varthabharthi

ಸಂಪಾದಕೀಯ

ಕಲಬುರ್ಗಿ ಹತ್ಯೆಗೆ ನಾಲ್ಕು ವರ್ಷ: ನ್ಯಾಯ ಪಡೆಯುವ ಬಗೆ ಹೇಗೆ?

ವಾರ್ತಾ ಭಾರತಿ : 31 Aug, 2019

ಕನ್ನಡದ ಪ್ರಖರ ವಿಚಾರವಾದಿ, ಸಂಶೋಧಕ ಎಂ.ಎಂ. ಕಲಬುರ್ಗಿ ಅವರು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿ 4 ವರ್ಷ ಸಂದಿದೆ. ಅವರ ಹತ್ಯೆ ಮುಚ್ಚಿ ಹೋಗುತ್ತಿತ್ತೇನೋ ಎನ್ನುವ ಹೊತ್ತಿನಲ್ಲೇ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆಯಿತು. ಕಲಬುರ್ಗಿ ಹತ್ಯೆಯನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡದ್ದು ಆ ಬಳಿಕ. ಗೌರಿ ಲಂಕೇಶ್ ಹತ್ಯೆಯ ತನಿಖೆ ಮುಂದುವರಿಯುತ್ತಿದ್ದಂತೆಯೇ, ಕಲಬುರ್ಗಿಯ ಕೊಲೆಗಾರರ ಜಾಡುಕೂಡ ಸ್ಪಷ್ಟವಾಗತೊಡಗಿತು. ಈ ಹಿಂದೆ ಮಹಾರಾಷ್ಟ್ರದಲ್ಲಿ ನಡೆದ ವಿಚಾರವಾದಿಗಳ ಹತ್ಯೆಗಳ ಜೊತೆಗೂ ನಂಟು ಬೆಸೆಯಿತು. ಇದೀಗ ಸಿಟ್ ತನಿಖೆ ಬಹುತೇಕ ಮುಗಿದಿದೆ. ಆರೋಪಿಗಳನ್ನು ಕೂಡ ಗುರುತಿಸಿದೆ. ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿ ಆರೋಪಿಗಳಿಗೆ ಶಿಕ್ಷೆಯಾಗುವುದು ಬಾಕಿಯಿದೆ. ಕೆಲವು ನಿರ್ದಿಷ್ಟ ಸಂಘಟನೆಗಳಿಂದ ದಾರಿ ತಪ್ಪಿದ ಯುವಕರ ಕಡೆಗೆ ತನಿಖೆ ಬೆರಳು ತೋರಿಸಿದೆ. ಕಲಬುರ್ಗಿ ಹತ್ಯೆಗೆ ಸಂಬಂಧಿಸಿ ಹೆಚ್ಚೆಂದರೆ ಈ ಯುವಕರಿಗೆ ಶಿಕ್ಷೆಯಾಗಬಹುದು. ಆದರೆ ನಮ್ಮ ಸಮಾಜ ಯಾವ ದಿಕ್ಕಿಗೆ ಹೊರಳಿದೆಯೆಂದರೆ, ಹೀಗೆ ಶಿಕ್ಷೆಗೊಳಗಾದ ಯುವಕರನ್ನೇ ‘ಹುತಾತ್ಮ’ ಎಂದು ಒಂದು ತಲೆಮಾರು ಆರಾಧಿಸುವ ವಿಪರ್ಯಾಸದ ದಿನಗಳಲ್ಲಿ ನಾವು ಬಂದು ನಿಂತಿದ್ದೇವೆ. ಇದೇ ಸಂದರ್ಭದಲ್ಲಿ ಈ ಯುವಕರ ಮೆದುಳಲ್ಲಿ ಹಸಿ ಸುಳ್ಳುಗಳನ್ನು ಬಿತ್ತಿ, ತಮ್ಮ ಉದ್ದೇಶ ಸಾಧಿಸಲು ಆಯುಧಗಳನ್ನಾಗಿ ಪರಿವರ್ತಿಸಿದ ಸಂಘಟನೆಯ ವಿರುದ್ಧ ಯಾವುದೇ ಕ್ರಮಗಳು ಜರುಗಿಲ್ಲ. ಬದಲಿಗೆ ಆ ಸಂಘಟನೆಯ ಚಿಂತನೆಗಳೇ ನಮ್ಮ ವ್ಯವಸ್ಥೆಯನ್ನು ಆಳುತ್ತಿವೆ. ಕಲಬುರ್ಗಿಯನ್ನು ಯಾವ ಚಿಂತನೆಗಳು ಕೊಂದು ಹಾಕಿದವೋ ಆ ಚಿಂತನೆಯ ತಳಹದಿಯ ಮೇಲೆ ನಿಂತ ಸರಕಾರದಿಂದ ನಾವಿಂದು ನ್ಯಾಯ ನಿರೀಕ್ಷಿಸುತ್ತಿದ್ದೇವೆ. ಇದುವೇ ವರ್ತಮಾನದ ಅತಿ ದೊಡ್ಡ ದುರಂತ.

