varthabharthi

ವೈವಿಧ್ಯ

ಪಂಜಾಬಿ ಲೇಖಕಿಯ ನೂರನೇ ಜನ್ಮದಿನಾಚರಣೆಯ ಸ್ಮರಣಾರ್ಥ

ಅಮೃತಾ ಪ್ರೀತಮ್ ನೆನೆದು

ವಾರ್ತಾ ಭಾರತಿ : 31 Aug, 2019
ಪ್ರೊ.ಶಿವ್ ಸೇಠಿ ಕೃಪೆ: ಫ್ರಿಪ್ರೆಸ್ ಜರ್ನಲ್

ಹೃದಯಸ್ಪರ್ಶಿ ಯೋಚನೆಗಳ ಬೃಹತ್ ಅಲೆಗಳು ಎಳೆ ಹೃದಯವನ್ನು ಭೇದಿಸಿದಾಗ ಅದರಿಂದ ವೈಭವದ ಕಾವ್ಯ ಲಹರಿಯ ಝರಿ ಹರಿಯುತ್ತದೆ. ಆ ಗಾಯಗೊಂಡ ಮತ್ತು ಪೀಡನೆಗೊಳಗಾದ ಹೃದಯ ದುಃಖವನ್ನು ಹೆಣೆದಾಕೆಗೆ ಸೇರಿದೆ ಮತ್ತು ನೋವು ಮತ್ತು ಹಾತೊರೆಯುವಿಕೆಯ ಆ ರಾಣಿಯನ್ನು ಆಕೆಯ ಭಕ್ತರು ಪ್ರೀತಿಯಿಂದ ಒಬ್ಬಾಕೆ ಇದ್ದಳು ಅಮೃತಾ ಎಂದು ಸ್ಮರಿಸುತ್ತಾರೆ. ಪಂಜಾಬಿ ಸಾಹಿತ್ಯದ ದಂತಕತೆ ಅಮೃತಾ ಅವರನ್ನು ಭಾವಪೂರ್ಣವಾಗಿ ಸ್ಮರಿಸಿಕೊಳ್ಳುವಾಗ ಲಾರ್ಡ್ ಬೈರೊನ್ ಅವರ ಕವಿತೆ ಶೀ ವಾಕ್ಸ್ ಇನ್ ಬ್ಯೂಟಿಯ ಈ ಸಾಲುಗಳು ನೆನಪಾಗುತ್ತವೆ. ಬೈರೊನ್ ಅವರ ಸುಂದರ ಯುವತಿಯಂತೆ, ಅಮೃತಾರ ಸುಂದರ ದೇಹದೊಳಗೂ ಒಂದು ಸುಂದರ ಆತ್ಮವಿತ್ತು. ಅದು ಈ ಲೌಕಿಕ ಜಗತ್ತಿನಲ್ಲಿ ತಾನಿದ್ದ ಪ್ರತಿ ನಿಮಿಷವೂ ಅವಿಶ್ರಾಂತವಾಗಿತ್ತು. ಅಮೃತಾ ಹನ್ನೊಂದರ ಹರೆಯದಲ್ಲಿರುವಾಗ ಅವರ ರೋಗಗ್ರಸ್ತ ತಾಯಿ ಇಹಲೋಕ ತ್ಯಜಿಸುವ ಮೂಲಕ ಲೇಖಕಿ ತನ್ನ ಜೀವನದ ಮೊದಲ ದುಃಖವನ್ನು ಅನುಭವಿಸಿದರು. ಈ ಘಟನೆ ಮುಗ್ಧ ಮಗುವಿನ ಜೀವನದಲ್ಲಿ ಪರಿವರ್ತನೆಯ ಗಾಳಿಯನ್ನು ಬೀಸಿತ್ತು. ಅಮೃತಾರಿಗೆ ದೇವರ ಮೇಲೆ ಇದ್ದ ಅದಮ್ಯ ನಂಬಿಕೆಯನ್ನು ಈ ಘಟನೆ ಬುಡಮೇಲುಗೊಳಿಸಿತ್ತು.

