ‘ವಾರ್ತಾಪ್ರಸಾರ’ ಎಂಬ ಪರಿಕಲ್ಪನೆಯೇ ವಿಕೃತಗೊಂಡಿರುವಂತೆ ತೋರುತ್ತದೆ.

ವಾರ್ತೆಯೆಂದರೆ ಒಂದು ದಿನದ ಅವಧಿಯಲ್ಲಿ ಪ್ರಾಂತ, ದೇಶ, ವಿದೇಶಗಳಲ್ಲಿ ಸಾರ್ವಜನಿಕರ ಅವಗಾಹನೆಗೆ ಸಾಮಾನ್ಯ ಅರ್ಥದಲ್ಲಿ ಯೋಗ್ಯವಾದ ಏನೇನು ಘಟನೆಗಳು, ಎಲ್ಲೆಲ್ಲಿ ಜರುಗಿದವು ಎಂಬುದನ್ನು, ವರದಿಗಾರರ ಮತ್ತು ಸಂಪಾದಕರ ಅಭಿಪ್ರಾಯಗಳನ್ನು ಬೆರಸದೆ ಅಥವಾ ಅವರ ಟೀಕೆ-ವಿವರಣೆಗಳಿಂದ ಮುಕ್ತವಾಗಿ ಮಂಡಿಸುವ ಕ್ರಮ ಎಂದು ನನ್ನಂಥವರು ನಂಬಿಕೊಂಡು ಬಂದಿದ್ದೇವೆ. ಈಗ ಪ್ರಚಲಿತವಿರುವ ಕ್ರಮದಲ್ಲಿ ಈ ಅರ್ಥದ ವಾರ್ತೆಗಳ ಮಂಡನೆ ಸಂಪೂರ್ಣವಾಗಿ ಮಾಯವಾಗಿಬಿಟ್ಟಿದೆ. ವಾಹಿನಿಗಳ ಮಾಲೀಕರು-ಸಂಪಾದಕರು-ವರದಿಗಾರರ ದೃಷ್ಟಿಯಿಂದ ‘ಮುಖ್ಯ’ವಾದ ಒಂದೆರಡು ಅಪರಾಧ ಅಥವಾ ರಾಜಕೀಯ ಬೆಳವಣಿಗೆಗಳ ಬಗ್ಗೆ, ಅವರದೇ ಟೀಕೆ, ವ್ಯಾಖ್ಯಾನ, ವಿವರಣೆಗಳನ್ನು ಪೆದ್ದು ಪೆದ್ದಾಗಿ ದಿನವಿಡೀ, ‘ಪುಟ್ಟ ಬ್ರೇಕ್’ ಗಳ ನಡುವೆ ಹೇಳಿದ್ದನ್ನೇ ಹೇಳುತ್ತಾ ಹೋಗುವುದೇ ‘ವಾರ್ತೆ’ ಎಂದಾಗಿಬಿಟ್ಟಿದೆ.

ನನಗೆ ತಿಳಿದಿರುವಂತೆ ‘ಬ್ರೇಕಿಂಗ್ ನ್ಯೂಸ್’ ಎಂದರೆ, ಸುದ್ದಿ ಪ್ರಸಾರ ನಡೆಯದ ಅವಧಿಯಲ್ಲಿ, ಬೇರೆ ಯಾವುದೇ ಕಾರ್ಯಕ್ರಮ ಪ್ರಸಾರವಾಗುತ್ತಿದ್ದರೂ, ಅದರ ನಡುವೆಯೇ ಪ್ರಸಾರಮಾಡಲೇಬೇಕಾದ ಮುಖ್ಯ ಸುದ್ದಿ. ಈಗ ನೋಡಿದರೆ ಪ್ರಸಾರವಾಗುವುದೆಲ್ಲವೂ ‘ಬ್ರೇಕಿಂಗ್ ನ್ಯೂಸ್’ ಎಂದಾಗಿದ್ದು ಆ ಪದಗುಚ್ಛವೂ ತನ್ನ ಅರ್ಥವನ್ನು ಕಳೆದುಕೊಂಡಿದೆ.