 ಕಲಬುರ್ಗಿ ಯಾವುದೇ ವೈಯಕ್ತಿಕ ಕಾರಣಗಳಿಗಾಗಿ ಹತ್ಯೆಗೀಡಾದವರಲ್ಲ. ಅವರು ತಮ್ಮ ಸಿದ್ಧಾಂತ, ನಿಲುವು, ಪ್ರಖರ ಸಂಶೋಧನೆಗಳ ಕಾರಣಗಳಿಗಾಗಿ ಬಲಿಯಾದವರು. ಇತಿಹಾಸವನ್ನು ಬಗೆದು, ಅಲ್ಲಿರುವ ಕಹಿ ಸತ್ಯಗಳನ್ನು ಬಹಿರಂಗಪಡಿಸಿದ ಕಾರಣಕ್ಕೆ ಅವರ ತಲೆದಂಡವಾಯಿತು. ಶರಣ ಚಳವಳಿಯ ಚರಿತ್ರೆಗೆ ಅವರ ಕೊಡುಗೆ ಬಹುದೊಡ್ಡದು. ಕನ್ನಡ ನಾಡು, ನುಡಿ, ಸಂಸ್ಕೃತಿಯ ವಿಷಯವಾಗಿ ಮಾತನಾಡುವ ಸಂದರ್ಭದಲ್ಲಿ ಅವರು ಯಾವತ್ತೂ ಭಾವಕ್ಕೆ ನಿಷ್ಠರಾಗದೆ, ಸತ್ಯಕ್ಕೆ ನಿಷ್ಠರಾಗಿ ಬರೆದರು ಮತ್ತು ಮಾತನಾಡಿದರು. ವೀರಶೈವ ಮತ್ತು ಲಿಂಗಾಯತ ಧರ್ಮದ ನಡುವಿರುವ ಕಂದರಗಳನ್ನು ಸ್ಪಷ್ಟಪಡಿಸಿದ್ದು, ಮನುವಾದ ಹೇಗೆ ಲಿಂಗಾಯತ ಧರ್ಮವನ್ನು ಆಹುತಿ ತೆಗೆದುಕೊಳ್ಳುತ್ತಿದೆ ಎನ್ನುವುದನ್ನು ಬಹಿರಂಗಪಡಿಸಿದ್ದು ಕಲಬುರ್ಗಿಯವರು. ವೌಢ್ಯ, ಮತಾಂಧತೆ, ಬ್ರಾಹ್ಮಣ್ಯ ಇವೆಲ್ಲವುಗಳ ವಿರುದ್ಧ ತಮ್ಮ ಸಂಶೋಧನೆಗಳಲ್ಲಿ ಮಾತನಾಡಿದವರು ಕಲಬುರ್ಗಿ. ‘ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕು ದೊಡ್ಡದು’ ಎಂದು ಆಡಿದ್ದಷ್ಟೇ ಅಲ್ಲ, ಆ ಬೆಳಕಿಗೆ ಮುಖಮಾಡುವ ಸಾಹಸದಲ್ಲಿ ಕಾಲ ಕೆಳಗಿನ ಬೆಂಕಿಗೆ ಬಲಿಯಾದರು. ಆದರೂ ಅವರ ಸಂಶೋಧನೆಗಳನ್ನು, ಚಿಂತನೆಗಳನ್ನು ಕೊಲೆಗಾರರಿಗೆ ಕೊಲ್ಲುವುದಕ್ಕೆ ಸಾಧ್ಯವಾಗಿಲ್ಲ. ಪ್ರಶ್ನೆಯಿರುವುದು, ಇಂದು ಸಿಟ್ ತನ್ನ ತನಿಖೆಯ ಮೂಲಕ ಯಾರನ್ನು ಆರೋಪಿಗಳೆಂದು ಗುರುತಿಸಿದೆಯೋ ಅವರಿಗೆ ಶಿಕ್ಷೆಯಾದರೆ ಕಲಬುರ್ಗಿಯವರಿಗೆ ನ್ಯಾಯ ಸಿಗುತ್ತದೆಯೇ? ಯಾವ ಸಿದ್ಧಾಂತವನ್ನು ವಿರೋಧಿಸುತ್ತಾ ಕಲಬುರ್ಗಿ ಹುತಾತ್ಮರಾದರೋ ಆ ಸಿದ್ಧಾಂತವೇ ನಮ್ಮ ನಡುವೆ ಬೆಳೆದು ನಿಂತು ನಮ್ಮನ್ನು ಆಳುತ್ತಿರುವಾಗ ಕಲಬುರ್ಗಿಯವರಿಗೆ ನ್ಯಾಯ ದೊರಕಿಸಿಕೊಡುವ ಬಗೆಯಾದರೂ ಹೇಗೆ?