ಒಂದೊಮ್ಮೆ ದೈವಭಕ್ತನಾಗಿದ್ದ ಥಾಮಸ್ ಹಾರ್ಡಿ ಚರ್ಚ್‌ಗೆ ಹೋಗುವುದನ್ನೇ ನಿಲ್ಲಿಸಿದಂತೆ ಅಮೃತಾ ಕೂಡಾ ನಾಸ್ತಿಕಳಾಗಿ ಬದಲಾದರು ಮತ್ತು ಪ್ರಾರ್ಥನಾ ಸ್ಥಳಗಳಿಗೆ ತೆರಳುವುದನ್ನು ನಿಲ್ಲಿಸಿದರು. ನೋವು, ಸಂಕಷ್ಟಗಳನ್ನು ಅನೇಕ ಅತ್ಯುನ್ನತ ಲೇಖಕರ ತಾಯಿ ಎಂದು ಹೇಳಲಾಗುತ್ತದೆ. ಅಮೃತಾರ ಜೀವನದಲ್ಲಿ ನೋವು, ದುಃಖಕ್ಕೇನೂ ಕಡಿಮೆಯಿರಲಿಲ್ಲ. ನೆಮ್ಮದಿ, ಶಾಂತಿಗಾಗಿ ಹತಾಶೆಯಿಂದ ಹುಡುಕಾಡುತ್ತಿದ್ದ ಅವರು ಬರಹದಲ್ಲಿ ಆ ನೆಮ್ಮದಿಯನ್ನು ಕಂಡರು.
ಅದರ ಫಲವಾಗಿ 16ನೇ ವಯಸ್ಸಿನಲ್ಲೇ ಅಮೃತ್ ಲೆಹೆರೆ-ದಿ ಇಮ್ಮೋರ್ಟಲ್ ವೇವ್ಸ್ ಎಂಬ ಪುಸ್ತಕ ಬರೆದರು. ಹೆಸರೇ ಹೇಳುವಂತೆ ಒಂದು ಕವನ ಸಂಕಲನವಾಗಿದ್ದ ಈ ಪುಸ್ತಕ ಭಾವಸ್ಪರ್ಶಿ ಪ್ರೀತಿ ಮತ್ತು ಪ್ರಣಯದ ಭಾವನೆಗಳನ್ನು ಹೊಂದಿದ್ದ ಕವನಗಳ ಮಿಳಿತವಾಗಿತ್ತು. ಆನಂತರ ಯಾತನೆ ಮತ್ತು ಏಕಾಂಗಿತನ ಎಂಬುವುದು ಈ ಸೂಕ್ಷ್ಮ ಸಂವೇದಿ ಲೇಖಕಿಯ ನಿರಂತರ ಜೊತೆಗಾರರಾದವು.
ವಿವಾಹ ಜೀವನದ ಕಹಿ ಅನುಭವ ಮತ್ತು ದೇಶ ವಿಭಜನೆಯ ಭಯಾನಕ ನೆನಪುಗಳು ಅಮೃತಾರ ಆಂತರಿಕ ಸಮಚಿತ್ತತೆಯನ್ನೇ ಜರ್ಜರಿತಗೊಳಿಸಿತ್ತು ಮತ್ತು ಆಕೆಗೆ ಯೋಚಿಸಲು ಮತ್ತು ಬರೆಯಲು ಸಾಕಷ್ಟು ವಿಷಯಗಳನ್ನು ಒದಗಿಸಿತ್ತು. ಅವರು ಬರೆದ ನೆತ್ತರು ಕುದಿಸುವ ಕಾದಂಬರಿ ಪಿಂಜರ್ (ಅಸ್ಥಿಪಂಜರ) ಆಕೆಗೆ ಕೇವಲ ಪಂಜಾಬಿ ಸಾಹಿತಿಗಳ ಮಧ್ಯೆ ಜನಪ್ರಿಯತೆ ನೀಡಿದ್ದು ಮಾತ್ರವಲ್ಲ ಭಾರತೀಯ ಸಾಹಿತ್ಯಲೋಕದಲ್ಲಿ ಅವರ ಹೆಸರು ಅಚ್ಚಳಿಯದಂತೆ ಮಾಡಿತು.