ಮನರಂಜನೆಯ ಹೆಸರಿನಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಂತೂ ಕೆಲವೇ ಅಪವಾದಗಳ ಹೊರತಾಗಿ, ತೀರಾ ಬಾಲಿಶವಾದ ಮಟ್ಟದಲ್ಲಿರುತ್ತವೆ. ಪಾತ್ರಗಳ ನಡುವೆ ನಡೆಯುವ ಸಂವಾದಗಳು ಹುಟ್ಟು ಪೆದ್ದರ ನಡುವೆ ನಡೆಯಬಹುದಾದ ಸಂಭಾಷಣೆಯಂತಿರುತ್ತವೆ. ವಾಹಿನಿಗಳ ನಿರ್ವಹಣೆಯೇ ಪೆದ್ದರ ಕೈಯಲ್ಲಿ ಇದೆಯೋ ಅಥವಾ ವೀಕ್ಷಕರೇ ಪೆದ್ದರಾಗಿದ್ದಾರೆಯೋ ಎಂದು ಅನುಮಾನಿಸುವಷ್ಟು ಕಳಪೆ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ.

ಡಿಜಿಟಲ್ ಮತ್ತು ಗ್ರಾಫಿಕ್ ತಂತ್ರಗಳು, ಅವನ್ನು ಅರ್ಥಪೂರ್ಣವಾಗಿ ಬಳಸಲು ಬಾರದ ತಂತ್ರಜ್ಞರ ಕೈಗೆ ಸಿಕ್ಕಿ ಟಿವಿ ಪರದೆಯು ಕೊತ ಕೊತನೆ ಕುದಿಯುವ ಎಣ್ಣೆಯ ಬಾಣಲೆಯಂತಾಗಿದೆ. ಈ ವಿಷಯದಲ್ಲಿ ಪ್ರಾಂತೀಯ ವಾಹಿನಿ-ರಾಷ್ಟ್ರೀಯ ವಾಹಿನಿ, ಕನ್ನಡ-ಇಂಗ್ಲಿಷ್ ಎಂಬ ಬೇಧವಿಲ್ಲ. ಈ ಕಿರಿಕಿರಿ-ಕಿರುಕುಳಗಳಿಂದ ಪಾರಾಗಲು ವ್ಯಕ್ತಿ ಮಟ್ಟದಲ್ಲಿ ಟೀವಿಯನ್ನೇ ನೋಡದೆ ಇರುವುದು ಸಾಧ್ಯ, ನಿಜ. ಆದರೆ ಸಾಮಾಜಿಕವಾಗಿ ಇವನ್ನು ನಿರ್ಬಂಧಿಸದೆ ಪಾರಾಗುವುದು ಸಾಧ್ಯವೆ? ಕಾರ್ಯಕ್ರಮಗಳ ಹೂರಣದಲ್ಲಿನ ತೊಂದರೆಗಳನ್ನು ನಿಯಂತ್ರಿಸಲು ಹೆಸರಿಗಾದರೂ ಎನ್ ಬಿಎ ಎಂಬ ಸಂಸ್ಥೆ ಇದೆ. ಟಿವಿ ಪರದೆಯಮೇಲೆ ನಿರಂತರವಾಗಿ ಓಡುವ ಬಣ್ಣದ ಪಟ್ಟಿಗಳನ್ನೂ, ಕಣ್ಣಿಗೆ ರಾಚುವ ಗ್ರಾಫಿಕ್ ದೊಂಬರಾಟವನ್ನೂ ನಿಯಂತ್ರಿಸಲು ಅಂಥದ್ದೊಂದು ಸಂಸ್ಥೆಯಿದ್ದರೆ ಒಳ್ಳೆಯದಲ್ಲವೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)