ಒಂದು ರಾಜ್ಯದ ಮುಖ್ಯಮಂತ್ರಿಯೆಂದು ಕರೆಸಿಕೊಂಡವರು ‘‘ದನ ಆಮ್ಲಜನಕನವನ್ನು ಸೇವಿಸಿ ಆಮ್ಲಜನಕವನ್ನು ಹೊರ ಬಿಡುತ್ತದೆ’’ ಎಂದು ಹೇಳುತ್ತಾರೆ. ಮಗದೊಬ್ಬ ಕೇಂದ್ರ ಸಚಿವ ಕಾಲೇಜೊಂದರಲ್ಲಿ ‘‘ರಾಮಸೇತುವೆ ಶ್ರೇಷ್ಠ ಇಂಜಿನಿಯರ್‌ಗಳಿಂದ ತಯಾರಾದುದು’ ಎಂದು ತನ್ನ ಸಂಶೋಧನೆಯನ್ನು ಮಂಡಿಸುತ್ತಾರೆ. ಮಾಲೆಗಾಂವ್ ಸ್ಫೋಟ ಆರೋಪದಲ್ಲಿ ಬಂಧಿತಳಾದ ಮಹಿಳೆಯೊಬ್ಬರು ಬಳಿಕ ಸಂಸತ್ ಸದಸ್ಯಳಾಗಿ ಆಯ್ಕೆಯಾಗಿ ‘‘ವಿರೋಧ ಪಕ್ಷದ ನಾಯಕರು ಬಿಜೆಪಿ ನಾಯಕರ ಮೇಲೆ ವಾಮಾಚಾರ ಮಾಡಿ ಅವರನ್ನು ಸಾಯಿಸುತ್ತಿದ್ದಾರೆ’’ ಎಂದು ಸಾರ್ವಜನಿಕ ಭಾಷಣದಲ್ಲಿ ಆರೋಪಿಸುತ್ತಾರೆ. ಕಲಬುರ್ಗಿ ತಮ್ಮ ಸಂಶೋಧನೆಯಲ್ಲಿ ಯಾವ ಚಿಂತನೆಗಳನ್ನೆಲ್ಲ ವಿರೋಧಿಸಿದರೋ, ಆ ಚಿಂತನೆಯೇ ಇಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ದೌರ್ಬಲ್ಯಗಳನ್ನು ಬಳಸಿಕೊಂಡು ಈ ದೇಶವನ್ನು ಆಳುತ್ತಿದೆ ಮತ್ತು ಕಾಲೇಜು, ವಿಶ್ವವಿದ್ಯಾನಿಲಯಗಳು ಸೇರಿದಂತೆ ವೈಚಾರಿಕ ನೆಲೆಗಳನ್ನೆಲ್ಲ ಅವುಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿವೆ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ಈ ವ್ಯವಸ್ಥೆಯ ಜೊತೆಗೆ ಕಲಬುರ್ಗಿಗಾಗಿ ನಾವು ನ್ಯಾಯವನ್ನು ಯಾಚಿಸಬೇಕಾಗಿದೆ. ಕಲಬುರ್ಗಿಗೆ ನ್ಯಾಯ ನೀಡಬೇಕಾದ ನ್ಯಾಯ ವ್ಯವಸ್ಥೆಯ ಸ್ಥಿತಿಯಾದರೂ ಯಾವ ಮಟ್ಟದಲ್ಲಿದೆ? ಎಂದು ಅವಲೋಕಿಸ ಹೋದರೆ ಅಲ್ಲಿಯೂ ನಮಗೆ ನಿರಾಶೆಯಾಗುತ್ತದೆ. ಸಾಮಾಜಿಕ ನ್ಯಾಯಕ್ಕಾಗಿ ಬೀದಿಗಿಳಿದ ಪ್ರಗತಿಪರ ನಾಯಕನ ಬಳಿ ನ್ಯಾಯಾಲಯ ‘‘ನೀನು ‘ವಾರ್ ಆ್ಯಂಡ್ ಪೀಸ್’ ಕೃತಿಯನ್ನು ಯಾಕೆ ಇಟ್ಟುಕೊಂಡಿದ್ದೀಯ?’’ ಎಂದು ಕೇಳುತ್ತದೆ. ಮುಂದೊಂದು ದಿನ ಇದೇ ನ್ಯಾಯಾಲಯ ‘ಕಲಬುರ್ಗಿಯ ಪುಸ್ತಕಗಳನ್ನು ಇಟ್ಟುಕೊಂಡ ಕಾರಣಕ್ಕಾಗಿ’ ವಿಚಾರವಾದಿಗಳನ್ನು ಶಿಕ್ಷೆಗೊಳಪಡಿಸಿದರೆ ಅದರಲ್ಲಿ ಅಚ್ಚರಿಯಿದೆಯೇ? ಒಬ್ಬ ಹೈಕೋರ್ಟ್ ನ್ಯಾಯಾಧೀಶ ‘ಹೆಣ್ಣು ನವಿಲು ಗಂಡು ನವಿಲಿನ ಕಣ್ಣೀರು ಕುಡಿದು ಗರ್ಭ ಧರಿಸುತ್ತದೆ’ ಎಂದು ಮಾಧ್ಯಮಗಳ ಮುಂದೆ ಹೇಳುತ್ತಾರೆೆ. ಬಹುತೇಕ ನ್ಯಾಯಾಧೀಶರು ಆರೆಸ್ಸೆಸ್, ಸಂಘಪರಿವಾರ ಮತ್ತು ಮನುವಾದಿ ಚಿಂತನೆಗಳ ಕುರಿತಂತೆ ಮೃದು ನಿಲುವುಗಳನ್ನು ತಳೆದಿದ್ದಾರೆ. ಇಂತಹ ವಾತಾವರಣದಲ್ಲಿ ನಾವು ಕಲಬುರ್ಗಿಯ ಹತ್ಯೆಯ ನ್ಯಾಯವನ್ನು ಯಾವ ರೀತಿಯಲ್ಲಿ, ಯಾರಿಂದ ಪಡೆಯಬೇಕು?