ಖುಶ್ವಂತ್ ಸಿಂಗ್ ಅವರ ಟ್ರೈನ್ ಟು ಪಾಕಿಸ್ತಾನ್‌ನಂತೆ ಪಿಂಜರ್ ಕೂಡಾ ಭಾರತದ ವಿಭಜನೆಯ ಭೀಕರ ಕಥಾನಕ ಕುರಿತ ಅತ್ಯುತ್ತಮ ಬರಹ ಎಂದು ಪರಿಗಣಿಸಲ್ಪಟ್ಟಿದೆ. ಈ ಕಾದಂಬರಿ ಅಮೃತಾರಿಗೆ ಮಹಿಳಾವಾದಿಗಳಿಗೂ ಮೊದಲ ಮಹಿಳಾವಾದಿ ಎಂಬ ಗುರುತನ್ನು ನೀಡಿದೆ. ಅವರು ಬರೆದಿರುವ ಆಜ್ ಆಖಾನ್ ವಾರಿಸ್ ಶಾ ನು (ಇಂದು ನಾನು ವಾರಿಸ್ ಶಾರನ್ನು ನೆನಪಿಸುತ್ತೇನೆ) ಒಂದು ಶೋಕಗೀತೆಯಾಗಿದ್ದು ಅದರಲ್ಲಿ ತೀವ್ರ ಆಕ್ರೋಶಿತ ಅಮೃತಾ, ಸೂಫಿ ಸಾಹಿತಿ ವಾರಿಸ್ ಶಾ ಅವರನ್ನು ನೆನಪಿಸುತ್ತಾ 1947ರ ಭಯಾನಕ ಸನ್ನಿವೇಶವನ್ನು ನೆನಪಿಸಿಕೊಳ್ಳುತ್ತಾರೆ. ಪಂಜಾಬಿಯಲ್ಲಿ ಹೀರ್ ರಾಂಜಾ ಎಂಬ ಅದ್ಭುತ ರಚನೆಯ ರೂವಾರಿಯನ್ನು ಕುರಿತು ಸಹಿಸಲಾಗದ ನೋವಿನಿಂದ ಕಾವ್ಯಾತ್ಮಕವಾಗಿ ಚೀರುವ ಕವಯತ್ರಿ ಆಜ್ ಆಖಾನ್ ವಾರಿಸ್ ಶಾ ನು, ಕಿತೊ ಕಬ್ರಾ ವಿಚೊ ಬೋಲ್, ತೇ ಅಜ್ ಕಿತಾಬೆ ಇಶ್ಕ್ ದಾ, ಕೋಯಿ ಅಗ್ಲಾ ವರ್ಕಾ ಫೋಲ್ (ಇಂದು ನಾನು ವಾರಿಸ್ ಶಾ ಅವರನ್ನು ನೆನೆಯುತ್ತೇನೆ, ನಿಮ್ಮ ಸಮಾಧಿಯಿಂದ ಮಾತನಾಡಿ ಮತ್ತು ಇಂದು ಆ ಅದ್ಭುತ ಪ್ರೇಮಕಾವ್ಯದ ಮುಂದಿನ ಪುಟವನ್ನು ತೆರೆಯಿರಿ) ಎಂದು ಬರೆಯುತ್ತಾರೆ.
ಖುಶ್ವಂತ್ ಸಿಂಗ್ ಅವರು ಅಮೃತಾರನ್ನು ಪ್ರತಿಷ್ಠಿತ ಸಾಹಿತಿಗಳ ಸಾಲಿನಲ್ಲಿಟ್ಟಿರಲಿಲ್ಲ ಮತ್ತು ಆಕೆ ಇಷ್ಟರವರೆಗೆ ಬರೆದಿರುವುದೆಲ್ಲವನ್ನು ಕಂದಾಯ ಅಂಚೆಚೀಟಿಯ ಮೇಲೆ ಬರೆಯಬಹುದು ಎಂದು ವ್ಯಂಗ್ಯಮಾಡಿದ್ದರೂ ಆಜ್ ಆಖಾನ್ ವಾರಿಸ್ ಶಾ ನು ಕವನ ಸಿಂಗ್ ಕೂಡಾ, ಆಕೆ ಬರೆದಿರುವ ಆ ಕೆಲವು ಸಾಲುಗಳು ಆಕೆಯನ್ನು ಭಾರತ ಮತ್ತು ಪಾಕಿಸ್ತಾನದಲ್ಲಿ ಅಜರಾಮರಗೊಳಿಸಿದೆ ಎಂದು ಉದ್ಘರಿಸುವಂತೆ ಮಾಡಿತ್ತು. ಅಮೃತಾರ ಬರಹದ ಆಕರ್ಷಣೆ ಹೇಗಿತ್ತೆಂದರೆ ಆಕೆ ತನ್ನ ಟೀಕಾಕಾರರನ್ನೂ ಆಶ್ಚರ್ಯಚಕಿತಗೊಳಿಸುವ ಸಾಮರ್ಥ್ಯ ಹೊಂದಿದ್ದರು. ಖುಶ್ವಂತ್ ಸಿಂಗ್ ಆಕೆಯ ಬಗ್ಗೆ ನೀಡಿದ್ದ ವಿಡಂಬನಾತ್ಮಕ ಹೇಳಿಕೆಯ ಫಲವಾಗಿಯೇ ಅಮೃತಾ ತನ್ನ ಆತ್ಮಚರಿತ್ರೆಗೆ ರಸೀದಿ ಟಿಕೆಟ್ (ಕಂದಾಯ ಅಂಚೆಚೀಟಿ) ಎಂದು ಹೆಸರಿಟ್ಟಿದ್ದರು.
ಅಮೃತಾ ಪ್ರೀತಮ್ (ಪ್ರೀತಮ್ ಎಂಬ ಉಪನಾಮ ಅವರು ಲಾಹೋರ್‌ನ ಅನಾರ್ಕಲಿ ಬಝಾರ್‌ನಲ್ಲಿ ಜನಪ್ರಿಯವಾಗಿದ್ದ ವ್ಯಾಪಾರಿಯ ಪುತ್ರ ಪ್ರೀತಮ್ ಸಿಂಗ್ ಅವರನ್ನು ಮದುವೆಯಾದ ನಂತರ ಪಡೆದಿರುವಂಥದ್ದು) ಕುರಿತು ಬರೆಯುವಾಗ ಅವರಿಗೆ ಸಾಹಿರ್ ಲುಧಿಯಾನ್ವಿ ಜೊತೆಗಿದ್ದ ಸಂಬಂಧವನ್ನು ಉಲ್ಲೇಖಿಸದಿರಲು ಸಾಧ್ಯವಿಲ್ಲ.
ಅದು ಇಬ್ಬರು ಸ್ವತಂತ್ರ ಸ್ವಭಾವದ ಕ್ರಿಯಾಶೀಲ ವ್ಯಕ್ತಿಗಳ ನಡುವಿನ ಸಂಬಂಧವಾಗಿತ್ತು. ಸಾಹಿರ್ ಮತ್ತು ಅಮೃತಾ ಒಬ್ಬರಿಗೊಬ್ಬರು ಪೂರಕವಾಗಿದ್ದರು. ಇಬ್ಬರೂ ಪ್ರೀತಿಯನ್ನು ಬಯಸಿದ್ದರು ಮತ್ತು ಮುಹಬ್ಬತ್ ಕಾ ಯಹೀ ತೊ ರಾ್ತಾ ಹೇ/ ತೇರಿ ತಲಾಶ್ ಮೆ ನಿಕ್ಲೂ, ತುಜೆ ನಾ ಪಾ ಸಕೂ (ಪ್ರೀತಿಯನ್ನು ಅಳೆಯಲು ಇದುವೇ ಮಾರ್ಗವಾಗಿದೆ/ ನಿನ್ನ ಹುಡುಕಾಟಕ್ಕಾಗಿ ಹೊರಟು, ನಿನ್ನನ್ನೇ ನಾನು ಪಡೆಯಲಾರೆ) ಎಂದೇ ನಂಬಿದ್ದರು.
 ಅವರಿಬ್ಬರೂ ಅಧಿಕಾರಿ ಧೋರಣೆಯಿಲ್ಲದೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಅಮೃತಾ ಮತ್ತು ಸಾಹಿರ್ ಅವರ ಕವನಗಳಲ್ಲಿ ಕಾಯುವಿಕೆಯ ಆದರೆ ಸೇರಲು ಬಯಸದ ಭಾವನೆ ವ್ಯಕ್ತವಾಗುತ್ತಿತ್ತು. ಸಾಹಿರ್ ಜೊತೆ ಆಕೆಗಿದ್ದ ಸಂಬಂಧ ಆಕೆಯ ಕಾವ್ಯಗಳಲ್ಲಿ ಇನ್ನಷ್ಟು ಉತ್ಕೃಷ್ಟತೆ ಬರುವಂತೆ ಮಾಡಿತ್ತು. ಸಾಹಿರ್ ಬಗ್ಗೆ ತನಗಿದ್ದ ಅತೀವ ಒಲವನ್ನು ಅಮೃತಾ ಎಂದೂ ನಿರಾಕರಿಸಿರಲಿಲ್ಲ. ನಂತರ ಆಕೆ ಇಮ್ರೋಝ್‌ನಲ್ಲಿ ಪ್ರೀತಿ ಕಂಡು ಅವರ ಜೊತೆ ತನ್ನ ಜೀವನದ ಕೊನೆಯುಸಿರಿರುವವರೆಗೆ ಬದುಕಿದ್ದರೂ ಸಾಹಿರ್ ಮಾತ್ರ ಆಕೆಯ ಮನಸ್ಸಿನಲ್ಲಿ ಕೊನೆಯವರೆಗೂ ಚಿರಂತನವಾಗಿದ್ದರು. ಇದೊಂಥರಾ ಅಲೌಕಿಕ ಮತ್ತು ವಿಲಕ್ಷಣವಾಗಿ ಕಾಣುತ್ತದೆ. ತನ್ನ ಕವಿತೆಗಳಲ್ಲಿ ತನ್ನ ಹೃದಯವನ್ನೇ ಸಮರ್ಪಿಸುತ್ತಿದ್ದ ಓರ್ವ ಅದ್ಭುತ ಲೇಖಕಿ ಎಂದು ಅಮೃತಾರನ್ನು ಸ್ಮರಿಸಲಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)