 ಕಲಬುರ್ಗಿಯ ವೈಚಾರಿಕ ಚಿಂತನೆಗಳನ್ನು ನಾಶಗೊಳಿಸುವ ಪ್ರಕ್ರಿಯೆ ನಮ್ಮ ನಡುವೆ ವ್ಯವಸ್ಥಿತವಾಗಿ ನಡೆಯುತ್ತಿರುವಾಗ, ಕಲಬುರ್ಗಿಯನ್ನು ಹತ್ಯೆಗೈದ ಇಬ್ಬರು ಅಥವಾ ಮೂವರು ತರುಣರನ್ನು ಶಿಕ್ಷಿಸುವುದರಿಂದ ಕಲಬುರ್ಗಿಯವರಿಗೆ ನ್ಯಾಯ ಸಿಗಲು ಖಂಡಿತಾ ಸಾಧ್ಯವಿಲ್ಲ ಮತ್ತು ಈ ನಾಶಗೊಳಿಸುವ ಕೃತ್ಯದಲ್ಲಿ ಯಾರೋ ಒಂದಿಬ್ಬರು ಭಾಗವಹಿಸುತ್ತಿರುವುದಲ್ಲ. ಒಂದೆರಡು ಸಂಘಟನೆಗಳೂ ಇದರ ಹಿಂದಿರುವುದಲ್ಲ. ಈ ದೇಶವನ್ನು ಆಳುವ ವ್ಯವಸ್ಥೆಯೇ ಆ ಚಿಂತನೆಯ ಪೋಷಕ ಸ್ಥಾನದಲ್ಲಿ ನಿಂತಿದೆ. ಕಲಬುರ್ಗಿ ಇಂದು ನಮ್ಮ ನಡುವೆ ಒಬ್ಬ ಹತ್ಯೆಗೊಳಗಾದ ವ್ಯಕ್ತಿಯಾಗಿ ಉಳಿದಿಲ್ಲ. ಅವರೊಂದು ಚಿಂತನೆಯಾಗಿದ್ದಾರೆ. ಆ ಚಿಂತನೆಯೇ ಅಪಾಯದಲ್ಲಿದೆ. ಅಳಿದುಳಿದ ಕಲಬುರ್ಗಿಗಳ ಜೊತೆಗೆ ಕೈ ಜೋಡಿಸಿ ಆ ಚಿಂತನೆಗಳನ್ನು ಕಾಪಾಡುವುದು ಈ ದೇಶದ ಪ್ರಜಾಸತ್ತೆ, ಸಂವಿಧಾನ ಮತ್ತು ವೈಚಾರಿಕತೆಯ ಮೇಲೆ ನಂಬಿಕೆಯಿಟ್ಟ ಪ್ರತಿಯೊಬ್ಬ ದೇಶಭಕ್ತನ ಕರ್ತವ್ಯವಾಗಿದೆ. ಕಲಬುರ್ಗಿ ಅವರ ಸಾವಿಗೆ ನ್ಯಾಯ ಪಡೆಯುವ ಅತ್ಯುತ್ತಮ ವಿಧಾನ ಇದೇ ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)